Saturday, July 24, 2021

ಯೋಗತಾರಾವಳಿ - 15 ಸಾವಲ್ಲದ ಸಾವು (Yogataravali - 15 Savallada Savu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)
ಯೋಗತಾರಾವಳೀ (ಶ್ಲೋಕ ೧೫)

ಅಶೇಷದೃಶ್ಯೋಜ್ಝಿತ

 ಜೀವನ-ಚಿತ್ರ-ಪಟ

ಧ್ಯಾನಕ್ಕೆ ಪ್ರಶಸ್ತವೆಂದು ಶುಭಾಶ್ರಯವಾಗಿ ಒಂದು ದೃಶ್ಯವನ್ನು ಗುರುವು ಶಿಷ್ಯನಿಗೆ ಕೊಡುವುದುಂಟು. ದೃಶ್ಯವೆಂದರೆ ಯಾವುದೋ ಸೂರ್ಯೋದಯದ ಚಿತ್ರವೆಂದೋ ಸರೋವರದ ದೃಶ್ಯವೆಂದೋ ಆಗಿರಬೇಕಿಲ್ಲ. ನಿರ್ದಿಷ್ಟ-ದೇವತಾ-ಮೂರ್ತಿಯನ್ನೋ ಮಂತ್ರವನ್ನೋ ಧ್ಯಾನಕ್ಕೆ ಪೋಷಕವೆಂದು ಕೊಟ್ಟಿರಬಹುದು.

ಹಾಗೆ ನೋಡಿದರೆ ಜಗತ್ತೆಲ್ಲವೂ ದೃಶ್ಯವೇ. ನಾಟಕಗಳಲ್ಲಿ ಹೇಗೋ ಹಾಗೆ ನಮ್ಮ ಜೀವನದ-ನಾಟಕದ ದೃಶ್ಯಾವಳಿಗಳು ಒಂದಾದ ಮೇಲೊಂದು ನಮ್ಮ ಮುಂದೆ ಬಂದು ಹೋಗುತ್ತಲೇ ಇರುತ್ತವೆ - ಕಣ್ಣು ಮುಚ್ಚಿ ಕುಳಿತಾಗ! ಇವು  ನಿಂತುಹೋದಾಗ ನಮ್ಮ ಮನಸ್ಸೂ ನಿಲ್ಲುವುದೆಂದು ಕೆಲವೊಮ್ಮೆ ತೋರುವುದುಂಟು. ಆದರೆ ಅವೆಂತು ನಿಂತಾವು? ಹೊರಗಣ ಘಟನಾ-ಪರಂಪರೆಗಳು ನಮ್ಮ ಮೇಲೆ ಅಪ್ಪಳಿಸುತ್ತಲೇ ಇರುತ್ತವೆ.

"ಅಲೆಗಳು ಅಷ್ಟಷ್ಟಿರಲು ಈಜು ಕಲಿಯಲಾಗದು; ಅಲೆ ನಿಲ್ಲಲಿ, ನೀರಿಗಿಳಿಯುವೆ" - ಎಂದುಕೊಂಡರೆ ಹೇಗೋ ಹಾಗೆಯೇ ಇವೂ. ಅವುಗಳು ಶಾಂತವಾಗಲೆಂದು ಕಾಯುವುದಾದರೆ "ಮದುವೆಯಾಗದ ಹೊರತು ಹುಚ್ಚು ಬಿಡದು, ಹುಚ್ಚು ಬಿಡದ ಹೊರತು ಮದುವೆಯಾಗದು" ಎನ್ನುವ ಪರಿಯಾಗುವುದು.

ಹೀಗಾಗಿ ನಾವು ಪ್ರಪಂಚವನ್ನು "ತೊರೆದುಹೋಗೋಣ – ಕೆಲಹೊತ್ತಾದರೂ" - ಎಂದುಕೊಳ್ಳುವುದೂ ಸುಲಭವೇನಲ್ಲ. ಪ್ರಪಂಚವೇ ನಮ್ಮನ್ನು ತೊರೆಯುವಂತಾಗಬೇಕು! ಒಂದರ್ಥದಲ್ಲಿ ನಿದ್ರೆಯಲ್ಲಿ ಇದಾಗುತ್ತದೆ. ಎಲ್ಲವನ್ನೂ ಒದರಿಕೊಂಡು ನಿದ್ದೆಮಾಡುತ್ತೇವೆ. ದಣಿವೋ, ಕಣ್ಣುರಿಯೋ - ಇಂದ್ರಿಯದ್ವಾರಗಳನ್ನು ಮುಚ್ಚಿ ಹೊರಪ್ರಪಂಚಕ್ಕೆ ಬಾಗಿಲು ಹಾಕಿಬಿಡುತ್ತದೆ.

ನಿದ್ದೆಗೆ ಮುಂಚಿನ ಅಳು!

ಹೀಗೆ ನಿದ್ರೆ "ಕವಿಯುವಂತೆ" ಧ್ಯಾನವೂ "ಕವಿಯಬಾರದೆ"? - ಎಂದು ಹಂಬಲಿಸುವಂತಾಗುತ್ತದೆ. ನಿದ್ರೆ ಮಾಡುವಾಗ ಮಕ್ಕಳು ಅಳುವುದೇಕೆ? ಇದಕ್ಕೆ ಕಾರಣವನ್ನು ಶ್ರೀರಂಗಮಹಾಗುರುಗಳು ಸೂಚಿಸಿದ್ದರು: ತಮಗೆ ಪರಿಚಿತವೂ ಇಷ್ಟವೂ ಆದ ವಸ್ತುಗಳನ್ನೆಲ್ಲ ಬಿಟ್ಟುಹೋಗಬೇಕಾಗುತ್ತಿರುವುದೇ ಮಗುವಿನ ಅಳುವಿಗೆ ಕಾರಣ! ಈ ಆಟಿಕೆಗಳು ಕೊಡುವ ಸುಖಕ್ಕಿಂತ ಹೆಚ್ಚಿನದೆಡೆಗೆ ಹೋಗುತ್ತಿದ್ದೇನೆಂಬ ಭ್ರಾಂತಿಯಿದ್ದಿದ್ದರಾದರೂ ಅಳುವು ಕಡಿಮೆಯಾಗುತ್ತಿತ್ತೇನೋ? ಅದಿಲ್ಲವಾಗಿಯೇ ಅಳು! ಬಿಟ್ಟಿರಲಾರೆ – ಎಂಬ ಅಳು!

ಆದರಿದೋ ರಾಜಯೋಗದಲ್ಲಿ ನೆಲೆಕಂಡವರಿಗೆ ಜಗತ್ತನ್ನು "ಬಿಟ್ಟುಹೋಗುವ" ಕ್ಲೇಶವಿಲ್ಲ. ದೃಶ್ಯ-ಜಗತ್ತೇ ಮರೆಯಾಗುವುದು, ತಾನೇ; ಭಾಗಶಃ ಅಲ್ಲ, ಪೂರ್ಣವಾಗಿ, ಅಶೇಷವಾಗಿ. ಜಗತ್ತಿನ ಆಟಗಳೆಲ್ಲವೂ - ಓಡಾಟ ಒಡನಾಟಗಳ ಸ್ಮೃತಿಗಳು ಸಹ - ಮುಗಿಯುತ್ತವೆ. ರೂಪಪ್ರಪಂಚ- ದೃಶ್ಯಪ್ರಪಂಚಗಳು ಮಾತ್ರವಲ್ಲದೆ ಶಬ್ದ-ಸ್ಪರ್ಶ-ರಸ-ಗಂಧಗಳ ಪ್ರಪಂಚವೆಲ್ಲವೂ ತಾವೇ ತೊರೆದುಹೋಗುವುದು. ಆಗೊಂದು ಅಂತರ್ಮುಖ-ಸ್ಥಿತಿಯೂ ಲಭಿಸುವುದು. ಆ ಸ್ಥಿತಿಯಲ್ಲಿ ಪ್ರಪಂಚದ ಬಾಧೆಯಿರದು.

ಇದೂ ಅಲ್ಲ- ಅದೂ ಅಲ್ಲ !

ಓಹೋ! ಹಾಗಾದರೆ ಅದು ನಿದ್ದೆಯೋ? - ಎಂದರೆ ನಿದ್ದೆಯಲ್ಲ. ಏಕೆ? ನಿದ್ದೆಹೊಡೆಯುತ್ತಿರುವವನು ಬಿದ್ದುಗೊಂಡಿರುತ್ತಾನೆ. ನಿದ್ದೆ ಹತ್ತಿದವನ ಮಾಂಸಖಂಡಗಳು ಶಿಥಿಲವಾಗಿಬಿಟ್ಟಿರುತ್ತವೆ: ಕೈಯನ್ನು ಎತ್ತಿ ಬಿಟ್ಟರೆ ಅದು ಧೊಪ್ಪನೆ ಬಿದ್ದೀತು. ನಿದ್ದೆ ಬಂದವನು  ಕುಳಿತಿರಲೂ ಆರ. ಕುಳಿತಿದ್ದಾಗಲೇ ನಿದ್ದೆ ಹತ್ತಿದ್ದರೋ ತಲೆ ತೂಗಾಡುವುದು, ತೂರಾಡುವುದು.

ರಾಜ-ಯೋಗದಲ್ಲಿ ನೆಲೆಗೊಂಡವನು ಹಾಗಲ್ಲ. ನೇರಾಗಿ ಕುಳಿತಿರುತ್ತಾನೆ; ತ್ರಿ-ಬಂಧಗಳ ಕಾರಣ ಅಂಗ-ಶೈಥಿಲ್ಯವಿರುವುದಿಲ್ಲ. ನೆಟ್ಟಗೆ ಕುಳಿತಿದ್ದಾನಲ್ಲಾ, ಈತನ ಸ್ಥಿತಿಯು ಎಚ್ಚರವೇ ಇರಬೇಕೆಂದುಕೊಂಡರೆ ಅದು ಎಚ್ಚರವೂ ಅಲ್ಲ! ಏಕೆ? ಎಚ್ಚರವಾಗಿರುವವನಿಗೆ ಸುತ್ತಲ ಪ್ರಪಂಚದ ಅನುಭವವಾಗುತ್ತಿರುತ್ತದೆ; ಎಚ್ಚರವಾಗಿರುವ ವ್ಯಕ್ತಿಯ ಯಾವ ಇಂದ್ರಿಯವೂ 'ರಜೆ' ತೆಗೆದುಕೊಳ್ಳುವುದಿಲ್ಲ! ಆದರೆ ರಾಜಯೋಗದ ಸ್ಥಿತಿಯಲ್ಲಿರುವಷ್ಟು ಹೊತ್ತೂ ಎಲ್ಲ ಇಂದ್ರಿಯಗಳೂ ಬೀಗಹಾಕಿಕೊಂಡು ಒಳಸೇರಿರುತ್ತವೆ! ದೃಶ್ಯವೇ ಇಲ್ಲದ ದೃಕ್ ಉಳಿದಿದೆ: ನಿರಂಜನ-ಸಾಕ್ಷಿ-ಭಾವವಾಗಿದೆ!

ಕಣ್ಣು ಮುಚ್ಚಿದೆ, ಕಿವಿ ಕೇಳಿಸದು, ಉಸಿರಾಟವೂ ಗೊತ್ತಾಗುತ್ತಿಲ್ಲ - ಎಂಬೀ ಕಾರಣಗಳಿಂದಾಗಿ 'ಇದೇನು ಮರಣವೋ?' ಎಂಬ ಪ್ರಶ್ನೆಯೇ? ಕೆಲಕಾಲಾನಂತರ ಎದ್ದು ಉಳಿದವರಂತೆಯೇ ವ್ಯವಹಾರವನ್ನು ಮಾಡುವರಾದ್ದರಿಂದ ಅವರನ್ನು ಸತ್ತಿದ್ದಾರೆನ್ನಲಾದೀತೇ?

ಅನುಭವದ ಅಚ್ಚುಮೆಚ್ಚು

ಶ್ರೀರಂಗಮಹಾಗುರುಗಳು ಬಹುವಾಗಿ ಮೆಚ್ಚಿದ ಶ್ಲೋಕವಿದು. ಬರೀ ಮೆಚ್ಚುವುದೇನು? ತಮ್ಮ ನಿತ್ಯಗಟ್ಟಲೆ ಜೀವನದಲ್ಲಿ ಇಂತಹ ಉತ್ತುಂಗ-ಸ್ಥಿತಿಯಲ್ಲಿ ಹಲವೊಮ್ಮೆ ಇದ್ದು ಬರುತ್ತಿದ್ದರು: ಸಂಕಲ್ಪಿಸಿದಾಗಲೆಲ್ಲ! ಬರೀ ಶ್ಲೋಕವಲ್ಲ, ಈ ತಂಪಿನ ಅನುಭವವೇ ಅವರಿಗೆ ಅಚ್ಚುಮೆಚ್ಚಿನದಾಗಿತ್ತು! 

ಯೋಗಿ-ರಾಜರ ರಾಜ-ಯೋಗದ ಅನುಭವ-ನಿರೂಪಣೆಗಳು ಅನ್ಯಾದೃಶವೇ ಸರಿ!

ಅಶೇಷ-ದೃಶ್ಯೋಜ್ಝಿತ-ದೃಙ್ಮಯಾನಾಂ

   ಅವಸ್ಥಿತಾನಾಮ್ ಇಹ ರಾಜ-ಯೋಗೇ |

ನ ಜಾಗರೋ, ನೈವ ಸುಷುಪ್ತಿ-ಭಾವಃ,

   ನ ಜೀವಿತಂ, ನೋ ಮರಣಂ - ವಿಚಿತ್ರಮ್ !||೧೫||

ಸೂಚನೆ : 24/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.