Sunday, March 6, 2022

ನವಧಾ ಭಕ್ತಿ - 17 ಉಪಸಂಹಾರ (Navavidha Bhakti -17 Upasamhaara)

(ಪ್ರತಿಕ್ರಿಯಿಸಿರಿ lekhana@ayvm.in)ಭಗವಂತನಲ್ಲಿ ತೋರುವ "ಅತಿಶಯವಾದ ಪ್ರೀತಿ"ಯೇ ಭಕ್ತಿ ಎಂಬುದಾಗಿ ಭಕ್ತಿಸೂತ್ರಗಳು ಸಾರುತ್ತವೆ. "ಭಕ್ತಿ ಎಂದರೆ ಸೇರಿಕೊಳ್ಳುವುದು. ವಿಭಕ್ತಿ ಎಂದರೆ ವಿಭಾಗ ಹೊಂದುವುದು. ಭಗವಂತನಲ್ಲಿ ಸೇರಿಕೊಳ್ಳುವ ಸ್ಥಿತಿಯೇ ಭಕ್ತಿ" ಎಂಬುದಾಗಿ ಶ್ರೀರಂಗಮಹಾಗುರುಗಳು ಅಪ್ಪಣೆ ಕೊಡಿಸಿದ್ದರು.  ಅಂತಹ ಪ್ರೀತಿಯನ್ನು ಸಾಧಿಸಲು ಇರುವ ಪ್ರಧಾನವಾದ ಮಾರ್ಗಗಳೇ ಶ್ರವಣ-ಕೀರ್ತನ-ಸ್ಮರಣ ಮುಂತಾದ ನವವಿಧಭಕ್ತಿ. ಪರಿಪೂರ್ಣ ಭಕ್ತಿಯನ್ನು ಸಾಧಿಸುವಲ್ಲಿ ಮೂರು ಹಂತಗಳನ್ನು ಕಾಣಬಹುದಾಗಿದೆ - ಅಭ್ಯಾಸ, ರಸ ಮತ್ತು ರತಿ.

 

ಸಾಧನ ಭಕ್ತಿ, ಸಾಧ್ಯ-ಭಕ್ತಿ

ಅಭ್ಯಾಸವೆನ್ನುವುದು ಭಗವಂತನಲ್ಲಿ ಪ್ರೀತಿ-ಒಲವನ್ನು ಗಳಿಸಿ-ಬೆಳೆಸಿಕೊಳ್ಳಲು ಸೂಚಿಸಿರುವ ಮಾರ್ಗಗಳನ್ನು ರೂಢಿಸಿಕೊಳ್ಳುವುದು. ಭಗವತ್ಕಥಾಶ್ರವಣ, ಶ್ರವಣ ಮಾಡಿದ ಭಗವಂತನ ಕಥೆಗಳನ್ನೂ ಗುಣಗಾನವನ್ನೂ ಮತ್ತೆಮತ್ತೆ ಸ್ಮರಣೆ  ಮಾಡಿದಾಗ ಕಾಲಕ್ರಮದಲ್ಲಿ ಅಭ್ಯಾಸವು ಭಕ್ತಿಯ ಎರಡನೇ ಹಂತವಾದ ಭಗವದ್ರಸವನ್ನುಂಟುಮಾಡುತ್ತದೆ; ನಮ್ಮಲ್ಲಿ ಭಗವಂತನ ರಸ ಜಿನುಗುವಂತೆ, ಮನಸ್ಸು ಅವನ ಕಡೆ ಒಲಿಯುವಂತೆ ಮಾಡುತ್ತದೆ. ಈ ರಸವೇ ಭಗವಂತನನ್ನು ಕೀರ್ತಿಸುವಂತೆ ಭಕ್ತನನ್ನು ಪ್ರೇರೇಪಿಸುತ್ತದೆ. ಭಗವಂತನಲ್ಲಿ ಮನವು ಒಲಿದಾಗ ಅವನ ಸೇವೆ-ಅರ್ಚನೆ-ವಂದನೆಗಳಲ್ಲಿ ಮನಸ್ಸು ತಾನಾಗಿಯೇ ಹರಿಯತೊಡಗುವುದು. ಈ ಹಂತದವರೆಗಿನ ಭಕ್ತಿಯು ಸಾಧನ-ಭಕ್ತಿ ಎನಿಸಿಕೊಳ್ಳುತ್ತದೆ. ಇಂತಹ ಹರಿವು ದೃಢವಾದಂತೆ ಮನಸ್ಸು ತನ್ನನ್ನು ಪೂರ್ಣವಾಗಿ ಭಗವಂತನಿಗೇ ಒಪ್ಪಿಸಿಕೊಂಡಾಗ ಭಕ್ತಿಯ ಮೂರನೆಯ ಹಂತವಾದ ರತಿಯು ಭಕ್ತನಲ್ಲಿ ಮನೆ ಮಾಡುವುದು. ಆಗ ಭಗವಂತನಲ್ಲಿ ದಾಸ್ಯಭಾವವೂ, ಆತ್ಮನಿವೇದನವೂ ಸಹಜವಾಗಿ ಮೂಡಿ ಮನಸ್ಸು ಅವನಲ್ಲಿ ಲಯಹೊಂದುವುದು. ಈ ಸ್ಥಿತಿಯೇ ಸಾಧ್ಯ-ಭಕ್ತಿ ಅಥವಾ ಸಿದ್ಧ-ಭಕ್ತಿ ಎನಿಸಿಕೊಳ್ಳುತ್ತದೆ.


ಸಿದ್ಧಭಕ್ತರು

ಸಿದ್ಧಭಕ್ತರು ಪರಮ ಭಾಗವತರೆನಿಸುತ್ತಾರೆ. ಅವರು ಸಾಧಕ ಭಕ್ತರಂತೆ ಕೀರ್ತನೆ-ಅರ್ಚನೆ-ವಂದನೆಗಳನ್ನು ಮಾಡುವಂತೆ ತೋರಿದರೂ ಇವರ ಕ್ರಿಯೆಗಳು ಇನ್ನೂ ಮೇಲ್ಮಟ್ಟದ್ದು. ಇವರು ಶಾಂತರು-ಮಹಾಂತರು-ಅಖಿಲ ಜೀವಿಗಳಲ್ಲಿಯೂ ವಾತ್ಸಲ್ಯ ಉಳ್ಳವರು. ಲೌಕಿಕ ಕಾಮಸ್ಪರ್ಶ ಇಲ್ಲದವರು. ಭಗವದ್ದರ್ಶನವೇ ಸುಖವೆಂಬ ಭಾವನೆ ಉಳ್ಳವರು. ತಮ್ಮ ತನು-ಮನ-ಧನ-ಪಂಚಪ್ರಾಣಗಳೂ ಭಗವಂತನೇ ಎಂಬ ಭಾವನೆಯನ್ನು ತೋರ್ಪಡಿಸುವರು. ಇಷ್ಟಾದರೂ "ನಿನ್ನನ್ನು ಒಲಿಸಿಕೊಳ್ಳುವುದು ನನ್ನಿಂದ ಸಾಧ್ಯವಿಲ್ಲ. ನೀನಾಗಿಯೇ ಒಲಿದರೆ ನನಗೆ ಪರಮಸುಖ" ಎಂಬ ಭಾವವನ್ನು ವ್ಯಕ್ತಪಡಿಸುವರು. ತಮ್ಮ ಇಡೀ ಶರೀರವನ್ನೇ ಆರಾಧ್ಯದೈವವು ವ್ಯಾಪಿಸಿಕೊಳ್ಳುವ ಕಾರಣ, ಇತರರಂತೆ ಬಾಹ್ಯಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ. ಅಗ್ನಿಯು ಸೌದೆಯನ್ನು ಭಸ್ಮಮಾಡುವಂತೆ ಅವರ ಭಕ್ತಿಯು ಅವರ ಸಮಸ್ತಪಾಪಗಳನ್ನೂ ಸಂಪೂರ್ಣವಾಗಿ ಸುಟ್ಟುಹಾಕುತ್ತದೆ.


ಭಕ್ತಿ ಶಾಸ್ತ್ರ

ಲೋಕವಿಲಕ್ಷಣವಾದ ನಡತೆಯೆನ್ನುವುದು ಇಂತಹ ಸಿದ್ಧಭಕ್ತರಲ್ಲಿ ಕಾಣುವ ವಿಶೇಷವಾದ  ಗುರುತು-ಲಕ್ಷಣ. ಭಗವಂತನನ್ನೇ ತಮ್ಮ ಪತಿಯನ್ನಾಗಿ ಭಾವಿಸುವ ಮಾಧುರ್ಯ-ಭಕ್ತಿಭಾವಕ್ಕೆ ಉದಾಹರಣೆಯಾಗಿ ಇವರುಗಳನ್ನು ನೋಡಬಹುದು. ಶೃಂಗಾರಭಾವದಲ್ಲಿ ಶ್ರವಣ-ಕೀರ್ತನ-ಸ್ಮರಣ ಮುಂತಾದ ನವಭಕ್ತಿಭಾವಗಳೂ ಅಡಕವಾಗುತ್ತವೆ. ಇತರರಂತೆ ಲೋಕನಿಯಮಗಳನ್ನು ಅವರು ಪಾಲಿಸುವಂತೆ ಕಾಣದಿರಬಹುದು. ಆದರೆ ಭಕ್ತಿಶಾಸ್ತ್ರಗಳು ಘೋಷಣೆ ಮಾಡುವ "ಅತ್ಯಂತ ಭಕ್ತಿಯುಕ್ತಾನಾಂ ನ ವಿಧಿಃ ನೈವ ಚ ಕ್ರಮ:" (ಉತ್ಕಟವಾದ ಭಕ್ತಿಯಿಂದ ಕೂಡಿದವರಿಗೆ ಲೋಕದ ವಿಧಿ-ನಿಯಮಗಳು ಅನ್ವಯವಾಗುವುದಿಲ್ಲ) ಎಂಬುದನ್ನು ಇಲ್ಲಿ ಸ್ಮರಿಸಬೇಕು. ಅವರುಗಳಿಗಿರುವ ನಿಯಮ, ಕೇವಲ ಭಕ್ತಿಗೆ ಸಂಬಂಧಪಟ್ಟಿರುವುದು.  ಬಹಳ ಆಳವಾಗಿ ಭಗವಂತನಲ್ಲಿ ಮುಳುಗಿರುವ ಅಂತಹವರಿಗಾಗಿಯೇ ಇರುವ  ಪ್ರತ್ಯೇಕ ಶಾಸ್ತ್ರವೇ ಭಕ್ತಿಶಾಸ್ತ್ರ.  


"ಶಾಸನಾತ್ ತ್ರಾಣನಾತ್ ಚೈವ ಶಾಸ್ತ್ರಮಿತ್ಯಭಿಧೀಯತೇ" (ಯಾವುದು ಶಾಸನಮಾಡಿ ಕಾಪಾಡುತ್ತದೆಯೋ ಅದೇ ಶಾಸ್ತ್ರ). "ಶಾಸ್ತ್ರ ಎಂದರೆ ಸೃಷ್ಟಿಯಲ್ಲಿರುವ ಮೂಲಭೂತವಾದ ವಿಜ್ಞಾನ - ಅದನ್ನರಿತವರು ಗುರುತು ಹಾಕಿರುವ ರೆಕಾರ್ಡೇ ಶಾಸ್ತ್ರಗ್ರಂಥ" ಎಂಬ ಮಹಾಗುರುವಿನ ವಾಣಿಯು ಸ್ಮರಣೀಯ. ಇಲ್ಲಿ ಭಕ್ತರಿಗಾಗಿ ಇರುವ ಶಾಸ್ತ್ರವನ್ನು 'ಭಕ್ತಿಶಾಸ್ತ್ರ' ಎಂದೇ  ಕರೆಯಬೇಕಾಗುತ್ತದೆ. ಆ ಭಕ್ತಿಶಾಸ್ತ್ರಕ್ಕೆ ಅನುಗುಣವಾಗಿಯೇ  ಅವರುಗಳಿರುತ್ತಾರೆ ಎಂಬುದನ್ನೂ ಗಮನಿಸಬೇಕು. ಇಂತಹ ಭಕ್ತರಿಗೆ ಬಾಹ್ಯಪ್ರಜ್ಞೆ ಇಲ್ಲದೆ, ಏನು ಮಾಡುತ್ತಿದ್ದೇವೆಂಬ ಪರಿವೆಯೇ ಇಲ್ಲದ ಸಂದರ್ಭಗಳಲ್ಲಿ ಭಗವಂತನೇ ಇವರುಗಳನ್ನು ರಕ್ಷಿಸುತ್ತಾನೆ ಎಂಬುದನ್ನು ಹಿಂದಿನ ಲೇಖನಗಳಲ್ಲಿ ಗಮನಿಸಿದ್ದೇವೆ.  


ಸಿದ್ಧಭಕ್ತರು, ಬ್ರಹ್ಮದೇವರ ಪದವಿಯನ್ನಾಗಲೀ ಸಾರ್ವಭೌಮ ಪದವಿಯನ್ನಾಗಲೀ ಯೋಗಸಿದ್ಧಿಗಳನ್ನಾಗಲೀ ಅಷ್ಟೇಕೆ ಮೋಕ್ಷವನ್ನೂ ಕೂಡ ಬಯಸುವುದಿಲ್ಲ.  "ಸ್ವರ್ಗ ಬೇಡ ಮುಕ್ತಿ ಬೇಡ...…ನರಕದೊಳು ನೀನಿದ್ದೊಡೆ ನರಕವಲ್ಲ ಎನಗೇ" ಎಂಬ ದಾಸವಾಣಿಯಲ್ಲೂ "ನಾಸ್ಥಾ ಧರ್ಮೇ ನ ವಸುನಿಚಯೇ.." ಮತ್ತು "ದಿವಿ ವಾ ಭುವಿ ವಾ ಮಮಾಸ್ತು ವಾಸೋವಾ" ಎಂಬ ಕುಲಶೇಖರ ಆಳ್ವಾರರ ಶ್ಲೋಕಗಳಲ್ಲೂ ಈ ಉತ್ಕಟ ಭಕ್ತಿಭಾವವನ್ನು ಗಮನಿಸಬಹುದು. ಇಂತಹ ಭಾಗವತರು ಮುಕ್ತಿಸ್ವರೂಪನಾದ ಭಗವಂತನಿಗೂ ಪ್ರಿಯತಮರು.


"ಪ್ರಿಯತಮನಾದ ಭಗವಂತನಲ್ಲಿ ರತಿಯನ್ನು ಹೊಂದಿದ ಭಕ್ತನು ಭಗವಂತನ ಎಣೆಯಿಲ್ಲದ ಶಕ್ತಿಗಳನ್ನೂ ಗುಣಾತಿಶಯಗಳನ್ನೂ ನೆನೆನೆನೆದು ಶರೀರದ ರೋಮ-ರೋಮದಲ್ಲಿಯೂ ತುಂಬಿ-ತುಳುಕುವ ಭಗವದ್ಭಾವದಿಂದ, ಕಣ್ಣೀರು ಹರಿಸುತ್ತಾ, ಗದ್ಗದವಾಣಿಯಿಂದ ಅವನಿಗಾಗಿ ಅಳುತ್ತಾ, ಕೆಲವೊಮ್ಮೆ ಲಜ್ಜೆಯನ್ನು ತೊರೆದು ಕುಣಿದಾಡುತ್ತಾ, ಗಾನಮಾಡುತ್ತಾ, ನಗುತ್ತಾ ಎಲ್ಲರಲ್ಲೂ ಭಗವಂತನನ್ನೇ ನೋಡುತ್ತಾ ಅವರ ಪಾದಗಳಲ್ಲಿ ಬೀಳುವರು. ಭಗವದ್ಭಾವದಲ್ಲಿ ಸಂಪೂರ್ಣವಾಗಿ ಮುಳುಗಿದ ಇಂತಹ ಪವಿತ್ರಾತ್ಮರಿಗೆ ಎಲ್ಲ ಲೌಕಿಕಬಂಧಗಳೂ ತಾವಾಗಿಯೇ ಕಳಚುತ್ತವೆ; ಇವರು ಪ್ರಪಂಚವೆಲ್ಲವನ್ನೂ ಪವಿತ್ರಗೊಳಿಸುತ್ತಾರೆ" ಎಂಬುದಾಗಿ ಶ್ರೀಮದ್ಭಾಗವತವು ಕೊಂಡಾಡುತ್ತದೆ.

 

ಭಾಗವತರ ಪಾದಧೂಳಿ  

ಅಂತಹವರ ಪಾದಧೂಳಿಯೂ ಪೂಜ್ಯವಾದದ್ದೇ. ಸಾಕ್ಷಾತ್ ಶ್ರೀಕೃಷ್ಣನೇ ಇಂತಹ ಭಕ್ತರ ಮಹಿಮೆಯನ್ನು ಗಾನ ಮಾಡುತ್ತಾನೆ: "ಯಾವನು ನನ್ನಲ್ಲಿ ಭಕ್ತಿಯಿಂದ ಕೂಡಿದವನಾಗಿ ನಿರಪೇಕ್ಷನಾಗಿ ಶಾಂತನಾಗಿ ವೈರರಹಿತನಾಗಿ ಇದ್ದಾನೆಯೋ ಅವನ ಪಾದರೇಣುಗಳಿಂದ ನಾನು ಪವಿತ್ರನಾಗುತ್ತೇನೆ" ಎಂದು. ಭಗವಂತನ ಪಾದಧೂಳಿಯನ್ನೇ ಪವಿತ್ರವಾಗಿ ಭಾವಿಸುವ ಭಕ್ತರಿರುವಂತೆಯೇ ಭಗವದ್ಭಕ್ತನ ಪಾದಧೂಳಿಯೂ ಪೂಜ್ಯವಾದದ್ದು ಎನ್ನುವುದು ಭಗವಂತನ ಮಾತು. ಒಮ್ಮೆ ಶ್ರೀಕೃಷ್ಣ ತನ್ನ ಪೂಜಾಗೃಹದಲ್ಲಿ ಭಕ್ತರ ಪಾದರೇಣುವನ್ನು ಸಂಗ್ರಹಿಸಿ-ಪೂಜಿಸಿದ್ದುದನ್ನು ನಾರದರಿಗೆ ತೋರಿಸುವ ಕಥೆಯನ್ನೂ ಕೇಳುತ್ತೇವೆ. 

ಇಂತಹ ಸಿದ್ಧಭಕ್ತರ ಮಹಿಮೆಯನ್ನು ಕೊಂಡಾಡುವ 'ನವವಿಧಭಕ್ತಿ' ಮಾಲಿಕೆಯು ಮುಕುಂದನ ವಕ್ಷಸ್ಥಳವನ್ನು ಅಲಂಕರಿಸಲಿ; ಭಕ್ತರ ಮನದಾಳದಲ್ಲಿ ಭಕ್ತಿಯು ತುಂಬಿ-ತುಳುಕಾಡುವಂತಾಗಲೀ ಎಂದು ಪ್ರಾರ್ಥಿಸುತ್ತಾ ಮಂಗಳವನ್ನು ಹಾಡುವೆನು.

|| ಸರ್ವಂ ಶ್ರೀಕೃಷ್ಣಾರ್ಪಣಮಸ್ತು ||

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 5/3/2022 ರಂದು ಪ್ರಕಟವಾಗಿದೆ.