Monday, October 11, 2021

ಆರ್ಯಸಂಸ್ಕೃತಿ ದರ್ಶನ - 57 ದ್ವೇಷದಿಂದ ಮುಕ್ತಿ ಅಥವಾ ಸಾಯುಜ್ಯ (Arya Samskruti Darshana -57 Dveshadinda Mukti Athavaa Saayujya)

ಲೇಖಕರು : ಡಾ|| ಎಸ್.ವಿ. ಚಾಮು

ಲೋಕದಲ್ಲಿ ಭಕ್ತಿಯ ಮೂಲಕ ಮುಕ್ತಿಯನ್ನು ಸಾಧಿಸಬಹುದು ಎಂಬ ಮಾತನ್ನು ನಾವೆಲ್ಲರೂ ಚಿರಕಾಲದಿಂದ ಕೇಳಿರುತ್ತೇವೆ. ಆದುದರಿಂದ ಯಾರಾದರೂ ಭಗವಂತನನ್ನು ದ್ವೇಷಿಸುವುದರ ಮೂಲಕ ಮುಕ್ತಿಯನ್ನು ಪಡೆಯುವುದು ಸಾಧ್ಯ ಎಂದು ಹೇಳಿದರೆ ಅದರಿಂದ ನಮಗೆ ಅವಶ್ಯವಾಗಿ ಆಶ್ಚರ್ಯವುಂಟಾಗುವುದು ಸಹಜ. ಆದರೆ ನಮ್ಮ ಪುರಾಣೇತಿಹಾಸಗಳಲ್ಲಿ ಅಂತಹ ಕಥೆಗಳು ನಮಗೆ ಕೇಳಿ ಬರುತ್ತವೆ. ಭಗವಂತನು 'ನ ಮೇ ದ್ವೇಷ್ಯೋsಸ್ತಿ ನ ಪ್ರಿಯಃ' ಎಂದು ಹೇಳುತ್ತಾನೆ. ಆ ಮಾತೇ ಅಂತಹ ಕಥೆಗಳಿಗೆ ಪೋಷಕವಾಗಿರುತ್ತದೆ. ಅದಕ್ಕೆ ಶಿಶುಪಾಲನಕಥೆಗಿಂತ ಒಳ್ಳೆಯ ನಿದರ್ಶನವನ್ನು ನಾವು ಮನಸ್ಸಿನಲ್ಲಿ ಯೋಚಿಸಲಾಗುವುದಿಲ್ಲ. ಕೃಷ್ಣನ ಕಥೆಯ ಆರಂಭದಲ್ಲಿ ನಾವು ದೈತ್ಯರು ಭೂಮಿಯಲ್ಲಿ ಜನಿಸಿದ ವಿಷಯವನ್ನು ಹೇಳುವಾಗ ಶಿಶುಪಾಲನ ಹೆಸರನ್ನು ಉಲ್ಲೇಖಿಸಿದೆವು. ಆದರೆ ಅಲ್ಲಿ ಅವನ ಕಥೆಯನ್ನು ವಿಸ್ತರಿಸಲಿಲ್ಲ. ಆದುದರಿಂದ ಕೃಷ್ಣನ ಕಥೆಯು ಸಮಾಪ್ತವಾಗಿದ್ದರೂ ಸಹ ಪರಿಶಿಷ್ಟದ ರೂಪದಲ್ಲಿ ಶಿಶುಪಾಲನ ಕಥೆಯನ್ನು ಹೇಳಲು ಮನಸ್ಸು ಬಯಸುತ್ತಿದೆ.

ಈ ಕಥೆಯ ಹಿಂಬದಿಯಲ್ಲಿ ಒಂದು ಪೂರ್ವಚರಿತ್ರೆಯು ಇರುತ್ತದೆ. ಒಂದು ಪ್ರಾಚೀನವಾದ ಕಲ್ಪದಲ್ಲಿ ಬ್ರಹ್ಮನ ಮಾನಸ ಪುತ್ರರಾದ ಸನಕ ಸನಂದನಾದಿ ಋಷಿಗಳು ತ್ರಿಲೋಕಗಳಲ್ಲಿಯೂ ಸಂಚರಿಸುತ್ತಾ ಆಕಸ್ಮಿಕವಾಗಿ ವಿಷ್ಣುಲೋಕಕ್ಕೆ ಹೋದರು. ಅವರು ೫ ವರ್ಷದ ಶಿಶುಗಳಂತೆ ಇದ್ದರೂ ಪೂರ್ವಜರಿಗೂ ಪೂರ್ವಜರಾಗಿದ್ದರು. ಅವರು ದಿಗಂಬರರಾಗಿದ್ದರು. ಅವರನ್ನು ನೋಡಿ ವಿಷ್ಣುವಿನ ದ್ವಾರಪಾಲಕರೂ ಪಾರ್ಷದರೂ ಆಗಿದ್ದ ಜಯ ವಿಜಯರು ಅವರನ್ನು ತಡೆದರು. ಅದರಿಂದ ಕುಪಿತರಾಗಿ ಆ ಋಷಿಗಳು ಜಯ ವಿಜಯರಿಗೆ "ರಜಸ್ತಮೋಗುಣಗಳಿಂದ ರಹಿತವಾದ ಮಧುಸೂದನನ ಪಾದಮೂಲದಲ್ಲಿ ವಾಸ ಮಾಡಲು ನೀವು ಅರ್ಹರಲ್ಲ. ಆದುದರಿಂದ ಬಾಲಿಶರಾದ ನೀವು ಪಾಪಿಷ್ಠವಾದ ಆಸುರೀ ಯೋನಿಯನ್ನು ಹೊಂದಿರಿ" ಎಂದು ಹೇಳಿದರು. ನಂತರ ಅವರೇ ಅವರಿಗೆ "ನೀವು ಮೂರು ಜನ್ಮಗಳಲ್ಲಿ ನಿಮ್ಮ ಉತ್ತಮವಾದ ಲೋಕಕ್ಕೆ ಹಿಂದಿರುಗುವಿರಿ" ಎಂದು ನುಡಿದರು. ಅದು ಅವರ ಕರುಣೆ.


ಜಯ ವಿಜಯರ ಮುಂದೆ ಎರಡು ವಿಕಲ್ಪಗಳಿದ್ದುವು ಎಂದು ಕೇಳಿಬರುತ್ತದೆ. ಮೊದಲನೆಯದು ಮೂರು ಜನ್ಮಗಳಲ್ಲಿ ವಿಷ್ಣುವನ್ನು ದ್ವೇಷಿಸಿ ಅವನಿಂದ ಕೊಲ್ಲಲ್ಪಟ್ಟು ವೈಕುಂಠಕ್ಕೆ ಹೋಗುವುದು ಒಂದು, ಅವನನ್ನು ಪ್ರೀತಿಸಿ ಏಳು ಜನ್ಮಗಳಲ್ಲಿ ಅವನನ್ನು ಮುಟ್ಟುವುದು ಎರಡನೆಯದು. ಅಷ್ಟು ದೀರ್ಘಕಾಲ ಅವನಿಂದ ದೂರವಿರುವುದು ಅವರಿಗೆ ಸಹ್ಯವಾಗಲಿಲ್ಲವಾಗದ್ದುದರಿಂದ ಅವರು ದ್ವೇಷ ಮತ್ತು ಮೂರು ಜನ್ಮಗಳನ್ನೇ ಆರಿಸಿದರು ಎಂದು ಹೇಳುತ್ತಾರೆ. ಇದರಲ್ಲಿ ತಾತ್ವಿಕ ರಹಸ್ಯಗಳಿರುತ್ತವೆಯೆಂದು ಶ್ರೀರಂಗ ಸದ್ಗುರುವು ಹೇಳಿದರು. ಬೇರೆಯವರಿಗೆ ಅನಂತ ಕೋಟಿ ಜನ್ಮಗಳಿದ್ದರೆ, ಇವರಿಗೆ ಕೇವಲ ಮೂರು ಜನ್ಮಗಳು ಮಾತ್ರ. ಅದನ್ನು ಮುಗಿಸಿದ ನಂತರ ಅವರು ತಮ್ಮ ಸ್ಥಾನವನ್ನು ಮುಟ್ಟಿದರು ಎಂಬುದು ಗಮನಾರ್ಹ. ಆ ರೀತಿ ಇದ್ದುದರಿಂದ ಅವರಿಗೆ ದ್ವೇಷವೇ ಸಾಕಾಯಿತು.


ಅವರ ಮೊದಲನೆಯ ಜನ್ಮ ದಿತಿಯ ಮಕ್ಕಳಾದ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರೆಂಬ ದೈತ್ಯ ಚಕ್ರವರ್ತಿಗಳ ರೂಪದಲ್ಲಿ ಆಯಿತು. ಆಗ ಭಗವಂತನು ನರಸಿಂಹ ರೂಪದಲ್ಲಿ ಹಿರಣ್ಯಕಶಿಪುವನ್ನು ಕೊಂದರೆ ವರಾಹ ರೂಪದಲ್ಲಿ ಹಿರಣ್ಯಾಕ್ಷನನ್ನು ಸಂಹಾರಮಾಡಿದನು. ಎರಡನೆಯ ಜನ್ಮದಲ್ಲಿ ಅವರು ವಿಶ್ರವಸ್ಸಿನ ಮಕ್ಕಳಾದ ರಾವಣ ಕುಂಭಕರ್ಣರಾಗಿ ಜನಿಸಿದರು. ಆಗ ವಿಷ್ಣುವು ರಾಮ ರೂಪದಲ್ಲಿ ಅವತರಿಸಿ ಅವರನ್ನು ಸಂಹಾರಮಾಡಿದನು.


ಮೂರನೆಯ ಜನ್ಮದಲ್ಲಿ ಅವರು ದ್ವಾಪರ ಯುಗದಲ್ಲಿದ್ದ ದಮಘೋಷನೆಂಬ ರಾಜನ ಮಗನಾದ ಶಿಶುಪಾಲನಾಗಿಯೂ ಮತ್ತು ಅವನ ಷಡ್ಕನಾದ ವೃದ್ಧಧರ್ಮನ ಪುತ್ರನಾದ ದಂತವಕ್ತ್ರನಾಗಿಯೂ ಹುಟ್ಟಿದರು. ಅವರನ್ನು ಕೃಷ್ಣನು ತನ್ನ ಚಕ್ರಾಯುಧದಿಂದ ಕೊಂದನು. ವಿಷ್ಣುವಿನ ಬಗ್ಗೆ ದೊಡ್ಡ ದ್ವೇಷವು ಭುಗಿಲೆದ್ದುದು ಶಿಶುಪಾಲನಲ್ಲಿ. ಅದನ್ನು ವ್ಯಾಸ ಮಹರ್ಷಿಯು ತಮಗೆ ಮಾತ್ರ ಸಾಧ್ಯವಾದ ಶೈಲಿಯಲ್ಲಿ ಮಹಾಭಾರತದ ರಾಜಸೂಯ ಪರ್ವದಲ್ಲಿ ವರ್ಣಿಸಿರುತ್ತಾರೆ. ಅದನ್ನು ಕೆಳಗೆ ನಿರೂಪಿಸುತ್ತೇವೆ. 


ಧರ್ಮರಾಜನ ರಾಜಸೂಯ ಯಜ್ಞಕ್ಕೆ ಅನೇಕಾನೇಕ ಋಷಿಗಳು, ರಾಜರು ಮತ್ತು ಇತರರು ಬಂದಿದ್ದರು. ಅವನ ಸಭೆಯು ಆಕಾಶವು ನಕ್ಷತ್ರಗಳಿಂದ ಹೇಗೋ ಹಾಗೆ ಅವರಿಂದ ತುಂಬಿದ್ದಿತು. ಅಲ್ಲಿನ ಅಂತರ್ವೇದಿಯಲ್ಲಿ ರಾಜರ್ಷಿಗಳು ಮತ್ತು ಋಷಿಗಳು ಕುಳಿತು ಯಜ್ಞ ಸಂಬಂಧವಾದ ಮಾತುಗಳನ್ನು ಆಡಿದರು. ಧರ್ಮರಾಜನ ಯಜ್ಞ ವಿಧಾನವನ್ನು ನೋಡಿ ನಾರದನು ತುಂಬ ಸಂತಸಗೊಂಡನೂ, ಜೊತೆಗೆ ಅಂಶಾವತರಣದ ಸಮಯದಲ್ಲಿ ಬ್ರಹ್ಮನ ಭವನದಲ್ಲಿ ಈ ಕ್ಷತ್ರಿಯರೆಲ್ಲರೂ ಪರಸ್ಪರ ಯುದ್ಧ ಮಾಡಿ ಪುನಃ ತಮ್ಮ ಲೋಕಗಳನ್ನು ಸೇರುತ್ತಾರೆ ಎಂದು ಕೇಳಿಬಂದ ಮಾತನ್ನೂ ಸ್ಮರಿಸಿಕೊಂಡನು. ಭೀಷ್ಮನು ಧರ್ಮರಾಜನಿಗೆ ಇಲ್ಲಿ ನೆರೆದಿರುವ ರಾಜರಿಗೆ ಪೂಜೆಯನ್ನು ಮಾಡು ಎಂದು ನುಡಿದನು. ಅವರ ಪೂಜೆಯೆಲ್ಲವೂ ಆದ ನಂತರ ಅವನಿಗೆ ಇಲ್ಲಿ ಸರ್ವ ಶ್ರೇಷ್ಠನಾದವನಿಗೆ ಅಗ್ರಪೂಜೆಯನ್ನು ಮಾಡು ಎಂದು ನುಡಿದನು. ಧರ್ಮರಾಜನು ಯಾರಿಗೆ ಅಗ್ರಪೂಜೆ ಮಾಡಲಿ ಎಂಬುದನ್ನು ಹೇಳು ಎಂದು ಅವನನ್ನೇ ಕೇಳಿದನು. ಆಗ ಅವನು ಕೃಷ್ಣನೇ ಇವರೆಲ್ಲರಲ್ಲಿಯೂ ಪೂಜ್ಯತಮ ಎಂದು ತನ್ನ ಬುದ್ಧಿಯಿಂದ ನಿಶ್ಚಯಿಸಿ ಅವನಿಗೆ ಅಗ್ರಪೂಜೆಯನ್ನು ಮಾಡಲು ಹೇಳಿದನು. ಆಗ ಸಹದೇವನು ವಿಧಿವತ್ತಾಗಿ ಕೃಷ್ಣನಿಗೆ ಅಗ್ರಪೂಜೆಯನ್ನು ಸಲ್ಲಿಸಿದನು.


ಆದರೆ ಬಾಲ್ಯದಿಂದಲೂ ಕೃಷ್ಣನನ್ನು ದ್ವೇಷಿಸುತ್ತಿದ್ದ ಶಿಶುಪಾಲನಿಗೆ ಇದು ಸಹಿಸಲಿಲ್ಲ. ಅವನು ಆ ಸಭೆಯಲ್ಲಿ ಭೀಷ್ಮನನ್ನೂ, ಧರ್ಮರಾಜನನ್ನೂ ಮತ್ತು ಕೃಷ್ಣನನ್ನು ಮನಸ್ವಿಯಾಗಿ ತೆಗಳಿದನು. ಕೃಷ್ಣನು ಮೂರ್ಧಾಭಿಷಿಕ್ತನಾದ ರಾಜನಲ್ಲವೆಂಬುದೇ ಅವನು ಅಗ್ರ ಪೂಜೆಗೆ ಅರ್ಹನಲ್ಲವೆಂಬುದಕ್ಕೆ ಅವನು ಮುಂದಿಡುವ ಮುಖ್ಯವಾದ ವಾದ. 'ನೀವು ಬಾಲರು, ಪಾಂಡುವಿನ ಮಕ್ಕಳಾದ ನಿಮಗೆ ಧರ್ಮದ ಸೂಕ್ಷ್ಮವು ತಿಳಿಯದು.  ಈ ಭೀಷ್ಮನು ಧರ್ಮಶಾಸ್ತ್ರವನ್ನು ಅತಿಕ್ರಮಿಸಿದ ಅಲ್ಪದರ್ಶನ. ತನಗೆ ಪ್ರಿಯನೆಂಬ ಕಾರಣದಿಂದ ಕೃಷ್ಣನನ್ನು ಪೂಜಿಸಿರುವ ಅವನು ಸತ್ಪುರುಷರನ್ನು ಅವಮಾನ ಮಾಡಿರುತ್ತಾನೆ.


ಈ ಮಹೀಪತಿಗಳ ಮಧ್ಯದಲ್ಲಿ ಈ ದಾಶಾರ್ಹನು ಹೇಗೆ ಪೂಜೆಗೆ ಅರ್ಹನಾಗುತ್ತಾನೆ? ಅವನ ವಯೋಧಿಕೃತೆಯಿಂದಲೇ? ಆಚಾರ್ಯನೆಂಬುದರಿಂದಲೇ? ಋತ್ವಿಕ್ಕೆಂಬುದಾಗಿಯೇ? ವ್ಯಾಸ, ಭೀಷ್ಮ, ವೀರನಾದ ಅಶ್ವತ್ಥಾಮ, ದುರ್ಯೋಧನ, ಕೃಪ, ಭೀಷ್ಮಕ, ರುಕ್ಮ, ಏಕಲವ್ಯ, ಶಲ್ಯ, ಕರ್ಣ ಇವರೆಲ್ಲರನ್ನೂ ಅತಿಕ್ರಮಿಸಿ ಅವನನ್ನು ಹೇಗೆ ಪೂಜಿಸಿದೆ. ಈ ಧರ್ಮರಾಜನ ಭಯದಿಂದ ನಾವು ಅವನಿಗೆ ಕಪ್ಪವನ್ನು ತರಲಿಲ್ಲ. ಈ ಕೃಷ್ಣನು ಮಹಾತ್ಮನಾದ ಜರಾಸಂಧನನ್ನು ಕೊಂದನು. ಅಂತಹವನಿಗೆ ಈ ಧರ್ಮಪುತ್ರನು ಪೂಜೆಯನ್ನು ಸಲ್ಲಿಸಲಿರುತ್ತಾನೆ' ಹೀಗೆ ಹೇಳಿ ಅವನು ಅಲ್ಲಿದ್ದ ತನ್ನ ಸಂಗಾತಿಗಳನ್ನು ಏಳಿಸಿ ಆ ರಾಜನ ಸಭೆಯಿಂದ ಅವರೊಡನೆ ಹೊರಹೊರಟನು.


ಆಗ ಧರ್ಮರಾಜನು ಅವನನ್ನು ಹಿಂಬಾಲಿಸಿ 'ಪೌರುಷವಾದ ಮಾತುಗಳನ್ನಾಡಬೇಡ. ಏಕೆಂದರೆ ಅದರಿಂದ ಪ್ರಯೋಜನವಿಲ್ಲ. ಈ ಭೀಷ್ಮನು ಧರ್ಮವನ್ನು ತಿಳಿಯದವನಲ್ಲ. ಇಲ್ಲಿರುವ ನಿನಗಿಂತ ವೃದ್ಧರಾದ ರಾಜರನ್ನು ನೋಡು. ಅವರು ಯಾರೂ ಕೃಷ್ಣನ ಪೂಜೆಯನ್ನು ವಿರೋಧಿಸಿರುವುದಿಲ್ಲ. ನೀನೂ ಅದನ್ನು ಕ್ಷಮಿಸು. ನೀನು ಕೃಷ್ಣನನ್ನು ತಿಳಿಯೆ. ಭೀಷ್ಮನು ಅವನನ್ನು ಯಥಾರ್ಥವಾಗಿ ತಿಳಿದಿರುತ್ತಾನೆ' ಎಂದು ಅನುನಯದ ಮಾತುಗಳನ್ನು ಹೇಳಿದನು.


ಭೀಷ್ಮನಾದರೋ ಲೋಕವೃದ್ಧತಮನಾದ ಕೃಷ್ಣನಿಗೆ ಅಗ್ರ ಪೂಜೆಯನ್ನು ಇವನು ವಿರೋಧಿಸುತ್ತಿದ್ದಾನೆ. ನೀನು ಇವನಿಗೆ ಅನುನಯದ ಮಾತುಗಳನ್ನು ಹೇಳಬೇಡ. ಒಬ್ಬ ಕ್ಷತ್ರಿಯನು ಮತ್ತೊಬ್ಬ ಕ್ಷತ್ರಿಯನನ್ನು ಜಯಿಸಿ ಬಿಡುಗಡೆ ಮಾಡಿದರೆ, ಅವನು ಬಿಡುಗಡೆ ಮಾಡಿದ ಕ್ಷತ್ರಿಯನಿಗೆ ಗುರುವಾಗುತ್ತಾನೆ. ಈ ಸಮಿತಿಯಲ್ಲಿ ಈ ಸಾತ್ವತೀ ಪುತ್ರನ ತೇಜಸ್ಸಿನಿಂದ ಯುದ್ಧದಲ್ಲಿ ಗೆಲ್ಲಲ್ಪಡದ ಒಬ್ಬ ಮಹೀಪಾಲನನ್ನೂ ನಾನು ನೋಡುತ್ತಿಲ್ಲ. ನಾವು ಮಾತ್ರವಲ್ಲದೆ ಮೂರು ಲೋಕಗಳಿಂದಲೂ ಪೂಜಿಸಲು ಅವನು ಅರ್ಹನಾಗಿರುತ್ತಾನೆ. ನಾನು ಅನೇಕ ಜನ ಜ್ಞಾನ ವೃದ್ಧರನ್ನು ಉಪಾಸನೆ ಮಾಡಿರುತ್ತೇನೆ. ಅವರಿಂದ ನಾನು ಕೃಷ್ಣನ ಮಹಿಮೆಗಳನ್ನು ತಿಳಿದಿರುತ್ತೇನೆ. ಅವನಿಂದಲೇ ಈ ಲೋಕಗಳೆಲ್ಲವೂ ನಿಂತಿರುತ್ತದೆ. ಎಲ್ಲವೂ ಅವನಲ್ಲಿ ಪ್ರತಿಷ್ಠಿತವಾಗಿರುತ್ತದೆ. ಈ ದೇವತೆಗಳು ಮತ್ತು ಲೋಕಗಳೆಲ್ಲಕ್ಕೂ ಅವನೇ ಮುಖ್ಯ" ಎಂದು ಹೇಳಿ ಅವನು ಆ ಸಭೆಯಲ್ಲಿ ಕೃಷ್ಣನ ಕರ್ಮ, ಗುಣ ಮತ್ತು ಚರಿತ್ರೆಗಳನ್ನು ವಿಸ್ತಾರವಾಗಿ ನಿರೂಪಿಸಿ ನಂತರ ಸುಮ್ಮನಾದನು. 


   ಅವನು ಮೌನವಹಿಸಿದಾಗ ಸಹದೇವನು

ಕೇಶವಂ ಕೇಶಿಹಂತಾರಂ ಅಪ್ರಮೇಯಪರಾಕ್ರಮಮ್।

ಪೂಜ್ಯಮಾನಂ ಮಯಾ ಯೋ ವಃ ಕೃಷ್ಣಂ ನ ಸಹತೇ ನೃಪಾಃ॥

ಸರ್ವೇಷಾಂ ಬಲಿನಾಂ ಮೂರ್ಧ್ನಿ ಮಯೇದಂ ನಿಹಿತಂ ಪದಮ್। 

ಏವಮುಕ್ತೇ ಮಯಾ ಸಮ್ಯಕ್ ಉತ್ತರಂ ಪ್ರಬ್ರವೀತು ಸಃ॥

(ಅಪ್ರಮೇಯ ಪರಾಕ್ರಮನೂ, ಕೇಶಿಯನ್ನು ಕೊಂದವನೂ ಆದಂತಹ ಕೇಶವನನ್ನು ನಾನು ಪೂಜಿಸುತ್ತಿರುವುದನ್ನು ನಿಮ್ಮಲ್ಲಿ ಯಾರು ಸಹಿಸುವುದಿಲ್ಲವೋ ಅಂತಹ ಬಲಿಷ್ಠರಾದ ನಿಮ್ಮೆಲ್ಲರ ತಲೆಯ ಮೇಲೆ ಇದೋ ನಾನು ಕಾಲನ್ನು ಇರಿಸುತ್ತೇನೆ. ಹೀಗೆ ಹೇಳಿದ ನನಗೆ ಸರಿಯಾಗಿ ಉತ್ತರವನ್ನು ಅಂತಹವನು ಕೊಡಲಿ) ಎಂದು ನುಡಿದನು.


ಅವರೆಲ್ಲರೂ ಅಭಿಮಾನಿಗಳೂ ಬಲಿಷ್ಠರೂ ಬುದ್ಧಿವಂತರೂ ಆದ ರಾಜರಾಗಿದ್ದರು. ಆದರೂ ಅವನು ಕಾಲನ್ನು ತೋರಿಸಿದರೂ ಅವರು ಯಾರೂ ಏನನ್ನೂ ಹೇಳಲಿಲ್ಲ. ಆಗ ಸಹದೇವನ ಶಿರಸ್ಸಿನ ಮೇಲೆ ಆಕಾಶದಿಂದ ಪುಷ್ಪವೃಷ್ಟಿಯು ಬಿದ್ದಿತು. ಸಾಧು ಸಾಧು ಎಂದು ಮಾತು ಕೇಳಿ ಬಂದಿತು. ಭೂತ, ಭವಿಷ್ಯತ್ತುಗಳನ್ನು ಹೇಳುವವನೂ ಸರ್ವ ಸಂಶಯ ನಿರ್ಮೋಕ್ತನೂ, ಸರ್ವಲೋಕವಿದನೂ ಆದ ನಾರದನೂ ಎಲ್ಲ ಭೂತಗಳ ಮಧ್ಯೆ ಸ್ಪಷ್ಟವಾಗಿ

ಕೃಷ್ಣಂ ಕಮಲಪತ್ರಾಕ್ಷಂ ನಾರ್ಚಯಿಷ್ಯನ್ತಿ ಯೇ ನರಾಃ। 

ಜೀವನ್ಮೃತಾಸ್ತು ತೇ ಜ್ಞೇಯಾಃ ನ ಸಂಭಾಷ್ಯಾಃ ಕದಾ ಚ ನ।।

(ಯಾವ ನರರು ಕಮಲಪತ್ರಾಕ್ಷನಾದ ಕೃಷ್ಣನನ್ನು ಪೂಜಿಸುವುದಿಲ್ಲವೋ ಅವರು ಜೀವನ್ಮೃತರು; ಅವರೊಡನೆ ಯಾವಾಗಲೂ ಸಂಭಾಷಣೆ ಮಾಡಬಾರದು) ಎಂದು ನುಡಿದನು.


ಈ ಘಟನೆಗಳಿಂದ ಸಾಗರದಂತಿದ್ದ ಆ ನೃಪತಿಮಂಡಲವು ಕ್ಷುಬ್ಧವಾಗಿ ಬಿರುಗಾಳಿಗೆ ಸಿಕ್ಕಿದ ಸಮುದ್ರದಂತೆ ಅಲ್ಲೋಲ ಕಲ್ಲೋಲವಾಯಿತು. ರೋಷದಿಂದ ಪ್ರಚಲಿತವಾದ ಅದನ್ನು ನೋಡಿ ಧರ್ಮರಾಜನು ಭೀಷ್ಮನಿಗೆ, "ಈ ನೃಪತಿ ಸಾಗರವು ರೋಷದಿಂದ ಚಲಿಸುತ್ತಿದೆ. ಈಗ ಏನು ಮಾಡುವುದು, ಹೇಳು. ಯಜ್ಞಕ್ಕೆ ವಿಘ್ನವುಂಟಾಗದಂತೆ ಮತ್ತು ಲೋಕಕ್ಕೆ ಹಿತವುಂಟಾಗುವಂತೆ ಮುಂದಿನ ಕರ್ತವ್ಯವೇನು ಎಂಬುದನ್ನು ನನಗೆ ತಿಳಿಸು" ಎಂದು ಹೇಳಿದನು. ಅದಕ್ಕೆ ಭೀಷ್ಮನು 'ನಾಯಿಯು ಸಿಂಹವನ್ನು ಕೊಲ್ಲಲಾರದು. ಸಿಂಹವು ಮಲಗಿರುವಾಗ ನಾಯಿಗಳು ಬೊಗಳುತ್ತವೆ ಮಾತ್ರ. ಅಲ್ಪಚೇತನನಾದ ಶಿಶುಪಾಲನು ಇವರೆಲ್ಲರನ್ನೂ ಯಮನ ಬಳಿಗೆ ಕರೆದುಕೊಂಡು ಹೋಗಲು ಇಚ್ಚಿಸುತ್ತಾನೆ. ಯಾವನನ್ನು ಈ ಕೃಷ್ಣನು ಹಿಂದಕ್ಕೆ ಕರೆದುಕೊಳ್ಳಲಿಚ್ಛಿಸುತ್ತಾನೆಯೋ ಅವನ ಬುದ್ಧಿಯು ಈ ಶಿಶುಪಾಲನ ಬುದ್ಧಿಯಂತೆ ವಿಪ್ಲವಗೊಳ್ಳುತ್ತದೆ' ಎಂದು ನುಡಿದನು.


ತನ್ನ ವಿಷಯದಲ್ಲಿ ಭೀಷ್ಮನು ಹೀಗೆ ಹೇಳಿದುದು ಶಿಶುಪಾಲನಿಗೆ ತುಂಬ ಕೋಪವನ್ನುಂಟುಮಾಡಿತು. ಅವನು ಹೇಳಿದ್ದ ಕೃಷ್ಣನ ಮಹಾಕರ್ಮಗಳು ಶಿಶುಪಾಲನ ಮನಸ್ಸನ್ನು ಕೆರಳಿಸಿದುವು. ಅವನು ಅವುಗಳನ್ನು ಒಂದೊಂದಾಗಿ ತೆಗೆದುಕೊಂಡು ಅವುಗಳಲ್ಲಿ ಏನೂ ಇಲ್ಲ ಎಂದು ವಾದಿಸಿದನು. ಅವನು ಭೀಷ್ಮನಿಗೆ, "ನೀನು ಬುದ್ಧಿ ಕೆಟ್ಟವನು. ಮೂರ್ಖ, ಕೇಶವನನ್ನು ಸ್ತೋತ್ರ ಮಾಡಲು ಇಚ್ಛಿಸುತ್ತೀಯೆ. ನಿನ್ನ ನಾಲಿಗೆ ನೂರಾಗಿ ಏಕೆ ಸೀಳಿ ಹೋಗುತ್ತಿಲ್ಲ? ಅವನು ಬಕಪಕ್ಷಿಯನ್ನು ಕೊಂದರೆ ಅದೇನು ದೊಡ್ಡ ಕೆಲಸ? ಅಶ್ವ ಮತ್ತು ವೃಷಭಗಳು ಯುದ್ಧವನ್ನು ಅರಿತವುಗಳಲ್ಲ. ಅವನು ಹುತ್ತದಷ್ಟು ದೊಡ್ಡದಾಗಿದ್ದ ಒಂದು ಬೆಟ್ಟವನ್ನು ಏಳು ದಿನ ಎತ್ತಿ ಹಿಡಿದಿದ್ದರೆ ಅದೇನು ದೊಡ್ಡ ವಿಷಯ? ಒಂದು ನಿರ್ಜೀವವಾದ ಕಡ್ಡಿಯನ್ನು ಬೀಳಿಸಿದ್ದರೆ ಅದರಲ್ಲಿ ಹೇಳಿಕೊಳ್ಳುವುದೇನಿದೆ? ಅವನು ಬೆಟ್ಟದ ಮೇಲೆ ಕುಳಿತು ಬಹಳ ಅನ್ನವನ್ನು ತಿಂದಿದ್ದರೆ ಅದರಲ್ಲಿ ಹೊಗಳುವ ವಿಷಯವೇನಿದೆ? ಇವನು ಕಂಸನ ಅನ್ನವನ್ನು ತಿಂದು ಅವನನ್ನೇ ಕೊಂದ ದ್ರೋಹಿ. ಇವನು ಗೋಘ್ನ, ಸ್ತ್ರೀಘ್ನ. ಕೇವಲ ನಿನ್ನ ಮಾತಿನಿಂದ ಇವನು ಪೂಜ್ಯನಾಗಿರುತ್ತಾನೆ' ಎಂದು ಹೇಳಿ ಭೀಷ್ಮನನ್ನೂ ಸಹ ನಿಂದಿಸಿದನು.


ಶಿಶುಪಾಲನ ಮಾತುಗಳಲ್ಲಿ ಅಸೂಯೆ, ಕೃಷ್ಣನ ಗುಣ ಭಾಗಗಳನ್ನು ಒಪ್ಪಿಕೊಳ್ಳಲು ಇಚ್ಛೆಯಿಲ್ಲದಿರುವಿಕೆ, ಅವನ ಮಹಾತ್ಮ್ಯವನ್ನು ತೆಗಳುವ ಪ್ರವೃತ್ತಿಗಳನ್ನು ನೋಡುತ್ತೇವೆ. ಜರಾಸಂಧನನ್ನು ಕೊಂದ ಪ್ರಸಂಗವನ್ನು ಹೇಳಿದಾಗ ಭೀಮ ಅತ್ಯಂತ ಕ್ರುದ್ಧನಾಗಿ ಮುಖವನ್ನು ಗಂಟು ಹಾಕಿಕೊಂಡು ಅವನನ್ನು ಕೊಲ್ಲಲು ಮೇಲೆದ್ದನು. ಭೀಷ್ಮನೇ ಅವನನ್ನು ತಡೆದನು. ಶಿಶುಪಾಲನು ಭೀಮನಿಂದ ಭಯವನ್ನು ತೋರ್ಪಡಿಸದೆ ಭೀಷ್ಮನಿಗೆ ಇವನನ್ನು ಬಿಡು. ನನ್ನ ಪರಾಕ್ರಮದಿಂದ ಬೆಂಕಿಯು ಪತಂಗವನ್ನು ಸುಡುವಂತೆ ಅವನನ್ನು ಸುಟ್ಟುಹಾಕುತ್ತೇನೆ ಎಂದು ನುಡಿದನು.


ಆಗ ಭೀಷ್ಮನು ಭೀಮನಿಗೆ ಆ ಸಭೆಯಲ್ಲಿ ಎಲ್ಲರೂ ಕೇಳುವಂತೆ ಶಿಶುಪಾಲನ ಜನ್ಮ ವೃತ್ತಾಂತವನ್ನು ಹೇಳಿದನು. "ಈ ಶಿಶುಪಾಲನು ಚೇದಿರಾಜಕುಲದಲ್ಲಿ ಮೂರು ಕಣ್ಣು ಮತ್ತು ನಾಲ್ಕು ತೋಳುಗಳಿಂದ ಕೂಡಿ ಹುಟ್ಟಿದನು. ಹುಟ್ಟಿದಾಗ ಕತ್ತೆಯಂತೆ ಇವನು ಕಿರುಚಿಕೊಂಡನು. ಅವನ ತಂದೆ ತಾಯಿಗಳೂ ಮತ್ತು ಬಂಧುಗಳೂ ಭೀತರಾಗಿ ಅವನನ್ನು ತ್ಯಾಗ ಮಾಡಿಬಿಡಬೇಕೆಂದು ಯೋಚಿಸಿದರು. ಆಗ ಅಶರೀರವಾಣಿಯೊಂದು ಅವನ ತಂದೆಗೆ, "ನೀನು ಇವನಿಂದ ಹೆದರ ಬೇಡ. ಇವನು ಬಲಾಧಿಕನಾಗಿರುತ್ತಾನೆ. ಇವನನ್ನು ಕಾಪಾಡು. ಇವನ ಮೃತ್ಯು ಕಾಲವು ಬಂದಿಲ್ಲ. ಶಸ್ತ್ರದಿಂದ ಇವನನ್ನು ಕೊಲ್ಲುವವನು ಹುಟ್ಟಿರುತ್ತಾನೆ" ಎಂದು ಹೇಳಿತು. ಪುತ್ರ ಸ್ನೇಹದಿಂದ ತುಂಬಿದ ಅವನ ತಾಯಿಯು "ಈ ಮಾತನ್ನು ಹೇಳಿದ ಭೂತಕ್ಕೆ ನಮಸ್ಕರಿಸುತ್ತೇನೆ. ಇವನನ್ನು ಕೊಲ್ಲುವವನು ಯಾರು?" ಎಂದು ಕೇಳಿದಳು. ಅದು, "ಯಾರ ತೊಡೆಯ ಮೇಲಿರಿಸಿದಾಗ ಇವನ ಅಧಿಕವಾದ ಭುಜಗಳೂ ಮತ್ತು ಹಣೆಯಲ್ಲಿರುವ ಕಣ್ಣೂ ಮರೆಯಾಗುತ್ತವೆಯೋ ಅವನೇ ಇವನಿಗೆ ಮೃತ್ಯು" ಎಂದು ಹೇಳಿತು. ಆಗ ದಮಘೋಷನು ರಾಜರನ್ನು ಆಹ್ವಾನಿಸಿ ಅವರನ್ನು ಒಬ್ಬೊಬ್ಬರನ್ನಾಗಿ ಪೂಜಿಸಿ ಅವರ ಅಂಕದಲ್ಲಿ ಶಿಶುವನ್ನಿರಿಸಿದನು. ಸಾವಿರಾರು ಜನ ರಾಜರ ಅಂಕಗಳಲ್ಲಿ ಶಿಶುವನ್ನಿರಿಸಿದರೂ ಅಶರೀರವಾಣಿಯ ಮಾತು ಫಲಿಸಲಿಲ್ಲ. ಒಮೈ ಸೋದರತ್ತೆಯನ್ನು ನೋಡಲು ರಾಮಕೃಷ್ಣರು ಬಂದರು. ಅವಳು ಅವರು ಇಬ್ಬರ ತೊಡೆಯಲ್ಲಿಯೂ ಮಗುವನ್ನು ಇರಿಸಿದಳು. ದಾಮೋದರನ ತೊಡೆಯಲ್ಲಿ ಶಿಶುಪಾಲನನ್ನು ಇರಿಸಿದ ಮಾತ್ರಕ್ಕೆ ಅವನ ಅಧಿಕವಾದ ಭುಜ ಮತ್ತು ಲಲಾಟದಲ್ಲಿದ್ದ ಕಣ್ಣುಗಳು ಅದೃಶ್ಯವಾದುವು. ಆಗ ತ್ರಸ್ತೆಯಾದ ಕೃಷ್ಣನ ಅತ್ತೆಯು ಭಯಾರ್ತಳಾಗಿ ಕೃಷ್ಣನಿಂದ ಅಭಯವನ್ನು ಯಾಚಿಸಿದಳು. ಆಗ ಕೃಷ್ಣನು ಅವಳಿಗೆ "ನೀನು ಹೆದರಬೇಡ, ನನ್ನಿಂದ ನಿನಗೆ ಭಯವಿಲ್ಲ. ನಿನಗೆ ಯಾವ ವರವನ್ನು ಕೊಡಲಿ?" ಎಂದನು. ಅವಳು ಈ ಶಿಶುಪಾಲನ ಅಪರಾಧಗಳನ್ನು ಕ್ಷಮಿಸು' ಎಂದು ಬೇಡಿದಳು. ಆಗ ಕೃಷ್ಣನು ವಧಾರ್ಹನಾದರೂ "ಇವನ ನೂರು ಅಪರಾಧಗಳನ್ನು ನಾನು ಕ್ಷಮಿಸುತ್ತೇನೆ ನೀನು ಚಿಂತಿಸಬೇಡ" ಎಂದು ನುಡಿದನು. 'ಈಗ ಇವನು ಗೋವಿಂದನ ವರದಿಂದ ದೃಪ್ತನಾಗಿ ಅವನನ್ನೇ ಯುದ್ಧಕ್ಕೆ ಕರೆಯುತ್ತಿದ್ದಾನೆ' ಎಂದು ಹೇಳಿ ಭೀಷ್ಮನು "ಇದು ಚೇದಿಪತಿಯ ಬುದ್ಧಿಯಲ್ಲ. ಇದು ಜಗದ್ಭರ್ತನಾದ ಕೃಷ್ಣನ ವಿನಿಶ್ಚಯ. ಈ ಭೂಮಿಯಲ್ಲಿ ಕಾಲಹತನಾದ ಬೇರೆ ಯಾವನು ತಾನೆ ನನ್ನನ್ನು ಹೀಗೆ ಧಿಕ್ಕರಿಸುತ್ತಾನೆ? ಇವನು ಹರಿಯ ತೇಜೊಂಶ. ಭಗವಂತನು ಇವನನ್ನು ತನ್ನಲ್ಲಿಗೆ ತೆಗೆದುಕೊಳ್ಳಲು ಇಚ್ಛಿಸುತ್ತಾನೆ. ಆದುದರಿಂದಲೇ ಈ ದುರ್ಬುದ್ದಿಯಾದ ಚೇದಿಪತಿಯು ನಮ್ಮನ್ನು ಗಣನೆಗೆ ತಾರದೆ ಗರ್ಜಿಸುತ್ತಿದ್ದಾನೆ" ಎಂದು ನುಡಿದನು.


ಈ ಮಾತನ್ನು ಕೇಳಿ ಶಿಶುಪಾಲನು ಇನ್ನೂ ಸಿಟ್ಟಿಗೆದ್ದನು. ಅವನು ಭೀಷ್ಮನಿಗೆ, "ನೀನು ಕೃಷ್ಣನನ್ನು ವಂದಿಯಂತೆ ಸರ್ವದಾ ಸ್ತೋತ್ರಮಾಡಲು ಸಿದ್ಧವಾಗಿರುತ್ತೀಯೆ. ಯಾವಾಗ ನಿನಗೆ ಇತರರನ್ನು ಹೊಗಳಲು ಮನಸ್ಸು ಬರುತ್ತದೆಯೋ ಆಗ ನೀನು ಜನಾರ್ದನನ್ನೂ ಬಿಟ್ಟು ಅವರನ್ನು ಹೊಗಳುವೆ. ಭೂಮಿಯನ್ನು ಸೀಳಿದ ಈ ಬಾಹ್ಲೀಕನನ್ನು ಸ್ತೋತ್ರಮಾಡು. ನಿನಗೆ ಹೊಗಳಲು ಇಚ್ಛೆ ಬಂದರೆ ಮಹಾಧನುರ್ಧಾರಿಯಾದ ಈ ಕರ್ಣನನ್ನು ಹೊಗಳು. ಬೇಕಾದರೆ ದ್ರೋಣಾದಿಗಳನ್ನು ಹೊಗಳು. ಹಾಗೆಯೇ ಇಲ್ಲಿರುವ ಬೇರೆಯಾರನ್ನಾದರೂ ಹೊಗಳು. ಆದರೆ ಯೋಗ್ಯರನ್ನು ಹೊಗಳದೆ ಒಬ್ಬ ಅನರ್ಹನಾದವನ್ನು ಹೊಗಳುತ್ತೀದ್ದೀಯೆ. ಲೋಕವಿದ್ವಿಷ್ಟವಾದ ಕೆಲಸವನ್ನು ಮಾಡಲು ನಿನಗೆ ಸಮವಿಲ್ಲ!" ಎಂದನು.


ಶಿಶುಪಾಲನ ಕಟುವಾದ ಮಾತನ್ನು ಕೇಳಿ ಭೀಷ್ಮನು, "ನಿಜ, ನೀವು ನನಗೆ ಇರಲು ಅವಕಾಶವಿತ್ತಿರುವುದರಿಂದ ನಾನು ಭೂಮಿಯಲ್ಲಿ ಜೀವಿಸುತ್ತಿದ್ದೇನೆ! ನರಾಧಿಪರಾದ ನಿಮ್ಮನ್ನು ನಾನು ಹುಲ್ಲಿಗೆ ಸಮನಾಗಿಯೂ ಸಹ ಗಣಿಸೆ" ಎಂದನು. ಕೆಲವರು ಅವನ ಮಾತಿನಿಂದ ಸಂತೋಷಪಟ್ಟರು. ಮತ್ತೆ ಕೆಲವರು ಇವನನ್ನು ಚಾಪೆಯಲ್ಲಿ ಸುತ್ತಿ ಸುಟ್ಟುಬಿಡೋಣ ಎಂದರು. ಆಗ ಭೀಷ್ಮನು, 'ನೀವು ನನ್ನನ್ನು ಒಂದು ಪಶುವಿನಂತೆ ಕೊಲ್ಲಿರಿ ಅಥವಾ ಚಾಪೆಯಲ್ಲಿ ಸುತ್ತಿಸುಡಿರಿ, ನಾನು ನಿಮ್ಮಗಳ ತಲೆಯ ಮೇಲೆ ನನ್ನ ಪಾದವನ್ನಿರಿಸುತ್ತೇನೆ. ಇದೋ ನಾವು ಈ ಗೋವಿಂದನನ್ನೂ ಪೂಜಿಸಿರುತ್ತೇವೆ. ಯಾವನಿಗೆ ಮರಣದಲ್ಲಿ ಬುದ್ಧಿಯಿರುತ್ತದೆಯೋ ಅವನು ಈ ಗೋವಿಂದನನ್ನು ಯುದ್ಧಕ್ಕೆ ಕರೆಯಲಿ. ಅವನು ಯುದ್ಧದಲ್ಲಿ ಮಡಿದು ಗೋವಿಂದನ ದೇಹವನ್ನೇ ಪ್ರವೇಶಿಸಲಿ' ಎಂದನು.


ಆ ಮಾತನ್ನು ಕೇಳಿ ಶಿಶುಪಾಲನು, ಕೃಷ್ಣನೊಡನೆ ಯುದ್ಧ ಮಾಡುವ ಅಪೇಕ್ಷೆಯಿಂದ ಅವನನ್ನು ಕುರಿತು, 'ಜನಾರ್ದನ, ಇದೋ ನಾನು ನಿನ್ನನ್ನು ಕರೆಯುತ್ತಿದ್ದೇನೆ. ಬಾ, ನನ್ನ ಜೊತೆಯಲ್ಲಿ ಯುದ್ಧ ಮಾಡು - ಪಾಂಡವರೆಲ್ಲರ ಜೊತೆಯಲ್ಲಿ ನಾನು ನಿನ್ನನ್ನು ಕೊಲ್ಲುತ್ತೇನೆ. ಅರಾಜನಾದ ನಿನ್ನನ್ನು ಪೂಜಿಸಿದ ಅವರು ನನಗೆ ವಧ್ಯರೇ ಆಗಿರುತ್ತಾರೆ. ನೀನು ದಾಸ, ಅರಾಜ, ದುರ್ಮತಿ, ಅನರ್ಹ. ಆದುದರಿಂದ ನೀನು ಮತ್ತು ಅವರು ವಧ್ಯರು' ಎಂದು ಹೇಳಿ ಕೋಪದಿಂದ ಗರ್ಜಿಸುತ್ತಾ ನಿಂತನು.


ಹೀಗೆ ಅವನು ಪರುಷವಾಕ್ಯಗಳನ್ನಾಡಿದರೂ ಕೃಷ್ಣನು ಅವನ ವಿಷಯದಲ್ಲಿ ಕೋಪಗೊಳ್ಳಲಿಲ್ಲ. ಅವನು ಮೃದು ಪೂರ್ವಕವಾಗಿಯೇ ಅಲ್ಲಿದ್ದ ರಾಜರನ್ನು ಕುರಿತು ಈ ರೀತಿ ಹೇಳಿದನು. "ಈ ಸಾತ್ವತೀಸುತನು ನಮಗೆ ದೊಡ್ಡಶತ್ರು. ಅವನಿಗೆ ನಾವು ಅಪಕಾರಿಗಳಲ್ಲದಿದ್ದರೂ ಅವನು ಸಾತ್ವಕರಿಗೆ (ಯಾದವರಿಗೆ) ಹಲವಾರು ಅಪಕಾರಗಳನ್ನು ಮಾಡಿರುತ್ತಾನೆ. ನಾವು ಪ್ರಾಗ್‌ ಜ್ಯೋತಿಷಪುರಕ್ಕೆ ಹೋಗಿರುವೆವೆಂಬುದನ್ನು ತಿಳಿದು ಇವನು ನನ್ನ ತಂದೆಗೆ ಸೋದರಳಿಯನಾಗಿದ್ದರೂ ದ್ವಾರಕೆಗೆ ಬಂದು ಅದಕ್ಕೆ ಬೆಂಕಿ ಹಚ್ಚಿದನು. ಇವನು ಹಿಂದೆ ಭೋಜರಾಜನ ಪತ್ನಿಯರು ರೈವತಕ ಪರ್ವತದಲ್ಲಿ ಕ್ರೀಡಿಸುತ್ತಿರುವಾಗ ಅವರೆಲ್ಲರನ್ನೂ ಬಂಧಿಸಿ ತನ್ನ ಪಟ್ಟಣಕ್ಕೆ ಒಯ್ದನು. ನನ್ನ ತಂದೆಯು ಅಶ್ವಮೇದ ಯಜ್ಞದಲ್ಲಿ ರಕ್ಷಿಗಳ ಸಹಿತ ಅಶ್ವವನ್ನು ಬಿಟ್ಟನು. ಈ ಪಾಪಬುದ್ದಿ ಅವನ ಯಜ್ಞಕ್ಕೆ ವಿಘ್ನವನ್ನುಂಟು ಮಾಡಲು ಆ ಅಶ್ವವನ್ನು ಅಪಹರಿಸಿದನು. ಸೌವೀರ ದೇಶಕ್ಕೆ ಹೋಗಿದ್ದ ಬಭ್ರುವಿನ ಭಾರ್ಯೆಯನ್ನು ಅಕಾಮಳಾಗಿದ್ದರೂ ಇವನು ಅಪಹರಿಸಿದನು. ಇವನು ತನ್ನ ಸೋದರಮಾವನ ಹೆಂಡತಿಯಾದ ವೈಶಾಲಿಯನ್ನು ಕರೂಷ ದೇಶದ ರಾಜನಿಗೋಸ್ಕರ ಅಪಹರಿಸಿದನು. ನನ್ನ ಸೋದರತ್ತೆಯ ಕಾರಣದಿಂದ ಇವನ ದುಷ್ಕರ್ಮಗಳೆಲ್ಲವನ್ನೂ ನಾನು ಕ್ಷಮಿಸಿದೆನು. ಅದೃಷ್ಟವಶದಿಂದ ಈಗ ಎಲ್ಲ ರಾಜರ ಸಮ್ಮುಖದಲ್ಲಿ ಇವನು ನನಗೆ ವ್ಯತಿಕ್ರಮವನ್ನು ಮಾಡುತ್ತಿರುತ್ತಾನೆ. ಇವನು ಬುದ್ಧಿ ಮೋಹದಿಂದ ರುಕ್ಮಿಣಿಯನ್ನು ಪ್ರಾರ್ಥಿಸಿದನು. ಆದರೆ ಇವನು ಅವಳನ್ನು ಪಡೆಯಲಿಲ್ಲ".


ಕೃಷ್ಣನ ಈ ಮಾತುಗಳನ್ನು ಕೇಳಿ ಅಲ್ಲಿದ್ದ ನರಾಧಿಪರು ಚೇದಿರಾಜನನ್ನು ಗರ್ಹಣೆ ಮಾಡಿದರು. ಶಿಶುಪಾಲನು ಜೋರಾಗಿ ನಕ್ಕು ಈ ರೀತಿ ಹೇಳಿದನು "ನನಗೆ ಗೊತ್ತಾಗಿದ್ದ ರುಕ್ಮಿಣಿಯನ್ನು ಈ ಸದಸ್ಸಿನಲ್ಲಿ ಹೇಳುವುದರಿಂದ ನಿನಗೆ ಲಜ್ಜೆಯಾಗುತ್ತಿಲ್ಲವೇ? ಇನ್ನೊಬ್ಬನಿಗೆ ನಿಶ್ಚಯಳಾಗಿದ್ದ ಸ್ತ್ರೀಯನ್ನು ಸಭೆಯಲ್ಲಿ ನೀನಲ್ಲದೆ ಬೇರೆ ಯಾರು ತಾನೆ ಹೇಳುತ್ತಾರೆ? ನೀನು ನನ್ನನ್ನು ಕ್ಷಮಿಸು ಅಥವಾ ಬಿಡು. ನೀನು ಕ್ರುದ್ಧನಾದರೆ ನನಗೇನು? ಅಥವಾ ನೀನು ಪ್ರಸನ್ನನಾದರೆ ನನಗೇನು?


ಹೀಗೆ ಅವನು ಹೇಳುತ್ತಿರುವಾಗಲೇ ಮಧುಸೂದನನು ತನ್ನ ಮನಸ್ಸಿನಿಂದ ಚಕ್ರವನ್ನು ಸ್ಮರಿಸಿಕೊಂಡನು. ಅದು ಹಸ್ತಗತವಾದಾಗ ಭಗವಂತನು ಉಚ್ಚದ್ವನಿಯಲ್ಲಿ ಹೀಗೆ ಹೇಳಿದನು - ಇವನ ತಾಯಿಗೋಸ್ಕರ ಇವನು ಮಾಡಿದ ನೂರು ಅಪರಾಧಗಳನ್ನು ನಾನು ಕ್ಷಮಿಸಿರುವೆನು. ಈಗ ಅವು ಪೂರ್ಣವಾಗಿರುತ್ತವೆ. ಮಹೀಕ್ಷಿತರಾದ ನೀವೆಲ್ಲರೂ ನೋಡುತ್ತಿರುವಂತೆ ಇವನನ್ನು ವಧಿಸುತ್ತೇನೆ ಎಂದು ಹೇಳಿ ಕ್ರುದ್ಧನಾಗಿ ಚೇದಿರಾಜನ ಶಿರಸ್ಸನ್ನು ಕತ್ತರಿಸಿದನು.


ಆಗ ಆ ನೃಪರೆಲ್ಲರೂ ಗಗನದಿಂದ ಭಾಸ್ಕರನು ಹೇಗೋ ಹಾಗೆ ಒಂದು ಉತ್ತಮವಾದ ತೇಜಸ್ಸು ಲೋಕನಮಸ್ಕೃತನೂ ಕಮಲಪತ್ರಾಕ್ಷನೂ ಆದ ಕೃಷ್ಣನನ್ನು ನಮಸ್ಕರಿಸಿ ಅವನನ್ನು ಪ್ರವೇಶಿಸಿತು. ಅದನ್ನು ನೋಡಿ ಆ ಮಹೀಪಾಲರೆಲ್ಲರೂ ಅದೊಂದು ದೊಡ್ಡ ಅದ್ಭುತವೆಂದು ತಿಳಿದರು. ಋಷಿಗಳು ಸಂತೋಷಪಟ್ಟರು. ಆ ತೇಜಸ್ಸು ಪುರುಷೋತ್ತಮನನ್ನು ಪ್ರವೇಶಿಸಿದಾಗ ಮೋಡವಿಲ್ಲದಿದ್ದರೂ ಮಳೆ ಸುರಿಯಿತು. ಒಂದು ದೊಡ್ಡ ಸಿಡಿಲು ಬಡಿಯಿತು. ಭೂಮಿಯು ಚಲಿಸಿತು. ಯಾರೂ ಏನೂ ಹೇಳಲಿಲ್ಲ. ಅವರು ಕೈಗಳಿಂದ ಕೈಗಳನ್ನು ಹಿಸುಕಿಕೊಂಡರು. ಕ್ರೋಧ ಮೂರ್ಛಿತರಾಗಿ ತಮ್ಮ ಹಲ್ಲುಗಳಿಂದ ತುಟಿಗಳನ್ನು ಕಚ್ಚಿದರು. ಕೆಲವರು ಮಾಧ್ಯಸ್ಥ್ಯವನ್ನು ವಹಿಸಿದರು. ಕೆಲವರು ಕೃಷ್ಣನನ್ನೇ ಪ್ರಶಂಸೆ ಮಾಡಿದರು. ಧರ್ಮರಾಜನು ದಮಘೋಷಾತ್ಮಜನಿಗೆ ಸಂಸ್ಕಾರಗಳನ್ನು ಮಾಡಲು ತನ್ನ ತಮ್ಮಂದಿರಿಗೆ ಆದೇಶ ಮಾಡಿದನು.


ಶಿಶುಪಾಲನ ಕೊನೆಯ ಕಾಲವು ಅಶಾಂತಿ ಮತ್ತು ಸಂಘರ್ಷಗಳಿಂದ ಕೂಡಿದ್ದಿತು. ಅವನು ಕೃಷ್ಣನನ್ನು ನಿಂದಿಸುತ್ತಲೇ ತನ್ನ ಅಸುವನ್ನು ಬಿಟ್ಟನು. ಕೃಷ್ಣನೂ ಸಹ ರಹಸ್ಯದಲ್ಲಿ ಶಿಶುಪಾಲನನ್ನು ಕೊಲ್ಲಲಿಲ್ಲ. ಪ್ರತಿಯಾಗಿ ಅವನ ದುಷ್ಕರ್ಮಗಳನ್ನು ಒಂದು ದೊಡ್ಡ ರಾಜಸಭೆಯಲ್ಲಿ ಹೇಳಿ ಎಲ್ಲರ ಪ್ರತ್ಯಕ್ಷದಲ್ಲಿಯೂ ಅವನನ್ನು ಕೊಂದನು. ನಾವು ವ್ಯಾಸರ ವರ್ಣನಾ ಶಕ್ತಿಯಿಂದ ಶಿಶುಪಾಲನ ದೌಷ್ಟ್ಯವನ್ನು ಸ್ವಲ್ಪಮಟ್ಟಿಗೆ ಊಹಿಸಿಕೊಳ್ಳಬಹುದಾದರೂ, ಪರಮಾವಧಿಯನ್ನು ನೋಡುತ್ತೇವೆ ಎಂಬುದಾಗಿ ಹೇಳಲಾಗುವುದಿಲ್ಲ. ತನ್ನ ಚರಮ ಸೀಮೆಯನ್ನು ಮುಟ್ಟಿದಾಗ ತಾನೆ ಭಗವಂತನು ತನ್ನ ಚಕ್ರಾಯುಧವನ್ನು ಪ್ರಯೋಗಿಸಿ ತನ್ನ ಪಾರ್ಷದನನ್ನು ತನ್ನ ಬಳಿಗೆ ಕರೆದುಕೊಂಡನು. ಅದು ಸಭೆಯಲ್ಲಿದ್ದವರೆಲ್ಲರಿಗೂ ಗೋಚರಿಸಲಿಲ್ಲ. ಆದುದರಿಂದ ಶಿಶುಪಾಲ ವಧೆಗೆ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದರು. ಅದನ್ನು ಒಳ ದೃಷ್ಟಿಯಿಂದ ನೋಡಿದ ಋಷಿಗಳು ಮಾತ್ರ ಸಂತುಷ್ಟರೇ ಆದರು.

ಭಗವಂತನನ್ನು ದ್ವೇಷಿಸಿದರೆ ಶಿಶುಪಾಲನಂತೆ ದ್ವೇಷಿಸಬೇಕು. ಆಗ ಒಬ್ಬ ಭಕ್ತನು ಶೀಘ್ರದಲ್ಲಿ ಭಗವಂತನನ್ನು ಮುಟ್ಟಿ ಬಿಡುತ್ತಾನೆ. ಭಕ್ತಿಯ ಮೂಲಕ ಭಗವಂತನನ್ನು ಬಳಿ ಸಾರಿದಾಗ ಸ್ನೇಹ, ಸಂತೋಷ, ಪ್ರೀತಿ, ಶಾಂತಿ ಮುಂತಾದ ಹಿತಕರವಾದ ಭಾವನೆಗಳು ಭಕ್ತನಲ್ಲಿ ಕೆಲಸ ಮಾಡುತ್ತವೆ. ದ್ವೇಷದ ಮೂಲಕ ಮುಟ್ಟುವಾಗ ಕಟುವಾದ ಭಾವನೆ ಮತ್ತು ಅನುಭವಗಳು ಅನಿವಾರ್ಯ. ಪ್ರಹ್ಲಾದನ ಯಾತನೆಗಳು, ಸೀತಾ ರಾಮರ ಅರಣ್ಯವಾಸ, ರಾಕ್ಷಸಿಯರಿಂದ ಸೀತೆಯ ತರ್ಜನೆ, ದೇವಕೀ ವಸುದೇವರ ಕಾರಾವಾಸ, ಅವರ ಮಕ್ಕಳ ಕೊಲೆ ಇತ್ಯಾದಿಗಳು ಅದರ ಕೆಲವು ಘಟನೆಗಳು.


ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:21 ಸಂಚಿಕೆ:1, 1998 ನವಂಬರ್  ತಿಂಗಳಲ್ಲಿ  ಪ್ರಕಟವಾಗಿದೆ.