Sunday, March 31, 2024

ಕೃಷ್ಣಕರ್ಣಾಮೃತ - 8 ವೇಣುಗಾನದ ನವಪರಿಣಾಮಗಳು ( Krsnakarnamrta - 8 Venuganada Navaparinamagalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)
ಕೊಳಲು ಹಿಡಿದಿರುವ ಕೃಷ್ಣನನ್ನು ಲೀಲಾಶುಕನು ಬಯಸಿದನಲ್ಲವೆ? ಏನು ಈ ಕೊಳಲಿನ ವೈಶಿಷ್ಟ್ಯ? ಅದೇನು ಬರೀ ಕೊಳಲಿಗಾಗಿ ಕೃಷ್ಣನನ್ನು ಬಯಸಿರುವುದೆ? ಕಾಸು ಕೊಟ್ಟರೆ ಕೊಳಲು ಕೊಳ್ಳಲಾಗದೇ? ಹಾಗಾದರೆ ಬರೀ ಕೊಳಲಿನಲ್ಲೇ ಎಲ್ಲ ವಿಶೇಷವಿರುವುದೆಂದಲ್ಲ; ಕೊಳಲಿನಿಂದಾಗುವ ಗಾನದಲ್ಲಿದೆ - ಎಂಬುದು ವೇದ್ಯವಾಗುತ್ತದೆ. ಮತ್ತೂ ಮುಖ್ಯವಾಗಿ, ಕೃಷ್ಣನ ಕೊಳಲಿನ ಗಾನವೆಂಬುದೇ ವಿಶಿಷ್ಟವಾದದ್ದು. ಆದುದರಿಂದ ಗಾನ/ಗಾಯಕರ ಕಡೆಗೆ ಗಮನ ಕೊಡಬೇಕೇ ವಿನಾ ಬರೀ ವಾದ್ಯದ ಮೇಲಲ್ಲ - ಎಂದೆನಿಸುವುದು ಸಹಜವೇ. ವಾದ್ಯವಾದಕರಾರು, ಅವರ ಗಾನದ ಉದ್ದೇಶವೇನಿರಬಹುದು? - ಎಂಬಿವೂ ಯುಕ್ತವಾದ ಪ್ರಶ್ನೆಗಳೇ.

ಭಗವಂತನ ಕೈಗೆ ಸಿಕ್ಕ ಕೊಳಲೆಂದಾದರೆ, ಅದರಿಂದ ಆಗುವ ಪ್ರಭಾವವು ವಿಶಿಷ್ಟವೇ ಸರಿ. ಲೀಲಾಶುಕನು ಅದನ್ನು ಬಹಳ ರಮಣೀಯವಾಗಿ ಪ್ರತಿಪಾದಿಸುತ್ತಾನೆ. ಮನುಷ್ಯರ ಮೇಲೂ, ಪ್ರಶು-ಪ್ರಾಣಿಗಳ ಮೇಲೂ, ಕೊನೆಗೆ ಗಿಡ-ಮರಗಳ ಮೇಲೂ ಆಗಿದೆ. ಎಲ್ಲೆಲ್ಲಿ ಏನೇನು ಎಂಬುದರ ಆತನ ಚಿತ್ರಣವನ್ನು ಅನುಸರಿಸೋಣ.

ಮೊದಲನೆಯದಾಗಿ ಲೋಕದ ಮೇಲೆ ಆಗಿರುವ ಒಟ್ಟಾರೆ ಪ್ರಭಾವ. ಲೋಕಗಳೆಲ್ಲ ಉನ್ಮಾದಕ್ಕೆ ಒಳಗಾಗಿವೆ. ಉನ್ಮಾದವೆಂಬ ಪದಕ್ಕೆ ಒಂದೆರಡು ಕೆಟ್ಟ ಅರ್ಥಗಳೂ ಇವೆ, ಬಹಳ ಉತ್ಕೃಷ್ಟವಾದ ಒಳ್ಳೆಯ ಅರ್ಥವೂ ಇದೆ. ಉನ್ಮಾದವೆಂಬುದು ಮಾನಸಿಕ ರೋಗ; ಅದೊಂದು ಬಗೆಯ ಹುಚ್ಚಿನ ಸ್ಥಿತಿಯೆಂದು ಹೇಳಿದರೂ ತಪ್ಪಿಲ್ಲ. ಆದರೆ ಈ ಪದಕ್ಕೆ ಒಂದು ಉತ್ಕೃಷ್ಟವಾದ ಅರ್ಥವೂ ಇದೆ. ಅದು ಯೋಗಶಾಸ್ತ್ರಕ್ಕೆ ಸಂಬಂಧಪಟ್ಟದ್ದು. ಅದು ಮನಸ್ಸಿನ ಒಂದು ಪರಮೋತ್ಕೃಷ್ಟ ಸ್ಥಿತಿ. ಯೋಗದ ಉನ್ನತಾವಸ್ಥೆಯಲ್ಲಿ ಉಂಟಾಗುವ ಸ್ಸ್ಥಿತಿ. ಆ ಸ್ಥಿತಿಗೆ ಉನ್ಮನೀ ಎಂದು ಹೆಸರು. ಉನ್ಮನಿಯನ್ನೇ ಮನೋನ್ಮನಿಯೆಂದೂ ಕರೆಯುವರು. ಮನೋನ್ಮನಿಯೆಂಬುದು ದೇವತೆಯ ಹೆಸರೂ ಹೌದು. ಶೈವ ದೇವಾಲಯಗಳಲ್ಲಿ ಪ್ರವೇಶ ಮಾಡುತ್ತಿದ್ದಂತೆಯೇ ಮೊದಲು ಮನೋನ್ಮನಿಗೆ ನಮಸ್ಕಾರ ಸಲ್ಲಿಸಿ ಆಮೇಲೆ ಒಳಗೆ ಹೋಗುವ ಕ್ರಮವಿದೆ.

ಆಂತರಂಗಿಕವಾಗಿ ಆಧ್ಯಾತ್ಮಿಕ ಪ್ರಯಾಣದಲ್ಲಿ ಸಾಗುತ್ತಿರುವಾಗ ಮನೋನ್ಮನೀ - ಎಂಬ ಅವಸ್ಥೆಯು ಉಂಟಾದ ಮೇಲೆಯೇ ಭಗವತ್ಸಾಕ್ಷಾತ್ಕಾರವಾಗುವುದು - ಎಂಬುದನ್ನು ಸೂಚಿಸುವುದಕ್ಕಾಗಿಯೇ ಮನೋನ್ಮನಿಯನ್ನೇ ದೇವತೆಯನ್ನಾಗಿ ತೋರಿಸಿ, ಮೊದಲು ಅವಳಿಗೆ ಪ್ರಣಾಮವೆಂದು ವಿಹಿತಮಾಡಿರುವುದು. ಮನಸ್ಸು ಏಕಾಗ್ರವಾದಾಗಲೇ ಈ ಅವಸ್ಥೆಯು ಸಿದ್ಧಿಸುವುದು. ಆಗ ಉಂಟಾಗುವ ಭಗವದ್-ಅಭಿಮುಖತೆಯೇನೂಂಟೋ ಅದೇ ಮನೋನ್ಮನೀ. ಈ ಶಬ್ದದ ಪುಲ್ಲಿಂಗರೂಪವೇ ಮನೋನ್ಮನ. ಮನೋನ್ಮನ ಎಂಬುದು ಸಾಕ್ಷಾತ್ ಶಿವನ ಹೆಸರು. ಮತ್ತು ಆ ಹೆಸರಾದರೂ ವೇದದಲ್ಲಿಯೇ ಬರುವಂತಹುದು ಹೀಗೆ ಮನೋನ್ಮನ-ಮನೋನ್ಮನಿಯರು ಪತಿ-ಪತ್ನಿಯರು, ಶಿವ-ಪಾರ್ವತಿಯರು. ಪ್ರಕೃತಿಮಾತೆಯ ಅನುಗ್ರಹವಾದ ಬಳಿಕವೇ ಪರಮಪುರುಷನ ಅನುಗ್ರಹವಾಗುವುದು. ಪ್ರಕೃತಿಮಾತೆಯನ್ನು ಒಲಿಸಿಕೊಂಡೇ ಭಗವಂತನನ್ನು ಒಲಿಸಿಕೊಳ್ಳಲಾಗುವುದು. ಹೀಗೆ ಇಂತಹ ಒಂದು ಉದಾತ್ತವಾದ ಸ್ಥಿತಿಗೆ ಮನಸ್ಸನ್ನು ಒಯ್ಯಬಲ್ಲ ಸಾಮರ್ಥ್ಯ ಈ ಕೊಳಲಿನಿಂದ ಬರುವ ನಾದಕ್ಕಿದೆ. ಇಲ್ಲಿ ವಂಶೀನಿನಾದವೆಂದರೆ ಕೊಳಲಿನ ನಾದವೇ. ಇದನ್ನು ಮಾಡುತ್ತಿರುವನು ಇನ್ನೂ 'ಶಿಶು'ವೆನಿಸಿರುವ ಶ್ರೀಕೃಷ್ಣ. ಎಂದರೆ ಶ್ರೀಕೃಷ್ಣನು ತನ್ನ ಚಿಕ್ಕಂದಿನಲ್ಲಿ ಸಹ ನುಡಿಸುವ ಕೊಳಲಿಗೆ ಇಷ್ಟು ಪ್ರಭಾವವಿತ್ತು - ಎಂದರ್ಥ. ಮೇಲ್ನೋಟಕ್ಕೆ ಲೋಕವೇ ಮೈಮರೆಯುವಂತೆ ಮಾಡುವಂತಹುದು - ಎಂಬರ್ಥವು ತೋರಿದರೂ, ವಾಸ್ತವವಾಗಿ ಅದನ್ನೂ ಉಂಟುಮಾಡಿ, ಅದಕ್ಕಿಂತಲೂ ಉನ್ನತವಾದ ಸ್ಥಿತಿಯನ್ನು ಉಂಟುಮಾಡುವುದು ಈ ಕೊಳಲಿನ ನಾದ.

ಎರಡನೆಯದಾಗಿ ವೇದಗಳು ಹೊಮ್ಮುವಂತೆ, ಧ್ವನಿತವಾಗುವಂತೆ, ಮಾಡುವ ನಾದವಿದು. ಎಂದರೆ, ವೇದಗಳಲ್ಲಿ ತೋರುವ ಕೆಲ ಸಂಚಾರಗಳು ಇಲ್ಲಿ ಈ ವೇಣುವಾದನದಲ್ಲಿ ತೋರುತ್ತಿದೆ - ಎಂಬಷ್ಟು ಮಾತ್ರವಲ್ಲದೆ, ಇನ್ನೂ ವಿಶೇಷವಾದ ಅರ್ಥವನ್ನೂ ಇದು ಹೊಂದಿದೆ. ಅದೇನೆಂಬುದನ್ನು ಕೊನೆಯಲ್ಲಿ ಹೇಳೋಣ.

ಮೂರನೆಯದಾಗಿ ವೃಕ್ಷಗಳಿಗೆಲ್ಲಾ ಹರ್ಷವುಂಟುಮಾಡುವ ಧ್ವನಿಯಿದು. ಗಿಡ-ಮರಗಳಿಗೂ ಶ್ರವಣಶಕ್ತಿಯೆಂಬುದುಂಟು. ಗಿಡಮರಗಳಿಗೆ ಸಹ ಶ್ರವಣೇಂದ್ರಿಯವುಂಟೆಂದು ಮಹಾಭಾರತವೇ ಹೇಳುತ್ತದೆ. ಸಂಗೀತದಿಂದಲೇ ಸಸ್ಯರಾಶಿಗೆ ಚಿಕಿತ್ಸೆಯನ್ನು ಮಾಡಬಹುದೆಂಬುದನ್ನು ವಿಜ್ಞಾನಿಗಳು ಸಾಧಿಸಿದ್ದಾರೆ. ಹೀಗಾಗಿ ತರು-ಗುಲ್ಮಗಳಿಗೂ ವೃಕ್ಷವನಸ್ಪತಿಗಳಿಗೂ ಸಂತೋಷವನ್ನುಂಟುಮಾಡುತ್ತಿದೆ, ಈ ವೇಣುಗಾನ. ಸಸ್ಯ-ವೃಕ್ಷಗಳಿಗೂ ಸುಖದುಃಖಗಳು ಉಂಟೆಂಬುದನ್ನು ಮನುಸ್ಮೃತಿಯು ತೋರಿಸಿಕೊಟ್ಟಿದೆ.

ನಾಲ್ಕನೆಯ ಪರಿಣಾಮವಾಗಿ ಬೆಟ್ಟಗಳನ್ನು ಕರಗಿಸುವ ಗಾನವಿದು. ಬೆಟ್ಟವು ಅದೆಷ್ಟು ಗಟ್ಟಿ! ಅದನ್ನು ಕರಗಿಸುವುದುಂಟೆ? - ಎಂದು ಕೇಳಬಹುದು. ಗಂಧರ್ವಗಾನಪ್ರಕಾರದಲ್ಲಿ ಹಾಗೆ ಆಗಲು ಶಕ್ಯವಿದೆ -ಎಂಬುದಾಗಿ ಶ್ರೀರಂಗಮಹಾಗುರುಗಳು ವಿವರಿಸಿದ್ದರು. ಎಂತಹ ಕಲ್ಲೆದೆಯವರ ಮನಸ್ಸನ್ನು ಕರಗಿಸಿಬಿಡಬಹುದೆಂಬ ತಾತ್ಪರ್ಯ ಇದಕ್ಕೆ - ಎಂಬುದಾಗಿ ಕೆಲವರು ತೆಗೆದುಕೊಳ್ಳಬಹುದಾದರೂ, ನಾರದ-ಹನುಮಂತ ಇವರ ಕಥೆಯಲ್ಲಿ ಗಾನದ ವಿಷಯದಲ್ಲಿ ಸ್ಪರ್ಧೆಯೇರ್ಪಟ್ಟು, ಬಂಡೆಯು ಕರಗುವ ಹಾಗೂ ತಂಬೂರಿಯು ಅದಕ್ಕೆ ಅಂಟಿಕೊಂಡುಬಿಡುವ ಪ್ರಸಂಗವು ನಿರೂಪಿತವಾಗಿರುವುದನ್ನು ಸ್ಮರಿಸಿಕೊಳ್ಳಬಹುದು.

ಐದನೆಯ ಪರಿಣಾಮ ಗೋವೃಂದದ ಮೇಲೆ. ತರುಲತೆಗಳಿಗೆ ಹರ್ಷವುಂಟಾದರೆ, ಗೋಸಮೂಹಕ್ಕೆ ಆನಂದವೇ ಉಂಟಾಗುತ್ತದೆ. ನಾದವು ಎತ್ತಣಿಂದ (ಎಂದರೆ ಯಾವ ಕಡೆಯಿಂದ) ಬರುತ್ತಿರುವುದೋ, ಅತ್ತ ಕಡೆಗೆ ತಮ್ಮ ಕಿವಿಯನ್ನು ನಿಮಿರಿಸಿ ತಿರುಗಿಸಿಕೊಂಡಿರುವ ಚಿತ್ರಣವನ್ನೂ ನೋಡುತ್ತೇವೆ.

ಆರನೆಯ ಪರಿಣಾಮ ಗೋವಳರ ಮೇಲೆ. ಗೋಪಾಲಕರಿಗೆ ಅದೇನೋ ಸಂಭ್ರಮ. ದನಕಾಯುವವರಲ್ಲಿ ಒಬ್ಬಾನೊಬ್ಬ ಕೊಳಲನೂದುತ್ತಿರುವ ಸಂನಿವೇಶವು ಎಷ್ಟೋ ಸಂದರ್ಭಗಳಲ್ಲಿ ಆಗಿರಬಹುದು. ಆದರೆ ಎಂದೂ ಆಗಿಲ್ಲದ ಸಂತೋಷ ಇಂದಾಗುತ್ತಿದೆ.

ಏಳನೆಯ ಪ್ರಭಾವ ಮುನಿಗಳ ಮೇಲೆ. ಧ್ಯಾನಸ್ಥಿತಿಯಲ್ಲಿ ಮುನಿಗಳು ನಾನಾನಾದಗಳನ್ನು ಕೇಳುವರೆಂದು ಯೋಗಶಾಸ್ತ್ರಗಳು ತಿಳಿಸುತ್ತವೆ. ಶ್ರೀಕೃಷ್ಣನ ವೇಣುನಾದವು ಆ ಧ್ವನಿಗಳನ್ನೇ ಒಳಗೊಂಡಿರುವುದು. ಹೀಗಾಗಿ ಅವರ ಮನಸ್ಸು ಮುಕುಳಿತವಾಗುತ್ತಿದೆ. ಮುಕುಲವೆಂದರೆ ಮೊಗ್ಗು. ಅವರ ಮನಸ್ಸು ಅರಳಿದರೂ ಒಳಮುಖವಾಗಿ ಹರಿಯುವುದರಿಂದಾಗಿ ಈ ಯೋಗಸ್ಥಿತಿಯು ಅವರಲ್ಲೇರ್ಪಟ್ಟಿದೆ.

ಎಂಟನೆಯದಾಗಿ ಏಳೂ ಸ್ವರಗಳೂ ಕೊಳಲಿನಿಂದ ಹೊರಬರುತ್ತಿವೆ. ಸ-ರಿ-ಗ-ಮ-ಪ-ಧ-ನಿಗಳು ಸಪ್ತಸ್ವರಗಳು. ಒಳ್ಳೆಯ ಕೊಳಲಿನಲ್ಲಿ ಇವೆಲ್ಲ ಸ್ಫುಟವಾಗಿ ಬರುವುವು.

ಒಂಭತ್ತನೆಯದಾಗಿ ಓಂಕಾರದ ಅರ್ಥವೇನೋ ಅದೇ ಹೊಮ್ಮುತ್ತಿದೆ, ಈ ವೇಣುವಿನಲ್ಲಿ. ಓಂಕಾರವು ಸರ್ವವೇದಗಳ ಮೂಲ. ಅಲ್ಲದೆ, ಇಡೀ ಜಗತ್ತಿಗೆ ಮೂಲ. ಅದುವೇ ಸಮಸ್ತ ವಾಙ್ಮಯಕ್ಕೂ ಮೂಲ. ಹೀಗೆ ಸೃಷ್ಟಿಮೂಲವನ್ನೇ ಮುಟ್ಟಿ ಬರುತ್ತಿದೆ, ಈ ವೇಣುಗಾನ. ಎಂದೇ ಅದು ಉತ್ಕೃಷ್ಟವಾದದ್ದು, ಎನ್ನುತ್ತಾನೆ ಕವಿ ಲೀಲಾಶುಕ.

ಈಗ ಶ್ಲೋಕವನ್ನು ನೋಡಿ.

ಲೋಕಾನ್ ಉನ್ಮದಯನ್, ಶ್ರುತೀರ್ ಮುಖರಯನ್, ಕ್ಷೋಣೀರುಹಾನ್ ಹರ್ಷಯನ್ /

ಶೈಲಾನ್ ವಿದ್ರವಯನ್, ಮೃಗಾನ್ ವಿವಶಯನ್, ಗೋವೃಂದಮ್ ಆನಂದಯನ್ |

ಗೋಪಾನ್ ಸಂಭ್ರಮಯನ್, ಮುನೀನ್ ಮುಕುಲಯನ್, ಸಪ್ತಸ್ವರಾನ್ ಜೃಂಭಯನ್ /

ಓಂಕಾರಾರ್ಥಮ್ ಉದೀರಯನ್ ವಿಜಯತೇ ವಂಶೀ-ನಿನಾದಃ ಶಿಶೋಃ ||

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ30/3/2024 ರಂದು ಪ್ರಕವಾಗಿದೆ.