Tuesday, September 28, 2021

ಶ್ರೀರಾಮನ ಗುಣಗಳು - 24 ವಿದ್ವಾನ್ - ಶ್ರೀರಾಮ (Sriramana Gunagalu - 24 Vidhvan Srirama)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀರಾಮನು 'ವಿದ್ವಾನ್' ಆಗಿದ್ದ. ಈ ವಿದ್ವಾನ್ ಎಂಬ ಶಬ್ದವನ್ನು ಇಂದು ನಾವು ಬಹಳ ಕಡೆ ಕಾಣುತ್ತೇವೆ. ಶಾಸ್ತ್ರವಿದ್ವಾನ್, ಸಂಗೀತವಿದ್ವಾನ್, ನಾಟ್ಯವಿದ್ವಾನ್ ಇತ್ಯಾದಿಯಾಗಿ. ಅಂದರೆ ಒಂದು ವಿದ್ಯೆಯಲ್ಲಿ ಪಾರಂಗತ ಅಥವಾ ಆ ವಿಷಯವನ್ನು ಚೆನ್ನಾಗಿ ಬಲ್ಲವನು ಎಂಬ ಅರ್ಥದಲ್ಲಿ ಈ ಪದ ಬಳಕೆಯಾಗುತ್ತಿದೆ. ಆದರೆ ನಿಜವಾಗಿಯೂ ವಿದ್ವಾನ್ ಎಂಬ ಶಬ್ದದಲ್ಲಿ ಯಾವ ಗಂಭೀರವಾದ ಅರ್ಥ ಹುದುಗಿದೆ? ಎಂಬುದನ್ನು ಗಮನಿಸಬೇಕು. ಮತ್ತು ಶ್ರೀರಾಮನಿಗೆ ಈ ಪದ ಯಾವ ರೀತಿಯಲ್ಲಿ ಅನ್ವರ್ಥವಾಗುತ್ತದೆ? ಎಂಬುದನ್ನು ಮನಗಾಣಬೇಕು. ಇದು ಸಂಸ್ಕೃತಭಾಷೆಯ ಶಬ್ದವಾಗಿದೆ. 'ವಿದ್' ಅಂದರೆ ಜ್ಞಾನ, ಅದನ್ನು ಉಳ್ಳವನು 'ವಿದ್ವಾನ್' ಎಂಬುದು ಈ ಪದದ ಅರ್ಥ. 

ಹಾಗಾದರೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಪದಾರ್ಥದ ಅರಿವು ಇದ್ದೇ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಜ್ಞಾನಿಗಳಾಗಬೇಕಲ್ಲವೇ? ಹಾಗಾದರೆ ಯಾವುದು ನಿಜವಾದ ಜ್ಞಾನ? ಅಂತಹ ಜ್ಞಾನ ಉಳ್ಳವನು ಯಾರು? "ಸತ್ಯಂ ಜ್ಞಾನಮನಂತಂ ಬ್ರಹ್ಮ" ಎಂದು ಉಪನಿಷತ್ತು ಹೇಳುವಂತೆ 'ಭಗವಂತ' ಅಥವಾ 'ಪರಬ್ರಹ್ಮ'ನನ್ನು ಮೊಟ್ಟಮೊದಲು 'ಜ್ಞಾನ' ಎನ್ನಲಾಗುತ್ತದೆ. ಈ ಅರಿವು ಯಾರಿಗೆ ಇರುತ್ತದೆಯೋ ಅವನನ್ನು ವಿದ್ವಾನ್ ಎಂಬುದಾಗಿ ಮೂಲತಃ ಕರೆಯಬೇಕಾಗುತ್ತದೆ. ಶ್ರೀರಾಮನು ಈ ದೃಷ್ಟಿಯಲ್ಲಿ ವಿದ್ವಾನ್. ಹಾಗಾದರೆ ಇಂದು ನಾವು ಅನೇಕರಿಗೆ ವಿದ್ವಾನ್ ಎನ್ನುವುದು ಎಷ್ಟು ಸರಿ? ಅಂದರೆ- ಭಗವಂತನ ಜ್ಞಾನವನ್ನು ಹೊತ್ತು ಸಾರುವ ಯಾವೆಲ್ಲ ಅರಿವಿದೆಯೋ ಅವೆಲ್ಲವನ್ನೂ 'ವಿಜ್ಞಾನ' ಎನ್ನುತ್ತಾರೆ. ಆ ಪರಬ್ರಹ್ಮವೇ ಸೃಷ್ಟಿಯಲ್ಲಿ ಹಾಸುಹೊಕ್ಕಾಗಿ ಸೇರಿಕೊಡಿದೆ. ಇದನ್ನು ತಿಳಿಯುವುದೂ ವಿದ್ಯೆಯೇ. ಇಂತಹ ವಿದ್ಯೆ ಉಳ್ಳವನನ್ನೂ 'ವಿದ್ವಾನ್' ಎಂದೇ ಕರೆಯಬೇಕಾಗುತ್ತದೆ. ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. "ಬ್ರಹ್ಮವಿದ್ಯೆಯನ್ನು ಕೊಡತಕ್ಕಂತಹ ವಿದ್ಯೆ ಯಾವುದುಂಟೋ ಅದೇ ತಾನೆ ವಿದ್ಯೆ. 'ಅಧ್ಯಾತ್ಮವಿದ್ಯಾ ವಿದ್ಯಾನಾಂ – ವಿದ್ಯೆಯಲ್ಲಿ ಅಧ್ಯಾತ್ಮವಿದ್ಯೆ ನಾನಾಗಿದ್ದೇನೆ ಎಂದು ಕೃಷ್ಣ ಹೇಳಿದ್ದೂ ಉಂಟು" ಎಂದು. ಜ್ಞಾನ ಎಂಬ ಪದವು ಮೂಲತಃ ಭಗವಂತನ ವಾಚಿ ಆದರೂ; ಯಾವುದರಿಂದ ನಾವು ಪರಮಾತ್ಮನ ಅರಿವನ್ನು ಪಡೆಯುತ್ತೇವೋ ಅದನ್ನೂ ವಿದ್ಯೆ ಅಥವಾ ಜ್ಞಾನ ಎಂಬುದಾಗಿಯೇ ಹೇಳುತ್ತೇವೆ. 

ಶ್ರೀರಾಮನು ಈ ದೃಷ್ಟಿಯಿಂದಲೂ ವಿದ್ವಾನ್ ಆಗಿದ್ದ. ಅವನು ಹೇಗೆ ವಿದ್ಯಾಸಂಪನ್ನನಾಗಿದ್ದ ಎಂಬುದನ್ನೂ ಶ್ರೀಮದ್ರಾಯಣವೇ ವಿವರಿಸುತ್ತದೆ. 'ಶ್ರೀಮಂತಃ ಕೀರ್ತಿಮಂತಶ್ಚ ಸರ್ವಜ್ಞಾ ದೀರ್ಘದರ್ಶಿನಃ" ಎಂಬುದಾಗಿ. ಅವನು ವೇದಾದಿ ಎಲ್ಲಾ ವಿದೆಗಳಲ್ಲೂ ಪಾರಂಗತನಾಗಿದ್ದನು. ಪಿತೃಶುಶ್ರೂಷೆಯಲ್ಲೂ ರತನಾಗಿದ್ದನು. ಧನುರ್ವೇದದಲ್ಲೂ ಅಷ್ಟೇ ಪ್ರಾವೀಣ್ಯವನ್ನು ಸಂಪಾದಿಸಿದ್ದನು. ಅನಂತರ ಮಹರ್ಷಿ ವಿಶ್ವಾಮಿತ್ರರ ಆಶ್ರಯದಲ್ಲಿ ಯುದ್ಧಕ್ಕೆ ಬೇಕಾದ ಬಲ-ಅತಿಬಲ ರೂಪವಾದ ಅನೇಕ ಶಸ್ತ್ರ ಮತ್ತು ಅಸ್ತ್ರವಿದ್ಯೆಯನ್ನೂ ಸಂಪಾದಿಸಿದ್ದನು. ವಿಶ್ವಾಮಿತ್ರರಿಂದ ಪಾವನವಾದ ಅನೇಕ ಪೂರ್ವಜರ ಕಥೆಯನ್ನು ಕೇಳಿ ಲೋಕಜ್ಞಾನವನ್ನೂ ಸಂಪಾದಿಸಿದ್ದ. ವಿದ್ಯೆಯೆಂಬುದು ಗುರುಕುಲದಲ್ಲಿ ಗುರುಗಳಿಂದ ಸಂಪಾದಿಸುವ ಜ್ಞಾನದ ಜೊತೆಯಲ್ಲಿ, ಅಲ್ಲೇ ಸಿಗುವ ಲೋಕಜ್ಞಾನವೂ ಮೇಳೈಸಿದರೆ ಮಾತ್ರ ಪರಿಪೂರ್ಣವಾದ ಜ್ಞಾನವಾಗುವುದು. ಅಂತಹ ಜ್ಞಾನಸಂಪತ್ತಿಯುಳ್ಳವನು ಶ್ರೀರಾಮನಾಗಿದ್ದ. ಇಷ್ಟೇ ಅಲ್ಲದೇ ರಾಜನೀತಿಕುಶಲನೂ ಆಗಿದ್ದ. ಅವನ ರಾಜ್ಯವು ಇಂದಿಗೂ ಆದರ್ಶಪ್ರಾಯವಾಗಬೇಕಾದರೆ ಅವನಿಗೆ ಅದೆಷ್ಟು ನೈಪುಣ್ಯವಿದ್ದಿರಬೇಕು! ಎಂಬುದನ್ನೂ ಊಹಿಸಬಹುದು. ಇದು ತಾನೆ ಶ್ರೀರಾಮನ ವಿದ್ವತ್ತು!.

ಸೂಚನೆ : 26/9/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ