ಲೇಖಕರು : ಡಾ|| ಎಸ್.ವಿ. ಚಾಮು
ತಿರುಪತಿಯಾತ್ರೆಯನ್ನು ಮಾಡಿಬಂದ ಬಂಧುವೊಬ್ಬರು 'ಮೊನ್ನೆ ನಮಗೆ ಬರುವ ವೈಕುಂಠೈಕಾದಶಿಯಂದು(1.1.1996) ಪರಮ ಪುಣ್ಯಕರವಾದ ಮಧ್ಯರಾತ್ರಿಯಲ್ಲಿ ಎಲ್ಲೆಲ್ಲಿಂದಲೂ VVIP ಮತ್ತು VIP ಗಳಾದ ರಾಜಕಾರಣಿಗಳಿಗೆ ತಿರುಪತಿಯಲ್ಲಿ ದೇವರ ದರ್ಶನ ಮಾಡಲು ಅವಕಾಶ ಕೊಡುತ್ತಾರೆ' ಎಂಬ ಸಮಾಚಾರವನ್ನು ತಿಳಿಸಿದರು. ಅದನ್ನು ಕೇಳಿದಾಗ ಮನಸ್ಸಿನಲ್ಲಿ ಉಂಟಾದ ಯೋಚನೆಗಳನ್ನು ನಮ್ಮ ಓದುಗರೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇವೆ.
ಕೃಷ್ಣನು ಗೀತೆಯಲ್ಲಿ
ಚತುರ್ವಿಧಾ ಭಜನ್ತೇ ಮಾಂ ಜನಾಃ ಸುಕೃತಿರ್ನೋರ್ಜುನ।
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ॥
ತೇಷಾಂ ಜ್ಞಾನೀ ನಿತ್ಯಯುಕ್ತಃ ಏಕಭಕ್ತಿರ್ವಿಶಿಷ್ಯತೇ।
ಆರ್ತ (ಕಷ್ಟದಲ್ಲಿರುವವನು),ಜಿಜ್ಞಾಸು(ತಿಳಿಯಲಿಚ್ಚಿಸುವವನು), ಅರ್ಥಾರ್ಥೀ
(ಧನ, ಅಧಿಕಾರ ಇತ್ಯಾದಿಗಳನ್ನು ಬಯಸುವವನು) ಮತ್ತು ಜ್ಞಾನಿಯೆಂಬ ನಾಲ್ಕು ಬಗೆಯ ಸುಕೃತಿ ಜನರು ನನ್ನನ್ನು ಭಜಿಸುತ್ತಾರೆ. ಅವರಲ್ಲಿ ನಿತ್ಯವೂ (ಸರ್ವದಾ) ನನ್ನಲ್ಲಿ ಒಂದಾಗಿರುವ ಮತ್ತು ಏಕ ಭಕ್ತಿಯಾದ ಜ್ಞಾನಿಯು ತುಂಬ ಶ್ರೇಷ್ಠನು) ಎಂದು ನುಡಿಯುತ್ತಾನೆ. ಪರಮಾತ್ಮನು ಕೃಷ್ಣ, ನಾರಾಯಣ, ಶ್ರೀನಿವಾಸ, ರಂಗ ಮುಂತಾದ ಹೆಸರುಗಳಿಂದ ಬೇರೆ ಬೇರೆ ದಿವ್ಯ ಸ್ಥಳಗಳಲ್ಲಿ ಪೂಜಿಸಲ್ಪಡುತ್ತಾನೆ. ತಿರುಪತಿಯಲ್ಲಿ ಅವನು ಶ್ರೀನಿವಾಸ. ಯೋಗಿಗಳಿಂದ ವೇದ್ಯನೂ ಅವಾಙ್ಮನಸ ಗೋಚರನೂ ಆದ ಅವನ ದಿವ್ಯವಾದ ಮಹಿಮೆಯನ್ನು ಸಾಮಾನ್ಯ ಮನುಷ್ಯರೂ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗುವಂತೆ ಅನೇಕ ವಿಧವಾದ ಯುಕ್ತಿಗಳನ್ನು ಬಳಸಿ ಜ್ಞಾನಿಗಳು ಈ ಕ್ಷೇತ್ರದ ನಿರ್ಮಾಣವನ್ನು ಮಾಡಿರುತ್ತಾರೆ. ಸಹಜವಾಗಿಯೇ ಅದರಲ್ಲಿ ಕೇವಲ ಯೋಗಿವೇದ್ಯವಾದ ಅನೇಕ ಸೂಕ್ಷ್ಮಗಳು ಹೆಣೆದುಕೊಂಡಿರುತ್ತವೆ. ಉದಾಹರಣೆಗೆ ಈ ಬೆಟ್ಟದಲ್ಲಿ ಸ್ವಲ್ಪ ಎತ್ತರವಾಗಿರುವ ನಾರಾಯಣ ಗಿರಿ ಎಂಬ ಜಾಗದಲ್ಲಿ ಭಗವಂತನ ಎರಡು ಪಾದಗಳು ಇರುತ್ತವೆ. ಪರಮಪದದಿಂದ ಇಳಿದು ಅಲ್ಲಿ ಎರಡು ಪಾದಗಳನ್ನು ಇರಿಸಿ ನಂತರ ಅವನು ತನ್ನ ಆಲಯದಲ್ಲಿ ಬಂದು ನೆಲೆಸಿದ ಎಂದು ಕೇಳುತ್ತೇವೆ. ಪರಮ ಪದದಿಂದ ಅಂತರಿಕ್ಷಕ್ಕೆ ಚಾಚಿರುವ ಪರ್ವತ ಶಿಖರ, ಆಮೇಲೆ ಅಲ್ಲಿಂದ ಭೂಮಿಯಲ್ಲಿರುವ ಅವನ ಶಾಶ್ವತವಾದ ಆವಾಸಸ್ಥಾನ ಇವು ಭಗವಂತನ ಮೂರು ಹೆಜ್ಜೆಗಳನ್ನೇ ಗುರುತಿಸುತ್ತವೆ. ಅವನ ಆಲಯವಿರುವ ಬೆಟ್ಟ ಶೇಷಾದ್ರಿ ಅಥವಾ ಸಪ್ತಗಿರಿ. ಅದು ಏಳು ಸುತ್ತುಗಳಿಂದ ಕೂಡಿ ಎಂಟನೆಯದರ ಮೇಲೆ ಭಗವಂತನನ್ನೇ ಧರಿಸಿರುವ ಕುಂಡಲ್ಯಾತ್ಮಕವಾದ ಪ್ರಣವವನ್ನೇ ಪ್ರತೀಕಿಸುತ್ತದೆ. ಭಗವಂತನು ನೆಲೆಸಿರುವ ಆಲಯವನ್ನು ಆನಂದ ನಿಲಯ ವಿಮಾನವೆಂದು ಸಂಪ್ರದಾಯವು ಕರೆಯುತ್ತದೆ. ಇವೆಲ್ಲವೂ ಯೋಗ ರಹಸ್ಯಗಳನ್ನೇ ಪುನರುಕ್ತಿಸುತ್ತವೆಂಬುದನ್ನು ಹೇಳಬೇಕಾಗಿಲ್ಲ. ಭಗವಾಕ್ಷಾತ್ಕಾರ ಮಾಡಿದವರಿಗೆ ಇವುಗಳ ಒಳಗುಟ್ಟು ಗೊತ್ತಾಗುತ್ತದೆ. ಅಂತಹವರು ಶ್ರೀನಿವಾಸನಿಗೆ
ಪರಸ್ಮೈಬ್ರಹ್ಮಣೇ ಪೂರ್ಣಕಾಮಾಯ ಪರಮಾತ್ಮನೇ।
ಎಂದು ಮಂಗಳಾಶಾಸನ ಮಾಡಿರುವುದು ಸಹಜವೇ ಆಗಿರುತ್ತದೆ.
ಆ ರೀತಿ ಅರಿತವರಲ್ಲಿ ರಾಮಾನುಜರಿಗೆ ಅಗ್ರಸ್ಥಾನ. ಬೆಟ್ಟದ ಪಾವಿತ್ರ್ಯವನ್ನು ಮನಗಂಡ ಅವರು ಅದನ್ನು ಕಾಲಿನಿಂದ ತುಳಿಯಲಿಚ್ಛಿಸದೆ ತಮ್ಮ ಮಂಡಿಯ ಮೇಲೆ ಹತ್ತಿಕೊಂಡು ಹೋದರು ಎಂಬ ಐತಿಹ್ಯವನ್ನು ಕೇಳುತ್ತೇವೆ. ಈ ಸಂದರ್ಭದಲ್ಲಿ, "ಶ್ರುತಿ ಶಿರಸಿವಿದೀಪ್ತೇ ಬ್ರಹ್ಮಣಿ ಶ್ರೀನಿವಾಸೇ॥" (ಉಪನಿಷತ್ತುಗಳಲ್ಲಿ ಬೆಳಗುವ ಬ್ರಹ್ಮ ಸ್ವರೂಪನಾದ ಶ್ರೀನಿವಾಸನಲ್ಲಿ…) ಎಂಬ ಅವರ ಮಾತು ಸ್ಮರಿಸ ಯೋಗ್ಯವಾಗಿರುತ್ತದೆ. ಅವರನ್ನು ಹಿಂಬಾಲಿಸಿಯೇ ಶ್ರೀವೈಷ್ಣವರು ತ್ರಿಸಂಧ್ಯೆಗಳಲ್ಲಿಯೂ 'ಶ್ರೀ ವೆಂಕಟಾದ್ರಿಶಿಖರಾಲಯ ಕಾಳ ಮೇಘಂ ' ಎಂದು ಅವನನ್ನು ನಮಿಸುತ್ತಾರೆ.
ನಮ್ಮ ಕಾಲದಲ್ಲಿ ಶ್ರೀರಂಗಸದ್ಗುರುವೂ ಸಹ ಶ್ರೀನಿವಾಸನ ಮಹಿಮೆಯನ್ನರಿತ ಮಹಾನುಭಾವರಲ್ಲಿ ಒಬ್ಬರಾಗಿದ್ದರು. ಯೋಗಸೂತ್ರವು 'ಯಥಾಭಿಮತ ಧ್ಯಾನಾದ್ವಾ।' (ಮನಸ್ಸೊಪ್ಪುವ ದೇವಮೂರ್ತಿಯನ್ನು ಧ್ಯಾನಿಸಿ ಜ್ಞಾನದ ಚರಮಲಕ್ಷ್ಯವನ್ನು ಮುಟ್ಟಬೇಕು) ಎಂದು ಹೇಳುತ್ತದೆ. ಶ್ರೀ ಗುರುದೇವರು ಶ್ರೀನಿವಾಸಸ್ವಾಮಿಯ ಬಿಂಬವನ್ನು ಮನಸ್ಸಿನಲ್ಲಿ ಧರಿಸಿಯೇ ಯೋಗ ಭೂಮಿಗಳನ್ನು ಪ್ರವೇಶಿಸಿದರು ಎಂದು ಕೇಳಿರುತ್ತೇವೆ. ಧ್ಯಾನದಲ್ಲಿ ಕಣ್ಮುಚ್ಚಿಕೊಂಡಾಗ ಮೊದಲು ಶ್ರೀನಿವಾಸ ಮೂರ್ತಿಯು ಗೋಚರಕ್ಕೆ ಬಂದು ನಂತರ ಯೋಗ ವಿದ್ಯೆಯು ಹೇಳುವ ಅಂತರ್ದರ್ಶನ ಮತ್ತು ಅಂತಃ ಶ್ರವಣಗಳು ತಮಗೆ ಕಂಡು ಕೇಳಿದುದನ್ನು ಅವರು ಗುರುತಿಸಿರುವ ಹಲವು ಪತ್ರಗಳು ನಮ್ಮ ಬಳಿ ಇರುತ್ತವೆ. ಧ್ಯಾನದಲ್ಲಿ ಗುರು ಮೂರ್ತಿಯ ಹಿಂಬದಿಯಲ್ಲಿ ಶ್ರೀನಿವಾಸನ ಭವ್ಯ ಮೂರ್ತಿಯು ಹಲವು ಬಾರಿ ನಮಗೂ ಗೋಚರಕ್ಕೆ ಬಂದು ಹೃದಯವನ್ನು ಶಾಂತಿಯಿಂದ ತುಂಬಿರುತ್ತದೆ. ಧ್ಯಾನಸ್ಥರಾದಾಗ ಪರವ್ಯೋಮದವರೆಗೂ ಸುಲಭವಾಗಿ ಹೋಗಿ ಬಿಡುವ ರಂಗನಾಥನ ಸತಿಯವರೂ ಸಹ ಕಣ್ಣು ಮುಚ್ಚಿದಾಗ ಶ್ರೀನಿವಾಸನ ಮೂರ್ತಿಯನ್ನು ಮೊದಲು ದರ್ಶನ ಮಾಡಿಯೇ ಯೋಗ ಭೂಮಿಗಳಲ್ಲಿ ಪ್ರವೇಶ ಮಾಡುವುದಾಗಿ ಒಮ್ಮೆ ನಮಗೆ ನುಡಿದರು. ಶ್ರೀನಿವಾಸನ ಮೂರ್ತಿಯು ಅಷ್ಟು ಪ್ರಭಾವಶಾಲಿಯಾದುದು. ಅದೊಂದು ಪೂರ್ಣ ವಿಗ್ರಹ. ಪರಮಾತ್ಮ ವಿಗ್ರಹ.
ಆದುದರಿಂದ ಯೋಗಿಗಳ, ಭಕ್ತರ ಮತ್ತು ಜ್ಞಾನಿಗಳ ಆರಾಧ್ಯದೈವನಾದ ಅವನ ದರ್ಶನವನ್ನು ವೈಕುಂಠೈಕಾದಶಿಯಂತಹ ಪುಣ್ಯ ದಿನದಲ್ಲಿ, ಅದರ ಪುಣ್ಯತಮವಾದ ವೇಳೆಯಲ್ಲಿ ಪ್ರಸನ್ನಚಿತ್ತರೂ ಮತ್ತು ಪರಿಶುದ್ಧಾತ್ಮರೂ ಆದ ಪುಣ್ಯಾತ್ಮರು ಮೊಟ್ಟ ಮೊದಲು ಮಾಡುವುದು ಉಚಿತವಾಗಿರುತ್ತದೆ. ಅಂತಹವರನ್ನು ಮುಂದಿಟ್ಟುಕೊಂಡು ಇತರರು ಭಗವದ್ದರ್ಶನ ಮಾಡಿದರೆ ಅದು ಅವರಿಗೆ ಶ್ರೇಯಸ್ಕರ. ಆ ರೀತಿ ಇರುವಾಗ ಕಾಮಕ್ರೋಧಗಳ ಮತ್ತೂ ಅವುಗಳಿಂದ ಜನಿಸುವ ಬಹು ವಿಧವಾದ ಪಾಪಗಳ ಮಡಿಲಲ್ಲಿ ವಾಸಮಾಡುವ ರಾಜಕೀಯ ನಾಯಕರು ತಮ್ಮ ಅಧಿಕಾರವನ್ನು ಬಳಸಿಕೊಂಡು ಇತರರನ್ನು ಭಗವತ್ಸಾನ್ನಿಧ್ಯದಿಂದ ಹೊರಗಿರಿಸುವುದು ನಮಗೆ ಒಂದು ವಿಪರ್ಯಾಸವಾಗಿ ಕಾಣುತ್ತದೆ.
ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೮ ಸಂಚಿಕೆ:೩, ಜನವರಿ ತಿಂಗಳಲ್ಲಿ ೧೯೯೬ ಪ್ರಕಟವಾಗಿದೆ.