Thursday, July 22, 2021

ಶ್ರೀರಾಮನ ಗುಣಗಳು - 14 ಸರ್ವಶಾಸ್ತ್ರಾರ್ಥತತ್ತ್ವಜ್ಞ – ಶ್ರೀರಾಮ (Sriramana Gunagalu - 14 Sarvashastrarthatattvajna - Sri Rama)


ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀರಂಗಮಹಾಗುರುಗಳು ಶಾಸ್ತ್ರವೆಂದರೇನು? ಎಂಬುದನ್ನು ಅನೇಕ ಬಾರಿ ವಿವರಿಸಿದ್ದುಂಟು. ಅವರ ನುಡಿ ಈ ಬಗ್ಗೆ ಬಹಳ ಪ್ರಸ್ತುತವಾಗಿದೆ. " 'ಶಾಸ್ತ್ರ'ವೆಂದು ನಾನು ಹೇಳುತ್ತಿರುವುದು ಪುಸ್ತಕದ ಕಂತೆಯನ್ನಲ್ಲ; ಸೃಷ್ಟಿಯಲ್ಲಿರುವ ಶಾಸನವೇ ಶಾಸ್ತ್ರ" ಎಂದು. ಭಗವಂತನು ಸೃಷ್ಟಿಮಾಡಿದ ಪ್ರತಿಯೊಂದು ಪದಾರ್ಥದಲ್ಲೂ ಅದರದ್ದೇ ಆದ ಅಸ್ತಿತ್ವ ಇರುತ್ತದೆ, ಅದರದ್ದೇ ಆದ ನಿಲುವು ಇರುತ್ತದೆ. ಅದರದ್ದೇ ಆದ ಪ್ಲಾನ್ ಇರುತ್ತದೆ. ಇದರ ಅರಿವನ್ನೇ ಶಾಸ್ತ್ರವೆನ್ನುತ್ತಾರೆ. ಉದಾಹರಣೆಗೆ ಒಂದು ಬೀಜವನ್ನು ತೆಗೆದುಕೊಂಡರೆ, ಅದು ಯಾವ ರೀತಿಯಾಗಿ ತನ್ನನ್ನು ಬೆಳೆಸಿಕೊಳ್ಳಬೇಕು? ಯಾವ ರೀತಿಯಾಗಿ ಫಲವನ್ನು ಕೊಡಬೇಕು? ಇತ್ಯಾದಿ ಎಲ್ಲವೂ ಅದರಲ್ಲೇ ನಿಗೂಢವಾಗಿರುತ್ತದೆ. ಈ ಬೀಜದ ಶಾಸ್ತ್ರವೇನು? ಎಂಬುದನ್ನು ಅರಿಯಬೇಕು. 

ಬೀಜವನ್ನು ನೆಡುವಾಗ ಅದರ ಪ್ಲಾನ್(plan) ಅನ್ನು ಅರಿತು, ಅದಕ್ಕೆ ಬೇಕಾದ ನೀರು, ಗೊಬ್ಬರ ಇತ್ಯಾದಿ ಉಪಯುಕ್ತವಾದ ಸಾಮಗ್ರಿಗಳನ್ನು ಒದಗಿಸಬೇಕು. ಆಗ ಆ ಬೀಜವು ಉತ್ಕೃಷ್ಟವಾದ ಫಸಲನ್ನು ಕೊಡಲು ಸಾಧ್ಯ. ಬೀಜದ ಆಶಯಕ್ಕೆ ವಿರುದ್ಧವಾಗಿ 'ಗಿಡಕ್ಕೆ ನೀರನ್ನು ಉಣಿಸಬೇಕು' ಎಂದು ಅದಕ್ಕೆ ಹೆಚ್ಚಾಗುವಷ್ಟು ಕೊಟ್ಟರೂ ಆಗದು. ಅಥವಾ ಸಕಾಲದಲ್ಲಿ ಕೊಡುವುದರ ಬದಲು ಅಕಾಲದಲ್ಲಿ ಕೊಟ್ಟಾಗಲೂ ಉದ್ದಿಷ್ಟವಾದ ಫಲವನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಇದೊಂದು ಸಾಮಾನ್ಯವಾದ ಸ್ಥಾವರದ ವಿಷಯ. ಅತಿಶಯವಾದ ಜೀವಶಕ್ತಿಯು ಇರುವಂತಹ ಜಂಗಮವಾದ ಸೃಷ್ಟಿಯನ್ನು ತಿಳಿಯಬೇಕಾದರೂ ಅಷ್ಟೇ ಜವಾಬ್ದಾರಿ ಇದೆ. ಅದರಲ್ಲೂ ಮಾನವನು ಎಲ್ಲಾ ಪ್ರಾಣಿ, ಪಶು, ಪಕ್ಷಿಗಳಿಗಿಂತಲೂ ಶ್ರೇಷ್ಠವಾದ ಸೃಷ್ಟಿ. ಏಕೆಂದರೆ ಮಾನವರೂಪದಲ್ಲಿ ಮಾತ್ರ ಭಗವಂತನನ್ನು ಕಾಣಲು ಸಾಧ್ಯ ಎಂಬುದು ನಮ್ಮ ಋಷಿಮಹರ್ಷಿಗಳ ಒಕ್ಕೊರಳ ಸಂದೇಶವಾಗಿದೆ. ಹಾಗಾದರೆ ಈ ಮಾನವನ ಶಾಸ್ತ್ರವೇನು? ಎಂಬುದನ್ನು ಯಾರು ಪರಿಪೂರ್ಣವಾಗಿ ತಿಳಿಯಲು ಸಾಧ್ಯ ? ಎಂದರೆ ಶ್ರೀರಾಮನಂತಹ ಶುದ್ಧಾತ್ಮರು ಮಾತ್ರ. ಆದ್ದರಿಂದಲೇ ಶ್ರೀರಾಮನನ್ನು 'ಸರ್ವಶಾಸ್ತ್ರಾರ್ಥತತ್ತ್ವಜ್ಞ' ಎಂದು ಸಂಬೋಧಿಸಿರುವುದು. ಈ ಬಿರುದು ಶ್ರೀರಾಮನಂತಹವರಿಗೆ ಮಾತ್ರ ಸಲ್ಲುವಂತಹದ್ದು. 'ಏಕಸ್ಮಿನ್ ಜನ್ಮನಿ ಏಕಮೇವ ಶಾಸ್ತ್ರಮ್' – ಒಂದು ಜನ್ಮದಲ್ಲಿ ಒಂದೇ ಶಾಸ್ತ್ರವನ್ನು ಮಾತ್ರ ಓದಬಹುದು ಎಂಬ ಮಾತಿದೆ. ಆದರೆ ಶ್ರೀರಾಮನು ಹೇಗೆ ಎಲ್ಲಾ ಶಾಸ್ತ್ರಗಳ ತತ್ತ್ವವನ್ನು ತಿಳಿದಿದ್ದನು? ಎಂಬ ಸಂಶಯ ಬರುತ್ತದೆ. ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ ಆಗುವುದೋ; ಅದನ್ನು ತಿಳಿದರೆ ಅವನನ್ನು 'ಸರ್ವಜ್ಞ' ಎಂದೇ ಕರೆಯಲಾಗುವುದು. ಅಂದರೆ ನಮ್ಮ ಜೀವನದಲ್ಲಿ ಸರ್ವರಲ್ಲೂ, ಚೈತನ್ಯರೂಪದಲ್ಲಿ ನೆಲೆ ನಿಂತು, ಎಲ್ಲಾ ಕ್ರಿಯೆಯನ್ನು ಯಾವನು ನಿಯಂತ್ರಿಸುತ್ತಿದ್ದಾನೋ; ಅವನನ್ನೇ 'ಭಗವಂತ' ಎಂದು ಕರೆಯಲಾಗುತ್ತದೆ. ಶ್ರೀರಾಮನು ಭೌತಿಕವಾಗಿ ಮಾನವನಂತೆ ಕಂಡರೂ; ಸೂಕ್ಷ್ಮ, ಇನ್ನೂ ಸೂಕ್ಷ್ಮವಾಗಿ ನೋಡಿದಾಗ ಅವನು ಸಾಕ್ಷಾತ್ ಪರಬ್ರಹ್ಮರೂಪ. ಹಾಗಾಗಿ ಪರಬ್ರಹ್ಮ ತಾನೆ ಎಲ್ಲವನ್ನೂ ತಿಳಿದಿರಲು ಸಾಧ್ಯ! ತನ್ನನ್ನು ತಾನು ತಿಳಿದವನು ಮಾತ್ರ ತಾನೇ ಎಲ್ಲವನ್ನೂ ತಿಳಿಯಲು ಸಾಧ್ಯ! ಈ ನೇರದಲ್ಲಿ ಶ್ರೀರಾಮನು ಭಗವಂತನ ಅವತಾರರೂಪನಾಗಿ ಸರ್ವಶಾಸ್ತ್ರಗಳ ಮರ್ಮವನ್ನು ಅರಿತಿದ್ದಾನೆ ಎಂದು ಹೇಳಲು ಸಾಧ್ಯ.

ಸೂಚನೆ : 18/7/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.