Saturday, July 3, 2021

ಕ್ಷಮಾಗುಣವು ಮನೋದೌರ್ಬಲ್ಯದ ಸಂಕೇತವೇ ? (Kshamaguna Manodourbalyada Sanketave ?)

ಲೇಖಕರು: ಮೈಥಿಲೀ ರಾಘವನ್
 (ಪ್ರತಿಕ್ರಿಯಿಸಿರಿ lekhana@ayvm.in)




ಸಾಮಾನ್ಯ ತಿಳಿವಳಿಕೆ 

ಸಾಮಾನ್ಯವಾಗಿ ಇತರರ ತಪ್ಪನ್ನು ಸಹಿಸಿಕೊಳ್ಳುವ ಗುಣವನ್ನು  ಕ್ಷಮೆ ಎನ್ನುತ್ತೇವೆ.  ಇತರರು ನಮಗೆ ತೊಂದರೆಯನ್ನು ಮಾಡಿದರೆ ಕೂಡಲೇ ನಮ್ಮಲ್ಲಿ ಉಂಟಾಗುವ ಪ್ರತಿಕ್ರಿಯೆ ಕೋಪ. ಅದು ಇನ್ನಷ್ಟು ಕೆರಳಿದಾಗ  ಅವರಮೇಲೆ ವಾಕ್ಪ್ರಹಾರ, ಹಸ್ತಪ್ರಹಾರಗಳೂ ಯಥಾಶಕ್ತಿ ನಡೆಯುತ್ತವೆ. ಕೆಲವರು ಕೋಪಕೆರಳಿದರೂ ಅದನ್ನು ಒಳಗೇ ಅಡಗಿಸಿಕೊಳ್ಳುವುದೂ ಉಂಟು. ಆದರೆ ಈ ರೀತಿಯ ಸಹನೆಯನ್ನು  ಕೆಲವರು ಹೇಡಿತನದ ಪ್ರದರ್ಶನವಾಗಿ ಭಾವಿಸುತ್ತಾರೆ.  

ಶಾಸ್ತ್ರಗಳ ಅಭಿಪ್ರಾಯ 

ನಮಗೆ ಇತರರಿಂದ ಮಾನಸಿಕ-ದೈಹಿಕ ಯಾವುದೇ ರೀತಿಯಾದ ದುಃಖ ಉಂಟಾದರೂ ಅವರ ಮೇಲೆ ಕೋಪಗೊಳ್ಳದೆ, ಪ್ರತಿಯಾಗಿ ಅವರಿಗೆ ಯಾವುದೇ ರೀತಿಯ ತೊಂದರೆಯನ್ನೂ ಮಾಡದೇ ಇರುವುದೇ 'ಕ್ಷಮಾ(ಕ್ಷಾಂತಿ)' ಎಂದು ಶಾಸ್ತ್ರಗಳು ಸಾರುತ್ತವೆ. ಇಂತಹ ಕ್ಷಮಾಗುಣವನ್ನು ಎಂಟು 'ಆತ್ಮಗುಣ'ಗಳಲ್ಲಿ ಒಂದಾಗಿ ಶಾಸ್ತ್ರಗಳು ಕೊಂಡಾಡುತ್ತವೆ.

"ದಯಾ ಸರ್ವಭೂತೇಷು ಕ್ಷಾಂತಿಃ ಅನಸೂಯಾ ಶೌಚಂ ಅನಾಯಾಸಃ ಮಂಗಲಂ ಅಕಾರ್ಪಣ್ಯಂ ಅಸ್ಪ್ರಹಾ ಅಷ್ಟೌ ಆತ್ಮಗುಣಾಃ"

ಆತ್ಮಭಾವಕ್ಕೆ ಏರಿದವರ, ಆತ್ಮಾನುಭವವನ್ನು ಪಡೆದವರ ಮನಸ್ಸಿನಲ್ಲಿ ತಾನಾಗಿಯೇ ಮೂಡಿಬರುವ ಗುಣಗಳೇ ಆತ್ಮಗುಣಗಳು. ಸಾಮಾನ್ಯರು ಈ ಗುಣಗಳನ್ನು ಪ್ರಯತ್ನಪೂರ್ವಕವಾಗಿ ಅಭ್ಯಾಸಮಾಡಿದಾಗ ಮನಸ್ಸನ್ನು ಶುದ್ಧಿಗೊಳಿಸಿ ಕಾಲಕ್ರಮದಲ್ಲಿ ಅವರಿಗೆ ಆತ್ಮಭಾವದ ಆರೋಹಣಕ್ಕೆ  ಪುಷ್ಟಿಯನ್ನು ನೀಡುತ್ತವೆ.

ಕ್ಷಮಾವಂತರ ಉದಾಹರಣೆಗಳು 

ಕ್ಷಮೆಗೆ ಪ್ರಥಮ ಉದಾಹರಣೆಯಾಗಿ ಭೂಮಾತೆಯನ್ನು ಕೊಂಡಾಡುತ್ತಾರೆ. ಅಸಂಖ್ಯಾತ ದುಷ್ಟರ ದುಷ್ಕೃತ್ಯಗಳೆಲ್ಲವನ್ನೂ ಸಹಿಸಿಕೊಂಡು ಅವರಿಗೆ ತನ್ನಲ್ಲಿನ ಸಂಪತ್ತನ್ನು ನೀಡುವ ಭೂಮಾತೆಯ ಕ್ಷಮೆಗೆ ಸಮಾನವೆಲ್ಲಿದೆ? 

ಶ್ರೀ ರಾಮಚಂದ್ರನ ಗುಣಗಳನ್ನು ಚಿತ್ರಿಸುವಾಗ ವಾಲ್ಮೀಕಿಮಹರ್ಷಿಯು "ಕ್ಷಮಯಾ  ಪೃಥಿವೀ ಸಮಃ" ಎಂಬ ಪ್ರಶಂಸೆಯ ಮಾತನ್ನು ಹೇಳುತ್ತಾರೆ. ಶ್ರೀ ಮದ್ರಾಮಾಯಣದ ಕಾಕಾಸುರನ ವೃತ್ತಾಂತವು ಶ್ರೀ ರಾಮನ ಈ ಗುಣವನ್ನು ಎತ್ತಿತೋರಿಸುತ್ತದೆ.  ಜಗನ್ಮಾತೆಯಾದ ಸೀತಾದೇವಿಗೆ ತಾಳಲಾರದ ನೋವನ್ನುಂಟುಮಾಡಿದ  ಕಾಕಾಸುರನ ಮೇಲೆ ರಾಮನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ರಾಮನು ತಪ್ಪಿಗೆ  ಶಿಕ್ಷೆಯನ್ನು ನೀಡಬೇಕಾದ ತನ್ನ ಕರ್ತವ್ಯವನ್ನೂ  ನೆರೆವೇರಿಸಿದ.   ಆತನು ಎಲ್ಲೆಡೆಯಲ್ಲೂ ತನಗೆ ಅಸ್ತ್ರದಿಂದ ರಕ್ಷಣೆಸಿಗದೆ ತನ್ನನ್ನೇ  ಶರಣುಹೊಕ್ಕಾಗ ದಯಾಮಯನಾಗಿ  ತನ್ನ ಅಸ್ತ್ರಕ್ಕೆ ಆತನ ಒಂದು ಕಣ್ಣನ್ನು ಮಾತ್ರ ಬಲಿಯಾಗಿಸಿ  ಪ್ರಾಣವನ್ನು ರಕ್ಷಿಸಿದ. ಘೋರವಾದ ಅಪರಾಧವನ್ನೆಸಗಿದ ಅವನಲ್ಲೂ  ಕ್ಷಮೆಯನ್ನು ತೋರಿದನು  ಆತ್ಮಗುಣಪರಿಪೂರ್ಣನಾದ  ಶ್ರೀ ರಾಮ.

ಮತ್ತೊಂದು ಪ್ರಸಂಗವೆಂದರೆ  ರಾವಣ ಸಂಹಾರದ ಶುಭಸಮಾಚಾರವನ್ನು  ಸೀತೆಗೆ ತಿಳಿಸಲು   ಶ್ರೀ ರಾಮನು ಹನುಮಂತನನ್ನು ಕಳಿಸುತ್ತಾನೆ.  ಶುಭ ಸಮಾಚಾರವನ್ನು ಕೇಳಿ ಅತಿಪ್ರಸನ್ನಳಾದ ಸೀತೆಯು ಹನುಮಂತನ ಉಪಕಾರಕ್ಕಾಗಿ ಯಾವ ಬಹುಮಾನವನ್ನು ಕೊಟ್ಟರೂ ಸಾಲದು ಎಂಬುದಾಗಿ  ಬಹಳವಾಗಿ ಮೆಚ್ಚಿಕೊಂಡಳು. ಆಗ ಹನುಮಂತನು ಹೇಳುತ್ತಾನೆ "ತಮ್ಮ ಪ್ರೀತಿಯೇ ನನಗೆ ದೊಡ್ಡ ಬಹುಮಾನವಾಗಿದೆ. ಈ ರಾಕ್ಷಸಿಯರು ತಾವು ರಾಮನಿಂದ ಬೇರೆಯಾಗಿ ಅತ್ಯಂತ ದುಃಖವನ್ನು ಅನುಭವಿಸುತ್ತಿದ್ದಾಗ ತಮ್ಮನ್ನು ಬೆದರಿಸಿ, ಗೋಳಾಡಿಸಿ, ಕೊಲ್ಲುತ್ತೇವೆ  ಎಂದೆಲ್ಲಾ  ಅನೇಕ ರೀತಿಯಲ್ಲಿ ಹೆದರಿಸಿದ್ದಾರೆ. ಆದ್ದರಿಂದ ಈಗ ಅವರನ್ನು    ಹೊಡೆದು, ಬಡಿದು, ಪರಚಿ, ಗುದ್ದಿ ಹಿಂಸಿಸಿ ಕೊಲ್ಲುತ್ತೇನೆ. ತಾವು ಅನುಮತಿ ನೀಡಬೇಕು" ಎಂದು ಪ್ರಾರ್ಥಿಸುತ್ತಾನೆ.  ಆಗ ಸೀತಾಮಾತೆಯು  ಆಡಿದ ಮಾತುಗಳು ಅವಳ ಕ್ಷಮಾಗುಣಕ್ಕೆ  ಉತ್ತಮ ನಿದರ್ಶನವಾಗಿವೆ.    

ಆಕೆಯು "ಈ ರಾಕ್ಷಸಿಯರು ಸ್ವತಂತ್ರರಲ್ಲ. ತಮ್ಮ ಪ್ರಭುವಿನ ಆದೇಶವನ್ನು ಪಾಲನೆ ಮಾಡಿರುವರಷ್ಟೇ. ಆದ್ದರಿಂದ ಅವರ ತಪ್ಪೇನಿಲ್ಲ. ಅಷ್ಟಲ್ಲದೆ ರಾಕ್ಷಸಜಾತಿಯ ಸ್ವಭಾವವೇ ಹಿಂಸಿಸುವುದು. ಇಷ್ಟು ದಿನಗಳು ಅವರು  ಹಿಂಸಿಸಿದಾಗಲೂ  ನನಗೆ ಅವರಲ್ಲಿ  ಕೋಪವುಂಟಾಗಲಿಲ್ಲ. ಬೇಕಾದರೆ ಅವರನ್ನು ನಾನೇ ಸುಟ್ಟುಹಾಕಬಹುದಾಗಿತ್ತು. ಆದರೆ  ನನ್ನ  ಕಷ್ಟಗಳು  ನನ್ನ ಪೂರ್ವಜನ್ಮದ ಕರ್ಮಫಲವೆಂದೇ ಭಾವಿಸಿದೆ. ನಮ್ಮಲ್ಲಿ ಅಪರಾಧವೆಸಗಿದವರಿಗೂ ನಾವು ಒಳಿತನ್ನೇ  ಬಯಸಬೇಕು" ಎಂಬುದಾಗಿ ಹೇಳುತ್ತಾಳೆ. 

ತನಗೆ ಅಪಾರವಾದ ಕಷ್ಟವನ್ನು ಕೊಟ್ಟ ರಾಕ್ಷಸಿಯರಲ್ಲೂ ಕೋಪವನ್ನು ತಾಳಲಿಲ್ಲ. ಅಷ್ಟೇ ಅಲ್ಲದೆ ಅವರಲ್ಲಿ ಕರುಣೆಯನ್ನು ತೋರಿ ಹನುಮಂತನ ಪ್ರಹಾರದಿಂದ ಅವರನ್ನು ರಕ್ಷಿಸುತ್ತಾಳೆ! ಇದು ತಾನೇ ಕ್ಷಮಾಗುಣ!   

ಮಹಾಭಾರತದಲ್ಲೂ ಇಂತಹ ಪ್ರಸಂಗವನ್ನು ನೋಡಬಹುದಾಗಿದೆ. ಪಾಂಡವರ ವನವಾಸ ಸಂದರ್ಭದಲ್ಲಿ ದುರ್ಯೋಧನನು ಅವರ ಕಷ್ಟಜೀವನವನ್ನು ಕಣ್ಣಾರೆಕಂಡು ನಲಿಯಲು ಬರುತ್ತಾನೆ.  ದುರ್ನಡತೆಯಿಂದ ಗಂಧರ್ವರ ಕೈಗೆ ಸಿಕ್ಕಿಬೀಳುತ್ತಾನೆ. ಕರ್ಣನಾಗಲಿ ಇತರರಾಗಲಿ ಆತನನ್ನು ಬಿಡಿಸಲು ಸಾಧ್ಯವಾಗುವುದಿಲ್ಲ.  ಆಗ ಅವನ ಕಡೆಯ ಯೋಧನೊಬ್ಬನು ಯುಧಿಷ್ಠಿರನ  ಬಳಿಸಾರಿ ನಡೆದ ವೃತ್ತಾಂತವನ್ನು ತಿಳಿಸುತ್ತಾನೆ. ಕೂಡಲೇ ಯುಧಿಷ್ಠಿರನು ಅರ್ಜುನನ್ನು ದುರ್ಯೋಧನನ ನೆರವಿಗೆ ಹೋಗುವಂತೆ ಆದೇಶವನ್ನು ನೀಡುತ್ತಾನೆ. ಭೀಮಾರ್ಜುನರು ಅದಕ್ಕೆ ಒಪ್ಪಲಿಲ್ಲ. "ನಮಗೆ ಅನ್ಯಾಯವನ್ನು ಮಾಡಿದ ಆತನಿಗೆ ನೆರವಾಗುವುದೇಕೆ? ನಾವು ಮಾಡಬೇಕಾದ ಕಾರ್ಯವನ್ನು ಗಂಧರ್ವರು ಮಾಡಿರುವರಷ್ಟೇ" ಎನ್ನುತ್ತಾರೆ. ಆದರೆ  ಧರ್ಮರಾಜನು "ನಮಗೆ ಅನ್ಯಾಯವನ್ನೆಸಗಿದ್ದು ನಮ್ಮ ಕುಟುಂಬದ ಸಮಾಚಾರ. ನಮ್ಮಿಬ್ಬರ ನಡುವಿನ ಸಮಸ್ಯೆ. ಆದರೆ ಹೊರಗಿನವರು ಬಂದಾಗ ನಾವು ಒಗ್ಗಟ್ಟಿನಿಂದಿರಬೇಕಾದದ್ದು ಧರ್ಮ" ಎಂಬುದಾಗಿ ಹೇಳಿ ಒತ್ತಾಯಮಾಡಿ ದುರ್ಯೋಧನನ ಸಹಾಯಕ್ಕೆ ಕಳಿಸುತ್ತಾನೆ. 

ಬಾಲ್ಯದಿಂದಲೂ ಪಾಂಡವರಲ್ಲಿ ಅಸೂಯೆ-ವೈರಗಳನ್ನೇ ತೋರಿಸುತ್ತಾ ಕೊನೆಗೆ ಅನ್ಯಾಯದಿಂದ, ಅಧರ್ಮದಿಂದ  ರಾಜ್ಯವನ್ನು ಅಪಹರಿಸಿಕೊಂಡ ಕೌರವನಲ್ಲಿ ಸ್ವಲ್ಪವೂ ಕೋಪವನ್ನು ತೋರಲಿಲ್ಲ ಯುಧಿಷ್ಠಿರ.  ಬದಲಿಗೆ ಅವನಲ್ಲಿ ಅದೆಷ್ಟು ಕಾಳಜಿ! ಇದಲ್ಲವೇ ಕ್ಷಮೆಗೆ ಆದರ್ಶ!

ತಪ್ಪುಗಳು ನಡೆದಾಗ ಕಣ್ಮುಚ್ಚಿಕೊಂಡಿರುವುದೇ ಕ್ಷಮೆಯೆಂದಲ್ಲ.  ವಿವೇಕದಿಂದ ವರ್ತಿಸಿ, ಶಿಕ್ಷಕರ ಸ್ಥಾನದಲ್ಲಿದ್ದಾಗ ಶಿಕ್ಷಿಸುವುದೇ  ಕರ್ತವ್ಯ. ಶ್ರೀ ರಾಮನುಮಾಡಿದ್ದು ಅದನ್ನೇ. ಸೀತೆಯು ರಾಕ್ಷಸಿಯರ ವರ್ತನೆಗೆ ಅವರ ಪ್ರಭುನಿಷ್ಠೆಯೇ ಕಾರಣವೆಂಬುದನ್ನು ವಿವೇಕದಿಂದ ಗುರುತಿಸಿ      ಅವರಲ್ಲಿ ಸಹನೆಯನ್ನು ತೋರಿದಳು.  ಮನಸ್ಸಿನಲ್ಲಿ ಗೊಂದಲ-ಆವೇಶಗಳಿಲ್ಲದಿರುವುದೇ  ಕ್ಷಮೆಯ  ಮುಖ್ಯಾಂಶ. ಆತ್ಮಮಾರ್ಗಸಂಚಾರಕ್ಕೆ ಸಮಾಧಾನವಾದ ಮನಸ್ಸೇ ಸಾಧನ.  

ಮಹಾತ್ಮರಿಗೆ ಸಹಜವಾದದ್ದು ಸಾಮಾನ್ಯರಿಗೆ ಆದರ್ಶ 

ಇಂದ್ರಿಯಜಯವನ್ನು ಪಡೆದು ಆತ್ಮಾನುಭವಪಡೆದವರಲ್ಲಿ ತಾನಾಗಿಯೇ ಮೂಡಿಬರುವ  ಕ್ಷಮಾಗುಣವನ್ನು ಸಾಮಾನ್ಯರಾದ ನಮಗೆ ಆದರ್ಶ.  

ಕ್ಷಮೆಯಿಲ್ಲದೆ ತಪ್ಪಿತಸ್ತರಿಗೆ ವಾಕ್-ಹಸ್ತಪ್ರಹಾರಗಳನ್ನು ಒಡ್ಡಿದಾಗ ಅದು ಪಾಪವಾಗಿ,  ದುಷ್ಪರಿಣಾಮವನ್ನು ಬೀರುತ್ತದೆ.  ಸಹನೆಯಿಂದ ಇತರರ ತಪ್ಪುಗಳನ್ನು ಪ್ರತಿಭಟಿಸದೆ ಸಹಿಸಿಕೊಂಡರೂ ಅದು  ಮನಸ್ಸಿನಲ್ಲೇ ಕೋಪರೂಪವಾಗಿ ಉಳಿಯ ಬಹುದು.  ಆದರೆ ಆಗ  ಬರುವ ಪಾಪವು  ಪ್ರಮಾಣದಲ್ಲಿ  ಕಡಿಮೆಯಾಗಿರುತ್ತದೆ ಎಂಬ ಶ್ರೀರಂಗ ಮಹಾಗುರುಗಳ ವಾಣಿಯನ್ನು ಇಲ್ಲಿ ಸ್ಮರಿಸುತ್ತೇವೆ.           

ಆದ್ದರಿಂದ ಮನಸ್ಸಿನಲ್ಲೂ ಕೋಪವಿಲ್ಲದ ಕ್ಷಮಾಗುಣವು ಹೇಡಿತನದ ಪ್ರದರ್ಶನವಲ್ಲ. ಆತ್ಮಾನುಭವಕ್ಕೇರಿಸುವ ಸೋಪಾನಗಳಲ್ಲೊಂದಾಗಿದೆ. ಇತರ ಸೋಪಾನಗಳಾದ ಉಳಿದ ಆತ್ಮಗುಣಗಳನ್ನೂ ಮೈಗೂಡಿಸಿಕೊಂಡಾಗ ಆತ್ಮಮಾರ್ಗದಲ್ಲಿ ಮುನ್ನಡಿಗೆ   ಸರಳವೂ ಸುಲಭವೂ ಆಗುವುದು. 


ಸೂಚನೆ : 3/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.