Saturday, September 18, 2021

ಯೋಗತಾರಾವಳಿ - 21 ಅಹಂ-ಮಮಗಳ ಮೀರಿ (Yogataravali - 20 Aham-mamagala Miri)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಯೋಗತಾರಾವಳೀ (ಶ್ಲೋಕ ೨೨)

 ಅಮೀ ಯಮೀಂದ್ರಾಃ

"ಅಮನಸ್ಕ" ಎಂಬ ಮುದ್ರೆಯನ್ನು ಹಿಂದಿನ ಶ್ಲೋಕದಲ್ಲಿ ಹೇಳಿತ್ತು. ಈಗ "ಸಹಜಾಮನಸ್ಕ" ಎಂಬ ಸ್ಥಿತಿಯನ್ನು ಕುರಿತು ಇಲ್ಲಿ ಹೇಳಿದೆ.

ಯಮೀಂದ್ರರಿಗೇ

ಅಮನಸ್ಕದವರೆಗೂ ಸಾಧನೆಯನ್ನು ಮಾಡಿರುವವರು ಸಾಧಾರಣರಲ್ಲ. ಅವರು ಯಮೀಂದ್ರರೇ ಸರಿ. ಯಮಿಯೆಂದರೆ ಯಮವುಳ್ಳವನು. ಯಮವೆಂದರೆ ಹಿಡಿತ. ತಮ್ಮ ಮೇಲೇ, ಎಂದರೆ ತಮ್ಮ ಇಂದ್ರಿಯ-ಮನಸ್ಸುಗಳ ಮೇಲೇ, ಹಿಡಿತವನ್ನು ಸಾಧಿಸಿರುವವರು ಯಮಿಗಳು. ಯಮಿಗಳಲ್ಲಿ ಶ್ರೇಷ್ಠರೆನಿಸುವವರು ಯಮೀಂದ್ರರು. ದೀರ್ಘ-ಕಾಲವೂ ನಿರಂತರವೂ ಸಂಯಮವನ್ನು ಸಾಧಿಸಿರುವವರು ಯಮೀಂದ್ರರು. ಅಂತಹವರಿಗೇ ಈ ಸಹಜಾಮನಸ್ಕವು ಸಿದ್ಧಿಸುವುದು.

ಇದರ ಪರಿಣಾಮಗಳೆರಡು. ಒಂದು, ಇವರ ಅಹಂಕಾರವು ಶಿಥಿಲವಾಗುವುದು; ಜೊತೆಗೇ ಮಮಕಾರವೂ ಸಡಿಲವಾಗುವುದು. ಸಾಧಾರಣವಾಗಿ ಅಹಂಕಾರ-ಮಮಕಾರಗಳು ಗಟ್ಟಿಯಾಗಿರುತ್ತವೆ. ಟೊಳ್ಳಾದವುಗಳನ್ನು ಕಷ್ಟವಿಲ್ಲದೆ ಭಗ್ನಗೊಳಿಸಬಹುದು; ಆದರೆ ಗಟ್ಟಿಯಾದವನ್ನು ಅಲ್ಲಾಡಿಸಲೂ ಸಾಧ್ಯವಾಗದು, ಅಲ್ಲವೇ?

ಅಹಮ್ಮಿನ ಆಟ!

ಅಹಂಕಾರದ ಆಟವನ್ನು ಯಾರೂ ಊಹಿಸಲೂ ಆರರು! ಕೆಲವೊಮ್ಮೆ ಭಗವಂತನ ಬಳಿಯೇ ಇರುವವರನ್ನೂ ಅಹಂಕಾರವು ಹೇಗೆ ಆಟ ಆಡಿಸಿಬಿಡುವುದೆಂಬುದನ್ನು ಪುರಾಣ- ಕಥೆಗಳಲ್ಲಿ ನೋಡುತ್ತೇವೆ. ಜಯ-ವಿಜಯರ ಕಥೆ, ನಾರದರ ಕಥೆ - ಮುಂತಾದುವುಗಳನ್ನು ಕೇಳಿಯೇ ಇರುತ್ತೇವೆ.

ಈ ನಾನು-ನನ್ನದುಗಳನ್ನು ನಾವು ಹಿಡಿದಿಕೊಂಡಿರುತ್ತೇವೋ, ಅವು ನಮ್ಮನ್ನು ಹಿಡಿದುಕೊಂಡಿರುತ್ತವೋ ಹೇಳುವುದು ಸುಲಭವಲ್ಲ. ಅಂತೂ, ಸಂಕಲ್ಪಿಸಿದರೂ, ಹಠ ತೊಟ್ಟರೂ ಸುಲಭಕ್ಕೆ ಅವನ್ನು ಕೊಡವಿಕೊಳ್ಳಲಾಗುವುದಿಲ್ಲ. ಅವುಗಳದ್ದು ನಮ್ಮೊಂದಿಗೆ ಅದೇನು ಅಂಟೋ ನಂಟೋ ಗಂಟೋ ತಿಳಿಯಲಾರೆವು. ಬಿಡಿಸಲು ಹೋದಷ್ಟೂ ಮತ್ತೂ ತೊಂತಿಕೊಳ್ಳುವ ಗಂಟುಗಳೇ ಅವು! ಕನಕದಾಸರ ಕಥೆಯಲ್ಲಿ "ನಾನು ಹೋದರೆ ಹೋದೇನು!" ಎಂಬ ಮಾತನ್ನು ಕೇಳಿದ್ದೇವಲ್ಲವೆ? ನಾನು ಎಂಬ ಅಹಂಕಾರವು ಬಿಟ್ಟುಹೋದರೆ ವೈಕುಂಠಕ್ಕೆ ಹೋಗಲಾದೀತು. "ನಾನು-ನಾನು ಎಂಬುದಿರುವೆಡೆಯಲ್ಲಿ ಭಗವಂತನಿರುವುದಿಲ್ಲಪ್ಪಾ" – ಎಂಬುದು ಶ್ರೀರಂಗಮಹಾಗುರುಗಳ ಎಚ್ಚರದ ವಾಣಿ.

ಆದರೆ ಸಹಜಾಮನಸ್ಕದಿಂದಾಗಿ ನಮ್ಮ ಮೇಲಿರುವ ಅವುಗಳ ಹಿಡಿತವು ತಾನೇ ಸಡಿಲವಾಗಲು ಆರಂಭಿಸುತ್ತದೆ! ಅಹಂತ್ವ-ಮಮತ್ವಗಳನ್ನು ನಾವು ಬಿಡಬೇಕೆಂದು ಈ ಹಿಂದೆ ಹೇಳಿತ್ತು, ಸರಿಯೇ. ನಮ್ಮ ಸಾಧನೆಯಲ್ಲಿಯ ಪಕ್ವತೆ ಹೆಚ್ಚುತ್ತಿದ್ದಂತೆ ಅವುಗಳೇ ಇನ್ನು ಸಡಿಲವಾಗಲು ಆರಂಭಿಸುವುವು.

ಮತ್ತೆರಡನ್ನೂ ಮೀರು!

ಹೀಗೆ ಮುಂದಿನ ಹೆಜ್ಜೆಯೇನೆಂಬುದನ್ನು ಶ್ಲೋಕವು ಸ್ಪಷ್ಟಪಡಿಸುತ್ತದೆ. ಈ ಯಮಿ-ಶ್ರೇಷ್ಠರು ಎರಡನ್ನು ಮೀರಿಹೋಗುತ್ತಾರೆ. ಯಾವೆರಡನ್ನು? ಮನಸ್ಸು ಮತ್ತು ವಾಯುಗಳನ್ನು. ಮನಸ್ಸನ್ನು ಮೀರಿದ ಭಾವವೊಂದುಂಟು. ಅಂತಹ ಭಾವವನ್ನು ಅವರು ಹೊಂದುವರು. ಆ ಭಾವದಲ್ಲಿ ಮಾರುತ-ವೃತ್ತಿಯೇ ಇರದು. ಮಾರುತವೆಂದರೆ ವಾಯು. ವಾಯುವೆಂದರೆ ಹೊರಗಡೆಯ ಗಾಳಿಯಲ್ಲ. ಮಾರುತ-ಶಬ್ದವು ಪ್ರಾಣ-ವಾಯುವನ್ನು ಸೂಚಿಸುತ್ತದೆ. ಅರ್ಥಾತ್, ಪ್ರಾಣವೃತ್ತಿಗಳೇ ಅಲ್ಲಿರವು. ಪ್ರಾಣಕ್ಕೆ ಐದು ವೃತ್ತಿಗಳುಂಟು - ಅವನ್ನೇ ಪ್ರಾಣ, ಅಪಾನ, ವ್ಯಾನ, ಉದಾನ, ಮತ್ತು ಸಮಾನ - ಎನ್ನುವರು.

ಪ್ರಾಣದ ವೃತ್ತಿಗಳೈದಕ್ಕೂ ತಮ್ಮದೇ ಆದ ಬೇರೆ ಬೇರೆ ಕೆಲಸಗಳಿರುತ್ತವೆ. ಅವುಗಳ ಸ್ಥಾನಗಳೂ ಬೇರೆ ಬೇರೆ. ಹೃದಯ-ಸ್ಥಾನದಲ್ಲಿ ಪ್ರಾಣವೂ, ಗುದಸ್ಥಾನದಲ್ಲಿ ಅಪಾನವೂ ಕೆಲಸಮಾಡುತ್ತವೆ. ಸಮಾನ ಹಾಗೂ ಉದಾನಗಳು ಕ್ರಮವಾಗಿ ನಾಭಿ ಹಾಗೂ ಕಂಠ-ಸ್ಥಾನಗಳಲ್ಲಿ ಕೆಲಸಮಾಡತಕ್ಕವು. ವ್ಯಾನವು ಇಡೀ ಶರೀರದಲ್ಲೇ ಕೆಲಸವನ್ನು ಮಾಡುತ್ತದೆ.

ಹೀಗೆ ಇತ್ತ ಅಹಂತೆ-ಮಮತೆಗಳನ್ನೂ (ಎಂದರೆ ಅಹಂಕಾರ-ಮಮಕಾರಗಳನ್ನೂ), ಅತ್ತ ಮನೋವೃತ್ತಿ-ಪ್ರಾಣವೃತ್ತಿಗಳನ್ನೂ - ಇವು ನಾಲ್ಕನ್ನೂ ಮೀರಿರುವ ಭಾವವೊಂದನ್ನು ಯಮಿಗಳು ಹೊಂದುವರು. ಇಷ್ಟೆಲ್ಲ ಆದ ಮೇಲೆ ಅವರಲ್ಲಿ ಉಂಟಾಗುವ ಭಾವವನ್ನು ಗಗನಾವಶೇಷವೆಂದು ಹೇಳಿದೆ.

ಭ್ರೂ-ಮಧ್ಯದಿಂದ ಆರಂಭಿಸಿ ಮೂರ್ಧ-ಪರ್ಯಂತವಾಗಿ (ಅಂದರೆ, ಹುಬ್ಬುಗಳ ನಡುವಿನಿಂದ ಶಿರಸ್ಸಿನವರೆಗೆ -ಎಂದರ್ಥ) ಇರುವ ಸ್ಥಾನವನ್ನು ಆಕಾಶ-ಸ್ಥಾನವೆನ್ನುತ್ತಾರೆ. ಇದು ಆತ್ಮನಿಗೆ ನಿಕಟವಾದ ಸ್ಥಾನ. ಅಲ್ಲಿಯ ಸ್ಥಿತಿಯೇ ಗಗನಾವಶೇಷವಾದ ಸ್ಥಿತಿ. ಅವಶೇಷವೆಂದರೆ ಉಳಿದಿರುವುದು. ಅಷ್ಟು ಮಾತ್ರವೇ ಉಳಿದಿರುವ ಸ್ಠಿತಿಯದು. ಅಂತಹ ತುಂಗವಾದ ಭಾವವನ್ನು ಯಮೀಂದ್ರರು ತಲುಪುವರು. ಅಹಂ ಎನ್ನುವುದು ಬ್ರಹ್ಮದಲ್ಲಿ ಪೂರ್ಣವಾಗಿ ವಿಲೀನವಾಗುವುದಕ್ಕೆ ನಿಕಟವಾದ ಸ್ಥಿತಿಯಿದು- ಎಂಬುದು ತಾತ್ಪರ್ಯ.

ಅಮೀ ಯಮೀಂದ್ರಾಸ್ ಸಹಜಾಽಮನಸ್ಕಾದ್

   ಅಹಂ-ಮಮತ್ವೇ ಶಿಥಿಲಾಯಮಾನೇ |

ಮನೋಽತಿಗಂ ಮಾರುತ-ವೃತ್ತಿ-ಶೂನ್ಯಂ

   ಗಚ್ಛಂತಿ ಭಾವಂ ಗಗನಾಽವಶೇಷಮ್ ||೨೨||

ಸೂಚನೆ : 18/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.