Monday, July 12, 2021

ಆರ್ಯಸಂಸ್ಕೃತಿ ದರ್ಶನ - 50 ಬಿಡುಗಡೆಯ ದಾರಿ (Arya Samskruti Darshana - 50 Bidugadeya Dari)

ಲೇಖಕರು : ಚಾಮುಗಳು




ಪುರುಷನು ಕಾಮಮಯ. ಯಾವ ವಿಧವಾದ ಕಾಮದಿಂದ ಕೂಡಿರುತ್ತಾನೆಯೋ ಅದಕ್ಕೆ ಅನುಗುಣವಾಗಿ ಅವನು ಯೋಚನೆ ಮಾಡುತ್ತಾನೆ. ಆ ಯೋಚನೆಗನುಗುಣವಾಗಿ ಕರ್ಮವನ್ನು ಮಾಡುತ್ತಾನೆ. ಅದಕ್ಕನುಗುಣವಾಗಿ ಅವನು ಜನ್ಮತಾಳುತ್ತಾನೆ ಎಂಬುದು ಜನ್ಮಾಂತರದ ವಿಷಯದಲ್ಲಿ ಯಾಜ್ಞವಲ್ಕ್ಯನ ದೃಷ್ಟಿ.


ಯಾದೃಶೇನ ತು ಭಾವೇನ ಯದ್ಯತ್ಕರ್ಮನಿಷೇವತೇ ।

ತಾದೃಶೇನ ಶರೀರೇಣ ತತ್ತತ್ಫಲಮುಪಾಶ್ನುತೇ ॥ (ಅ. 12)


(ಯಾವ ಯಾವ ಭಾವದಿಂದ ಯಾವ ಯಾವ ಕರ್ಮವನ್ನು ಮಾಡುತ್ತಾನೆಯೋ ಆ ವಿಧವಾದ ಶರೀರದಿಂದ ಆಯಾ ಫಲವನ್ನು ಹೊಂದುತ್ತಾನೆ) ಎಂದು ಮನುವೂ ಅದನ್ನೇ ಹೇಳುತ್ತಾನೆ. ಆ ರೀತಿ ಪುರುಷನು ಮಾಡುವ ಕರ್ಮಕ್ಕೆ ಕೊನೆಯಿಲ್ಲ. ಕರ್ಮವು ಪರಂಪರೆಯಾಗಿ ಕರ್ಮಗಳನ್ನು ಸೃಷ್ಟಿಸುತ್ತದೆ. ಅವೆಲ್ಲವೂ ವಾಸನಾ ರೂಪವಾಗಿ ಅವನ ಹೃದಯವನ್ನು ಆಶ್ರಯಿಸಿರುತ್ತವೆ. ಅವೇ ಅವನನ್ನು ಸಂಸಾರಚಕ್ರಕ್ಕೆ ಬಂಧಿಸುತ್ತವೆ. ಅವುಗಳಿಂದಲೇ ಅವನು ಅನಂತಸಂಖ್ಯೆಯಲ್ಲಿ ಬಗೆ ಬಗೆಯಾದ ಜನ್ಮಗಳನ್ನು ಹೊಂದುತ್ತಾನೆ. ದೇವ ಮಾಯೆಯಿಂದ ಮೋಹಿತನಾಗಿ ಸುಖ ದುಃಖ ರೂಪವಾದ ಆ ಸ್ಥಿತಿಗಳೇ ತನಗೆ ಸಹಜವಾದುವೆಂದು ಭಾವಿಸಿ ಅಭ್ಯಾಸವಶದಿಂದ ಅವುಗಳಲ್ಲಿ ರಮಿಸುತ್ತಾನೆ. ಅವುಗಳಲ್ಲಿಯೇ ಮುಂದುವರಿಯಲು ಸರ್ವೋಪಾಯಗಳಿಂದಲೂ ಯತ್ನಿಸುತ್ತಾನೆ. 'ಕೋಶಕಾರ ಇವಾತ್ಮಾನಂ ಕರ್ಮಣಾಚ್ಛಾದ್ಯ ಮುಹ್ಯತಿ' ಗೂಡಿನಲ್ಲಿ ತನ್ನನ್ನು ಮುಚ್ಚಿಕೊಳ್ಳುವ ರೇಷ್ಮೆ ಹುಳುವಿನಂತೆ ಕರ್ಮದಿಂದ ತನ್ನನ್ನು ಮುಚ್ಚಿಕೊಂಡು ಮೋಹಗೊಳ್ಳುತ್ತಾನೆ. ಆ ಕರ್ಮಗಳ ಫಲೋದಯವನ್ನು ಮನುವು ಈ ರೀತಿ ವರ್ಣಿಸುತ್ತಾರೆ.


ಸಂಭವಾಶ್ಚ ವಿಯೋನೀಷು ದುಃಖಪ್ರಾಯಾಸು ನಿತ್ಯಶಃ ।

ಶೀತಾತಪಾಭಿಘಾತಾಂಶ್ಚ ವಿವಿಧಾನಿ ಭಯಾನಿ ಚ ॥

ಅಸಕೃತ್ ಗರ್ಭವಾಸೇಷು ವಾಸಂ ಜನ್ಮಚ ದಾರುಣಂ ।

ಬಂಧನಾನಿ ಚ ಕಷ್ಟಾನಿ ಪರ ಪ್ರೇಷ್ಯತ್ವಮೇವಚ ॥ 

ಬಂಧು ಪ್ರಿಯ ವಿಯೋಗಾಂಶ್ಚ ಸಂವಾಸಂಚೈವ ದುರ್ಜನೈಃ । 

ದ್ರವ್ಯಾರ್ಜನಂ ಚ ನಾಶಂಚ ಮಿತ್ರಾಮಿತ್ರಸ್ಯ ಚಾರ್ಜನಂ ॥

ಜರಾಂ ಚೈವಾಪ್ರತೀಕಾರಾಂ ವ್ಯಾಧಿಭಿಶ್ಚೋಪಪೀಡನಂ ।

ಕ್ಲೇಶಾಂಶ್ಚ ವಿವಿಧಾಂಸ್ತಾನ್ ಸ್ತಾನ್ ಮೃತ್ಯುಮೇವ ಚ ದುರ್ಜಯಂ ॥

(ಸದಾ ದುಃಖಪ್ರಾಯವಾದ ಬೇರೆ ಬೇರೆ ಜಾತಿ (ಯೋನಿ)ಗಳಲ್ಲಿ ಹುಟ್ಟುವುದು; ಛಳಿ ಬಿಸಿಲು ಮುಂತಾದ ಪೀಡೆಗಳು ಮತ್ತು ಬಗೆ ಬಗೆಯಾದ ಭಯಗಳು; ಮತ್ತೆ ಮತ್ತೆ ಗರ್ಭವಾಸ ಮತ್ತು ಅತ್ಯಂತ ಕ್ಲೇಶಕರವಾದ ಜನನ; ಕಷ್ಟಕರವಾದ ಬಂಧನಾದಿಗಳು; ಬೇರೆಯವರಿಗೆ ದಾಸ್ಯ; ಬಂಧುಗಳು ಮತ್ತು ಪ್ರಿಯರಿಂದ ವಿಯೋಗ; ದುರ್ಜನರ ಜೊತೆಯಲ್ಲಿ ಸಂವಾಸ; ದ್ರವ್ಯಾರ್ಜನೆ ಮತ್ತು ಅದರ ನಾಶ;  ಮಿತ್ರ ಮತ್ತು ಅಮಿತ್ರರ ಆರ್ಜನೆ; ಪ್ರತೀಕಾರವಿಲ್ಲದ ಮುಪ್ಪು ಮತ್ತು ವ್ಯಾಧಿಗಳಿಂದ ಪೀಡೆ, ಬೇರೆ ಬೇರೆ ವಿಧವಾದ ಕ್ಲೇಶಗಳು ಮತ್ತು ಕಡೆಗೆ ಜಯಿಸಲಶಕ್ಯವಾದ ಮೃತ್ಯು.)

ಮನುವು ಕರ್ಮಮಯವಾದ ಸೃಷ್ಟಿಯ ಸಂಗ್ರಹವಾದ ಚಿತ್ರವನ್ನು ಚಿತ್ರಿಸಿ ನಮ್ಮ ಮುಂದಿರಿಸಿರುತ್ತಾರೆ. ಆ ಸೃಷ್ಟಿಯಲ್ಲಿ ಬಂಧಿಸಲ್ಪಟ್ಟಿರುವ ಪುರುಷನು ವಿವಶ. ಅನಂತ ಕಾಲಕ್ಕೂ ಅವನು ಅದರಲ್ಲಿ ತೊಳಲುತ್ತಾನೆಂಬ ಯೋಚನೆಯು ನಿಜಕ್ಕೂ ಭಯವನ್ನುಂಟುಮಾಡುವಂತಹದು. ಅದರಿಂದ ತಪ್ಪಿಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಯು ಎಲ್ಲರಿಗೂ ಅತ್ಯಂತ ಮಹತ್ವಪೂರ್ಣವಾದುದು. ಆದರೆ ಅದು ಎಲ್ಲರಲ್ಲಿಯೂ ಉಂಟಾಗುವುದಿಲ್ಲ. ನರಕದಲ್ಲಿದ್ದರೂ ಪುರುಷನು ಅದರೊಡನೆಯೇ ಸಾತ್ಮ್ಯವನ್ನುಂಟು ಮಾಡಿಕೊಂಡು ಅದರಲ್ಲಿಯೇ ಸುಖವನ್ನು ಕಾಣುತ್ತಾನೆಂದು ಭಾಗವತವು ಒಂದು ಕಡೆ ನುಡಿಯುತ್ತದೆ. ಹಾಗೆಯೇ ದುಃಖಪ್ರಾಯವಾದ ಜೀವನದಲ್ಲಿಯೂ ಸಹ.

ಆದರೂ ಲೋಕದಲ್ಲಿ ಮೋಹ ಹರಿದು ಕರ್ಮ ಬಂಧದಿಂದ ಬಿಡಿಸಿ ಕೊಳ್ಳಲಿಚ್ಛಿಸುವ ಪುರುಷರೂ ಪದೇ ಪದೇ ಹುಟ್ಟುತ್ತಾರೆ. ನಮ್ಮ ದೇಶದ ಪವಿತ್ರ ಸಾಹಿತ್ಯಗಳನ್ನು ಸಮೀಕ್ಷೆ ಮಾಡಿದಾಗ ಅಂತಹವರು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹುಟ್ಟಿರುತ್ತಾರೆಂಬುದು ಸ್ಪಷ್ಟವಾಗುತ್ತದೆ. ನಮ್ಮ ಪವಿತ್ರ ಸಾಹಿತ್ಯಗಳೂ ಸಹ ಅದರಿಂದ ಬಿಡಿಸಿಕೊಳ್ಳುವ ಅನೇಕ ಮಾರ್ಗಗಳನ್ನು ಉಪದೇಶಿಸುತ್ತಾ ಬಂದಿವೆ. ವೇದ, ಉಪನಿಷತ್ತು, ಗೀತೆ, ಭಾರತ, ಭಾಗವತ, ಧರ್ಮಶಾಸ್ತ್ರ ಮತ್ತು ದೇಶ ಭಾಷೆಗಳಲ್ಲಿರುವ ಭಕ್ತಿಸಾಹಿತ್ಯಗಳೆಲ್ಲವೂ ಬಿಡುಗಡೆಯ ದಾರಿಯನ್ನು ತೋರಿಸುವ ಆಶಯದಿಂದಲೇ ವಿರಚಿತವಾಗಿರುತ್ತವೆ. ಅವೆಲ್ಲವನ್ನೂ ವಿಚಾರ ಮಾಡುವುದು ಸ್ವಲ್ಪದರಲ್ಲಾಗುವ ಕೆಲಸವಲ್ಲ. ನಾವು ಹಿಂದಿನ ಸಂಚಿಕೆಯಲ್ಲಿ ನೋಡಿದಂತೆ ಯಾಜ್ಞವಲ್ಕ್ಯ ಮಹರ್ಷಿಯು ಜನ್ಮಾಂತರವು ಹೇಗುಂಟಾಗುತ್ತದೆಂಬುದನ್ನು ಬಹು ಕುಶಲತೆಯಿಂದ ವರ್ಣಿಸುತ್ತಾನೆ. ಜೊತೆಗೆ ಜನ್ಮಾಂತರಗಳಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದನ್ನೂ ಅವನು ಅಷ್ಟೇ ವಿಚಕ್ಷಣತೆಯಿಂದ ವಿವರಿಸುತ್ತಾನೆ. ಪ್ರಸಕ್ತ ಲೇಖನದಲ್ಲಿ ಉಪನಿಷತ್ದೃಷ್ಟಿಗಳ ದೃಷ್ಟಿಯೆಲ್ಲವನ್ನೂ ಒಂದೆಡೆ ಕ್ರೋಡೀಕರಿಸಿ ಹೇಳುವ ಅವನ ಉಪದೇಶವನ್ನು ತೆಗೆದುಕೊಂಡು ವಿಚಾರಿಸುವ ಅಭಿಪ್ರಾಯವುಳ್ಳವರಾಗಿರುತ್ತೇವೆ.

ಆ ವಿಷಯದಲ್ಲಿ ಋಷಿಯು ಮಂಡಿಸುವ ಮೂಲ ಸೂತ್ರವು ಹೀಗಿರುತ್ತದೆ. 'ಯೋ ಅಕಾಮೋ ನಿಷ್ಕಾಮ ಆಪ್ತಕಾಮ ಅತ್ಮಕಾಮೋ ನ ತಸ್ಯ ಪ್ರಾಣಾ ಉತ್ಕ್ರಾಮಂತಿ ಬ್ರಹ್ಮೈವ ಸನ್ ಬ್ರಹ್ಮಾಪ್ಯೇತಿ!' (ಯಾವನು ಅಕಾಮನೂ ನಿಷ್ಕಾಮನೂ ಆಪ್ತಕಾಮನೂ ಆತ್ಮಕಾಮನೂ ಆಗಿರುತ್ತಾನೆಯೋ ಅವನ ಪ್ರಾಣಗಳು ಉತ್ಕ್ರಮಣ ಹೊಂದುವುದಿಲ್ಲ. ಅವನು ಬ್ರಹ್ಮನೇ ಆಗಿ ಬ್ರಹ್ಮನನ್ನೇ ಹೋಗಿ ಸೇರುತ್ತಾನೆ.) ಅದರ ವಿಷಯದಲ್ಲಿ ಅವನು ಈ ಮುಂದಿನ ಶ್ಲೋಕವನ್ನು ಉಲ್ಲೇಖಿಸುತ್ತಾನೆ.

ಯದಾ ಸರ್ವೇ ಪ್ರಮುಚ್ಯಂತೇ ಕಾಮಾ ಯೇಽಸ್ಯ ಹೃದಿ ಶ್ರಿತಾಃ ।

ಅಥ ಮರ್ತ್ಯೋಽಮೃತೋ ಭವತಿ ಅತ್ರ ಬ್ರಹ್ಮ ಸಮಶ್ನುತೇ ॥ 

(ಯಾವಾಗ ಇವನ ಹೃದಯವನ್ನು ಆಶ್ರಯಿಸಿರುವ ಎಲ್ಲ ಕಾಮಗಳೂ ನಾಶವಾಗುತ್ತವೆಯೋ ಆಗ ಮರ್ತ್ಯನು ಅಮೃತನಾಗುತ್ತಾನೆ ಮತ್ತು ಅವನು ಇಲ್ಲಿ ಬ್ರಹ್ಮನನ್ನು ಹೊಂದುತ್ತಾನೆ.)

ಈ ಮಾತುಗಳ ಹಿಂಬದಿಯಲ್ಲಿ ಋಷಿಗಳು ಕಂಡ ಹಲವು ಅತ್ಯಂತ ಗಹನವಾದ ರಹಸ್ಯಗಳು ಇರುತ್ತವೆಯೆಂದು ಊಹಿಸಬಹುದು. ಒಂದು ಕಡೆ ಛಾಂದೋಗ್ಯೋಪನಿಷತ್ತಿನಲ್ಲಿ ಒಬ್ಬ ಗುರುವು ಈ ಶರೀರವನ್ನು ಬ್ರಹ್ಮಪುರವೆಂದು ಕರೆದು ಅದರಲ್ಲಿ ಪರಮಾತ್ಮನಿಗೆ ವಾಸಸ್ಥಾನವಾದ ಒಂದು ಸೂಕ್ಷ್ಮವಾದ ಪುಂಡರೀಕ (ಕಮಲ)ವಿರುತ್ತದೆ. ಅದರಲ್ಲಿ ಸೂಕ್ಷ್ಮತರವಾದ ಹೃದಯಾಕಾಶವಿರುತ್ತದೆ. ಆ ಹೃದಯಾಕಾಶದಲ್ಲಿ ಪಾಪರಹಿತನೂ, ಜರಾರಹಿತನೂ, ಮೃತ್ಯುವಿಲ್ಲದವನೂ, ಶೋಕರಹಿತನೂ, ಅನ್ನವನ್ನಪೇಕ್ಷಿಸದವನೂ, ಬಾಯಾರಿಕೆಯಿಲ್ಲದವನೂ, ಸತ್ಯಕಾಮನೂ, ಸತ್ಯಸಂಕಲ್ಪನೂ ಆದ ಆತ್ಮನಿರುತ್ತಾನೆಂದು ಹೇಳುತ್ತಾನೆ. ಶರೀರಕ್ಕೆ ಜರೆಯಂಟಾದುದರಿಂದ ಆತ್ಮನಿಗೆ ಜರೆಯುಂಟಾಗುವುದಿಲ್ಲ, ಶರೀರಕ್ಕೆ ಸಾವುಂಟಾದುದರಿಂದ ಆತ್ಮನಿಗೆ ಸಾವುಂಟಾಗುವುದಿಲ್ಲ ಎಂದು ಅವನು ಘೋಷಿಸುತ್ತಾನೆ.

ಈ ಸತ್ಯವನ್ನೇ ಯಜುರಾರಣ್ಯಕವು ಸುಂದರವಾದ ಮಾತುಗಳಲ್ಲಿ ಈ ರೀತಿ ಹೇಳುತ್ತದೆ.

ಅಷ್ಟಾಚಕ್ರಾ ನವದ್ವಾರಾ ದೇವಾನಾಂ ಪೂರಯೋಧ್ಯಾ।

ತಸ್ಯಾಂ ಹಿರಣ್ಮಯಃ ಕೋಶಃ ಸ್ವರ್ಗೋ ಲೋಕೋ ಜ್ಯೋತಿಷಾವೃತಃ ॥

ಯೋ ವೈತಾಂ ಬ್ರಹ್ಮಣೋ ವೇದ ಅಮೃತೇನವೃತಾಂ ಪುರೀಂ।

ತಸ್ಮೈ ಬ್ರಹ್ಮ ಚ ಬ್ರಹ್ಮಾ ಚ ಆಯುಃ ಕೀರ್ತಿಂ ಪ್ರಜಾಂ ದದುಃ ॥ 

(ಎಂಟು ಚಕ್ರಗಳಿಂದಲೂ ಒಂಬತ್ತು ದ್ವಾರಗಳಿಂದಲೂ ಕೂಡಿದ ಈ ಶರೀರವು ಗೆಲ್ಲಲಾಗದ ದೇವತೆಗಳ ಪಟ್ಟಣ. ಅದರಲ್ಲಿ ಒಂದು ಹಿರಣ್ಮಯವಾದ ಕೋಶವಿರುತ್ತದೆ. ಅದರೊಳಗಡೆ (ಆನಂದಧಾಮವಾದ) ಸ್ವರ್ಗಲೋಕವಿರುತ್ತದೆ. ಅದು ಬೆಳಕಿನಿಂದ ಆವೃತವಾಗಿರುತ್ತದೆ. ಇದೇ ಅಮೃತದಿಂದ ಆವೃತವಾದ ಬ್ರಹ್ಮನ ಪುರಿ. ಇದನ್ನು ಯಾವನು ತಿಳಿದಿರುತ್ತಾನೆಯೋ ಅವನಿಗೆ ಪರಮಾತ್ಮನೂ, ಪ್ರಜಾಪತಿಯಾದ ಬ್ರಹ್ಮನೂ ಮತ್ತು ಇತರ ದೇವತೆಗಳೂ ಆಯಸ್ಸು, ಕೀರ್ತಿ ಮತ್ತು ಪ್ರಜೆಗಳನ್ನು ಕೊಡುತ್ತಾರೆ. ) ಎಂಟು ಚಕ್ರ ಮತ್ತು ನವದ್ವಾರಗಳು, ರಸ, ಅಸೃಕ್, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ ಮತ್ತು ಶುಕ್ರಗಳಿಂದ ಕೂಡಿದ ಸಪ್ತಧಾತುಮಯವಾದ ಶರೀರವನ್ನೇ ಹೇಳುತ್ತಾನೆ. ಅದು ಮರಣ ಧರ್ಮಿ. ಆದರೆ ಆ ಶರೀರದ ಒಳಗಡೆ ಇರುವ ಆತ್ಮನು ಅಮೃತ. ಇದನ್ನೇ ಛಾಂದೋಗ್ಯವು ಈ ರೀತಿ ಹೇಳುತ್ತದೆ. "ಮರ್ತ್ಯಂ ವಾ ಇದಗ್ಂ ಶರೀರಮಾತ್ತಂ ಮೃತ್ಯುನಾ ತದಸ್ಯಾಮೃತಸ್ಯಾಶರೀರಸ್ಯಾತ್ಮನೋಧಿಷ್ಠಾನಂ।"  (ಈ ಶರೀರವು ಮರ್ತ್ಯವಾದುದು, ಇದು ಮೃತ್ಯುವಿನ ವಶಕ್ಕೆ ಒಳಗಾದುದು. ಅಂತಹ ಈ ಶರೀರವು ಅಮೃತನೂ ಅಶರೀರನೂ ಅದ ಆತ್ಮನ ನಿವಾಸ ಸ್ಥಾನ.)

ಈ ಆತ್ಮನೇ ಜೀವ ರೂಪದಲ್ಲಿ ಶರೀರವನ್ನು ಪ್ರವೇಶಿಸಿ ತನ್ನ ಕರ್ಮಾನುಗುಣವಾಗಿ ಉಚ್ಚಾವಚವಾದ ಜನ್ಮಗಳೆಲ್ಲವನ್ನೂ ತೆಗೆದು ಕೊಳ್ಳುತ್ತಾನೆ. ಅವನೇ ಕರ್ಮಗಳೆಲ್ಲದರಿಂದಲೂ ವಿಮುಕ್ತನಾದಾಗ ತನ್ನ ಸ್ವರೂಪ ಜ್ಞಾನವನ್ನು ಪಡೆದು ಶಾಶ್ವತನೂ, ಪುನರಾವರ್ತಿರಹಿತನೂ, ಆನಂದಮಯನೂ ಅದ ಬ್ರಹ್ಮನಲ್ಲಿ ನೆಲೆಗೊಳ್ಳುತ್ತಾನೆ. ಈ ಶರೀರದಲ್ಲಿಯೇ ಕರ್ಮಾನುಸಾರ ಬೇರೆ ಬೇರೆ ಜನ್ಮಗಳಿಗೆ ಒಯ್ಯುವ ಮಾರ್ಗಗಳೂ ಇರುತ್ತವೆ. ಜ್ಞಾನದ ಅತ್ಯುನ್ನತವಾದ ಸ್ಥಿತಿಗೆ ತಲುಪಿಸುವ ಮಾರ್ಗವೂ ಇದರಲ್ಲಿಯೇ ಇರುತ್ತದೆ. ಅದನ್ನು ಋಷಿಯು ಈ ರೀತಿ ವರ್ಣಿಸುತ್ತಾನೆ -

ಶತಂ ಚೈಕಾಚ ಹೃದಯಸ್ಯ ನಾಡ್ಯಃ ತಾಸಾಂ ಮೂರ್ಧಾನಮಭಿನಿಸ್ಸೃತೈಕಾ ।

ತಯೋರ್ಧ್ವಮಾಯನ್ನಮೃತತ್ವಮೇತಿ ವಿಷ್ವಜ್ ಅನ್ಯಾ ಉತ್ಕ್ರಮಣೇ ಭವಂತಿ ॥

(ಹೃದಯುದಲ್ಲಿ ನೂರೊಂದು ನಾಡಿಗಳಿರುತ್ತವೆ. ಅವುಗಳಲ್ಲಿ ಒಂದು ಮೂರ್ಧದ ಕಡೆ ಹೋಗಿರುತ್ತದೆ. ಅದರಲ್ಲಿ ಮೇಲಕ್ಕೆ ಹೋದಾಗ ಅಮೃತತ್ವವನ್ನು ಹೊಂದುತ್ತಾನೆ. ಇತರ ನೂರು ನಾಡಿಗಳು ಬೇರೆ ಬೇರೆ ದಾರಿಗಳಲ್ಲಿ ಉತ್ಕ್ರಮಣ ಮಾಡಲು(ಶರೀರವನ್ನು ಬಿಟ್ಟು ಹೋಗಲು ಕಾರಣವಾಗುತ್ತವೆ.) ಮೇಲಕ್ಕೆ ಹೋಗುವ ನಾಡಿಯೇ ಜ್ಞಾನರಜ್ಜುವೆಂದು ಪ್ರಸಿದ್ಧವಾದ ಬ್ರಹ್ಮನಾಡಿ.ಧ್ಯಾನಯೋಗದಿಂದ ಅದನ್ನು ಪ್ರವೇಶಿಸಿ ಅದರಲ್ಲಿ ಮೇಲ್ಮುಖವಾಗಿ ಹೋದಾಗ ಆತ್ಮನು ಬ್ರಹ್ಮಜ್ಞಾನವನ್ನು ಹೊಂದುತ್ತಾನೆ. ಇತರ ನೂರು ನಾಡಿಗಳು ಅಸಂಖ್ಯಾತವಾದ ಶಾಖೋಪಶಾಖೆಗಳನ್ನುಂಟುಮಾಡಿಕೊಂಡು ಶರೀರವೆಲ್ಲವನ್ನು ವ್ಯಾಪಿಸಿಕೊಂಡಿರುತ್ತವೆ. ಆತ್ಮ(ಜೀವ)ನು ಕರ್ಮಾನುಗುಣವಾಗಿ ಅವುಗಳಲ್ಲಿ ಯಾವುದರಲ್ಲಿ ಬೇಕಾದರೂ ಉತ್ಕ್ರಮಣ ಮಾಡಬಹುದು. ಯಾವುದರಲ್ಲಿ ಉತ್ಕ್ರಮಣ ಮಾಡುತ್ತಾನೆಯೋ ಅದಕ್ಕನುಗುಣವಾಗಿ ಅವನಿಗೆ ಶರೀರ, ಲೋಕ ಇತ್ಯಾದಿಗಳು ಲಭಿಸುತ್ತವೆ.

ಈ ಹಿನ್ನೆಲೆಯಲ್ಲಿ ತನ್ನ ಪ್ರವಚನವನ್ನು ಮುಂದುವರಿಸುತ್ತಾ ಯಾಜ್ಞವಲ್ಕ್ಯ ತದ್ಯಥಾ ಹಿರ್ನಿರ್ಲ್ವಯನೀ ವಲ್ಮೀಕೇ ಮೃತಾ ಪ್ರತ್ಯಸ್ತಾ ಶಯೀತ ಏವಮೇವೇದಗಂ ಶರೀರಗ್ಂ ಶೇತೇ, ಅಥಾಯಮಶರೀರೋಽಮೃತಃ ಪ್ರಾಣೋ ಬ್ರಹ್ಮೈವ ತೇಜ ಏವ. (ಹೇಗೆ ಹುತ್ತಿನಲ್ಲಿ ಹಾವಿನ ಸೋಲೆಯು ಜೀವರಹಿತನಾಗಿ ಎಸೆಯಲ್ಪಟ್ಟು ಬಿದ್ದಿರುತ್ತದೆಯೋ ಹಾಗೆಯೇ ಮೃತನಾದಾಗ ಶರೀರವು ಬಿದ್ದಿರುತ್ತದೆ. ಅದೇ ಅಶರೀರವೂ ಅಮ್ಮತವೂ ಆದ ಪ್ರಾಣವು (ಆತ್ಮನು) ಬ್ರಹ್ಮನೇ ಸರಿ. ತೇಜಸ್ಸೇ ಸರಿ.) ಎಂದು ನುಡಿಯುತ್ತಾನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಜ್ಞಾನಿಯಾದ ಪುರುಷನ ಪ್ರಾಣವು ತೇಜೋರೂಪವನ್ನು ತಾಳಿ ಬ್ರಹ್ಮನಲ್ಲಿ ಒಂದಾಗುತ್ತದೆ.

ಮನುಷ್ಯನ ಹೃದಯಾಕಾಶದಲ್ಲಿ ಹಾದು ಹೋಗಿರುವ ಈ ದಾರಿಯು ಅಣುವಿನಂತೆ ಬಹಳ ಸೂಕ್ಷ್ಮ ವಾದುದು. ಅದು ಪರಮಾತ್ಮನವರೆಗೆ ಪ್ರಸರಿಸಿರುತ್ತದೆ. ಅದು ಎಂದೆಂದಿಗೂ ಇರುವಂತಹದ್ದು. ಆ ದಾರಿಯನ್ನು ತಾನು ತಿಳಿದಿರುವುದಾಗಿ ಯಾಜ್ಞವಲ್ಕ್ಯನು ಹೇಳುತ್ತಾನೆ.

ಅಣುಃ ಪಂಥಾ ವಿತತಃ ಪುರಾಣೋ ಮಾಂಸ್ಪೃಷ್ಟೋ ಅನುವಿತ್ತೋ ಮಯೈವ। ತೇನ ಧೀರಾ ಅಪಿ ಯಂತಿ ಬ್ರಹ್ಮವಿದಃ ಸ್ವರ್ಗಂ ಲೋಕಮಿತ ಊರ್ಧ್ವಂ ವಿಮುಕ್ತಾಃ  ಅದರ ಮೂಲಕ ಧೀರರಾದ ಬ್ರಹ್ಮಜ್ಞಾನಿಗಳು (ಶರೀರದೊಳಗೆ ಇರುವ) ಪ್ರಕಾಶಮಾನವಾದ ಲೋಕವನ್ನು ಸೇರಿ ಅನಂತರ ಎಂದೆಂದಿಗೂ ಬಂಧನಕ್ಕೆ ಒಳಗಾಗದೆ ಇರುತ್ತಾರೆ.

ಆ ದಾರಿಯಲ್ಲಿ ನಡೆಯಲು ಧ್ಯಾನಯೋಗವೊಂದೇ ಉಪಾಯ. ಅದನ್ನು ಪ್ರವೇಶಿಸಿ ಮೇಲಕ್ಕೆ ಹೋಗುತ್ತಿರುವಾಗ ಯೋಗಿಯ ಒಳಗಣ್ಣಿಗೆ ಕಾಣುವ ಬೇರೆ ಬೇರೆ ವರ್ಣಗಳ ಪ್ರಕಾಶಗಳನ್ನು ಕುರಿತು ಹೇಳಿ, ಕಡೆಗೆ ಯೋಗಿಯು ಒಂದು ತೇಜಸ್ಸಾಗಿಯೇ ಉಳಿಯುತ್ತಾನೆ ಎಂದು ಯಾಜ್ಞವಲ್ಕ್ಯನು ಹೇಳುತ್ತಾನೆ.

ತಸ್ಮಿನ್ ಶುಕ್ಲಮುತ ನೀಲಮಾಹುಃ ಪಿಂಗಲಗ್ಂ ಹರಿತಂ ಲೋಹಿತಂಚ ।

ಏಷ ಪಂಥಾ ಬ್ರಹ್ಮಣಾ ಹಾನವಿತ್ತಃ ತೇನೈತಿ ಬ್ರಹ್ಮವಿತ್ ಪುಣ್ಯಕೃತ್ತೈಜಸಶ್ಚ ॥

(ಅದರಲ್ಲಿ ಬಿಳಿ, ನೀಲಿ, ಪಿಂಗಳ (ಕೆಂಪು ಬೆರೆತ ಗೋರೋಚನದ ಬಣ್ಣ), ಹಸಿರು ಮತ್ತು ಕೆಂಪು ಬಣ್ಣದ ಪ್ರಕಾಶಗಳು ಕಾಣುತ್ತವೆ. ಇದು ಬ್ರಹ್ಮನ ಬಳಿಗೆ ಹೋಗುವ ದಾರಿ. ಅದನ್ನು ನಾನು ತಿಳಿದಿರುತ್ತೇನೆ. ಪುಣ್ಯಕೃತನಾದ ಬ್ರಹ್ಮಜ್ಞಾನಿಯು ತೇಜೋ ರೂಪನಾಗಿ ಅದರಲ್ಲಿ ಹೋಗುತ್ತಾನೆ.)

ಅಂತರ್ದೃಷ್ಟಿಗೆ ಗೋಚರಿಸುವ ಆ ದಾರಿಯನ್ನು ಕುರಿತು ಹೇಳಿದ ನಂತರ ಬಹಳ ಜಟಿಲವಾದ ರಚನೆಯುಳ್ಳ ಶರೀರದ ಆಳದಲ್ಲಿ ಎಂದರೆ ಹೃದಯಗುಹೆಯಲ್ಲಿ ಪ್ರಕಾಶಕ್ಕೆ ಬರುವ ಪರಮಾತ್ಮನನ್ನು ಸ್ಮರಿಸಿಕೊಂಡು ಋಷಿಯು, 'ಅವನನ್ನು ತಿಳಿದವನೂ ಅವನೇ ಆಗುತ್ತಾನೆ', ಸ ವಿಶ್ವಕೃತ್ ಸ ಹಿ ಸರ್ವಸ್ಯ ಕರ್ತಾ ತಸ್ಯ ಲೋಕಃ ಸ ಲೋಕ ಏವ ॥ (ಅವನು ವಿಶ್ವಕೃತ್ತು, ಅವನೇ ಎಲ್ಲವನ್ನೂ ಮಾಡುವವನಾಗುತ್ತಾನೆ, ಲೋಕವೆಲ್ಲವೂ ಅವನದು, ಅವನೇ ಲೋಕವೂ ಸಹ) ಎಂದು ಘೋಷಣೆ ಮಾಡುತ್ತಾನೆ.

ಧ್ಯಾನಯೋಗದಿಂದ ಅಂತಹ ಉನ್ನತೋನ್ನತವಾದ ಸ್ಥಿತಿಯನ್ನು ಮುಟ್ಟಿದವನನ್ನು ಕುರಿತು ಋಷಿಯು ಪ್ರಾಸಂಗಿಕವಾಗಿ ಹೇಳುವ ಕೆಲವು ಮಾತುಗಳನ್ನು ಇಲ್ಲಿ ಕನ್ನಡಿಸುತ್ತೇವೆ - ಈ ಭೂಮಿಯಲ್ಲಿರುವಾಗಲೇ ನಾವು ಆ ಬ್ರಹ್ಮವಸ್ತುವನ್ನು ತಿಳಿದೆವು. ಇಲ್ಲಿ ಅದನ್ನು ತಿಳಿಯದಿದ್ದರೆ ದೊಡ್ಡ ನಷ್ಟವೇ ಸರಿ. ಯಾರು ಅದನ್ನು ತಿಳಿದಿರುತ್ತಾರೆಯೋ ಅವರು ಅಮೃತರೇ ಆಗುತ್ತಾರೆ. ಇತರರು ದುಃಖವನ್ನೇ ಹೊಂದುತ್ತಾರೆ. ನಾನು ಅವನೇ ಆಗಿರುತ್ತೇನೆಂಬುವ ಪುರುಷನು ಏನನ್ನು ಬಯಸುತ್ತಾನೆ ? ಯಾರ ತೃಪ್ತಿಗೋಸ್ಕರ ಶರೀರಕ್ಕೆ ಜ್ವರ (ಪೀಡೆ) ವನ್ನುಂಟು ಮಾಡುತ್ತಾನೆ ? (ಮಾಡನು.)

ಧೀರನಾದ ಬ್ರಾಹ್ಮಣನು ಅವನನ್ನೇ ತಿಳಿದು ತನ್ನ ಪ್ರಜ್ಞೆಯನ್ನು ಅವನಲ್ಲಿಯೇ ಇರಿಸಬೇಕು. ಬಹುವಾದ ಶಬ್ದಗಳನ್ನು ಚಿಂತಿಸಬಾರದು. ಅವುಗಳಿಂದ ನಾಲಿಗೆಗೆ ಆಯಾಸವುಂಟಾಗುವುದೇ ಹರತು ಮತ್ತಾವ ಪ್ರಯೋಜನವೂ ಇಲ್ಲ.

ಪರಸ್ಪರ ಸಂಬಂಧಿಸಿರುವ ಕಾಮ, ಸಂಕಲ್ಪ, ಕರ್ಮ ಮತ್ತು ಜನ್ಮಗಳಿಂದ ತಪ್ಪಿಸಿಕೊಳ್ಳಲು ಇದು ಯಾಜ್ಞವಲ್ಕ್ಯನು ತೋರಿಸುವ ದಾರಿ. ಅವನು ಅದನ್ನು ವರ್ಣಿಸುವ ಮಂತ್ರವಾಕ್ಯಗಳನ್ನು ಓದಿದುದರಿಂದಾಗಲಿ, ಅವುಗಳ ಬಗ್ಗೆ ಪ್ರವಚನ ಮಾಡಿದುದರಿಂದಾಗಲಿ ಅಥವಾ ವ್ಯಾಖ್ಯಾನಗಳನ್ನು ಕೇಳಿದುದರಿಂದಾಗಲಿ ಯಾವನೂ ಹೃದಯಾಂತರಾಳದಲ್ಲಿ ಪರಮ ಸೂಕ್ಷ್ಮವಾಗಿ ಹಾದು ಹೋಗಿರುವ ಆ ದಾರಿಯನ್ನು ಮುಟ್ಟಲಾರನು ಎಂಬುದನ್ನು ಹೇಳಬೇಕಾಗಿಲ್ಲ. ಯಾವನಿಗೆ ದೇವ(ಪರಮೆಶ್ವರ)ನಲ್ಲಿ ತುಂಬ ಭಕ್ತಿಯಿರುತ್ತದೆಯೋ, ಮತ್ತು ದೇವನಲ್ಲಿ ಹೇಗೋ ಹಾಗೆ ಗುರುವಿನಲ್ಲಿ ತುಂಬ ಭಕ್ತಿಯಿರುತ್ತದೆಯೋ, ಅಂತಹವನಿಗೆ ಈ ಅರ್ಥಗಳು ತಿಳಿದು ಬರುತ್ತವೆ. ಆಚಾರ್ಯವಂತನಾದ ಪುರುಷನು (ಇದನ್ನು) ತಿಳಿಯುತ್ತಾನೆ ಮುಂತಾದ ಮಾತುಗಳನ್ನು ಉಪನಿಷತ್ತುಗಳಲ್ಲಿ ಓದುತ್ತೇವೆ. ಅವು ಯಾಜ್ಞವಲ್ಕ್ಯನು ಹೇಳುತ್ತಿರುವ ಮಾತುಗಳಿಗೂ ಸಹ ಅತಿಶಯವಾದ ರೀತಿಯಲ್ಲಿ ಅನ್ವಯಿಸುತ್ತವೆ. ಅವುಗಳ ಹಿಂದೆ ಮಹತ್ತರವಾದ ಸಾಧನೆಯಿರುತ್ತದೆ. ಕಲ್ಪನೆ ಮಾಡಿಕೊಳ್ಳಲಾಗದ ಅನುಭವಗಳಿರುತ್ತವೆ. ದುರ್ಜ್ಞೇಯವಾದ ಆತ್ಮವಿಜ್ಞಾನವಿರುತ್ತದೆ. ಅವುಗಳನ್ನು ಪ್ರಾಯೋಗಿಕವಾಗಿ ಸಾಧಿಸಲಾರದವನು ಇಂತಹ ಜ್ಞಾನಮಾರ್ಗವನ್ನು ಕಲ್ಪನೆ ಸಹ ಮಾಡಿಕೊಳ್ಳಲಾರನು.

ಗೀತೆಯಲ್ಲಿ ಕೃಷ್ಣ ಪರಮಾತ್ಮನು ನೈಷ್ಕರ್ಮ್ಯಸಿದ್ಧಿ, ಸನ್ಯಾಸ ಯೋಗ, ಮುಂತಾದ ಶಬ್ದಗಳನ್ನು ಬಳಸುತ್ತಾನೆ. ಯಾಜ್ಞವಲ್ಕ್ಯ ಋಷಿಯು ಹೇಳುತ್ತಿರುವುದು ಆ ನೈಷ್ಕರ್ಮ್ಯದ ಪರಾಕಾಷ್ಠೆಯನ್ನೇ. ಎಲ್ಲಿ ಕರ್ಮವೂ ಮತ್ತು ಅದರ ವಾಸನೆಗಳೂ ದಗ್ಧ ಬೀಜದಂತೆ ಸಂಪೂರ್ಣವಾಗಿ ನಾಶ ಹೊಂದಿ ಬಿಡುತ್ತವೆಯೋ ಅಂತಹ ಜ್ಞಾನದ ಸ್ಥಿತಿಯನ್ನೇ. ಸುಷುಮ್ನೆಯು ಬ್ರಹ್ಮಪದ ಪ್ರಾಪಕವಾದ ನಾಡಿ. ಅದರಲ್ಲಿ ಮೇಲ್ಮುಖವಾಗಿ ಹೋದಾಗ ಕರ್ಮಗಳೆಲ್ಲವೂ ತಮ್ಮಷ್ಟಕ್ಕೆ ತಾವೇ ಕಳಚಿ ಹೋಗುತ್ತವೆ. ಅದನ್ನು ಪ್ರವೇಶಿಸಿದ ಯೋಗಿಯು ಜ್ಞಾನಾನಂದಮಯನಾಗಿ ಆಗುತ್ತಾನೆ. ಅದರಿಂದ ಇಳಿದು ಕರ್ಮ ಜ್ಞಾನೇಂದ್ರಿಯಗಳನ್ನು ಪೋಷಿಸುವ ಚಕ್ರ ಮತ್ತು ನಾಡಿಗಳನ್ನು ಪ್ರವೇಶಿಸಿದ ಮಾತ್ರಕ್ಕೆ ಕರ್ಮಗಳು ಅವನಿಗೆ ಅಂಟಿಕೊಳ್ಳುತ್ತವೆ. ಇಂದಿನ ಕಾಲದಲ್ಲಿ ತಂತಿ(wire)ಗಳಲ್ಲಿ ಸಂಗೀತವನ್ನು ರೆಕಾರ್ಡ್ ಮಾಡುವುದಂಟಷಟೇ. ಕಣ್ಣಿನಿಂದ ನೋಡಿದರೆ ರೆಕಾರ್ಡ್ ಮಾಡಿರುವುದು ತಿಳಿಯುವುದಿಲ್ಲ. ಯಂತ್ರಕ್ಕೆ ಹಾಕಿ ನುಡಿಸಿದರೆ ಆಗ ಸಂಗೀತ ಕೇಳುತ್ತದೆ. ಹಾಗೆಯೇ ನರತಂತುಗಳಲ್ಲಿ ಮತ್ತು ಅವುಗಳ ಸೂಕ್ಷ್ಮವಾದ ಕೇಂದ್ರಗಳಲ್ಲಿ ಪುರುಷನು ಮಾಡಿದ ಕರ್ಮವಾಸನೆಗಳೆಲ್ಲವೂ ರೆಕಾರ್ಡಾಗಿರುತ್ತವೆ. ಸೂಕ್ಷ್ಮ ಶರೀರದಲ್ಲಿ ಆ ವಾಸನೆಗಳೇ ಮುಂದುವರಿಯುತ್ತವೆ. ಆದುದರಿಂದಲೇ ಅವು ಜನಾಂತರದಲ್ಲಿಯೂ ಇವನನ್ನು ಆಳುತ್ತವೆ. ಅವುಗಳಿಂದ ತಪ್ಪಿಸಿ ಕೊಳ್ಳಬೇಕಾದರೆ ಜ್ಞಾನಮಾರ್ಗವಾದ ಸುಷುಮ್ನೆ(ಬ್ರಹ್ಮನಾಡಿ)ಯನ್ನು ಪ್ರವೇಶಿಸಬೇಕು. ಅದನ್ನು ಮುಟ್ಟಿದ ಪುರುಷನು ಅಕಾಮನೂ, ಆತ್ಮಕಾಮನೂ, ಅಪ್ತಕಾಮನೂ ಆಗುತ್ತಾನೆ. ಇದು ಕರ್ಮದಿಂದ ಮುಕ್ತಿ ಪಡೆಯಲು ಯಾಜ್ಞವಲ್ಕ್ಯ ಋಷಿಯು ನೋಡಿದ ದಾರಿ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೪ ಸಂಚಿಕೆ:೧೧, ಸೆಪ್ಟೆಂಬರ್   ೧೯೯೧ ತಿಂಗಳಲ್ಲಿ  ಪ್ರಕಟವಾಗಿದೆ.