Saturday, September 4, 2021

ಷೋಡಶೋಪಚಾರ - 16 ನೈವೇದ್ಯ (Shodashopachaara - 16 Naivedya)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



'ನೈವೇದ್ಯ' ಎಂಬ ಉಪಚಾರವು ಉಳಿದೆಲ್ಲಾ ಉಪಚಾರಗಳಿಗಿಂತ ಸ್ವಲ್ಪ ಭಿನ್ನವಾದುದು. ಇದು ನನ್ನದು' ಎಂದು ಪರಿಭಾವಿಸಲಾದ ವಸ್ತುಗಳನ್ನು 'ನನ್ನದಲ್ಲ; ಎಲ್ಲವೂ ನಿನ್ನದೇ' ಎಂದು ಭಗವಂತನಿಗೆ ಸಮರ್ಪಿಸುವ ಒಂದು ಘಟ್ಟ. ತ್ಯಾಗದ ಸಂಕೇತ. 'ರಾಗ'ದಿಂದ ದುಃಖ, ತ್ಯಾಗದಿಂದ ಸುಖ. ತ್ಯಾಗವನ್ನು ಜೀವನದಲ್ಲಿ ಅಭ್ಯಾಸ ಮಾಡುವ ವಿಧಾನವೇ ನೈವೇದ್ಯ. 'ನಿವೇದನ' ಎಂಬ ಶಬ್ದಕ್ಕೆ ತಿಳಿಸುವುದು ಎಂದರ್ಥ. ಪ್ರಪಂಚವೆಲ್ಲವೂ ಭಗವಂತನದ್ದು. ಇವೆಲ್ಲವೂ ಅವನ ಒಡೆತನಕ್ಕೆ ಸೇರಿದ್ದು. ನಾವು ನಮ್ಮ ಬಾಳಿಗಾಗಿ ಬಳಸುವಾಗ ಒಡೆಯನ ಅಪ್ಪಣೆ ಬೇಕು. ಅದಿಲ್ಲವಾದಲ್ಲಿ ಕಳ್ಳತನವೇ. ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು ಇದನ್ನೇ ಹೀಗೆ ಹೇಳುತ್ತಾನೆ- "ತೈರ್ದತ್ತಾನ್ ಅಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ" ಎಂದು. ಆದ್ದರಿಂದ ಕೊಟ್ಟು ಸ್ವೀಕರಿಸುವ ಪರಿ ನೈವೇದ್ಯವೆಂಬ ಉಪಚಾರ.


ಜೀವಿಗೆ ಬದುಕಲು ಅನ್ನ ಬೇಕು. ಜೀವಿಯ ಬದುಕಿನ ಮೇಲೆ ಅದರದರ ಅನ್ನವೂ ಭಿನ್ನವೇ. ಆದರೂ ಉಪನಿಷತ್ತಿನಲ್ಲಿ ಹೇಳುವಂತೆ ಯಾವುದು ಯಜ್ಞದ ಹವಿಸ್ಸಾಗಿ ಬಳಕೆಯಾಗುತ್ತದೆಯೋ ಅದನ್ನು 'ಅನ್ನ'ವೆಂದು ಕರೆಯುತ್ತಾರೆ. ಈ ದೃಷ್ಟಿಯಿಂದ ಹುತ ಮತ್ತು ಪ್ರಹುತ ಎಂಬುದಾಗಿ ಎರಡು ಬಗೆಯ ಅನ್ನವನ್ನು ಮಾಡಲಾಗುತ್ತದೆ. ಹುತವೆಂಬುದು ಯಜ್ಞಕ್ಕಾಗಿ ಬಳಸಿ ಅಂತಹ ಯಜ್ಞಶೇಷವನ್ನು ಪ್ರಸಾದವಾಗಿ ಸ್ವೀಕರಿಸುವ ದ್ರವ್ಯ. ಪ್ರಹುತವೆಂಬುದು ಉಳಿದ ಜೀವಸಂಕುಲದ ಪೋಷಣೆಗಾಗಿ ಬಳಸುವ ಪದಾರ್ಥ. ಆದ್ದರಿಂದ ಈ ಎರಡು ದ್ರವ್ಯಗಳನ್ನು ಪ್ರಧಾನವಾಗಿ ನೈವೇದ್ಯದ್ರವ್ಯವಾಗಿ ಹೇಳುತ್ತಾರೆ. ಇದರ ಮುಖ್ಯ ಉದ್ದೇಶವು ಸಪ್ತಧಾತುಗಳ ಪ್ರಸನ್ನತೆಯ ಮೂಲಕ ಭಗವಂತನ ಅನುಗ್ರಹವನ್ನು ಪಡೆಯುವುದು. ಹಾಗಾಗಿ ಇದಕ್ಕೆ 'ಪ್ರಸಾದ' ಎನ್ನಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಅನ್ನವಾಗಿ ಮಾಡಿದರೆ ಅದೊಂದು ಪದಾರ್ಥ. ಅದನ್ನು ದೇವರಿಗೆ ನಿವೇದಿಸಿದ ಬಳಿಕ 'ಪ್ರಸಾದ'. ದೇವಸ್ಥಾನಕ್ಕೆ ಹೋಗುವಾಗ ತೆಗೆದುಕೊಂಡು ಹೋದ ಬಾಳೆಹಣ್ಣು, ನಿವೇದನೆಯ ಅನಂತರ, ಪ್ರಸಾದವಾಗುತ್ತದೆ. ಅಲ್ಲಿ 'ಪದಾರ್ಥ'ವು 'ಪ್ರಸಾದ'ವಾಗಿದೆ. ಶ್ರೀರಂಗಮಹಾಗುರುಗಳು ಪ್ರಸಾದದ ಬಗ್ಗೆ - "ಊಟಮಾಡುವವರ ಕಡೆಯಿಂದಲೂ ಪ್ರಮಾಣಬದ್ಧವಾದ ಹಸಿವೂ ಕಂಡುಬಂದಾಗ, ಅದನ್ನು ಬಡಿಸುವ ಆ ತಾಯಿಯೂ ತನ್ನ ಧರ್ಮಸಂತಾನವನ್ನು ಪಾಲನ ಮಾಡುವವಳಾಗಿದ್ದು, ಅದನ್ನು ಪರಮಪುರುಷನಿಗೆ ನಿವೇದನವನ್ನು ಮಾಡಿ, ಅವನ ಪ್ರಸಾದವಾಗಿ ನಿಮಗೆ ದೇಶಕಾಲಗಳನ್ನರಿತು ಬಡಿಸಿದಾಗ, ಅದು ತಾನೇ ಪ್ರಸಾದ ಆಗುತ್ತೆ! ಆಗ ನಿಮ್ಮ ಎಲ್ಲ ಅಂಗೋಪಾಂಗಗಳಿಗೂ, ಕರಣಗಳಿಗೂ, ಇಂದ್ರಿಯಗಳಿಗೂ, ಮನಸ್ಸಿಗೂ, ಬುದ್ಧಿಗೂ ಎಲ್ಲಕ್ಕೂ ಪ್ರಸನ್ನತೆಯನ್ನುಂಟು ಮಾಡಿ ಈ (ಶರೀರದ) ಹಸಿವು, ಜೊತೆಗೆ ಆ(ಆತ್ಮನ) ಹಸಿವು, ಎರಡೂ ಶಮನವಾಗುತ್ತೆ ಅಲ್ಲವೇನಪ್ಪ" ಎಂದು ಹೇಳುತ್ತಿದ್ದುದು ಸ್ಮರಣೀಯ.


ಸೂಚನೆ : 04/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.