Thursday, March 3, 2022

ಅಯಸ್ಕಾಂತ ಮತ್ತು ಅಧ್ಯಾತ್ಮ(Ayaskaantha matthu Adhyaatma)

ಲೇಖಕರು; ಡಾ. ರಾಮಮೂರ್ತಿ ಟಿ. ವಿ

(ಪ್ರತಿಕ್ರಿಯಿಸಿರಿ lekhana@ayvm.in)


 ವಿಶ್ವವಿಖ್ಯಾತರಾದ ಆಲ್ಬರ್ಟ್ ಐನ್ಸ್ಟೀನ್ ರವರ ಬಹಳ ಪ್ರಚಲಿತವಾದ ಮಾತೊಂದು ಹೀಗಿದೆ- "ಧರ್ಮವಿಲ್ಲದ ವಿಜ್ಞಾನ ಕುಂಟನಂತೆ; ವಿಜ್ಞಾನವಿಲ್ಲದ ಧರ್ಮ ಕುರುಡನಂತೆ". ವಿಜ್ಞಾನ ಹಾಗೂ ಧರ್ಮದ ಪರಸ್ಪರ ದೃಷ್ಟಿಕೋನದ ಅರಿವು ಅವಶ್ಯ. ನಾವೆಲ್ಲರೂ ಅಯಸ್ಕಾಂತದ ಬಗ್ಗೆ ಪ್ರಾಥಮಿಕ ಶಿಕ್ಷಣದ ಕಾಲದಿಂದಲೂ ಪರಿಚಿತರಾಗಿರುತ್ತೇವೆ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳಿಂದ ಮಾನವನಿಗೆ ಉಪಯೋಗವಾಗುವಂತಹ ಅಯಸ್ಕಾಂತ ಆಧಾರಿತ ಅನೇಕ ಉಪಕರಣಗಳು ಬಂದಿವೆ.  ಅಯಸ್ಕಾಂತ ಹಾಗೂ ಅಧ್ಯಾತ್ಮ ಇವೆರಡಕ್ಕೂ ಹೋಲಿಕೆ ಇದೆಯೆ? ಭಗವತ್ಸ್ಫೂರ್ತಿಗಾಗಿ ಪರಿಶೀಲಿಸೋಣ. 

ಶ್ರೀ ಆದಿಶಂಕರರು, ಮುಮುಕ್ಷುಗಳು ತುಂಬಾ ವಿರಳವೆನ್ನುತ್ತಾರೆ. ಕೆಲವೇ ಕೆಲವರು ಅಧ್ಯಾತ್ಮದ ಬಗ್ಗೆ ಒಲವನ್ನು ತೋರುತ್ತಾರೆ. ಇದು ಹೇಗೆಂದರೆ, ಕೆಲವೇ ಕೆಲವು ಲೋಹಗಳು ಮಾತ್ರ ಅಯಸ್ಕಾಂತಕ್ಕೆ ಆಕರ್ಷಿತವಾಗುತ್ತವೆ. ಬಹಳ ಪದಾರ್ಥಗಳು ಆಕರ್ಷಿತವಾಗದೆಯೇ ಇರುತ್ತವೆ. ಅಯಸ್ಕಾಂತಕ್ಕೆ ಆಕರ್ಷಿತವಾಗುವ ಲೋಹಗಳು ಅದರ ಸಂಪರ್ಕದಲ್ಲೇ ಇದ್ದರೆ ಕ್ರಮೇಣ ತಾವೂ ಅಯಸ್ಕಾಂತಗಳಾಗುತ್ತವೆ. ಮಹಾಪುರುಷರ ಆಶ್ರಯದಲ್ಲಿರುವ  ಮುಮುಕ್ಷುಗಳಿಗೆ ಸತ್ಸಂಗದ ಪ್ರಭಾವದಿಂದ ಜ್ಞಾನ ಮತ್ತು ಜೀವನ್ಮುಕ್ತಿಯೂ ಲಭಿಸುತ್ತವೆಯೆನ್ನುವ  ಆಚಾರ್ಯ ಶಂಕರರ ಮಾತು ಇಲ್ಲಿ ಸ್ಮರಣಾರ್ಹ.   

ಅಯಸ್ಕಾಂತದಲ್ಲಿ ಅಡಗಿರುವ ಶಕ್ತಿಯು ಬಾಹ್ಯವಾದ ಕಣ್ಣಿಗೆ ಗೋಚರವಾಗುವುದಿಲ್ಲ. ಹಾಗೆಂದಮಾತ್ರಕ್ಕೆ, ಅದರಲ್ಲಿ ಶಕ್ತಿಯಿಲ್ಲವೆಂದು ಹೇಳಲಾರೆವು. ಇದನ್ನು ಪ್ರಯೋಗದಿಂದ ನಿರ್ಣಯಿಸಬೇಕಾಗುತ್ತದೆ. "ಹೊರಗಣ್ಣಿನಿಂದ ನನ್ನನ್ನು ನೀನು ನೋಡಲಾರೆ, ನಿನಗೆ ದಿವ್ಯವಾದ ಒಳಗಣ್ಣು ನೀಡುತ್ತೇನೆ, ಅದರಿಂದ ನನ್ನ ಯೋಗವೈಭವವನ್ನು ನೋಡುವವನಾಗು" ಎನ್ನುವುದು ಗೀತಾಚಾರ್ಯನು ಅರ್ಜುನನಿಗೆ ಹೇಳುವ ಮಾತು. 

ಭಕ್ತರು ತಮ್ಮ ಪ್ರಾರ್ಥನೆಯಲ್ಲಿ ತಾವು ಸಂಸಾರವೆಂಬ ಸಾಗರದಲ್ಲಿದ್ದು ದಾರಿಕಾಣದೇ, "ದಾರಿಯ ತೋರೋ ಗೋಪಾಲ", " ದಾರಿ ತೋರೋ ವೈಕುಂಠಕ್ಕೆ" ಎಂದೆಲ್ಲಾ ಬೇಡುವರು. ಇಲ್ಲಿ ವಿಶ್ವದ ಸಾಗರದಲ್ಲಿ ಯಾನಕ್ಕೆ ಬೇಕಾದ ದಿಕ್ಕನ್ನು ತೋರಿಸುವ ರೀತಿಯಲ್ಲಿ ಬೇಡಿದ್ದಾರೆ. ಸಾಗರದ ಹಾಗು ವಿಮಾನಯಾನಗಳಲ್ಲಿ ದಿಕ್ಕನ್ನು ಸೂಚಿಸುವ ಉಪಕರಣ "ಕಾಂತೀಯ ದಿಕ್ಸೂಚಿ" ಈಗಲೂ ಬಳಕೆಯಲ್ಲಿದೆ. ಭೂಮಿಯೇ ದೊಡ್ಡ ಅಯಸ್ಕಾಂತದಂತೆ ವರ್ತಿಸುತ್ತದೆ.  ದಿಕ್ಸೂಚಿಯ ಅಯಸ್ಕಾಂತವು  ಸದಾ ಭೂಮಿಯ ಉತ್ತರದ ಕಡೆಗೆ ಅಭಿಮುಖವಾಗಿರುವುದರಿಂದ ಯಾನಕ್ಕೆ ಅತ್ಯಗತ್ಯವಾಗುತ್ತದೆ.       

ಅಯಸ್ಕಾಂತ ಆಧಾರಿತ ಅತಿವೇಗದ ರೈಲುಗಳು ಕೆಲವು ದೇಶಗಳಲ್ಲಿವೆ. ಇಲ್ಲಿ ರೈಲು, ಭೂಮಿಯಲ್ಲಿರುವ ಹಳಿಯಿಂದ ಕೇವಲ ೧೫ಮಿ.ಮಿ. ಮೇಲೆ ಗಾಳಿಯಲ್ಲಿರುತ್ತದೆ. ರೈಲು ಭೂಮಿಗೆ ಅತಿಸಮೀಪದಲ್ಲಿದ್ದೂ ಸ್ಪರ್ಶಮಾಡದೆ ಭೌತಿಕ ಘರ್ಷಣೆಯಿಲ್ಲದೆ ಚಲಿಸುತ್ತವೆ. ಇದನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡೋಣ. ನಿಯಮಿತ ಕರ್ಮಗಳನ್ನು ಅದರ ಫಲಾಪೇಕ್ಷೆಗೆ ಅಂಟಿಕೊಳ್ಳದೆ, ಘರ್ಷಣೆ, ಪಾಪದ ಸೋಂಕಿಲ್ಲದೆ 'ಭಗವದರ್ಪಿತ ' ಎಂಬ ಮನಸ್ಸಿನಿಂದ ದಕ್ಷತೆಯಿಂದ ಮಾಡಬೇಕು. ಆಗ ತಾವರೆ ಎಲೆಯ ಮೇಲಿನ ನೀರು ಅದಕ್ಕೆ ಅಂಟದಿರುವಂತೆ, ನಿರ್ಲಿಪ್ತವಾದ ಜೀವನ ನಡೆಸಿದಂತಾಗುತ್ತದೆ. 

ಅಯಸ್ಕಾಂತೀಯ ದಿಕ್ಸೂಚಿಯು ಸದಾ ಉತ್ತರದ ದಿಕ್ಕನ್ನೇ ಅನುಸರಿಸುತ್ತದೆ. ಶ್ರೀರಂಗ ಮಹಾಗುರುಗಳ ವಾಣಿಯು ಇಲ್ಲಿ ಸ್ಮರಣೀಯ- ಸೂರ್ಯಕಾಂತಿ ಹೂವು ಸೂರ್ಯನಿಗೆ ಸದಾ ಅಭಿಮುಖವಾಗಿರುತ್ತದೆ, ವಿಮುಖವಾಗಿ ಇರುವುದಿಲ್ಲ. ಹಾಗೆಯೇ ನಮ್ಮ ಆತ್ಮವೂ, ಕರಣಗಳೂ ಭಗವದಭಿಮುಖವಾಗಿ ಇರಲಿ.

ಸೂಚನೆ: 3/03/2021 ರಂದು ಈ ಲೇಖನವು ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.