Thursday, July 15, 2021

ಮೂರು ಶ್ರೇಷ್ಠ ಪ್ರಾರ್ಥನೆಗಳು (Muru Shreshta Prarthanegalu)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)



"ಅಸತೋಮಾ ಸದ್ಗಮಯ| ತಮಸೋಮಾ ಜ್ಯೋತಿರ್ಗಮಯ| ಮೃತ್ಯೋರ್ಮಾ ಅಮೃತಂ ಗಮಯ" ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದ ಎಡೆಗೆ ನಮ್ಮನ್ನು ಕರೆದೊಯ್ಯು ಎಂದು ಭಗವಂತನಲ್ಲಿ ನಮ್ಮ ಪ್ರಾಚೀನ ಮಹರ್ಷಿಗಳ ಪ್ರಾರ್ಥನೆ. ಭಾರತೀಯ ಜೀವನದಲ್ಲಿ ಈ ಪ್ರಾರ್ಥನೆ ಜನಜನಿತ. ನಮ್ಮ ಪೂಜೆ ಪುರಸ್ಕಾರಗಳಲ್ಲಿ, ವಿಶೇಷ ಸಮಾರಂಭಗಳಲ್ಲಿ ಈ ಬಗೆಯ ಪ್ರಾರ್ಥನೆಮಾಡುವುದನ್ನು ಇಂದಿಗೂ ಅಲ್ಲಲ್ಲಿ ಕಾಣಬಹುದಾಗಿದೆ. ನಮ್ಮ ಶಾಲಾ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಈ ಪ್ರಾರ್ಥನೆಯನ್ನು ಮೊಳಗುವುದನ್ನು ಕಾಣುತ್ತೇವೆ. 

ನಿಜ ಹೇಳಿದರೆ ಸತ್ಯ ನುಡಿದಂತೆ . ಸುಳ್ಳು ಹೇಳಬಾರದು ಎಂಬ ನೀತಿ ಎಲ್ಲರಿಗೂ ಗೊತ್ತಿರುವುದೇ. ಹಾಗೆಯೇ ಕತ್ತಲೆ ನಮಗೆ ಗೊತ್ತು. ಬೆಳಕೂ ಸಹ ಗೊತ್ತು. ಕತ್ತಲೆಯಿಂದ ಬೆಳಕಿನೆಡೆಗೆ ನಾವೇ ಸಾಗಬಹುದು. ಕಡೆಯದು ಮೃತ್ಯು.ಎಲ್ಲರಿಗೂ ಬರುವಂತಹದು. ಯಾರೂ ಚಿರಂಜೀವಿಗಳಲ್ಲ. ಎಂದಮೇಲೆ ಈ ಪ್ರಾರ್ಥನೆಯ ಔಚಿತ್ಯವಾದರೂ ಏನು? ಪ್ರಾಯಃ ಜೀವಿತಾವಧಿಯಲ್ಲೇ ಲೋಕದಲ್ಲಿ ಎಂದೆಂದಿಗೂ ಅಳಿಯದ ಕೆಲಸಗಳನ್ನು ಮಾಡಬೇಕು ಎಂದಿರಬೇಕು. ಇವೆಲ್ಲವೂ ನಮಗೆ ಗೊತ್ತಿದೆ ಎಂದಮೇಲೆ ಭಗವಂತನಲ್ಲಿ ಪ್ರಾರ್ಥನೆ ಮಾಡುವುದೇನಿದೆ? ನಾವೇ ಮಾಡಬಹುದಾದ ಕೆಲಸಕ್ಕೆ ಅವನ ಸಹಾಯ ಏಕೆ? ಬುದ್ಧಿಗೆ ಶ್ರಮ ಕೊಡದೇ ಇಷ್ಟನ್ನು ಆಲೋಚನೆ ಮಾಡಬಹುದು. ಆದರೆ ಪ್ರಾರ್ಥನೆ ಮಾಡಿದವರು ಈ ದೇಶದ ಮಹರ್ಷಿಗಳು. ಅಂತರಂಗದ ಸತ್ಯವನ್ನು, ಪರಮಾತ್ಮನನ್ನು ತಮ್ಮಲ್ಲಿ ಕಂಡು ಪ್ರಾರ್ಥನೆ ಮಾಡಿದ್ದಾರೆ. ವ್ಯರ್ಥವಾದ ಮಾತುಗಳು ಅವರಿಂದ ಬಾರವು. ಏನೀ ಪ್ರಾರ್ಥನೆಯ ಔಚಿತ್ಯ ಎಂದು ವಿಚಾರಮಾಡಬೇಕಿದೆ.

ಅಸತೋಮಾ ಸದ್ಗಮಯ

ಶಂಕರಭಗವತ್ಪಾದರು ಸತ್ಯವನ್ನು ಮೂರು ಬಗೆಯಲ್ಲಿ ವಿವರಿಸಿದ್ದಾರೆ- ವ್ಯಾವಹಾರಿಕ ಸತ್ಯ,ಪ್ರಾತಿಭಾಸಿಕ ಸತ್ಯ,ಮತ್ತು ಪಾರಮಾರ್ಥಿಕ ಸತ್ಯ ಎಂಬುದಾಗಿ. ನಾವು ಮೇಲೆ ಹೇಳಿದಂತೆ ನಿಜ ಹೇಳುವುದು ಇತ್ಯಾದಿ ವ್ಯಾವಹಾರಿಕ ಸತ್ಯವಾಗುತ್ತದೆ. ಪ್ರಾತಿಭಾಸಿಕ ಸತ್ಯವೆಂದರೆ ಕನಸಿನಲ್ಲಿ ಕಂಡ ಅನುಭವಗಳು, ನಾವು ನಮ್ಮ ಭ್ರಮೆಯಿಂದ ಸತ್ಯವೆಂದು ತಿಳಿದುಕೊಂಡ ಸತ್ಯಗಳು-ಉದಾಹರಣೆಗೆ ಹಗ್ಗವನ್ನು ಹಾವೆಂದು ಭಾವಿಸಿದಂತೆ. ಆದರೆ ಎಂದೆಂದಿಗೂ ಬದಲಾಗದ, ತಾನೇ ತಾನಾಗಿ ಬೆಳಗುತ್ತಿರುವ ಮತ್ತು ಎಲ್ಲವನ್ನೂ ತನ್ನ ಇರುವಿಕೆಯಿಂದ ಬೆಳಗುವಂತೆ ಮಾಡುವ, ನಿತ್ಯ ಶಾಶ್ವತವಾದ, ಜಗತ್ತಿನ ಇರುವಿಕೆಗೇ ಕಾರಣವಾದ ಪರಮಾತ್ಮ ಸತ್ಯವೇ ಪಾರಮಾರ್ಥಿಕ ಸತ್ಯ. ನಚಿಕೇತನಿಗೆ ಯಮನು ಉಪದೇಶಿಸುವಂತೆ " ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ, ನೇಮಾ ವಿದ್ಯುತೋ ಭಾಂತಿ ಕುತೋಯಮಗ್ನಿ: ತಮೇವ ಭಾನ್ತಮ್ ಅನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ- ಎಂಬಂತೆ ಸೂರ್ಯಚಂದ್ರಾಗ್ನಿಗಳು ವಿದ್ಯುತ್ತು ಎಲ್ಲವೂ ಯಾವ ಬೆಳಕನ್ನು ತಮ್ಮಬೆಳಗುವಿಕೆಗಾಗಿ ಅವಲಂಬಿಸಿವೆಯೋ ಅಂತಹ ಪರಮಾತ್ಮಜ್ಯೋತಿಯನ್ನೇ ಇಲ್ಲಿ ಸತ್ಯ ಎಂದಿರುವುದು. ಅದು ಎಂದೆಂದಿಗೂ ಇರುವಂತಹದ್ದು. ಇವತ್ತಿದ್ದು ನಾಳೆ ಇಲ್ಲವಾಗುವುದಲ್ಲ. ಅಂತಹ ಸತ್ಯವು ನಮ್ಮ ಅರಿವಿಗೆ ಬರುವಂತೆ ಸತ್ಯಸ್ವರೂಪನಾದ ಅವನೇ ಮಾಡಬೇಕು. ನಮ್ಮ ಕೈಯಲ್ಲಿ ಯಾವುದನ್ನು ಮಾಡಲು ಸಾಧ್ಯವಾಗದೋ ಅಥವಾ ಅತ್ಯಂತ ಕಷ್ಟಸಾಧ್ಯವೋ ಅದನ್ನು ತಾನೇ ಭಗವಂತನನ್ನು ಕೇಳಬೇಕು? ಆ ಪರಮ ಸತ್ಯದ ನೇರದಲ್ಲಿ ಅದಲ್ಲದೇ ಉಳಿದುದೆಲ್ಲವೂ ಅಸತ್ಯವೇ. ಎಲ್ಲವೂ ಆ ಪರಮಸತ್ಯವನ್ನು ಮರೆ ಮಾಡುವಂತಹದ್ದೇ. ಅಂತಹ ಅಸತ್ಯಗಳಿಂದ ನಮ್ಮನ್ನು ಪರಮ ಸತ್ಯದೆಡೆಗೆ ಕೊಂಡೊಯ್ಯು ಎಂಬ ಪ್ರಾರ್ಥನೆ ಜೀವಲೋಕವೆಲ್ಲವೂ ಅನವರತವೂ ಮಾಡಬೇಕಾದ ಪ್ರಾರ್ಥನೆಯೇ ಆಗುತ್ತದೆ.

ತಮಸೋಮಾ ಜ್ಯೋತಿರ್ಗಮಯ

ಕತ್ತಲೆಯಿಂದ ಬೆಳಕಿನೆಡೆಗೆ. ಭಾರತೀಯರಿಗೆ ಕತ್ತಲೆಯೇ ಬೇಕಿಲ್ಲವೇ? ಹೊರಗಿನ ಕತ್ತಲೆ ನಾವು ವಿಶ್ರಾಂತಿ ತೆಗೆದುಕೊಳ್ಳಲು ಅವಶ್ಯವಾಗಿ ಬೇಕು. ಅಲ್ಲದೇ ತಾನಾಗಿ ಕತ್ತಲಾಗುತ್ತದೆ, ಸೂರ್ಯ ಉದಿಸಿದ ನಂತರ ಬೆಳಕೂ ಆಗುತ್ತದೆ. ಮತ್ತೆ ಈ ಪ್ರಾರ್ಥನೆಯ ಔಚಿತ್ಯವಾದರೂ ಏನು? ಎಂದರೆ ಆ ಪಾರಮಾರ್ಥಿಕ ಸತ್ಯದ ವಿಷಯದಲ್ಲಿ ನಮ್ಮ ಬುದ್ಧಿಗೆ ಕತ್ತಲು ಕವಿದಿದೆ.ನಾವು ನಮ್ಮ ವ್ಯಾವಹಾರಿಕ, ಇಂದ್ರಿಯಜೀವನದಲ್ಲೇ ಜನ್ಮ ಜನ್ಮಾಂತರಗಳಿಂದ ಕಾಲ ಕಳೆಯುತ್ತಾ ನಮ್ಮೊಳಗೇ ಬೆಳಗುತ್ತಿರುವ ಬೆಳಕನ್ನು ಕಾಣಲಾರದವರಾಗಿದ್ದೇವೆ. ಜ್ಞಾನಿಗಳು, ಸಂತರು ಹೇಳಿದರೂ ಅಂತಹ ಬೆಳಕೊಂದು ಉಂಟು ಎಂದು ನಮಗೆ ನಂಬಿಕೆ ಬಾರದಷ್ಟು ವಿಸ್ಮೃತರಾಗಿದ್ದೇವೆ. ಆ ಅಂತರ್ಜ್ಯೋತಿಯನ್ನು ಸಂಪೂರ್ಣವಾಗಿ ಮರೆತಿರುವುದೇ ತಮಸ್ಸು. ಅದನ್ನು ಕಳಚಿ ನಮ್ಮನ್ನು ಆ ಒಳ ಬೆಳಕಿನ ಕಡೆಗೆ ನಡೆಸು ಎಂದು ಬೆಳಕನ್ನೇ ಪ್ರಾರ್ಥಿಸಿದ್ದಾರೆ. ಆ ಬೆಳಕು ತಾನೇ ತಾನಾಗಿ ಬೆಳಗುತ್ತಿದೆ. ಅದರ ಭಿಕ್ಷೆಯಿಂದಲೇ ನಮ್ಮ ಲೌಕಿಕ ಜೀವನಗಳೂ ನಡೆಯುತ್ತಿವೆ. ಆದರೆ ನಮ್ಮ ಮನಸ್ಸುಗಳಲ್ಲಿ ಅದನ್ನು ಅರಿಯದ ಕತ್ತಲು. ಈ ಕತ್ತಲೆಯಿಂದಲೇ ನಮ್ಮನ್ನು ಆ ಬೆಳಕಿನೆಡೆಗೆ ಕರೆದೊಯ್ಯಬೇಕಿರುವುದು. ಅದಕ್ಕಾಗಿಯೇ ಋಷಿಗಳು ಭಗವಂತನಲ್ಲಿ ಪ್ರಾರ್ಥಿಸುತ್ತಿರುವುದು. ಅದು ಹೊರಗಿನ ಕತ್ತಲೆಯಿಂದ ಹೊರಗಿನ ಬೆಳಕಿನೆಡೆ ಅಲ್ಲ. ನಮ್ಮಬುದ್ಧಿಯಲ್ಲಿನ ಕತ್ತಲೆಯಿಂದ ಒಳಬೆಳಕಿನೆಡೆಗೆ. ನಮ್ಮ ಪ್ರಾರ್ಥನೆ ಎಷ್ಟು ಬಲವತ್ತರವೋ ಅಷ್ಟು ಬೇಗ ಅವನು ನಮ್ಮಕತ್ತಲೆಯನ್ನು ಹೋಗಲಾಡಿಸುತ್ತಾನೆ. ಈ ಭಾವವಿಲ್ಲದೇ ಶುಷ್ಕವಾಗಿ ಮಾಡುವ ಪ್ರಾರ್ಥನೆಯಿಂದ ಪ್ರಯೋಜನವಿರದು.

ಮೃತ್ಯೋರ್ಮಾ ಅಮೃತಂ ಗಮಯ
ಶರೀರವನ್ನು ತಳೆದು ಬಂದಮೇಲೆ ಇದಕ್ಕೆ ಮೃತ್ಯು ನಿಶ್ಚಿತ. ಜಾತಸ್ಯ ಮರಣಂ ಧ್ರುವಂ. ಎಂದಮೇಲೆ ಅಮರತ್ವಎಲ್ಲಿಂದ ಬರಬೇಕು? ನಾವು ಸಾಯದಂತೆ ವರವನ್ನು ಬೇಡುತ್ತಿದ್ದೆವೆಯೇ? ಅಂತಹ ಬೇಡಿಕೆ ಎಷ್ಟು ಅರ್ಥಪೂರ್ಣ? ಅದನ್ನುಭಗವಂತನು ಹೇಗೆ ಈಡೇರಿಸಿಯಾನು? ಎಲ್ಲವೂ ಪ್ರಶ್ನೆಯಾಗುತ್ತದೆ. ಇಲ್ಲಿ ಅಮರವಾದುದು ನಮ್ಮೊಳಗೇ ಬೆಳಗುತ್ತಿರುವ ಚೈತನ್ಯ. ಅದೇ ನಮ್ಮನ್ನು ಜೀವಂತವಾಗಿಟ್ಟಿರುವುದು. ಅದು ನಮ್ಮ ಆನಂದದ, ನೆಮ್ಮದಿಯ ನಿಜವಾದ ತಾಣ. ಅದರೊಡನೆ ನಮ್ಮ ಮನಸ್ಸು ನಿರಂತರವಾಗಿ ಸಂಪರ್ಕವನ್ನಿಟ್ಟುಕೊಂಡರೆ ಅದೇ ಅಮರ ಜೀವನ. ನದಿಯೊಂದು ತಾನು ಹರಿಯುತ್ತಿರುವ ಎಲ್ಲೆಕಟ್ಟುಗಳೊಂದಿಗೆ ಸಮುದ್ರವನ್ನು ಸೇರಿದಾಗಲೇ ಆ ನದಿಯ ಜೀವನ ಅಮರ. ಅಲ್ಲಿ ಅದನ್ನು ಗಂಗೆ,ಯಮುನೆ, ಗೋದಾವರಿ,ಕಾವೇರಿ ಎಂದು ಗುರುತಿಸಲಾಗದು. ಅದು ಮಹಾ ಸಮುದ್ರವೇ ಆಗಿಬಿಡುತ್ತೆ. ಹಾಗೆ ಈ ಜೀವನದಿಯೂ ತನ್ನ ಮೂಲವಾದ ಆ ಮಹಾ ಚೈತನ್ಯದ ಆಶಯದಂತೆ ಅದರ ನೆನಪನ್ನು ಒಂದಿನಿತೂ ಬಿಡದೇ ಬಾಳುತ್ತಾ ಕಡೆಯಲ್ಲಿ ನಾಮ-ರೂಪಗಳಿಂದ ಆರೋಪಿತವಾದ ಶರೀರದ ಎಲ್ಲೆಕಟ್ಟುಗಳನ್ನು ಮೀರಿ ಪರಮಾತ್ಮ ಸಮುದ್ರದಲ್ಲಿ ಸೇರುವಂತಾಗುವುದು ಇದರ ಸಹಜವಾದ ನಡೆ ಎಂಬುದನ್ನು ಹಾಗೆ ಅಮರಜೀವನವನ್ನು ಮಾಡಿದ ಮಹರ್ಷಿಗಳ ಆನುಭವಿಕ ಸತ್ಯ. ಎಂದೇ ನಮ್ಮ ಜೀವಿತಕಾಲದಲ್ಲಿ ನಮ್ಮ ಜೀವನದ ಸ್ರೋತಸ್ಸಾದ, ಎಂದೆಂದಿಗೂ ಇರುವ ಆ ಅಮರವಾದ ಬೆಳಕಿನ ಆಶಯದಂತೆ ಬದುಕಿ ಕಡೆಯಲ್ಲಿ ಆ ಅಮೃತನಾದ ದೇವನಲ್ಲಿ ಒಂದಾಗುವಂತೆ ಮಾಡೆಂದು ಭಗವಂತನಲ್ಲಿ ಪ್ರಾರ್ಥನೆ-ಮೃತ್ಯೋರ್ಮಾ ಅಮೃತಂ ಗಮಯ. ಈಗ ನಾವು ಆ ಸ್ರೋತಸ್ಸನ್ನು ಮರೆತು ಕೇವಲ ಮೃತ್ಯುಮುಖರಾಗಿ ಜೀವನ ನಡೆಸುತ್ತಿದ್ದೇವೆ. ಹಾಗಿಲ್ಲದೇ ಮೃತವಾಗುವ ಈ ಶರೀರದಿಂದ ಅಮೃತವಾದ ವಸ್ತುವನ್ನೇ ಕಾಣುತ್ತಾ ಕಡೆಯಲ್ಲಿ ಆ ಅಮೃತವೇ ಆಗಿಬಿಡುವಂತೆ ನಮ್ಮನ್ನು ಅನುಗ್ರಹಿಸು ಎಂಬ ಪ್ರಾರ್ಥನೆ. ನದಿಗಳು ಸಮುದ್ರವಾದಂತೆ. ಶ್ರೀರಂಗಮಹಾಗುರುಗಳು ಸತ್ಯ ಎನ್ನುವ ಪದಕ್ಕೆ "ಸತಿಯಂ" ಎಂಬ ಉಪನಿಷತ್ತಿನ ವ್ಯಾಖ್ಯೆಯನ್ನು ನೆನಪಿಸಿದ್ದರು. ಅದರಂತೆ ಅಮರವಾದದ್ದಕ್ಕೂ ಮರವಾದದ್ದಕ್ಕೂ ಸೇತುವೆಯನ್ನು ಹಾಕುವುದು ಸತ್ಯವೆಂದಾಗುತ್ತದೆ. ನಮ್ಮ ಬಾಳು ಮರವಾದ ಈ ದೇಹದಿಂದ ಅಮರವಾದ ಭಗವಂತನನ್ನು ಕಂಡು ಅವನಲ್ಲಿ ಒಂದಾಗುವ ಅಪೇಕ್ಷೆಯಿಂದ ಬಂದ ಪ್ರಾರ್ಥನೆ ಇದು.

ಇಂದು ಲೋಕವೆಲ್ಲವೂ ಕರೋನಾ ರೋಗದ ತೆಕ್ಕೆಯಲ್ಲಿ ನಲುಗಿ ಹೋಗಿದೆ. ಮೃತ್ಯುಭಯ, ಜೀವನದ ಅನಿಶ್ಚಿತತೆ ಇತ್ಯಾದಿ ಆತಂಕಗಳಿಂದ ನಾವೆಲ್ಲಾ ಭಯಗ್ರಸ್ತರಾಗಿದ್ದೇವೆ. ಈ ಶ್ರೇಷ್ಠ ಪ್ರಾರ್ಥನೆಗಳು ಇಂದು ಅತ್ಯಂತ ಪ್ರಸ್ತುತವಾಗಿವೆ. ನಮ್ಮ ಆರೋಗ್ಯವನ್ನು ರಕ್ಷಿಸಿಕೊಂಡು ಬದುಕುವ ಸರ್ವ ಪುರುಷಪ್ರಯತ್ನವನ್ನೂ ಮೆರೆಯೋಣ. ಉಳಿದುದನ್ನುಆ ಕರುಣಾಮಯನಿಗೆ ಬಿಡೋಣ. ನಮ್ಮ ಮನಸ್ಸುಗಳು ಎಂದೆಂದಿಗೂ ಬೆಳಗುವ ಸತ್ಯದಕಡೆಗೆ , ಬುದ್ಧಿಯು ಸದಾ ಬೆಳಗುವ ಬೆಳಕಿನೆಡೆಗೆ ಒಯ್ಯಲ್ಪಟ್ಟರೆ, ನಾವು ಈ ಮರವಾದ ಬದುಕನ್ನು ಅಮರವಾದ ಜೀವನದ ಚೈತನ್ಯದ ಜೊತೆಗೆ ಜೋಡಿಸಿಕೊಂಡೆವಾದರೆ ಎಲ್ಲಾ ಬಗೆಯ ಭಯ,ಆತಂಕಗಳಿಂದ ಮುಕ್ತರಾಗಿ ಜೀವನ ಮಾಡಬಹುದಾಗಿದೆ. 

ಕಡೆಯಲ್ಲಿ ಶ್ರೀರಂಗಮಹಾಗುರುಗಳ ಈ ಮಾತು ಇಲ್ಲಿ ಸ್ಮರಣೀಯ-"ಜ್ಞಾನವನ್ನು ಬೆಳೆಸಲು,ಸತ್ಯವನ್ನು ಮೆರೆಸಲು ಎಷ್ಟು ಸಮಾಜಗಳು ದುಡಿದಿವೆ! ಎಷ್ಟು ತಪಸ್ಯೆಗಳು ನಡೆದಿವೆ! ವೇದ-ಇತಿಹಾಸ-ಪುರಾಣಗಳನ್ನು ನೋಡಿದರೆ ಒಂದೊಂದು ವಿಷಯ ತರಲು ಲಕ್ಷಾಂತರ ವರ್ಷಗಳ ತಪಸ್ಯೆ ನಡೆದಿದೆ ಎಂಬುದು ತಿಳಿಯುತ್ತದೆ"

ಹೀಗೆ ಕೇವಲ ಪುರುಷಪ್ರಯತ್ನದಿಂದ ಸಾಧ್ಯವಾಗದ, ಅವನ ಅನುಗ್ರಹದಿಂದಲೇ ಆಗಬೇಕಾದದ್ದನ್ನೇ ಅವನಲ್ಲಿ ಪ್ರಾರ್ಥಿಸಿದ್ದಾರೆ. ಮಹರ್ಷಿಗಳು ತಾವು ಅಸತ್ಯದಿಂದ ಸತ್ಯದೆಡೆಗೆ,ತಮಸ್ಸಿನಿಂದ ಆಜ್ಯೋತಿರ್ಧಾಮದೆಡೆಗೆ, ಮೃತ್ಯುವಿನಿಂದ ಅಮೃತತ್ವದ ಎಡೆಗೆ ಸಾಗಿ ಜೀವನದ ಸಾರ್ಥಕತೆಯನ್ನು ಪಡೆದವರಾಗಿದ್ದರೂ ಜೀವಲೋಕವೆಲ್ಲವೂ ಅಂತಹ ನೆಮ್ಮದಿಯನ್ನು ಹೊಂದುವಂತಾಗಲಿ ಎಂಬ ಕರುಣೆಯಿಂದ ಈ ಪ್ರಾರ್ಥನೆಯನ್ನು ನಮ್ಮೆಲ್ಲರಿಗಾಗಿ ಮೊಳಗಿದ್ದಾರೆ. ಅವರ ಮನಸ್ಸಿನಂತೆ ನಮ್ಮ ಜೀವನದ ಯಶಸ್ಸಿಗಾಗಿ  ಅನವರತವೂ ಈ ಪ್ರಾರ್ಥನೆಯನ್ನು ಮಾಡೋಣ.

ಸೂಚನೆ: 15/07/2021 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.