Saturday, July 3, 2021

ಜೀವನದ ಗುರಿ (Jivanada Guri)

 ಪ್ರಸಾದ್ ಸುಂದರ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)

 
ಮೀನಾಕ್ಷಿ ಮತ್ತು ಪದ್ಮಾಕ್ಷಿ ಆಪ್ತ ಗೆಳತಿಯರು. ಮೀನಾಕ್ಷಿ ಜೀವನೋಪಾಯಕ್ಕೆ ಮೀನು ಮಾರಿದರೆ ಪದ್ಮಾಕ್ಷಿ ಹೂವು ಮಾರುತ್ತಾಳೆ. ಒಂದು ಸಂಜೆ ಸಂತೆಯಲ್ಲಿ ತನ್ನ ಮೀನುಗಳನ್ನು ಮಾರಿ ಮನೆಗೆ ಹಿಂತಿರುಗುವಾಗ ಮೀನಾಕ್ಷಿ ತನ್ನ ಗೆಳತಿಯನ್ನು ನೋಡುತ್ತಾಳೆ. ಗೆಳತಿಯ ಒತ್ತಾಯಕ್ಕೆ ಅವಳ ಮನೆಯಲ್ಲೇ ಅಂದಿನ ರಾತ್ರಿ ಕಳೆಯಲು ಒಪ್ಪುತ್ತಾಳೆ. ರಾತ್ರಿ ಊಟ ಮಾತುಕತೆಗಳ ನಂತರ ನಿದ್ದೆ ಮಾಡಲು ಮಲಗುವ ಕೊಠಡಿಗೆ ಹೋಗುತ್ತಾರೆ. ಕೊಠಡಿಯಲ್ಲಿ ಅನೇಕ ಸುಗಂಧ ಪರಿಮಳ ಸುವಾಸನೆಯುಳ್ಳ ಹೂವು ಬುಟ್ಟಿಗಳು. ಇಂತಹ ಸುಗಂಧ ಭರಿತ ಕೊಠಡಿಯಲ್ಲಿ ತನ್ನ ಪ್ರಿಯ ಸಖಿಗೆ ಸುಖನಿದ್ರೆ ಬರುವುದೆಂಬ ನಂಬಿಕೆ ಪದ್ಮಾಕ್ಷಿಗೆ . ವಿಪರ್ಯಾಸವೆಂದರೆ ಬಹಳ ಹೊತ್ತು ಹೊರಳಾಡಿದರೂ ನಿದ್ದೆ ಬರದೇ ಮೀನಾಕ್ಷಿ ಪದ್ಮಾಕ್ಷಿಯನ್ನು ಎಬ್ಬಿಸುತ್ತಾಳೆ . ಇಂತಹ ಒಂದು ಪರಿಮಳ ಸೂಸುವ ವಾತವರಣವಿದ್ದರೂ ಹೇಗೆ ಆಕೆಗೆ ನಿದ್ದೆ ಬರುತ್ತಿಲ್ಲವೆಂದು ಪದ್ಮಾಕ್ಷಿಗೆ ಪರಮಾಶ್ಚರ್ಯ. ಹೋಗಲಿ. ನಿದ್ದೆ ಬರಲು ಏನು ಮಾಡಿದರೆ ಅನುಕೂಲವಾಗುತ್ತದೆಂದು ಕೇಳಲು, ತನ್ನ ಮೀನಿನ ಬುಟ್ಟಿಯನ್ನು ತನ್ನ ಬಳಿ ಇಟ್ಟುಕೊಳ್ಳುವುದಕ್ಕಾಗಿ ಮೀನಾಕ್ಷಿ ಕೇಳಿಕೊಳ್ಳುತ್ತಾಳೆ . ಆಗಲಿ ಎಂದು ಪದ್ಮಾಕ್ಷಿ ತಾನೇ ಹೋಗಿ ಮೀನಿನ ಬುಟ್ಟಿಯನ್ನು ತನ್ನ ಮೂಗು ಮುಚ್ಚಿಕೊಂಡು ತರುತ್ತಾಳೆ. ಮನೆಗೆ ಬಂದ ಪ್ರಿಯ ಸಖಿ ಮೀನಾಕ್ಷಿ, ಬುಟ್ಟಿಗೆ ಕೊಂಚ ನೀರನ್ನು ಚುಮುಕಿಸಿ ಆ ಮೀನಿನ ವಾಸನೆಯಲ್ಲಿಯೇ ಸಂತೋಷವಾಗಿ ಮಲಗುತ್ತಾಳೆ . ಆದರೆ ಪದ್ಮಾಕ್ಷಿಗೆ ಮೀನಿನ ವಾಸನೆಯಿಂದ ನಿದ್ದೆಯೇ ಬರದೇ ಒದ್ದಾಡುತ್ತಾಳೆ . ಕೊನೆಗೆ ಹೂವು ಬುಟ್ಟಿ ಸಮೇತ, ಪದ್ಮಾಕ್ಷಿ ಮತ್ತೊಂದು ಕೊಠಡಿಗೆ ಹೋಗಿ ಮಲಗಬೇಕಾಗುತ್ತದೆ. ಇದನ್ನೇ 'ಅವರದ್ದು ಅವರಿಗೇ' ಎಂದು ಶ್ರೀ ರಾಮಕೃಷ್ಣ ಪರಮಹಂಸರು ಹಿಂದೆಯೇ ನುಡಿದಿರುವ ಕಥೆ.

ನಮ್ಮ ನಿತ್ಯ ಜೀವನದಲ್ಲೂ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಸ್ಥಿತಿಯೂ ಒಂದು ರೀತಿಯಲ್ಲಿ ಹಾಗೆಯೇ ಇದೆ. ಇಂದ್ರಿಯ ಜೀವನಕ್ಕಿಂತ ಕೋಟಿ ಕೋಟಿ ಪಾಲು ಆನಂದ ಭರಿತ ಜೀವನವೊಂದು ಉಂಟು . ಆದರೆ ನಮಗೆ ಅದು ಬೇಡವಾಗಿದೆ . ಅದು ನಮಗೆ ಸಹಿಸುವುದಿಲ್ಲ . ಇಹ ಜೀವನವನ್ನೇ , ಇಂದ್ರಿಯ ಜೀವನವನ್ನೇ ನಾವು ಪರಮಾದ್ಭುತ ಎಂದು ಭಾವಿಸಿ ದೈವಿಕ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ತೊಡಗಿಸಿಕೊಳ್ಳಬೇಕಾದರೆ ಒದ್ದಾಡುತ್ತೇವೆ. ನಮ್ಮ ಋಷಿ ಮುನಿಗಳು ಏಕನಿಷ್ಠ ತಪಸ್ಸಿನಿಂದ ತಮ್ಮ ಅಂತರಂಗದಲ್ಲಿ ಇಂದ್ರಿಯ ಬಾಳಾಟವನ್ನೂ ಮೀರಿರುವಂತಹ ದೈವಿಕ ಹಾಗೂ ಆಧ್ಯಾತ್ಮಿಕ ಬಾಳನ್ನು ಕಂಡು ಕೋಟಿ ಕೋಟಿ ಪಾಲು ಆನಂದವನ್ನು ಅನುಭವಿಸಿದರು . ಮನುಕುಲದ ಒಳಿತಿಗಾಗಿ ತಾವು ಕಂಡನುಭವಿಸಿಸದ್ದನ್ನು ಉಣ ಬಡಿಸಲು ಸಂಸ್ಕೃತಿ, ಸಂಸ್ಕಾರ, ಹಬ್ಬ, ಹರಿದಿನ ಇತ್ಯಾದಿಯಾಗಿ ನಾನಾ ರೀತಿಯಲ್ಲಿ ನಮಗೆ ಎಟಕುವ ರೀತಿಯಲ್ಲಿ ಹಾಕಿಕೊಟ್ಟಿದ್ದಾರೆ . ಆದರೆ ಈ ಯಾವುದರಲ್ಲೂ ಇಂದ್ರಿಯ ಜೀವನವನ್ನು ಹಳಿಯಲಿಲ್ಲ . 'ಇಂದ್ರಿಯ ಸುಖ ಹಾಗೂ ಇಂದ್ರಿಯಾತೀತ ಸುಖ (ಭೋಗಮಯ ಜೀವನ ಹಾಗೂ ಯೋಗಮಯ ಜೀವನ) ಜೊತೆ ಜೊತೆಗೇ ಇರಬೇಕೆನ್ನುವುದೇ ನಮ್ಮ ಜೀವನದ ಗುರಿಯಾಗಬೇಕು' ಎಂಬ ಶ್ರೀರಂಗ ಮಹಾಗುರುವಿನ ಮಾತು ಇಲ್ಲಿ ಸ್ಮರಣೀಯ.

ಸೂಚನೆ: 2/7/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.