Sunday, March 17, 2024

ವ್ಯಾಸ ವೀಕ್ಷಿತ - 79 ಭೀಷ್ಮರ ಸಲಹೆ (Vyaasa Vikshita - 79 Bhishmara Salahe)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)ಕರ್ಣ-ದುರ್ಯೋಧನರ ಮಾತಾದಮೇಲೆ, ಮಂತ್ರಾಲೋಚನೆಗೆಂದು ಭೀಷ್ಮ-ದ್ರೋಣ-ವಿದುರರನ್ನು ಬರಮಾಡಿಸಲಾಯಿತಷ್ಟೆ. ಭೀಷ್ಮರು ಹೇಳಿದರು:

"ಯಾವುದೇ ಕಾರಣಕ್ಕೂ ಪಾಂಡವರೊಂದಿಗೆ ವಿರೋಧವೆಂಬುದು ನನಗೆ ರುಚಿಸದು. ಧೃತರಾಷ್ಟ್ರನು ಹೇಗೋ ಪಾಂಡುವು ಸಹ ನನಗೆ ಹಾಗೆಯೇ. ಗಾಂಧಾರಿಯ ಮಕ್ಕಳು ಹೇಗೋ ಕುಂತೀಪುತ್ರರೂ ನನಗೆ ಹಾಗೆಯೇ. ಅವರಿಗೆ ಹೇಗೆ ರಕ್ಷಣೆಯನ್ನು ನಾನು ಕೊಡಬೇಕೋ ಹಾಗೆಯೇ ನೀನೂ ಕೊಡಬೇಕಲ್ಲವೆ? ಎಲ್ಲರೂ ಎಲ್ಲರಿಗೂ ಬೇಕಾದವರೇ. ಹೀಗಿರಲಾಗಿ, ಪಾಂಡವರೊಂದಿಗೆ ಸಂಘರ್ಷವೆಂಬುದನ್ನು ನಾನಿಷ್ಟಪಡಲಾರೆ.

ಆ ವೀರರೊಂದಿಗೆ ಸಂಧಾನವಾಗಬೇಕು. ಅರ್ಧರಾಜ್ಯವನ್ನು ಅವರಿಗೆ ಕೊಟ್ಟುಬಿಡುವುದಾಗಲಿ. ಪಾಂಡವರಿಗೂ ಇದು ಆನುವಂಶಿಕರಾಜ್ಯವೇ! ಅಯ್ಯಾ ದುರ್ಯೋಧನ, ಇದು ನನ್ನ ಪೈತೃಕರಾಜ್ಯ (ಎಂದರೆ ಅಪ್ಪನ ಆಸ್ತಿ) ಎಂಬುದಾಗಿ ನೀನೆಂತು ಭಾವಿಸುವೆಯೋ, ಅಂತೆಯೇ ಪಾಂಡವರೂ ಕಾಣುವರು. ಯಶಸ್ವಿಗಳಾದ ಪಾಂಡವರಿಗೆ ರಾಜ್ಯವು ಪ್ರಾಪ್ತವಾಗತಕ್ಕದ್ದಲ್ಲವೆನ್ನುವುದಾದರೆ, ನಿನಗಾಗಲಿ, ಭರತವಂಶದ ಮತ್ತಾರಿಗಾಗಲಿ ಇದು ಪ್ರಾಪ್ತವಾಗುವುದು ಹೇಗೆ? ಅಧರ್ಮದಿಂದ ನೀನು ಈ ರಾಜ್ಯವನ್ನು ಪಡೆದಿರುವೆ, ದುರ್ಯೋಧನ. ಅದರೆ ಆ ಪಾಂಡವರಾದರೋ ನಿನಗಿಂತಲೂ ಮೊದಲೇ ಇದನ್ನು ಪಡೆದಿರುವರೆಂದೇ ನಾನು ಭಾವಿಸುತ್ತೇನೆ. ಅದ್ಧರಿಂದ, ಅವರಿಗೆ ಅರ್ಧರಾಜ್ಯವನ್ನು ಮಧುರವಾದ ರೀತಿಯಿಂದಲೇ ಕೊಟ್ಟುಬಿಡು. ಇದುವೇ ಸರ್ವಜನರಿಗೂ ಹಿತವಾದುದು. ಇದಕ್ಕೆ ವಿರುದ್ಧವಾಗೇನಾದರೂ ಮಾಡಿದಾದುದಲ್ಲಿ ನಮ್ಮ ಹಿತವು ಸಾಧಿತವಾಗುವುದಿಲ್ಲ; ನಿನಗೂ ಸಹ ಪೂರ್ಣವಾದ ಅಕೀರ್ತಿಯುಂಟಾಗುವುದರಲ್ಲಿ ಸಂಶಯವೇ ಇಲ್ಲ. ಕೀರ್ತಿರಕ್ಷಣೆಯಲ್ಲಿ ತೊಡಗಿರು; ಕೀರ್ತಿಯೇ ಪರಮಬಲ (ಕೀರ್ತಿಃ ಹಿ ಪರಮಂ ಬಲಮ್). ಕೀರ್ತಿನಾಶವಾದ ಮನುಷ್ಯನ ಜೀವಿತವು ನಿಷ್ಫಲವೆಂದೇ. ಕೌರವನೇ, ಎಲ್ಲಿಯ ತನಕ ಕೀರ್ತಿಯೆಂಬುದು ಪ್ರಣಾಶವನ್ನು ಹೊಂದುವುದಿಲ್ಲವೋ, ಅಲ್ಲಿಯ ತನಕವೇ ಒಬ್ಬನು ಬದುಕಿರುವುದು. ಯಾವನ ಕೀರ್ತಿಯು ನಾಶಹೊಂದುವುದೋ ಆತನು ನಾಶಹೊಂದಿದಂತೆಯೇ ಸರಿ (ನಷ್ಟಕೀರ್ತಿಸ್ತು ನಶ್ಯತಿ). ಆದುದರಿಂದ ಕುರುವಂಶಕ್ಕೆ ಉಚಿತವಾದ ಧರ್ಮವು ಯಾವುದೋ ಅದನ್ನೇ ಪರಿಪಾಲಿಸು; ನಿನ್ನ ಪೂರ್ವಜರಿಗೆ ಯಾವುದು ಅನುರೂಪವೋ ಅದನ್ನೇ ಮಾಡು.

ಪಾಂಡವರು ಕುಂತಿಯೂ ಉಳಿದಿರುವುದೇ ಅದೃಷ್ಟವಲ್ಲವೇ? ಆ ಪಾಪಿ ಪುರೋಚನನ ಆಸೆ ಪೂರೈಸದುದೂ, ಆತನು ನಾಶಗೊಂಡನೆಂಬುದೂ ಅದೃಷ್ಟವೇ! ಕುಂತಿಯ ಮಕ್ಕಳು ಸುಟ್ಟುಹೋದರು - ಎಂಬುದಾಗಿ ನಾನದೆಂದು ಕೇಳಿಪಟ್ಟೆನೋ, ಆ ಕ್ಷಣದಿಂದಲೇ, ಓ ಗಾಂಧಾರೀಪುತ್ರನೇ, ನಾನು ಯಾವ ಪ್ರಾಣಿಯ ಮುಖವನ್ನೂ ಕಣ್ಣೆತ್ತಿನೋಡಲಾಗಿಲ್ಲ; ಕುಂತಿಯ ವಿಷಯದಲ್ಲಿಯೂ ಹಾಗೆಯೇ. ಲೋಕವು ಏನೆಂಬುದಾಗಿ ಭಾವಿಸುತ್ತದೆಂಬುದೂ ಗಮನಿಸಬೇಕಾದದ್ದು: ಪಾಂಡವರು ಜೀವಿಸಿರುವರು - ಎಂಬುದು, ಹಾಗೂ ಅವರ ದರ್ಶನವಾಗುವುದು - ಎಂಬುದು ನಿನ್ನ ಮೇಲಿನ ಕಲಂಕವನ್ನು ನಾಶಮಾಡುವಂತಹುದು - ಎಂಬುದಾಗಿ ನೀನರಿಯಬೇಕು, ಮಹಾರಾಜ! ಆ ಪಾಂಡುವೀರರು ಬದುಕಿರುವ ಪರ್ಯಂತವೂ ಅವರ ಪಿತ್ರ್ಯವಾದ ಅಂಶವು (ಎಂದರೆ ಪೈತೃಕವಾಗಿ ಅವರಿಗೆ ಬಂದಿರುವಂತಹುದು) ಯಾವುದುಂಟೋ ಅದನ್ನು ಕಿತ್ತುಕೊಳ್ಳಲು ಇಂದ್ರನಿಂದಲೂ ಶಕ್ಯವಿಲ್ಲ! ಅವರೆಲ್ಲರೂ ಧರ್ಮದಲ್ಲೇ ನೆಲೆನಿಂತವರು. ಅವರೆಲ್ಲರ ಮನಸ್ಸು ಒಂದೇ ಪ್ರಕಾರವಾಗಿದೆ. ರಾಜ್ಯವೆಂಬುದು ಇಬ್ಬರಿಗೂ ಸಮಾನವೆಂಬುದಾಗಿರುವಾಗ, ಅವರನ್ನು ಇಲ್ಲಿಂದ ಓಡಿಸಲಾಗಿರುವುದು ಅಧರ್ಮದಿಂದ.

ಸಾರಾಂಶವಿಷ್ಟು: ನೀನು ಧರ್ಮವನ್ನಾಚರಿಸಬೇಕೆಂದಿದ್ದರೆ, ನನಗೆ ಪ್ರಿಯವಾದುದನ್ನು ನೀ ಮಾಡಬಯಸುವೆಯಾದರೆ, ನಿನಗೆ ಕ್ಷೇಮವೆಂಬುದೇನಾದರೂ ಆಗಬೇಕೆಂದಿದ್ದರೆ - ಪಾಂಡವರಿಗೆ ಅರ್ಧ(ರಾಜ್ಯ)ವನ್ನು ಕೊಡತಕ್ಕದ್ದು. (ತೇಷಾಮ್ ಅರ್ಧಂ ಪ್ರದೀಯತಾಮ್).

ಸೂಚನೆ : 17/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.