Saturday, March 30, 2024

ಅಷ್ಟಪಾಶ ಮೀರಿದ ಪ್ರಹ್ಲಾದ (Astapasha Mirida Prahlada)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ.

(ಪ್ರತಿಕ್ರಿಯಿಸಿರಿ lekhana@ayvm.in)ಭಕ್ತ ಪ್ರಹ್ಲಾದನ ಬಗ್ಗೆ ನಮ್ಮ ಭಾರತ ದೇಶದಲ್ಲಿ ಕೇಳದವರು ಇರಲಾರರು. ಭಾಗವತ ಮಹಾಪುರಾಣದ ಏಳನೇ ಸ್ಕಂದದಲ್ಲಿ ವಿಸ್ತಾರವಾಗಿ ಕಥಾ ಪ್ರಸಂಗ  ಉಲ್ಲೇಖವಾಗಿದೆ. ಪ್ರಹ್ಲಾದನು ಶ್ರೇಷ್ಟ ಭಕ್ತನೆಂದು ಆಚಾರ್ಯ ಶಂಕರರು ತಮ್ಮ  ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರದಲ್ಲಿ ಉಲ್ಲೇಖಿಸಿದ್ದಾರೆ. ಸೃಷ್ಟಿಯ ಶ್ರೇಷ್ಠತೆಯಲ್ಲಿ ಭಗವದಂಶವಿದೆಯಂದು ಭಗವಾನ್ ಕೃಷ್ಣನು ಭಗವದ್ಗೀತೆಯ ವಿಭೂತಿಯೋಗದಲ್ಲಿ ಸಾರಿ, ಅಸುರರಲ್ಲಿ  ತಾನೇ ಪ್ರಹ್ಲಾದನೆಂದಿದ್ದಾನೆ.

ದ್ವೇಷ, ನಾಚಿಕೆ, ಭಯ, ಶಂಕೆ, ಜುಗುಪ್ಸೆ, ಕುಲ, ಜಾತಿ, ಶೀಲ ಎಂಬ ಅಷ್ಟಪಾಶಗಳು ಆಸುರೀ ಶಕ್ತಿಗಳಾಗಿದ್ದು ಅವು ಮಾನವರಿಗೆ ಪ್ರಾಪಂಚಿಕ ಬಂಧನವನ್ನುಂಟುಮಾಡುತ್ತದೆಯೆಂದು ಶಾಸ್ತ್ರವು ತಿಳಿಸುತ್ತದೆ. ಇದರಿಂದಾಗಿ ಹುಟ್ಟು-ಸಾವಿನ ಚಕ್ರದಲ್ಲಿ ಮನುಜನು ಸಿಲುಕಿಕೊಂಡು, ಪಾಪ-ಪುಣ್ಯದ ಫಲ, ಸಂಕಷ್ಟಗಳನ್ನು ಅನುಭವಿಸುತ್ತಾ, ಜೀವನದ ಮೂಲವನ್ನೇ ಮರೆಯುತ್ತಾನೆ. ಗೋವಿಂದನನ್ನು ಭಜಿಸುವುದರಿಂದ ಮತ್ತು ಗುರುಚರಣದ ನಿರ್ಭರ ಭಕ್ತಿಯಿಂದ ಈ ಸಂಸಾರದ ಪಾಶದ ಕೊಂಡಿಯಿಂದ ತಪ್ಪಿಸಿಕೊಂಡು ಮುಕ್ತರಾಗಿ ಎಂದು ಆಚಾರ್ಯ ಶಂಕರರು ಆದೇಶಿಸುತ್ತಾರೆ.

ಅಷ್ಟಪಾಶಗಳ ಆಸುರೀ ಸಂಪತ್ತಿರುವ ರಾಕ್ಷಸಸಮೂಹದ ಮಧ್ಯದಲ್ಲಿ ದೈವೀಸಂಪತ್ತಿನ ಪ್ರಹ್ಲಾದನು ತನ್ನ ಬಾಲ್ಯ ಜೀವನವನ್ನು ಕಳೆಯುತ್ತಾನೆ.   ತಂದೆಯಾದ ಹಿರಣ್ಯಕಶಿಪುವಿನಿಂದ ದ್ವೇಷ,  ಜೀವಕ್ಕೇ ತೊಂದರೆಯಾಗುವ ಭಯಾನಕ ಸನ್ನಿವೇಶಗಳು, ಅಸಹನೆ, ಅಪಶಬ್ದಗಳು ಎದುರಿಸಬೇಕಾಗುತ್ತದೆ. ಆದರೂ  ಅವನ ಒಲವು ದೈವದ ಕಡೆಗೇ ಇರುತ್ತದೆ. "ಗುರು-ಶಿಷ್ಯ-ಭಗವಂತ ಇವರುಗಳ ಯೋಗವಾದರೆ, ಗುರುವಿನ ಹಿಂದಿರುವ ದೈವೀಶಕ್ತಿಯ ಮಹಿಮೆಯ ಅರಿವಾಗುತ್ತದೆ" ಎಂಬರ್ಥದಲ್ಲಿ ಬರುವ ಶ್ರೀರಂಗಮಹಾಗುರುಗಳ ಮನಮುಟ್ಟುವ ಮಾತು ಸ್ಮರಣೀಯ.  ಪ್ರಹ್ಲಾದ-ಗುರುನಾರದರ-ಶ್ರೀಹರಿಯಕೃಪೆಯ ಯೋಗವನ್ನು ಭಾಗವತ ಪುರಾಣದ ಕಥೆಯಲ್ಲಿ ಗಮನಿಸಬಹುದು. ಈ ಯೋಗದಿಂದ ತರಳ ಪ್ರಹ್ಲಾದ ಅಷ್ಟಪಾಶಗಳನ್ನು ಮೀರಿದವನಾಗಿದ್ದ. ಯೋಗದ ಪರಿಭಾಷೆಯಲ್ಲಿ ಹೇಳುವದಾದರೆ, ಆಜ್ಞಾ ಚಕ್ರ ದಾಟಿದವರಿಗೆ ಅಷ್ಟಪಾಶಗಳು ಏನೂ ಮಾಡಲಾರವು. ಆದ್ದರಿಂದ ಅವನಿಗೆ ಹಿರಣ್ಯಕಶಿಪು ಕೊಟ್ಟ ಉಪದ್ರವಗಳು ಏನೂ ಮಾಡಲಿಲ್ಲ. ಕಾಲವು ಕೂಡಿಬಂದಾಗ ಸ್ವಯಂ ಭಗವಂತನೇ ಶಿಷ್ಟ ರಕ್ಷಣೆ ದುಷ್ಟ ಶಿಕ್ಷಣೆ ಎಂಬಂತೆ ತಾನೇ ಪ್ರಕಟಗೊಂಡು ಪ್ರಹ್ಲಾದನನ್ನು ಕಾಪಾಡಿದ ಎಂದು  ಭಾಗವತ ಪುರಾಣ ತಿಳಿಸುತ್ತದೆ.

 ಇದೆಲ್ಲವೂ ಕೃತಯುಗದಲ್ಲಿ ನಡೆದ ಕಥೆ, ಇದರ ಪ್ರಸಕ್ತತೆ ಇಂದಿಗೂ ಇದೆಯೇ ಎಂಬ ಪ್ರಶ್ನೆ ಸಹಜ.  ಪ್ರಸಕ್ತ ಕಾಲಮಾನದಲ್ಲಿ ಮಾನವರು ಅಷ್ಟಪಾಶಗಳ ಸಂಕಷ್ಟಗಳನ್ನು ಕಾಲಧರ್ಮಕ್ಕನುಗುಣವಾಗಿ ಭೌತಿಕ ಮತ್ತು ಮಾನಸಿಕ ಕ್ಷೇತ್ರಗಳಲ್ಲಿ ಎದುರಿಸಬೇಕಾಗುತ್ತದೆ. ದೈವದಾನವರ ಕಲಹ ಎಂದೆಂದಿಗೂ ನಡೆಯುತ್ತಿರುವ ಸಂಗತಿಯೆನ್ನುವುದನ್ನು ಗಮನಿಸಬಹುದು.  ಸಜ್ಜನರು  ಗುರುಕೃಪೆ  ಹಾಗೂ  ಪ್ರಹ್ಲಾದನು ಭೋದಿಸಿದ ಪರಮಾತ್ಮನ ಶ್ರವಣ, ಕೀರ್ತನೆ, ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ  ಮತ್ತು ಆತ್ಮನಿವೇದನೆಯೆಂಬ ಸಾಧನೆಯಿಂದ, ಅಷ್ಟಪಾಶಗಳಿಂದ ಮುಕ್ತರಾಗಬಹುದು. ಆಗ ಯಾವ ಪಾಶಗಳಾಗಲೀ ಸಂಕಷ್ಟಗಳಾಗಲೀ ತಾವರೆ ಎಲೆಯಮೇಲಿನ ನೀರಿನಂತೆ ಅಂಟಲಾರದು. "ಭಕ್ತಾನುರಕ್ತ ಪರಿಪಾಲನ ಪಾರಿಜಾತ ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ" ಎಂದು ಪ್ರಾರ್ಥಿಸಿ ಕೃತಾರ್ಥರಾಗೋಣ.

ಸೂಚನೆ: 30/3/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.