Saturday, March 23, 2024

ಅಷ್ಟಾಕ್ಷರೀ​ - 55 ತತ್ಸರ್ವಂ ಯೋಗಮಾಸ್ಥಿತಃ (Astaksari 55 –Tatsarvam Yogamasthitah

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಒಂದು ಕಾವ್ಯವನ್ನು ಬರೆಯುವುದೆಂದರೆ ಸುಲಭವಾದ ಮಾತಾದೀತೇ? ಕವಿಯಾಗಲು ಮೊದಲು ಬೇಕಾದುದು ಪ್ರತಿಭೆ. ಏನು ಪ್ರತಿಭೆಯೆಂದರೆ? ಇದು ಬಹಳ ವಿಸ್ತರಿಸಿ ಹೇಳಬೇಕಾದ ವಿಷಯ. ಸಂಕ್ಷೇಪವಾಗಿ ಹೇಳುವುದಾದರೆ, ನವನವವಾಗಿ ಈ ಜಗತ್ತನ್ನು ಕಾಣಬಲ್ಲ ಪ್ರಜ್ಞೆಯನ್ನೇ ಪ್ರತಿಭೆಯೆನ್ನುವುದು. ಕವಿಯ ಕಾರ್ಯವೆಂದರೆ ವರ್ಣನೆ, ಚಿತ್ರಣ. ಏನೇನನ್ನೋ ವರ್ಣಿಸುವುದು, ಹೇಗೆ ಹೇಗೋ ರೂಪಿಸುವುದಲ್ಲ; ವರ್ಣನೆಯ ಹಿಂದೆ ಪ್ರತಿಭೆಯ ಪ್ರಾಣಶಕ್ತಿಯು ಜೀವಕಳೆಯನ್ನು ತುಂಬಬೇಕು. ಈ ತೆರನಾದ ಮಾತುಗಳನ್ನು ನಾವು ಸಂಸ್ಕೃತದಲ್ಲಿರುವ ಭಾರತೀಯಸಾಹಿತ್ಯಮೀಮಾಂಸೆಯಲ್ಲಿ ಕಾಣುತ್ತೇವೆ.

ಕಾವ್ಯರಚನೆಯ ಸಂಕಲ್ಪವುಳ್ಳ ಕವಿಯ ಮನಸ್ಸು ಸಮಾಧಾನವಾಗಿರಬೇಕು: ಏನನ್ನು ಹೇಳಬೇಕೆಂದೆನಿಸಿರುವುದೋ ಅದು ಪರಿಪರಿಯಾಗಿ ಸ್ಫುರಿಸುವುದು ಆಗಲೇ; ಮತ್ತು ಅಂದುಕೊಂಡದ್ದನ್ನು ಸಮರ್ಥವಾಗಿ ತಿಳಿಸಲಾಗುವಂತೆ ಅದಕ್ಕೊಪ್ಪುವ ಪದಗಳು ಹೊಳೆಯುವುದೂ ಆಗಲೇ. ಇಲ್ಲೊಂದು ಎಚ್ಚರವೂ ಬೇಕು. ಏನೆಂದರೆ ಪ್ರತಿಭೆಯಷ್ಟೇ ಸಾಲದು; ಅದರ ಜೊತೆಗೆ ವ್ಯುತ್ಪತ್ತಿ-ಅಭ್ಯಾಸಗಳೂ ಬೇಕು. ಬಹುಜ್ಞತೆಯೇ ವ್ಯುತ್ಪತ್ತಿ. ಹಾಗೆಂದರೇನು?  ಲೋಕದ ನಡೆ ಹೇಗಿದೆ, ಬೇರೆ ಬೇರೆ ಶಾಸ್ತ್ರಗಳಲ್ಲಿಯ ವಿವರಣ-ವಿಶ್ಲೇಷಣಗಳೇನು, ಸತ್ಕವಿಗಳ ನಿರೂಪಣೆಯ ಬಗೆಗಳೇನು - ಇವನ್ನೆಲ್ಲ ಗಮನಿಸಿಕೊಳ್ಳುವುದು ವ್ಯುತ್ಪತ್ತಿ. ಅಲ್ಲದೆ, ವಿದ್ವಜ್ಜನರ ಸಂಪರ್ಕ, ಬಹುಶ್ರುತತೆ, ಕವಿಗಳೊಂದಿಗೆ ಸಹವಾಸ, ಮಹಾಕಾವ್ಯಗಳ ಅರ್ಥವನ್ನು ಆಗಾಗ್ಗೆ ಆಸ್ವಾದಿಸುವುದು, ಇತಿಹಾಸ-ಪುರಾಣಗಳ ಅವಲೋಕನ, ನಾನಾಕಲಾದರ್ಶನ - ಮುಂತಾದ ವಿಭಿನ್ನಪ್ರಕಾರಗಳಿಂದ ವ್ಯುತ್ಪತ್ತಿಯನ್ನು ಬೆಳೆಸಿಕೊಳ್ಳುವುದನ್ನು ಹೇಳಲಾಗಿದೆ. ಇವೆಲ್ಲ ಕಣ್ತೆರೆದು ನೋಡಿ, ಕಣ್ಣಲ್ಲಿ ಕಣ್ಣಿಟ್ಟು ನೋಡಿ ಆಗಬೇಕಾದವು.

ಆದರೆ ಕಣ್ಣುಮುಚ್ಚಿ ಯಾರಾದರೂ ಕಾವ್ಯವನ್ನು ಬರೆಯಲಾದೀತೆ? ಆದರೆ ವಾಲ್ಮೀಕಿಗಳು ರಾಮಾಯಣವನ್ನು ಹಾಗೆ ಬರೆದಿರುವರೆಂದು ಶ್ರೀರಂಗಮಹಾಗುರುಗಳು ನಿರೂಪಿಸಿದ್ದಾರೆ.  ಏನು ಹಾಗೆಂದರೆ? ಇದರ ಮರ್ಮವರಿಯಲು ರಾಮಾಯಣದ ಮೊದಲನೆಯ ಸರ್ಗಗಳನ್ನೊಮ್ಮೆ ಅವಲೋಕಿಸಬೇಕು.

ಆರಂಭದಲ್ಲಿ ವಾಲ್ಮೀಕಿಗಳು ನಾರದರನ್ನು ಪ್ರಶ್ನಿಸುತ್ತಾರೆ. ಈ ಸದ್ಗುಣಗಳಿಂದ ಕೂಡಿರುವ ಮನುಷ್ಯನು ಲೋಕದಲ್ಲಿರುವನೆ? - ಎಂದು ಪಟ್ಟಿಮಾಡುತ್ತಾರೆ: ಆತನು ಗುಣಶಾಲಿಯಾಗಿರಬೇಕು; ಜೊತೆಗೆ, ವೀರ್ಯಸಂಪನ್ನ, ಧರ್ಮಜ್ಞ, ವಿದ್ವಾಂಸ, ಕೋಪವನ್ನು ಗೆದ್ದವ, ಇತ್ಯಾದಿಗಳಾಗಿರಬೇಕು - ಎಂದು. ಅದಕ್ಕೆ ನಾರದರು, ಇಕ್ಷ್ವಾಕುವಂಶದಲ್ಲಿ ಜನಿಸಿದ ರಾಮನು ಇಂತಹವನು ಎಂದು ಹೇಳಿ ಅವನ ಜೀವನದ ಕಿರುಚಿತ್ರಣವನ್ನು ಕೊಡುತ್ತಾರೆ.

ನಾರದರನ್ನು ಬೀಳ್ಕೊಟ್ಟು, ವಾಲ್ಮೀಕಿಗಳು ಶಿಷ್ಯನೊಡನೆ ತಮಸಾ ನದಿಯಲ್ಲಿಗೆ ಬರುತ್ತಾರೆ. ಅದರ ನೀರದೆಷ್ಟು ತಿಳಿಯಾಗಿದೆ! - ಸಜ್ಜನರ ಮನಸ್ಸಿನಂತೆ! - ಎಂದುಕೊಳ್ಳುತ್ತಾರೆ. ಕೆಲವೇ ಕ್ಷಣಗಳಲ್ಲಿ ಕ್ರೌಂಚವಧೆಯಾಗಿ ಅವರ ಬಾಯಿಂದ ಶಾಪೋಕ್ತಿಯೇ ಬಂದುಬಿಡುತ್ತದೆ. ಸ್ನಾನಾನಂತರ  ಹಿಂದಿರುಗಿದಾಗ ಅವರಿದ್ದೆಡೆಗೆ ಬ್ರಹ್ಮನೇ ಆಗಮಿಸಿ, ಅವರ ಬಾಯಲ್ಲಿ ಶಾಪವಾಗಿ ಹೊಮ್ಮಿದ ಶ್ಲೋಕವು ತನ್ನ ಪ್ರೇರಣೆಯಿಂದಲೇ ಎಂದು ಹೇಳಿ, ಸಂಪೂರ್ಣರಾಮಚರಿತವನ್ನು ಚಿತ್ರಿಸುವ ಆದೇಶವನ್ನಿತ್ತು ಹೋಗುತ್ತಾನೆ. ಋಷಿಯೀಗ ಕವಿಯಾಗುತ್ತಾನೆ: ಆತನ ಉಕ್ತಿಯೇ ಆದಿಕಾವ್ಯವಾಗುತ್ತದೆ!

ಧರ್ಮಪುರುಷನಾದವನನ್ನು ಕುರಿತಾದ ಕಾವ್ಯವಾಯಿತಲ್ಲವೆ? ಆಚಮನ ಮಾಡಿ, ದರ್ಭಾಸನವನ್ನು ಹಾಸಿ ಕುಳಿತು, ರಾಮಾಯಣಕಥೆಯ ನಡೆಯನ್ನು ಧರ್ಮದಿಂದಲೇ ಅವೇಕ್ಷಿಸುತ್ತಾರೆ. ರಾಮಾದಿಗಳು ಮಾಡಿದುದನ್ನೆಲ್ಲವನ್ನೂ "ಧರ್ಮವೀರ್ಯದಿಂದ ಯಥಾವತ್ತಾಗಿ ಕಂಡುಕೊಂಡರು." "ಯೋಗದ ನೆಲೆಯಲ್ಲಿ ನಿಂತು" ಪರೋಕ್ಷದಲ್ಲಿ ನಡೆದುದೆಲ್ಲವನ್ನೂ ಅಂಗೈನೆಲ್ಲಿಯಂತೆ ಸ್ಫುಟವಾಗರಿತರು. "ಎಲ್ಲವನ್ನೂ ತತ್ತ್ವತಃ ಕಂಡುಕೊಂಡು" ಶ್ರೀರಾಮಚರಿತವನ್ನು ರಚಿಸಿದರು - ಎನ್ನುತ್ತದೆ, ರಾಮಾಯಣ.

ರಾಮನು ನಕ್ಕದ್ದು ನುಡಿದದ್ದು ನಡೆದದ್ದು – ಇವನ್ನೆಲ್ಲಾ ಹೋಗಿ ನೇರ ಕಂಡು ಬರೆದದ್ದಲ್ಲ; ಹಾಗೆಂದು, ಊಹಿಸಿ ಬರೆದದ್ದೂ ಅಲ್ಲ; ತಾತ್ತ್ವಿಕವಾಗಿ ಕಂಡು, ಎಂದರೆ ಯೋಗದೃಷ್ಟಿಯಿಂದ ಸಾಕ್ಷಾತ್ಕರಿಸಿಕೊಂಡು, ಯಥಾವತ್ತಾಗಿ ರಚಿಸಿರುವುದು. ಎಂದೇ "ತತ್ಸರ್ವಂ ಯೋಗಮಾಸ್ಥಿತಃ", "ತತ್ತ್ವತೋ ದೃಷ್ಟ್ವಾ" "ಧರ್ಮವೀರ್ಯೇಣ"  ಎಂಬ ಮಾತುಗಳನ್ನು ಮೂಲರಾಮಾಯಣದಲ್ಲಿವೆ. ಪಾರಂಪರಿಕ ವ್ಯಾಖ್ಯಾನಗಳೂ ಯೋಗದ ಬಲದಿಂದೆಂದೇ ವಿವರಿಸಿವೆ.

ಯೋಗದಿಂದ ಕಂಡುಕೊಳ್ಳುವುದೆಂದರೆ ಕಣ್ಣಗಲಿಸಿ ಕಂಡುಕೊಳ್ಳುವುದಲ್ಲ; ಅಂತರ್ದೃಷ್ಟಿಯಿಂದ ಅರಿತುಕೊಂಡು - ಎಂದರ್ಥ. ಭಾರತೀಯಪರಂಪರೆಯ ನುಡಿಯಿದು: ವಸ್ತುತಃ ಋಷಿಯಾದವನೇ ಕಾವ್ಯವನ್ನು ಬರೆಯಲಾಗುವುದು; ತತ್ತ್ವಸಾಕ್ಷಾತ್ಕಾರ ಮಾಡಿಕೊಂಡವನೇ ಋಷಿಯಾಗುವುದು.

ಈ ಮಾತುಗಳೆಲ್ಲವೂ ಆದಿಕಾವ್ಯವೆನಿಸಿದ ರಾಮಾಯಣವನ್ನು ಬರೆದ ಆದಿಕವಿ ಮಹರ್ಷಿ ವಾಲ್ಮೀಕಿಯ ವಿಷಯದಲ್ಲಿ ಯಥಾವತ್ತಾಗಿ ಅನ್ವಿತವಾಗಿವೆ. ಈ ಹಿನ್ನೆಲೆಯಲ್ಲೇ ರಾಮಾಯಣವು "ಕಣ್ಣುಮುಚ್ಚಿಕೊಂಡು ಬರೆದ ಕಾವ್ಯ"ವೆನ್ನುವ ಮಾತಿನಲ್ಲಿ ಸಾಂಗತ್ಯವಿರುವುದು. ಇಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ; ಒಗಟೆಯ ಮಾತಿನಂತೆ ತೋರಿದರೂ (ವಸ್ತುತಃ ಹಾಗೆ ತೋರುವುದರಿಂದಲೇ) ಸತ್ಯಾರ್ಥವನ್ನು ಒತ್ತಿಹೇಳುವ ಮಾತೇ ಆಗಿದೆ, ಶ್ರೀರಂಗಮಹಾಗುರುಗಳ ಈ ನುಡಿ. ಋಷಿಯೊಬ್ಬನ ಅಂತರಂಗವನ್ನು ಮತ್ತೊಬ್ಬ ಋಷಿಯೇ ಹಿಡಿಯಬಲ್ಲನೆಂಬುದೂ ಸತ್ಯವಲ್ಲವೇ?

ಸೂಚನೆ: 23/03/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.