Sunday, March 24, 2024

ಯಕ್ಷ ಪ್ರಶ್ನೆ 82(Yaksha prashne 82)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 81 'ದಮ' ಎಂದರೇನು ?

ಉತ್ತರ - ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು.  

ಇಲ್ಲಿ ಕೇಳಲಾದ ಪ್ರಶ್ನೆಯು ಸಾಮಾನ್ಯವಾಗಿದೆ. ಯಕ್ಷನ ಪ್ರಶ್ನೆಯು ಸಾಮಾನ್ಯವಾಗಿ ನೇರವಾಗಿ ಇರುವುದಿಲ್ಲ. ಸುತ್ತುಬಳಸಿ ಕೇಳಿದಂತೆ ಇರುತ್ತದೆ. ಬುದ್ಧಿಯನ್ನು ಬಳಸಿ, ಯೋಚಿಸಿ ಉತ್ತರಕೊಡಬೇಕಾದ ಪ್ರಶ್ನೆಗಳೆ ಜಾಸ್ತಿ ಇವೆ. ಅತ್ಯಂತ ಪ್ರಚಲಿತವಾದ, ಎಲ್ಲೆಲ್ಲೂ ಕಾಣಸಿಗುವ ವಿಷಯವನ್ನೇ ಆಧರಿಸಿ ಈ ಪ್ರಶ್ ಅತಿವಿರಳ. ಆದರೆ ಈ ಪ್ರಶ್ನೆಯು ಯಕ್ಷಪ್ರಶ್ನೆಯೋ? ಎಂದೇ ಸಂದೇಹಿಸುವಷ್ಟು ಸುಲಭದ್ದಾಗಿದೆ. ಆದ್ದರಿಂದ ಧರ್ಮರಾಜನ ಉತ್ತರವೂ ಅಷ್ಟೇ ಸಹಜವಾಗಿ ಬಂದಿದೆ. 

ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದನ್ನೇ 'ದಮ' ಎಂದು ಕರೆಯಲಾಗಿದೆ. ಕೆಲವು ಕಡೆ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಎಂಬ ಅರ್ಥವೂ ಉಂಟು. ಅವೆರಡೂ ಒಂದೇ. ಏಕೆಂದರೆ ಮನಸ್ಸೂ ಒಂದು ಇಂದ್ರಿಯವೇ. ಮತ್ತು ಬಾಹ್ಯವಾದ ವಿಷಯದ ಅರಿವು ಯಾವುದರಿಂದ ಉಂಟಾಗುವುದೋ ಅದನ್ನೂ 'ಇಂದ್ರಿಯ' ಎಂಬ ಪದದಿಂದ ಬಳಸಿ; ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಇವುಗಳನ್ನು ಪ್ರಧಾನವಾಗಿ 'ಇಂದ್ರಿಯ' ಎಂದು ಕರೆಯುವುದು ರೂಢಿ. ಏನೇ ಇದ್ದರೂ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಡಲು ಮಾನಸ್ಸಿನ ನಿಯಂತ್ರಣ ಅತಿಮುಖ್ಯ ಎಂಬ ವಿಷಯವೂ ಅಷ್ಟೇ ಮುಖ್ಯವಾದುದು. ಈ ಕಾರಣದಿಂದ 'ದಮ' ಎಂದರೆ ಇಂದ್ರಿಯ ನಿಯಂತ್ರಣ ಎಂಬ ಅರ್ಥವನ್ನು ಮಾಡಿದರೂ ಯಾವ ಅಪರಾಧವೂ ಆಗುವುದಿಲ್ಲ. 

'ದಮ' ಎಂಬುದಕ್ಕೆ ನಿಯಂತ್ರಣ ಎಂಬರ್ಥವಿದೆ. 'ಇದು ಭೂಮಿ, ಇದು ಗಾಳಿ' ಇತ್ಯಾದಿಯಾದ ಅರಿವು ಬರಬೇಕಾದರೆ ಇವೇ ಐದು ಇಂದ್ರಿಯಗಳು ಬೇಕಲ್ಲವೇ? ಆ ಅರಿವು ಬರಬೇಕಾದರೆ ಮನಸ್ಸಿನ ಸಹಕಾರವೂ ಅಷ್ಟೇ ಅಗತ್ಯವಲ್ಲವೇ? ಇವೆರಡನ್ನು ನಿಯಂತ್ರಣ ಮಾಡುವುದು ಎಂದರೆ ಏನರ್ಥ? ಸಂಪೂರ್ಣ ತಡೆಗಟ್ಟುವುದು ಎಂಬರ್ಥವೇ? ಹಾಗಾದರೆ ಅರಿವು ಹೇಗೆ ಸಾಧ್ಯ ? ಎಂಬ ಸಂದೇಹವೂ ಬಾರದಿರದು. ಅರಿವು ಬಾರದಂತೆ ತಡೆಯುವುದು ಎಂಬರ್ಥವಲ್ಲ. ಅವುಗಳು ಅನರ್ಥವನ್ನು ಮಾಡದಂತೆ ತಡೆಯುವುದು ಎಂಬ ಅರ್ಥವಷ್ಟೆ. ಇದೇ ಮನಸ್ಸು ಸಾಧಕವೂ ಬಾಧಕವೂ ಆಗಬಹುದು. ಸಾಧಕವಾಗುವಂತೆ ಬಳಸಿ; ಬಾಧಕವಾಗದಂತೆ ತಡೆಯುವುದೇ ಸಂಯಮನ. ನಮ್ಮ ನಮ್ಮ ಉದ್ದೇಶಕ್ಕೆ ಅನುಗುಣವಾಗಿ ಮನಸ್ಸನ್ನು ಪಳಗಿಸಿ ಬಳಸುವುದು. ಮನಸ್ಸಿಗೆ ಬಾಹ್ಯ ಮತ್ತು ಆಂತರ ಎಂಬ ಎರಡು ಮುಖಗಳು ಉಂಟು. ಮನಸ್ಸು ಬಾಹ್ಯವಾಗಿ ಹರಿದರೂ ಅವುಗಳನ್ನು ನಿಯತವಾಗಿ ಬಳಸಿಕೊಳ್ಳುವುದನ್ನೂ ಮನೋನಿಯಂತ್ರಣ ಎಂದೇ ಕರೆಯಬಹುದು. ಮನಸ್ಸನ್ನು ಕಣ್ಣು ಕಿವಿ ಮೊದಲಾದ ಇಂದ್ರಿಯಗಳ ಮೂಲಕ ಹೊರ ಅರಿವನ್ನು ಪಡೆದುಕೊಂಡು, ಅದೇ ಅರಿವಿನಿಂದ ಅಂತರಂಗದ ಅರಿವನ್ನು ದೃಢಪಡಿಸಿಕೊಂಡರೆ ಅದನ್ನೇ ಮನೋನಿಗ್ರಹ ಎನ್ನಬಹುದು. ಇಂತಹ ನಿಗ್ರಹದಿಂದ ಮಾತ್ರ ಮನಸ್ಸನ್ನು ಅಂತರಂಗದಲ್ಲಿ ಹರಿಸಬಹುದು. ಮನಸ್ಸಿನಿಂದ ಅಂತರಂಗದಲ್ಲಿ ಬೆಳಗುವ ಪರಮಾತ್ಮಸ್ವರೂಪವಾದ ಬೆಳಕನ್ನು ಕಾಣುವುದು ಮುಖ್ಯ ಧ್ಯೇಯವಾಗಿದೆ. ಇದಕ್ಕೆ ಅನುಗುಣವಾಗಿ ಮನಸ್ಸನ್ನು ಬಳಸಿಕೊಳ್ಳುವುದೇ ಮನಸ್ಸಿನ ನಿಯಂತ್ರಣವಾಗಿದೆ. ಮನಸ್ಸಿನ ಸ್ವಭಾವವೇ ಚಂಚಲವಾದುದು. ಅದನ್ನು ನಿಲ್ಲಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದನ್ನು ಗೀತಾಚಾರ್ಯನಾದ ಶ್ರೀಕೃಷ್ಣನೇ ಹೇಳುತ್ತಾನೆ. ಹಾಗಾದರೆ ಮನಸ್ಸನ್ನು ನಿಲ್ಲಿಸುವುದು ಹೇಗೆ ಎಂಬ ಉಪಾಯವನ್ನೂ ಅಲ್ಲೇ ಶ್ರೀಕೃಷ್ಣನು 'ಅಭ್ಯಾಸ ಮತ್ತು ವೈರಾಗ್ಯದಿಂದ' ಎಂದು ಹೇಳಿದ್ದಾನೆ. ಅನಿಷ್ಟವನ್ನು ದೂರಮಾಡಿ ಇಷ್ಟವನ್ನು ಬರಮಾಡಿಕೊಳ್ಳುವುದೇ ನಿಜವಾದ ಮನಸ್ಸಿನ ದಮ. 

ಸೂಚನೆ : 24/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.