Monday, March 11, 2024

ಯಕ್ಷ ಪ್ರಶ್ನೆ80 (Yaksha prashne 80)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 79 ಶ್ರಾದ್ಧಕ್ಕೆ ಯೋಗ್ಯವಾದ ಕಾಲ ಯಾವುದು ?

ಉತ್ತರ - ಬ್ರಾಹ್ಮಣಾಗಮನ.  

ಈ ಹಿಂದೆ 'ಶ್ರಾದ್ಧವು ನಷ್ಟವಾಗುವುದು ಯಾವಾಗ ? ಎಂಬ ಪ್ರಶ್ನೆಗೆ, ಶ್ರೋತ್ರಿಯನಾದ ಋತ್ವಿಜ ಸಿಗದಿರುವಾಗ' ಎಂಬ ಉತ್ತರದಲ್ಲಿ ಇದಕ್ಕೆ ಸಂಬಂಧಪಟ್ಟ ಅನೇಕ ವಿಷಯವನ್ನು ವಿಚಾರಿಸಿದ್ದೆವು. ಈ ಪ್ರಶ್ನೋತ್ತರದಲ್ಲಿ ಅಲ್ಲಿ ಹೇಳದೇ ಉಳಿದ ವಿಷಯವನ್ನು ಪರಾಮರ್ಶಿಸಲಾಗುವುದು. ಮನುಷ್ಯಸಾಮಾನ್ಯನು ಈ ಭೂಮಿಗೆ ಬರುವಾಗಲೇ ಅನೇಕ ಋಣಗಳನ್ನು ಹೊತ್ತುಕೊಂಡೇ ಬರುತ್ತಾನೆ. ಆ ಋಣಗಳಲ್ಲಿ ಪಿತೃಋಣವೂ ಒಂದು. ತಂದೆ ತಾಯಿಯರ ದೇಹವನ್ನು ಬಳಸಿಕೊಂಡು ಮಗುವಿನ ಜನನವಾಗಿರುತ್ತದೆ. ಹುಟ್ಟಿದ ಮಗುವಿಗೆ ಬಂದ ದೇಹಕ್ಕೆ ಪಿತೃಗಳ ಆ ಋಣವಿರುತ್ತದೆ. ಮತ್ತು ಜನ್ಮವನ್ನು ಪಡೆದ ಮೇಲೆ ದೇಹವನ್ನು ಬೆಳೆಸಿಕೊಂಡು ಮುಂದಿನ ವ್ಯವಹಾರವನ್ನು ಮಾಡಲು ಪಿತೃಗಳ ಸ್ವತ್ತನ್ನು ಬಳಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಸ್ವತ್ತನ್ನು ಬಳಸಿಕೊಂಡದ್ದೂ ಒಂದು ಋಣವೇ ಆಗುತ್ತದೆ. ಇದನ್ನೂ ಪಿತೃ ಋಣಕ್ಕೇ ಸೇರಿಸಬಹುದು. ಒಟ್ಟಾರೆ ಋಣವನ್ನು ತೀರಿಸಬೇಕಾದುದು ಮಕ್ಕಳ ಆದ್ಯ ಕರ್ತವ್ಯವಾಗಿರುತ್ತದೆ. ಇದಕ್ಕಿರುವ ಅತ್ಯಂತ ಶ್ರೇಷ್ಠವಾದ ಸಾಧನವೆಂದರೆ ಮರಣಾನಂತರದಲ್ಲಿ ಅವರಿಗೆ ಶ್ರಾದ್ಧವನ್ನು ಮಾಡುವುದು ಎಂಬುದಾಗಿ ನಮ್ಮ ವೈದಿಕ ಸಂಸ್ಕೃತಿ ಸಾರುತ್ತದೆ. ಇಂತಹ ಶ್ರಾದ್ಧ ಪರಿಪೂರ್ಣವಾಗಬೇಕಾದರೆ ಶ್ರಾದ್ಧಕ್ಕೆ ಬ್ರಾಹ್ಮಣಭೋಜನ ಅತಿಮುಖ್ಯವಾದುದು. ಮೃತ ತಿಥಿಯಂದೇ ಶ್ರಾದ್ಧವನ್ನು ಮಾಡಬೇಕು ಎಂಬುದು ಸಾಧಾರಣವಾದ ನಿಯಮವಾದರೆ, ವಿಶೇಷ ನಿಯಮ ಅಥವಾ ಶ್ರೇಷ್ಠವಾದ ನಿಯಮ ಯಾವುದು? ಎಂಬ ಜಿಜ್ಞಾಸೆ ಬಂದಾಗ ಯಕ್ಷನು ಈ ಪ್ರಶ್ನೆಯನ್ನು ಧರ್ಮರಾಜನ ಮುಂದಿಡುತ್ತಾನೆ. 

ಮೃತ ತಿಥಿಯಿಂದ ಆರಂಭಿಸಿ ಔರ್ಧ್ವದೇಹಿಕ ಕರ್ಮಗಳ ಲೆಕ್ಕಾಚಾರ ಬಂದಿದೆ. ಟೈಮ್ ಸ್ಪೇಸ್ ಗಳ (ಕಾಲ ದೇಶಗಳಿಗನುಗುಣವಾಗಿ) ಒಂದು ವಿಷಯಕ್ಕೆ ಬೆಲೆ. ದಶಾಹ, ಏಕೋದ್ದಿಷ್ಟ ಇವೇ ಮೊದಲಾಗಿ ಒಂದು ವರ್ಷದವರೆಗೆ ಅನೇಕ ಮಾಸಿಕ ಶ್ರಾದ್ಧಗಳನ್ನು ಮಾಡಿ ಪ್ರತಿವರ್ಷ ಮೃತತಿಥಿಯಂದು ಪ್ರತಿಸಾಂವತ್ಸರಿಕ ಶ್ರಾದ್ಧವನ್ನು ಮರಣಹೊಂದಿದ ಮಪಿತೃಗಳನ್ನು ಉದ್ದೇಶವಾಗಿತಟ್ಟುಕೊಂದು ಮಾಡಲಾಗುತ್ತದೆ. ಇಲ್ಲಿ ಮಾಡುವ ಎಲ್ಲಾ ಶ್ರಾದ್ಧಗಳೂ ಒಂದು ಕಾಲಕ್ಕೆ ಒಳಪಟ್ಟು ಮಾಡುವಂತವುಗಳು. ಆದರೆ ಈ ಯಕ್ಷಪ್ರಶ್ನೆಯಲ್ಲಿ ಕೇಳುವ ಪ್ರಶ್ನೆ ಶ್ರಾದ್ಧಕ್ಕೆ ಯೋಗ್ಯವಾದ ಕಾಲ ಯಾವುದು? ಎಂಬುದು. ಇದಕ್ಕೆ ಉತ್ತರ 'ಮೃತತಿಥಿ' ಎಂಬುದು ಸಾಮಾನ್ಯವಾದ ಉತ್ತರ. ಆದರೆ ಯುಧಿಷ್ಠಿರನ ಉತ್ತರ ಅದಲ್ಲ. ಯಾವ ಬ್ರಾಹ್ಮಣನ ಆಗಮನ ಆಗುತ್ತದೆಯೋ, ಅಂದೇ ಶ್ರಾದ್ಧಕ್ಕೆ ಯೋಗ್ಯವಾದ ಕಾಲ ಎಂದು. ಅಂದರೆ ಬ್ರಾಹ್ಮಣನೇ ಕಾಲವೆಂದಂತಾಯಿತು. ಅಥವಾ ಬ್ರಹ್ಮಣನೇ ಕಾಲಕ್ಕೆ ನಿಯಂತಾ ಎಂದೂ ಆಗುತ್ತದೆ. ಅವನು ಬಂದ ದಿನವೇ ಶ್ರಾದ್ಧಕ್ಕೆ ಬೇಕಾದ ಕಾಲಧರ್ಮವು ಕೂಡಿ ಬರುತ್ತದೆ ಎಂದರ್ಥ. ಅಂದರೆ ಕಾಲದ ಧರ್ಮವನ್ನೇ ಬದಲಿಸುವಂತಹ ಬ್ರಾಹ್ಮಣನಾಗಿರಬೇಕು. ಶ್ರೀರಂಗ ಮಹಾಗುರುಗಳು ಶ್ರಾದ್ಧಭೋಜನಕ್ಕೆ ಆಮಂತ್ರಿಸುವ ಬ್ರಾಹ್ಮಣನು ಎಂತವನಾಗಿರಬೇಕು? ಎಂಬುದಕ್ಕೆ ಹೀಗೆ ಹೇಳುತ್ತಿದ್ದರು - ಸೂರ್ಯಚಂದ್ರರು ಕಾಲವನ್ನು ಪ್ರತಿನಿಧಿಸಿದರೆ ಅಗ್ನಿಯು ಕಾಲಾತೀತವಾದುದನ್ನು ಪ್ರತಿನಿಧಿಸುತ್ತದೆ. ಬ್ರಾಹ್ಮಣನು ಕಾಲಕ್ಕೆ ಒಳಪಟ್ಟಿದ್ದನ್ನೂ, ಕಾಲಾತೀತವಾದದ್ದನ್ನು ತಿಳಿಯಬೇಕಾದವನು"ಎಂದು. ವೇದ ವೇದಾಂಗಗಳಲ್ಲಿ ನಿಷ್ಣಾತನಾಗಿರಬೇಕು. ಜ್ಞಾನ-ವಿಜ್ಞಾನ ತೃಪ್ತಾತ್ಮನಾಗಿರಬೇಕು. ಜ್ಞಾನಿಯಾಗಿರಬೇಕು. ಇಂತಹ ಬ್ರಾಹ್ಮಣ ಆಗಮನದಿಂದ ಆ ಕಾಲವು ಶ್ರಾದ್ಧಕ್ಕೆ ಯೋಗ್ಯವಾದ ಕಾಲಧರ್ಮವಾಗಿ ಪರಿವರ್ತಿತವಾಗುವುದು. ಅಂತಹ ಕಾಲದಲ್ಲಿ ಸಂಪನ್ನವಾದ ಶ್ರಾದ್ಧವು ಪಿತೃದೇವತೆಗಳಿಗೆ ತೃಪ್ತಿದಾಯಕವಾಗಿ ಶ್ರಾದ್ಧವನ್ನು ಮಾಡಿದವರಿಗೆ ಎಲ್ಲಾ ಬಗೆಯ ಅನುಕೂಲತೆಗಳು ಸಿದ್ಧಿಸುವವು.

ಸೂಚನೆ : 10/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.