Thursday, July 15, 2021

ಲಕ್ಷ್ಯದತ್ತ ಸಾಗೋಣ ( Lakshyadatta Sagona)



ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)



ಫುಟ್- ಬಾಲ್ ಆಟದಲ್ಲಿ ಕ್ರೀಡಾಪಟುಗಳಿರಬೇಕಾದ ಮನೋಧರ್ಮ ಗಮನಿಸಿದರೆ, ಅವು ಜೀವನದಲ್ಲಿಯೂ ಅನುಸರಿಸಬಹುದಾದ ಒಳ್ಳೆಯ ಅಂಶಗಳೆಂದು ಮನವರಿಕೆಯಾಗುತ್ತದೆ. ತಂಡದ ಪಟು ತನ್ನ ತಂಡದ ಇನ್ನೊಬ್ಬ ಪಟುವಿಗೆ ಚೆಂಡನ್ನು ರವಾನಿಸುತ್ತಾನೆ. ಆತ ಇನ್ನೊಬ್ಬನಿಗೆ, ಹೀಗೆ ತಂಡದವರೆಲ್ಲಾ ಗುರಿಯತ್ತ ಸಾಗುತ್ತಲೇ ಇರುತ್ತಾರೆ. ಗುರಿಯನ್ನು ಮುಟ್ಟಿ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದರೆ- ಮಾರ್ಗದರ್ಶಿಯ ಸಲಹೆಗಳು, ಕ್ರೀಡೆಯ ನಿಯಮದ ಪಾಲನೆಯ ಬಗ್ಗೆ ಕಾಳಜಿ, ಧ್ಯೇಯದ ಚಿಂತನೆ, ಶಿಸ್ತು, ಪರಿಶ್ರಮ, ಏಕಾಗ್ರತೆ ಹಾಗೂ ಮತ್ತು ಸತತ ಅಭ್ಯಾಸ ಬೇಕಾಗುತ್ತವೆ. ಇವುಗಳಲ್ಲಿ ಯಾವುದೊಂದು ಕೊರತೆಯಾದರೂ ಕ್ರೀಡಾಪಟು ಪಂದ್ಯದಿಂದ ಹೊರಗಿರಬೇಕಾಗುತ್ತದೆ.


ಹೀಗೆಯೇ, ಆತ್ಮಕ್ರೀಡಃ ಆತ್ಮರತಿಃ, ಖೇಲತಿ ಮಮ ಹೃದಯೇ ರಾಮಃ, ಮನೆಯೊಳಗಾಡೋ ಗೋವಿಂದ ಎಂಬ ಸಾಹಿತ್ಯಗಳಲ್ಲಿ ಅಂತರಂಗ ಭಾವಧಾರೆಯನ್ನು ನೋಡಬಹುದು. ಇಂತಹ ಭಾವಧಾರೆ ಹರಿಯಬೇಕಾದರೆ, ಯೋಗಭೋಗಮಯವಾದ ಜೀವನವನ್ನನುಸರಿಸಿ ಬಾಳಿದರೆ ಸಾಧ್ಯವೆಂಬುದು ಸನಾತನ ಭಾರತೀಯರ ನಿಲುವು. ಇಲ್ಲಿ ಯೋಗವೆಂದರೆ ಸತ್ಯಸಾಕ್ಷಾತ್ಕಾರ ಎಂಬುದಾಗಿ ತಿಳಿಯಬೇಕೇ ಹೊರತು ಕೇವಲ ಆಸನಗಳು ಎಂಬುದಾಗಿ ತಿಳಿಯಬಾರದು. ಆಸನಗಳು ಯೋಗದ ಅಂಗವಷ್ಟೆ. ಇಂತಹ ಬಾಳಾಟಕ್ಕೆ ಫುಟ್ ಬಾಲ್ ಆಟದ ಕ್ರೀಡಾಪಟುಗಳಿರಬೇಕಾದ ಮೇಲಿನ ಅಂಶಗಳು ಅನುಸರಣೀಯ. ಯೋಗಕ್ಕೆ ವಿರುದ್ಧವಾದ ಬಾಳಾಟ ಅರ್ಥಹೀನವಾಗುತ್ತದೆಯಷ್ಟೆ ಅಲ್ಲದೆ, ಇಲ್ಲಿ ಸತ್ಯಸಾಕ್ಷಾತ್ಕಾರವನ್ನು ಮಾಡಿಕೊಳ್ಳದಿದ್ದಲ್ಲಿ ಮಹತ್ತಾದ ಆತ್ಮಹಾನಿಗೆ ಗುರಿಯಾಗುವನು ಎಂದು ಶ್ರುತಿಯು ಎಚ್ಚರಿಸುತ್ತದೆ.


ಈ ದೃಷ್ಟಿಯಿಂದ ಜೀವನದಲ್ಲಿ ಗುರಿಯೇನು ಮತ್ತು ಅದನ್ನು ಹೇಗೆ ಗಳಿಸಬೇಕೆಂಬ ವಿಚಾರ ಪ್ರತಿಯೊಬ್ಬ ಸಾಧಕನಿಗಿರಬೇಕಾಗುತ್ತದೆ. ಜೀವನದ ಧ್ಯೇಯದ ಬಗ್ಗೆ ನಮ್ಮ ರಾಷ್ಟ್ರದ ಮಹರ್ಷಿಗಳ ನಿಲುವತ್ತ ದೃಷ್ಟಿ ಹರಿಸೋಣ- "ಮಹಾಜನರೇ, ಮೇಲೇಳಿರಿ, ಅಜ್ಞಾನಮಯ ನಿದ್ರೆಯಲ್ಲಿದ್ದು ಮೈ ಮರೆಯಬೇಡಿ, ನಿಮ್ಮ ಜೀವನದ ಅಗ್ರದಲ್ಲಿ ನೆಲೆಸಿರುವ ನಿಮ್ಮನ್ನೂ ಅಗ್ರಕ್ಕೊಯ್ಯಬಲ್ಲ ಜ್ಙಾನಾಗ್ನಿಯನ್ನು ಬಯಸಿರಿ".  ಇಲ್ಲಿ ಎಚ್ಚರಿಸುವ ಧ್ವನಿಯನ್ನು ಗಮನಿಸಬೇಕು. ಧ್ಯೇಯವನ್ನು ಮರೆತರೆ, ಪರಿಶ್ರಮ ಪಡದಿದ್ದರೆ, ಸಾಧನೆಗೆ ವಿರುದ್ಧವಾದ ಸೆಳೆತಗಳಿಗೆ ಒಳಗಾದರೆ, "ಕಣ್ಣು ಕೈಕಾಲು ನಾಲಿಗೆ ಇರಲಿಕ್ಕೆ, ಮಣ್ಣುಮುಕ್ಕಿ ಮರುಳಾಗುವರೆ" ಎಂಬ ದಾಸರ ಪ್ರಶ್ನೆಗೆ ಉತ್ತರ ನೀಡಬೇಕಾಗುತ್ತದೆ; ಎಚ್ಚರ ತಪ್ಪಿದರೆ ಜೀವನದ ಮಹಾಧ್ಯೇಯದಿಂದ ಜಾರಬೇಕಾಗುತ್ತದೆ. ಇಲ್ಲಿ ಶ್ರೀರಂಗಮಹಾಗುರುಗಳ ಮಾತುಗಳು ಸ್ಮರಣೀಯ "ದೇವನ ಕಡೆಗೆ ಜೀವನು ಸುಖ ಶಾಂತಿಗಾಗಿ ಹೋಗಲೇಬೇಕು. ಅದು ಅವನ ಜೀವನ ಸಹಜವಾದ ಹಕ್ಕು, ಮೂಲಭೂತವಾದ ಹಕ್ಕು". ಇಂತಹ ಹಕ್ಕನ್ನು ಪಡೆಯಲು ಸದ್ಗುರುವಿನ ಗುಲಾಮರಾಗಬೇಕೆಂಬುದೇ ಜಗದ್ಗುರುವಾದ ಗೀತಾಚಾರ್ಯನ ಉಪದೇಶ- ಜ್ಞಾನಿಗಳನ್ನು ಸೇವಿಸಿ, ನಮಸ್ಕರಿಸಿ, ಸದ್ಭಾವನೆಯಿಂದ ಪ್ರಶ್ನೆಮಾಡಿ, ಅವರು ಜೀವನದ ಧ್ಯೇಯವನ್ನು ಹೊಂದುವ ಮಾರ್ಗವನ್ನು ಉಪದೇಶಿಸುವರು. ಇಲ್ಲಿ ಜ್ಞಾನಿಗಳೆಂದರೆ ಸತ್ಯ ಸಾಕ್ಷಾತ್ಕಾರ ಮಾಡಿಕೊಂಡು ತಮ್ಮ ಸುಕೃತಿ ಶಿಷ್ಯರಿಗೂ ಅದನ್ನು ಮಾಡಿಸಬಲ್ಲ ಮಹಾತ್ಮರು ಎಂಬುದಾಗಿ ತಿಳಿಯಬೇಕು. ಉಪದೇಶವನ್ನು ಪಡೆದು "ಮರಳಿ ಯತ್ನವ ಮಾಡು" ಎಂಬಂತೆ ಸಾಧಕನು ಕ್ರೀಡಾಪಟುವಿನಂತೆ ಸತತ ಅಭ್ಯಾಸ, ಶಿಸ್ತು, ನಿಯಮಗಳ ಪಾಲನೆ, ಪರಿಶ್ರಮ, ಸತ್ಸಂಗ ಮತ್ತು ದ್ವಂದ್ವಗಳಲ್ಲಿ ಸಮಾನತೆ- ಇವುಗಳಿಂದ ಲಕ್ಷ್ಯವನ್ನು ಸೇರಬೇಕಾಗುತ್ತದೆ.


ಸೂಚನೆ: 15/7/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.