Sunday, March 24, 2024

ವ್ಯಾಸ ವೀಕ್ಷಿತ - 80 ದ್ರೋಣರ ಖಚಿತವಾದ ನುಡಿ (Vyaasa Vikshita - 80 Dronara Khachitavada Nudi)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಭೀಷ್ಮರು ಮಾತನಾಡಿದ ಬಳಿಕ ದ್ರೋಣರು ನುಡಿದರು:

ರಾಜಾ ಧೃತರಾಷ್ಟ್ರನೇ, ಮಂತ್ರಾಲೋಚನೆಗೆಂದು ಯಾರನ್ನಾದರೂ ಬರಮಾಡಿಕೊಂಡಿದ್ದರೆ, ಅಂತಹವರು ಹೇಳಬೇಕಾದದ್ದಾದರೂ ಏನನ್ನು? ಧರ್ಮಪ್ರಾಪ್ತಿಗೂ, ಅರ್ಥಪ್ರಾಪ್ತಿಗೂ, ಯಶಃಪ್ರಾಪ್ತಿಗೂ (ಎಂದರೆ ಕೀರ್ತಿಯನ್ನು ಗಳಿಸುವುದಕ್ಕೂ) – ಇವೆಲ್ಲಕ್ಕೂ ಅನುಗುಣವಾದದ್ದು ಯಾವುದೋ ಅದನ್ನು. ಹಿಂದಿನಿಂದಲೂ ನಾವು ಕೇಳಿಕೊಂಡು ಬಂದಿರುವುದಾದರೂ ಈ ಬಗೆಯೇ.

ಮಹಾತ್ಮನಾದ ಭೀಷ್ಮನ ಮತಿಯೇನೋ ನನ್ನ ಮತಿಯೂ ಅದೇ (ಎಂದರೆ ಭೀಷ್ಮನ ಮಾತೂ, ಧರ್ಮ-ಅರ್ಥ-ಕೀರ್ತಿಗಳನ್ನು ನೀವು ಹೊಂದಲು ಅನುಗುಣವಾಗಿರುವುದೇ). ಕುಂತಿಯ ಮಕ್ಕಳಿಗೂ ಪಾಲು ದೊರೆಯಬೇಕಾದದ್ದೇ; ಹೀಗೆ ಮಾಡಿದರಷ್ಟೆ ಅದು ಸನಾತನಧರ್ಮವಾಗುವುದು.

ಅದಕ್ಕಾಗಿ, ಪ್ರಿಯವಾಗಿ ಮಾತನಾಡತಕ್ಕ ಯಾರನ್ನಾದರೂ ಈಗ ದ್ರುಪದನ ಬಳಿಗೆ ಶೀಘ್ರವಾಗಿ ಕಳಿಸೋಣವಾಗಲಿ; ಹಾಗೂ ಪಾಂಡವರಿಗೆಂದು ಅನೇಕರತ್ನಗಳನ್ನು ಕೊಂಡೊಯ್ಯುವುದಾಗಬೇಕು. ದ್ರುಪದನು ಹೆಣ್ಣಿನ ಕಡೆಯವನೆಂದಾಯಿತಲ್ಲವೇ? ಆದ್ದರಿಂದ ಗಂಡಿನ ಕಡೆಯವರಾಗಿ ಧನರತ್ನಗಳನ್ನು ಸಮರ್ಪಿಸುವುದಾಗಬೇಕು.

ಅಷ್ಟೇ ಅಲ್ಲ, ತಮ್ಮೊಂದಿಗೆ ಉಂಟಾದ ಸಂಬಂಧದಿಂದಾಗಿ ಧೃತರಾಷ್ಟ್ರ-ದುರ್ಯೋಧನರಿಗೆ ಪರಮವಾದ ವೃದ್ಧಿಯೂ ಪರಮಸಂತೋಷವೂ ಉಂಟಾಗಿರುವುದು - ಎಂಬುದಾಗಿ ದ್ರುಪದ-ಧೃಷ್ಟದ್ಯುಮ್ನರಿಗೆ ಮತ್ತೆ ಮತ್ತೆ ಹೇಳತಕ್ಕದ್ದು. ಈ ಸಂಬಂಧವು ಅದೆಷ್ಟು ಉಚಿತವಾಗಿದೆ (ಎಂದರೆ, ಔಚಿತ್ಯದಿಂದ ಕೂಡಿದೆ)! - ಎಂಬುದನ್ನೂ ವರ್ಣಿಸಬೇಕು. ಮತ್ತೆ ಮತ್ತೆ ಕೌಂತೇಯರನ್ನೂ (ಎಂದರೆ ಕುಂತಿಯ ಪುತ್ರರನ್ನೂ) ಮಾದ್ರೇಯರನ್ನೂ (ಎಂದರೆ ಮಾದ್ರಿಯ ಪುತ್ರರನ್ನೂ) ಸಮಾಧಾನಗೊಳಿಸುತ್ತಾ ಮಾತನಾಡಬೇಕು. ಹೊಳೆಯುವ ಚಿನ್ನದಾಭರಣಗಳನ್ನು ನಿನ್ನ ಮಾತಿನಂತೆಂಬುದಾಗಿ ದ್ರೌಪದಿಗೆ ಕೊಡುವುದಾಗಬೇಕು; ಹಾಗೆಯೇ ದ್ರುಪದನ ಎಲ್ಲ ಮಕ್ಕಳಿಗೂ ಸರ್ವಪಾಂಡವರಿಗೂ, ಕುಂತಿಗೂ ಸಹ ಯಾವುದು ಯುಕ್ತವೋ ಅದನ್ನೆಲ್ಲ ಕೊಡುವುದು.

ಹೀಗೆ ಕೊಡುಗೆಗಳನ್ನು ಕೊಟ್ಟ ಬಳಿಕ, ಪಾಂಡವರೊಂದಿಗೆ  ಇಲ್ಲಿಗೆ ಬರಲೆಂದು ದ್ರುಪದನಿಗೆ ಆಹ್ವಾನವನ್ನು ಕೊಡತಕ್ಕದ್ದು. ಪಾಂಡವರು ಇಲ್ಲಿಗೆ ಬರುವುದರ ಬಗ್ಗೆ ದ್ರುಪದನ ಅನುಮೋದನೆಯು ದೊರೆತ ಬಳಿಕ, ಒಳ್ಳೆಯ ಸೈನ್ಯವನ್ನು ತೆಗೆದುಕೊಂಡು ಹೋಗಿ ದುಃಶಾಸನನೂ ವಿಕರ್ಣನೂ ಪಾಂಡವರನ್ನು ಇಲ್ಲಿಗೆ ಕರೆತರಲಿ (ವಿಕರ್ಣನು ದುರ್ಯೋಧನನ ತಮ್ಮ).

ಆ ಬಳಿಕ ಶ್ರೇಷ್ಠರಾದ ಆ ಪಾಂಡವರನ್ನು ಸದಾ ನೀನು ಗೌರವಿಸುತ್ತಿರುವುದು; ಪಾಂಡವರಾದರೂ ಪ್ರಜೆಗಳ ಇಚ್ಛೆಗೆ ಅನುಸಾರವಾಗಿ ತಮ್ಮ ಪೈತೃಕವಾದ (ಎಂದರೆ ತಂದೆಯಿಂದ ಬಂದ) ರಾಜ್ಯದಲ್ಲಿ ನೆಲೆಸಿರಲಿ. ಮಹಾರಾಜನೇ, ನಿನ್ನ ಮಕ್ಕಳು ಹಾಗೂ ಪಾಂಡವರು - ಇವರಿಬ್ಬರ ವಿಷಯದಲ್ಲಿ ನಿನ್ನ ವ್ಯವಹಾರವು ಹೀಗೆಯೇ ಇರತಕ್ಕದ್ದು - ಎಂಬ ವಿಷಯದಲ್ಲಿ ಭೀಷ್ಮನಿಗೂ ನನಗೂ ಏಕಾಭಿಪ್ರಾಯವುಂಟು – ಎಂದನು.

ಆಗ ಕರ್ಣನು ಹೇಳಿದನು:

ಮಹಾರಾಜ, ತಮ್ಮ ಕಡೆಯಿಂದ ಭೀಷ್ಮರಿಗೂ ದ್ರೋಣರಿಗೂ ಅರ್ಥ-ಮಾನಗಳು (ಎಂದರೆ ಧನ-ಗೌರವಗಳು) ದೊರೆಯುತ್ತಿರುತ್ತವೆ; ಅಲ್ಲದೆ ತಮ್ಮ ಎಲ್ಲ ಕಾರ್ಯಗಳಲ್ಲೂ ಅತ್ಯಂತ ಆತ್ಮೀಯರೆಂಬುದಾಗಿಯೇ ಅವರನ್ನು ತಾವು ಕಾಣುತ್ತಿರುವಿರಿ. ಹೀಗಿದ್ದರೂ ಸಹ ಅವರಿಬ್ಬರೂ ಯಾವುದು ನಿಮಗೆ ಶ್ರೇಯಸ್ಸೋ  ಅದನ್ನು ಮಂತ್ರಾಲೋಚನರೂಪವಾದ ಸಲಹೆಯಾಗಿ ಕೊಡುತ್ತಿಲ್ಲ: ಇದಕ್ಕಿಂತಲೂ ಹೆಚ್ಚು ಆಶ್ಚರ್ಯಕರವಾದುದು ಇರುವುದುಂಟೇ?!

ದುಷ್ಟವಾದ ಮನಸ್ಸು; ಮುಚ್ಚಿಟ್ಟ ಅಂತರಾತ್ಮ - ಇವನ್ನುಳ್ಳ ವ್ಯಕ್ತಿಯು ಮತ್ತೊಬ್ಬರಿಗೆ ಪರಮಶ್ರೇಯಸ್ಸಾದುದನ್ನು ಹೇಳಲಾದೀತೇ? ಸತ್ಪುರುಷರಿಗೆ ಮಾನ್ಯವೆನಿಸುವಂತಹುದನ್ನು ಅಂತಹವರು ಹೇಗೆ ತಾನೆ ಮಾಡಿಯಾರು? (ಕಥಂ ಕುರ್ಯಾತ್ ಸತಾಂ ಮತಂ?)

ಸೂಚನೆ : 24/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.