Monday, September 6, 2021

ಮದ್ಯಪಾನ-ಧರ್ಮಶಾಸ್ತ್ರದ ದೃಷ್ಟಿ (Madyapaana-DharmaShaastrada Drshti)

ಲೇಖಕರು : ಡಾ|| ಎಸ್.ವಿ. ಚಾಮು



ಛಾಂದೋಗ್ಯಪನಿಷತ್ತಿನಲ್ಲಿ ಅಶ್ವಪತಿ ಎಂಬ ಕೇಕಯರಾಜನು 'ನ ಮೇ ಸ್ತೇನೋ ಜನಪದೇ ನ ಕದರ್ಯೋ ನ ಮದ್ಯಪಃ...' ಎಂದು ಹೆಮ್ಮೆ ಪಡುತ್ತಾನೆ. ಅಂತಹ ಸ್ಥಿತಿಯು ಎಲ್ಲ ಕಾಲಗಳಲ್ಲಿಯೂ ಮತ್ತು ದೇಶದ ಎಲ್ಲ ಭಾಗಗಳಲ್ಲಿಯೂ ಇದ್ದಿತೆಂದು ಹೇಳಲಾಗುವುದಿಲ್ಲ. ಧರ್ಮಶಾಸ್ತ್ರಗಳಿಂದ ನಮ್ಮ ದೇಶದ ಜನರು ಹಲಸಿನ ಹಣ್ಣು, ದ್ರಾಕ್ಷಿ, ಜೇನು, ಖರ್ಜೂರ, ತಾಳೆ, ತೆಂಗು ಬೆಲ್ಲ, ಹಿಟ್ಟು ಮುಂತಾದವುಗಳಿಂದ ಮದ್ಯಸಾರವನ್ನು ತಯಾರಿಸುವ ವಿಧಾನವನ್ನು ತಿಳಿದಿದ್ದರು ಎಂಬುದು ತಿಳಿದುಬರುತ್ತದೆ. ಪ್ರಾಚೀನವಾದ ಸಾಹಿತ್ಯಗಳಿಂದ ಮದ್ಯವನ್ನು ಕುಡಿಯುವವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರು ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ದೇಶದಲ್ಲಿ ಅನೇಕ ವರ್ಗಗಳಿಗೆ ಸೇರಿದ ಜನರು ಮದ್ಯಪಾನದೊಡನೆ ಸಂಪೂರ್ಣವಾಗಿ ಅಪರಿಚಿತರಾಗಿದ್ದರು; ಅದನ್ನು ಕಣ್ಣೆತ್ತಿಯೂ ಸಹ ನೋಡುತ್ತಿರಲಿಲ್ಲ ಎಂಬುದು ಹೊರ ಪಡುತ್ತದೆ. ಅದಕ್ಕೆ ಧರ್ಮಶಾಸ್ತ್ರಗಳ ಪ್ರಭಾವವೇ ಕಾರಣ. ಕುಡಿಯುವಿಕೆಯು ಗರ್ಹಣೀಯವಾದುದು. ಅದು ಮಹಾಪಾತಕ (ಎಂದೆಂದಿಗೂ ಮನುಷ್ಯನು ಕೆಳಗೆ ಬೀಳುವಂತೆ ಮಾಡುವ ಪಾಪ). ಅದರಿಂದ ಮನುಷ್ಯನ ಆತ್ಮ ಹಾನಿಯಾಗುತ್ತದೆ ಎಂಬ ನಂಬಿಕೆಯು ವ್ಯಾಪಕವಾಗಿ ಜನರಲ್ಲಿ ಪ್ರಚಲಿತವಾಗಿದ್ದಿತು.

ಆದರೆ ಇಂದು ಕಾಲವೈಪರೀತ್ಯದಿಂದ ಕುಡಿಯುವವರ ಸಂಖ್ಯೆ ವೃದ್ಧಿಯಾಗುತ್ತಿದೆ. ಯಾರ ಮನೆತನಗಳಲ್ಲಿ ಅದು ಸರೈಥಾಗರ್ಹಣೀಯವೆಂದು ತಿಳಿಯಲ್ಪಡುತಿದ್ದಿತೋ ಅಂತಹವರ ಮನೆಗಳಲ್ಲಿಯೂ ಸಹ ಪ್ರತ್ಯಕ್ಷವಾಗಿ ಅಥವಾ ಪ್ರಚ್ಛನ್ನವಾಗಿ ಕುಡಿಯುವ ವ್ಯಕ್ತಿಗಳು ಉಂಟಾಗುತ್ತಿದ್ದಾರೆ. ಯುವಜನಾಂಗಗಳಲ್ಲಿ ಅದೊಂದು ಪಾಪ ಕಾರ್ಯ ಎಂಬ ದೃಷ್ಟಿಯೇ ಹೊರಟುಹೋಗುತ್ತಿದೆ. ಒಂದುಕಡೆ ಧರ್ಮದ ಮರ್ಯಾದೆ ಮತ್ತು ಆದರ್ಶಗಳು ಜನರ ಮನಸ್ಸು ಮತ್ತು ಬುದ್ಧಿಗಳಲ್ಲಿ ಬಹಳ ದುರ್ಬಲವಾಗಿರುತ್ತವೆ. ಇನ್ನೊಂದು ಕಡೆ ಹೀನವಾದ ಕತೆ, ಕಾದಂಬರಿ, ಸಿನೀಮಾ ಮತ್ತು ಟಿವಿಗಳು ಕುಡಿತವು ಸಹಜ, ಅದರಲ್ಲಿ ತಪ್ಪಿಲ್ಲ ಎಂಬ ಭಾವನೆಯನ್ನು ಮೂಡಿಸಿವೆ. ಅದಕ್ಕೆ ಪೋಷಕವಾಗಿ ಬಗೆಬಗೆಯಾದ ಮದ್ಯಗಳು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿವೆ. ವಿಧವಿಧವಾದ ವಿದೇಶೀ ಮದ್ಯಗಳೂ ನೆಟ್ಟಗೆ ಮತ್ತು ಚೌರ್ಯದಿಂದ ದೇಶವನ್ನು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸುತ್ತಿವೆ. ಬೀದಿಬೀದಿಗಳಲ್ಲಿ ಮದ್ಯದ ಅಂಗಡಿಗಳು ಉಂಟಾಗಿವೆ. ಶ್ರದ್ಧೆ, ಸಂಯಮ ಮತ್ತು ವಿವೇಕಗಳಿಗೆ ಎಡೆಯಿಲ್ಲದ ವಿದ್ಯಾಭ್ಯಾಸ, ಯಾಂತ್ರಿಕವಾಗಿ ಮಾಡುವ ವೃತ್ತಿಗಳು, ಕೈತುಂಬ ಹಣ, ನಿರಂತರವಾಗಿ ಮನೋವಿನೋದಗಳಲ್ಲಿ ಆಸಕ್ತಿ, ಧರ್ಮದ ಅಂಕುಶವಿಲ್ಲದಿರುವಿಕೆ-ಇಂತಹ ವಾತಾವರಣದಲ್ಲಿ ಮದ್ಯಪಾನಾದಿ ಪ್ರಲೋಭನೆಗಳ ಆಕರ್ಷಣೆಗೆ ಜನರು ಒಳಗಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಇದರಿಂದ ಧನಿಕರೂ ಮತ್ತು ವಿದ್ಯಾವಂತರಾದವರೂ ಈ ದುಶ್ಚಟಕ್ಕೆ ಬಲಿ ಯಾಗಿ ತಮ್ಮ ಬಾಳನ್ನು ಪಾಪಮಯವಾಗಿ ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲದೆ ಅವಿದ್ಯಾವಂತರೂ ಬಡವರೂ ಆದವರೂ ಸಹ ಮದ್ಯಪಾನದ ಪಾಪಕ್ಕೆ ಬಹಳ ದೊಡ್ಡ ಸಂಖ್ಯೆಯಲ್ಲಿ ತುತ್ತಾಗಿರುತ್ತಾರೆ. ಪ್ರಾಯಃ ಹಿಂದಿನಿಂದ ಸಮಾಜವು ಅವರ ಕುಡಿತಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿರುತ್ತದೆ. ಕಾರ್ಮಿಕರು ಮುಂತಾದವರು ವಾಸಿಸುವ ಜಾಗಗಳಲ್ಲಿ ಮದ್ಯದಂಗಡಿಗಳು ಆರಂಭಿಸಲ್ಪಡುವುದರ ಜೊತೆಗೆ ಇಂದು ಹಳ್ಳಿ ಹಳ್ಳಿಗಳಲ್ಲಿಯೂ ಅವು ತಲೆದೋರಿವೆ. ಇದರ ದೆಸೆಯಿಂದ ದುರ್ಬಲ ವರ್ಗದ ಜನರು ಕುಡಿತಕ್ಕೆ ದಾಸರಾಗುತ್ತಿರುತ್ತಾರೆ. ಅವರ ಜೀವನದ ಮೇಲೆ ಕುಡಿತವು ಉಂಟುಮಾಡುವ ದುಷ್ಪರಿಣಾಮಗಳು ಅವರ್ಣನೀಯ. ಕಡು ದಾರಿದ್ರ್ಯ, ಅನ್ನ ಬಟ್ಟೆಗಳ ಅಭಾವ, ನಿರಂತರವಾದ ಸಂಘರ್ಷ, ರೋಗರುಜಿನಗಳು ಅಂತಹ ಕುಟುಂಬಗಳನ್ನು ಕಿತ್ತು ತಿನ್ನುತ್ತಿವೆ. ಅಂತಹವರನ್ನು ಕುಡಿತದಿಂದ ತಪ್ಪಿ ಸಲು ಅನೇಕ ಜನ ಸಮಾಜ ಸುಧಾರಕರು ಸತತವೂ ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಅವರನ್ನು ನಿರಂತರವಾಗಿ ಕುಡಿಯುತ್ತಿರುವಂತೆ ಮಾಡಬೇಕೆಂಬುದು ಮಧ್ಯವಿಕ್ರೇತರ ಪಣವಾಗಿದೆ. ಪಾಪದ ಕೈಯ್ಯೇ ಬಲವಾಗಿರುತ್ತದೆ.

ಈ ಪಾಪವನ್ನು ದಮನ ಮಾಡುವುದು ಸರ್ಕಾರದ ಕರ್ತವ್ಯ. ಅದನ್ನು ಮಾಡಲು ನಿರ್ಣಯಗಳು ಮತ್ತು ಕಾಯಿದೆ ಮಸೂದೆಗಳು ಸಾಕಷ್ಟಿವೆ. ಆದರೆ ಮದ್ಯವು ಸರ್ಕಾರಕ್ಕೆ ಆದಾಯದ ಭಂಡಾರ. ಆದುದರಿಂದ ಆದಾಯವನ್ನು ಬಯಸಿ ಸರ್ಕಾರವು ಮದ್ಯದ ತಯಾರಿಕೆಗೆ ಪ್ರೋತ್ಸಾಹವನ್ನೇ ಕೊಡುತ್ತದೆ. ಮದ್ಯಪಾನನಿರೋಧದ ವಿಷಯದಲ್ಲಿ ಅದರ ಸಂಕಲ್ಪವು ತೀರ ದುರ್ಬಲ. ಇಂದಿನ ರಾಜಕೀಯವೂ ಮದ್ಯಪಾನಕ್ಕೆ ಒಂದು ಹೊಸ ಆಯಾಮವನ್ನು ಇತ್ತಿರುತ್ತದೆ.ಚುನಾವಣೆಗೆ ಬೇಕಾದ ಹಣದ ಸಾಕಷ್ಟು ಭಾಗವು ಮದ್ಯ ನಿರ್ಮಾಪಕರ ಕಡೆಯಿಂದ ಬಂದೊದಗುತ್ತದೆ. ಜೊತೆಗೆ ಸಾಮಾನ್ಯ ಜನರಿಗೆ ಚುನಾವಣಾ ಸಮಯದಲ್ಲಿ ಕುಡಿಸಿ ಬುದ್ಧಿ ಭ್ರಂಶವನ್ನುಂಟುಮಾಡಿ ಅವರ ಮತವನ್ನು ಗಳಿಸುವುದು ಅನೇಕ ಜನ ಪ್ರತ್ಯಾಶಿಗಳ ಗುರಿಯಾಗಿರುತ್ತದೆ. ಎಷ್ಟೋ ಬಾರಿ ಮದ್ಯೋದ್ಯಮಿಗಳು ಚುನಾಯಿತರಾಗಿ ಮಂತ್ರಿ ಮತ್ತು ಮುಖ್ಯ ಮಂತ್ರಿಗಳಾಗಿ ಆಗುವ ಮಹತ್ವಾಕಾಂಕ್ಷೆಯನ್ನಿರಿಸಿ ಕೊಂಡಿರುತ್ತಾರೆ.

ಕುಡಿತದ ಸಾಮಾಜಿಕ ದುಷ್ಪರಿಣಾಮಗಳನ್ನು ಕುರಿತು ಸ್ವಲ್ಪದರಲ್ಲಿ ಹೇಳಿ ಮುಗಿಸಲಾಗುವುದಿಲ್ಲ. ಮನುಷ್ಯನು ಸಹಜವಾಗಿಯೇ ಕೆಟ್ಟ ಕೆಲಸಗಳನ್ನು ಮಾಡುವುದರಿಂದ ಹೆದರುತ್ತಾನೆ. ಎಂತಹ ಕೆಟ್ಟವನಲ್ಲಿಯೂ ಅಂತಃಕರಣವು ಜಾಗೃತವಾಗಿಯೇ ಇರುತ್ತದೆ. ಅದನ್ನು ಅದುಮಿ ನಿಷ್ಕ್ರಿಯಗೊಳಿಸಲು ಎಲ್ಲೆಲ್ಲಿಯೂ ಮದ್ಯಪಾನವು ಒಂದು ಸಾಧನವಾಗಿ ಪರಿಣಮಿಸಿದೆ. ತಪ್ಪು ದಾರಿಯಲ್ಲಿ ಹೆಜ್ಜೆಯಿರಿಸುವವರೆಲ್ಲರೂ ಅದರ ನೆರವನ್ನು ಕೋರುತ್ತಾರೆ. ಹೀಗಾಗಿ ನಾವು ಸಮಾಜದಲ್ಲಿ ನೋಡುವ ಅನೇಕ ಕೆಡಕುಗಳ ಹಿಂಬದಿಯಲ್ಲಿ ನಾವು ಮದ್ಯಪಾನವನ್ನೇ ನೋಡುತ್ತೇವೆ. ಅದನ್ನು ಯೋಚಿಸಿದರೆ ಮನಸ್ಸಿನಲ್ಲಿ ದಿಗ್ಭ್ರಮೆಯುಂಟಾಗುತ್ತದೆ. ಇದು ಸರಿಯಾಗುತ್ತದೆಯೇ ಎಂಬ ಸಂಶಯವುಂಟಾಗುತ್ತದೆ.

ಈ ಪಾಪವನ್ನು ಎದುರಿಸಲು ಸಮಾಜ ಸುಧಾರಕರು ಬೇರೆ ಬೇರೆ ರೀತಿಗಳಲ್ಲಿ ಪ್ರಯತ್ನಿಸುತ್ತಿರುವುದನ್ನು ನೋಡುತ್ತೇವೆ. ಕುಡಿತದ ಅಭ್ಯಾಸದಿಂದ ವಿಮೋಚನೆ ಮಾಡಲು ಚಿಕಿತ್ಸೆಯ ಮಾರ್ಗವನ್ನು ಅವಲಂಬಿಸುತ್ತಾರೆ. ವಿದ್ಯಾಭ್ಯಾಸ, ತಿಳಿವಳಿಕೆ ಇತ್ಯಾದಿಗಳ ಮೂಲಕ ಜನರನ್ನು ಈ ಚಟದಿಂದ ರಕ್ಷಿಸಲು ತೊಡಗಿರುತ್ತಾರೆ. ವಾಸ್ತವದಲ್ಲಿ ಇದು ಮೂಲತಃ ಒಂದು ಧಾರ್ಮಿಕ ಸಮಸ್ಯೆ. ಧರ್ಮದ ಕಟ್ಟುಪಾಡುಗಳು ಸಡಿಲವಾಗಿರುವುದರಿಂದ ಉಂಟಾಗಿರುವ ಸಮಸ್ಯೆ. ಮದ್ಯವು ನಾಶ ಮಾಡುವುದು ಕೌಟುಂಬಿಕಶಾಂತಿಯನ್ನು ಮಾತ್ರವಲ್ಲ. ಅಥವಾ ಶಾರೀರಕ ಮಾನಸಿಕ ಸ್ವಾಸ್ಥ್ಯಗಳನ್ನು ಮಾತ್ರವಲ್ಲ. ಅದು ನಾಶಮಾಡುವುದು ಮನುಷ್ಯನ ಆತ್ಮವನ್ನು. ಹಿಂದಿನ ಮತಧರ್ಮವನ್ನು ಆಶ್ರಯಿಸಿ ಈ ಪಾಪದಿಂದ ತಮ್ಮನ್ನು ರಕ್ಷಿಸಿಕೊಂಡರು. ಆದುದರಿಂದ ಈ ಪಾಪವನ್ನು ತಡೆಗಟ್ಟಲು ಧಾರ್ಮಿಕ ದೃಷ್ಟಿಯ ಕಡೆಗೂ ನಮ್ಮ ಮನಸ್ಸನ್ನು ಹರಿಸುವುದು ಅನುಚಿತವಾಗುವುದಿಲ್ಲ.

ಇತರ ವಿಷಯಗಳಲ್ಲಿ ಹೇಗೋ ಹಾಗೆಯೇ ಮದ್ಯಪಾನದ ವಿಷಯದಲ್ಲಿಯೂ ವಿಜ್ಞಾನವು ವ್ಯಾಪಕವಾಗಿ ಸಂಶೋಧನೆ ನಡೆಸಿರುತ್ತದೆ. ಮದ್ಯಪಾನವು ಸಾಧಾರಣವಾಗಿಯೇ ಪ್ರಚಲಿತವಾಗಿರುವ ದೇಶಗಳಲ್ಲಿ ಪ್ರಕಟಿಸಿಕೊಂಡ ವಿಜ್ಞಾನವು ಅದರ ಪರಿಣಾಮವು ಹೇಗಾಗುತ್ತದೆ ಎಂಬುದನ್ನು ವಿಸ್ತಾರವಾಗಿ ಅಧ್ಯಯನ ಮಾಡಿರುತ್ತದೆ. ಮದ್ಯಸಾರವು ಶರೀರದಲ್ಲಿ ಹೇಗೆ ಹೇಗೆ ಕೆಲಸ ಮಾಡುತ್ತದೆ, ತತ್ಕಾಲದಲ್ಲಿ ಅದರ ಪರಿಣಾಮವೇನು, ಕಾಲಾಂತರದಲ್ಲಿ ಅದರ ಪರಿಣಾಮಗಳೇನು ಎಂಬುದನ್ನು ಬೇರೆ ಬೇರೆ ಪ್ರಯೋಗಗಳಿಂದ ಹೊರಗೆಡಹಿರುತ್ತದೆ. ಯಾವ ಯಾವ ರೀತಿಯ ಮದ್ಯವು ಹೇಗೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿಶ್ಲೇಷಿಸಿರುತ್ತಾರೆ. ಅದರ ವಿವರಗಳು ಇಲ್ಲಿ ಅನಾವಶ್ಯಕ. ಅದರ ಮುಖ್ಯಾಂಶಗಳು ಹೀಗಿವೆ. ಮದ್ಯವು ಆರಂಭದಲ್ಲಿ ಉತ್ತೇಜನಕಾರಿ. ಮಾತು ಕತೆಗಳಲ್ಲಿ ಚಟುವಟಿಕೆಯನ್ನು ಉಂಟುಮಾಡುತ್ತದೆ. ಮಾದಕತೆಯ ಅನುಭಾವವನ್ನುಂಟುಮಾಡುತ್ತದೆ. ಆದರೆ ಅದು ಶೀಘ್ರದಲ್ಲಿಯೇ ಮೆದುಳಿನ ಒಂದು ಅಹಿತವಾದ ಪರಿಣಾಮವನ್ನುಂಟುಮಾಡುತ್ತದೆ. ಮೆದುಳಿನ ಉತ್ತಮವಾದ ಕಾರ್ಯಗಳಾದ ಚಿಂತನಶಕ್ತಿ, ಪರಿಶೀಲನಶಕ್ತಿ ಮತ್ತು ಗಮನಶಕ್ತಿ(attention) ಗಳನ್ನು ನಾಶ ಮಾಡುತ್ತದೆ. ಅದರ ಉತ್ತಮವಾದ ಸಾಮರ್ಥ್ಯಗಳನ್ನು ನಾಶಮಾಡಿ, ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿ ತಪ್ಪಿಸುತ್ತದೆ. ಸಂಯಮಶಕ್ತಿಯನ್ನು ತೊಡೆದು ಹಾಕುತ್ತದೆ.

ವಿಜ್ಞಾನಿಗಳು ಹೇಳುವುದು ಶರೀರದ ಭೌತಿಕ ಪಾರ್ಶ್ವಗಳನ್ನು ಕುರಿತು. ಅಂತರವಯವಗಳ ಮೇಲೆ ಮದ್ಯವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನಷ್ಟೆ. ಆ ರೀತಿ ಶರೀರದ ಸೂಕ್ಷ್ಮವಾದ ನರಮಂಡಲಗಳನ್ನು ನಾಶಮಾಡಿದುದರಿಂದ ಆತ್ಮನ ಮೇಲೆ ಯಾವ ರೀತಿಯಾದ ಪರಿಣಾಮವುಂಟಾಗುತ್ತದೆ ಎಂಬುದರೆಡೆಗೆ ಧರ್ಮಶಾಸ್ತ್ರವು ತನ್ನ ದೃಷ್ಟಿಯನ್ನು ಹೊರಳಿಸುತ್ತದೆ. ಒಂದು ಕಿರುಲೇಖನದಲ್ಲಿ ಅದು ಹೇಳುವುದೆಲ್ಲವನ್ನೂ ಹೇಳುವುದು ಸಾಧ್ಯವಾಗುವುದಿಲ್ಲ. ಆದುದರಿಂದ ಅದರ ಒಂದು ಸಂಗ್ರಹವಾದ ನೋಟವನ್ನು ಮಾತ್ರ ವಾಚಕರ ಮುಂದಿರಿಸುತ್ತೇವೆ. ಧರ್ಮಶಾಸ್ತ್ರದಲ್ಲಿ ಮದ್ಯಪಾನದ ವಿಷಯದಲ್ಲಿ ಒಂದು ಸಾಮಾನ್ಯ ಪರಿಜ್ಞಾನವನ್ನು ನೋಡುತ್ತೇವೆ. ಲೋಕದಲ್ಲಿ ಜನರಿಗೆ ಅದರಲ್ಲಿ ಸಹಜವಾದ ಪ್ರವೃತ್ತಿಯಿರುತ್ತದೆ. ಮನುವು

ನ ಮಾಂಸಭಕ್ಷಣೇ ದೋಷಃ ನ ಮದ್ಯೇ ನ ಚ ಮೈಥುನೇ।
ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ॥

ಮಾಂಸ ತಿನ್ನುವುದರಲ್ಲಾಗಲಿ, ಮದ್ಯದಲ್ಲಾಗಲಿ, ಮೈಥುನದಲ್ಲಾಗಲಿ ದೋಷವಿಲ್ಲ, ಇವುಗಳಲ್ಲಿ ಜನರಿಗೆ ಸಹಜವಾದ ಪ್ರವೃತ್ತಿಯಿರುತ್ತದೆ. ಆದರೆ ಅದರಿಂದ ನಿವೃತ್ತನಾಗುವುದರಿಂದ ದೊಡ್ಡ ಫಲವುಂಟಾಗುತ್ತದೆ ಎಂದು ನುಡಿಯುತ್ತಾನೆ. ಮದ್ಯಪಾನವು ಒಂದು ಮಹಾಪಾತಕ. ಆದುದರಿಂದ ಯಾರೂ ಅದಕ್ಕೆ ವಶವಾಗಬಾರದು. ವಿಶೇಷವಾಗಿ ಶರೀರದಲ್ಲಿರುವ ಜ್ಞಾನ ಸಂಬಂಧವಾದ ನಾಡೀ ಮಾರ್ಗಗಳನ್ನು ಸರ್ವದಾ ಶುದ್ಧವಾಗಿಟ್ಟುಕೊಳ್ಳಬೇಕಾದ ಕರ್ತವ್ಯ ಹೊಂದಿರುವ ಬ್ರಾಹ್ಮಣನಂತೂ ಅದನ್ನು ಮುಟ್ಟುವುದಾಗಲಿ ಅಥವಾ ಮೂಸಿನೋಡುವುದಾಗಲಿ ಸಹ ಮಾಡಬಾರದು.ಮದ್ಯವನ್ನಿಟ್ಟಿದ್ದ ಪಾತ್ರೆಯಿಂದ ನೀರನ್ನೂ ಸಹ ಕುಡಿಯಬಾರದು. ಸುರೆಯು(ಮಧ್ಯದ ಒಂದು ಬಗೆ) ಅನ್ನಗಳ ಮಲ. ಪಾಪವೇ ಮಲ. ಆದುದರಿಂದ 'ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಸುರೆಯನ್ನು ಕುಡಿಯಬಾರದು'. 'ಮೋಹದಿಂದ ಸುರೆಯನ್ನು ಕುಡಿದ ದ್ವಿಜನು ಪ್ರಾಯಶ್ಚಿತ್ತಾರ್ಥವಾಗಿ ಬೆಂಕಿಯ ಬಣ್ಣಕ್ಕೆ ಕಾಯಿಸಿದ ಸುರೆಯನ್ನು ಕುಡಿಯಬೇಕು. ಅದರಿಂದ ಶರೀರವು ನಿರ್ದಗ್ಧವಾದಾಗ ಅವನು ಪಾಪದಿಂದ ಬಿಡುಗಡೆ ಹೊಂದುತ್ತಾನೆ.'

ಸುರಾಂ ಪೀತ್ವಾ ದ್ವಿಜೋ ಮೋಹಾತ್ ಅಗ್ನಿವರ್ಣಾಂ ಸುರಾಂ ಪಿಬೇತ್।
ತಯಾ ಸುಕಾಯೇ ನಿರ್ದಗ್ಧೇ ಮುಚ್ಯತೇ ಕಿಲ್ಬಿಷಾತ್ತತಃ॥

ಶಾಸ್ತ್ರವು ವಿಶೇಷವಾಗಿ ಬ್ರಾಹ್ಮಣನಿಗೆ ಮದ್ಯವನ್ನು ನಿಷೇಧಿಸುತ್ತದೆ. ಅದರ ಕಾರಣವನ್ನು ಅದು ತನ್ನ ಭಾಷೆಯಲ್ಲಿಯೇ ಹೇಳುತ್ತದೆ. ಮದ್ಯ, ಮಾಂಸ ಸುರಾಸವಗಳು ಯಕ್ಷ, ರಾಕ್ಷಸ ಮತ್ತು ಪಿಶಾಚಿಗಳ ಅನ್ನ. ಬ್ರಾಹ್ಮಣನು ದೇವತೆಗಳ ಹವಿಸ್ಸನ್ನು ತಿನ್ನುವವನು. ಆದ್ದರಿಂದ ಅವನು ಸುರೆಯನ್ನು ಕುಡಿಯಬಾರದು. ಅದನ್ನು ಕುಡಿಯುವುದರಿಂದ ಉಂಟಾಗುವ ಪರಿಣಾಮವನ್ನು ಮನುವು ಈ ರೀತಿ ವರ್ಣಿಸುತ್ತಾನೆ: "ಮದ್ಯಪಾನ ಮದದಿಂದ ಮೂಢನಾಗಿ ಅವನು ಅಮೇಧ್ಯದಲ್ಲಿ ಹೋಗಿ ಬೀಳಬಹುದು ಅಥವಾ ಅಂತಹ ಅಶುಚಿಯಾದ ಸ್ಥಿತಿಯಲ್ಲಿ ವೇದವಾಕ್ಯವನ್ನು ಉಚ್ಚರಿಸಬಹುದು, ಅಥವಾ ಮದಮೋಹಿತನಾಗಿ ಇನ್ನೇನಾದರೂ ಅಕಾರ್ಯವನ್ನು ಮಾಡಬಹುದು. ಬ್ರಾಹ್ಮಣನ ಶರೀರದಲ್ಲಿರುವ ಬ್ರಹ್ಮ[ವೇದ ಅಥವಾ ಜ್ಞಾನವು] ಒಂದು ಬಾರಿ ಮದ್ಯದಿಂದ ನೆನೆದುದಾದರೆ ಅವನಿಂದ ಬ್ರಹಜ್ಞಾನಜನಕವಾದ ಬ್ರಾಹ್ಮಣ್ಯವೇ ನಾಶವಾಗುತ್ತದೆ. ಅವನು ಶೂದ್ರತ್ವವನ್ನೇ ಹೊಂದುತ್ತಾನೆ." ಈ ಶಾಸ್ತ್ರವಾಕ್ಯಗಳು ಬ್ರಾಹ್ಮಣರ ಹಾಗೂ ಅವರ ಮೇಲ್ಪಂಕ್ತಿಯ ದೆಸೆಯಿಂದ ಇತರ ಜಾತಿಯ ಜನರನ್ನು ಸಾವಿರಾರು ವರ್ಷಗಳಿಂದ ಮದ್ಯಪಾನದ ಘೋರವಾದ ಪಾಪದಿಂದ ಸಂರಕ್ಷಿಸಿದ್ದುವು. ಆದರೆ ಬ್ರಾಹ್ಮಣರಲ್ಲಿಯೂ ಆಗಾಗ ಮದ್ಯಪಾನದ ಪ್ರವೃತ್ತಿಯುಳ್ಳ ವ್ಯಕ್ತಿಗಳು ಜನ್ಮತಾಳುತ್ತಿದ್ದರು. ಆದರೆ ಸಮಾಜವು ಅವರನ್ನು ಒಪ್ಪುತ್ತಿರಲಿಲ್ಲ. ಅವರು ಜನರ ಧಿಕ್ಕಾರಕ್ಕೆ ಪಾತ್ರವಾಗಿರುತ್ತಿದ್ದರು. ರಾಮಾಯಣದಲ್ಲಿ ಒಂದು ಕಡೆ ಈ ರೀತಿ ಓದುತ್ತೇವೆ:

ಅನಾರ್ಯ ಇತಿ ಮಾಮಾರ್ಯಾಃ ಪುತ್ರವಿಕ್ರಾಯಕಂ ಧ್ರುವಂ।
ಧಿಕ್ಕರಿಷ್ಯಂತಿ ರಥ್ಯಾಸು ಸುರಾಪಂ ಬ್ರಾಹ್ಮಣಂ ಯಥಾ॥

(ಸುರಾಪನಾದ ಬ್ರಾಹ್ಮಣನನ್ನು ಹೇಗೋ ಹಾಗೆ ಆರ್ಯರು ಪುತ್ರವಿಕ್ರಯಿಯಾದ ನನ್ನನ್ನು ಅನಾರ್ಯನೆಂದು ರಾಜಮಾರ್ಗಗಳಲ್ಲಿ ಧಿಕ್ಕರಿಸುತ್ತಾರೆ). ಹಿಂದಿನ ಕಾಲದಲ್ಲಿ ಮದ್ಯ ವಿಕ್ರಯ ವಾಡಿ ಜೀವಿಸುವುದು ಒಂದು ಪಾಪವೆಂದು ಗಣಿಸಲ್ಪಟ್ಟಿದ್ದಿತು ಎಂಬುದು ಆದಿಕಾವ್ಯದಲ್ಲಿ ಬರುವ ಒಂದು ಶ್ಲೋಕದಿಂದ ಸ್ಪಷ್ಟವಾಗುತ್ತದೆ.ಅದರಲ್ಲಿ ಭರತನು.

ಲಾಕ್ಷಾಯಾ ಮಧುಮಾಂಸೇನ ಲೋಹೇನ ಚ ವಿಕ್ಷೇಣ ಚ।
ಬಿಭೃಯಾತ್ತು ಸದಾ ಭೃತ್ಯಾನ್ ಯಸ್ಯಾರ್ಯೋಽನುಮತೇ ಗತಃ॥

ಯಾವನ ಅನುಮತಿಯಿಂದ ಆರ್ಯ[ರಾಮ]ನು ಕಾಡಿಗೆ ಹೋದನೋ ಅವನು ಅರಗು, ಮದ್ಯ, ಮಾಂಸ, ಲೋಹ ಮತ್ತು ವಿಷಗಳನ್ನು ಮಾರಿಬಂದ ಹಣದಿಂದ ಭೃತ್ಸರನ್ನು ಭರಿಸಲಿ(ಅಂತಹವನಿಗೆ ಬರುವ ಪಾಪವು ನರಗೆ ಬರಲಿ) ಎಂದು ಹೇಳುತ್ತಾನೆ. ಇಂದು ಮದ್ಯಪಾನವು ವ್ಯಾಪಕವಾಗಿ ಹರಡುತ್ತಿರುವಾಗ ಅದನ್ನು ತಡೆಗಟ್ಟು ಶಕ್ತಿಯು ಯಾವುದೂ ಕಾಣುವುದಿಲ್ಲ. ವಿಶೇಷವಾಗಿ ಅರ್ಥದೊಡನೆ ಸೇರಿರುವುದರಿಂದ ಅದನ್ನು ತಡೆಯುವುದು ಸಾಧ್ಯವಿಲ್ಲವೆಂಬುದು ಸ್ಪಷ್ಟ. ಆದರೆ ಕುಡಿತಕ್ಕೆ ಬಲಿಯಾಗದಿರುವವರು ದೇಶದಲ್ಲಿ ಇನ್ನೂ ಅನೇಕ ಜನರು ಇರುತ್ತಾರೆ. ಅಂತಹವರಿಗೆ ಧರ್ಮಶಾಸ್ತ್ರವು ಈ ಸಂಕಟಸಮಯದಲ್ಲಿ ಒಂದು ದೊಡ್ಡ ಅವಲಂಬನೆಯಾಗಿರ ಬಲ್ಲದು. ಏಕೆಂದರೆ ಧರ್ಮಶಾಸ್ತ್ರ ಒತ್ತಿ ಹೇಳುವುದು ವಿಜ್ಞಾನದ ದೃಷ್ಟಿಯನ್ನೇ. ಆ ಮದ್ಯವು ಸಂಯಮಶಕ್ತಿಯನ್ನು ನಾಶಮಾಡುತ್ತದೆ ಎಂಬ ಅಂಶವನ್ನೇ ಧರ್ಮಶಾಸ್ತ್ರವು ಇನ್ನೂ ಬಹಳ ಮುಂದಕ್ಕೆ ತೆಗೆದುಕೊಂಡು ಹೋಗಿ, ಅದನ್ನು ಯಾವ ಅವಸ್ಥೆಯಲ್ಲಿಯೂ ಸ್ವಲ್ಪವೂ ಸ್ಪರ್ಶಿಸಬಾರದು; ಸ್ಪರ್ಶಿಸಿದರೆ ಮನುಷ್ಯನ ಪತನವೇ ಉಂಟಾಗಿಬಿಡುತ್ತದೆ ಎಂಬಂಶವನ್ನು ಎತ್ತಿ ಹೇಳುತ್ತದೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೧೬ ಸಂಚಿಕೆ: ೫, ಮಾರ್ಚಿ ತಿಂಗಳಲ್ಲಿ ೧೯೯೪ ಪ್ರಕಟವಾಗಿದೆ.