Monday, March 11, 2024

ಪ್ರಸೂತಿ ಕೋಣೆಯಲ್ಲಿ ಏಕೆ ಕತ್ತಲು ? (Prasuti Koṇeyalli Eke Kattalu?)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)ಒಬ್ಬ ಹೆಣ್ಣುಮಗಳು ಶಿಶುವಿಗೆ ಜನ್ಮವಿತ್ತಕೂಡಲೇ ಬೆಳಕೇ ಇಲ್ಲದ ಒಂದು ಕೋಣೆಯೊಳಗೆ ಹಾಕಿಡುವ ಪದ್ಧತಿ ಹಿಂದಿನ ಕಾಲದಲ್ಲಿ ಇತ್ತು. ಅಲ್ಲೊಂದು ಸಣ್ಣ ಬೆಳಕಿನ ಸೊಡರನ್ನು ಬೆಳಗಿಸಿ ಇಡಲಾಗುತ್ತಿತ್ತು. ಅಷ್ಟು ಮಾತ್ರವೇ ಬೆಳಕು. ಅದಕ್ಕಿಂತ ಹೆಚ್ಚು ಬೆಳಕು ಬರಬಾರದು. ಬಂದರೆ ಅಪಾಯ ಎಂದೂ ತಿಳಿಯಲಾಗಿತ್ತು. ಅಲ್ಲಿ ಬೆಳಕನ್ನು ಹೊತ್ತಿಸಿ ಇಡುವ ಹಿನ್ನೆಲೆಯನ್ನು ಶ್ರೀರಂಗ ಮಹಾಗುರುಗಳು ಗರ್ಭೋಪನಿಷತ್ತಿನ ವಾಕ್ಯವನ್ನು ಉದ್ಧರಿಸಿ ವಿವರಿಸುತ್ತಿದ್ದರು. ಪ್ರತಿಯೊಂದು ಮಗುವೂ ತಾಯಿಯ ಗರ್ಭದಲ್ಲಿ ಇರುವಾಗ ಎಂಟನೆ ತಿಂಗಳಿನಲ್ಲಿ ಭಗವಂತನನ್ನು ದರ್ಶನ ಮಾಡುತ್ತದೆ. ಭಗವಂತನು ಅಲ್ಲಿ ದೀಪದ ಜ್ವಾಲೆಯ ಆಕಾರದಲ್ಲಿ ಮತ್ತು ಆ ಜ್ವಾಲೆಯ ವರ್ಣದಲ್ಲಿ ಗೋಚರವಾಗುತ್ತಾನೆ. ಅಲ್ಲಿಂದ ಆ ಮಗುವಿಗೆ ಭಗವಂತನ ಅವಿಚ್ಛಿನ್ನವಾದ ಸ್ಮರಣೆ ಇರುತ್ತದೆ. ಯಾವಾಗ ಮಗುವು ತಾಯಿಯ ಗರ್ಭದಿಂದ ಹೊರಗೆ ಬರುತ್ತದಯೋ, ಆ ಮಗುವಿಗೆ ವೈಷ್ಣವೀ ಮಾಯೆಯು ಆವರಿಸುತ್ತದೆ. ಅದರ ಪರಿಣಾಮವಾಗಿ ಗರ್ಭಾಲಯದಲ್ಲಿ ಕಂಡ ಭಗವಂತನ ದರ್ಶನದ ವಿಸ್ಮರಣೆಯುಂಟಾಗುತ್ತದೆ. ಅದಕ್ಕೇ ಮಗುವೂ ಅಳಲೂ ಆರಂಭಿಸುತ್ತದೆ. ಹೀಗೆ ಉಂಟಾದ ವಿಸ್ಮರಣೆಯು ಕಳೆದು, ಮತ್ತೆ ಅದರ ದರ್ಶನಕ್ಕೆ ಬೇಕಾದ ಬಾಹ್ಯವಾದ ಅನುಕೂಲತೆ ಬೇಕಾಗುತ್ತದೆ. ಹಾಗಾಗಿ ಪ್ರಸವದ ಅನಂತರ ಪ್ರಸೂತಿಯ ಕೊಣೆಯಲ್ಲಿ ಸಣ್ಣ ದೀಪದ ಸೊಡರನ್ನು ಬೆಳಗಿಸಲಾಗುತ್ತಿತ್ತು. ಅದರಿಂದ ಆ ಮಗುವಿಗೆ ತಾನು ಕಂಡ ಭಗವದ್ದರ್ಶನದ ಸ್ಮೃತಿಯು ಮತ್ತೆ ಬರಲು ಅವಕಾಶವಾಗುತ್ತಿತ್ತು. ಇಂತಹ ಹಿನ್ನೆಲೆಯಿಂದ ಪ್ರಸೂತಿಯ ಕೋಣೆಯಲ್ಲಿ ಕತ್ತಲಿಟ್ಟು ಸಣ್ಣ ದೀಪವನ್ನು ಹಚ್ಚಲಾಗುತ್ತಿತ್ತು ಎಂಬ ಮಾರ್ಮಿಕವಾದ, ಅಂತರಂಗದ ದರ್ಶನಕ್ಕೆ ಸಂಬಂಧಿಸಿದ, ಅದ್ಭುತವಾದ, ಯೋಗಿಗಮ್ಯವಾದ ವಿವರಣೆಯನ್ನು ಶ್ರೀರಂಗ ಮಹಾಗುರುಗಳು ಕೊಟ್ಟಿದ್ದನ್ನು ನಾನು ಬಹಳ ಗೌರವಪೂರ್ವಕವಾಗಿ ಇಲ್ಲಿ ಪ್ರಸ್ತಾಪಿಸಿದ್ದೇನೆ. 


ಈ ಮಹತ್ತರವಾದ ಉದ್ದೇಶವನ್ನು ಇಟ್ಟುಕೊಂಡು ಅದನ್ನು ಕತ್ತಲೆಯ ಕೊಣೆಯನ್ನಾಗಿ ಮಾಡಿಡುತ್ತಿದ್ದರು. ಅಲ್ಲದೇ ಈ ಕತ್ತಲೆಕೋಣೆಯ ಪರಿಸರದಿಂದ ಇಂತಹ ಅಧ್ಯಾತ್ಮದ ಲಾಭವೊಂದಾದರೆ, ಭೌತಿಕವಾದ ಲಾಭವೂ ಆಗುತ್ತಿತ್ತು. ಏಕೆಂದರೆ ನಮ್ಮ ಪ್ರಾಚೀನ ಋಷಿಮಹರ್ಷಿಗಳ ಚಿಂತನೆಯ ಜಾಡೇ ಹಾಗೆ, ಅದು ಭೌತಿಕ, ದೈವಿಕ ಮತ್ತು ಅಧ್ಯಾತ್ಮಿಕ ಎಂಬ ಮೂರೂ ಸ್ತರಗಳಿಗೂ ಮಹದುಪಕಾರವನ್ನು ಮಾಡುವಂತಿರುತ್ತಿತ್ತು. ಹಾಗಾದರೆ ಇಲ್ಲಿ ಆಗುವ ಭೌತಿಕವಾದ ಅನುಕೂಲತೆ ಏನು? ಎಂದರೆ, ಹುಟ್ಟುವ ಮಗುವಿನ ಕಣ್ಣು ಮಂದ ಬೆಳಕನ್ನು ಮಾತ್ರ ನೋಡಲು ಸಮರ್ಥವಾಗಿರುತ್ತದೆ. ಮಗು ಬೆಳೆದಂತೆ ಬೆಳೆದಂತೆ ಅದೇ ಮಗುವಿಗೆ ಇನ್ನೂ ತೀಕ್ಷ್ಣವಾದ ಬೆಳಕನ್ನೂ ನೋಡುವ ಸಾಮರ್ಥ್ಯ ಬರುತ್ತಾ ಹೋಗುತ್ತದೆ. ಒಂದು ವೇಳೆ ಒಮ್ಮೆಲೆ ಆ ಮಗುವು ನೋಡಲು ಸಾಧ್ಯವಾಗದಿರುವಷ್ಟು, ಕಣ್ಣು ಕುಕ್ಕುವಷ್ಟು ಬೆಳಕನ್ನು ಹುಟ್ಟಿದ ಕೂಡಲೇ ನೋಡಿದರೆ ಮಗುವಿನ ಕಣ್ಣು ಏನಾಗಬಹುದು!? ಆ ಕ್ಷಣದಿಂದ ಕಣ್ಣು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಇದೇ ಕಾರಣದಿಂದ ಇಂದಿನ ಚಿಕ್ಕ ಚಿಕ್ಕ ಮಕಳಿಗೂ ಕಣ್ಣಿನ ತೊಂದರೆ ಬಂದು ಅದಕ್ಕೆ ಕನ್ನಡಕವನ್ನು ಧರಿಸುವ ಅನಿವಾರ್ಯ ಬಂದಿದೆ. ಆದರೆ ಹಿಂದಿನ ಪದ್ಧತಿಯಂತೆ ಆದರೆ ಆ ಮಗುವಿಗೆ ನಿಧಾನವಾಗಿ ಕಣ್ಣಿನ ಸಾಮರ್ಥ್ಯ ವೃದ್ಧಿಯಾಗುತ್ತದೆ. ಬೆಳಕನ್ನು ತೋರಿಸುತ್ತಾ ಹೋದರೆ ಕಣ್ಣು ಆರೋಗ್ಯವಾಗಿರಲು ಸಾಧ್ಯ. ಇದೇ ಕಾರಣಕ್ಕೆ ಸಾಮಾನ್ಯ ಮೂರು ತಿಂಗಳು ಆದ ಅನಂತರವಷ್ಟೇ 'ನಿಷ್ಕ್ರಮಣ' ಎಂಬ ಸಂಸ್ಕಾರಕರ್ಮವನ್ನು ಮಾಡಿತ್ತಿದ್ದರು. ಆಗ ಮಾತ್ರ ಹೊರಕ್ಕೆ ಬಂದು ಮಂದವಾದ ಸೂರ್ಯನ ಕಿರಣವನ್ನು ಮೈಗೆ ತಾಕುವಂತೆ ಮಾಡಲಾಗುತ್ತಿತ್ತು. ಆದರೆ ಇಂದಿನ ಆಧುನಿಕ ವಿಜ್ಞಾನವೆಂಬ ಹೆಸರಿನಲ್ಲಿ ಮಗುವಿನ ಆರೋಗ್ಯವನ್ನೇ ಕಡೆಗಣಿಸುತ್ತಿದ್ದೇವೆ. ಪ್ರಸೂತಿ ಕೋಣೆಯಲ್ಲಿ ಕತ್ತಲೇ ಇರುವುದಿಲ್ಲ. ವಿದ್ಯುದ್ದೀಪದ ಪ್ರಖರವಾದ ಬೆಳಕುಗಳು. ಅಂತಹ ಪರಿಸ್ಥಿತಿಯೇ ಇಂದು ನೋಡಲು ಸಿಗುವುದಿಲ್ಲ. ಇವತ್ತು ಪ್ರಸವವಾಗುವುದು ಆಸ್ಪತ್ರೆಯಲ್ಲಿ. ಅಲ್ಲಿ ರಾತ್ರಿಯೂ ಹಗಲೇ ಆಗಿರುತ್ತದೆ. ಕತ್ತಲೆಗೆ ಆಸ್ಪದವೇ ಇರುವುದಿಲ್ಲ. ಮತ್ತು ಯಾವುದೋ ವಿಟಮಿನ್ ಕೊರತೆ ಮಗುವಿಗೆ ಎಂದು ಹೇಳುತ್ತಾ ಹುಟ್ಟಿದ ದಿನದಿಂದಲೇ ಹೊರಕ್ಕೆ ಮಗುವನ್ನು ತಂದು ಸೂರ್ಯನ ಬಿಸಿಲನ್ನು ಆ ಮೃದುವಾದ ಮಗುವಿನ ಮೈಗೂ ಸೋಂಕಿಸುತ್ತೇವೆ. ಆದರೆ ಇಂದು ಚಿಂತಿಸುವುದು ಕೇವಲ ತಾತ್ಕಾಲಿಕವಾದ ಮಗುವಿನ ಭೌತಿಕ ಬೆಳವಣಿಗೆ ಮಾತ್ರ. ಆದರೆ ನಮ್ಮ ಭಾರತೀಯರು ಎಷ್ಟು ಆಳ ಮತ್ತು ವಿಸ್ತಾರವಾದ ಚಿಂತನೆಯನ್ನು ಮಾಡುತ್ತಿದ್ದರು? ಎಂಬುದಕ್ಕೆ ಈ ಪ್ರಸೂತಿಕೊಣೆಯ ವ್ಯವಸ್ಥೆಯೇ ಸಾಕು.  


ಸೂಚನೆ: 10/03/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.