Thursday, July 22, 2021

ಯೋಗತಾರಾವಳಿ - 14 ಶ್ರಮವಿಲ್ಲದ ಧ್ಯಾನ (Yogataravali - 14 Shramavillada Dhyana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)
ಯೋಗತಾರಾವಳೀ (ಶ್ಲೋಕ ೧೪)

ನ ದೃಷ್ಟಿಲಕ್ಷ್ಯಾಣಿ.....

ನಮಗೆ ತುಂಬ ಇಷ್ಟವಾಗಿರುವ ಚಲಚ್ಚಿತ್ರವೊಂದನ್ನು ನೋಡುತ್ತಿದ್ದೇವೆನ್ನೋಣ. ಅದರಲ್ಲಿ ನಮಗೆ ತುಂಬ ಇಷ್ಟವಾದ ಸಂನಿವೇಶವು ಬಂದಾಗ ನಾವು ಪ್ರಪಂಚವನ್ನೇ ಮರೆತಿರುತ್ತೇವೆ. ಹಾಗೆಯೇ ನಮಗೆ ಇಷ್ಟವಾದ ಗಾನವು ಬರುತ್ತಿದ್ದಾಗಲೂ ನಮ್ಮ ಮನಸ್ಸು ಅದರಲ್ಲಿಯೇ ಸೇರಿಹೋಗಿರುತ್ತದೆ. ಒಳ್ಳೆಯ ಗಂಧ, ರುಚಿಸುವ ಖಾದ್ಯ, ಪ್ರಿಯವಾದ ಸ್ಪರ್ಶ - ಇವುಗಳಿದ್ದಾಗಲೂ ಹಾಗೆಯೇ.

ಚರ್ಮ, ನಾಲಿಗೆ, ಮೂಗು – ಈ ಇಂದ್ರಿಯಗಳ ವಿಷಯವನ್ನು ಆಸ್ವಾದಿಸುತ್ತಿದ್ದಾಗ ಏನಾದರೂ ದೊಡ್ಡ ಸದ್ದಾದರೆ ನಮ್ಮ ಏಕಾಗ್ರತೆಗೆ ಬೇಗನೆ ಭಂಗ ಬಂದುಬಿಡುವುದುಂಟು. ಆದರೆ ಚಲಿಸುತ್ತಿರುವ ದೃಶ್ಯಾವಳಿಯನ್ನು ಆಸ್ವಾದಿಸುತ್ತಿರುವಾಗ ಎಷ್ಟೋ ವೇಳೆ ಸದ್ದು ಕೂಡ ನಮ್ಮ ಮನಸ್ಸನ್ನು ಸುಲಭವಾಗಿ ಹೊರತರಲಾರದು. ಒಂದು ಇಂದ್ರಿಯದ ಕಾರ್ಯಕ್ಕೆ ಮತ್ತೊಂದರ ವಿಷಯವು ಅಡ್ಡಬರಬಹುದಾದರೂ, ಇಂದ್ರಿಯಗಳಲ್ಲೆಲ್ಲಾ ಪ್ರಧಾನವಾದುದೆಂದರೆ ಕಣ್ಣೇ.

ದೃಷ್ಟಿ-ಲಕ್ಷ್ಯಗಳು

ಆಧುನಿಕ-ವಿಜ್ಞಾನವು ತೋರಿಸಿಕೊಡುವಂತೆ, ಕಣ್ಣಿಗೆ ಸಂಬಂಧಪಟ್ಟಂತೆ ಇರುವಷ್ಟು ನರಗಳು ಮತ್ತಾವ ಇಂದ್ರಿಯಕ್ಕೂ ಇಲ್ಲ. ಹೀಗಾಗಿ ಯಾವುದೇ ಇಂದ್ರಿಯಕ್ಕೊಂದು ನಿರ್ದಿಷ್ಟ-ವಿಷಯವನ್ನು ಕೊಟ್ಟು ಮನಸ್ಸನ್ನು ಏಕಾಗ್ರಗೊಳಿಸುವುದಕ್ಕಿಂತ ನೇತ್ರೇಂದ್ರಿಯಕ್ಕೊಂದು ಯುಕ್ತವಾದ ದೃಶ್ಯವನ್ನು ಕೊಟ್ಟು ಮನಸ್ಸನ್ನು ಕಟ್ಟಿಹಾಕುವುದು ಸುಲಭತರ. ಎಂದೇ ಧ್ಯಾನಕ್ಕೆ ಶುಭಾಶ್ರಯವನ್ನು ಕೊಡುವಾಗ ಕಣ್ಣಿಗೆ ಗೋಚರವಾಗುವುದನ್ನೇ ಪ್ರಧಾನವಾಗಿ  ಕೊಡುವುದು. ಕೆಲವೊಮ್ಮೆ ದೂರದ ನಕ್ಷತ್ರವನ್ನೋ, ಬಳಿಯ ದೀಪ-ಶಿಖೆಯನ್ನೋ ಲಕ್ಷ್ಯಕ್ಕೆ ಕೇಂದ್ರವಾಗಿ ಕೊಡುವುದುಂಟು – ಐಕಾಗ್ರ್ಯ-ವೃದ್ಧಿಗಾಗಿ. ಇವೆಲ್ಲವೂ ದೃಷ್ಟಿ-ಲಕ್ಷ್ಯಗಳೆನಿಸುತ್ತವೆ.

ಹೀಗಲ್ಲದೆ ನಾಸಾಗ್ರ, ನಾಭಿ-ಸ್ಥಾನ, ಹೃದಯ-ಕಮಲ ಮೊದಲಾದ ಸ್ಥಾನಗಳನ್ನು ನಿರ್ದೇಶಿಸಿ, ಅಲ್ಲಿ ಮನಸ್ಸನ್ನು ಕೇಂದ್ರೀಕರಿಸೆನ್ನುವ ಉಪದೇಶದ ಕ್ರಮವೂ ಇರಬಹುದು.

ಇಷ್ಟಲ್ಲದೆ ಎಲ್ಲಿ ಕುಳಿತುಕೊಳ್ಳಬೇಕು, ಯಾವಾಗ, ಹೇಗೆ - ಎಂದು ಮುಂತಾದ ಲೆಕ್ಕಾಚಾರಗಳೂ ಬರಬಹುದು. ಗುಹೆ-ವೃಕ್ಷಮೂಲಗಳಲ್ಲಿ, ವ್ಯಾಘ್ರಚರ್ಮ-ಕೃಷ್ಣಾಜಿನಗಳ ಮೇಲೆ - ಮುಂತಾದ ಸ್ಥಾನ-ನಿರ್ದೇಶವನ್ನೋ; ಅಥವಾ ಸಂಧ್ಯಾಕಾಲ-ಮಧ್ಯರಾತ್ರಿ ಮುಂತಾದ ಕಾಲ-ನಿರ್ದೇಶವನ್ನೋ - ಹೇಳುವುದೂ ಉಂಟು.

ಆದರೆ ಕೇವಲ-ಕುಂಭಕದಿಂದಲೇ ಲಭ್ಯವಾಗುವ ರಾಜಯೋಗವು ಚೆನ್ನಾಗಿ ಅಭಿವೃದ್ಧಿಗೊಳ್ಳುತ್ತಿದ್ದಲ್ಲಿ, ಈ ನಿಯಮಗಳೆಲ್ಲ ಕಳಚಲಾರಂಭಿಸುವುವು. ಈ ನಿಯಮಗಳಿಂದಾಗಬೇಕಾದ ಲಾಭವು ಕೇವಲ-ಕುಂಭಕದ ಪ್ರಗತಿಯೊಂದಿಗೆ ತಾನೇ ಉಂಟಾಗಲು ಆರಂಭವಾಗುತ್ತದೆ. ದೃಷ್ಟಿ-ಲಕ್ಷ್ಯಗಳು, ಚಿತ್ತ-ಬಂಧ, ದೇಶ-ಕಾಲಗಳು ಹಾಗೂ ವಾಯು-ನಿರೋಧ - ಎಂಬೀ ನಾಲ್ಕೈದು ಕ್ರಮಗಳು ಪ್ರಯತ್ನವನ್ನು ಅಪೇಕ್ಷಿಸುತ್ತವೆ. ಆದರೆ ಕೇವಲಕುಂಭಕಾವಸ್ಥೆಯು ಈ ಬಗೆಯ ಯತ್ನಗಳನ್ನುಳಿದೂ ಅವುಗಳ ಗುರಿಯನ್ನು ಸಾಧಿಸಿಕೊಡುತ್ತದೆ.

ಧಾರಣಾ-ಧ್ಯಾನಗಳು

ಅಷ್ಟೇ ಅಲ್ಲ. ಧಾರಣಾ-ಧ್ಯಾನಗಳು ತಮ್ಮದೇ ಆದ ಶ್ರಮವನ್ನು ಅಪೇಕ್ಷಿಸುತ್ತವೆ. ಪ್ರತ್ಯಾಹಾರದಿಂದ ಸಿಕ್ಕಿದುದು ಧಾರಣೆಗೆ ದಕ್ಕದೇ ಹೋಗಬಹುದು! ಯೋಗವಾದದ್ದಕ್ಕೆ ಕ್ಷೇಮವಿರದೆ ಹೋದಂತೆ!

ಧ್ಯಾನಕ್ರಮವು ಹೀಗೆ: ಮೊದಲು ಪ್ರಾಣಾಯಾಮದಿಂದ ಪ್ರತ್ಯಾಹಾರವು ಸಾಧಿತವಾಗಬೇಕು. ಪ್ರತ್ಯಾಹೃತವಾದುದರ ಧಾರಣೆಯಾಗಬೇಕು. ಧಾರಣೆಯಿಂದ ಧೃತವಾದದ್ದರಲ್ಲಿ ಮಧ್ಯೆ ಮಧ್ಯೆ ಅಂತರವು ಉಂಟಾಗಬಾರದು: ಅರ್ಥಾತ್, ಅದು ನಿರ್-ಅಂತರವಾಗಬೇಕು. ಆ ನಿರಂತರತೆಯೇ ಧ್ಯಾನ.

ರಾಜಯೋಗ-ರಾಜಮಾರ್ಗ

ಪ್ರತ್ಯಾಹಾರ-ಧಾರಣಾ-ಧ್ಯಾನಗಳಲ್ಲಿ ಒಂದೊಂದಕ್ಕೂ ಪರಿಶ್ರಮವು ಬೇಕು. ಕೊನೆಗೆ ಏನಿಲ್ಲವೆಂದರೂ ಮತ್ತಾವುದೋ ಸಣ್ಣಸ್ಮೃತಿಯೊಂದು ನಡುವಿನಲ್ಲಿ ಪುಟಿದು ಈ ಮೂರರಲ್ಲಾವುದನ್ನಾದರೂ ಭಂಗಪಡಿಸಬಲ್ಲುದು: ಸಣ್ಣದೊಂದು ರಂಧ್ರದಿಂದಾಗಿ ಪೂರ್ಣ-ಕುಂಭವು ರಿಕ್ತ-ಕುಂಭವಾಗಿಬಿಡಬಹುದಲ್ಲವೆ! (ರಿಕ್ತವೆಂದರೆ ಖಾಲಿ). ಎಂದೇ ಈ ಮೂರೂ ಮನಸ್ಸಿಗೇ ನೇರವಾಗಿ ಸಂಬಂಧಪಡುವುದರಿಂದ ಎಚ್ಚರವನ್ನು ಅಪೇಕ್ಷಿಸುತ್ತವೆ.

ಆದರೆ ಕೇವಲ-ಕುಂಭಕವೆಂಬುದು ರಾಜ-ಯೋಗಕ್ಕೆ ಹಾದಿ; ಅಥವಾ ಅದುವೇ ರಾಜ-ಯೋಗವೆನ್ನಬಹುದು. ರಾಜಯೋಗದಲ್ಲಿ ಪ್ರಗತಿಯು ಸುಸೂತ್ರವಾಗಿ ಸಾಗಿತೆಂದರೆ ಹಿಂದೆಪಡುತ್ತಿದ್ದ ಪಾಡುಗಳು ಮುಂದುಮುಂದಕ್ಕಿಲ್ಲ: ಯೋಗಗಳ ರಾಜನೇ ರಾಜ-ಯೋಗ.

ಕಲ್ಲುಮುಳ್ಳಿನ ಮಾರ್ಗವಾದರೆ ಮುಂದಕ್ಕೆಳಸಿದರೂ ಮಂದಗತಿಯೇ; ಹಳ್ಳದಿಣ್ಣೆಗಳ ಹಾದಿಯಾದರೆ ಹೆಜ್ಜೆಹೆಜ್ಜೆಗೂ ಏಳುಬೀಳುಗಳೇ; ಕೊಚ್ಚೆ-ಪಾಚಿಗಳ ದಾರಿಯಾದರೆ ಅಲ್ಲಲ್ಲಿ ಜಾರಿಬೀಳುವ ಸಾಧ್ಯತೆಯೇ. ರಾಜಯೋಗವೆಂಬ ರಾಜಮಾರ್ಗದಲ್ಲಿ ಸಾಗುವವನಿಗೆ ಇದಾವ ಆತಂಕವೂ ಇಲ್ಲ: ಶ್ರಮ ಅಲ್ಪ, ಪ್ರಗತಿ ಪ್ರಕೃಷ್ಟ.

ಇದು ರಾಜ-ಯೋಗದ ಹಿರಿಮೆ.

ನ ದೃಷ್ಟಿ-ಲಕ್ಷ್ಯಾಣಿ, ನ ಚಿತ್ತ-ಬಂಧಃ

   ನ ದೇಶ-ಕಾಲೌ, ನ ಚ ವಾಯು-ರೋಧಃ, |

ನ ಧಾರಣಾ-ಧ್ಯಾನ-ಪರಿಶ್ರಮೋ ವಾ

   ಸಮೇಧಮಾನೇ ಸತಿ ರಾಜ-ಯೋಗೇ ||೧೪||

ಸೂಚನೆ : 7/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.