Saturday, March 23, 2024

ಕೃಷ್ಣಕರ್ಣಾಮೃತ - 7 ಪ್ರೇಮೋದ್ದೀಪನ – ಕೋದಂಡರಾಮ-ವೇಣುಗೋಪಾಲ (Krsnakarnamrta - 6 Premoddipana – Kodandarama-Venugopala)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)ಪ್ರೇಮಭಾವವನ್ನು ಯಾವುದು ಉಕ್ಕಿಸುವುದೋ, ಅರ್ಥಾತ್ ಉದ್ದೀಪನಗೊಳಿಸುವುದೋ ಅದು ಉದ್ದೀಪನವಿಭಾವ. ದೀಪನವೆಂದರೆ ಬೆಳಗಿಸುವುದು, (ದೀಪವನ್ನು) ಹಚ್ಚುವುದು; ಉದ್ದೀಪನವೆಂದರೆ ಹೆಚ್ಚಿಸುವುದು.

ವಿರಹಾವಸ್ಥೆಯಲ್ಲಿರುವಾಗ, ತನ್ನ ಪ್ರೇಮಿಗೆ ಸಂಬಂಧಪಟ್ಟ ಯಾವೊಂದು ವಸ್ತುವನ್ನು  ಕಂಡರೂ, ಪ್ರೇಮಭಾವವು ಉಕ್ಕುವಂತಾಗುವುದಲ್ಲವೆ? ಉದಾಹರಣೆಗೆ ತನಗೆ ಪ್ರೀತಿಪಾತ್ರರಾದವರ ಒಂದು ಚಿತ್ರವೋ, ಬರಹವೋ, ಪತ್ರವೋ, ಆಭರಣವೋ, ಕೊನೆಗೊಂದು ಕರವಸ್ತ್ರವೋ - ಯಾವುದು ಸಿಕ್ಕಿದರದು ಪ್ರೇಮಿಯಲ್ಲಿಯ ಪ್ರೇಮಭಾವವನ್ನು ಉದ್ದೀಪನಗೊಳಿಸುವುದು.

ಇದಲ್ಲದೆ ಪ್ರಕೃತಿಯಲ್ಲಿಯ ಕೆಲ ಸಂನಿವೇಶಗಳೂ ಪ್ರೇಮೋದ್ದೀಪಕಗಳೆನಿಸುತ್ತವೆ. ಉದಾಹರಣೆಗೆ ಹಂಸಪಕ್ಷಿಗಳ ಜೋಡಿಯೊಂದನ್ನು ಕಂಡಾಗ ಪ್ರೇಮಿಗಳಲ್ಲಿ ಸಹಜವಾಗಿ ಭಾವೋದ್ದೀಪನವಾಗುವುದು. ಹೀಗಾಗಿ ಜೊತೆಯಾಗಿ ನಲಿಯುತ್ತಿರುವ ಪಕ್ಷಿದ್ವಂದ್ವವು ಉದ್ದೀಪಕ.

ಈ ಆಲಂಬನವಿಭಾವ-ಉದ್ದೀಪನವಿಭಾವಗಳೆಂಬುದು ಎಲ್ಲ ರಸಗಳ ವಿಷಯಕ್ಕೂ ಅನ್ವಯಿಸುವಂತಹುದೇ. ಉದಾಹರಣೆಗೆ, ತನ್ನ ಮಗುವು ಸತ್ತು ಕೆಲಕಾಲ ಕಳೆದಿದ್ದರೂ, ಅದರ ನೆಚ್ಚಿನ ಗೊಂಬೆಯೊಂದು ಅಕಸ್ಮಾತ್ ದೊರೆತಲ್ಲಿ, ತಾಯಿಗೆ ದುಃಖವು ಉದ್ದೀಪಿತವಾಗುವುದು. ಇಲ್ಲಿಯ ಕರುಣರಸಕ್ಕೆ ಮಗುವು ಆಲಂಬನವಿಭಾವ, ಆ ಆಟದವಸ್ತುವು ಉದ್ದೀಪನವಿಭಾವ.

ಇಬ್ಬರು ಪ್ರೇಮಿಗಳು ಸಂತೋಷದಿಂದಿರುವುದನ್ನು ಕಂಡು ಕರುಬುವವರೂ ಇರುವುದುಂಟಲ್ಲವೇ? ನಿನ್ನ ಪ್ರಿಯನಿಗೆ ಮತ್ತೊಬ್ಬ ಪ್ರೇಯಸಿಯೂ ಇರುವಳು! - ಎಂದು ಸುಳ್ಳೇ ಹೇಳಿದರೂ ಅದೊಂದು ಕೀಟವನ್ನು ಬಿಟ್ಟಂತೆಯೇ ತಲೆಯೊಳಗೆ. ಯಾರೂ ಹಾಗೆ ಹೇಳದೆಯೂ ಒಮ್ಮೊಮ್ಮೆ ಹಾಗೆ ಸಂಶಯವು ಹುಟ್ಟುವುದೂ ಅಸಂಭವವಲ್ಲ: ಪ್ರೇಮದ ನಡೆಯೇ ಹಾಗೆ; ಮತ್ತೊಬ್ಬರೊಂದಿಗೆ ತನ್ನ ಪ್ರೇಮವಸ್ತುವನ್ನು ಹಂಚಿಕೊಳ್ಳಲಾದೀತೇ?  ಇನ್ನು ನಿದ್ರಾಮಧ್ಯದಲ್ಲಿ ತನ್ನವನು ಮತ್ತೊಬ್ಬಳ ಹೆಸರನ್ನೆತ್ತಿಬಿಟ್ಟರಂತೂ ಕಥೆ ಮುಗಿಯಿತು; ವ್ಯಥೆಯೇ ಶುರುವಾಯಿತು – ಎನ್ನಬಹುದೇನೋ! ಇಲ್ಲೂ, ಕನವರಿಕೆಯಲ್ಲಿಯ ಜಾನಕೀಸ್ಮರಣೆಯು ರಾಮನಿಗಾಗಲು, ರಾಧೆಯ ಮನಸ್ಸಿನಲ್ಲೆದ್ದ ಆತಂಕವೂ ಅದೇ ತೆರನೇ ಅಲ್ಲವೆ?

ವಿರಹಿಗಳಲ್ಲಿಯ ಪ್ರೇಮಭಾವವನ್ನು ಪ್ರಕೃತಿಯಲ್ಲಿಯ ಕೆಲವು ವಸ್ತುಗಳು ಸಹಜವಾಗಿ ಜಾಗರಗೊಳಿಸಬಲ್ಲವು. ಉದಾಹರಣೆಗೆ ಮೋಡವು ಪ್ರೇಮಕಾಮಗಳೆರಡಕ್ಕೂ ಉದ್ದೀಪಕವೆಂಬುದು ಸಾಹಿತ್ಯದಲ್ಲಿ ಸುವಿದಿತವಾದುದೇ. ಅರ್ಥಾತ್ ವಿಪ್ರಲಂಭಶೃಂಗಾರ-ಸಂಭೋಗಶೃಂಗಾರ-- ಇವೆರಡರಲ್ಲೂ ಅದಕ್ಕೆ ಪಾತ್ರವುಂಟು. ಸೀತಾಪಹರಣವಾದ ಬಳಿಕ ರಾಮನಿಗೆ ಬಹುಕ್ಲೇಶವನ್ನು ಕೊಟ್ಟ ಸಮಯವೆಂದರೆ ಮೋಡ-ಮಳೆಗಳ ಕಾಲವೇ; ಅದೋ, ಆಗಲೇ ಅಲ್ಲವೇ ಸುಗ್ರೀವನೂ ರಾಮನಿಗೆ ತಾನಿತ್ತಿದ್ದ ಮಾತನ್ನೂ ಮರೆತು, ತನ್ನ ಪ್ರಿಯೆಯ ಸಂಗದಲ್ಲಿ ಮೈಮರೆತು ವಿಳಂಬಮಾಡಿ, ರಾಮನಿಗೆ ಕೋಪ ಬರಿಸಿದುದು? ಹೀಗೆ ಸುಖಿಗಳ ಮನಸ್ಸಲ್ಲೂ ಅದೇನೋ ಅಲೆಗಳನ್ನು ಎಬ್ಬಿಸುವುದು ಈ ಮೇಘದರ್ಶನ.

ಮೋಡವು ಮಾತ್ರವೇನು, ನಿಸರ್ಗದಲ್ಲಿಯ ಯಾವುದೇ ರಮ್ಯದೃಶ್ಯವೂ ಏನೋ ವ್ಯಾಕುಲತೆಯನ್ನು ಚೋದಿಸಬಲ್ಲುದು. ರಮ್ಯಪ್ರೇಕ್ಷ್ಯಗಳು ಮಾತ್ರವಲ್ಲದೆ, ಮಧುರಗಾನವು ಸಹ ಜನ್ಮಾಂತರಗಳ ಸಂಗಗಳ ಯಾವಯಾವುದೋ ಸುಪ್ತವಾಸನೆಗಳನ್ನು ಚೋದಿಸಬಲ್ಲುದು – ಎನ್ನುತ್ತಾನೆ ಕಾಳಿದಾಸ, ತನ್ನ ಶಾಕುಂತಲನಾಟಕದಲ್ಲಿ.

ಅಂತೂ ನಾವು ಗಮನಿಸಿದ ಕೃಷ್ಣಕರ್ಣಾಮೃತದ ಸೊಗಸಾದ ಶ್ಲೋಕವು, ಹಿಂದೆ ಘಟಿಸಿದ್ದ ಜಾನಕೀವಿರಹವೆಂಬ ಪೂರ್ವಜನ್ಮಚರಿತ-ಘಟಿತಗಳನ್ನು ಹೀಗೊಂದು ಆಸ್ವಾದ್ಯವಾದ ವಾಕ್ಚಿತ್ರವಾಗಿ ನಮ್ಮ ಕಣ್ಣಮುಂದೆ ತಂದಿರಿಸಿದೆ.


ರಾಮನೋ ಕೃಷ್ಣನೋ?

ರಾಮಜನ್ಮಭೂಮಿಯ ಉತ್ಸವವನ್ನು ಕೆಲವೇ ವಾರಗಳ ಹಿಂದಷ್ಟೇ ಭಾರತವೆಲ್ಲವೂ ವೀಕ್ಷಿಸಿತಷ್ಟೆ? ಇದೋ ಇನ್ನೇನು ರಾಮನವಮಿಯೇ ಬಂದಿತು! ರಾಮನ ದೇಶ, ರಾಮನ ಕಾಲ – ಎರಡೂ ನಿಕಟವಾದುವು!  ಹೀಗಿರಲು, ರಾಮನ ಸೌಂದರ್ಯದ ಬಗ್ಗೆ ಈ ಕೃಷ್ಣಕರ್ಣಾಮೃತದ ಕವಿ ಏನೆನ್ನುವನೆಂದು ಒಮ್ಮೆ ನೋಡಬಹುದು.

ಅದಕ್ಕೆ ಮೊದಲು ರಾಮಾವತಾರ-ಕೃಷ್ಣಾವತಾರಗಳಲ್ಲಿಯ ಭೇದಗಳನ್ನೂ ಒಮ್ಮೆ ನೋಡಬಹುದು. ಅವನ್ನು ಅವರಿಬ್ಬರ ಹುಟ್ಟಿನ ಸಂನಿವೇಶಗಳೇ ಚಿತ್ರಿಸುವುವೆಂದರೂ ತಪ್ಪಾಗಲಾರದು.

ರಾಮನಲ್ಲೊಂದು ಸೌಂದರ್ಯ, ಕೃಷ್ಣನಲ್ಲೊಂದು ಸೌಂದರ್ಯ. ರಾಮನ ಹುಟ್ಟುವ ವೇಳೆಗೆ ಚೈತ್ರಮಾಸಾರಂಭವಾದರೂ, ವಸಂತಮಾಸದ ಇನ್ನೂ ಆರಂಭವದಾದ್ದರಿಂದ, ಅಲ್ಲಿ ಕೃಷ್ಣನು ಹುಟ್ಟುವ ಶ್ರಾವಣಮಾಸದ ಸೊಬಗಿನ ಕಳೆಕಟ್ಟಿರುವುದಿಲ್ಲ. ರಾಮ ಹುಟ್ಟುವ ಹೊತ್ತಿಗಾಗಲೇ ಒಂದಿಷ್ಟಾದರೂ ಬಿಸಿಲು ಕಾಯುತ್ತಿರುತ್ತದೆಯಲ್ಲವೇ? ಎಂದೇ ಪಾನಕ-ಕೋಸಂಬರಿಗಳ ವಿನಿಯೋಗಕ್ಕೆ ಆಗ ಬಹಳ ಬೆಲೆ. ಆದರೆ ಕೃಷ್ಣನು ಹುಟ್ಟುವ ವೇಳೆಗೆ ಪ್ರಕೃತಿಯಲ್ಲಿಯ ಸೊಬಗೇ ಸೊಬಗು. ಆಗ ಲಭ್ಯವಾಗುವ ಹಣ್ಣುಗಳೇನು, ಹೂವುಗಳೇನು, ಒಟ್ಟಿನ ಸಮೃದ್ಧಿಯೇನು, ಸಂಭ್ರಮ-ಸಡಗರಗಳೇನು! ಕೃಷ್ಣನಿಗೆ ಸಮರ್ಪಣೆಗೆಂದು ನೂರೆಂಟು ಬಗೆಯ ಭಕ್ಷ್ಯಗಳನ್ನು ಮಾಡುವ ಪರಿಪಾಟಿಯೂ ಉಂಟಲ್ಲವೇ? ರಾಮ-ಕೃಷ್ಣರ ಜನನಗಳಲ್ಲಿಯ ಇತರ ಕೆಲ ವೈಷಮ್ಯಗಳನ್ನೂ ಗಮನಿಸಬಹುದು: ರಾಮನು ಹುಟ್ಟಿದುದು ಹಗಲಲ್ಲಿ, ಕೃಷ್ಣನು ರಾತ್ರಿಯಲ್ಲಿ; ರಾಮನು ಶುಕ್ಲಪಕ್ಷದಲ್ಲಿ, ಕೃಷ್ಣನು ಕೃಷ್ಣಪಕ್ಷದಲ್ಲಿ; ರಾಮನು ಉತ್ತರಾಯಣದಲ್ಲಿ, ಕೃಷ್ಣನು ದಕ್ಷಿಣಾಯನದಲ್ಲಿ!

ಅದೇನೇ ಇರಲಿ, ನಮ್ಮ ಕವಿ ಲೀಲಾಶುಕನಿಗಂತೂ ಸ್ಮೇರಾನನನಾದ, ಎಂದರೆ ಮುಗುಳ್ನಗೆಯಿಂದ ಒಪ್ಪುವ ಗೋಪವಧೂಕಿಶೋರನಾದ ಕೃಷ್ಣನೇ ಅಚ್ಚುಮೆಚ್ಚು: ಇಷ್ಟದೇವತೆ. ಜನ್ಮದಿಂದಲೂ ಉಪಾಸನೆಯಿಂದಲೂ ಈತ ಶೈವನಾದರೂ; ಶಿವನಿಗೆ ರಾಮನೂ ರಾಮನಿಗೆ ಶಿವನೂ ಪೂಜ್ಯರೆಂದಾದರೂ; ರಾಮನೂ ಕೃಷ್ಣನೂ ಬೇರೆಬೇರೆಯೇನಲ್ಲ (ಇಬ್ಬರೂ ವಿಷ್ಣುವಿನ ಅವತಾರಗಳೇ ತಾನೆ?) - ಎಂದೇ ಆದರೂ ಸಹ, ನಮ್ಮ ಲೀಲಾಶುಕನಿಗೆ ಹೃದಯಕ್ಕೆ ಆಪ್ತನಾದವನು ಕೃಷ್ಣನೇ, ರಾಮನಲ್ಲ.

ಎಷ್ಟೆಂಬುದಕ್ಕೆ ನಿದರ್ಶನ, ಕೃಷ್ಣಕರ್ಣಾಮೃತದಲ್ಲಿ ರಾಮನನ್ನು ಸಂಬೋಧಿಸಿರುವ ಒಂದು ಶ್ಲೋಕ: "ಸೀತಾಪತಿಯೇ, ನಿನಗೆ ನಮಸ್ಕಾರ ಮಾಡುವೆ. ನೀನು ನಾ ಹೇಳಿದಂತೆ ಮಾಡುವೆಯಾದರೆ"!  ಏನು ಮಾಡಬೇಕು ರಾಮ? "ರಾಮ, ನಿನ್ನ ಬಿಲ್ಲು-ಬಾಣಗಳನ್ನು ಕ್ಷಣಕಾಲ ತೊರೆ; ಮೃದುವೂ ಮನೋಜ್ಞವೂ ಆದ ಕೊಳಲನ್ನು ಕೈಯಲ್ಲಿ ಹಿಡಿದುಕೋ. ಇಷ್ಟೇ ಸಾಲದು; ತಲೆಯ ಮೇಲೊಂದು ನವಿಲುಗರಿಯನ್ನೂ ಧರಿಸು. ಆಮೇಲಿದೋ, ನಿನಗೆ ನಮಿಸುವೆ, ಓ ಸೀತಾಪತೇ! - ಎನ್ನುತ್ತಾನೆ, ಕವಿ! ಶ್ಲೋಕ ಹೀಗಿದೆ:

ವಿಹಾಯ ಕೋದಂಡ-ಶರೌ ಮುಹೂರ್ತಂ

   ಗೃಹಾಣ ಪಾಣೌ ಮೃದು-ಚಾರು-ವೇಣುಮ್ |

ಮಾಯೂರ-ಬರ್ಹಂ ಚ ನಿಜೋತ್ತಮಾಂಗೇ

   ಸೀತಾಪತೇ ತ್ವಾಂ ಪ್ರಣಮಾಮಿ ಪಶ್ಚಾತ್ ||

ಬಿಲ್ಲು-ಬಾಣಗಳೆಂದರೆ ವೀರರಸ-ರೌದ್ರರಸಗಳಿಗೆ ತಾನೆ ಎಡೆ? ಆದರೆ ಭಗವಂತನ ಅವತಾರಗಳಿಗೆ ಎರಡು ಮುಖಗಳಿರುತ್ತವೆಯಲ್ಲವೆ? ಮೊದಲನೆಯದು ಅಧರ್ಮ-ವಿಧ್ವಂಸನ , ಎರಡನೆಯದು ಧರ್ಮ-ಸ್ಥಾಪನ. ಮೊದಲನೆಯದಕ್ಕಾಗಿ ಆಯುಧಗಳು ಬೇಕು: ಅಧರ್ಮನಿರ್ಮೂಲನಕ್ಕಾಗಿ ಶಸ್ತ್ರಾಸ್ತ್ರಗಳು ಬೇಕಾದವೇ. (ಶಸ್ತ್ರಗಳು ಬೇರೆ, ಅಸ್ತ್ರಗಳು ಬೇರೆ. ಆಯುಧ ಅಥವಾ ಪ್ರಹರಣವೆಂದರೂ ಶಸ್ತ್ರವೇ. ಮಂತ್ರಬಲದೊಂದಿಗೆ ಪ್ರೇಷಿತವಾಗತಕ್ಕವು ಅಸ್ತ್ರಗಳು). ಎಂದೇ ದುರ್ಗೆಯಾಗಲಿ ರಾಮನಾಗಲಿ ಆಯುಧಭೂಷಿತರೇ. ಕೃಷ್ಣನೂ ಆಯುಧಗಳನ್ನು ಹೊಂದಿರತಕ್ಕವನೇ: ಶಾರ್ಙ್ಗವೆಂಬ ಬಿಲ್ಲು, ನಂದಕವೆಂಬ ಖಡ್ಗ, ಸುದರ್ಶನವೆಂಬ ಚಕ್ರ, ಕೌಮೋದಕಿಯೆಂಬ ಗದೆ – ಇವುಗಳೆಲ್ಲ ಕೃಷ್ಣನಿಗೆ ಉಂಟೇ. ಆದರೂ ಯುದ್ಧಪ್ರಸಿದ್ಧಿಗಿಂತಲೂ ಆತನ ಮುರಲೀಮೋಹನರೂಪವೇ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವುದಲ್ಲವೇ? ಲೀಲಾಶುಕನ ಮೆಚ್ಚುಗೆಗೆ ಪಾತ್ರವಾಗಿರುವುದು ಅದುವೇ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ23/3/2024 ರಂದು ಪ್ರಕವಾಗಿದೆ.