Sunday, September 19, 2021

ಶ್ರೀರಾಮನ ಗುಣಗಳು - 23 ಸರ್ವ-ಜನ-ಪ್ರಿಯ - ಶ್ರೀರಾಮ (Sriramana Gunagalu - 23 Sarvajana Priya- Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)
ಶ್ರೀರಾಮನು ಎಲ್ಲಾ ಜನರಿಗೂ ಪ್ರೀತಿಪಾತ್ರನಾಗಿದ್ದ. ಇಷ್ಟವಾದುದನ್ನೇ ಪ್ರಿಯ ಎನ್ನುತ್ತಾರೆ. 'ಸರ್ವಜನಪ್ರಿಯ' ಎಂಬ ಶಬ್ದವನ್ನು ಎರಡು ರೀತಿಯಲ್ಲಿ ಅರ್ಥ ಮಾಡಬಹುದು. ಎಲ್ಲ ಜನರಿಗೂ ರಾಮನು ಪ್ರಿಯನಾಗಿದ್ದ ಎಂಬುದು ಒಂದು ಅರ್ಥ. ಎಲ್ಲ ಜನರನ್ನು ರಾಮನು ಪ್ರೀತಿಸುತ್ತಿದ್ದ ಎಂಬುದು ಇನ್ನೊಂದು ಅರ್ಥ. ಪ್ರೀತಿ ಎಂಬುದು ದ್ವಿ- ನಿಷ್ಠವಾದುದು. ಒಂದು ಕಡೆಯಿಂದ ಮಾತ್ರ ಈ ಪ್ರೀತಿಗೆ ಅವಕಾಶವಿರುವುದಿಲ್ಲ. ಪ್ರಿಯವೆಂಬುದು ಕೆಲವು ಕಾಲ ಮತ್ತು ದೇಶಕ್ಕೆ ಅನುಗುಣವಾಗಿ ಭಿನ್ನವಾಗುತ್ತದೆ. ಒಂದು ಕಾಲಕ್ಕೆ ಪ್ರಿಯನಾದವನು ಇನ್ನೊಂದು ಕಾಲಕ್ಕೆ ಪ್ರಿಯವಾಗಬೇಕೆಂದಿಲ್ಲ. ಒಂದು ದೇಶಕ್ಕೆ ಪ್ರಿಯನಾದವನು ಇನ್ನೊಂದು ದೇಶಕ್ಕೆ ಪ್ರಿಯವಾಗಬೇಕೆಂದಿಲ್ಲ. ಕೆಲವರಿಗೆ ಪ್ರಿಯನಾದವನು ಎಲ್ಲರಿಗೂ ಪ್ರಿಯನಾಗಬೇಕೆಂದಿಲ್ಲ. ಯಾರು ಎಲ್ಲಾ ಕಾಲಕ್ಕೂ, ಎಲ್ಲಾ ದೇಶಕ್ಕೂ ಮತ್ತು ಎಲ್ಲ ಬಗೆಯ ಜನರಿಗೂ ಒಪ್ಪುವಂತೆ ಇರುತ್ತಾನೋ ಅಂತಹವನು ಸರ್ವಜನಪ್ರಿಯನಾಗುತ್ತಾನೆ. ಶ್ರೀರಾಮನು ಸಮಸ್ತವಿಧವಾಗಿಯೂ ಸರ್ವಪ್ರಿಯನಾಗಿದ್ದ ಎಂಬುದು ಅವನ ಸರ್ವಜನಪ್ರಿಯತೆಗೆ ಸಾಕ್ಷಿ.

ಹಾಗಾದರೆ ಶ್ರೀರಾಮನು ಯಾವ ರೀತಿಯಲ್ಲಿ ಪ್ರಿಯನಾಗಿದ್ದ? ಅವನಿಗೆ ಇಷ್ಟವಾಗದ ಜನರು ಇರಲಿಲ್ಲವೇ? ಶತ್ರುಗಳೂ ಯಾರೂ ಇರಲಿಲ್ಲವೇ? ರಾವಣ, ಕುಂಭಕರ್ಣ ಮೊದಲಾದ ರಾಕ್ಷಸರೂ ಅವನನ್ನೂ ಪ್ರೀತಿಸುತ್ತಿದ್ದರೇ? ಇತ್ಯಾದಿ ಸಂಶಯಗಳು ಬರುತ್ತವೆ. ಅವನ ರಾಜ್ಯದಲ್ಲಿ ಅವನನ್ನು ಪ್ರೀತಿ ಮಾಡದವರು ಯಾರೂ ಇರಲಿಲ್ಲ ಎಂದರ್ಥವೇ ಹೊರತೂ ರಾವಣಾದಿಗಳೂ ಪ್ರೀತಿಸುತ್ತಿದ್ದರು ಎಂದರ್ಥವಲ್ಲ. ಎಂದೆಂದಿಗೂ ಒಬ್ಬ ವ್ಯಕ್ತಿಯನ್ನು ಇಷ್ಟಪಟ್ಟರೆ ಆತನು ಪ್ರಿಯನಾಗುತ್ತಾನೆ. ಸದಾ ಅವನನ್ನೇ ಮನಸ್ಸಿನಲ್ಲಿ ಚಿಂತಿಸುತ್ತಾನೆ. ಅಥವಾ ಅವನನ್ನೇ ಸರ್ವಸ್ವವಾಗಿ ಭಾವಿಸುತ್ತಾನೆ. ಪತ್ನಿಯಾದ ಸೀತೆ, ತಾಯಂದಿರಾದ ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿ, ತಮ್ಮಂದಿರು ಮತ್ತು ಅವನ ರಾಜ್ಯದಲ್ಲಿನ ಜನರೆಲ್ಲರೂ ಅವನನ್ನೇ ಸರ್ವಸ್ವವಾಗಿ ಭಾವಿಸುತ್ತಾ ಅವರೆಲ್ಲರ ಪ್ರೀತಿಪಾತ್ರನಾಗಿದ್ದ ಶ್ರೀರಾಮ. ರಾವಣಾದಿಗಳಾದರೋ, ನಿರಂತರವಾಗಿ ಅವನನ್ನೇ ಮನಸ್ಸಿನಲ್ಲಿ ಶತ್ರುವಾಗಿ ಭಾವಿಸುತ್ತಿದ್ದರು. ಒಂದು ಕ್ಷಣವೂ ಅವನ ವಿಚಾರ ಅವರಲ್ಲಿ ಸುಳಿಯದೇ ಇರುತ್ತಿರಲಿಲ್ಲ. ಶತ್ರುವಾಗಿ ಭಗವಂತನನ್ನು ಅನವರತ ಭಾವಿಸಿದರೂ ಅಂತವರು ಕೊನೆಯಲ್ಲಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ, ಅವನ ದಿವ್ಯಸಾನ್ನಿಧ್ಯವನ್ನು ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಶ್ರೀರಾಮನು ವ್ಯಕ್ತಿಯನ್ನು ದ್ವೇಷಿಸುತ್ತಿರಲಿಲ್ಲ. ಅವರಲ್ಲಿದ್ದ ದುರ್ಗುಣವನ್ನು ಮಾತ್ರ ದ್ವೇಷಿಸುತ್ತಿದ್ದ. ಯುದ್ಧದ ಕೊನೆಯಲ್ಲಿ ಶ್ರೀರಾಮನು ರಾವಣನನ್ನು ಜಯಿಸುತ್ತಾನೆ. ರಾವಣನ ಹನನವೂ ಆಗುತ್ತದೆ. ಆಗ ವಿಭೀಷಣನನ್ನು ಶ್ರೀರಾಮನು ಕರೆಯುತ್ತಾನೆ. 'ಮರಣಾಂತಾನಿ ವೈರಾಣಿ' ಶತ್ರುತ್ವವು ಮರಣ ಹೊಂದುವ ತನಕ ಮಾತ್ರ ಎಂದು ಹೇಳಿ, ರಾವಣನ ಉತ್ತರಕ್ರಿಯೆಯನ್ನು ಸ್ವತಃ ರಾಮನೇ ನಿಂತು ಮಾಡಿಸುತ್ತಾನೆ. ವಾಲಿಯ ನಿಗ್ರಹದಲ್ಲೂ ಇದೇ ರೀತಿಯಾದ ಶ್ರೀರಾಮನ ಪ್ರೀತಿಯನ್ನು ಕಾಣಬಹುದು. ವಾಲಿಯ ಸಂಹಾರದ ಅನಂತರ ಸುಗ್ರೀವನಿಗೆ ವಾಲಿಯ ಅಂತ್ಯಕ್ರಿಯೆಯನ್ನು ನಡೆಸಲು ಸೂಚಿಸುತ್ತಾನೆ. ಆಗಲೂ ಶ್ರೀರಾಮನಿಂದ ಬರುವ ಮಾತು- 'ಮರಣಾಂತಾನಿ ವೈರಾಣಿ' ಎಂದೇ. ಶ್ರೀರಾಮನ ದ್ವೇಷವು ಕೇವಲ ವ್ಯಕ್ತಿಗತವಾಗಿರಲಿಲ್ಲ; ಅದು ಅವರಲ್ಲಿರುವ ದುಷ್ಟಸ್ವಭಾವದ ವಿರುದ್ಧವಾಗಿತ್ತು. ಈ ಕಾರಣಕ್ಕೆ ರಾಮನನ್ನು ಎಲ್ಲಾ ಬಗೆಯ ಜನರು ಇಷ್ಟಪಡುತ್ತಿದ್ದರು. ಇಂತಹ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಮಾನವೀಯ ಗುಣವನ್ನು ಶ್ರೀರಾಮನು ಹೊಂದಿದ್ದ.

ಸೂಚನೆ : 19/9/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.