Saturday, March 26, 2022

ವಸ್ತ್ರಾಭರಣ 15 ಉಪಸಂಹಾರ (Vastra Bharana -15 Upasanhara)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)





ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ವಸ್ತ್ರ-ಆಭರಣಗಳ ಅಲಂಕಾರ ಪದ್ಧತಿಯನ್ನು ಸವಿವರವಾಗಿ ನೋಡಿದ್ದಾಗಿದೆ. ಮುಖ್ಯವಾಗಿ ಯೋಗಕ್ಕೂ ಅದಕ್ಕೂ ಇರುವ ಸಂಬಂಧವನ್ನು ನೋಡಿದ್ದೆವು. ಇದು ಸಾಮಾನ್ಯ ಮನುಷ್ಯರಿಗೆ, ಸಾಧಕರಿಗೆ ಒಪ್ಪುವ ಅಲಂಕಾರವಾದರೆ, ವಿಶೇಷವಾಗಿ ಯೋಗಿಗಳಿಗೆ ಈಶ್ವರನಾದ ಶಿವ-ನಟರಾಜ ಹಾಗೂ ಯೋಗಕ್ಕೆ ಈಶ್ವರನಾದ ಕೃಷ್ಣನ ಅಲಂಕಾರವೆಂತಿದೆ ಎಂದು ನೋಡೋಣ. ಕೃಷ್ಣನು- ಸ್ಥಿತಿ ಕಾರಕನಾದ ವಿಷ್ಣುಸ್ವರೂಪಿ. 'ಅಲಂಕಾರ ಪ್ರಿಯೋವಿಷ್ಣು:' ಎಂಬಂತೆ ಸ್ಥಿತಿ ಕಾರಕನಾಗಿ, ಧರ್ಮ ರಕ್ಷಕನಾಗಿರುವನು ಲೋಕಕ್ಕೆ ಒಪ್ಪುವಂತಹ ಸುಂದರವಾದ ರೂಪ-ಅಲಂಕಾರವನ್ನು ಧರಿಸುತ್ತಾನೆ. ಆದರೆ ಶಿವ-ನಟರಾಜ ದಿಗಂಬರ, ನಾಗಾಭರಣ. ಇಬ್ಬರ ಅಲಂಕಾರವೂ ಒಂದಕ್ಕೊಂದು ಸಂಬಂಧವಿಲ್ಲದಂತೆ  ಕಂಡರೂ ಅದರಲ್ಲಿ ಸಾಮ್ಯತೆಗಳುಂಟು. ಎರಡೂ ತಮ್ಮದೇ ಆದರೀತಿಯಲ್ಲಿ  ಪರಿಪೂರ್ಣಯೋಗ ಸ್ಥಿತಿಗೆ ಒಪ್ಪುವಂತಿರುತ್ತದೆ. 


ಶ್ರೀಮದ್ಭಾಗವತದಲ್ಲಿ ಕೃಷ್ಣನ ವರ್ಣನೆ ಸೌಂದರ್ಯಪೂರ್ಣವೂ ರೋಚಕವೂ ಆಗಿದೆ.  ಕೃಷ್ಣ ಪೀತಾಂಬರಧಾರಿ. ಹಳದಿಯ ರೇಷ್ಮೆ ಸ್ವರ್ಣಮಯವಾದ ಜ್ಯೋತೀರೂಪವನ್ನು ಹೊತ್ತು ತರುತ್ತದೆ. ಶಿರದಲ್ಲಿ ಶಿಖರಸ್ಥಾನದಲ್ಲಿನ ಪೂರ್ಣತತ್ತ್ವದ ಪ್ರತೀಕವಾಗಿ ಕಿರೀಟವನ್ನು ಧರಿಸಿದ್ದಾನೆ. ಜೊತೆಯಲ್ಲಿ ಮಾಯಾಶಕ್ತಿಯ ನವಿಲುಗರಿಯನ್ನು ಧರಿಸಿ ಮಾಯೆಯನ್ನು ವಶದಲ್ಲಿಟ್ಟಿದ್ದಾನೆ. ಸೊಂಟಕ್ಕೆ ಕಾಂಚೀಯನ್ನು ಕಟ್ಟಿದ್ದಾನೆ. ತೋಳುಗಳಲ್ಲಿ ಅಂಗದವು ಬಿಗಿಯಾಗಿ ಬಂಧಿಸಿದೆ. ಮಣಿಕಟ್ಟಿನಲ್ಲಿ ಕಂಕಣವೂ ಇದೆ. ಇವು  ಸಾಧಕರಿಗೆ ಮರ್ಮಸ್ಥಾನಗಳಲ್ಲಿ ಬಂಧವನ್ನು ಉಂಟುಮಾಡುತ್ತದೆ. ಆದರೆ ಯೋಗೇಶ್ವರನಲ್ಲಿ ಅವನ  ಸಹಜವಾಗಿರುವ ಸ್ಥಿತಿಯನ್ನು ನಮಗೆ ಪರಿಚಯ ಮಾಡಿಸಿಕೊಟ್ಟು ಅಲಂಕಾರವಾಗಿ ಶೋಭಿಸುತ್ತದೆ. ಯೋಗಿಯ ಒಳದರ್ಶನಕ್ಕೆ ಅವನ ಕಂಠದಲ್ಲಿ ಶೋಭಿಸುತ್ತಿದ್ದ ಕೌಸ್ತುಭ ಮಣಿಯು, ಕಿವಿಯ ವೈಢೂರ್ಯಗಳು, ಅವನ ಶುದ್ಧ ಒಳ ಸ್ವರೂಪವನ್ನು , ಪರಮಾತ್ಮಸ್ವರೂಪವನ್ನು ದರ್ಶಿಸುತ್ತವೆ. ಎತ್ತಿರುವ ಕೈಯಲ್ಲಿ  ಶಂಖ-ಚಕ್ರಗಳು ಅಮಾನುಷವಾದ ದಿವ್ಯ ಆಯುಧಗಳು, ಕೃಷ್ಣನಿಗೆ ಆಭರಣಗಳು. ಅವು ಊರ್ಧ್ವಮುಖವಾಗಿರುವ ಮನಸ್ಸು-ಬುದ್ಧಿಗಳ ಪ್ರತಿರೂಪ. ಕೈಯಲ್ಲಿ ಕೊಳಲು ಪ್ರಣವನಾದದ ಪ್ರತೀಕ.   


ಶಿವ-ನಟರಾಜನನ್ನು ನೋಡಿದರೆ, ಅವನು ಯಾವ ಪಟ್ಟು-ಪೀತಾಂಬರವನ್ನೂ ಧರಿಸಿಲ್ಲ. ಆದರೆ, ಅಂತರೀಯದ ಕೆಲಸವನ್ನು ಗಜ-ಚರ್ಮವು ಮಾಡುತ್ತದೆ. ಅವನು ಉತ್ತರೀಯವನ್ನು ಧರಿಸಿಲ್ಲ. ಆದರೆ ಅದರ ಪ್ರತಿರೂಪವಾದ ಕುಂಡಲಿನಿ ಸರ್ಪರೂಪದ ಜನ್ನದಾರವನ್ನು ಧರಿಸಿದ್ದಾನೆ. ಕೃಷ್ಣನಂತೆಯೇ ಮರ್ಮಸ್ಥಾನವನ್ನು ಬಂಧಿಸುವ ಬಂಧಕ ಆಭರಣಗಳನ್ನು ಧರಿಸಿದ್ದಾನೆ. ಆದರೆ ಇವೂ ಕುಂಡಲೀ ಸರ್ಪಗಳ ರೂಪದಲ್ಲಿ ಆಭರಣಗಳು. ಇವನ ಮುಕುಟವು ಅರ್ಕ ಪತ್ರ, ಚಂದ್ರ, ಗಂಗೆಯಿಂದ ಕೂಡಿದೆ. ಹೊರನೋಟಕ್ಕೆ ಕೃಷ್ಣನ ಮುಕುಟಕ್ಕಿಂತ ವಿಪರೀತವಾಗಿದ್ದರೂ ಹಿಂದಿನ ತತ್ತ್ವ ಒಂದೇ. ಅರ್ಕಪತ್ರ-ಚಂದ್ರಗಳು ಸೂರ್ಯ-ಚಂದ್ರ-ಅಗ್ನಿ ತತ್ತ್ವಗಳ ಸೇರುವೆಯನ್ನು ತೋರಿಸುತ್ತದೆ. ಅರ್ಕಪತ್ರ-ಗಂಗೆಗಳು ಆಪೋಜ್ಯೋತಿಸ್ಥಲವನ್ನು ಸೂಚಿಸುತ್ತದೆ. ಕೈಯಲ್ಲಿನ ಡಮರು-ಅಗ್ನಿಗಳು ಪ್ರಾಣಾಪಾನದ ಸಮತ್ವವನ್ನು ಸಾರುತ್ತವೆ. ಅವನು  ಸಾಕ್ಷಾತ್ ನಾದತನು ಆಗಿದ್ದಾನೆ. ಇನ್ನೂ ಹೇಳುವುದಾದರೆ, ಕೃಷ್ಣನ ಕೈಯಲ್ಲಿರುವ ಕೊಳಲು ಸಾಕ್ಷಾತ್ ರುದ್ರನೇ ಎಂದು ಶಾಸ್ತ್ರಗಳು ತಿಳಿಸುತ್ತವೆ.                                                                 


ಇವರೀರ್ವರ ಅಲಂಕಾರದಲ್ಲಿ ಕಂಡುಬರುವ ಎಲ್ಲ ತತ್ತ್ವಗಳೂ ಒಟ್ಟುಗೂಡಿಸಿದರೆ, ಭಾರತೀಯ ವಸ್ತ್ರಾಲಂಕಾರ ಮತ್ತು ಆಭರಣಗಳ ಸಾರವನ್ನೇ ತೋರುತ್ತಿದೆ. ಸಾಧಕರಲ್ಲಿ ಇವು ಯೋಗಸಾಧನಗಳಾಗಿ ಕೆಲಸ ಮಾಡುತ್ತವೆ. ಆದರೆ ಸಿದ್ಧರಲ್ಲಿ, ಯೋಗೀಶ್ವರ-ಯೋಗೇಶ್ವರರಲ್ಲಿ ಇದು ಆದರ್ಶವಾಗಿ ಕಂಗೊಳಿಸುತ್ತದೆ. ಅವರ ನಿಜ ರೂಪವನ್ನು ದರ್ಶಿಸುವ ಕನ್ನಡಿಯಾಗಿ ನಿಲ್ಲುತ್ತವೆ. ಶ್ರೀರಂಗಮಹಾಗುರುಗಳ ಅದ್ಭುತ ಯೋಗದೃಷ್ಟಿಯಿಂದ ಕೂಡಿದ ಈ ನೋಟವು ಲೋಕಕ್ಕೆ ಋಷಿಗಳ ಅಂತರದೃಷ್ಟಿಯನ್ನು ತಂದುಕೊಟ್ಟು, ನಮ್ಮ ಜೀವನಗಳನ್ನೇ ಪಾವನವನ್ನಾಗಿ ಮಾಡಿದೆ.


ಸೂಚನೆ : 26/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.