Sunday, July 11, 2021

ಶ್ರೀರಾಮನ ಗುಣಗಳು - 13 ಆರ್ಯನಾದ- ಶ್ರೀರಾಮ (Sriramana Gunagalu - 13 Aryanada - Sri Rama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಭಾರತದಲ್ಲಿ 'ಆರ್ಯ' ಎಂಬ ಪದವು ಅನಾದಿಕಾಲದಿಂದಲೂ ರೂಢಿಯಲ್ಲಿರುವಂತಹದ್ದು. ಅದಕ್ಕೆ ತುಂಬಾಶ್ರೇಷ್ಠವಾದ ಅರ್ಥವಿದೆ. ಶ್ರೀರಾಮ, ಶ್ರೀಕೃಷ್ಣ ಮೊದಲಾದ ಆದರ್ಶವ್ಯಕ್ತಿತ್ವ ಉಳ್ಳವರನ್ನು 'ಆರ್ಯ' ಎಂಬಪದದಿಂದಲೇ ಕರೆಯುತ್ತೇವೆ. ಹಾಗಾದರೆ 'ಆರ್ಯ' ಎಂದರೇನು? ಅದಕ್ಕೆ ಅಂತಹ ಶ್ರೇಷ್ಠವಾದ ಅರ್ಥಬರಲು ಕಾರಣವೇನು? ಶ್ರೀರಾಮನನ್ನು  ಆರ್ಯ ಎಂದು ಕರೆಯಲು ಕಾರಣವೇನು?'ಸಂದರ್ಭೋಚಿತವಾದದ್ದನ್ನು ಆಚರಿಸಲು ಯೋಗ್ಯನಾದವನು' ಎಂಬ ಅರ್ಥದಲ್ಲಿ 'ಆರ್ಯ' ಎಂಬ ಪದವುಬಳಕೆಯಾಗುತ್ತದೆ. ಸತ್ಕುಲೋದ್ಭವ, ಪೂಜ್ಯ, ಶ್ರೇಷ್ಠ, ಸ್ವಾಮಿ ಇತ್ಯಾದಿ ಅರ್ಥಗಳಲ್ಲೂ ಈ ಪದ ಬಳಕೆಯಲ್ಲಿದೆ.ಯಾರು ಪ್ರಯತ್ನಪೂರ್ವಕವಾಗಿ ಭೂತಕೋಟಿಗಳಿಗೆ ಶುಭವನ್ನೇ ಮಾಡುತ್ತಾರೋ, ಯಾರು ಬೇರೆಲ್ಲೂ ಅಂಟನ್ನುಇಟ್ಟುಕೊಳ್ಳದೇ, ಕೇವಲ ಜೀವಮೂಲವಾದ ಪರಂಜ್ಯೋತಿಯಲ್ಲಿ ಮಾತ್ರ ಅಂಟನ್ನು ಇಟ್ಟುಕೊಳ್ಳುತ್ತಾರೋಅಂತಹವರನ್ನು 'ಆರ್ಯ' ಎನ್ನುತ್ತಾರೆ. ಯಾವಾಗಲೂ ಅವರು ತಮ್ಮ ಕರ್ತವ್ಯವನ್ನು ಮಾತ್ರ ಮಾಡುತ್ತಾರೆ.ಅಕರ್ತವ್ಯದ ಬಗ್ಗೆ ಅನಾಸಕ್ತಿಯನ್ನು ತೋರುತ್ತಾರೆ. ಈ ಕಾರಣದಿಂದಲೇ ಅವರು ಶ್ರೇಷ್ಠವ್ಯಕ್ತಿ ಎನಿಸಿಕೊಳ್ಳುತ್ತಾರೆ. ಮಾಡಬೇಕಾದುದನ್ನು ಮಾಡುತ್ತಾ, ಮಾಡಬಾರದ್ದನ್ನು ಬಿಡುವ ಸ್ವಭಾವವುಳ್ಳವರು ಅವರಾಗಿರುತ್ತಾರೆ. ಏಕೆಂದರೆಮಾಡಬಾರದ್ದನ್ನು ಮಾಡಿದರೆ ಆಗಬಾರದ್ದೇ ಆಗುತ್ತದೆ. ಹೀಗೆ ಬಹಳ ವಿವೇಚನೆಯಿಂದ ಸಾಧಕಬಾಧಕಗಳನ್ನು ತಿಳಿದುಜೀವಕೋಟಿಗೆ ಹಿತವಾಗುವಂತೆ ಇರುವುದೇ ಆರ್ಯರ ಲಕ್ಷಣವಾಗಿದೆ.


ಮನಸ್ಸು ವಿವೇಕದಿಂದ ವರ್ತಿಸಬೇಕಾದರೆ ರಜಸ್ಸು ಮತ್ತು ತಮಸ್ಸುಗಳಿಂದ ದೂರವಿರಬೇಕಾಗುತ್ತದೆ. ಅವು ಮನಸ್ಸನ್ನುಕಲುಷಿತಗೊಳಿಸುತ್ತವೆ. ಯಾವಾಗಲೂ ಈ ಗುಣಗಳ ಬಗ್ಗೆ ಸದಾ ಜಾಗರೂಕನಾಗಿರಬೇಕು. ಮಲಕ್ಕೆ ಕಾರಣವಾದಗುಣಗಳು ಲಯವಾದಾಗ ಅವರು ನಿರ್ಮಲರಾಗುತ್ತಾರೆ. ಹಾಗಾದಾಗ ಕೆಟ್ಟ ಯೋಚನೆಯನ್ನು ಮಾಡಲಾರರು. ದುಷ್ಟಯೋಜನೆಗೆಕೈ ಹಾಕಲಾರರು. ಇವರು ಮಾಡುವ ಪ್ರತಿಯೊಂದು ಕಾರ್ಯವೂ ಸಮಾಜದ ಅಥವಾ ಪ್ರತಿಯೊಂದು ಜೀವಿಯಕಲ್ಯಾಣಕ್ಕಾಗಿಯೇ ಮೀಸಲಾಗಿರುತ್ತದೆ. ಮಾಡುವ ಕರ್ಮ, ಆಡುವ ಮಾತು, ಚಿಂತಿಸುವ ಮನಸ್ಸು ಎಲ್ಲವೂ ಒಂದೇ ಕಡೆಕೇಂದ್ರಿತವಾಗಿರುತ್ತವೆ. ಇದು ತಾನೆ ಮಹಾತ್ಮರ ಲಕ್ಷಣ. ಇವೆಲ್ಲವೂ ಪರಿಪೂರ್ಣವಾಗಿ ಶ್ರೀರಾಮನಲ್ಲಿಚರಿತಾರ್ಥವಾಗಿದ್ದವು.'ಆರ್ಯಃ ಸರ್ವಸಮಶ್ಚೈವ' ಎಂಬುದಾಗಿ ಶ್ರೀಮದ್ರಾಮಾಯಣದಲ್ಲಿ 'ಆರ್ಯ' ಎಂಬ ಪದವನ್ನು ವಾಲ್ಮೀಕಿಮಹರ್ಷಿಗಳುರಾಮನಿಗೆ ಬಳಸಿದ್ದಾರೆ. ಇಲ್ಲಿ 'ಆರ್ಯ' ಎಂಬ ಪದವು ಹಿಂದೆ ವಿವರಿಸಿದಂತೆ ಬಹಳ ವಿಶಾಲವಾದ ಅರ್ಥದಲ್ಲಿಬಳಕೆಯಾಗಿದೆ. ರಾಮಾಯಣದಲ್ಲಿ 'ಆರ್ಯ' ಎಂಬ ಪದವನ್ನು ಹೇರಳವಾಗಿ ಬಳಸಿದ್ದನ್ನು ನಾವು ಕಾಣಬಹುದು.'ಆರ್ಯಪುತ್ರ' ಎಂಬುದಾಗಿ ಸೀತಾಮಾತೆಯು ಶ್ರೀರಾಮನನ್ನು ಸಂಬೋಧಿಸುತ್ತಾಳೆ. ಸಂಪೂರ್ಣ ರಾಮಾಯಣವೇಶ್ರೀರಾಮನ ಆರ್ಯತನವನ್ನು ಎತ್ತಿಸಾರುವ ಕಾವ್ಯವಾಗಿದೆ. ಅವನ ಪ್ರತಿಯೊಂದು ಹೆಜ್ಜೆಯೂ ಆರ್ಯಲಕ್ಷಣದಿಂದಕೂಡಿದೆ. ಅವನ ಜೀವನವೇ ಆರ್ಯಜೀವನ. ಪತ್ನಿಯ ಜೊತೆಗಿರುವ ಪ್ರೇಮವಾಗಿರಬಹುದು, ಕುಟುಂಬದ ಜೊತೆಗಿರುವಬಾಂಧವ್ಯವಿರಬಹುದು, ಹಿರಿಯರನ್ನು ಗೌರವಿಸುವುದಿರಬಹುದು, ಮಿತ್ರರ ಜೊತೆಗಿರುವ ಸ್ನೇಹವಾಗಿರಬಹುದು,ಪ್ರಜೆಗಳ ವಿಷಯದಲ್ಲಿರುವ ವಾತ್ಸಲ್ಯವಿರಬಹುದು, ಭಕ್ತರ ವಿಷಯದಲ್ಲಿರುವ ಪ್ರೀತಿಯಿರಬಹುದು, ಭೂತಕೋಟಿಗಳವಿಷಯದಲ್ಲಿ ದಯೆ, ಕಾರುಣ್ಯಾದಿ ಆತ್ಮಗುಣಗಳಿರಬಹುದು, ಶತ್ರುಗಳ ವಿಷಯದಲ್ಲಿರುವ ನೈಷ್ಠುರ್ಯವಿರಬಹುದು,ಹೀಗೆ ಪ್ರತಿಯೊಂದು ವಿಚಾರದಲ್ಲೂ ಶ್ರೀರಾಮನು ತೋರುವ ಗುಣ ಆರ್ಯಲಕ್ಷಣಯುಕ್ತವಾಗಿದೆ. ಹಾಗಾಗಿ ಶ್ರೀರಾಮನುಸರ್ವರಿಗೂ ಸರ್ವಕಾಲದಲ್ಲೂ ಆದರ್ಶ, ಅನುಸರಣೀಯ ಮತ್ತು ಅನುಕರಣೀಯ.


ಸೂಚನೆ : 11/7/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.