Thursday, September 30, 2021

ಭಗವಂತ ಭಾಗವತರ ಸಂಬಂಧ (Bhagavanta Bhaagavatara Sambandha)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)



"ಲಾಲಿಸಿದರೆ ಮಕ್ಕಳು, ಪೂಜಿಸಿದರೆ ದೇವರು" ಇದು ಕನ್ನಡಿಗರಿಗೆ ಪರಿಚಿತವಾದ ಗಾದೆ. ಮಕ್ಕಳು, ಪ್ರೀತಿಯ, ಸಮಾಧಾನವಾದ ಮಾತುಗಳಿಗೆ ಒಲಿಯುತ್ತಾರೆ; ಹಾಗೆಯೇ ತ್ರಿಕರಣಶುದ್ಧರಾಗಿ ಪ್ರೀತಿಯಿಂದ ಭಗವಂತನನ್ನು ಸಜ್ಜನರು ಒಲಿಸಿಕೊಳ್ಳುತ್ತಾರೆ. ಭಾಗವತೋತ್ತಮನಾದ ಪ್ರಹ್ಲಾದರಾಜನು ಭಗವಂತನು ಒಲಿಯಬೇಕಾದರೆ, ಭಕ್ತರು ನವವಿಧ ಭಕ್ತಿಯನ್ನು ಅನುಸರಿಸಬೇಕೆಂದು ಲೋಕಕ್ಕೆ ಉಪದೇಶಮಾಡಿರುತ್ತಾನೆ. ನವವಿಧಭಕ್ತಿಯಲ್ಲಿ ಪರಮಾತ್ಮನ ಪಾದಸೇವೆ, ದಾಸ್ಯಗಳೆಂಬ ಉಪಚಾರಗಳೂ ಸೇರಿವೆ. "ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ, ಸಾನುರಾಗದಿಂದ ಹರಿಯ ತಾನೇ ಸೇವೆ ಮಾಡುತಿಹಳು"ಎಂಬ ಪುರಂದರದಾಸರ ಕೀರ್ತನೆ ಸ್ಮರಣೀಯ. 

ಜಗನ್ಮಾತೆಯೇ ಹರಿಯ ಪಾದಸೇವೆಯಲ್ಲಿ ನಿತ್ಯವೂ ನಿರತಳಾಗಿರುತ್ತಾಳೆ. ಈ ರೀತಿ ಮಾಡುವ ಪೂಜೆಗಳು, ಸೇವೆಗಳು ಭಗವಂತನಿಗೆ ಸೇರುವುವೇ? ಎಂಬ ಸಂಶಯಗಳು ಸಾಮಾನ್ಯರ ಮನಸ್ಸಿಗೆ ಬರಬಹುದು. ಇದಕ್ಕೆ ಉತ್ತರ ಶ್ರೀರಂಗಗುರುಗಳ ವಾಣಿಯಲ್ಲಿದೆ- "ಫೋನ್ ನಲ್ಲಿ ಮಾತನಾಡಿದರೆ ಸಾವಿರಾರು ಮೈಲಿ ದೂರ ಸಾಗಬಹುದು. ನಿಮ್ಮ ಮನಸ್ಸನ್ನು ಭಗವಂತನವರೆಗೆ ಹರಿಯಬಿಟ್ಟರೆ ಅಲ್ಲಿಗೂ ನೀವು ಮಾಡುವ ಉಪಚಾರ ತಲುಪಬಹುದು. ಭಗವನ್ಮಯವಾಗಿ ಜೀವನ ನಡೆಸಲು ಒಂದು ವಿಧಾನ ಹಾಕಿಕೊಟ್ಟಿದ್ದಾರೆ. ಹಾಗೆ ಮಾಡುವ ಜೀವನದಲ್ಲಿ ಸತ್ಯ, ಸೌಂದರ್ಯ, ಮಾಂಗಲ್ಯಗಳಿಗೆಡೆಯಿವೆ" .

ಪುರಾಣಗಳಲ್ಲಿ ಬರುವ ಪ್ರಹ್ಲಾದ, ಧ್ರುವ, ದ್ರೌಪದಿ, ಭೀಷ್ಮ ಮುಂತಾದವರು ಹಾಗೂ ಚರಿತ್ರೆಯಲ್ಲಿ ನಾವು ನೋಡುವ ಪುರಂದರ ದಾಸರು, ಸಂತ ಸಕ್ಕುಬಾಯಿ ಇತ್ಯಾದಿ ಭಾಗವತರು ಭಗವಂತನಲ್ಲಿ ಭಕ್ತಿಯ ಸಂಬಂಧವನ್ನಿಟ್ಟುಕೊಂಡು ತಮ್ಮ ಇಹ-ಪರ ಜೀವನವನ್ನು ಸಾರ್ಥಕವಾಗಿ ಕಳೆದ ಪ್ರಸಂಗಗಳು ಉತ್ತಮ ಉದಾಹರಣೆಗಳಾಗಿವೆ. ಶುದ್ಧವಾದ ಭಕ್ತಿಗೆ ಮೆಚ್ಚಿದ ಭಗವಂತ ಭಕ್ತರ ವಿಷಯದಲ್ಲಿ ವಿಶೇಷ ಪ್ರೀತಿಯನ್ನು ತೋರಿದ ಪ್ರಸಂಗಗಳು ಇಲ್ಲದಿಲ್ಲ. ಮಹಾಭಾರತದ ಯುದ್ಧದ ಸಮಯದಲ್ಲಿ ತನ್ನ ಭಕ್ತರಾದ ಭೀಷ್ಮಪಿತಾಮಹರ ಮಾತನ್ನುಳಿಸಲು, ತಾನು, ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರ ಹಿಡಿಯುವುದಿಲ್ಲವೆಂಬ ತನ್ನ ಮಾತು ಮುರಿದರೂ ಲೆಕ್ಕಿಸದೇ, ಶ್ರೀಕೃಷ್ಣನು ಸುದರ್ಶನಚಕ್ರ ಹಿಡಿದನಲ್ಲವೇ?

ಪಂಡರಾಪುರದ ಸಮೀಪದ ಗ್ರಾಮದಲ್ಲಿ ಜನಿಸಿದ ಸಂತಸಕ್ಕುಬಾಯಿಯವರ ಕಥೆ ಭಾರತೀಯರೆಲ್ಲರಿಗೆ ಪರಿಚಿತವಾದದ್ದು. ಭಗವಂತನು ತನ್ನ ಭಕ್ತೆಯಾದ ಸಕ್ಕುಬಾಯಿಯವರ ಪರವಾಗಿ ಅತ್ತೆಯ ಮನೆಯಲ್ಲಿದ್ದುಕೊಂಡು ಮನೆಯ ಕೆಲಸವನ್ನೆಲ್ಲಾ ಮಾಡಿ ಸಂತಸಕ್ಕುಬಾಯಿಯವರನ್ನು ಪಂಡರಾಪುರಕ್ಕೆ ಕಳಿಸುವ ಘಟನೆ ರೋಮಾಂಚನವನ್ನುಂಟುಮಾಡದಿರದು. ಇನ್ನೊಂದು ಪುರಾಣಪ್ರಸಂಗದಲ್ಲಿ, ಭಗವಂತನು ವಾಮನನಾಗಿ ಬಲಿಯ ಮನೆಗೆ ಬಂದು ಮೂರಡಿ ಭೂಮಿಯನ್ನು ಕೇಳಿ, ತ್ರಿವಿಕ್ರಮನಾಗಿ ಬೆಳೆದಾಗ, ಬಲಿಯು ಶರಣಾದ. ಹರಿಯಪಾದ ಬ್ರಹ್ಮಾಂಡವನ್ನೇ ವ್ಯಾಪಿಸಿ, ಮೂರನೆಯ ಪಾದಕ್ಕೆ ಜಾಗವಿಲ್ಲದಾಗ, ತನ್ನ ಶಿರವನ್ನೇ ಬಲಿಯು ಒಪ್ಪಿಸಿಕೊಂಡ. ಭಗವಂತನು ಮೆಚ್ಚಿ, ಬಲಿಯನ್ನು, ಪಾತಾಳದ ದೊರೆಯನ್ನಾಗಿ ಮಾಡಿ, ಅವನ ಬಾಗಿಲು ಕಾಯುವ ಕಾಯಕವನ್ನು ಮಾಡುತ್ತಿರುವುದು ಭಗವಂತ- ಭಾಗವತರ ಸಂಬಂಧ ಎಷ್ಟು ಅದ್ಭುತವೆಂದು ನಿರೂಪಿಸುತ್ತದೆ. ಭಗವಂತನು ಭಕ್ತರಸೇವೆ ತನ್ನಲ್ಲಿ ಅರ್ಪಿತವಾಗಬೇಕಾದರೆ ಸುಲಭೋಪಾಯ ಸೂಚಿಸುತ್ತಾನೆ- "ನನ್ನಲ್ಲೇ ಮನಸ್ಸಿಡು. ನನ್ನನ್ನು ಅತಿಶಯವಾಗಿ ಪ್ರೀತಿಸು. ನನ್ನನ್ನೇ ಆರಾಧಿಸು. ನನಗೆ ತಲೆಬಾಗು. ಮನಸ್ಸನ್ನು ಹೀಗೆ ಅಣಿಗೊಳಿಸಿ ನನ್ನನ್ನೇ ಮೊರೆಹೊಕ್ಕಾಗ ನನ್ನನ್ನೇ ಸೇರುವೆ" ಶುದ್ಧವಾದ ಭಕ್ತಿಯುಳ್ಳ ತನ್ನ ಭಕ್ತರನ್ನೇ ಉಪಚರಿಸುವ ಅಂತಹ ಭಗವಂತನಲ್ಲಿ ನಾವು ಮಾಡುವ ಸೇವೆ ನೆಲೆನಿಲ್ಲಲಿ ಎಂದು ಪ್ರಾರ್ಥಿಸೋಣ.

ಸೂಚನೆ: 30/09/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.