Sunday, July 4, 2021

ಏನಿದು ವಿಚಿತ್ರ ? (Enidu vichitra ?)

ಲೇಖಕಿ ; ಮೈಥಿಲೀ ರಾಘವನ್ 

(ಪ್ರತಿಕ್ರಿಯಿಸಿರಿ lekhana@ayvm.in)



ಹಸಿವಡಗಿಸುವಿಕೆ, ದೇಹಾರೋಗ್ಯ ಹಾಗೂ ರಸಾಸ್ವಾದನೆಗಳೇ ಆಹಾರಸ್ವೀಕಾರದ ಉದ್ದೇಶವೆಂಬುದು ಪ್ರಪಂಚದಾದ್ಯಂತ ಎಲ್ಲರೂ ಒಪ್ಪುವ ವಿಚಾರ.  ಅವರವರ ಅಗತ್ಯ, ಇಷ್ಟ, ಅನುಕೂಲ-ಆರೋಗ್ಯಗಳಿಗೆ ತಕ್ಕಂತೆ ಊಟಮಾಡಬೇಕೆನ್ನುವುದಷ್ಟು ಬಿಟ್ಟು ಇನ್ಯಾವ ನಿಯಮಗಳೂ ಸಾಮಾನ್ಯವಾಗಿ ಕಂಡುಬರುವುದಿಲ್ಲ.

    ಆದರೆ ಭಾರತೀಯ ಋಷಿಸಂಸ್ಕೃತಿಯಲ್ಲಿ ವಿಚಿತ್ರವಾದ ಪದ್ಧತಿಗಳು ಹುಟ್ಟಿಕೊಂಡಿವೆ. ಆಹಾರಸ್ವೀಕಾರಕ್ಕೊಂದು ವಸ್ತ್ರಧಾರಣೆಯ ಕ್ರಮ. ನೆಲದಮೇಲೆ  ವಿಶಿಷ್ಟಭಂಗಿಯಲ್ಲಿಯೇ ಕೂರಬೇಕು. ನೆಲದಮೇಲೂ ಕೂರಲೊಂದು ಆಸನ(ಚಾಪೆ)ವಿರಲೇಬೇಕಂತೆ. ಆಹಾರವನ್ನು ಚಮಚ-ಫೋರ್ಕ್ ಗಳನ್ನು ಬಳಸದೆ ಕೈಯಿಂದಲೇ ತೆಗೆದು ತಿನ್ನಬೇಕಂತೆ. ಇಷ್ಟರಮೇಲೆ ತಟ್ಟೆಗೆ ಬಡಿಸಿದ್ದನ್ನು ಕೂಡಲೇ ತಿನ್ನದೆ ಅದಕ್ಕೊಂದು ಮಂತ್ರ, ನೀರು ಸುತ್ತುಕಟ್ಟುವಿಕೆ ಇತ್ಯಾದಿ ಇತ್ಯಾದಿ! ಈ ವಿಚಿತ್ರ ವರ್ತನೆಯೇಕೆ? ಇದಾವುದೂ ಇಲ್ಲದೆ ಊಟಮಾಡುವವರಲ್ಲಿ ಆಹಾರವು ಅರಗಿ ತೃಪ್ತಿ-ಆರೋಗ್ಯಗಳನ್ನು ನೀಡುತ್ತಿಲ್ಲವೇ? ಅನವಶ್ಯಕ ಕಟ್ಟುಪಾಡುಗಳಿಲ್ಲದಿದ್ದರೆ ಜೀವನ ಅದೆಷ್ಟು ಸುಗಮ? ಎನ್ನಿಸುವುದು  ಸಹಜ.

ಗುರಿಗೆ ತಕ್ಕ ಸಿದ್ಧತೆ-ವೇಷ :

    ಲಾಂಗ್ಜಂಪ್(Longjump)ಸ್ಪರ್ಧೆಯಲ್ಲಿ ನೆಗೆತಕ್ಕೆ ಗುರುತಿಸಿರುವ ಸ್ಥಳದಿಂದ ಸ್ವಲ್ಪ ಹಿಂದಕ್ಕೆ ಸರಿದು ಓಡಿಬರುವುದುಂಟು. ಮುಂದೆ ಜಂಪ್ ಮಾಡಲು ಹಿಂದಕ್ಕೆ ಹೋಗುವುದೇಕೆ? ಪೋಲ್ವಾಲ್ಟ್(polevault)ಸ್ಪರ್ಧೆಯಲ್ಲಿ  ಎತ್ತರಕ್ಕೆ ನೆಗೆಯಲು ಓಡಿಬರುವುದೇಕೇ? ಕೈಯಲ್ಲೊಂದು ಕೋಲೇಕೆ? ವಿಚಿತ್ರವೆನ್ನಿಸಬಹುದು. ಆದರೆ ಇವೆಲ್ಲವೂ ಧ್ಯೇಯಸಾಧನೆಗೆ  ಪೋಷಕವಾದ ಸಿದ್ಧತೆಗಳಲ್ಲವೇ?

    ಮೇಲೆ ಹೇಳಿದ ಸ್ಪರ್ಧೆಗಳಿಗೆ ದಟ್ಟಿ ಪಂಚೆಯನ್ನುಟ್ಟರೆ ಸಾಧ್ಯವಾದೀತೇ?! ಅಥವಾ ಯುದ್ಧೋನ್ಮುಖನಾದ ಸೈನಿಕನು ಪಂಚೆಯನ್ನುಟ್ಟು ಹೋದರಾದೀತೇ? ಬಾಹ್ಯಾಂತರಿಕ್ಷಕ್ಕೆ ರಾಕೆಟ್ನಲ್ಲಿ ಹಾರಬೇಕಾದವನು ಉಡುಪು ನವನಾಗರಿಕವೇ ಆದರೂ ಅದನ್ನು ಧರಿಸಬಹುದೇ? ಆ ಪ್ರಯಾಣವನ್ನು ಮಾಡಿ ಸುಖವಾಗಿ ಹಿಂದಿರುಗಬೇಕಾದರೆ ಅದಕ್ಕೆಂದೇ ಸಿದ್ಧಪಡಿಸಿದ ವೇಷವೇ(ಸ್ಪೇಸ್ ಸೂಟ್) ಆಗಬೇಕಲ್ಲವೇ?

    ಹೀಗೆ  ಆಹಾರಸೇವನೆಗೂ ಸಿದ್ಧತೆಯು ಅನ್ವಯಿಸುವುದಾದರೂ ಹಿಂದೆ ಸೂಚಿಸಿದಂತೆ ರಸಾಸ್ವಾದನೆ ಮುಂತಾದುವೇ ಆಹಾರಸೇವನೆಯ ಗುರಿಯಾದರೆ ವಿಶೇಷ ಆಸನ-ವಸ್ತ್ರವಿನ್ಯಾಸಗಳ ಅಗತ್ಯವಿಲ್ಲ.

ಮಹರ್ಷಿಸಂಸ್ಕೃತಿಯಲ್ಲಿ ಭೋಜನದ ಉದ್ದೇಶ :

ಸಾಮಾನ್ಯದೃಷ್ಟಿಯಲ್ಲಿ ಆಹಾರ ಪದಾರ್ಥಗಳ ಸೃಷ್ಟಿಯಲ್ಲಿ ಭೂಮಿ, ನೀರು ಹಾಗೂ ಸೂರ್ಯನ ಬೆಳಕು ಪ್ರಧಾನಪಾತ್ರವನ್ನು ವಹಿಸುತ್ತವೆ. ಆದರೆ ಮಹರ್ಷಿಗಳು ದೈವಿಕ-ಆಧ್ಯಾತ್ಮಿಕ   ದೃಷ್ಟಿಗಳಿಂದಲೂ ನೋಡಿ ಇವುಗಳ ಹಿಂದೆ ಆಡುತ್ತಿರುವ ದೇವತಾಶಕ್ತಿಗಳನ್ನೂ, ಅವುಗಳಿಗೂ ಪ್ರಚೋದನೆಯನ್ನೀಯುವ ಪರಮಾತ್ಮಶಕ್ತಿಯನ್ನೂ  ಗುರುತಿಸಿದರು. ಆದ್ದರಿಂದಲೇ ಆಹಾರವು ದೇವತೆಗಳಿಂದ-ಪರಮಾತ್ಮನಿಂದ ನಮಗೆ ದಯಪಾಲಿಸಲ್ಪಟ್ಟಿವೆ ಎಂಬ ನಿಲುವನ್ನು ತಾಳಿದರು.

ಯಾವುದೇ ಪದಾರ್ಥವನ್ನು/ಸಹಾಯವನ್ನು ಮತ್ತೊಬ್ಬರಿಂದ ಪಡೆದಾಗ ಕೊಟ್ಟವರಿಗೆ ಕೃತಜ್ಞತೆಯನ್ನು ಸೂಚಿಸುವುದು ಸಭ್ಯಸಮಾಜದ ನಡೆ. ಕೊಟ್ಟವರು ನಮ್ಮೆದುರಿಗಿಲ್ಲದಿದ್ದಾಗ ಅವರನ್ನು ಸ್ಮರಿಸಿಕೊಂಡರೆ ಸಭ್ಯತೆಯ ಕುರುಹೂ ಆಗಿ ಕೃತಜ್ಞತೆಯ ಮಾಧ್ಯಮವಾಗುವುದು. ಅತ್ಯಂತ ಪ್ರೀತಿಪಾತ್ರರಾದ ತಂದೆ-ತಾಯಿ, ಬಂಧು-ಮಿತ್ರರಾಗಿದ್ದರಂತೂ ಅವರ ಸ್ಮರಣೆಯಿಂದ ಅವರ ರೂಪ-ಮಾತುಗಳು, ಪದಾರ್ಥವನ್ನಿತ್ತ ಸನ್ನಿವೇಶ ಇತ್ಯಾದಿಗಳ ಚಿತ್ರಣವು ನಮ್ಮ ಮನಃಪಟಲದಲ್ಲಿ ಒಮ್ಮೆ ಸುಳಿಯುತ್ತವೆ. ಆಗ ಮನಸ್ಸು ಅವರನ್ನು ಮುಟ್ಟಿತೆನ್ನಬಹುದು.

ಅಂತೆಯೇ ಮಹರ್ಷಿಗಳ ಭೋಜನಸ್ವೀಕಾರವು ಅರೋಗ್ಯಪ್ರಾಪ್ತಿಯೊಂದಿಗೆ  ಆಹಾರಸೃಷ್ಟಿಕಾರಣರಾದ ದೇವತಾ-ಪರಮಾತ್ಮಶಕ್ತಿಗಳಿಗೆ  ಕೃತಜ್ಞತೆಯನ್ನರ್ಪಿಸುವ  ಕ್ರಿಯೆಯೂ ಆಗಿದೆ. ಮಹರ್ಷಿಗಳಿಗೆ ದೇಹಪುಷ್ಟಿ-ಮನಸ್ತುಷ್ಟಿಗಳೊಂದಿಗೆ  ದೇವತಾಪ್ರಸನ್ನತೆ, ಕ್ರಮೇಣ ಭಗವಂತನನ್ನು ತಲುಪಲನುವುಮಾಡುವ ಮನಸ್ಸಿನ ಸ್ಥಿತಿಗಳನ್ನು ಗಳಿಸುವುದೂ ಸಹ ಆಹಾರಸ್ವೀಕಾರದ  ಉದ್ದೇಶವಾಗಿದ್ದಿತು.

ಆದರೆ ಹೊರಗಣ್ಣಿಗೆ ಕಾಣದ ದೇವತಾದಿಗಳನ್ನು ಸ್ಮರಿಸುವುದಾದರೂ ಹೇಗೆ? ಮನಸ್ಸು ಅವರನ್ನು ಮುಟ್ಟಬೇಕಿದ್ದರೆ ನಾವಿರುವ ಭೌತಿಕಸ್ತರದಿಂದ ಎತ್ತರದಲ್ಲಿರುವ ದೈವಿಕ-ಆಧ್ಯಾತ್ಮಿಕಸ್ತರಗಳಿಗೆ ಹತ್ತಬೇಕಾಗುವುದು, ಹಾರಬೇಕಾಗುವುದು.

ಮಹರ್ಷಿಗಳು ಇದಕ್ಕೆ ಹೂಡಿದ ಉಪಾಯಗಳೇ ನಮಗಿಂದು ವಿಚಿತ್ರವೆನಿಸುವ ಪದ್ಧತಿಗಳು. ಭೋಜನಸ್ವೀಕಾರದ ಭಂಗಿ, ವಸ್ತ್ರವಿನ್ಯಾಸಗಳು ನಮ್ಮಲ್ಲಿ ಮೂಡಿಸುವ ಕಟ್ಟು(ಬಂಧ)ಗಳು, ಹೇಳುವ ಮಂತ್ರ, ಕೈಗೊಳ್ಳುವ ತಂತ್ರ ಇವೆಲ್ಲವೂ ಅತ್ಯಂತ ವೈಜ್ಞಾನಿಕವಾಗಿವೆ. ಅವು ಹೇಗೆ ಒಳಕೇಂದ್ರಗಳಿಗೆ ಹತ್ತಿಸುವ ಮಾಧ್ಯಮಗಳಾಗಿವೆಯೆಂಬುದನ್ನು ಶ್ರೀರಂಗಮಹಾಗುರುಗಳು ವಿಶದವಾಗಿ ತಿಳಿಯಪಡಿಸಿರುವುದುಂಟು. ಪ್ರಕೃತ ಅವುಗಳ ವಿವರಕ್ಕೆ ಹೋಗದೆ  ಗುರಿಯನ್ನು ಮಾತ್ರ ಸೂಚಿಸಲಾಗಿದೆ.

ಇಂತಹ ಉದಾತ್ತವಾದ ಗುರಿಯನ್ನು ಸಾಧಿಸಲು ಅತಿಹೆಚ್ಚು ನಿಯಮಗಳಿರುವುದು ಸಹಜವೇ ಆಗಿದೆ. ಆಹಾರಸ್ವೀಕಾರವು ಭಗವಂತನ ಪ್ರಸನ್ನತೆಯನ್ನು ಗಳಿಸುವ  ರೀತಿಯಲ್ಲಿರಬೇಕೆಂಬುದನ್ನೇ 'ಭೋಜನದಿಂದ ಉದರತೃಪ್ತಿ ಮಾತ್ರವಲ್ಲದೆ ದಾಮೋದರನ ತೃಪ್ತಿಯೂ  ಆಗಬೇಕು' ಎಂಬ ಶ್ರೀರಂಗಮಹಾಗುರುಗಳ ಸೂತ್ರಪ್ರಾಯವಾದ  ಮಾತು ನೆನಪಿಸುತ್ತದೆ. ಆದ್ದರಿಂದಲೇ 'ಊಟಮಾಡುವುದು' ಎನ್ನುವುದರ ಬದಲು ಯಜ್ಞ(ದೇವತಾಪೂಜೆ)-ಪ್ರಾಣಾಗ್ನಿಹೋತ್ರ, ಭಗವತ್ಪ್ರಸಾದ, ಶಿವಪೂಜೆ ಮುಂತಾದ ಪದಗಳು ಋಷಿಸಂಸ್ಕೃತಿಯಲ್ಲಿ ಬಳಕೆಯಲ್ಲಿವೆ.

ಇನ್ನು, ಈ ನಿಯಮಗಳನ್ನು ಪಾಲಿಸುವವರೆಲ್ಲರೂ ದೇವತಾಕೇಂದ್ರಗಳನ್ನು  ಮುಟ್ಟುತ್ತಿದ್ದಾರೆಯೇ?  ಎಂದರೆ  ಸ್ಪೇಸ್ಸೂಟ್(Spacesuit) ಧರಿಸಿದ ಮಾತ್ರಕ್ಕೇ  ಬಾಹ್ಯಾಕಾಶಕ್ಕೆ ಹಾರಲಾಗುವುದೇ? ಅದಕ್ಕೇ ಆದ ಇತರ ಸಿದ್ಧತೆಗಳು-ಪ್ರಯತ್ನಗಳೂ ನಡೆದು ರಾಕೆಟ್ನಲ್ಲಿ ಕುಳಿತು ಸಾಗಿದರೆ ಮಾತ್ರ ಬಾಹ್ಯಾಕಾಶಕ್ಕೆ ಹಾರುವುದು ಅಲ್ಲವೇ? ಅಂತೆಯೇ ಹೊರವೇಷ-(ಯಾಂತ್ರಿಕವಾದ), ಕೃತ್ಯಗಳಿದ್ದ ಮಾತ್ರಕ್ಕೆ ಒಳಕೇಂದ್ರಗಳನ್ನು ಮುಟ್ಟುವುದು ಸಾಧ್ಯವಿಲ್ಲ. ಒಳಮಾರ್ಗದಲ್ಲಿ ಸಾಗಬೇಕೆಂಬ ಹಂಬಲ, ಆ ನಿಟ್ಟಿನಲ್ಲಿ ತೀವ್ರಗತಿಯ ಸಾಧನೆಗಳು ನಡೆದಾಗ ಹೊರಕೃತ್ಯಗಳ ಆಚರಣೆಯು ಮನಸ್ಸು ಅತ್ತಸಾಗಲು ಅನುವು ಮಾಡುತ್ತದೆ.  ಆಚರಣೆಯ ಜೊತೆಗೆ ಸಾಧನೆಯನ್ನೂ ಕೈಗೊಂಡು ದೇಹಪುಷ್ಟಿ-ಮನಸ್ತುಷ್ಟಿ-ತತ್ತ್ವದೃಷ್ಟಿಯೆಂಬ ಫಲಪಡೆಯುವುದೇ ಮಹರ್ಷಿಗಳ ಆಹಾರಸ್ವೀಕಾರದ ಉದ್ದೇಶವಾಗಿತ್ತು.

ಮಹರ್ಷಿಗಳ ಈ ಉದಾತ್ತವಾದ ಧ್ಯೇಯವನ್ನು ನಮ್ಮದಾಗಿಸಿಕೊಳ್ಳುವ ಮನಸ್ಸಿನಿಂದ ಅವರ ತಂದುಕೊಟ್ಟ ನಿಯಮಗಳನ್ನು ಆಚರಿಸೋಣ.


ಸೂಚನೆ: 4/7/2021 ರಂದು ಈ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.