Monday, March 11, 2024

ಕೃಷ್ಣಕರ್ಣಾಮೃತ - 5 ಯಶೋದೆ ಹೇಳಿದ ಕಥೆ – ಥಟ್ಟನೆ ಹುಟ್ಟಿದ ಪ್ರತಿಕ್ರಿಯೆ(Krishnakarnamrta - 5 Yasode Kelida Kathe – Thattane Huttida Pratikriye)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ದೇವರ ಅವತಾರಗಳಲ್ಲಿ ಪೂರ್ವಜನ್ಮದ ಸ್ಮರಣೆಯಿರುವುದೇ? - ಎಂಬುದೊಂದು ಕುತೂಹಲದ ಪ್ರಶ್ನೆಯೇ ಸರಿ. ಹಾಗೆಂಬುದಿದ್ದರೆ ಅದೊಂದು ರೋಚಕಸಂನಿವೇಶವೇ. ಆ ಬಗೆಯ ಪ್ರಸಂಗವು ಯಾವುದಾದರೂ ಪುರಾಣಗಳಲ್ಲೋ ಕಾವ್ಯಗಳಲ್ಲೋ ಬಂದಿದೆಯೋ ಇಲ್ಲವೋ, ಶ್ರೀಕೃಷ್ಣಕರ್ಣಾಮೃತದಲ್ಲಂತೂ ಬಂದಿದೆ! ಏನೆಂದು? ಶ್ರೀಕೃಷ್ಣನ ಜೀವನದ ಯಾವ ಘಟ್ಟದಲ್ಲಿ? ಇನ್ನೂ ಬಾಲಕನಾಗಿರುವಾಗಲೇ! ಸ್ಮರಣೆ ಬಂದುದೇಕೆ? – ಎಂಬುದೇ ಸ್ವಾರಸ್ಯಕರ. ಅದು ಹೀಗಿದೆ.

ನಿದ್ದೆ ಬರಲೆಂದು ತಾಯಿಯು ಮಗುವಿಗಾಗಿ ಜೋಗುಳ ಹಾಡುವುದುಂಟಷ್ಟೆ. ಸ್ವಲ್ಪ ಬೆಳೆದ ಮಗುವಾದರೆ "ಕಥೆ ಹೇಳು" ಎಂದು ಕೇಳುತ್ತವೆ, ಮಕ್ಕಳು - ಅಲ್ಲವೆ?

ಕೃಷ್ಣನ್ನು ಮಲಗಿಸಲೆಂದು ತಾಯಿ ಯಶೋದೆಯು ಹೇಳಿದ ಕಥೆ. ಎಷ್ಟಾದರೂ ರಾಮಾವತಾರವೇ ಮೊದಲು; ಕೃಷ್ಣಾವತಾರವೆಂಬುದು ಆಮೇಲೆ ಅಲ್ಲವೆ? ಆದ್ದರಿಂದ "ದೇವರ ಕಥೆ"ಯನ್ನು ಹೇಳಹೊರಟ ಸಾಧ್ವಿ ಯಶೋದೆಯು ರಾಮನ ವೃತ್ತಾಂತವನ್ನು ಹೇಳಿದಳು, ಬಾಲಕೃಷ್ಣನಿಗೆ. ಆಗಾದ ಸ್ವಾರಸ್ಯವನ್ನು ನೋಡೋಣ.

ಕಥೆ ಆರಂಭಿಸಿದ ಯಶೋದೆ, "ರಾಮನೆಂಬುವನೊಬ್ಬನಿದ್ದನು" ಎಂದು ಆರಂಭಿಸುತ್ತಾಳೆ, ಕಥೆ ಕೇಳುತ್ತಿರುವ ಮಕ್ಕಳು ಮಧ್ಯೆ ಮಧ್ಯೆ "ಹೂಂ" ಅನ್ನಬೇಕು, ಅನ್ನುತ್ತಿರಬೇಕು ತಾನೆ? ಆ "ಹೂಂ" ಎನ್ನುವುದು ಅಸ್ಪಷ್ಟವಾದರೋ ನಿಂತುಹೋದರೋ, ಕಥೆ ಹೇಳುವವರು ಕಥೆಯನ್ನು ನಿಲ್ಲಿಸಬಹುದಷ್ಟೆ? ಇಲ್ಲೂ ಕೃಷ್ಣನು "ಹೂಂ" ಎನ್ನುತ್ತಿದ್ದಾನೆ. ಕಥೆ ಸಾಗುತ್ತಿದೆ. ಯಶೋದೆ ಹೇಳಿದಳು: "ಆತನ ಹೆಂಡತಿ ಸೀತಾ - ಎಂಬುದಾಗಿ". ಅದಕ್ಕೂ "ಹೂಂ" ಎಂದ, ಕೃಷ್ಣ.

"ತಂದೆಯ ಅಪ್ಪಣೆಯಂತೆ ಅವರಿಬ್ಬರೂ ಕಾಡಿಗೆ ಹೋದರು" ಎಂದಳು, ಯಶೋದೆ. ಕಥೆಯನ್ನು ಮುಂದುವರೆಸುತ್ತಾ,

"ಅವಳನ್ನು ರಾವಣನು ಅಪಹರಿಸಿದನು" - ಎಂದೂ ಸಹಜವಾಗಿಯೇ ಹೇಳಿದಳು.

ಮೋಸದ ಸಂನ್ಯಾಸಿಯ ವೇಷದಲ್ಲಿ ಬಂದು ಸೀತೆಯನ್ನು ಬೆಕ್ಕಸಬೆರಗಾಗಿಸಿದ್ದ ಈ ವಕ್ರರಕ್ಕಸ; ಅಬಲೆಯಾದ ಅವಳನ್ನು ಪ್ರಬಲನಾದ ಈ ಅಸುರ ಬಲಪ್ರಯೋಗದಿಂದ ಅಪಹರಿಸಿದನಲ್ಲವೇ? ಈ ಪ್ರಸಿದ್ಧ ಕಥೆಯನ್ನೇ ಅವಳು ಹೇಳುತ್ತಿದ್ದುದು.

ಈ ತನಕ ಅವಳು ಹೇಳಿದುದೆಲ್ಲಕ್ಕೂ ಹೂಂ ಹೂಂ ಎಂದು ಪ್ರತ್ಯುತ್ತರಿಸುತ್ತಾ ಕಥೆ ಕೇಳುತ್ತಾ ನಿದ್ದೆಗೆ ಮೆಲ್ಲಮೆಲ್ಲನೆ ಜಾರುತ್ತಿದ್ದ ಪುಟ್ಟಕೃಷ್ಣನಿಗೆ ಥಟ್ಟನೆ "ಎಚ್ಚರ"ವಾದಂತಾಗಿದ್ದೇ ತಡ, "ಲಕ್ಷ್ಮಣಾ, ಎಲ್ಲಿ ಬಿಲ್ಲು? ಬಿಲ್ಲೆಲ್ಲಿ? ಮೊದಲು ತೆಗೆದುಕೋ ಬಿಲ್ಲನ್ನು!" - ಎಂದು ವ್ಯಗ್ರತೆಯಿಂದ ನುಡಿದುಬಿಟ್ಟನಂತೆ!

ಅಳಿಯದ ನೋವು

ರಾಮನ ಮಟ್ಟಿಗೆ ಹೇಳುವುದಾದರೆ, ಕಾಡಿಗೆ ಹೋಗಬೇಕಾದುದೇ ಖೇದಕಾರಕವೆನ್ನುವುದಾದರೂ (ಆತನು ಹಾಗೆ ಅದನ್ನು ಎಣಿಸಲಿಲ್ಲವೆನ್ನುವುದು ಬೇರೆಯ ಮಾತು), ಸೀತಾಪಹರಣವೆಂಬ ಘಟ್ಟದಿಂದ ಮುಂದಕ್ಕೆ ಬರೀ ಕ್ಲೇಶಮಯವೇ ಆದ ಜೀವನವಾಗಿಹೋಯಿತು ರಾಮನದು – ಎನ್ನಿಸುವುದಲ್ಲವೇ ನಮಗೆ? ಯಾವಳನ್ನು ತನ್ನ ಪ್ರಾಣಸಮ ಎಂದುಕೊಂಡಿದ್ದನೋ, ಯಾವಳ ಅಪಹರಣವಾದಮೇಲೆ ಕಂಗೆಟ್ಟು ಗೋಳಿಟ್ಟನೋ, ಯಾರನ್ನು ಮತ್ತೆ ಪಡೆಯಲು ಹರಸಾಹಸವನ್ನೇ ಮಾಡಿದನೋ, ಅಂತಹವಳು ಆ ಸೀತೆ.

ರಾಮನ ಕಷ್ಟಪರಂಪರೆ ಅಷ್ಟಕ್ಕೇ ಮುಗಿಯಲಿಲ್ಲವಾದರೂ, ನನ್ನ ಹೃದಯಾಧೀಶ್ವರಿಯನ್ನು ಮುಟ್ಟಲು ಬಂದನೇ ಆ ನೀಚ ರಾವಣ?! - ಎಂಬ ಭಾವ ಅದೆಷ್ಟು ಬಾರಿ ಮನೋರಂಗದಲ್ಲಿ ಹಾದು ಹೋಗಿತ್ತೋ, ಆ ರಾಮನಿಗೆ. ಕೆಲವು ನೋವು-ಆತಂಕಗಳು ಜನ್ಮಾಂತರಕ್ಕೂ ಮರೆಯಾಗವೋ ಏನೋ? ಎಂದೇ ಅದುವೇ ಮತ್ತೆ ಇಲ್ಲಿ ಅದು ಜಾಗರಿತವಾಗಿದೆ! ಅಂತರಂಗದ ಆ ಜಾಗರವೇ ಮಗುವಿನ ಈ ಎಚ್ಚರವಾಗಿದೆ.

ಮಂಪರಿನ ಸಂಧಿಸ್ಥಾನ

ಜಾಗ್ರತ್ತಿನಿಂದ ಸುಷುಪ್ತಿಗೆ ಜಾರುವಾಗ ಬರುವ ಮಂಪರಿನ ಸಂದರ್ಭವೇ ಪ್ರಾಕ್ತನಸಂಸ್ಕಾರವು ಏಳಲಿಕ್ಕೂ ಅಥವಾ ಅದನ್ನು ಎಬ್ಬಿಸಲಿಕ್ಕೂ ಹದವಾದ ಕಾಲ. ಸುಪ್ತಾವಸ್ಥೆಗೆ ಸರಿಯುತ್ತಿರುವ ಸಮಯವೇ ಸುಪ್ತಸಂಸ್ಕಾರದ ಸಮುತ್ಥಾಪನಕ್ಕೂ (ಎಚ್ಚರಗೊಳಿಸಲಿಕ್ಕೂ) ಸರಿಬರುವ ಸುಸಮಯ! ಹಿಪ್ನಾಟಿಸಂ (ಸಂಮೋಹನ) ಮಾಡುವಾಗಲೂ ಜಾಗ್ರದವಸ್ಥೆಯಿಂದ ಕೊಂಚ ಹಿಮ್ಮುಖವಾಗಿಸಿಯೇ ಮನಸ್ಸನ್ನು ವಶಕ್ಕೆ ತೆಗೆದುಕೊಳ್ಳುವರಲ್ಲವೇ?

ತನ್ನ ಪೂರ್ವಾವತಾರದಲ್ಲಿಯ ಈ ಘಟನೆಯು ಅದೆಷ್ಟು ಆಳವಾದ ಮುದ್ರೆಯನ್ನೊತ್ತಿತ್ತೋ ತನ್ನ ಅಂತರಂಗದ ಒಳಸ್ತರದಲ್ಲಿ! ಥಟ್ಟನೆ ಚೀರುವಂತಾಗಿದೆ ಈ ಶಿಶುವಿಗೆ! ಆದರದು ಉಕ್ಕಿದ್ದು ಅಳುವಾಗಿ ಅಲ್ಲ; "ಸೌಮಿತ್ರೇ ಬಿಲ್ಲೆಲ್ಲಿ, ತಾ ಬಿಲ್ಲನ್ನು" ಎಂಬ ಪೌರುಷದ ಮಾತು ಹೊರಹೊಮ್ಮಿದೆ!
ಹೀಗಾಗಿ ಲೀಲಾಶುಕನು ಚಿತ್ರಿಸುತ್ತಿರುವ ಪ್ರಸಂಗವು ಸುಭಗ-ಕವಿಕಲ್ಪಿತವೇ ಆಗಿದ್ದರೂ, ಅಸಂಭವವೇನಲ್ಲ - ಎನ್ನುವಂತಿದೆ.

ಕವಿಯ ವರ್ಣನೆಯು ಲೋಕೋತ್ತರವಾಗಿರಬೇಕೆಂದು ಹೇಳುತ್ತಾರೆ. ಲೌಕಿಕವಾಗಿದ್ದೂ ಹೀಗೆ ಲೋಕೋತ್ತರವಾದ ವರ್ಣನೆಯು ಯಾರ ಮನಸ್ಸನ್ನು ತಾನೆ ರಂಜಿಸದು?

ಈಗ ಈ ಶ್ಲೋಕವನ್ನೊಮ್ಮೆ ಆಸ್ವಾದಿಸಬಹುದು.
[ಯಶೋದೆ:] ರಾಮೋ ನಾಮ ಬಭೂವ
[ಕೃಷ್ಣ:] ಹುಂ
[ಯಶೋದೆ:] ತದಬಲಾ ಸೀತೇತಿ
[ಕೃಷ್ಣ:] ಹುಂ
[ಯಶೋದೆ:] ತೌ ಪಿತುರ್/ ವಾಚಾ
ಪಂಚವಟೀತಟೇ ವಿಹರತಃ, ತಾಮ್ ಆಹರದ್ ರಾವಣಃ |
ನಿದ್ರಾರ್ಥಂ ಜನನೀಕಥಾಮ್ ಇತಿ ಹರೇರ್ ಹುಂಕಾರತಃ ಶೃಣ್ವತಃ /
ಸೌಮಿತ್ರೇ! ಕ್ವ ಧನುರ್? ಧನುರ್ ಧನುರ್! ಇತಿ ವ್ಯಗ್ರಾ ಗಿರಃ ಪಾಂತು ವಃ ||

ಬಾಲಕೃಷ್ಣನ ವ್ಯಗ್ರವಾದ ಈ ಮಾತುಗಳು ಏನುಂಟೋ ಅವು ನಮ್ಮನ್ನು ಕಾಪಾಡಲಿ - ಎಂದಿದ್ದಾನೆ, ಲೀಲಾಶುಕ.

ಇದೇನು? ನುಡಿಗಳೇ ನಮ್ಮನ್ನು ಕಾಪಾಡುವುವೇ? ಅದರಲ್ಲೂ, ವ್ಯಗ್ರವಾದ ನುಡಿಗಳು ಕಾಪಾಡುವುವೇ? - ಎಂದೆಲ್ಲಾ ಪ್ರಶ್ನೆಗಳು ಬರಬಹುದು. "ಕೃಷ್ಣನು ನಮ್ಮನ್ನು ಕಾಪಾಡಲಿ" - ಎಂದರೆ ಏನು ಅರ್ಥವೋ, ಅದೇ ಅರ್ಥವೇ ಇವಕ್ಕೂ. ಕೃಷ್ಣನ ನಡೆಗಳೇನು, ನುಡಿಗಳೇನು - ಇವೆಲ್ಲದರಲ್ಲೂ ಆತನ ಛಾಪು ಇದ್ದೇ ಇರುತ್ತದೆ.

ಭಗವಂತನು ಇಳಿದುಬಂದಾಗ ಆತನಲ್ಲಿಯ ಉದಾತ್ತ ಭಗವದ್ಭಾವವು ಹೃದಯದಲ್ಲಿ ನೆಲೆಗೊಂಡದ್ದು ಆತನ ವರ್ತನೆಯಲ್ಲಿ ನೆಲೆಸಿರುತ್ತದೆ. ವರ್ತನೆಯೆಂಬುದು ಮಾತಿನಲ್ಲೂ ಕೃತಿಯಲ್ಲೂ ವ್ಯಕ್ತವಾಗುತ್ತದೆ.

ಆರ್ಷಕೃತಿಗಳಲ್ಲಿ ತೋರುವ ಇಂತಹ ಮಾತುಗಳಿಗೂ ನಡೆಗಳಿಗೂ ಹೆಚ್ಚು ಸಂಬಂಧವಿರುವುದು - ಎಂಬುವುದಾದರೂ, ಭಕ್ತಿಯ ಪರಾಕಾಷ್ಠೆಯನ್ನು ಮುಟ್ಟಿದ ಲೀಲಾಶುಕರಂತಹವರ ನಿರೂಪಣೆಗಳಲ್ಲಿ ತೋರಿಬರುವ ನಡೆನುಡಿಗಳಲ್ಲೂ ಅದೇ ಭಗವದ್ಭಾವವೇ ಪ್ರತಿಫಲಿತವಾಗುತ್ತದೆ.

ಇದೇ ಸಂದರ್ಭದಲ್ಲಿ ಇಂತಹುದೇ ಚಿತ್ರಣವಿರುವ ಮತ್ತೊಂದು ಶ್ಲೋಕವನ್ನೂ ಗಮನಿಸಬಹುದು. ಇದೂ ನಿದ್ರಾಸಂದರ್ಭದ ಶ್ಲೋಕವೇ. ಆದರೆ ಇಲ್ಲಿರುವುದು ಯಶೋದೆಯಲ್ಲ, ಎಳೆಯ ಕೃಷ್ಣನೂ ಅಲ್ಲ ಇಲ್ಲಿರುವವನು ಬೆಳೆದ ಕೃಷ್ಣ. ಇದು ನಿದ್ರಾಪ್ರಸಂಗವಾದರೂ ಇಲ್ಲಿ ಕೃಷ್ಣನು ನಿದ್ರಿಸುತ್ತಿಲ್ಲ. ಬದಲಾಗಿ 'ಸ್ವಪ್ನಾಯಮಾಯ'ನಾಗಿದ್ದಾನೆ. ಎಂದರೆ ಕನಸಿನಲ್ಲಿ ಮಾತನಾಡುತ್ತಿದ್ದಾನೆ.

ಕನವರಿಕೆಯ ನುಡಿ

ಕನಸಿನಲ್ಲಿ ಯಾರಾದರೂ ಮಾತನಾಡುವರೆಂದರೆ ಅದೊಂದು ವಿಶಿಷ್ಟಸಂನಿವೇಶವೇ ಏಕೆ? ಏಕೆಂದರೆ ಆಗ ಅವರ ಅಂತರಂಗದ ಅಂತರಾಳದಲ್ಲಿರುವ ಏನೇನೋ ವಿಷಯಗಳು ಅವರಿಗೇ ಗೊತ್ತಿಲ್ಲದಂತೆಯೇ ಹೊರಹೊಮ್ಮಿನಿಡುವುದುಂಟು. ಇಲ್ಲಿ ಆಗಿರುವುದೂ ಹಾಗೆಯೇ.

ಯುವಕನಾದ ಕೃಷ್ಣನಿಗೆ ಪೂರ್ವಜನ್ಮದ ಸ್ಮರಣೆ ಬಂದಿದೆ. ರಾಮಾವತಾರದ ಒಂದು ಸಂದರ್ಭ. ಸೀತಾಪಹರಣದ ಪ್ರಸಂಗವಲ್ಲ, ಆಮೇಲಿನದು. ನೆಚ್ಚಿನ ತಮ್ಮನಾದ ಲಕ್ಷ್ಮಣನನ್ನು ಸಂಬೋಧಿಸಿ ಮಾತನಾಡುತ್ತಿದ್ದಾನೆ, ತನ್ನ ಕನಸಿನಲ್ಲಿ ತನ್ನ ಅಂತರಂಗವನ್ನೇ ತೋಡಿಕೊಳ್ಳುತ್ತಿದ್ದಾನೆ. ಸೀತೆಯಿಂದಾಗಿ ವಿರಹ ಆತನಿಗೆ ತೀವ್ರವಾದ ನೋವನ್ನುಂಟುಮಾಡುತ್ತಿದೆ.

ಏನು ಆ ಪ್ರಸಂಗ? ಆಗ ಕೃಷ್ಣನು ನುಡಿದದ್ದೇನು, ಆಗಾದದ್ದೇನು? – ಎಂಬ ಕುತೂಹಲವೇ? ಅದಕ್ಕೊಂದಿಷ್ಟು ವಿಸ್ತ್ತೃತವಿವರಣೆಯೂ ಬೇಕು, ಅದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣವೇ?

 ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ8/3/2024 ರಂದು ಪ್ರಕವಾಗಿದೆ.