Saturday, July 10, 2021

ಯೋಗತಾರಾವಳಿ - 13 ಮಹಾಮತಿಯ ಸಾಧನೆ (Yogataravali - 13 Mahamatiya Sadhane)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



(ಯೋಗತಾರಾವಳೀ (ಶ್ಲೋಕ ೧೩)

 ನಿರಂಕುಶಾನಾಂ

ಉಸಿರೇ ಎಲ್ಲಾ!

ಉಸಿರಾಟವೇ ಬದುಕು. ಉಸಿರಾಟವು ನಿಂತಿತೆಂದರೆ ಬಾಳೂ ಮುಗಿಯಿತೆಂದೇ. ಆದರೆ, ಜೀವನದ ಆದ್ಯಂತವಾಗಿಯೂ ನಾವು ಮಾಡು(ತ್ತಿರು)ವ ಉಸಿರಾಟವು ಒಂದರ್ಥದಲ್ಲಿ ದಿಕ್ಕೆಟ್ಟಿರುವುದೇ!

ಇದೇನು? ಉಸಿರಾಟಕ್ಕೂ ವಿಧಿ-ನಿಷೇಧಗಳೇ?! - ಎಂದು ಕೇಳುವವರಿರಬಹುದು. ನಿಶ್ಚಯವಾಗಿಯೂ ಹೌದು. ಉಸಿರಾಟವೇ ನಮ್ಮ ಮತಿ ಮತ್ತು ಗತಿ. ನಮ್ಮ ಮತಿಯು ಹೇಗೆ ಕೆಲಸಮಾಡಬಲ್ಲುದೆಂಬುದನ್ನು ಉಸಿರಾಟವು ಸೂಚಿಸಬಹುದು. ಸೂಚಿಸಬಹುದೇನು? - ತೀರ್ಮಾನಿಸುವುದು! ಇರುವಾಗ ಜೀವನ ಗತಿ, ಸತ್ತಾಗ/ಸಾಯುವಾಗಿನ ಜೀವದ ಗತಿಗಳನ್ನೂ ಉಸಿರಾಟವೇ ಸೂಚಿಸುವುದು/ನಿರ್ವಹಿಸುವುದು.

ನಮ್ಮ ಪೂರ್ವ-ಸಂಸ್ಕಾರಗಳು ನಮ್ಮ ಉಸಿರಾಟವನ್ನು ತಮ್ಮ ಪಾಡಿಗೆ ಸದಾ ನಿಯಂತ್ರಿಸುತ್ತಿರುವುವು. ನಾವು ಮಾಡುತ್ತಿರುವ ನಾನಾ ಪ್ರಕಾರದ ಉಸಿರಾಟಗಳಲ್ಲಿ ಕೆಲವೊಮ್ಮೆ ಯುಕ್ತವಾದ ಉಸಿರಾಟವುಂಟಾಗುವುದು. ಉಸಿರಾಟದಿಂದಲೇ ನಮ್ಮ ಜೀವನದ ಮುಂದಿನ ನಡೆಯನ್ನು ರೂಪಿಸಿಕೊಳ್ಳಬಹುದು - ಎಂಬುದೂ, ಅದು ಹೇಗೆಂಬುದೂ, ಆಗಲೇ ಹೊಳೆಯುವ ಸಾಧ್ಯತೆಯಿದೆ. ಋಷಿಗಳಿಗೆ ಮಾತ್ರ ಅದು ಸಹಜವಾಗಿಯೇ ಸ್ಫುರಿಸುತ್ತಿತ್ತು.

ನಮ್ಮ ಉಚ್ಛ್ವಾಸ-ನಿಶ್ವಾಸಗಳಿಂದಲೇ ನಮ್ಮ ಜೀವನವು ರೂಪುಗೊಳ್ಳಬಹುದೆಂದು ಯಾರಾದರೂ ಹೇಳಿದರೂ ವಿಶ್ವಾಸವೇ ಉಂಟಾಗದು: ಒಂದು ಬಗೆಯ ಉಸಿರಾಟವಿದ್ದಾಗ! ಆಗ ಇದಾವುದೋ ಪೊಳ್ಳುವಾದವೆನಿಸಿ, ಇದನ್ನು ತಳ್ಳಿಹಾಕಬೇಕೆನ್ನಿಸುವುದು!

ಸೂಜಿಗೆ ದಾರ ಪೋಣಿಸುವಾಗಿನ ನಮ್ಮ ಉಸಿರಾಟವೇ ಬೇರೆಯಲ್ಲವೇ? ಕೋಪವು ಉಕ್ಕೇರಿದಾಗಿನ ಬಗೆಯೇ ಬೇರೆಯಲ್ಲವೇ? ಹಾಗೆಯೇ, ತೀವ್ರ ಆತಂಕವಿದ್ದಾಗ ಅದಾಡುವ ಬಗೆಯೇ ಬೇರೆ. ಶಾಂತವಾಗಿರುವಾಗ/ಶಾಂತವಾಗಿರಲು ಬೇಕಾದ - ಬಗೆಯೂ ಬೇರೆ.

ಆದರೆ ಸಾಧಾರಣವಾಗಿನ ನಮ್ಮ ಉಸಿರಾಟದ ಬಗೆಗೆ ನಮಗೆ ಅಂಕೆಯಿಲ್ಲ, ಅಂಕುಶವಿಲ್ಲ. ಹೀಗೆ ನಿರಂಕುಶವಾದ ಉಸಿರಾಟವನ್ನು ಹತೋಟಿಗೆ ತೆಗೆದುಕೊಳ್ಳಬೇಕು, ನಿರೋಧಿಸಬೇಕು. ನಿರೋಧಿಸುವುದೆಂದರೆ ಸುಮ್ಮನೆ ಅಡ್ಡಹಾಕುವುದಲ್ಲ. ಹೇಗೆ ಹೇಗೋ ಅದಾಡದೆ, ಹೇಗಾಡಿದರೆ ಯುಕ್ತವೋ ಹಾಗೆಯೇ ಆಡುವಂತೆ ಮಾಡುವುದು. ಉಸಿರು ಹೇಗಿದ್ದರೆ ನಮಗೆ ಹಿತವೋ ಹಾಗೆಯೇ ಇಟ್ಟುಕೊಳ್ಳುವುದು. ಪ್ರಾಣಾಯಾಮದ ಶಿಕ್ಷಣವೇ ಅದಕ್ಕೊಂದು ದಿಕ್ಕನ್ನು ತೋರಿಗೊಡುವುದು.

ಕೇವಲಕುಂಭಕ-ಪ್ರಾಣಾಯಾಮದ ಅಭ್ಯಾಸವು ರೂಢವಾಗುತ್ತಾ ಹೋದಂತೆ ನಮ್ಮ ಸಾಧಾರಣ ಉಸಿರಾಟದಲ್ಲಿ ಸಹ ಬದಲಾವಣೆಗಳು ಉಂಟಾಗಲಾರಂಭಿಸುವುದು. ಸನ್ಮಾರ್ಗದತ್ತ ಮಾರ್ಪಾಡಾಗಲು ಹೀಗೊಂದು ಏರ್ಪಾಡು ಅವಶ್ಯ. ಸಾಧನೆಯ ಹಾದಿಯಲ್ಲಿ ಕ್ರಮಿಸುತ್ತಿರುವವನಿಗೆ ಈ ಕೇವಲ-ಕುಂಭಕದ ಪರಿಣಾಮವು ತನ್ನ ಮೇಲೆ ಆಗುತ್ತಿರುವುದು ಗೋಚರಕ್ಕೆ ಬರದಿರದು. ಇಂದ್ರಿಯಗಳ ಮೇಲೆ ಸಹ ಇದರ ಪ್ರಭಾವವುಂಟು.

 ಒಂದು ಪ್ರಶ್ನೆ – ನಾಲ್ಕು ಉತ್ತರಗಳು

ಇಂದ್ರಿಯಗಳೆಷ್ಟು? - ಎಂದು ಕೇಳಿದರೆ, ಐದೆನ್ನುತ್ತೇವೆ: ಪಂಚಜ್ಞಾನೇಂದ್ರಿಯಗಳು. ಆರು ಎಂದೂ ಎನ್ನಬಹುದು: ಮನಸ್ಸನ್ನೂ ಸೇರಿಸಿಕೊಂಡು (ಗೀತೆಯೇ ಹೇಳುವುದಲ್ಲವೆ? ಮನಃಷಷ್ಠಾನೀಂದ್ರಿಯಾಣಿ - ಎಂದು?). ಹತ್ತೆಂಬ ಉತ್ತರವೂ ತಪ್ಪಲ್ಲ: ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು. ಹನ್ನೊಂದೆಂದೂ ಹೇಳಬಹುದು: ಈ ಹತ್ತಕ್ಕೆ ಮನಸ್ಸನ್ನೂ ಸೇರಿಸಿಕೊಂಡು. ಪ್ರಕೃತ, ಆರು.

ನಾವು ನಿದ್ರಾವಸ್ಥೆಯಲ್ಲಿರುವಾಗ ಯಾವ ಕರ್ಮೇಂದ್ರಿಯಗಳ ಚೇಷ್ಟೆಗಳೂ ಇರುವುದಿಲ್ಲವಷ್ಟೆ? ಜ್ಞಾನೇಂದ್ರಿಯಗಳೂ 'ಬಂದ್' ಆಚರಿಸುತ್ತಿರುತ್ತವೆಯೆಂದು ಹೇಳಬಹುದು. ಆದರೂ ಪೂರ್ಣವಾದ 'ಬಂದ್' ಅಲ್ಲ. ಕಾಣುವುದು ಕೇಳುವುದು ಮುಂತಾದುವು ಕನಸಿನಲ್ಲೂ ಉಂಟಲ್ಲವೆ? ಅಂತರಿಂದ್ರಿಯಗಳಾಗಿ ಅವು ಕೆಲಸ ಮಾಡುತ್ತಿರುತ್ತವೆ. ಬಾಹ್ಯೇಂದ್ರಿಯಗಳಾಗಿ ಅಲ್ಲ.

ನಿದ್ದೆಯಲ್ಲೂ ಮನಸ್ಸು ಮಾತ್ರ ಕೆಲಸ ಮಾಡುತ್ತಲೇ ಇರುವುದು: ಉಸಿರಾಟವು ಮನಸ್ಸಿನ ಕೆಲಸವೇ! ಆದರೆ ನಿದ್ರೆಯಲ್ಲಿ ಜಾಡ್ಯ ತುಂಬಿರುವುದು. ಅಧ್ಯಾತ್ಮ-ಸಾಧನೆಯ ಪಥವಾದರೋ ಸದಾ ಎಚ್ಚರದಿಂದಲೇ ಸಾಧ್ಯವಾಗುವಂತಹುದು.

ನಿದ್ರಾವಸ್ಥೆಯಲ್ಲಲ್ಲ ಕೇವಲಕುಂಭಕವೆಂಬುದು ಘಟಿಸುವುದು! ಎಚ್ಚರವಿದ್ದೂ ಇಂದ್ರಿಯ-ವೃತ್ತಿಗಳು ಇಲ್ಲವಾಗಿರುವುದು ಕೇವಲ ಈ ಕೇವಲಕುಂಭಕಾವಸ್ಥೆಯಲ್ಲೇ. ಆಗ ಆಗುವುದೇ ಮರುಲ್ಲಯ: ಮರುತ್ತಿನ ಲಯ: ಎಂದರೆ ಪ್ರಾಣವಾಯುವು ವಿಲೀನಗೊಳ್ಳುವ ಸ್ಥಿತಿ.

ಇದಾಗುವುದು ಎಲ್ಲರಿಗೂ ಅಲ್ಲ. ಇದು ಮಹಾ-ಮೇಧಾವಿಗಳಿಗಷ್ಟೆ ಸಾಧ್ಯ! ಕೇವಲ-ಕುಂಭಕವನ್ನು ಸಾಧಿಸಿದವರನ್ನೇ ಮಹಾ-ಮತಿ - ಎಂದು ಇಲ್ಲಿ ಕರೆದಿರುವುದು! ಹೀಗೆ ಮಹಾ-ಧೀ-ಸಂಪನ್ನರಿಗಾಗುವ ಕೇವಲ-ಕುಂಭಕದ ಲಾಭದ ನಡೆಯನ್ನು ಈ ಶ್ಲೋಕವು ಪ್ರತಿಪಾದಿಸಿದೆ.

ನಿರಂಕುಶಾನಾಂ ಶ್ವಸನೋದ್ಗಮನಾಂ

   ನಿರೋಧನೈಃ ಕೇವಲಕುಂಭಕಾಽಽಖ್ಯೈಃ |

ಉದೇತಿ ಸರ್ವೇಂದ್ರಿಯ-ವೃತ್ತಿ-ಶೂನ್ಯಃ

   ಮರುಲ್ಲಯಃ ಕೋಽಪಿ ಮಹಾಮತೀನಾಮ್ ||೧೩||

ಸೂಚನೆ : 7/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.