ನಾವು ಈ ಹಿಂದಿನ ಉಪಚಾರಗಳಿಂದ ಭಗವಂತನನ್ನು ಅರ್ಚಿಸಿದ್ದೇವೆ. ನಮ್ಮಲ್ಲಿರುವ ತನು-ಮನವನ್ನು ಅರ್ಪಿಸಿದ್ದೇವೆ. ನಮ್ಮತನವನ್ನು ತ್ಯಾಗಮಾಡಿ ಭಗವದ್ಭಾವದಿಂದ ಪೂತರಾಗಿದ್ದೇವೆ. ಆರಾಧಿಸಿದ ಭಗವಂತನನ್ನು ಪ್ರದಕ್ಷಿಣೆ ಮಾಡುವುದು ಈ ಸಮಯದ ಉಪಚಾರವಾಗಿದೆ. ದೇವರ ಮುಂಭಾಗದಿಂದ ಆರಂಭಿಸಿ ನಮ್ಮ ಬಲಗೈ ಮೊದಲುಗೊಳ್ಳುವ ರೀತಿಯಲ್ಲಿ ಭಗವಂತನನ್ನು ಸುತ್ತುವುದು ಈ ಪ್ರದಕ್ಷಿಣೆಯಾಗಿದೆ. ಅದಕ್ಕೇ ಈ ಉಪಚಾರಕ್ಕೆ 'ಪ್ರದಕ್ಷಿಣೆ' ಎಂಬ ಹೆಸರು ಬಂದಿದೆ. ಮತ್ತು ಈ ಪದವೇ ಹೇಳುವಂತೆ ನಮ್ಮನ್ನು ದಕ್ಷ-ಸಮರ್ಥವಾಗಿಸುತ್ತದೆ. ಆವಾಹನಾದಿ ಉಪಚಾರಗಳಿಂದ ಭಗವಂತನನ್ನು ತುಂಬಿಕೊಳ್ಳಲು ನಮ್ಮ ಶರೀರ, ಇಂದ್ರಿಯ, ಮನಸ್ಸುಗಳು ಯೋಗ್ಯತೆಯನ್ನು ಸಂಪಾದಿಸಿವೆ ಎಂದರ್ಥ. ಯಾವುದಾದರೂ ಒಬ್ಬ ಶ್ರೇಷ್ಠವ್ಯಕ್ತಿಯನ್ನು ಸಂದರ್ಶನ ಮಾಡಲು ಆ ವ್ಯಕ್ತಿಗೆ ತಕ್ಕುದಾದ ವೇಷ ಭೂಷ ಭಾಷೆಗಳೊಂದಿಗೆ ನಮ್ಮನ್ನು ಸಿದ್ಧಪಡಿಸಿಕೊಂಡು ತಾನೆ ಹೋಗುತ್ತೇವೆ. ಯಾವುದೇ ಕಾರ್ಯವನ್ನು ಮಾಡಲು ಯೋಗ್ಯತೆ ಬೇಕಾಗುತ್ತದೆ. ಯೋಗ್ಯತೆ ಇಲ್ಲದಿರುವಾಗ ಅದನ್ನು ಪಡೆದುಕೊಳ್ಳಬೇಕಾಗುತ್ತದೆ. ಹಾಗೆಯೇ ಭಗವಂತನನ್ನು ಕಾಣಲು ನಾವು ಒಂದಷ್ಟು ಸಿದ್ಧತೆ ಮಾಡಬೇಕಲ್ಲವೇ! ಅದಕ್ಕೆ ಅನೇಕ ಬಗೆಯಲ್ಲಿ ಪಳಗಿಸುವ ವಿಧಾನವೇ ಈ ಉಪಚಾರಗಳಾಗಿವೆ. ಮಾಡಿರುವ ಉಪಚಾರಗಳಿಂದ ನಾವು ಮೈ-ಮನಸ್ಸುಗಳಿಗೆ ಚೈತನ್ಯವನ್ನು ಪಡೆದಿರುತ್ತೇವೆ. ಹಾಗಾಗಿ ಇವುಗಳ ಕೊನೆಯಲ್ಲಿ ಈ ಪ್ರದಕ್ಷಿಣೆ ಎಂಬ ಉಪಚಾರವು ವಿಹಿತವಾಗಿದೆ.
ಜೀವವು ದೇವನನ್ನು ಹೊಂದಲು ಅನೇಕ ಮಾರ್ಗಗಳಿವೆ. ದೇವತೆಗಳಿಗೆ ಅನುಗುಣವಾಗಿ ಮಾರ್ಗವೂ ಭಿನ್ನವಾಗಿರುತ್ತದೆ. 'ಯಾವ ರೀತಿಯಾಗಿ ಜೀವವು ಪ್ರದಕ್ಷಿಣಕ್ರಮವಾಗಿ ದೇವನನ್ನು ತಲಪುತ್ತದೆಯೋ, ಅಥವಾ ತಲುಪಬೇಕೋ, ಅದಕ್ಕನುಗುಣವಾಗಿ ಆದೇ ವಿಷಯವನ್ನು ಇಟ್ಟುಕೊಂಡು ನಮ್ಮ ಹಿರಿಯರು ಹೊರಗಡೆಯೂ ಇಂತಹ ಪ್ರದಕ್ಷಿಣೆಯ ವಿಧಾನವನ್ನು ತಂದುಕೊಟ್ಟರು' ಎಂಬ ಶ್ರೀರಂಗ ಮಹಾಗುರುವಿನ ಮಾತಿನ ಆಶಯವನ್ನು ನಾವಿಲ್ಲಿ ಸ್ಮರಿಸಬಹುದು. ದೇವತಾಪ್ರಸನ್ನತೆಗಾಗಿ ಬಲಭಾಗ ಮೊದಲು ಬರುವಂತೆ ದೇವರನ್ನು ಸುತ್ತುತ್ತೇವೆ. ಮಾರ್ಗಕ್ಕೆ ಅನುಗುಣವಾಗಿ ಪ್ರದಕ್ಷಿಣೆಯ ಕ್ರಮವೂ ಭಿನ್ನವೇ ಆಗಿರುತ್ತದೆ. ಹೆಚ್ಚೆಚ್ಚು ಪ್ರದಕ್ಷಿಣೆ ಮಾಡಿದಷ್ಟು ಹೆಚ್ಚೆಚ್ಚು ಭಗವಂತನ ಅನುಗ್ರಹವಾಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೂ ಪ್ರದಕ್ಷಿಣೆಯ ಸಂಖ್ಯೆಯೂ, ಆಯಾ ವ್ಯಕ್ತಿಯ ಸಾಮರ್ಥ್ಯಕ್ಕೆ ತಕ್ಕಂತೆ ಅವನವನ ದೇವತಾಪ್ರಸನ್ನತೆಗೆ ತಕ್ಕಂತೆ ಇರುತ್ತದೆ ಎಂಬ ವಿಷಯವೂ ಇದೆ. ಹೀಗಿದ್ದರೂ ಒಂದು ಸಾಮಾನ್ಯವಾದ ಪ್ರದಕ್ಷಿಣೆಯ ಸಂಖ್ಯಾಕ್ರಮವನ್ನು ಹೇಳಿದ್ದುಂಟು. ದೇವಿಗೆ ಒಂದು ಪ್ರದಕ್ಷಿಣೆ, ಸೂರ್ಯನಿಗೆ ಏಳು, ವಿನಾಯಕನಿಗೆ ಮೂರು, ಕೇಶವನಿಗೆ ನಾಲ್ಕು ಮತ್ತು ಶಿವನಿಗೆ ಅರ್ಧಪ್ರದಕ್ಷಿಣೆ ಎಂಬುದಾಗಿ ಆಗಮಶಾಸ್ತ್ರವು ಹೇಳುತ್ತದೆ.
ಸೂಚನೆ : 25/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.