Monday, March 11, 2024

ಅಷ್ಟಾಕ್ಷರೀ​ - 54 ಶರೈನಂ ಜಹಿ ರಾವಣಿಂ (Astaksari 54 –Sharainam Jahi Ravanim)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)
 

ವಾಲ್ಮೀಕಿರಾಮಾಯಣವು ರಸಭರಿತವಾದ ಒಂದು ಮಹಾಕಾವ್ಯ. ಕಥಾನಾಯಕನಾದ ರಾಮನನ್ನು ನವರಸನಾಯಕನೆಂದೇ ಕರೆಯುವರಲ್ಲವೇ? ಉದಾಹರಣೆಗೆ ಧರ್ನುರ್ಭಂಗಪ್ರಸಂಗದಲ್ಲಿಯ ವೀರರಸವನ್ನೂ, ರಾವಣಸಂಹಾರ ಪ್ರಸಂಗದಲ್ಲಿಯ ರೌದ್ರರಸವನ್ನೂ ಕಾಣುವೆವಲ್ಲವೆ? ಮಹಾಕಾವ್ಯವೆಂದಾಗ ಅಷ್ಟಾದಶವರ್ಣನೆಗಳಿರಬೇಕೆಂದು ಹೇಳುವುದುಂಟು. ಸೃಷ್ಟಿಯ ಬಗ್ಗೆ ಒಂದು ಒಟ್ಟಾರೆ ನೋಟವನ್ನು ಕೊಡಹೊರಟಾಗ ಇವೆಲ್ಲಕ್ಕೂ ಪಾತ್ರವಿರುವುದು ಸಹಜವೆಂದು ಶ್ರೀರಂಗಮಹಾಗುರುಗಳು ಸೂಚಿಸಿದ್ದರು. ಮಹಾಕವಿಗಳಾದ ವಾಲ್ಮೀಕಿ-ಕಾಳಿದಾಸರಂತಹವರ ಕೃತಿಗಳಲ್ಲಿ ಅವು ಸಹಜವಾಗಿ ಮೂಡಿವೆ.

ರಾವಣಸಂಹಾರವನ್ನು ಮೇಲೆ ಉಲ್ಲೇಖಿಸಿತಷ್ಟೆ. ಅದು ಎಷ್ಟು ಮುಖ್ಯವೆಂದರೆ ರಾಮಾಯಣಕ್ಕಿರುವ ಇನ್ನೊಂದು ಹೆಸರೇ "ಪೌಲಸ್ತ್ಯವಧ" ಎಂಬುದಾಗಿ. ಪೌಲಸ್ತ್ಯನೆಂದರೆ ರಾವಣ. ಯುದ್ಧಕಾಂಡದ ೧೧೧ ಸರ್ಗಕ್ಕೆ ಪೌಲಸ್ತ್ಯವಧವೆಂದೇ ಹೆಸರು. ಭಟ್ಟಿಯೆಂಬ ಕವಿಯು ರಾಮಾಯಣವನ್ನು ಕುರಿತಾದ ತನ್ನ ಕಾವ್ಯಕ್ಕೆ ಇಟ್ಟಿರುವ ಹೆಸರೇ ರಾವಣವಧ.

ರಾವಣವಧವೆಂಬುದು ರಾಮಾಯಣಕ್ಕೆ ಕೇಂದ್ರಭೂತವಾದದ್ದು. ಅದಕ್ಕೆ ಮೊದಲಾಗುವ ಘಟನೆಗಳೆಲ್ಲಾ ಅಲ್ಲಿಗೇ ಒಯ್ಯುವಂತಿರುತ್ತವೆ. ಶಿಖರಪ್ರಾಯವಾದ ಅದೊಂದರ ಸಾಧನೆಯಾದಮೇಲೆ ಮಿಕ್ಕದ್ದೆಲ್ಲಾ ಇನ್ನು "ಆಟ ಮುಗಿಸುವ" ಸಂನಾಹವೇ: ಕಾಲಚಕ್ರದ ಒಂದು ಸುತ್ತು ಅಲ್ಲಿಗೆ ಸುತ್ತಿರುತ್ತದೆ; ದುರ್ವೃತ್ತದ ವೃತ್ತವು ಮುಗಿದು ಮುಂದಕ್ಕೆ ಒಂದು ಸುವೃತ್ತವು ಆರಂಭವಾಗುತ್ತದೆ. (ದುರ್ವೃತ್ತವೆಂದರೆ ಕೆಟ್ಟನಡತೆ; ಸುವೃತ್ತವೆಂದರೆ ಒಳ್ಳೆಯ ನಡತೆ). ಅಧರ್ಮಿ ರಾವಣನ ಕಾಟವು ತಪ್ಪಿ, ಧರ್ಮಮೂರ್ತಿ ರಾಮನ ರಾಜ್ಯವಾಗಿ, ಸುರಾಜ್ಯ-ಸುಖದ ಸವಿ ಸಮಸ್ತ-ಜನತೆಗೂ ಸಲ್ಲುವುದಲ್ಲವೆ?

ರಾವಣನ ಕಡೆಯವರು ಕಡೆಯತನಕ ಕೊಟ್ಟ ಕಾಟವೂ ಕಡಿಮೆಯೇನಲ್ಲ. ಎಂದೇ ಅವರೆಲ್ಲರ ಸಾವಾದ ಮೇಲೆಯೇ ಕೊನೆಯ ಘಟ್ಟವಾಗಿ ರಾವಣನ ಸಾವು.

ರಾವಣನ ಸಾವು ಎಷ್ಟು ಮುಖ್ಯವೋ, ತತ್ಪೂರ್ವಭಾವಿಯಾಗಿ ರಾವಣಿಯ ಸಾವೂ ಅಷ್ಟೇ ಮುಖ್ಯ. ಏನು ಹಾಗೆಂದರೆ? ತತ್ಪೂರ್ವಭಾವಿಯೆಂದರೆ "ಅದಕ್ಕೂ ಮೊದಲು" ಎಂದರ್ಥ. ಹೇಗೆ ದಶರಥನ ಮಗ ದಾಶರಥಿಯೋ, ಹಾಗೆ ರಾವಣನ ಮಗ ರಾವಣಿ; ಅರ್ಥಾತ್ ಇಂದ್ರಜಿತ್. ರಾವಣನನ್ನು ಕೊಂದದ್ದು ರಾಮ; ಈ ರಾವಣಿಯನ್ನು ಕೊಂದದ್ದು ರಾಮಾನುಜ: ಎಂದರೆ ರಾಮನ ತಮ್ಮನಾದ ಲಕ್ಷ್ಮಣ.

ಈ ರಾವಣಿಯಾದರೂ ಸಾಮಾನ್ಯನೇನಲ್ಲ. ಇಂದ್ರನನ್ನೇ ಜಯಿಸಿದ್ದರಿಂದಲೇ ಈತನಿಗೆ ಇಂದ್ರಜಿತ್ - ಎಂಬ ಹೆಸರು ಬಂದದ್ದು. ಹನುಮಂತನ ಮೇಲೆ ಒಮ್ಮೆ ಬ್ರಹ್ಮಾಸ್ತ್ರಪ್ರಯೋಗ, ರಾಮಲಕ್ಷ್ಮಣರ ಮೇಲೆ ನಾಗಪಾಶಪ್ರಯೋಗ, ಮಾಯಾಸೀತಾನಿರ್ಮಾಣ, ನಿಕುಂಭಿಳಾಯಾಗಪ್ರಯತ್ನ - ಒಂದೇ ಎರಡೇ ಈತನ "ಗರಿಮೆ"ಗಳು?!

ಹಾಗಾದರೆ ಅಷ್ಟು ಬಲಿಷ್ಠನ ಸಂಹಾರವು ಆದದ್ದು ಹೇಗೆ? - ಎಂಬ ಕುತೂಹಲವೇ? ಹೌದು, ಅದೂ ಸುಲಭವಿರಲಿಲ್ಲ. ಅದರೆ ಅದನ್ನು ಸಾಧಿಸಿದ ಲಕ್ಷ್ಮಣನು ಅದಕ್ಕಾಗಿ ಮೊದಲು ಬಹಳವೇ ಹೆಣಗಾಡಬೇಕಾಯಿತು. ಕೊನೆಗದನ್ನು ಸಾಧಿಸಿದ್ದೂ ಒಂದರ್ಥದಲ್ಲಿ ರಾಮನ ಬಲವನ್ನಾವಾಹಿಸಿಕೊಂಡೇ!

ಹೇಗೆ? ಇಂದ್ರಜಿತ್ತನ್ನು ಕೊಲ್ಲುವ ಬಾಣವನ್ನು ಪ್ರಯೋಗಮಾಡುವ ಮುಂಚೆ ಒಂದು ಮಾತನ್ನು ಹೇಳುತ್ತಾನೆ - ತನ್ನ ಬಾಣವನ್ನೇ ಕುರಿತಾಗಿ! ಎಲೈ ಬಾಣವೇ, ಈ ರಾವಣಿಯನ್ನು ಕೊಲ್ಲು: ಶರೈನಂ ಜಹಿ ರಾವಣಿಂ. ರಾಮನು ಇಂತಿಂತಹವನಾಗಿದ್ದರೆ ಕೊಲ್ಲು - ಎಂದು ನಾಲ್ಕು ಲೆಕ್ಕಗಳ ಮೇರೆಗೆ ಹೇಳುತ್ತಾನೆ.

ರಾಮನು ಧರ್ಮಾತ್ಮನಾಗಿದ್ದರೆ ಈ ರಾವಣಿಯನ್ನು ಕೊಲ್ಲು; ಅಲ್ಲದೆ ಆತನು ಸತ್ಯಸಂಧನಾಗಿದ್ದರೆ, ದಾಶರಥಿಯಾಗಿದ್ದರೆ, ಪೌರುಷದಲ್ಲಿ ಅಸಮಾನನಾಗಿದ್ದರೆ ಕೊಲ್ಲು- ಎಂಬ ಲೆಕ್ಕಗಳು.

ರಾಮನಂತೂ ಧರ್ಮವೇ ಮೈತಾಳಿದಂತಹವನು. ಸಂಧಾ ಎಂದರೆ ಪ್ರತಿಜ್ಞೆ; ಯಾರು ತನ್ನ ಪ್ರತಿಜ್ಞೆಯನ್ನು ಎಂದೂ ಸುಳ್ಳಾಗಿಸನೋ ಆತನೇ ಸತ್ಯಸಂಧ. ಪೌರುಷದಲ್ಲಿ ಸಾಟಿಯಿಲ್ಲದವನು ರಾಮನೇ. ಅಂತೂ ರಾಮನ ಧರ್ಮಮಯತೆಯ "ಆಣೆ"ಯ ಮೇಲೇ ಪ್ರಧಾನವಾಗಿ ಹೊರಟಿದೆ, ಈ ಬಾಣ.

ಆದರೆ "ದಾಶರಥಿಯಾಗಿದ್ದರೆ" ಎಂದು ಹೇಳುವುದರ ಉದ್ದೇಶವೇನು? ಇಲ್ಲಿಯೇ ಬರುವುದು ವಂಶದ ಹಿರಿಮೆಯ ಪ್ರಶ್ನೆ. ಯಾವ ವಂಶದಲ್ಲಿ ಮನು, ಇಕ್ಷ್ವಾಕು, ದಿಲೀಪ, ರಘು ಮೊದಲಾದ ಮಹಾತ್ಮರು ಜನಿಸಿರುವರೋ, ಅಂತಹವರ ವಂಶದಲ್ಲೇ ಧರ್ಮವೀರ್ಯದ ಹರಿವು ಬಂದುಬಿಡುವುದು! ಹೀಗೆ, ವಂಶದಿಂದಲೇ ಬರುವಂತಹುದು, ಸ್ವ-ಸಾಧನೆಯಿಂದಾಗಿ ಬೆಳೆಯುವಂತಹುದು - ಎರಡನ್ನೂ ಮೇಳೈಸಿ ಉನ್ನತಿಯನ್ನು ಸಾಧಿಸುವುದನ್ನು ಭಾರತೀಯ ಸಂಸ್ಕೃತಿ ಎತ್ತಿಹಿಡಿಯುತ್ತದೆ.

ಹಿರಿದಾದ ವಂಶದಲ್ಲಿ ಬಂದವರು ಧರ್ಮಪರರೂ ಆಗಿದ್ದರೆ ಬಹಳವೇ ಹಿರಿದಾದ ಸಾಧನೆಯನ್ನು ಮಾಡಬಲ್ಲರೆಂಬ ತತ್ತ್ವಕ್ಕೆ ಶ್ರೀರಂಗಮಹಾಗುರುಗಳು ಒತ್ತುಕೊಟ್ಟಿದ್ದರು.

ಸೂಚನೆ: 9/03/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.