Tuesday, March 22, 2022

ಕಾಳಿದಾಸನ ಜೀವನದರ್ಶನ – 2 ಪಾಶ್ಚಾತ್ತ್ಯರ ದೃಷ್ಟಿಯಲ್ಲಿ ಕಾಳಿದಾಸ (Kalidasana Jivanadarshana - 2 Pashcattyara Drishtiyalli Kalidasa)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಒಬ್ಬ ಮಹಾಕವಿಯೆಂದೆನಿಸಿದನೆಂದರೆ, ಆತನ ಕೃತಿಗಳು ನಾನಾಭಾಷೆಗಳಿಗೆ ಅನುವಾದ ಹೊಂದುವುದು, ವೈದೇಶಿಕರೂ (ಅಂದರೆ ವಿದೇಶೀಯರೂ) ಅದನ್ನು ವಿಮರ್ಶಿಸುವುದು - ಇವೆಲ್ಲಾ ಆಗುವಂತಹುದೇ. ಹೀಗಾಗಿ ಕಾಳಿದಾಸನ ಕೃತಿಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದ ಹೊಂದಿ ಆಯಾ ಭಾಷಿಕರು ಅದನ್ನು ವಿಮರ್ಶಿಸಿರುವುದೂ ಉಂಟೇ. ಯಾವ ಯಾವ ಭಾಷೆಗಳಿಗೆ ಯಾವಾಗ ಅನುವಾದವಾಯಿತು, ಮಾಡಿದವರಾರು, ಆ ಕುರಿತು ಬಂದ ವಿಮರ್ಶೆಗಳೇನು? - ಎಂದೆಲ್ಲಾ ಪಟ್ಟಿ ಮಾಡುವುದು ಇಲ್ಲಿ ಪ್ರಸ್ತುತವೆನ್ನಿಸದು. ಅದರ ಬಗ್ಗೆ ದಿಗ್ದರ್ಶಕವಾದ ರೀತಿಯಲ್ಲಿ ವೈದೇಶಿಕ ಕವಿ-ವಿಮರ್ಶಕರೊಬ್ಬಿಬ್ಬರ ಅಭಿಪ್ರಾಯಗಳನ್ನು ಸೂಚಿಸಿ ಅಲ್ಲಿಗೆ ಕೈಬಿಡುವುದು ಸೂಕ್ತವಾದೀತು. (ಇದು ಸ್ಥಾಲೀ-ಪುಲಾಕ-ನ್ಯಾಯದಂತೆ: ಅಂದರೆ, ಅನ್ನ ಮಾಡುವಾಗ, ಸಾಕಷ್ಟು ಬೆಂದಿದೆಯೇ ಎಂದು ತಿಳಿಯಲು ಒಂದೆರಡು ಅಗುಳುಗಳನ್ನು ನೋಡಿದರೆ ಸಾಕಲ್ಲವೇ? ಹಾಗೆ).  ಎಷ್ಟಾದರೂ, ಕಾಳಿದಾಸನು ಕಾಣಿಸುವ ಜೀವನದರ್ಶನವೇನೆಂಬುದೇ ನಮಗೆ ಈ ಲೇಖನಮಾಲೆಯಲ್ಲಿ ಪ್ರಸ್ತುತ.  

ಕಾಳಿದಾಸನ ಅತ್ಯಂತ ಪ್ರಸಿದ್ಧವಾದ ಕೃತಿಯೆನಿಸುವ ಅಭಿಜ್ಞಾನಶಾಕುಂತಲ ನಾಟಕವು ಇಂಗ್ಲೀಷ್-ಫ್ರೆಂಚ್-ಜರ್ಮನ್ ಭಾಷೆಗಳಿಗೆ ಸುಮಾರಾಗಿ ಹದಿನೆಂಟನೆಯ ಶತಮಾನದ ಕೊನೆಯ ಆಸುಪಾಸಿನ ಹೊತ್ತಿಗೆ ಅನುವಾದ ಕಂಡಿತ್ತು. ಆ ಕಾಲಘಟ್ಟದಲ್ಲಿ ಜರ್ಮನರಿಗೆ ಸಂಸ್ಕೃತಭಾಷೆಯನ್ನು ಕುರಿತಾಗಿ ಉತ್ಕಟಕುತೂಹಲವೂ ತೀವ್ರಾದರವೂ ಇತ್ತಾಗಿ, ಅದರ ಆಂಗ್ಲಾನುವಾದವು ಬಂದ ಒಂದು ವರ್ಷದೊಳಗೇ ಜರ್ಮನ್‍ಭಾಷೆಗೆ ಅದು ಅನುವಾದವನ್ನು ಹೊಂದಿತು (ಎಂದರೆ ೧೭೯೧ರಲ್ಲಿ). ಆಗ ಬಹಳ ಹೆಸರುವಾಸಿಯಾಗಿದ್ದ ಜರ್ಮನ್ ವಿದ್ವಾಂಸನೆಂದರೆ ಗಯಟೆ (Goethe). ನಾಟಕ-ಕಾದಂಬರಿ-ವಿಮರ್ಶೆಗಳಲ್ಲೂ ಕೀರ್ತಿಯನ್ನು ಸಂಪಾದಿಸಿದ್ದ ಆತ, ವಿಜ್ಞಾನಕ್ಷೇತ್ರದಲ್ಲೂ ಕೆಲಸವನ್ನು ಮಾಡಿದ್ದವನು. ಹೀಗಾಗಿ ಪಶ್ಚಿಮದೇಶಗಳ ಸಾಹಿತ್ಯ-ತತ್ತ್ವಜ್ಞಾನ-ರಾಜಕೀಯ ಚಿಂತನೆಗಳ ಮೇಲೆ ಆತನ ಪ್ರಭಾವ ಇಂದಿಗೂ ಅನಲ್ಪವಾಗಿರುವುದೇ. ಅಂತಹ ಧೀಮಂತನೊಬ್ಬನ ಅಭಿಪ್ರಾಯವು ಗ್ರಾಹ್ಯವೇ ಸರಿ.

ಸುಪ್ರತಿಷ್ಠಿತನೂ ಪ್ರಭಾವಸಂಪನ್ನನೂ ಆದ ಈತ, ಕಾಳಿದಾಸನ ಶಾಕುಂತಲವನ್ನು ಕುರಿತು ಮಾಡಿರುವ ಉದ್ಗಾರವು ಲೋಕವಿಶ್ರುತವೇ. ಶಾಕುಂತಲದ ಹಲವು ಮುದ್ರಣಗಳಲ್ಲಿ ಉಲ್ಲೇಖಿಸಲಾದ ಆತನ ಉಕ್ತಿಯನ್ನೊಮ್ಮೆ ಇಲ್ಲಿ ಅವಲೋಕಿಸುವುದು ಯುಕ್ತ. ಆತನ ಉದ್ಗಾರವು ಜರ್ಮನ್‍ಭಾಷೆಯಲ್ಲಿರುವುದರಿಂದ, ಅದರ ಪ್ರಸಿದ್ಧವಾದ ಆಂಗ್ಲಾನುವಾದವೊಂದನ್ನು (ಈಸ್ಟ್‍ವಿಕ್ ಎಂಬುವನು ಮಾಡಿದುದು) ಇಲ್ಲಿ ಕೊಟ್ಟಿದೆ.

"Wouldst thou the young year's blossom and the fruits of its decline/ And all by which the soul is charmed, enraptured, feasted, fed/ Wouldst thou the earth and heaven itself in one sole name combine?/ I name thee, O Sakuntala! and all at once is said."

ಏನಿದರ ಅಭಿಪ್ರಾಯ? : ವಸಂತ ಋತುವಿನ ಮುಕುಲವನ್ನೂ, ಅದರ ಪರಿಣತಿಯನ್ನೂ; ಜೊತೆಗೇ  ಮನಸ್ಸಿನ ಮೋದವನ್ನೂ ಮೋಹವನ್ನೂ  ಸಂತೃಪ್ತಿಯನ್ನೂ; ಹಾಗೂ ಭುವಿ-ದಿವಿಗಳೆರಡನ್ನೂ – ಇವೆಲ್ಲವನ್ನೂ ಒಂದೇ ಹೆಸರಿನಲ್ಲಿ ಯೋಜಿಸಬೇಕೆಂದಿದ್ದಲ್ಲಿ ಅದಕ್ಕೆ ನಾ ಹೆಸರಿಸುವುದು ಆ ಶಾಕುಂತಲವನ್ನೇ: ಇಷ್ಟನ್ನು ಹೇಳಿದರೆ ಅಷ್ಟನ್ನೂ ಹೇಳಿದಂತೆಯೇ ಸರಿ!

ಅಲ್ಲಿಗೆ, ದೇಶ-ಕಾಲಗಳೆರಡರಲ್ಲೂ ಲಭ್ಯವಾಗುವ ಪರಮೋತ್ಕೃಷ್ಟತೆಯನ್ನು ಹೇಳಿದಂತಾಯಿತು. ಹೇಗೆ? ಮೊಗ್ಗು ಆರಂಭದಶೆಯನ್ನೂ ಫಲವು ಮುಕ್ತಾಯದಶೆಯನ್ನೂ ಹೇಳುವುದು; ಇವೆರಡನ್ನೂ (ನಡುವಿನ ಪ್ರಗತಿಯನ್ನೂ ಒಳಗೊಂಡಂತೆ) ಹೇಳಿತೆಂದರೆ, ಕಾಲಚಕ್ರದ ಆದಿ-(ಮಧ್ಯ)-ಅಂತಗಳನ್ನು (ಪ್ರತೀಕಿಸಿ) ಹೇಳಿದಂತೆಯೇ ಸರಿ. ಹಾಗೆಯೇ ಭೂಲೋಕ-ಸ್ವರ್ಗಲೋಕಗಳೆಂದಾಗಲೂ ಸೃಷ್ಟಿಯ ವ್ಯಾಪ್ತಿಯ ಈ ಕೊನೆ - ಆ ಕೊನೆಗಳನ್ನು - ಎಂದರೆ ಸರ್ವದೇಶವನ್ನೂ, ಸೂಚಿಸಿದಂತಾಯಿತು. ಇನ್ನು ಚಿತ್ತಕ್ಕೆ ಇನಿಸನ್ನೂ ಉಣಿಸನ್ನೂ, ಮೋದವನ್ನೂ ಬೋಧವನ್ನೂ ಈ ಕಾಲಿಕವ್ಯಾಪ್ತಿ-ದೈಶಿಕವ್ಯಾಪ್ತಿಗಳಲ್ಲಿ ಕೊಡುವುದೆಂದರೆ, ಇನ್ನಿದಕ್ಕಿಂತಲೂ ಮಿಗಿಲಾಗಿ ಮತ್ತೇನನ್ನು ಮತ್ತಿನ್ನೆಷ್ಟು ಕೊಡಲಾದೀತು? ಇವಿಷ್ಟನ್ನೂ ಒಟ್ಟಿಗೇ ಉಂಟುಮಾಡಲು ಶಾಕುಂತಲವೊಂದೇ ಸಾಕು! - ಎಂದು ಉದ್ಗರಿಸುತ್ತಾನೆ, ಈ ಕವಿ!

ಕವಿಯ ನುಡಿಯಾಯಿತು. ಆಂಗ್ಲರಿಗೆ ಷೇಕ್ಸ್‍ಪಿಯರ್ ಎಂದರೆ ಹಿಂದಿನಿಂದಲೂ ಅಸಾಧಾರಣ ಆದರವಷ್ಟೆ? ಶಾಕುಂತಲವನ್ನು ಮೊಟ್ಟಮೊದಲಿಗೆ ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿದ ಸರ್ ವಿಲಿಯಂ ಜೋನ್ಸ್ (William Jones) ಎಂಬವ( ಅನುವಾದಕ, ನ್ಯಾಯಾಧೀಶ)ನು ಕಾಳಿದಾಸನನ್ನು "The Shakespeare of India" (ಭಾರತದ ಷೇಕ್ಸ್‍ಪಿಯರ್) ಎಂದು ಕರೆದ! (ಎಂದರೆ, ತಮ್ಮ ಕವಿವಲಯದಲ್ಲಿ ಷೇಕ್ಸ್‍ಪಿಯರನು ಹೇಗೆ ಉತ್ತಮ ಮನ್ನಣೆಗೆ ಪಾತ್ರನೋ, ಹಾಗೆ ಭಾರತಕವಿವೃಂದದಲ್ಲಿ ಆದರಾತಿಶಯಕ್ಕೆ ಪಾತ್ರನಾದವನೆಂದರೆ ಕಾಳಿದಾಸನೇ ಸರಿ – ಎಂದು). ಮೋನಿಯರ್ ವಿಲಿಯಂಸ್ (Monier Williams) ಎಂಬ ವಿದ್ವಾಂಸನು ಕೂಡ ಅದೇ ಬಿರುದನ್ನು ಅನುಮೋದಿಸಿದವನೇ.

ಶಾಕುಂತಲವು ಕಾಳಿದಾಸನ ಮೇರುಕೃತಿಯೆಂದು ಸ್ವದೇಶ-ವಿದೇಶಗಳಲ್ಲೆಲ್ಲ ಖ್ಯಾತಿ ಬಂದರೂ, ಬ್ರಿಟಿಷರು ಮಾತ್ರ ತಮ್ಮ ಎಂ(ದೆಂ)ದಿನ ಕೊಂಕು-ಕೊಳಕು ಬುದ್ಧಿಯನ್ನು ಕೊಂಚವೂ ಬಿಡದೆ, ಶಾಕುಂತಲವು ಅತ್ಯಂತ ಅನೈತಿಕವಾದ ನಾಟಕವೆಂದು ಜರೆದು, ಶಾಲೆ-ಕಾಲೇಜುಗಳಲ್ಲಿ ಅದನ್ನು ಪಾಠ್ಯವಾಗಿ ಇಡಬಾರದೆಂದು ಸಹ ಆಗ್ರಹಿಸಿದ್ದರು! (ಆದರೆ ಈ ನಾಟಕದಲ್ಲಿಯ (ದುಷ್ಯಂತ ಮೊದಲಾದವರ) ಪಾತ್ರಚಿತ್ರಣವು ಅದೆಷ್ಟು ಉನ್ನತ-ಉದಾತ್ತವೆಂಬುದನ್ನು ಮುಂದೆ ಈ ಲೇಖನಮಾಲೆಯಲ್ಲೇ ಸ್ಪಷ್ಟಪಡಿಸಲಾಗುತ್ತದೆ).

ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ರೈಡರ್ (Ryder) ಎಂಬ ವಿದ್ವಾಂಸನು, ಕಾಳಿದಾಸನು ಒಬ್ಬ ಆಶ್ಚರ್ಯಕರನಾದ ವ್ಯಕ್ತಿಯೆಂದು ಹೇಳುತ್ತಾ, ಆತನ ಸಮಕಾಲೀನರು ಆತನ ಹಿರಿತನವನ್ನು ಪೂರ್ಣವಾಗಿ ಗ್ರಹಿಸಿರಲಾರರು - ಎನ್ನುತ್ತಾನೆ. ಕಾಳಿದಾಸನ ಸಮತ್ವವೇ ಅನ್ಯಾದೃಶವಾದದ್ದು: ಮಹಾರಾಜನ ವೈಭವದ ಸಭೆಯಾಗಲಿ ಒಂಟಿಯಾದ ಗಿರಿತಟವಾಗಲಿ - ಎರಡರಲ್ಲೂ ಸಮನಾಗಿ ಪ್ರೀತಿಯುಳ್ಳವನವನು; ಹಾಗೆಯೇ ಉದಗ್ರವ್ಯಕ್ತಿಗಳೊಂದಿಗೂ ಸಾಧಾರಣಮಂದಿಯೊಂದಿಗೂ ಕಲೆಯಬಲ್ಲವನಾಗಿದ್ದವನು. ಅಂತಹವನನ್ನು ಕಂಡು ಆತನ ಜೀವಿತಕಾಲದಲ್ಲೇ ಮೆಚ್ಚಿರುವವರು ವಿರಳವೇ ಸರಿ - ಎಂದಿದ್ದಾನೆ.

ಪೂರ್ವದೇಶಗಳ ಬಗ್ಗೆ ತಿರಸ್ಕಾರವೆಂಬುದು ಪಾಶ್ಚಾತ್ತ್ಯರಲ್ಲಿ ಪ್ರಚುರ; ಒಬ್ಬಿಬ್ಬ ಧೀಮಂತರಾದರೂ ಸತ್ಯವಾದಿಗಳಾಗಿದ್ದಾರೆಲ್ಲಾ!  - ಎಂಬುದೇ ಸಂತೋಷದ ವಿಷಯವಲ್ಲವೇ?

ಸೂಚನೆ : 19/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.