Saturday, September 4, 2021

ಯೋಗತಾರಾವಳಿ - 20 ಅಮನಸ್ಕ-ಮುದ್ರೆ (Yogataravali - 20 Amanaska-mudre)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಯೋಗತಾರಾವಳೀ (ಶ್ಲೋಕ ೨೧)


 ನಿಃಶ್ವಾಸಲೋಪೈ


ಅಮನಸ್ಕ-ಸ್ಥಿತಿ

ಮನೋನ್ಮನ-ಸ್ಥಿತಿಯಲ್ಲಿ ರಮಿಸಿದ ಮನಸ್ಸು ಶಮನಗೊಂಡು ಮುಂದೆ ಸಾಗುವುದನ್ನು ಈ ಶ್ಲೋಕವು ಹೇಳುತ್ತದೆ. ಮುಂದಿನ ಘಟ್ಟವೇ ಅಮನಸ್ಕವೆಂಬ ಮುದ್ರೆ.

ಸಂತತ-ಸಾವಧಾನತೆಯಿಂದ ಸಂಕಲ್ಪ-ಪರಂಪರೆಯು ಭಗ್ನವಾಗುವುದು -ಎಂಬುದನ್ನು ನೋಡಿದ್ದಾಯಿತು. ಚಿತ್ತದ ಆಲಂಬನವೇ ಕೊನೆಗೊಂಡು, ಚಿತ್ತವು ಮೆಲ್ಲಮೆಲ್ಲನೆ ಶಾಂತವಾಗುವುದು. ಇನ್ನು ಮುಂದಕ್ಕೆ ಮನಸ್ಸನ್ನೇ ಮೀರುವ ಸ್ಥಿತಿಯು ಬರುವುದು. ಅದನ್ನೇ ಅಮನಸ್ಕವೆಂದೂ ಕರೆಯುತ್ತಾರೆ. ಆ ಸ್ಥಿತಿಯು ಬಂದಾಗ ಶರೀರದಲ್ಲಿ ತೋರುವ ಲಕ್ಷಣಗಳೇನು? - ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸಲಾಗಿದೆ.

ಶ್ವಾಸದ "ಸ್ಥಿತಿ"

ಮೊದಲನೆಯದು, ಉಸಿರಾಟವೇ ಕೆಲಕಾಲ ನಿಂತಂತಾಗುವುದು. ಲೋಪವೆಂದರೆ ಮರೆಯಾಗುವಿಕೆ. ನಿಃಶ್ವಾಸ-ಲೋಪವೆಂದರೆ ಉಸಿರಾಟವು ಕ್ಷೀಣವಾಗುವಿಕೆ. ಸಾಧಾರಣವಾಗಿ ಉಚ್ಛ್ವಾಸ-ನಿಃಶ್ವಾಸಗಳೆರಡನ್ನೂ ಸೇರಿಸಿಯೇ ಉಸಿರಾಟವೆನ್ನುವುದು, ಹೌದು. 

ಶ್ವಾಸದ ಮೇಲ್ಮುಖವಾದ ಗತಿಯು ಉತ್+ಶ್ವಾಸ (=ಉಚ್ಛ್ವಾಸ); ಅದರ ಕೆಳಮುಖವಾದ ನಡೆಯು ನಿಃ+ಶ್ವಾಸ. ಇಲ್ಲಿ ಎರಡನ್ನೂ ಹೇಳುವುದರ ಬದಲು ಒಂದನ್ನೇ ಹೇಳಿದೆ. ಒಂದು ಎರಡರ ಸೂಚಕ: ನಿಃಶ್ವಾಸವು ಉಚ್ಛ್ವಾಸಕ್ಕೂ ಉಪಲಕ್ಷಣ. 

ಲಕ್ಷಣ-ಉಪಲಕ್ಷಣಗಳಲ್ಲಿ ಭೇದವಿದೆ. ಲಕ್ಷಣವು ಸ್ವರೂಪವನ್ನೇ ಹೇಳುವುದು; ಉಪಲಕ್ಷಣವು ತಾನು ಮತ್ತು ತನ್ನಂತಿರುವ ಇನ್ನಿತರರನ್ನೂ ಸೇರಿಸಿ ಹೇಳುವುದು. ("ಇತ್ಯಾದಿ"ಎಂದಾಗ, ಅದರಂತಿರುವ ಇನ್ನು ಕೆಲವುಗಳನ್ನೂ ಊಹಿಸಿಕೊಂಡು ಅರ್ಥಮಾಡಿಕೊಳ್ಳುವೆವಲ್ಲವೆ? ಹಾಗಿರುವುದು ಈ ಉಪಲಕ್ಷಣ). ನಿಃಶ್ವಾಸವೆಂದಷ್ಟೇ ಹೇಳಿದರೂ, ಉಚ್ಛ್ವಾಸವನ್ನೂ ಸೇರಿಸಿ ಹೇಳಿದೆಯೆಂದೇ.

ಯಾರದ್ದಾದರೂ ಉಸಿರು ತುಂಬ ಕ್ಷೀಣವಾದರೆ ಅಥವಾ ಕೆಲಕ್ಷಣಗಳು ನಿಂತೇಹೋದರೆ ಮಿಕ್ಕವರು ಗಾಬರಿಗೊಳ್ಳುವುದು ಸಹಜವೇ. ಇದು ಲೋಕದ ಸಾಧಾರಣ-ಪರಿಸ್ಥಿತಿಗಳ ಲೆಕ್ಕಾಚಾರ. ಆದರೆ ಹಿಂದೆಯೇ ನಾವು ನೋಡಿರುವಂತೆ ಮರಣದ ಕೆಲವು ಲಕ್ಷಣಗಳನ್ನು ಹೊಂದಿದ್ದೂ ಜೀವನದ ಉನ್ನತ ಸ್ಥಿತಿಯನ್ನು ಸೂಚಿಸತಕ್ಕವು ಅನೇಕ ಯೋಗ-ಸ್ಥಿತಿಗಳು. ಎಂದೇ ಇವು ಗಾಬರಿಪಡುವ ಸ್ಥಿತಿಗಳಲ್ಲ! ಕಣ್ತುಂಬ ನೋಡಿ ಸಂತೋಷಿಸಬೇಕಾದವು!

ನಿಶ್ಚಲ-ಶರೀರ

ಎರಡನೆಯ ಲಕ್ಷಣವೆಂದರೆ ಶರೀರವು ನಿಭೃತವಾಗಿರುವುದು. ನಿಭೃತವೆಂದರೆ ಚಲನೆಯೆಂಬುದೇ ಇಲ್ಲದಿರುವಿಕೆ. ನಾವು ಕೈಕಾಲುಗಳನ್ನಾಡಿಸುವುದು ಯಾವಾಗ? ಎಚ್ಚರದ ಅವಸ್ಥೆಯಲ್ಲಿ. ಕೈಕಾಲುಗಳು ತಾವೇ ಸುಮ್ಮಸುಮ್ಮನೆ ಆಡವು. 

ಅಂಗಗಳ ಚಲನೆಯ ಹಿಂದೆ ಸಂಕಲ್ಪವು ಇರುತ್ತದೆ. (ಕೆಲವೊಮ್ಮೆ ಮಾತ್ರ ನಿರರ್ಥಕವಾದ ಚೇಷ್ಟೆಯನ್ನು ನಮ್ಮ ಅಂಗಗಳು ಮಾಡುತ್ತವೆ - ವಿಶೇಷವಾಗಿ ದುರಭ್ಯಾಸಗಳಿಂದಾಗಿ. ಕೆಲವೊಮ್ಮೆ ಸ್ವಪ್ನಾವಸ್ಥೆಯಲ್ಲೂ ಕೈಕಾಲುಗಳು ಒಂದಿಷ್ಟಾಡುವುದುಂಟು. ಅಲ್ಲಿಯೂ ಸ್ಪಷ್ಟತೆ-ನಿರ್ದಿಷ್ಟತೆಗಳಿರವಷ್ಟೆ). 

ಇಲ್ಲಿಯ ಅಮನಸ್ಕವೆಂಬ ಯೋಗ-ಸ್ಥಿತಿಯಲ್ಲಿ ಜಾಗ್ರತ್-ಸ್ವಪ್ನಗಳೆರಡರಂತೆಯೂ ಸ್ಥಿತಿಯಿರುವುದಿಲ್ಲ. ಇನ್ನೂ ಕಿಂಚಿತ್ತಾಗಿ ನಿದ್ರಾವಸ್ಥೆಯನ್ನೇ ಹೋಲುವ ಸ್ಥಿತಿಯಿದು. ಮೂರನೆಯದಾಗಿ ಅಮನಸ್ಕ-ಸ್ಥಿತಿಯಲ್ಲಿ ಕಣ್ಣು ಪೂರ್ತಿಯಾಗಿ ಮುಚ್ಚಿರುವುದೂ ಇಲ್ಲ, ಪೂರ್ತಿಯಾಗಿ ತೆರೆದಿರುವುದೂ ಇಲ್ಲ. 

ಆದರೆ ಹೇಗೆ ಒಳ್ಳೆಯ ನಿದ್ದೆಯನ್ನು ಮಾಡಿ ಎದ್ದವನ ಕಣ್ಣುಗಳು ಅಂದವಾಗಿ ಕಾಣುವುವೋ ಹಾಗೆಯೇ ಯೋಗ-ಸ್ಥಿತಿಗಳಿಂದ ಹೊರಬಂದವರ ಕಣ್ಣುಗಳೂ. ಯೋಗ-ಸ್ಥಿತಿಯಲ್ಲಿ ಸಹ ಕಣ್ಣುಗಳಲ್ಲೊಂದು ಸೌಂದರ್ಯವು ಕಾಣುವುದು. ಎಂದೇ ಅವುಗಳನ್ನು ಇಲ್ಲಿ ಅಂಬುಜಗಳಿಗೆ (ಎಂದರೆ ಕಮಲಗಳಿಗೆ) ಹೋಲಿಸಿರುವುದು. 

ಇಲ್ಲಿ ಕಣ್ಣುಗಳು ಅರ್ಧ-ನಿಮೀಲಿತವಾಗಿರುವುವು - ಎಂದು ಹೇಳಿದರೆ, ಅರ್ಧ-ಉನ್ಮೀಲಿತವಾಗಿರುವುವು - ಎಂದೂ ಅರ್ಥಮಾಡಿಕೊಳ್ಳಬಹುದು. ಇಲ್ಲೂ ಉಪಲಕ್ಷಣದ ಪರಿಪಾಟಿಯೇ. ಒಂದನ್ನು ಹೇಳಿದರೆ ಜೊತೆಗೆ ಮತ್ತೊಂದನ್ನೂ ಅರ್ಥಮಾಡಿಕೊಳ್ಳುವಿಕೆ. (ಜೊತೆಗೆ ಅರ್ಧ ಮುಚ್ಚಿದೆಯೆಂದರೆ ಅರ್ಧ ತೆಗೆದಿದೆಯೆಂದು ತರ್ಕಿಸಿಯೂ ಹೇಳಬಹುದಷ್ಟೆ).

"ಮುನಿ-ಪುಂಗವ"

ಈ ಮೂರು ಲಕ್ಷಣಗಳಿಂದ ಕೂಡಿದ ಈ ಸ್ಥಿತಿಯು ತೋರುವುದು ಸಾಧಾರಣ ಯೋಗಾಭ್ಯಾಸಿಗಳಲ್ಲಲ್ಲ. ಮುನಿಪುಂಗವರಲ್ಲೇ. '-ಪುಂಗವ" ಎಂದು ಸೇರಿಸಿದರೆ ಶ್ರೇಷ್ಠ ಎಂದರ್ಥ. ರಾಮಾಯಣದ ಮೊದಲ ಶ್ಲೋಕದಲ್ಲಿ ನಾರದರನ್ನು ಮುನಿ-ಪುಂಗವರೆಂದು ಕರೆದಿದೆ. 

ವಾಸ್ತವವಾಗಿ ಪುಂಗವವೆಂದರೆ ಗಂಡುಗೂಳಿಯೆಂದು ಅರ್ಥ. ಯೌವನದಲ್ಲಿರುವ ಎತ್ತು ಮಹಾಬಲಶಾಲಿಯೇ ಸರಿ. ಆ ಪೌರುಷ-ದ್ಯೋತಕವಾಗಿ ಈ ಪದ. ಪುರುಷ-ಪ್ರಯತ್ನವನ್ನು ಉತ್ಕಟವಾಗಿ ಮಾಡಿರುವವರ ಬಗೆಯ ಧ್ವನಿಯಲ್ಲಿದೆ.

ಈ ಅಮನಸ್ಕ-ಸ್ಥಿತಿಯನ್ನು ತಲುಪಿದವರು ಸಾಧಾರಣ-ಯೋಗಿಗಳಲ್ಲ, ಮುನಿಪುಂಗವರೇ ಆಗುವರು - ಎಂಬ ಅಭಿಪ್ರಾಯವನ್ನೂ ಇಲ್ಲಿ ಗಮನಿಸಬಹುದು.


ನಿಃಶ್ವಾಸ-ಲೋಪೈರ್ ನಿಭೃತೈಶ್ ಶರೀರೈಃ

   ನೇತ್ರಾಂಽಬುಜೈರ್ ಅರ್ಧ-ನಿಮೀಲಿತೈಶ್ ಚ |

ಆವಿರ್ಭವಂತೀಮ್ ಅಮನಸ್ಕ-ಮುದ್ರಾಂ

   ಆಲೋಕಯಾಮೋ ಮುನಿ-ಪುಂಗವಾನಾಮ್ || ೨೧||

ಸೂಚನೆ : 04/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.