Saturday, July 24, 2021

ಷೋಡಶೋಪಚಾರ - 10 ವಸ್ತ್ರ(Shodashopachaara - 10 Vastra)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಷೋಡಶೋಪಚಾರಗಳಲ್ಲಿ ಏಳನೆಯ ಉಪಚಾರ, ವಸ್ತ್ರ ಸಮರ್ಪಣೆ. ಭಗವಂತನನ್ನು ದಿಗಂಬರ, ಸರ್ವವ್ಯಾಪಕ, ದಿಗ್ವಾಸ ಎಂದೆಲ್ಲಾ ಹೇಳುತ್ತೇವೆ. ಇಂತಹ ಭಗವಂತನಿಗೆ ವಸ್ತ್ರೋಪಚಾರವನ್ನು ಸಲ್ಲಿಸುವುದು ಹೇಗೆ ಸಾಧ್ಯ? ಅಥವಾ ಒಂದರ್ಥದಲ್ಲಿ ಅಸಾಧ್ಯ. ಅವನನ್ನು ಆಚ್ಛಾದಿಸಲು ವಸ್ತ್ರವನ್ನು ಸಮರ್ಪಿಸುವುದು ಎಂದರೇನು? ನಿಜವಾಗಲೂ ಅವನಿಗೆ ವಸ್ತ್ರದ ಅವಶ್ಯಕತೆ ಇಲ್ಲ. ಅವನು ಇಡೀ ಪ್ರಪಂಚವನ್ನೇ ವ್ಯಾಪಿಸಿರುವ ಬ್ರಹ್ಮಾದಿ ಸ್ಥಾವರಪರ್ಯಂತ ಸಕಲದಲ್ಲೂ ನಿಷ್ಕಲನಾಗಿ ಇರುವಾತ. ಆದರೂ ನಾವು ಆರಾಧಿಸುವ ಸಲುವಾಗಿ ನಿಷ್ಕಲನಾದ ಭಗವಂತನನ್ನು ಸಕಲನನ್ನಾಗಿಸುತ್ತೇವೆ. ಆಗ ತಾನೆ ಪೂಜೆ! ಆಗ ತಾನೆ ವಸ್ತ್ರೋಪಚಾರ!. ಭಗವಂತನ ಪೂಜೆಗಾಗಿ ನಾವು ಆಯ್ದುಕೊಂಡಿರುವ ವಿಗ್ರಹಕ್ಕೆ ಇವೆಲ್ಲದರ ಸಲ್ಲಿಕೆ. ಇದರಿಂದ ನಮ್ಮ ಮನಸ್ಸಿಗೆ ಒಂದು ಬಗೆಯ ತೃಪ್ತಿ. ನಾವು ಯಾವ ದೇವತೆಯ ಪ್ರಸನ್ನತೆಗಾಗಿ ಪೂಜಿಸುತ್ತೇವೋ ಆ ದೇವತೆಯ ಪ್ರೀತಿಕರವಾದ ವಸ್ತ್ರವನ್ನೇ ಸಮರ್ಪಿಸಬೇಕು. 'ಪೀತಕೌಶೇಯವಸನಂ ವಿಷ್ಣುಪ್ರೀತ್ಯೈ ಪ್ರಕೀರ್ತಿತಮ್ | ರಕ್ತಂ ಶಕ್ತ್ಯರ್ಕವಿಘ್ನಾನಾಂ ಶಿವಸ್ಯ ಚ ಸಿತಂ ಪ್ರಿಯಮ್' ಎಂಬುದಾಗಿ ಹಳದಿ ವಸ್ತ್ರ ವಿಷ್ಣುವಿಗೆ, ಕೆಂಪು ವಸ್ತ್ರ ದುರ್ಗೆ, ಗಣಪತಿ, ಸೂರ್ಯರಿಗೆ ಮತ್ತು ಶಿವನಿಗೆ ಬಿಳಿಯ ವಸ್ತ್ರ ಪ್ರೀತಿಕರವಾದುದು. ಈ ವಸ್ತ್ರವು ರೇಷ್ಮೆ, ನಾರು, ಹತ್ತಿ ಮುಂತಾದ ಪೂಜಾಯೋಗ್ಯವಾದ ಪದಾರ್ಥದಿಂದಲೇ ಸಿದ್ಧವಾಗಿರಬೇಕು. ಟೆರಿಲಿನ್, ನೈಲಾನ್, ಟೆರಿಕಾಟ್ ಮೊದಲಾದ ವಸ್ತ್ರಗಳು ನಿಷಿದ್ಧ. ಇವುಗಳನ್ನು ದೇವರಿಗೆ ಸಮರ್ಪಿಸಲೇಬಾರದು. ಒಮ್ಮೆ ಶ್ರೀರಂಗಮಹಾಗುರುಗಳಲ್ಲಿ ಅವರ ಶಿಷ್ಯರೊಬ್ಬರು ಒಂದು ಪ್ರಶ್ನೆಯನ್ನು ಕೇಳಿದರು – "ಟೆರಿಲೀನ್ ಬಟ್ಟೆಗೆ ಐರನ್ ಚೆನ್ನಾಗಿ ನಿಲ್ಲುತ್ತದೆ, ಆದ್ದರಿಂದಟೆರಿಲೀನ್ ಒಳ್ಳೆಯದಲ್ಲವೇ?" ಎಂದು ಕೇಳಿದಾಗ ಅವರು- "ಹೌದಪ್ಪ ಐರನ್ ಚೆನ್ನಾಗಿ ನಿಲ್ಲುತ್ತದೆ, ಆದರೆ ಗೋಲ್ಡ್ ಹೋಗುತ್ತಪ್ಪ" ಎಂದು (ಭಗವತ್ಪ್ರಾಪ್ತಿಗಿರುವ ಸುವರ್ಣಾವಕಾಶವನ್ನೇ ಕಳೆದುಕೊಳ್ಳುತ್ತೀರಿ ಎಂಬರ್ಥದಲ್ಲಿ)ಹೇಳಿದ್ದರು. ಇವುಗಳು ನೋಡುವುದಕ್ಕೆ ಚೆಂದ ಕಾಣಬಹುದು. ಆದರೆ ಪೂಜೆಗೆ ಬೇಕಾದ ಮನೋಭೂಮಿಕೆಗೆ ತೊಡಕನ್ನುಂಟುಮಾಡುತ್ತದೆ. ಅದೇ ಪೂಜಾಯೋಗ್ಯವಾದ ವಸ್ತ್ರಗಳು ದೇವತಾಕೇಂದ್ರಗಳನ್ನು ಪ್ರಬೋಧಗೊಳಿಸಲು ಸಹಾಯ ಮಾಡುತ್ತವೆ. ಇದಕ್ಕೊಂದು ವಿಜ್ಞಾನವಿದೆ. ನಮ್ಮ ದೇಹದಲ್ಲಿ ದೇವತಾಸ್ಥಾನವನ್ನು ಪ್ರತೀಕಿಸುವ ನಾಡೀಮಾರ್ಗಗಳಿವೆ. ನಾಡೀ ಎಂದರೆ ದೇವತೆಗಳು ಸಂಚರಿಸುವ ಮಾರ್ಗ. ಅಂದರೆ ಆಯಾ ದೇವತೆಗಳು ಆ ನಾಡಿಯಲ್ಲಿ ಸಂಚರಿಸಬೇಕಾದರೆ ಆ ನಾಡಿಗೆ ಪೋಷಕವಾದ, ಅದಕ್ಕೆ ಯುಕ್ತವಾದ ವರ್ಣದಿಂದ ಕೂಡಿದ ವಸ್ತ್ರವನ್ನು ಭಗವಂತನ ಆಚ್ಛಾದನವಾಗಿ ಬಳಸಬೇಕು. ಆಗ ಮಾತ್ರ ಆ ದೇವತೆಯ ಪ್ರಸನ್ನತೆ ಸಾಧ್ಯ  

ಸೂಚನೆ : 24/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.