Friday, September 10, 2021

ಪರಮಾನಂದಮಯ ಸ್ವರೂಪ-ನಮ್ಮ ಗಣೇಶ (Paramaanandamaya Svarupa-Namma Ganesha)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)



ಭಾದ್ರಪದ ಶುಕ್ಲ ಚತುರ್ಥಿ ಬಂದರೆ ಗಣೇಶನ ಹಬ್ಬದ ಸಂಭ್ರಮ. ಗಣೇಶನು ನಮ್ಮ ದೇಶದಲ್ಲಂತೂ ಅತ್ಯಂತ ಜನಪ್ರಿಯನಾದ ದೇವತೆ. ಇದಲ್ಲದೇ ಬರ್ಮಾ, ಮಲೇಶಿಯಾ,ಚೀನಾ,ಜಾವಾ,ಸುಮಾತ್ರಾ, ಜಪಾನ್ ಇತ್ಯಾದಿ ದೇಶಗಳಲ್ಲೂ ಇವನ ಖ್ಯಾತಿ ಇದೆ. ಎಲ್ಲಾ ವರ್ಗದ ಜನರೂ ಗಣೇಶನ ಪೂಜೆಯನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸುತ್ತಾರೆ. ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ, ಆಸ್ಪತ್ರೆಗಳಲ್ಲಿ,ಅಂಗಡಿಗಳಲ್ಲಿ, ಮನೆಮನೆಗಳಲ್ಲಿ ಗಣೇಶನ ಚಿತ್ರವಿಲ್ಲದ ಜಾಗವೇ ಇಲ್ಲವೆಂಬಷ್ಟು ವ್ಯಾಪಕನಾದ ದೇವ ಇವನು.

ಪ್ರಥಮ ಪೂಜೆಯ ದೇವ

ಯಾರು ಈ ಗಣೇಶ? ಶಿವಗಣಗಳ ಅಧಿಪತಿ. ವಿಘ್ನಪರಿಹಾರಕನಾದ ದೇವ. ಎಲ್ಲಾ ಕರ್ಮಗಳಲ್ಲೂ ಇವನಿಗೇ  ಪ್ರಥಮ ಪೂಜೆ. "ಆದಿತ್ಯಂ ಅಂಬಿಕಾಂ ವಿಷ್ಣುಂ ಗಣನಾಥಂ ಮಹೇಶ್ವರಂ" ಎಂಬಂತೆ ಪಂಚಾಯತನ ದೇವತೆಗಳಲ್ಲಿ ಒಬ್ಬನಾಗಿ ಆರಾಧಿಸಲ್ಪಡುವ ದೇವ ಇವನು. ಅಷ್ಟೇ ಅಲ್ಲದೇ ಗಣಪತಿಯ ಮಹಾ ಭಕ್ತರು ಹೇಳುವಂತೆ- ಅವನೇ ಪರತತ್ತ್ವ. ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣನಾಗಿ ಸರ್ವಮೂಲವೂ ಸರ್ವಮಯವೂ ಆಗಿರುವ ಪರಮಾತ್ಮ. ಪುರಾಣ-ಇತಿಹಾಸ, ಆಗಮಗಳಲ್ಲಿ ಆತನ ಸ್ವರೂಪ,ರೂಪ,ಉಪಾಸನೆ, ಮಹಿಮೆಗಳನ್ನು ಸ್ಪಷ್ಟವಾಗಿ ಸಾರಿದ್ದಾರೆ.

ಗಣೇಶನು ಮನಸ್ಸಿನ ಕಾರ್ಖಾನೆಯ ದೇವತೆಯೇ?

ಇಷ್ಟಾದರೂ ಕೆಲವರು ಹೇಳುತ್ತಾರೆ-ಗಣೇಶನು ಭಾರತೀಯರ ಮನಸ್ಸಿನ ಕಾರ್ಖಾನೆಯಲ್ಲಿ ತಯಾರಿಸಿದ ಒಂದು ದೇವತೆ. ದ್ರಾವಿಡ ಜನಾಂಗದವರು ಆತನ ಕಲ್ಪನೆಯನ್ನು ಸೃಷ್ಟಿಸಿದರು. ವಿಶೇಷವಾಗಿ ಬೇಸಾಯಗಾರರು ಆನೆಗಳು ತಮ್ಮ ಹೊಲ ಗದ್ದೆಗಳನ್ನು ಹಾನಿಮಾಡುತ್ತಿದ್ದುದನ್ನು ಕಂಡು ಅದರ ಪರಿಹಾರಕ್ಕೆಂದು ಆನೆಮುಖದ ದೇವರನ್ನು ಕಲ್ಪಿಸಿ ಪೂಜಿಸತೊಡಗಿದರು. ಇದೊಂದು ವಾದ.

ವಿಕಾಸವಾದ ಮತ್ತು ಗಣೇಶ?

ಇನ್ನು ವಿಜ್ಞಾನಿಗಳು ಹೇಳುವ ವಿಕಾಸವಾದಕ್ಕೂ ನಮ್ಮ ಗಣಪನಿಗೂ ತಳುಕು ಹಾಕುವುದೊಂದು ವಾದ. ಅವರು ಹೇಳುವಂತೆ-ದಶಾವತಾರದಲ್ಲಿ ಮೊದಲು ಕೇವಲ ನೀರಿನಲ್ಲಿರುವ ಮತ್ಸ್ಯದ ಅವತಾರ.ನಂತರ ನೀರು-ನೆಲ ಎರಡರಲ್ಲೂ ವಾಸಿಸುವ ಆಮೆ. ನಂತರ ಭೂಮಿಯಲ್ಲೇ ವಾಸಿಸುವ ಅರ್ಧ ಪ್ರಾಣಿ ಅರ್ಧ ಮನುಷ್ಯನಂತಿರುವ ಅವತಾರ-ಇಂತಹ ಕಲ್ಪನೆಗಳ ಫಲವೇ ನರಸಿಂಹ,ಹಯಗ್ರೀವ,ತುಂಬುರರು,ಮತ್ತು ನಮ್ಮ ಗಣಪತಿ ಹೊರ ಬಂದುದು. ಹೀಗೆ ಸಾಗುತ್ತದೆ ಇವರೆಲ್ಲರ ಗಣೇಶ ಮಹಿಮೆ. ಇನ್ನು ಅವನ ಡೊಳ್ಳು ಹೊಟ್ಟೆ, ಗಜಮುಖ, ಮೂಷಕವಾಹನದ ಬಗ್ಗೆ ಗಣೇಶ ಭಕ್ತರನ್ನು ಲೇವಡಿ ಮಾಡುವವರೂ ಇದ್ದಾರೆ.

ಗಣೇಶ – ಸಾರ್ವಕಾಲಿಕ ಸತ್ಯ:

ಶ್ರೀ ಶ್ರೀ ರಂಗಪ್ರಿಯಸ್ವಾಮಿಗಳು ತಿಳಿಸಿದಂತೆ ದೇವರು ಯಾರೋ ಕೆಲವರ ಕಲ್ಪನೆಯ ಕೂಸಲ್ಲ. ಅದು ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಭೌಮ ಸತ್ಯವೆಂಬುದು ದೇವರನ್ನು ತಮ್ಮ ತಪಸ್ಸಿನಿಂದ ಒಳಗೆ ಕಂಡುಕೊಂಡು ಆನಂದಿಸಿದ ಈ ದೇಶದ ಜ್ಞಾನಿಗಳ ಮಾತು. ಆದ್ದರಿಂದಲೇ ಭಗವಂತನನ್ನು "ಸತ್ಯಂ ಜ್ಞಾನಂ ಅನನ್ತಂ ಬ್ರಹ್ಮ"  "ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ" ಎಂದು ಸ್ತುತಿಸಿದ್ದಾರೆ. ಹೀಗಿರುವಾಗ ಆರ್ಯರ ದೇವರು, ದ್ರಾವಿಡರ ದೇವರು ಎಂಬ ಮಾತುಗಳೇ ಹಾಸ್ಯಾಸ್ಪದ. ಗಣೇಶನ ಆರಾಧನೆಯನ್ನು ತಂದುಕೊಟ್ಟವರು ಸಹ ಅವನನ್ನು ತಮ್ಮೊಳಗೆ ದರ್ಶನ ಮಾಡಿ ಅವನ ಅಪಾರ ಮಹಿಮೆಯ ಪರಿಚಯವನ್ನು ಪಡೆದ ಮಹರ್ಷಿಗಳೇ. ಶಾಸ್ತ್ರಗಳಲ್ಲಿ ಪ್ರತಿಪಾದಿಸಿರುವ ಗಣೇಶನು ಇಂತಹ ಸತ್ಯಾನುಭವಕ್ಕೆ ವಿಷಯವಾಗಿರುವ ಪರಮಾರ್ಥವೇ ಹೊರತು ಕವಿ ಕಲ್ಪನೆಯ ವಿಷಯವಲ್ಲ. ಅಲ್ಲದೇ ಆರ್ಯ-ದ್ರಾವಿಡ ಜನಾಂಗಗಳ ಹೋರಾಟ ನಮ್ಮ ದೇಶದಲ್ಲಿ ನಡೆಯಿತೆಂಬುದಕ್ಕೆ ವಿಶ್ವಾಸಯೋಗ್ಯವಾದ ಯಾವ ಪುರಾವೆಯೂ ನಮಗೆ ದೊರೆತಿಲ್ಲ. ಅದು ವಾಸ್ತವವಾಗಿ ಕಲ್ಪನೆ ಅಷ್ಟೇ.

 

ಪ್ರಣವ ಸ್ವರೂಪ ವಕ್ರತುಂಡಂ:

ಸಮಸ್ತಲೋಕ ಶಂಕರಂ ಎಂದು ಸ್ತುತಿಸುವ ದೇವನನ್ನು ಕೇವಲ ಬೇಸಾಯಗಾರರ ಕಲ್ಪನೆಯ ದೇವತೆ ಎನ್ನುವುದೂ ಸತ್ಯದೂರವಾದ ನೋಟ. ಅವನ ಆನೆಯಮುಖ ಕವಿಕಲ್ಪನೆಯೂ ಅಲ್ಲ ಪ್ರತೀಕವೂ ಅಲ್ಲ. ನಮ್ಮ ಶರೀರದ ಮೂಲಾಧಾರ ಚಕ್ರದಲ್ಲಿ ಮನೋಲಯ ಮಾಡಿದ ಯೋಗಿಗಳಿಗೆಲ್ಲ ತ್ರಿಕೋನದೊಳಗೆ ಈ ಗಜಮುಖನ ದರ್ಶನವೇ ಆಗುತ್ತದೆ. ಆ ಗಜಮುಖದೊಡನೆ ಕೂಡಿದ ದೇವತಾ ದೇಹದಲ್ಲಿ ಶಿವನ ಶಕ್ತಿಯು ಶುದ್ಧ ಪ್ರಕೃತಿ ಕ್ಷೇತ್ರದ ಮೂಲಕ ಪ್ರಕಟಗೊಂಡು ಗಜಾನನ ಸ್ವಾಮಿಯಾಗುತ್ತಾನೆ ಎಂಬುದು ಯೋಗಿಗಳ ಅನುಭವದ ಮಾತು. ಆಕಾರದಲ್ಲಿ ಆನೆಯ ಮುಖವನ್ನು ಹೋಲುತ್ತಿದ್ದರೂ ಈ  ಅಂತರಂಗದ ಗಜಾಕಾರವು ಪ್ರಣವದ ಒಂದು ಭಂಗಿಯೇ ಆಗಿದೆ. ಎಂದೇ ಅವನು "ಪ್ರಣವ ಸ್ವರೂಪ ವಕ್ರತುಂಡಂ"  ಆ ಸೊಂಡಿಲು ಬಲಮುರಿಯಾದರೆ ಮೋಕ್ಷಪ್ರದವಾದ ಮೂರ್ತಿ. ಸೊಂಡಿಲಿನ ತಿರುವು ಎಡಕ್ಕೆ ಇರುವ ಮೂರ್ತಿಯಾದರೆ ಭೋಗಪ್ರದ ಮೂರ್ತಿಯಾಗಿ ಭೋಗ ಭಾಗ್ಯಗಳನ್ನು ಕರುಣಿಸುತ್ತಾನೆ ಎಂಬುದೂ ಜ್ಞಾನಿಗಳ ಅನುಭವವಾಣಿ.

ಪರಮ ಸುಂದರ ಮೂರ್ತಿ –ಗಣೇಶ

ಹೀಗೆ ಸ್ಥೂಲವಾಗಿ ನಮ್ಮ ಚರ್ಮ ಚಕ್ಷುಸ್ಸಿಗೆ ಕಾಣುವ ದೇವನೇ ಅಲ್ಲ ಅವನು. ಜ್ಞಾನಿಗಳ ನಿರ್ದೇಶನದಲ್ಲಿ ಸಾಧನೆ ಮಾಡಿದಾಗ ಅದರ ಫಲವಾಗಿ ಒಳಗೆ ಮೂಲಾಧಾರಪ್ರದೇಶದಲ್ಲಿ ಇಂದಿಗೂ, ಎಂದೆಂದಿಗೂ ದರ್ಶನವೀಯುವ ಭಗವಂತ ಅವನಾಗಿರುವಾಗ ಅವನನ್ನು ಕಾಲ ದೇಶಗಳ ಚೌಕಟ್ಟಿಗೆ ಒಳಪಡಿಸಿ ಮಾತನಾಡುವುದು, ವಿಕಾಸವಾದಕ್ಕೆ ತಳುಕು ಹಾಕುವುದೂ ನಮ್ಮ ಅಲ್ಪಬುದ್ಧಿಯ ಕಸರತ್ತಾಗುತ್ತದೆ ಅಷ್ಟೇ. ಅವರಿಗೆ ಹೇಗೆ ದರ್ಶನವಾಯಿತೋ ಅಂತಹ ಸುಂದರ ಮೂರ್ತಿಯನ್ನೇ ಹೊರಗೆ ನಮ್ಮೆಲ್ಲರ ಮೇಲಿನ ಕರುಣೆಯಿಂದ ಆರಾಧನೆಗೆ ಅವರು ಕೊಟ್ಟಿರುವುದು ಎಂಬುದನ್ನು ಮರೆಯಲಾಗದು. ಶ್ರೀರಂಗ ಮಹಾಗುರುಗಳು ಹೇಳಿದಂತೆ- "ವಸ್ತುವು ಸಹಜ ರೂಪದಲ್ಲಿರುವುದೇ ಅದರ ಸೌಂದರ್ಯ.ಸುಂದರವಾದ ಕಪಿ-ಎಂದರೆ ರುಂಡಮುಂಡ ಕೈಕಾಲುಗಳ ಮಾಟ, ಚೇಷ್ಟೆ ಎಲ್ಲದರಲ್ಲೂ ಕಪಿತ್ವವನ್ನು ಹೊಂದಿದ್ದರೇ ಅದು ಸುಂದರವಾದ ಕಪಿ. ಹಾಗೆಯೇ ಗಣೇಶ, ನರಸಿಂಹ, ಭದ್ರಕಾಳಿ ಮುಂತಾದ ದೇವತಾರೂಪಗಳೂ ಒಳಗೆ ಹೇಗೆ ಕಾಣಿಸುತ್ತದೆಯೋ ಹಾಗೆ ಸಹಜತೆಯಿಂದ ಕೂಡಿ ಚಿತ್ರಿಸಲ್ಪಡುವುದೇ ಅವುಗಳ ಸುಂದರತೆ." ನಮ್ಮಂಥ ಪಾಮರ ಜನರಿಗೆ ಅವು ವಿಕಾರವಾಗಿ ಕಾಣಬಹುದು. ಆದರೆ ಅಂತರಂಗಕ್ಕೆ ಪ್ರವೇಶಿಸಿದಾಗ ಪರಮಾನಂದವನ್ನು ತುಂಬಿಸುವುದರಿಂದ ಆ ಸಹಜ ರೂಪಗಳನ್ನೂ ಭಕ್ತರು ಸುಂದರಮೂರ್ತಿ ಎಂದು ಸಹಜವಾಗಿ ಕರೆಯುತ್ತಾರೆ. ಹೊರಗಿನ ಚಿತ್ರ, ಪ್ರತಿಮೆ ಇತ್ಯಾದಿಗಳಲ್ಲಿ ಆ ಆಕಾರಗಳನ್ನು ಕಂಡಾಗಲೂ ಭಕ್ತರಿಗೆ ಆ ಒಳಗಿನ ಆನಂದವೇ ಹರಿದುಬರುವುದರಿಂದ ಅವುಗಳನ್ನು ಪರಮಸುಂದರಮೂರ್ತಿ ಎಂದೇ ಕರೆಯುತ್ತಾರೆ. ದೇವತೆಗಳು ನಾವಿದ್ದಂತೆ ಇರಬೇಕು ಎಂದು ಬಯಸುವವರಿಗೆ ಅವು ವಿಕಾರ, ಭೀಕರ ಆಗಿರಬಹುದು. ಆದರೆ ತಮ್ಮ ರೂಪವನ್ನು ಮರೆತು ದೇವತೆಯಲ್ಲಿ ತಾದಾತ್ಮ್ಯ ಹೊಂದಿದವರಿಗೆ ಅವು ಸೌಂದರ್ಯ-ಆನಂದದ ಮೂರ್ತಿಗಳೇ ಆಗಿರುತ್ತವೆ.

ತತ್ತ್ವೋದರ-ಗಣೇಶ

ಅವನ ಡೊಳ್ಳುಹೊಟ್ಟೆಯಲ್ಲಿ ನಮ್ಮಂತೆ ಅವನು ಮಾಂಸ-ಮೇದಸ್ಸುಗಳನ್ನೋ, ತಿಂಡಿ ತಿನಿಸುಗಳನ್ನೋ ತುಂಬಿಕೊಂಡಿಲ್ಲ. ಮೇಲೆ ತಿಳಿಸಿದಂತೆ ಅವನು ಅಪ್ರಾಕೃತವಾದ, ಜ್ಯೋತಿರ್ಮಯವಾದ  ದೇವತಾಮೂರ್ತಿ. ತನ್ನ ಉದರದಲ್ಲಿ ತನ್ನ ಅಧಿಪತ್ಯಕ್ಕೆ ಒಳಪಟ್ಟ ೨೧ ಪ್ರಕೃತಿತತ್ತ್ವಗಳನ್ನೇ ಅಡಗಿಸಿಕೊಂಡಿರುವ ಸ್ವಾಮಿ ಅವನು. ಆ ಮೂರ್ತಿಯಲ್ಲಿ ನಮ್ಮ ಮನಸ್ಸುಗಳು ಮುಳುಗಿದಾಗ ಇಪ್ಪತ್ತೊಂದು ತತ್ತ್ವಗಳ ದರ್ಶನವಾಗುವುದು ಎಂಬುದು ಯೋಗಿಜನ ಪ್ರತ್ಯಕ್ಷ. ಎಂದೇ ಅವನ ಸೇವೆಗೆ ಬೇಕಾದ ಪುಷ್ಪ, ಪತ್ರ, ಮೋದಕಗಳ ಸಂಖ್ಯೆ ಇಪ್ಪತ್ತೊಂದು. ಅವನ ಆರಾಧನೆಯ ಪ್ರತಿ ಘಟ್ಟದಲ್ಲೂ ಆ ಸಂಖ್ಯೆಯನ್ನು ಸ್ಮರಿಸಿಕೊಳ್ಳುವುದು ಉಪಾಸನೆಯ ಭಾಗವಾಗಿರುವುದು ಸಹಜವೇ ಆಗಿದೆ.

ಮೂಷಕ ವಾಹನ-ಗಣೇಶ

ತಾತ್ತ್ವಿಕವಾಗಿ  ಗಣೇಶನ ವಾಹನವೆಂದು ಕರೆಯುವ ಇಲಿಯು ಧರ್ಮಕರ್ಮಗಳಿಗೆ, ಉಪಾಸನೆಗಳಿಗೆ ಅಡ್ಡಿಯುಂಟುಮಾಡುವ ವಿಘ್ನಶಕ್ತಿಗಳ ರಾಜ. ದೇವತೆಗಳಿಗೆ ಭಕ್ತರು ಸಲ್ಲಿಸುವ ಹವಿರ್ಭಾಗವನ್ನು ಕದಿಯುವ ಆಸುರೀ ಶಕ್ತಿ. ಅಂತಹ ಆಸುರೀ ಶಕ್ತಿಯನ್ನು ತನ್ನ ಅಂಕೆಯಲ್ಲಿಟ್ಟು ಆ ವಿಘ್ನಾಸುರನ ಮೇಲೆ  ಸವಾರಿ ಮಾಡುತ್ತಾನೆ. ಎಂದೇ ಮೂಷಕ ಅವನ ವಾಹನ.

ನಿರಾಕಾರನೇ? ಸಾಕಾರನೇ?

ಗಣೇಶನು ನಿರಾಕಾರವಾದ ಪರಬ್ರಹ್ಮ ಎಂದು ಕೆಲವು ಕಡೆ ಹೇಳಿದೆ. ಅವನು ಆನೆಯ ಮುಖವನ್ನು ಹೊಂದಿ ಪಾಶ-ಅಂಕುಶ ಇತ್ಯಾದಿಗಳನ್ನು ಧರಿಸಿರುವ ಸಾಕಾರ ಮೂರ್ತಿ ಎಂದೂ ಕೆಲವೆಡೆ ವರ್ಣಿಸಿದ್ದಾರೆ. ಈ ರೀತಿ ಪರಸ್ಪರ ವಿರುದ್ಧವಾದ ಅಭಿಪ್ರಾಯಗಳನ್ನು ಜ್ಞಾನಿಗಳು ಹೇಳಲು ಸಾಧ್ಯವೇ ಎಂಬ ಸಂದೇಹ ಸಹಜ. ಆದರೆ ವಿಚಾರಪೂರ್ವಕವಾಗಿ ನೋಡಿದಾಗ ಈ ಹೇಳಿಕೆಗಳಲ್ಲಿ ವಿರೋಧವಿಲ್ಲ. ಭಗವಂತನು ಮೌಲಿಕವಾಗಿ ಜ್ಞಾನಾನಂದ ಸ್ವರೂಪಿ. ಆದರೂ ಭಕ್ತರ ಅವಲಂಬನೆಗಾಗಿ ನಾನಾ ತತ್ತ್ವಮಯಮೂರ್ತಿಗಳ  ಆಕಾರಗಳಿಂದ ದರ್ಶನ ನೀಡುತ್ತಾನೆ ಎಂಬುದು ಮಹಾತ್ಮರ ಅನುಭವ.


ನ ತೇ ರೂಪಂ ನಚಾಕಾರೋ ನಾಯುಧಾನಿ ನಚಾಸ್ಪದಂ|

ತಥಾಪಿ ಪುರುಷಾಕಾರೋ ಭಕ್ತಾನಾಂ ತ್ವಂ ಪ್ರಕಾಶಸೇ ||


ಎಂಬ ಮಾತೂ ಇದನ್ನೇ ಪುಷ್ಟೀಕರಿಸುತ್ತದೆ. ಗಣೇಶನು ಸಾಕಾರನೂ ಹೌದು. ನಿರಾಕಾರನೂ ಹೌದು. ಆದರೆ ಶ್ರೀರಂಗ ಮಹಾಗುರುಗಳು ತಿಳಿಸಿದಂತೆ "ಮನಸ್ಸು ಯಥೇಚ್ಛವಾಗಿ ಕಲ್ಪಿಸಿಕೊಂಡ ಆಕಾರಗಳೆಲ್ಲಾ ಗಣೇಶದೇವರ ಆಕಾರಗಳಾಗುವುದಿಲ್ಲ. ಯೋಗಿಗಳು ಕಂಡು ಹೇಳಿರುವ ಆಕಾರಗಳು ಮಾತ್ರವೇ ಧ್ಯಾನ ಉಪಾಸನೆಗಳಿಗೆ ಯೋಗ್ಯವಾಗುತ್ತವೆ. ಯಾವುದೇ ಕಾಲ-ದೇಶದ ಯೋಗಿಗಳೇ ಆದರೂ ಆಯಾ ಕೇಂದ್ರಗಳಿಗೆ ಮನಸ್ಸು ಪ್ರವೇಶಿಸಿದಾಗ ಆಯಾ ನಿರ್ದಿಷ್ಟ ರೂಪಗಳೇ ಅವರಿಗೆ ಗೋಚರವಾಗುತ್ತವೆ. ಆ ನೇರದಲ್ಲಿ ಅವರಿಗೆ ಅನ್ಯಥಾ ಅನುಭವ ಉಂಟಾಗುವುದೇ ಇಲ್ಲ. ಇವು ಸಾರ್ವಭೌಮತ್ವದ ದರ್ಶನ ಪ್ರಕಾರಗಳು" ಎಂಬ ಮಾತನ್ನು ನೆನಪಿಡಬೇಕು.

ಇಷ್ಟು ಹಿನ್ನೆಲೆಯಿಂದ, ಗಣೇಶನ ಯೋಗಿಗಮ್ಯ ಸ್ವರೂಪ ಚಿಂತನೆಯಿಂದ ಅವನನ್ನು ನಮ್ಮ ಮನ-ಮನೆಗಳಲ್ಲಿ ತುಂಬಿಕೊಳ್ಳೋಣ. ಅವನ ಮಧುರ ಸ್ಮರಣೆಯಿಂದ ಅವನನ್ನು ಆರಾಧಿಸೋಣ. ನಮ್ಮ ಇಹ-ಪರ ಜೀವನದ ಸೌಖ್ಯವನ್ನು ಅವನಲ್ಲಿ ಬೇಡೋಣ. ಶ್ರದ್ಧಾ-ಭಕ್ತಿಗಳಿಂದ  ಆ ವಿಘ್ನವಿನಾಶಕನನ್ನು ಪೂಜಿಸಿ ಕೃತಾರ್ಥರಾಗೋಣ.

ಸೂಚನೆ : 10/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.