Monday, September 13, 2021

ಶ್ರೀರಾಮನ ಗುಣಗಳು - 22 ದೃಢವ್ರತ - ಶ್ರೀರಾಮ (Sriramana Gunagalu - 22 Drdhavrata-Shreerama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)


ಗಟ್ಟಿಯಾದ ವ್ರತವುಳ್ಳವನೇ 'ದೃಢವ್ರತ'. ಇದು ಶ್ರೀರಾಮನ ಅನೇಕ ಗುಣಗಳಲ್ಲಿ ಒಂದು. 'ವ್ರತ'ವೆಂದ ಕೂಡಲೇ ನಮಗೆ ಗಣೇಶವ್ರತ, ವರಮಹಾಲಕ್ಷ್ಮೀವ್ರತ ಮುಂತಾದ ವ್ರತಗಳು ನೆನಪಿಗೆ ಬರುತ್ತವೆ. ಕಾಲ, ದೇಶ, ಆಹಾರ ಮೊದಲಾದ ನಿಯಮಗಳಿಗೆ ಒಳಪಡುವುದನ್ನೇ 'ವ್ರತ'ವೆಂದು ಕರೆಯುತ್ತಾರೆ. ಶ್ರೀರಾಮನು ಈ ರೀತಿಯಾದ ಯಾವುದಾದರೂ ಒಂದು ವ್ರತವನ್ನು ಕೈಗೊಂಡಿದ್ದನೇ? ಶ್ರೀರಾಮನು 'ಡೃಢವ್ರತ'ನೆಂದು ಪ್ರಸಿದ್ಧಿ ಪಡೆಯಲು ಕಾರಣವೇನು? 

ಆಹಾರ-ಆಚಾರ-ವಿಚಾರಗಳಲ್ಲಿನ ನಿಯಂತ್ರಣವನ್ನೇ ವ್ರತವೆಂದರೆ ತಪ್ಪಲ್ಲ. ಇವುಗಳೆಲ್ಲದರ ಮೇಲೆ ನಿಯಂತ್ರಣವನ್ನು ಸಾಧಿಸಿದರಷ್ಟೆ ವ್ರತಕ್ಕೆ ಬೇಕಾದ ರೀತಿಯಲ್ಲಿ ಮನಸ್ಸಿನ ನಿಯಂತ್ರಣ ಸಾಧ್ಯ. ಕಾಯಿಕ, ವಾಚಿಕ ಮತ್ತು ಮಾನಸಿಕವಾಗಿ, ವ್ಯಕ್ತಿಯನ್ನು ಹದ್ದುಬಸ್ತಿಗೆ ತರುವ ವ್ಯವಹಾರವನ್ನೇ 'ವ್ರತ' ಎನ್ನುತ್ತಾರೆ. 'ಇಂತಹ ವ್ರತವನ್ನು ಮಾಡುತ್ತೇನೆ' ಎಂದು ಆರಂಭಿಸುವಾಗ ನಮ್ಮ ಮನಸ್ಸು ಅದಕ್ಕೆ ಬೇಕಾದ ಸಿದ್ಧತೆಯನ್ನು ಪಡೆದಿರಬೇಕಾಗುತ್ತದೆ. ಫಲ ಸಿಗುವವರೆಗೆ ಅವಿಚಲವಾದ ನಡೆ ಇರಬೇಕಾಗುತ್ತದೆ. ಮಾನಸಿಕವಾದ ಸ್ಥಿರತೆ ಇಲ್ಲದಿರುವಾಗ ನಾವು ಸಂಕಲ್ಪಿಸಿದ ಕಾರ್ಯವನ್ನು ಮಧ್ಯದಲ್ಲೇ ನಿಲ್ಲಿಸುತ್ತೇವೆ. ಈ ನಿಯಮವು ವ್ರತಾಚರಣೆಗೂ ಅನ್ವಯಿಸುತ್ತದೆ. ಯಾವುದಾದರೂ ವ್ರತವನ್ನು ಕೈಗೊಂಡರೂ, ಅಲ್ಲಿ ಸಮಾಪ್ತಿಯಾಗುವ ತನಕವೂ ಬದ್ಧತೆ ಬೇಕಾಗುತ್ತದೆ. ಇಂತಹ ಬದ್ಧತೆಯನ್ನೇ 'ದೃಢವ್ರತ'ವೆಂದು ಕರೆಯಬಹುದು. 

ಸಂಕಲ್ಪಿಸಿದ ಕಾರ್ಯಸಾಧನೆ ಆಗುವ ತನಕವೂ ಅಚಲವಾದ ಬದ್ಧತೆಯನ್ನು ಶ್ರೀರಾಮನು ತೋರಿಸಿದ್ದರಿಂದ ಅವನಿಗೆ ಈ ಹೆಸರು ಬಂದಿದೆ. ಇದಕ್ಕೆ ಒಂದೆರಡು ಉದಾಹರಣೆಯನ್ನು ನೋಡಬಹುದು. ದಶರಥ ಮಹಾರಾಜನು ತನ್ನ ಪತ್ನಿ ಕೈಕೇಯಿಗೆ ಕೊಟ್ಟಮಾತಿನಂತೆ ಎರಡು ವರಗಳನ್ನು ಅನುಷ್ಠಾನಗೊಳಿಸುವ ಸಮಯ ಬಂದಿತ್ತು. ಹೀಗಾಗಿ ಕೈಕೇಯಿಯು, ರಾಮನ ವನವಾಸ ಮತ್ತು ಭರತನ ಪಟ್ಟಾಭಿಷೇಕವೆಂಬ ವರವನ್ನು ಪಡೆಯುತ್ತಾಳೆ. ಅದರ ಫಲವಾಗಿ ರಾಮನು ತಂದೆಯ ಆಜ್ಞೆಯಂತೆ ಅರಣ್ಯಕ್ಕೆ ತೆರಳುತ್ತಾನೆ. ಎಷ್ಟೇ ಕಷ್ಟಗಳು ಬಂದರೂ, ಆತ ತಂದೆಯ ವಚನಕ್ಕೆ ಬದ್ಧನಾಗುತ್ತಾನೆ. ಹದಿನಾಲ್ಕು ವರ್ಷಗಳ ವನವಾಸವು ಅರಮನೆಯ ಜೀವನದಷ್ಟು ಸುಲಭವಲ್ಲ. ಅರಮನೆಯಲ್ಲಿರುವ ಯಾವ ವಿಧವಾದ ವೈಭವವೂ ರಾಮನ ಬಳಿ ಇರಲಿಲ್ಲ. ಕಾಡಾದರೋ, ಭಯಂಕರ ಕ್ರೂರ ಮೃಗಗಳಿಂದ, ರಾಕ್ಷಸರ ಹಾವಳಿಯಿಂದ ಕೂಡಿತ್ತು. ಕೈಕೇಯಿಗೂ ಶ್ರೀರಾಮನು ಮರಳಿ ಬರಲಾರ ಎಂಬ ವಿಶ್ವಾಸವಿತ್ತು. ಆದ್ದರಿಂದಲೇ ಹದಿನಾಲ್ಕು ವರ್ಷಗಳ ವನವಾಸದ ವರವನ್ನು ಪಡೆದಿದ್ದಳು. ಹಾಗಾಗಿ ಭರತನಿಗೆ ರಾಜ್ಯ ನಿಶ್ಚಿತ ಎಂಬಷ್ಟರ ಮಟ್ಟಿಗೆ ಅವಳಿಗೆ ವಿಶ್ವಾಸವಿತ್ತು. ಇಂತಹ ಭಯಾನಕವಾದ ಅರಣ್ಯಗಮನದ ವ್ರತವನ್ನು ಶ್ರೀರಾಮನು ತೊಟ್ಟಿದ್ದ. ಕೊನೆತನಕ ತಾನು ಕೊಟ್ಟ ಮಾತಿನಂತೆ ಪೂರ್ಣ ಅವಧಿಯನ್ನು ಮುಗಿಸಿದ ಶ್ರೀರಾಮ. 

'ವಾಲಿಯನ್ನು ಕೊಂದು ಸುಗ್ರೀವನಿಗೆ ನಿಷ್ಕಂಟಕವಾದ ರಾಜ್ಯವನ್ನು ಮರಳಿಸುತ್ತೇನೆ' ಎಂಬ ಮಾತಿನ ವ್ರತವನ್ನು ಆರಂಭಿಸಿದ್ದ ಶ್ರೀರಾಮ. ಕೊಟ್ಟ ಮಾತಿನಂತೆ ನಡೆದುಕೊಂಡ. ಇವೆಲ್ಲದಕ್ಕೂ ಕಳಶಪ್ರಾಯವಾಗಿ, ತನ್ನ ಅವತಾರದ ಮೂಲ ಉದ್ದೇಶವಾದ ರಾವಣನ ಸಂಹಾರದಿಂದ, ದೇವತೆಗಳಿಗೆ ಕೊಟ್ಟ ಮಾತನ್ನೂ ಉಳಿಸಿಕೊಂಡ. ಇವನ್ನೆಲ್ಲ ಸಾಧಿಸಲು ಒಬ್ಬ ಸಾಮಾನ್ಯ ಮಾನವನ ರೂಪದಲ್ಲೇ ಅವತರಿಸಿ ಋಷಿಜೀವನ-ತ್ಯಾಗಜೀವನ ಮಾಡಿ ಎಲ್ಲಾ ಕಡೆ ತನ್ನ 'ದೃಢವ್ರತ'ತ್ವವನ್ನು ಪ್ರಚುರಪಡಿಸಿದ. 

ಸೂಚನೆ : 12/9/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.