Monday, September 13, 2021

ಆರ್ಯಸಂಸ್ಕೃತಿ ದರ್ಶನ - 53 ಕೇಶಭಾರ (Arya Samskruti Darshana -53 Keshabhaara)

ಲೇಖಕರು : ಡಾ|| ಎಸ್.ವಿ. ಚಾಮು
ಸಾವಿರಾರು ವರ್ಷಗಳಿಂದ ಮುಂದುವರಿದ ನಮ್ಮ ಸಾಂಸ್ಕೃತಿಕ ಪರಂಪರೆಗಳು ಅರ್ಧಶತಮಾನದಿಂದೀಚೆಗೆ ಒಂದೊಂದಾಗಿ ಮುರಿದುಬೀಳುತ್ತಿವೆ. ಯುಕ್ತಾಯುಕ್ತ ವಿವೇಚನೆಯಿಲ್ಲದೆ ಜನರು ತಮ್ಮ ಅಮೂಲ್ಯವಾದ ಪದ್ಧತಿಗಳನ್ನು ತ್ಯಾಗಮಾಡುತ್ತಿರುತ್ತಾರೆ. ಗೀತೆಯಲ್ಲಿ

ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ ।

ಸರ್ವಾರ್ಥಾನ್ ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ ॥


(ಎಲೆ ಪಾರ್ಥ, ತಮಸ್ಸಿನಿಂದ ಆವೃತವಾಗಿ ಯಾವುದು ಅಧರ್ಮವನ್ನು ಧರ್ಮವೆಂಬುದಾಗಿಯೂ ಮತ್ತು ಎಲ್ಲ ವಿಷಯಗಳನ್ನೂ ವಿಪರೀತವಾಗಿಯೂ ತಿಳಿಯುತ್ತದೆಯೋ ಅಂತಹ ಬುದ್ಧಿಯು ತಾಮಸವಾದುದು) ಎಂಬ ಮಾತನ್ನು ಓದುತ್ತೇವೆ. ಇಂದು ನಮ್ಮ ಜೀವನದಲ್ಲಿ ಈ ಮಾತು ಅನ್ವಯಿಸದ ಕ್ಷೇತ್ರವೇ ನಮಗೆ ಕಾಣುತ್ತಿಲ್ಲ. ಯಾವುದರಿಂದ ಜನರು ತುಂಬ ಭಯಪಡುತ್ತಿದ್ದರೋ ಮತ್ತು ಜುಗುಪ್ಸಿತರಾಗುತಿದ್ದರೋ ಅಂತಹ ಆಚರಣೆ, ನೀತಿ ಮತ್ತು ನಡತೆಗಳನ್ನು ಸಾತ್ಮ್ಯವಾಗಿಸಿಕೊಂಡು ಇಂದಿನವರು ಅವುಗಳನ್ನು ಸಹಾನುಭೂತಿಯಿಂದ ನೋಡುವುದು ಎಲ್ಲೆಲ್ಲಿಯೂ ಕಂಡುಬರುತ್ತದೆ. ಹಿಂಸೆ, ವ್ಯಭಿಚಾರ, ಮದ್ಯಪಾನ, ಅಸತ್ಯ ಇತ್ಯಾದಿಗಳು ನಮ್ಮಲ್ಲಿ ಪಾಪಗಳೆಂಬ ಭಾವನೆಯನ್ನೇ ಉಂಟುಮಾಡುವುದಿಲ್ಲ. ಒಂದೆರಡು ಶತಮಾನಗಳ ಕಾಲದ ಆಧುನಿಕ ಪಾಶ್ಚಾತ್ಯಮೂಲದ ವಿದ್ಯಾಭ್ಯಾಸ, ನಾಗರಿಕತೆ ಮತ್ತು ವಿಚಾರಗಳು ನಮ್ಮಲ್ಲಿ ಆಮೂಲಾಗ್ರವಾದ ಪರಿವರ್ತನೆಗಳನ್ನುಂಟುಮಾಡಿರುತ್ತವೆ. ಈಚೆಗೆ ಸಿನಿಮಾ, ಟಿ.ವಿ. ಮುಂತಾದ ದೃಶ್ಯಮಾಧ್ಯಮಗಳು ಜನರ ಉಡಿಗೆ, ತೊಡಿಗೆ, ಅಲಂಕಾರ ಇತ್ಯಾದಿಗಳಲ್ಲಿ ದೊಡ್ಡ ವ್ಯತ್ಯಾಸಗಳನ್ನುಂಟುಮಾಡಿವೆ. ಸ್ವಾಭಿಮಾನ,ಯುಕ್ತಾಯುಕ್ತ ವಿವೇಚನೆ ಮತ್ತು ಸಮ್ಯಗ್ದೃಷ್ಟಿಗಳು ಅವರನ್ನು ತ್ಯಜಿಸಿರುತ್ತವೆ. ಅವರ ಕೇಶವಿನ್ಯಾಸಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಕೆಲವು ಯೋಚನೆಗಳನ್ನು ಇಲ್ಲಿ ನಮ್ಮ ವಾಚಕರೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇವೆ.

ಇತರ ವಿಷಯಗಳಲ್ಲಿ ಹೇಗೋ ಹಾಗೆ ಕೇಶಾಲಂಕಾರ ವಿಷಯದಲ್ಲಿಯೂ ಸಹ ನಮ್ಮಲ್ಲಿ ಒಂದು ಪ್ರಾಚೀನವಾದ ಪರಂಪರೆ ಇರುತ್ತದೆ. ಅದು ಒಂದು ಬಾಹ್ಯವಾದ ಅಲಂಕಾರ ಮಾತ್ರವಾಗಿರದೆ ಆಧ್ಯಾತ್ಮಿಕವಾದ ಸಂವೇದನೆಗಳನ್ನೂ ಸಹ ವ್ಯಕ್ತಪಡಿಸುತ್ತದೆ. ನಮ್ಮ ಪ್ರಾಚೀನ ಸಾಹಿತ್ಯಗಳಲ್ಲಿ ಅದರ ಹೃದ್ಯವಾದ ವರ್ಣನೆಗಳನ್ನು ಓದುತ್ತೇವೆ. ಉದಾಹರಣೆಗೆ ಹನುಮಂತನು ಅಶೋಕವನದಲ್ಲಿ ತಾನು ಕುಂಡ ಸೀತೆಯನ್ನು 


ನೀಲನಾಗಾಭಯಾವೇಣ್ಯಾ ಜಘನಂ ಗತಯೈಕಯಾ। 


ನಡುವಿನವರೆಗೆ ಇಳಿದ ಕೃಷ್ಣಸರ್ಪವನ್ನು ಹೋಲುವ ಒಂದು ವೇಣಿಯಿಂದ ಶೋಭಿಸುವ ಎಂದು ವರ್ಣಿಸುತ್ತಾನೆ. ಅವಳು ತ್ರಿವೇಣಿಯನ್ನು ಧರಿಸದಿದ್ದುದಕ್ಕೆ ಕಾರಣ ಅವಳು ಪತಿಯಿಂದ ಅಗಲಿದ್ದುದು. ಹಾನಿಕರವಲ್ಲದ ತೈಲಾದಿಗಳನ್ನು ಬಳಸಿ ಕೇಶಪಾಶವು ಚೆನ್ನಾಗಿ ಮತ್ತು ದೀರ್ಘವಾಗಿ ಬೆಳೆಯುವಂತೆಮಾಡುವ ಕಲೆಯು ನಮ್ಮ ಪೂರ್ವಿಕರಿಗೆ ತಿಳಿದಿದ್ದಿತು. ಅದಕ್ಕೆ ಸುಂದರವಾಗಿರುವ ರೀತಿಯಲ್ಲಿ ಸಂಸ್ಕಾರಮಾಡುವುದು ಭಾರತೀಯ ಗೃಹಿಣಿಯರ ದಿನಚರಿಯಾಗಿದ್ದಿತು. ಇಂದೂ ಸಹ ಆದು ಬಹಳ ಮಟ್ಟಿಗೆ ಉಳಿದೇ ಇರುತ್ತದೆ. ಕಾಳಿದಾಸನ ಮೇಘಸಂದೇಶದಲ್ಲಿ ಯಕ್ಷನು ತನ್ನಿಂದ ದೂರಗತಳಾದ ಪತ್ನಿಯನ್ನು ನೆನೆಸಿಕೊಂಡು


ಶ್ಯಾಮಾಸ್ವಂಗಂ ಚಕಿತಹರಿಣೀಪ್ರೇಕ್ಷಣೀದೃಷ್ಟಿಪಾತಂ

ವಕ್ತ್ರಚ್ಛಾಯಾಂ ಶಶಿನಿಶಿಖಿನಾಂ ಬರ್ಹಭಾರೇಷು ಕೇಶಾನ್।

ಉತ್ಪಶ್ಯಾಮಿ ಪ್ರತನುಷು ನದೀವೀಚಿಷು ಭ್ರೂವಿಲಾಸಾನ್

ಹನ್ತೈಕಸ್ಮಿನ್ ಕ್ವಚಿದಪಿ ನ ತೇ ಚಂಡಿ ಸಾದೃಶ್ಯಮಸ್ತಿ ॥


(ಪ್ರಿಯಂಗು ಲತೆಗಳಲ್ಲಿ ನಿನ್ನ ಶರೀರವನ್ನೂ, ಹೆದರಿದ ಜಿಂಕೆಯ ಕಣ್ಣಿನಲ್ಲಿ ನಿನ್ನ ನೋಟವನ್ನೂ, ಚಂದ್ರನಲ್ಲಿ ನಿನ್ನ ಮುಖದ ಕಾಂತಿಯನ್ನೂ, ನವಿಲುಗಳ ಬಾಲದಲ್ಲಿ ನಿನ್ನ ಕೇಶಗಳನ್ನೂ, ಸ್ವಲ್ಪವಾದ ನೀರಿರುವ ನದಿಗಳ ತರಂಗಗಳಲ್ಲಿ ನಿನ್ನ ಭ್ರೂವಿಲಾಸವನ್ನೂ ನೋಡುತೇನೆ. ಅಕಟ! ಎಲೆ ಮಾನಿನಿಯೇ, ಯಾವೊಂದರಲ್ಲಿಯೂ ನಿನ್ನ ಸಾದೃಶ್ಯವಿರುವುದಿಲ್ಲ! ಎಂದು ಹಲಬುತ್ತಾನೆ). ತುರುಬು ಸೊಂಪಾಗಿ ನವಿಲಿನ ಬಾಲದಂತೆ ಇರುವುದು ನಮ್ಮ ಪೂರ್ವಜರಿಗೆ ಕೇಶಸೌಂದರ್ಯದ ಲಕ್ಷಣವಾಗಿದ್ದಿತು. ಇದು ಯುವತಿಯೊಬ್ಬಳ ಸೌಂದರ್ಯದ ವರ್ಣನೆ. ಕಾಲದೇಶ ವ್ಯಕ್ತಿಗಳನ್ನನುಸರಿಸಿ ಕೂದಲುಗಳನ್ನು ಆಶ್ರಯಿಸಿದ ಒಂದು

ವಿಸ್ತಾರವಾದ ಸಾಂಸ್ಕೃತಿಕ ಪರಂಪರೆಯೇ ದೇಶದಲ್ಲಿ ಸಾರ್ವತ್ರಿಕವಾಗಿ ಬೆಳೆದಿದ್ದಿತ್ತು.


ಇಂದು ಆ ಪರಂಪರೆಯು ನಾಶವಾಗುವ ದಾರಿಯನ್ನು ಹಿಡಿದಿರುತ್ತದೆ. ಈಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾವಿದ್ದ ವಿಶ್ವವಿದ್ಯಾಲಯದ ಪರಿಸರದಲ್ಲಿ ಹಲವಾರು ಜನ ತರುಣಿಯರು ಹಾಗೂ ವಯಸ್ಸಾದ ಸ್ತ್ರೀಯರೂ ತಮ್ಮ ಹೆರಳುಗಳನ್ನು ಕತ್ತರಿಸಿಕೊಂಡಿದ್ದುದನ್ನು ಮೊದಲಿಗೆ ನೋಡಿದೆವು. ಅವರು ವಿವಿಧವಾದ ರೀತಿಗಳಲ್ಲಿ ತಮ್ಮ ಮೋಟು ಕೂದಲುಗಳನ್ನು ರೂಢಿಸಲು ಯತ್ನಿಸಿದರೂ ಅವು ಮೊಂಡು ಹಿಡಿದು ಹಿಂದಿನ ಹೆರಳುಗಳ ಕಾಲದಲ್ಲಿದ್ದ ಆಕಾರವನ್ನು ತ್ಯಜಿಸಲು ನಿರಾಕರಿಸಿದ್ದುವು. ಅಂತಹವರನ್ನು ನೋಡಿದಾಗ ನಮಗೆ ನಗುಬರುತ್ತಿದ್ದಿತು.


ಹಿಂದೆ ಕೇಶಭಾರವನ್ನು ಹೆಚ್ಚಿಸಿಕೊಳ್ಳಲು ಸ್ತ್ರೀಯರು ಕಾತರರಾಗಿದ್ದರೆ, ಇಂದು ಆ ಭಾರವನ್ನು ಕಡಿಮೆ ಮಾಡಿಕೊಳ್ಳಲು ಅನೇಕರು ಉತ್ಸುಕರಾಗಿರುವುದನ್ನು ನೋಡುತ್ತೇವೆ. ಕೂದಲನ್ನು ಮೊಟಕು ಮಾಡಿಕೊಳ್ಳುವುದು ಬೇರೆಬೇರೆ ಪ್ರಾಣಿಗಳ ಬಾಲದಂತೆ ಅವುಗಳನ್ನು ಕತ್ತರಿಸಿಕೊಳ್ಳುವುದು, ಕ್ರಾಪ್ ಮಾಡಿಸಿಕೊಳ್ಳುವುದು (ಈ ಹೊಸ ಶೈಲಿಗಳಿಗೆ ಕನ್ನಡದಲ್ಲಿ ಪದಗಳಿಲ್ಲ, ನಾಗರಿಕತೆಯಂತೆ ಭಾಷೆ ಬೆಳೆಯುತ್ತದಷ್ಟೆ).

ವಿದ್ಯುತ್‌ಯಂತ್ರದ ಸಹಾಯದಿಂದ ಕೂದಲುಗಳನ್ನು ಬೊಂತೆಯಂತೆ ಮಾಡಿಸಿಕೊಳ್ಳುವುದು, ಕೃತಕವಾದ ಗುಂಗುರುಗಳನ್ನು ಉಂಟುಮಾಡಿಕೊಳ್ಳುವುದು ಇತ್ಯಾದಿ ಅನೇಕಾನೇಕ ಕೇಶಶೈಲಿಗಳು ಪ್ರಚಾರಕ್ಕೆ ಬರುತ್ತಿವೆ. ಕೂದಲುಗಳನ್ನು ಕೆದರಿಯೇ ಧರಿಸುವುದು ರೂಢಿಯಾಗುತ್ತಿದೆ. Beautician ಎಂದು ಕರೆಯಿಸಿಕೊಳ್ಳುವ ಆದರೆ ವಾಸ್ತವದಲ್ಲಿ Uglicianಗಳಾದ ಸೈರಂಧ್ರಿಯರು ಇದನ್ನೊಂದು ಲಾಭದಾಯಕವಾದ ವೃತ್ತಿಯನ್ನಾಗಿ ಮಾಡಿಕೊಂಡಿರುತ್ತಾರೆ. ಪುರುಷರು ಕಾಲಕಾಲಕ್ಕೆ ಸೆಲೂನ್ಗೆ ಭೇಟಿಕೊಡುವಂತೆ ಸ್ತ್ರೀಯರು ಕಾಲಕಾಲಕ್ಕೆ Beauty parlour ಎಂಬ ಅನನ್ವರ್ಥವಾದ ಹೆಸರನ್ನು ಹೊತ್ತ ಸೆಲೂನುಗಳಿಗೆ ಭೇಟಿ ಕೊಡುವುದು ವಾಡಿಕೆಯಾಗುತ್ತಿದೆ. ಅಲ್ಲಿ Uglicianಗಳು ಕೇಶಗಳಿಗೆ ವಿದ್ಯುದ್ಯಂತ್ರ, ರಾಸಾಯನಿಕ ಪದಾರ್ಥಗಳು ಇತ್ಯಾದಿಗಳನ್ನು ಬಳಸಿ ಮಾಡುವ ಸಂಸ್ಕಾರಗಳು ಕೇಶಗಳಿಗೆ ಮಾತ್ರವಲ್ಲದೆ ಆರೋಗ್ಯಕ್ಕೆ ತುಂಬ ಹಾನಿಕರವೆಂದು ನಮ್ಮ ಅನಿಸಿಕೆ. ಚಿತ್ರವಿಚಿತ್ರವಾಗಿ ಕತ್ತರಿಸಿದುದರಿಂದ ಕೂದಲುಗಳ ಸೌಂದರ್ಯವಾಗಲಿ ಮುಖದ ಸೌಂದರ್ಯವಾಗಲಿ ಹೆಚ್ಚುವುದಿಲ್ಲ. ಆ ರೀತಿ ಮಾಡುವುದು ಹಿತವೂ ಅಲ್ಲ, ಅವಶ್ಯಕವೂ ಅಲ್ಲ. ಅದರಲ್ಲಿ ನಾವು ಸೌಂದರ್ಯ ದೃಷ್ಟಿಯ ಸಂಪೂರ್ಣ ಅಭಾವವನ್ನೇ ನೋಡುತ್ತೇವೆ.


ಏತಕ್ಕೆ ಸ್ತ್ರೀಯರು ತಮ್ಮ ಪ್ರಶಸ್ತವಾದ ಪರಂಪರೆಗಳನ್ನು ತ್ಯಾಗ ಮಾಡುತ್ತಿದ್ದಾರೆ ಎಂಬುದು ವಿಚಾರ ಯೋಗ್ಯವಾಗಿದೆ. ಆಧುನಿಕ ಜೀವನದ ಸ್ಥಿತಿಗತಿಗಳು ಅದಕ್ಕೆ ಒಂದು  ಕಾರಣವೆಂದು ಯೋಚಿಸಬಹುದು. ಕೇಶಾಲಂಕಾರಕ್ಕೆ ಈಗ ಯಾರಿಗೂ ವಿರಾಮವಿಲ್ಲ. ಬೆಳಿಗ್ಗೆ ಎದ್ದು ಹೇಗೋ ಮನೆಕೆಲಸಗಳನ್ನು ಮಾಡಿ ಶಾಲೆ, ಫ್ಯಾಕ್ಟರಿ, ಆಫೀಸುಗಳಿಗೆ ಹೋಗಲು ಸ್ತ್ರೀಯರಿಗೆ ಬಸ್ಸು ಹಿಡಿಯಲು ಓಡಬೇಕಾಗುತ್ತದೆ. ಜೀವನವೆಲ್ಲವೂ ಅವಸರದಲ್ಲಿ ನಡೆಯುತ್ತಿರುವಾಗ ತಲೆ ಬಾಚಿ ಹೆರಳುಹಾಕಲು ಅಥವಾ ಹಾಕಿಕೊಳ್ಳಲು ಅವರಿಗೆ ಸಮಯವೆಲ್ಲಿ? ಆದುದರಿಂದ ಕೂದಲನ್ನು ಕತ್ತರಿಸಿಬಿಟ್ಟರೆ ತಲೆಯ ಮೇಲೆ ಸ್ವಲ್ಪ ಎಣ್ಣೆ ಹಾಕಿ ಎರಡು ಬಾರಿ ಬಾಚಣಿಗೆ ಆಡಿಸಿದರೆ ಆಯಿತು. ಕುರೂಪವಾದುದನ್ನು ಸುರೂಪವೆಂದು ತಿಳಿಯುವುದಕ್ಕೆ ಅಡ್ಡಿ ಏನಿದೆ ? ನಾವು ಯಾರನ್ನು ಆದರ್ಶವೆಂದು ತಿಳಿಯುತ್ತೇವೆಯೋ ಆ ಬಿಳಿ ಜನರೂ ಹೀಗೆಯೇ ಮಾಡುವ ಆದರ್ಶವನ್ನು ನಾವು ನೋಡುತ್ತಿಲ್ಲವೇ?


ಸಮಯದ ಅಭಾವ ಮಾತ್ರವಲ್ಲದೆ ಈ ರೀತಿ ಮಾಡಲು ಬೇರೆ ಕೆಲವು ಕಾರಣಗಳೂ ಕಂಡುಬರುತ್ತವೆ. ಅವು ಎಷ್ಟೇ ಒಳ್ಳೆಯವುಗಳಾಗಿದ್ದರೂ ಹಿಂದಿನಿಂದ ಬಂದ ಪದ್ಧತಿಗಳ ವಿರೋಧವಾಗಿ ಬಂಡಾಯವೆದ್ದು ತಮ್ಮ ಬುದ್ಧಿ ಸ್ವಾತಂತ್ರ್ಯವನ್ನು ಪ್ರದರ್ಶಿಸುವುದು ಇಂದಿನವರ ಒಂದು ಪ್ರಧಾನವಾದ ಪ್ರವೃತ್ತಿಯಾಗಿದೆ. ಸಂವಿಧಾನವು ಯಾರು ಹೇಗೆ ಬೇಕಾದರೂ ಇರಬಹುದು, ಏನು ಬೇಕಾದರೂ ಮಾಡಬಹುದೆಂಬ ಸ್ವಾತಂತ್ರ್ಯವನ್ನು ನೀಡಿರುತ್ತದೆ. ಸ್ತ್ರೀಯರು ಪುರುಷರ ವಿಲಾಸ ಸಾಮಗ್ರಿಗಳಾಗಿರಬಾರದು, ಅದನ್ನು ಎಲ್ಲಾ ವಿಧಗಳಲ್ಲಿಯೂ ಪ್ರತಿಭಟಿಸಬೇಕು ಎಂಬ ಸ್ತ್ರೀ ಸ್ವಾತಂತ್ರ್ಯ ಆಂದೋಳನದ ನೇತಾರರು ಮಾಡುವ ಉಪದೇಶಗಳಿಗೆ ಸಾಕಷ್ಟು ಪ್ರಚಾರ ದೊರಕುತ್ತದೆ. ಅದು ಎಷ್ಟೋ ವಿಷಯಗಳಲ್ಲಿ ಎಲ್ಲೆ ಮೀರಿ ಮೂರ್ಖತೆಯಲ್ಲಿ ಪರ್ಯವಸಾನವಾಗುತ್ತಿರುವುದು ಬೇರೆ ವಿಷಯ. ನಿಸರ್ಗ ಸಹಜವಾದ ವಿವೇಕದ ರೇಖೆಯನ್ನು ಮೀರಿದರೂ ಪರವಾಗಿಲ್ಲ ಎಂದರೆ ಏನುಮಾಡುವುದು? ಆಧುನಿಕ ವಿದ್ಯಾಭ್ಯಾಸ, ಸ್ತ್ರೀ ಸಮಾನತೆಯ ಅದರ್ಶ ಇತ್ಯಾದಿಗಳೆಲ್ಲವೂ ಸೇರಿಕೊಂಡು ಅಸಹಜವಾದ ಉಚ್ಛೃಂಖಲತೆಯನ್ನು ಅನೇಕ ಜನ ಸ್ತ್ರೀಯರಲ್ಲಿ ಉಂಟುಮಾಡಿರುವುದು ಪ್ರತ್ಯಕ್ಷವಾಗಿದೆ. ನಮ್ಮ ಕೇಶ ಸಂಸ್ಕೃತಿಗೆ ಉಂಟಾಗುತ್ತಿರುವ ಹಾನಿಗೆ ಇವೆಲ್ಲವೂ ಕಾರಣವಾಗಿರುತ್ತದೆ. ಇಂದು ಸ್ತ್ರೀಯರಲ್ಲಿ ಕೇಶಗಳ ವಿಷಯದಲ್ಲಿ ಮಾಡುತ್ತಿರುವ ಹಸ್ತಕ್ಷೇಪಗಳಿಂದ ಕಾಲಕ್ರಮದಲ್ಲಿ ಅನೇಕರಿಗೆ ಬಕ್ಕತಲೆಯುಂಟಾಗಿ ಕೇಶಗಳೇ ಉಳಿಯದಿರಬಹುದು. ಅದು ಬೇರೆ ವಿಷಯ.


ಇವುಗಳ ಮಧ್ಯೆ ವ್ಯಸನಕ್ಕೆ ಒಂದು ವಿಷಯವೇನೆಂದರೆ ಇಂದಿನ ಚಿಕ್ಕ ಮಕ್ಕಳಿಗೆ ಪ್ರಾಚೀನವಾದ ಪರಂಪರೆಯ ಪರಿಚಯವೇ ಇಲ್ಲದೆ ಹೋಗುತ್ತಿದೆ. ಅವು ತಾಯಂದಿರು ತಮ್ಮ ತಲೆ ಕೂದಲುಗಳನ್ನು ಕತ್ತರಿಸಿ ಬಿಡುವುದನ್ನೇ ಸಹಜವೆಂದು ಭಾವಿಸುತ್ತವೆ. ಹಾಗೆಯೇ ಬೆಳೆದು ಹಾಗೆಯೇ ಸಾಯುತ್ತವೆ. ನಾವು ಆರಂಭದಲ್ಲಿ ಹೇಳಿದಂತೆ ಕೂದಲುಗಳು ಬರಿ ಬಾಹ್ಯ ಸೌಂದರ್ಯದ ಕುರುಹುಗಳಲ್ಲ. ಅವು ಆತ್ಮ ಸೌಂದರ್ಯವನ್ನು ಸಂಪಾದಿಸಿಕೊಡುವ ಸಾಧನಗಳು. ಅವುಗಳಲ್ಲಿ ಮನಸ್ಸಂಯಮವನ್ನುಂಟುಮಾಡುವ ಸಾಮರ್ಥ್ಯವಿದೆ. ಅದರಿಂದ ವಂಚಿತರಾಗಿ ಮಕ್ಕಳು ಬೆಳೆಯುವಂತಾಗುತ್ತಿದೆಯಲ್ಲ ಎಂದು ನಮಗೆ ವ್ಯಸನವಾಗುತ್ತಿದೆ.


ಕೂದಲುಗಳು ತಲೆಯಲ್ಲಿ ಬೆಳೆದರೂ ಅವುಗಳ ಮೂಲ ತಲೆಯಲ್ಲಿಯೇ ಇಲ್ಲ. ಮಧ್ಯ ನಾಡಿಯಿಂದ ಉತ್ಪನ್ನವಾಗುವ ಅಸಂಖ್ಯಾತ ನಾಡಿಗಳಿಗೂ ನಿಕಟವಾದ ಸಂಬಂಧವಿರುತ್ತದೆ. ಆದುದರಿಂದಲೇ ಅವು ಉದ್ವೇಗಾದಿಗಳಿಂದ ತುಂಬ ಪ್ರಭಾವಿತವಾಗುತ್ತವೆ. ಬೆನ್ನು ಹುರಿಯಲ್ಲಿ ತ್ರಿವೇಣಿಯನ್ನು* ಹೋಲುವನಾಡಿಗಳ ಹೆಣಿಗೆಯಿರುವುದನ್ನು ಒಮ್ಮೆ ಮೆಡಿಕಲ್ ಪ್ರದರ್ಶನದಲ್ಲಿ ನೋಡಿದೆವು. ಕೂದಲುಗಳಿಗೆ ಮೂಲವಾದ ಆ ನರಗಳೇ ಮನಸ್ಸು, ಬುದ್ದಿ ಮತ್ತು ಇಂದ್ರಿಯಗಳ ವ್ಯಾಪಾರಗಳು ನಿಯಂತ್ರಿತವಾಗಿ ನಡೆಯುವಂತೆ ಮಾಡುತ್ತವೆ. ಹಾಗೆಯೇ ಕೂದಲುಗಳೂ ಸಹ ಆ ನರಗಳನ್ನು ಹೊರಗಿನಿಂದ ಪ್ರಭಾವಗೊಳಿಸುತ್ತವೆ. ಅದಕ್ಕೆ ಸಂಬಂಧಿಸಿದಂತೆ ಒಂದು ಘಟನೆಯು ಜ್ಞಾಪಕಕ್ಕೆ ಬರುತ್ತದೆ. ಶ್ರೀರಂಗಗುರುವು ಒಬ್ಬ ಹುಡುಗಿಗೆ ಜ್ಞಾನದೀಕ್ಷೆಯನ್ನು ಕೊಟ್ಟಿದ್ದರು. ಅವಳು ಆಗ ಇದ್ದ ಫ್ಯಾಷನ್ನಿನಂತೆ ಎರಡು ಜಡೆಗಳನ್ನು ಹಾಕಿಕೊಳ್ಳುತ್ತಿದ್ದಳು. ಗುರುವು ಅವಳಿಗೆ ಎರಡು ಬೇಡ, ಒಂದು ಜಡೆಯನ್ನೇ ಹಾಕಿಕೋ ಎಂದು ಹೇಳಿದರು. ಅವಳು ಹಾಗೆ ಮಾಡಿದಾಗ ಅದು ಧ್ಯಾನಕ್ಕೆ ತುಂಬ ಪೋಷಕವಾಯಿತು.ಅವಳು ಗುರುವಿಗೆ, "ಒಂದು ಜಡೆಯಿಂದ ಧ್ಯಾನಕ್ಕೆ ತುಂಬ ಅನುಕೂಲವಾಗುತ್ತಿದೆ. ಅದು ಬೆನ್ನಿನೊಳಗಿನ ನರಗಳನ್ನು ಸ್ಥಿರವಾಗಿ ಹಿಡಿಯುತ್ತದೆ" ಎಂದು ಹೇಳಿದಳು. "ನಿನ್ನಿಂದಲೇ ವಿಷಯ ಹೊರಪಟ್ಟಿತಲ್ಲ!" ಎಂದು ಗುರುವು ತುಂಬ ಸಂತೋಷವನ್ನು ವ್ಯಕ್ತಪಡಿಸಿದರು. ಹಾಗೆಯೇ ಪುರುಷರೂ ಸಹ ಶಿಖೆಯನ್ನು ಕಟ್ಟಿಯೇ ಸಂಧ್ಯಾದಿ ಕರ್ಮಗಳನ್ನು ಮಾಡಬೇಕೆಂದು ಶಾಸ್ತ್ರಗಳು ವಿಧಿಸುತ್ತವೆ. ಏಕೆಂದರೆ ಆ ರೇತಿ ಮಾಡುವುದು ಮನಸ್ಸಂಯಮಕ್ಕೆ ಅತ್ಯಾವಶ್ಯಕ. ತಲೆ ಕೆದರಿರುವಾಗ ಕರ್ಮಾರ್ಹತೆಯ ಉಂಟಾಗುವುದಿಲ್ಲ.


ನಮ್ಮ ಸಂಸ್ಕೃತಿಯ ವಿಶಿಷ್ಟ ಮನೋಭಾವ (ethos) ವಿರುವುದು ಆತ್ಮ ಸಂಯಮದಲ್ಲಿ. ಪೂರ್ವಕಾಲದಿಂದ ಬಂದ ನಮ್ಮ ಉಡಿಗೆತೊಡಿಗೆ ಇತ್ಯಾದಿಗಳೆಲ್ಲವೂ ಆತ್ಮ ಸಂಯಮವನ್ನೇ ಧ್ಯೇಯವಾಗಿ ಹೊಂದಿರುತ್ತವೆ. ಸಂಯಮವೇ ಶಾರೀರಕ ಹಾಗೂ ಮಾನಸಿಕ ಸ್ವಾಸ್ಥ್ಯಗಳ ಮೂಲ. ಆ ಸಂಯಮದ ಸ್ಥಿತಿಯನ್ನು ಸಂಪಾದಿಸಿಕೊಡುವುದರಲ್ಲಿ ಕೇಶಗಳು ಒಂದು ಪಾತ್ರವನ್ನು ವಹಿಸುತ್ತವೆ. ಕಾಮಕೇಳಿ, ಮಿತಿ ಮೀರಿದ ದುಃಖ ಇತ್ಯಾದಿ ಸಂದರ್ಭಗಳು ಇದಕ್ಕೆ ಅಪವಾದಗಳು. ಇತರ ಸಂದರ್ಭಗಳಲ್ಲಿ ಕೇಶಸಂಯಮವನ್ನೇ(ಕಟ್ಟುವುದು) ಸಂಸ್ಕೃತಿಯು ಹೇಳುತ್ತದೆ. ಏಕೆಂದರೆ ಕೇಶಸಂಯಮವು ಮನಸ್ಸಂಯಮದ ಸಂಕೇತ. ಕೇಶವನ್ನು ಕೆದರಿ ಕೊಳ್ಳುವುದು, ಕತ್ತರಿಸಿ ಕೊಳ್ಳುವುದು ಅಶಾಸ್ತ್ರೀಯವಾಗಿ, ಇವು ಮನಸ್ಸು ಹತೋಟಯಲ್ಲಿಲ್ಲದಿರುವುದನ್ನು, ಅದು ಉನ್ಮಾರ್ಗಗಾಮಿಯಾಗಿರುವುದನ್ನು ಹೇಳುತ್ತವೆ. ಅದರಿಂದ ಅಸಂಯಮವೂ ಮತ್ತು ಆತ್ಮನಾಶವೂ ಸಿದ್ಧ. ಆದುದರಿಂದಲೇ ಅವು ಅವಲಕ್ಷಣಗಳು. ಕೇಶಗಳನ್ನು ಕತ್ತರಿಸಿಕೊಂಡಿರುವ ಯುವತಿಯರನ್ನು ನೋಡಿದಾಗ ನಮಗೆ ಸಡಿಲವಾಗಿರುವ ನಟ್ಟು ಮತ್ತು ಬೋಲ್ಟುಗಳಿಂದ ಕೂಡಿದ ಯಂತ್ರಗಳು ನೆನಪಿಗೆ ಬರುತ್ತವೆ. ಆದುದರಿಂದ ಕೇಶಗಳು ಶರೀರ, ಮನಸ್ಸು ಮತ್ತು ಆತ್ಮಗಳ ಮೇಲೆ ಯಾವ ಯಾವ ರೀತಿಯಾಗಿ ಪ್ರಭಾವ ಬೀರುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಅರಿತುಕೊಂಡು ಒಂದು ಸುಸಂಸ್ಕೃತಜೀವನ ಮಾಡಲು ಪ್ರಯತ್ನಿಸಬೇಕು. ನಮ್ಮ ದೇಶದಲ್ಲಿ ಬಳಕೆಯಲ್ಲಿ ಬಂದಿರುವ ತ್ರಿವೇಣಿಯಲ್ಲಿ ಕೇಶ ಸಂಬಂಧವಾದ ಉತ್ತಮೋತ್ತಮ ಸಂಸ್ಕೃತಿಯ ಪರಾಕಾಷ್ಠೆಯನ್ನು ನೋಡುತ್ತೇವೆ. ಪ್ರಪಂಚದಲ್ಲಿ ಇನ್ನೆಲ್ಲೂ ಇರುವುದಿಲ್ಲ. ಆದುದರಿಂದ ಅದು ನಾಶವಾಗದಂತೆ ನೋಡಿಕೊಂಡರೆ ಸುಸಂಸ್ಕೃತಿಯ ದಾರಿಯಲ್ಲಿ ಒಂದು ದೊಡ್ಡ ಹೆಜ್ಜೆಯನ್ನಿರಿಸಿದಂತೆ.


-----------------------------------------------------------------------------------------------------------------------------------------------------------------------------------------------------------------------

* ಆ ರೀತಿ ನರಗಳು ಹೆಣೆದುಕೊಂಡು ಪರಸ್ಪರ ಅಶ್ರಯವಾಗಿರುವುದರಿಂದಲೇ ಶರೀರವು ಸುಗಮವಾಗಿ ಕೆಲಸ ಮಾಡುತ್ತದೆ. ತ್ರಿವೇಣಿಯು ಮನಸ್ಸಿನ ವಿಷಯದಲ್ಲಿ ಅದೇ ರೀತಿ ಕೆಲಸ ಮಾಡುತ್ತೆ. ಅದಕ್ಕೆ ಸಂಯಮವನ್ನು ಒದಗಿಸಿ, ಭಾವಗಳು ಹದ್ದು ಮೀರದಂತೆ ಮನಸ್ಸಿಗೆ ಕೆಲಸ ಮಾಡಲು ದಾರಿಮಾಡಿಕೊಡುತ್ತದೆ.


ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೭ ಸಂಚಿಕೆ:೮, ಜೂನ್  ತಿಂಗಳಲ್ಲಿ ೧೯೯೫  ಪ್ರಕಟವಾಗಿದೆ.