ರಾಮನು ಕಾಡಿಗೆ ಹೋಗದಂತೆ ಮಾಡಲು ದಶರಥನು ಕಡೆಯದಾಗಿ ಅವನಿಗೆ 'ಭವ ರಾಜಾ ನಿಗೃಹ್ಯ ಮಾಂ।' (ನನ್ನನ್ನು ನಿಗ್ರಹಿಸಿ ನೀನು ರಾಜನಾಗು) ಎಂದು ನುಡಿಯುತ್ತಾನೆ. ಅದು ಹತಾಶನಾದ ರಾಜನ ಕೊನೆಯ ಪ್ರಯತ್ನ. ಆದರೆ ರಾಮನು ಬಲ ಪ್ರಯೋಗ ಮಾಡಿ ತಂದೆಯಿಂದ ರಾಜ್ಯವನ್ನು ವಶಪಡಿಸಿಕೊಳ್ಳುವಂತಹ ಮಗನಲ್ಲ. ಅವನು ತನಗುಚಿತವಾದ ಗಾಂಭೀರ್ಯದಿಂದ 'ಭವಾನ್ ವರ್ಷಸಹಸ್ರಾಯ ಪೃಥಿವ್ಯಾಃ ಪತಿರುತ್ತಮಃ|' (ಸಾವಿರ ವರ್ಷಗಳಿಗೂ ನೀನೇ ಪೃಥಿವಿಗೆ ಉತ್ತಮನಾದ ಪತಿ) ಎಂದು ಉತ್ತರಿಸುತ್ತಾನೆ.
ಇದು ರಾಮನ ಸಮಾಚಾರ. ಲೋಕದಲ್ಲಿ ರಾಜರುಗಳಿಗೆ ಶತ್ರುಗಳಿಂದ ಎಷ್ಟು ಭಯವಿರುತ್ತದೆಯೋ, ಮಹತ್ವಾಕಾಂಕ್ಷಿಗಳಾದ ಮಕ್ಕಳು, ಭ್ರಾತೃಗಳು ಮತ್ತು ಬಂಧುಗಳಿಂದ ಅಷ್ಟೇ ಭಯವಿದ್ದಿರುತ್ತದೆ. ಅದಕ್ಕೋಸ್ಕರ ಕೊಲೆ, ರಾಷ್ಟ್ರನಾಶ ಇತ್ಯಾದಿಗಳು ಸಾಕಷ್ಟು ನಡೆದಿರುತ್ತವೆ. ಈಗಲೂ ನಡೆಯುತ್ತಿವೆ. ಆದರೆ ಪ್ರಜಾಪ್ರಭುತ್ವಕ್ಕೆ ವ್ಯಾಪಕವಾಗಿ ಮನ್ನಣೆ ದೊರಕಿರುವುದರಿಂದ ಇಂದು ಬಹಳ ದೇಶಗಳಲ್ಲಿ ಅಧಿಕಾರಕ್ಕೆ ಬರುವ ವಿಧಾನವು ಬದಲಾವಣೆಯಾಗಿರುತ್ತದೆ.
ಪ್ರಜಾಪ್ರಭುತ್ವದ ತತ್ತ್ವವನ್ನು ಅನುಸರಿಸಿರುವ ದೇಶಗಳಲ್ಲಿ ನಮ್ಮದೂ ಒಂದು. ಅದರ ಪ್ರಕಾರ ರಾಜ್ಯದ ಚುಕ್ಕಾಣಿ ಹಿಡಿಯುವ ನಾಯಕರು ಚುನಾವಣೆಯಲ್ಲಿ ವಿಜಯಿಗಳಾಗುವ ವಿಧಾಯಕರಿಂದ ಆರಿಸಲ್ಪಡುತ್ತಾರೆ. ಆದುದರಿಂದ ಅವರನ್ನು ಆರಂಭದಿಂದ ಕೊನೆಯವರೆಗೆ ತಮ್ಮ ಕಡೆ ಇರಿಸಿಕೊಳ್ಳುವ ಕಷ್ಟಸಾಧ್ಯವಾದ ಜವಾಬ್ದಾರಿ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳ ಉಡಿಯಲ್ಲಿ ಬೀಳುತ್ತದೆ. ಅವರೇನಾದರೂ ಪ್ರತಿಕೂಲರಾದರೆ ಮಂತ್ರಿ ಮಹೋದಯರು ಬುಡ ಕಡಿದ ಮರದಂತೆ ಉರುಳಿ ಬೀಳುತ್ತಾರೆ. ವಿಧಾಯಕರು 'ಮೂರು ದೋಸೆ ಕೊಟ್ಟರೆ ಅತ್ತೆಯ ಕಡೆ, ಆರು ದೋಸೆ ಕೊಟ್ಟರೆ ಸೊಸೆಯ ಕಡೆ' ಎಂಬ ನೀತಿಯನ್ನು ಅನುಸರಿಸುವರು. ತಮ್ಮ ಮತಗಳಿಗೆ ಪರ್ಯಾಪ್ತವಾದ ಬೆಲೆ ಅಥವಾ ಲಾಭ ದೊರಕುವವರೆಗೆ ಅವರು ಅನುಕೂಲವಾಗಿರುತ್ತಾರೆ. ಜೊತೆಗೆ ಚುನಾವಣೆಯಲ್ಲಿ ಗೆದ್ದಿರುವುದರಿಂದ ಅವರೆಲ್ಲರೂ ನಾಯಕರಾಗಲು ಅರ್ಹರಾದವರೇ! ಎಲ್ಲರೂ ಮಹಾತ್ವಾಕಾಂಕ್ಷಿಗಳೇ! ಅವರಲ್ಲಿ ಯಾರು ಕುಟಿಲ ತಂತ್ರ ನಿಷ್ಣಾತರೋ, ಯಾರ ಬಳಿ ಬಹಳ ಧನವಿರುತ್ತದೆಯೋ ಅಥವಾ ಯಾರಿಗೆ ಧನಿಕರ ಬೆಂಬಲವಿರುತ್ತದೆಯೋ ಅವರು ಸಾಕಷ್ಟು ಸಂಖ್ಯೆಯಲ್ಲಿ ವಿಧಾಯಕರನ್ನು ಖರೀದಿಸಿ ಅಧಿಕಾರಕ್ಕೆ ಬರಬಹುದು. ವಾಸ್ತವದಲ್ಲಿ ಒಬ್ಬರು ಪ್ರಧಾನ ಮಂತ್ರಿಯೋ ಮುಖ್ಯಮಂತ್ರಿಯೋ ಆದರೆ ಆ ಕ್ಷಣದಿಂದ ಅವರನ್ನು ಉರುಳಿಸಲು ಒಂದು ಭಿನ್ನಮತೀಯರ ಗುಂಪು ತಯಾರಾಗುತ್ತದೆ. ಇದು 50 ವರ್ಷದ ಪ್ರಜಾಪ್ರಭುತ್ವದ ಚರಿತ್ರೆ. ಒಳ್ಳೆಯ ನಾಯಕರಿಲ್ಲದಿರುವುದರಿಂದ ಇದು ಇತ್ತೀಚೆಗೆ ದೊಡ್ಡ ಪ್ರಮಾಣವನ್ನು ತಾಳಿರುತ್ತದೆ. ಈ ಲೇಖನವನ್ನು ಬರೆಯುತ್ತಿರುವಾಗ ಗುಜರಾತಿನಲ್ಲಿ ಅಂತಹದೊಂದು ಕಿರುನಾಟಕ ನಡೆದುದನ್ನು ಪತ್ರಿಕೆಯಲ್ಲಿ ಓದಿದೆವು. ಈ ವಿಧಾಯಕರುಗಳಿಗೆ ಉತ್ತಮವಾದ ರಾಜ್ಯಶಾಸ್ತ್ರದ ಮೂಲತತ್ವಗಳ ವಿಷಯದಲ್ಲಾಗಲಿ, ಅದರ ಆದರ್ಶಗಳ ವಿಷಯದಲ್ಲಾಗಲೀ ಆಳವಾದ ನಂಬಿಕೆ ಇರುವಂತೆ ಕಾಣುವುದಿಲ್ಲ. ಅವರ ದಕ್ಷತೆ ಮತ್ತು ಪ್ರಾಮಾಣಿಕತೆಗಳು ಸಂದಿಗ್ಧವಾಗಿಯೇ ಇರುತ್ತವೆ. ಸ್ವಹಿತದಲ್ಲಿ ಅವರ ಆಸಕ್ತಿ ಬಹಳ. ಅವರ ಅಲ್ಪಕಾಲಾವಧಿ ಮುಗಿದ ನಂತರ ಅವರಿಗೆ ಸಿಗುವುದು ಭ್ರಷ್ಟ, ಅನರ್ಹ, ಸ್ವಾರ್ಥಿ ಮುಂತಾದ ಬಿರುದುಗಳು. ಭೇದನೀತಿಯನ್ನು ಅವಲಂಬಿಸಿಯೇ ಅವರೆಲ್ಲರೂ ಮುಂದಕ್ಕೆ ಬರುತ್ತಾರೆ. ಅದರ ದೆಸೆಯಿಂದ ಸಮಾಜವು ಛಿದ್ರ ಛಿದ್ರವಾಗಿ ಒಡೆಯುತ್ತದೆ. ಅವರಲ್ಲಿ ನ್ಯಾಯ, ಸತ್ಯ, ಧರ್ಮ ಮುಂತಾದವುಗಳ ಮೇಲೆ ಆಧಾರಿತವಾದ ನೀತಿಗಳು ಇಲ್ಲವೇ ಇಲ್ಲ ಎಂದರೆ ತಪ್ಪಾಗದು. ನಮ್ಮ ಪೂರ್ವಿಕರು ಈಗಿರುವುದಕ್ಕಿಂತ ಬೇರೆಯಾದ ಮತ್ತು ಪ್ರಶಸ್ತವಾದ ಆದರ್ಶಗಳ ಮೇಲೆ ವಿರಚಿತವಾದ ರಾಜ್ಯ ಪದ್ಧತಿಯನ್ನು ನಿರ್ಮಿಸಿಕೊಂಡಿದ್ದರು ಎಂಬುದು ನಮ್ಮ ದೇಶದ ಕಾವ್ಯೇತಿಹಾಸಗಳಿಂದ ತಿಳಿದು ಬರುತ್ತದೆ. ಅದರ ಉತ್ತಮವಾದ ಆದರ್ಶಗಳನ್ನು ಎತ್ತಿ ಹಿಡಿಯುವ ಒಂದು ಪ್ರಸಂಗವನ್ನು ಆದಿಕಾವ್ಯದಿಂದ ಸ್ಮರಿಸಿಕೊಳ್ಳುತ್ತೇವೆ.
ದಶರಥನು ಜ್ಯೇಷ್ಠನೂ ರಾಜಗುಣಸಂಪನ್ನನೂ ಆದ ರಾಮನನ್ನು ಯುವರಾಜನನ್ನಾಗಿ ಮಾಡಲು ಇಚ್ಛಿಸುತ್ತಾನೆ. ಆದರೆ ಮಂಥರೆಯ ದುರ್ಬೋಧನೆಯಿಂದ ಕೈಕೇಯಿಯ ಬುದ್ದಿಯಲ್ಲಿ ಭೇದವುಂಟಾಗುತ್ತದೆ. ಅವಳು ರಾಜನು ಯಾವುದೋ ಒಂದು ಸಂದರ್ಭದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಮುಂದಿಟ್ಟುಕೊಂಡು ರಾಮನನ್ನು 14 ವರ್ಷಗಳ ಕಾಲ ದಂಡಕಾರಣ್ಯಕ್ಕೆ ಕಳುಹಿಸಬೇಕೆಂದೂ ಮತ್ತು ತನ್ನ ಮಗನಾದ ಭರತನಿಗೆ ಅಭಿಷೇಕ ಮಾಡಬೇಕೆಂದೂ ಪತಿಯನ್ನು ನಿರ್ಬಂಧ ಪಡಿಸುತ್ತಾಳೆ. ಸತ್ಯವಾಕ್ಯನಾದ ರಾಜನಿಗೆ ವರಗಳನ್ನು ಇಲ್ಲವೆನ್ನಲಾಗುವುದಿಲ್ಲ. ತಂದೆಯ ಮಾತನ್ನು ಪಾಲಿಸಲು ರಾಮನು ಸೀತಾಲಕ್ಷ್ಮಣರೊಡನೆ ಕಾಡಿಗೆ ಹೋಗುತ್ತಾನೆ. ತಾತನ ಮನೆಗೆ ಹೋಗಿದ್ದ ಭರತನನ್ನು ಮಂತ್ರಿ ಪುರೋಹಿತರು ಅಯೋಧ್ಯೆಗೆ ಕರೆಯಿಸುತ್ತಾರೆ. ಕೈಕೇಯಿಯು ಅವನ ಅಭ್ಯುದಯವನ್ನು ಬಯಸಿ ತಾನು ಮಾಡಿದ ಕೆಲಸಗಳನ್ನು ಹೇಳಿ, ರಾಜನಾಗಿ ಅಭಿಷೇಕ ಮಾಡಿಕೊಳ್ಳುವಂತೆ ಮಗನಿಗೆ ಹೇಳುತ್ತಾಳೆ. ತನ್ನ ಕಾರಣದಿಂದ ಉಂಟಾದ ರಾಮನ ವನವಾಸ ಮತ್ತು ದಶರಥನ ಮರಣಗಳಿಂದ ಭರತನು ಅತ್ಯಂತ ದುಃಖಿತನಾಗುತ್ತಾನೆ. ಅಭಿಷೇಕವನ್ನು ನಿರಾಕರಿಸುವುದು ಮಾತ್ರವಲ್ಲದೆ ಅವನು ಕಾಡಿಗೆ ಹೋಗಿ ರಾಮನನ್ನು ಹಿಂದಕ್ಕೆ ಕರೆತಂದು ಅವನಿಗೆ ಅಭಿಷೇಕವನ್ನು ಮಾಡುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಬೇರೆಯಾರಾದರೂ ಆಗಿದ್ದರೆ ಪ್ರಯತ್ನವಿಲ್ಲದೆ ಬಂದ ರಾಜ್ಯವನ್ನು ಬೇಡವೆನ್ನುತ್ತಿರಲಿಲ್ಲ. ಅವನು ರಾಜನಾಗುವುದಕ್ಕೆ ಯಾರ ವಿರೋಧವೂ ಇರಲಿಲ್ಲ. ಅವನು ಒಂದು ವೇಳೆ ಸಿಂಹಾಸನವನ್ನು ಹತ್ತಿದ್ದರೆ ತುಂಬ ಯಶಸ್ವಿಯಾದ ರಾಜನಾಗುತ್ತಿದ್ದ ಎಂಬುದರಲ್ಲಿ ಸಂದೇಹವಿಲ್ಲ. ರಾಮನು ವಿಷ್ಣುವಿನ ಅಂಶವಾಗಿದ್ದರೆ, ಭರತನು ಚತುರ್ಧಾಂಶ. ಅವನ ವಿಷಯದಲ್ಲಿ ರಾಮನೇ ತುಂಬ ಪ್ರಶಂಸೆಯ ಮಾತುಗಳನ್ನು ಆಡುತ್ತಾನೆ. ತನ್ನ ಜೊತೆಯಲ್ಲಿ ವನಕ್ಕೆ ಬರುತ್ತೇವೆಂದು ಹೊರಟ ಅಯೋಧ್ಯೆಯ ಜನರಿಗೆ ಅವನು
ಯಾ ಪ್ರೀತಿರ್ಬಹುಮಾನಶ್ಚ ಮಯ್ಯಯೋಧ್ಯಾನಿವಾಸಿನಾಂ|
ಮತ್ಪ್ರಿಯಾರ್ಥಂ ವಿಶೇಷೇಣ ಭರತೇ ಸಾ ನಿವೇಶ್ಯತಾಂ।
ಸ ಹಿ ಕಲ್ಯಾಣಚಾರಿತ್ರಃ ಕೈಕೇಯ್ಯಾನಂದವರ್ಧನ:।
ಕರಿಷ್ಯತಿ ಯಥಾವದ್ವಃ ಪ್ರಿಯಾಣಿ ಚ ಹಿತಾನಿ ಚ।
ಜ್ಞಾನವೃದ್ಧೋ ವಯೋ ಬಾಲೋ ಮೃದುರ್ವೀರ್ಯಗುಣಾನ್ವಿತಃ।
ಅನುರೂಪ: ಸ ವೋ ಭರ್ತಾ ಭವಿಷ್ಯತಿ ಭಯಾಪಹ:।
ಸ ಹಿ ರಾಜಗುಣೈರ್ಯುಕ್ತ: ಯುವರಾಜಸ್ಸಮೀಕ್ಷಿತಃ।
(ಅಯೋಧ್ಯಾನಿವಾಸಿಗಳಾದ ನಿಮ್ಮಲ್ಲಿ ನನ್ನ ಬಗ್ಗೆ ಯಾವ ಪ್ರೀತಿ ಮತ್ತು ಬಹುಮಾನಗಳು ಇರುತ್ತವೆಯೋ ಅವುಗಳನ್ನು ನನ್ನ ಪ್ರೀತಿಗೋಸ್ಕರ ವಿಶೇಷವಾಗಿ ಭರತನಲ್ಲಿ ಇರಿಸಿರಿ. ಕೈಕೇಯಿಯ ಆನಂದವರ್ಧನನಾದ ಅವನು ಕಲ್ಯಾಣ ಚಾರಿತ್ರನಾಗಿರುತ್ತಾನೆ. ನಿಮಗೆ ಪ್ರಿಯವೂ ಹಿತವೂ ಆದ ಎಲ್ಲ ಕೆಲಸಗಳನ್ನೂ ಅವನು ಯಥಾವತ್ತಾಗಿ ಮಾಡುತ್ತಾನೆ. ಅವನು ವಯಸ್ಸಿನಲ್ಲಿ ಚಿಕ್ಕವನಾಗಿದ್ದರೂ ಜ್ಞಾನದಲ್ಲಿ ವೃದ್ಧನಾಗಿರುತ್ತಾನೆ. ಅವನು ಮೃದುವೂ ವೀರ್ಯಗುಣಾನ್ವಿತನೂ ಆಗಿರುತ್ತಾನೆ. ಅವನು ಎಲ್ಲ ರಾಜಗುಣಗಳಿಂದಲೂ ಕೂಡಿರುವುದರಿಂದಲೇ ಅವನು ಯುವರಾಜನಾಗಿ ಆರಿಸಲ್ಪಟ್ಟಿರುತ್ತಾನೆ) ಎಂದು ನುಡಿಯುತ್ತಾನೆ. ಭರತನಲ್ಲಿ ತಾನು ನೋಡಿದ್ದ ರಾಜಗುಣಗಳನ್ನೇ ರಾಮನು ಕೊಂಡಾಡುತ್ತಾನೆ. ರಾಮನ ವನವಾಸ ಕಾಲದಲ್ಲಿ ಭರತನು ಮಾಡುವ ಆಳ್ವಿಕೆಯು ರಾಮನ ಪ್ರಶಂಸೆಗಳನ್ನು ಸಂಪೂರ್ಣವಾಗಿ ಸಮರ್ಥಿಸುತ್ತದೆ. ರಾಜಭೋಗಗಳೆಲ್ಲವನ್ನೂ ತ್ಯಾಗ ಮಾಡಿ ಅವನು ವಲ್ಕಲ ಮತ್ತು ಜಟೆಗಳನ್ನು ಧರಿಸಿ ಮುನಿವೇಷಧರನಾಗಿ ಹದಿನಾಲ್ಕು ವರ್ಷಗಳ ಕಾಲ ರಾಜ್ಯವನ್ನಾಳುತ್ತಾನೆ. ವನವಾಸವನ್ನು ಪೂರೈಸಿ ಹಿಂದಿರುಗಿದ ರಾಮನಿಗೆ ಅವನು ಅವೇಕ್ಷತಾಂ ಭವಾನ್ ಕೋಶಂ ಕೋಷ್ಠಾಗಾರಂ ಪುರಂ ಬಲಂ। ಭವತಸ್ತೇಜಸಾ ಸಾರ್ಧಂ ಕೃತಂ ದಶಗುಣಂ ಮಯಾ। (ನೀನು ಬೊಕ್ಕಸವನ್ನೂ, ಕೋಷ್ಠಾಗಾರವನ್ನೂ, ಪುರವನ್ನೂ ಮತ್ತು ಸೈನ್ಯವನ್ನೂ ನೋಡು. ನಿನ್ನ ತೇಜಸ್ಸಿನ ಸಹಾಯದಿಂದ ನಾನು ಎಲ್ಲವನ್ನೂ ಹತ್ತರಷ್ಟು ಅಭಿವೃದ್ಧಿಮಾಡಿರುತ್ತೇನೆ.) ಎಂದು ನಿವೇದಿಸುತ್ತಾನೆ. ಮಾಡಿದ ಕೆಲಸದಲ್ಲಿ ತನ್ನದೇನೂ ಇಲ್ಲವೋ ಎಂಬಂತೆ ಅವನು ನುಡಿದರೂ ಅದು ಅವನ ಅದ್ವಿತೀಯವಾದ ಸಾಮರ್ಥ್ಯದ ಫಲ ಎಂಬುದನ್ನು ಯಾರೂ ಇಲ್ಲವೆನ್ನಲಾಗುವುದಿಲ್ಲ. ದೊಡ್ಡ ಸಾಮರ್ಥ್ಯದ ಜೊತೆಗೆ ವಿನಯವನ್ನೂ ಸೇರಿಸಿಕೊಂಡಿದ್ದುದು ಅವನ ಒಂದು ವೈಶಿಷ್ಟ್ಯ. 'ಸ್ವಜಾ ವೈನಯಿಕೀ ಚ ಯಾ। ' (ಅವನಿಗೆ ವಿನಯವು ಸಹಜವಾಗಿದ್ದಿತು.) ರಾಜಕುಮಾರನಾದ ಭರತನೂ ರಾಮಾದಿಗಳಂತೆ ಜನಪ್ರಿಯನಾಗಿದ್ದನು. ಕೈಕೇಯಿಯ ವ್ಯವಹಾರದಿಂದ ಸ್ವಲ್ಪಕಾಲ ಜನರಲ್ಲಿ ಅವನ ಬಗ್ಗೆ ಭೀತಿ ಮತ್ತು ಸಂಶಯಗಳುಂಟಾಗುತ್ತವೆ. ಆದರೆ ಅವನು ಬಹಳ ಅಲ್ಪಕಾಲದಲ್ಲಿ ತನ್ನ ಪರಿಶುದ್ಧವಾದ ಚಾರಿತ್ರ್ಯದಿಂದ ಅವನ್ನು ಹೋಗಲಾಡಿಸಿ ಜನರಲ್ಲಿ ಮೊದಲಿದ್ದುದಕ್ಕಿಂತ ಅಧಿಕವಾದ ಪ್ರೀತಿ ಮತ್ತು ಗೌರವಗಳನ್ನು ಗಳಿಸುತ್ತಾನೆ. ಅವರು ಅವನ್ನು ವ್ಯಕ್ತಪಡಿಸುವ ರೀತಿಯು ಹೃದಯಸ್ಪರ್ಶಿಯಾಗಿರುತ್ತದೆ. ಅವನು ಚಿತ್ರಕೂಟಕ್ಕೆ ಹೋಗಿ ರಾಮನನ್ನು ಹಿಂದಕ್ಕೆ ಕರೆತರುವುದರಲ್ಲಿ ಸಫಲನಾಗದಿದ್ದಾಗ ರಾಮನ ಸ್ಥಾನದಲ್ಲಿ ಅವನ ಪಾದುಕೆಗಳನ್ನು ಪಡೆದು ಅಯೋಧ್ಯೆಗೆ ಹಿಂದಿರುಗುತ್ತಾನೆ. ಅಲ್ಲಿ ತಾಯಂದಿರನ್ನಿರಿಸಿ ರಾಮನನ್ನು ಪ್ರತೀಕ್ಷೆ ಮಾಡಲು ನಂದಿಗ್ರಾಮಕ್ಕೆ ಹೋಗುತ್ತಾನೆ. ಅವನ ಜೊತೆಯಲ್ಲಿ ವಸಿಷ್ಠಾದಿ ಗುರುಗಳು ಹಾಗೂ ಮಂತ್ರಿಪುರೋಹಿತರೂ ಹೋಗುತ್ತಾರೆ. ಅಷ್ಟೇ ಅಲ್ಲದೆ ಗಜ, ರಥ ಮತ್ತು ಅಶ್ವಗಳಿಂದ ತುಂಬಿದ ಸೈನ್ಯವೂ ಮತ್ತು ಎಲ್ಲ ಪುರವಾಸಿಗಳೂ ಹೋಗುತ್ತಾರೆ.
ಬಲಂ ಚ ತದನಾಹೂತಂ ಗಜಾಶ್ವರಥಸಂಕುಲಂ।
ಪ್ರಯಯೌ ಭರತೇ ಯಾತೇ ಸರ್ವೇಚ ಪುರವಾಸಿನಃ |
ಅನಾಹೂತಂ ಎಂದರೆ ಕರೆಯದೆಯೇ ಅವರು ಹೋದರು ಎಂದು ಕವಿಯು ಹೇಳುವುದು ಗಮನಾರ್ಹವಾಗಿರುತ್ತದೆ. ಒಬ್ಬ ಪರಿಶುದ್ಧಾತ್ಮನ ಆಚರಣೆಯಲ್ಲಿ ಹೀಗೆಂದು ವರ್ಣಿಸಲಾಗದ ಶಕ್ತಿಯಿರುತ್ತದೆ. ಅದು ಎಲ್ಲರ ಮೇಲೆಯೂ ಪ್ರಭಾವವನ್ನು ಬೀರಿ ಅಯಸ್ಕಾಂತದಂತೆ ಎಲ್ಲರನ್ನೂ ಸೆಳೆದುಕೊಂಡು ಹೋಗುತ್ತದೆ ಎಂಬುದಕ್ಕೆ ಇದು ಒಳ್ಳೆಯ ನಿದರ್ಶನ.
ರಾಮನು ವನವಾಸದಿಂದ ಹಿಂದಿರುಗುತ್ತಿರುವಾಗ ದಾರಿಯಲ್ಲಿ ಭರದ್ವಾಜಾಶ್ರಮದಲ್ಲಿ ಸ್ವಲ್ಪಕಾಲ ಇಳಿಯುತ್ತಾನೆ. ಅಲ್ಲಿಂದ ತಾನು ಬರುತ್ತಿರುವ
ಸಮಾಚಾರವನ್ನು ತಿಳಿಸಲು ಹಾಗೂ ಭರತನೇನಾದರೂ ರಾಜ್ಯಾಕಾಂಕ್ಷಿಯಾಗಿದ್ದಾನೆಯೇ ಎಂಬುದನ್ನು ತಿಳಿದುಬರಲು ಹನುಮಂತನನ್ನು ಮುಂದಾಗಿ ಕಳುಹಿಸುತ್ತಾನೆ. ನಂದಿಗ್ರಾಮದಲ್ಲಿ ಆಂಜನೇಯನು ನೋಡುವ ಭರತನನ್ನು ಕವಿಯು ಈ ರೀತಿ ವರ್ಣಿಸುತ್ತಾರೆ-
ಪಾದುಕೇ ತೇ ಪುರಸ್ಕೃತ್ಯ ಶಾಸಂತಂ ವೈ ವಸುಂಧರಾಂ।
ಚಾತುವ್ವರ್ಣಸ್ಯ ಲೋಕಸ್ಯಾತ್ರಾತಾರಂ ಸತೋ ಭಯಾತ್॥
ಉಪಸ್ಥಿತಮಮಾತ್ಯೈಶ್ಚ ಶುಚಿಭಿಶ್ಚ ಪುರೋಹಿತೈಃ।
ಬಲಮುಖ್ಯೈಶ್ಚ ಯುಕ್ತೈಶ್ಚ ಕಾಷಾಯಾಂಬರಧಾರಿಭಿಃ॥
ನ ಹಿ ತೇ ರಾಜಪುತ್ರಂ ತಂ ಚೀರಕೃಷ್ಣಾಜಿನಾಂಬರಂ।
ಪರಿಭೋಕ್ತುಂ ವ್ಯವಸ್ಯಂತಿ ಪೌರಾ ವೈ ಧರ್ಮವತ್ಸಲಂ॥
(ಆ ಪಾದುಕೆಗಳನ್ನು ಮುಂದಿಟ್ಟುಕೊಂಡು ವಸುಂಧರೆಯನ್ನು ಆಳುತ್ತಿದ್ದ, ನಾಲ್ಕು ವರ್ಣಗಳಿಂದ ಕೂಡಿದ್ದ ಲೋಕವನ್ನು ಎಲ್ಲ ಕಡೆಗಳಿಂದಲೂ ಭಯದಿಂದ ಕಾಪಾಡುತ್ತಿದ್ದ, ಕಾಷಾಯಾಂಬರಧಾರಿಗಳಾದ ಅಮಾತ್ಯರಿಂದಲೂ, ಶುಚಿಗಳಾದ ಪುರೋಹಿತರಿಂದಲೂ, ಸೇನಾಪತಿಗಳಿಂದಲೂ ಮತ್ತು ಅಧಿಕಾರಿಗಳಿಂದಲೂ ಸೇವಿಸಲ್ಪಡುತ್ತಿದ್ದ ಭರತನನ್ನು ನೋಡಿದನು. ಪೌರರು ಚೀರಕೃಷ್ಣಾಜಿನಾಂಬರನೂ ಧರ್ಮವತ್ಸಲನೂ ಆದ ಅವನನ್ನು ಬಿಟ್ಟು ಭೋಗಗಳನ್ನು ಅನುಭವಿಸಲು ಸಮರ್ಥರಾಗಲಿಲ್ಲ). ತಮ್ಮ ರಾಜಪುತ್ರನ ಶುದ್ಧಭಾವದಿಂದ ಪ್ರಭಾವಿತರಾಗಿ ಜನರು ಅವನನ್ನು ಉಡಿಗೆಯಲ್ಲಿಯೂ ಅನುಸರಿಸುವುದು ಒಂದು ಸೋಜಿಗವೇ ಸರಿ! ಮೇಲಿನ ಸಂಗತಿಗಳಿಂದ ಭರತನದು ಎಷ್ಟು ಸಾಮರ್ಥ್ಯಶಾಲಿಯಾದ ಹಾಗೂ ವಿಶಿಷ್ಟವಾದ ವ್ಯಕ್ತಿತ್ವವೆಂಬುದು ಅವಶ್ಯವಾಗಿ ತಿಳಿದು ಬರುತ್ತದೆ. ತನ್ನ ನೈತಿಕಶಕ್ತಿಯಿಂದ ಎಲ್ಲರನ್ನೂ ಆಳಬಲ್ಲ ಮಹಾನುಭಾವನವನು ಎಂಬುದರಲ್ಲಿ ಸ್ವಲ್ಪವೂ ಸಂಶಯ ಉಳಿಯುವುದಿಲ್ಲ. ಆದುದರಿಂದ ಅವನು ಅನಾಯಾಸವಾಗಿ ಬಂದ ರಾಜ್ಯವನ್ನು ನಿರಾಕರಿಸಲು ಅಸಾಮರ್ಥ್ಯ, ಜನಪ್ರಿಯತೆಯ ಅಭಾವ ಇತ್ಯಾದಿಯಾವುವೂ ಕಾರಣವಾಗುವುದಿಲ್ಲ. ಅವನು ರಾಜ್ಯವನ್ನು ಬಯಸದಿರಲು ಪ್ರಧಾನ ಕಾರಣ ಅವನ ಅಚಲವಾದ ಧರ್ಮನಿಷ್ಠೆ. ರಾಮನಲ್ಲಿ ಹೇಗೋ ಹಾಗೆಯೇ ಭರತನಲ್ಲಿಯೂ ಸಹ ಅವನ ಕುಲಧರ್ಮವು ಅವನ ಮನಸ್ಸನ್ನು ರೂಪಿಸಿರುತ್ತದೆ.ಅದನ್ನು ಹೇಳುವ ಕೆಲವು ವಚನಗಳನ್ನು ಇಲ್ಲಿ ಉಲ್ಲೇಖಿಸುತ್ತೇವೆ.
ಅಸ್ಮಿನ್ ಕುಲೇ ಹಿ ಪೂರ್ವೇಷಾಂ ಜ್ಯೇಷ್ಠೋ ರಾಜ್ಯೇಽಭಿಷಿಚ್ಯತೇ।
ಅಪರೇ ಭ್ರಾತರಸ್ತಸ್ಮಿನ್ ಪ್ರವರ್ತಂತೇ ಸಮಾಹಿತಾಃ ॥
ಜ್ಯೇಷ್ಠಸ್ಯ ರಾಜತಾ ನಿತ್ಯಂ ಉಚಿತಾ ಹಿ ಕುಲಸ್ಯ ನಃ ।
ಕಥಂ ದಶರಥಾಜ್ಜಾತೋ ಭವೇದ್ರಾಜ್ಯಾಪಹಾರಕಃ ॥
(ಪೂರ್ವಕಾಲದಿಂದ ಬಂದ ನಮ್ಮ ರಾಜ್ಯದಲ್ಲಿ ಜ್ಯೇಷ್ಠನು ರಾಜ್ಯದಲ್ಲಿ ಅಭಿಷೇಕಿಸಲ್ಪಡುತ್ತಾನೆ. ಇತರ ಭ್ರಾತೃಗಳು ಅವನಲ್ಲಿ ಮನಸ್ಸಂಯಮದಿಂದ ಕೂಡಿ ಇರುತ್ತಾರೆ; ನಮ್ಮ ಕುಲದಲ್ಲಿ ಜ್ಯೇಷ್ಠನಿಗೇ ಯಾವಾಗಲೂ ರಾಜತೆಯು ಉಚಿತವಾಗಿರುತ್ತದೆ; ದಶರಥನಿಂದ ಹುಟ್ಟಿದವನು ಹೇಗೆ ತಾನೆ ರಾಜ್ಯಾಪಹಾರಕನಾಗಬಲ್ಲನು?) ಜೇಷ್ಠನು ರಾಜನಾಗುವುದು ಇಕ್ಷ್ವಾಕುಗಳ ಕುಲಧರ್ಮ. ಹಾಗೆ ಇದ್ದುದರಿಂದಲೇ ಆ ಕುಲವು ಬಹಳ ದೀರ್ಘಕಾಲ ಮುಂದುವರಿಯಿತು ಎಂಬುದು ಭರತನ ಮಾತಿನಿಂದ ವ್ಯಕ್ತಪಡುತ್ತದೆ. ಆದುದರಿಂದ ರಾಮನು ವನವಾಸದಿಂದ ಬಂದ ಕೂಡಲೇ ರಾಜ್ಯವನ್ನು ಅವನಿಗೆ ಒಪ್ಪಿಸಿ ಭರತನು ಕೃತಕೃತ್ಯನಾಗುತ್ತಾನೆ.
ರಾಮನು ವಿಶೇಷಪುರುಷ. ಭರತನು ಆದಿಕಾವ್ಯದ ಕೊನೆಯಲ್ಲಿ ಒಂದು ಬಲಿಷ್ಠವಾದ ಎತ್ತು ಮತ್ತು ಕರು, ಒಂದು ಕುದುರೆ ಮತ್ತು ಕತ್ತೆ, ಒಂದು ಹಂಸ ಮತ್ತು ಕಾಗೆಗಳ ಉಪಮಾನದಿಂದ ರಾಮನಿಗೂ ತನಗೂ ಇರುವ ಅಂತರವನ್ನು ಹೇಳಿ ರಾಮನ ಉತ್ಕೃಷ್ಟತೆಯನ್ನೂ ಮತ್ತು ತನ್ನ ನಿಕೃಷ್ಟತೆಯನ್ನೂ ವ್ಯಕ್ತಪಡಿಸುತ್ತಾನೆ. ಆದರೆ ಅದೇ ರಾಜ್ಯ ನಿರಾಕರಣೆಗೆ ಕಾರಣವಾಗುವುದಿಲ್ಲ. ರಾಮನು ಅಂತಹ ಉತ್ಕೃಷ್ಟ ಪುರುಷನಾಗದೆ ಸಾಮಾನ್ಯನಾಗಿದ್ದರೂ ಸಹ ಜೇಷ್ಠನೆಂಬ ಕಾರಣದಿಂದ ರಾಜ್ಯವು ಅವನಿಗೇ ಸೇರಬೇಕೆಂದು ಭರತನು ಹೇಳುತ್ತಿದ್ದನೆಂದು ನಿಶ್ಚಿತ. ಏಕೆಂದರೆ ದೀರ್ಘದರ್ಶಿಯಾದ ಅವನು ಕುಲಮರ್ಯಾದೆಯು ಭಗ್ನವಾದರೆ ಅದರಿಂದ ಅವಶ್ಯವಾಗಿ ಉಂಟಾಗುವ ದುಷ್ಪರಿಣಾಮಗಳನ್ನು ಚೆನ್ನಾಗಿ ತಿಳಿದಿರುತ್ತಾನೆ. ಅಂತಃಕಲಹ, ಯುದ್ಧ, ದೇಶಕ್ಕೆ ಪರರ ಪ್ರವೇಶ, ಪ್ರಜಾನಾಶ ಮತ್ತು ಪೀಡೆ, ಮತ್ತು ದೇಶದ ಸಂಪತ್ತುಗಳ ನಾಶಗಳೆಲ್ಲವೂ ಸಂಭವಿಸುತ್ತವೆಂಬುದು ಜ್ಞಾನವೃದ್ಧನಾದ ಅವನಿಗೆ ಗೊತ್ತು. ಆದುದರಿಂದಲೇ ಅವನು ಜ್ಯೇಷ್ಠನ ಅಧಿಕಾರವನ್ನು ಎತ್ತಿ ಹಿಡಿಯುತ್ತಾನೆ. ತನಗೆ ಯೋಗ್ಯತೆಯಿದ್ದರೂ ರಾಜ್ಯವನ್ನು ಸ್ವೀಕರಿಸುವುದಿಲ್ಲ. ಪ್ರತಿಯಾಗಿ ತಾಯಿಯು ಮಾಡಿದ ಕೆಲಸಕ್ಕೆ ಒಂದು ಉಗ್ರವಾದ ಪ್ರಾಯಶ್ಚಿತ್ತವನ್ನೇ ಮಾಡಿಕೊಳ್ಳುತ್ತಾನೆ. ಅಂತಹ ರಾಜಧರ್ಮದ ಆದರ್ಶಗಳಿಗೆ ಪೂರ್ತಿ ಹೊರತಾಗಿರುವ ನಾಯಕರನ್ನೂ ಮತ್ತು ವಿಧಾಯಕರನ್ನೂ ದೊಡ್ಡ ಸಂಖ್ಯೆಯಲ್ಲಿ ಉಂಟು ಮಾಡಿರುವುದೇ ಪ್ರಜಾಪ್ರಭುತ್ವದ 50 ವರ್ಷಗಳ ಮಹಾಸಾಧನೆ. ಅವರಲ್ಲಿ ಪ್ರಾಯಃ ಎಲ್ಲರೂ ಅಸಂಯತಾತ್ಮರು, ಅಧಿಕಾರ ಹಾಗೂ ಧನಲೋಲುಪರೂ ಆಗಿರುವುದರಿಂದಲೇ ವಿಧಾಯಕರು ಆಯ್ಕೆಯಾಗಿ ಬಂದ ಕ್ಷಣದಿಂದಲೇ ಒಂದು ಬಣವನ್ನು ಸೇರಿಕೊಂಡು ನಾಯಕರ ಪದವನ್ನು ಅಪಹರಿಸುವ ಕೆಲಸದಲ್ಲಿ ನಿರತರಾಗುತ್ತಾರೆ. ನಾಯಕರೂ ಅವರಂತೆಯೇ ಇರುವುದರಿಂದ ವಿಧಾಯಕರಿಗೆ ಅವರ ವಿರೋಧವಾಗಿ ಪ್ರಚಾರನಡೆಸಲು ಹೇರಳವಾಗಿ ಅವಕಾಶಗಳು ದೊರಕುತ್ತವೆ. ನಿರಂತರವಾಗಿ ನಡೆಯುವ ಅಂತಹ ಪದಾ (ರಾಜ್ಯ?)ಪಹಾರದ ಪ್ರಯತ್ನಗಳು ಪತ್ರಿಕೆಗಳ ಪ್ರಧಾನ ರಾಜಕೀಯ ಸುದ್ದಿಗಳಾಗಿರುತ್ತವೆ. ವಿಧಾಯಕರಿಗೆ ಶೀಲ, ನೀತಿ, ಸಾಮರ್ಥ್ಯ ಮತ್ತು ಧರ್ಮಾದಿಗಳಾವುವೂ ಆವಶ್ಯಕ ಗುಣಗಳಲ್ಲ. ಅವರು ಒಳ್ಳೆಯ ಮಾತುಗಾರರಾಗಿರಬೇಕು. ಭೇದ ನೀತಿಯಲ್ಲಿ ನುರಿತವರಾಗಿರಬೇಕು. ದ್ರವ್ಯಶಕ್ತಿ ಮತ್ತು ರಟ್ಟೆಯ ಬಲಗಳನ್ನು ತರಬಲ್ಲವರಾದರೆ ಇನ್ನೂ ಚೆನ್ನ. ಇದರ ಪರಿಣಾಮವಾಗಿ ಪಾಪಾತ್ಮರನೇಕರು ದೊಡ್ಡ ಸಂಖ್ಯೆಯಲ್ಲಿ ಶಾಸನಾಂಗಗಳನ್ನು ಪ್ರವೇಶಿಸಿರುತ್ತಾರೆ. ಅವರ ಕರಾಳವಾದ ಛಾಯೆಯು ಜೀವನದ ಎಲ್ಲ ಕ್ಷೇತ್ರಗಳ ಮೇಲೆಯೂ ಬಿದ್ದಿರುತ್ತದೆ. ಬೇರೆ ಬೇರೆ ಐತಿಹಾಸಿಕ ಕಾರಣಗಳಿಂದ ಶುದ್ಧವಾದ ರಾಜಧರ್ಮವನ್ನು ಇಂದು ಪುನಃ ಅಸ್ತಿತ್ವಕ್ಕೆ ತರಲಾಗುವುದಿಲ್ಲ. ಜನರ ಬುದ್ಧಿಗಳಲ್ಲಿ ಉಂಟಾಗಿರುವ ಪರಿವರ್ತನೆಗಳು ಅಷ್ಟು ದೊಡ್ಡವಾಗಿರುತ್ತವೆ. ಆದರೆ ರಾಜಧರ್ಮದ ಉತ್ತಮವಾದ ಮೌಲ್ಯಗಳನ್ನು ಪ್ರಜಾಪ್ರಭುತ್ವದ ಚೌಕಟ್ಟಿಗೆ ಅಳವಡಿಸಿದುದಾದರೆ, ಅವು ಇಂದಿನ ಸಾಂಸ್ಕೃತಿಕ ಪತನವನ್ನು ಸ್ವಲ್ಪಮಟ್ಟಿಗೆ ತಡೆದುಕೊಡಬಹುದು.