Thursday, March 3, 2022

ಗೌರೀಶಂಕರ-ಕೈಲಾಸ ಶಿಖರಗಳಲ್ಲಿ ಶಿವನನ್ನು ಕಂಡವರ್ಯಾರು?(Gourishankara-Kailasa shikaragalalli Shivanannu kandavaryaaru?)

ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)




ಕೈಲಾಸಪರ್ವತವೇ ಪರಶಿವನ ವಾಸಸ್ಥಾನವೆಂಬುದು ಸುಪ್ರಸಿದ್ಧ. ಅಲ್ಲಿ ಶಿವನು ಉಮೆಯೊಡನೆಯೂ, ಗಣೇಶ, ಸ್ಕಂದ ಹಾಗೂ ತನ್ನ ಭೂತಗಣಗಳೊಡನೆಯೂ ವಿರಾಜಿಸುತ್ತಾನೆ; ಆತನ ಗಣಗಳು ತಮ್ಮ ನೃತ್ಯ ಗೀತಗಳಿಂದ ಆತನನ್ನು ಸ್ತುತಿಸುತ್ತಿರುವರು ಎಂಬುದಾಗಿ ಪುರಾಣಗಳು ವರ್ಣಿಸುತ್ತವೆ. ಮಹಾದೇವನು ಹುಲಿ ಅಥವಾ ಆನೆಯ ಚರ್ಮವನ್ನು ಧರಿಸಿ ಧ್ಯಾನಮಗ್ನನಾಗಿರುವನೆಂಬ ವರ್ಣನೆಗಳನ್ನು ಸಹ ಕಾಣಬಹುದಾಗಿದೆ. 


ಅಂತೆಯೇ ಗೌರೀಶಂಕರ ಶಿಖರವೂ ಶಿವನ ಸ್ಥಾನ, ಪರಮಪವಿತ್ರ ಸ್ಥಳವೆಂದೂ ಪರಿಗಣಿಸಲ್ಪಡುತ್ತದೆ. ಅಲ್ಲಿ ಶಂಕರನು ಗೌರೀಸಮೇತನಾಗಿ ಬೆಳಗುತ್ತಿರುವನೆಂದೂ, ಈ ಕಾರಣದಿಂದಲೇ ಆ ಶಿಖರಕ್ಕೆ ಆ ನಾಮಧೇಯವನ್ನು ನೀಡಲಾಗಿದೆಯೆಂದೂ ಪ್ರತೀತಿಯಿದೆ. 


ಕೈಲಾಸಪರ್ವತವು ಟಿಬೆಟ್ಟಿನಲ್ಲಿನ ಹಿಮಾಲಯಪರ್ವತ ಶ್ರೇಣಿಗೆ ಸೇರಿರುವ ಶಿಖರ. ಇದರ ತಪ್ಪಲಿನಲ್ಲಿರುವ ಮಾನಸ ಸರೋವರವೂ ಸಹ ಪವಿತ್ರವಾದ ಸರೋವರವಾಗಿ ಪರಿಗಣಿಸಲ್ಪಡುತ್ತಿದೆ. ಈ ಸರೋವರ ಹಾಗೂ ಕೈಲಾಸ ಪರ್ವತ ಯಾತ್ರೆಗೆ ಪ್ರತಿವರ್ಷವೂ ಅನೇಕ ಜನರು ಹೋಗಿಬರುವುದು ಸುಪ್ರಸಿದ್ಧವಾಗಿದೆ.  ಕೈಲಾಸ ಪರ್ವತವು ಎಂತಹ ತಜ್ಞ ಪರ್ವತಾರೋಹಿಗೂ ಸವಾಲನ್ನೆಸಗುವಂತಿರುವ ಅತ್ಯಂತ ಕಡಿದಾದ ಹಿಮಭರಿತವಾದ ಶಿಖರ. ಯಾತ್ರಿಕರು ಅದನ್ನು ಪ್ರದಕ್ಷಿಣವಷ್ಟೇ ಮಾಡಬಲ್ಲರು. ಯಾರೂ ಅದರ ತುದಿಯನ್ನು ಮುಟ್ಟಿರುವುದು ತಿಳಿದುಬಂದಿಲ್ಲ. ಆದ್ದರಿಂದ ಮಹಾದೇವನು ತನ್ನ ಪರಿವಾರದೊಂದಿಗೆ ಅಲ್ಲಿ ವಿರಾಜಮಾನನಾಗಿರುವುದು ಪುರಾಣೋಕ್ತಿಯಾಗಿ ಮಾತ್ರವೇ ಉಳಿದಿದೆಯೇ ಹೊರತು ಕಣ್ಣಿನಿಂದ ನೋಡಿದವರಾರೂ ಇಲ್ಲ. 


ನೇಪಾಳಕ್ಕೆ ಸೇರಿರುವಂತಹ ಹಿಮಾಲಯಶ್ರೇಣಿಯ ಗೌರೀಶಂಕರ ಶಿಖರವನ್ನು ಅತ್ಯಂತ ಶ್ರಮದಿಂದ ಆರೋಹಣಮಾಡಿ ಅದರ ತುಟ್ಟತುದಿಯನ್ನು ಮುಟ್ಟಿದವರುಂಟು ಎಂಬುದಕ್ಕೆ ದಾಖಲೆಗಳಿವೆ. ಆದರೆ ಅಲ್ಲಿ ಏರಿದವರಾರೂ ಅಲ್ಲಿ ಗೌರಿಯನ್ನೋ ಶಂಕರನನ್ನೋ ಕಂಡೆವೆಂದು ತಿಳಿಸಿಲ್ಲ. ಆದ್ದರಿಂದ ಅದೂ ಸಹ ಬರೀ ನಂಬಿಕೆಯ ಮೇಲೆ ನಿಂತಿರುವ ಮಾತಷ್ಟೇ ಆಗಿದೆ. 


ಹಾಗಾದರೆ ಈ ಪರ್ವತ ಶಿಖರಗಳು ಮಹಾದೇವನ ವಾಸಸ್ಥಾನಗಳೆಂಬುದು ಪುರಾಣಕಾಲಕ್ಕೆ ಮಾತ್ರವೇ ಸೀಮಿತವೇ? ಅಲ್ಲಿಂದ ಮುಂದೆ ಶಿವನು ತನ್ನ ವಾಸಸ್ಥಾನವನ್ನು ಬದಲಾಯಿಸಿಬಿಟ್ಟನೇ? ಕೈಲಾಸವನ್ನು ಏರಿದವರೂ ಯಾರೂ ಇಲ್ಲ ಎಂದಮೇಲೆ  ಇದು ಪುರಾಣಕಾರರ ಕಲ್ಪನೆಯೇ? ಇದು ಮೂಢ ನಂಬಿಕೆಯಲ್ಲವೇ? ಎಂಬ ಪ್ರಶ್ನೆಗಳು ವಿಚಾರಪರರನ್ನು ಕಾಡಿದರೆ ಅಚ್ಚರಿಯೇನಿಲ್ಲ.  


   ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾದರೆ ಪುರಾಣಗಳ ಬಗೆಗೆ ಸರಿಯಾದ ತಿಳಿವಳಿಕೆ ಆವಶ್ಯಕವಾಗುತ್ತದೆ. ಇತರ ಕಥೆ-ಕಾದಂಬರಿಗಳನ್ನು ಓದುವಂತೆ ಪುಸ್ತಕಗಳಿಂದ ನಾವೇ ಓದಿ ತಿಳಿಯಹೊರಟಾಗ ಇಂತಹ ಅನೇಕ ಸಮಸ್ಯೆಗಳು ತಲೆದೋರುವುದು ಸಹಜವೇ ಆಗಿದೆ. ಪುರಾಣಗಳಲ್ಲಿ ಐತಿಹಾಸಿಕ ಘಟನೆಗಳಷ್ಟೇ ಅಲ್ಲದೆ ಅನೇಕ  ಜಟಿಲವಾದ ಸತ್ಯಗಳನ್ನೂ, ಅಂತರಂಗದ ದರ್ಶನಗಳನ್ನೂ ಕಥಾರೂಪದಲ್ಲಿ ಹೇಳಿರುವುದುಂಟು. ಇದು ಜಟಿಲವಾದ ವಿಚಾರಗಳನ್ನು ಸುಲಭವಾಗಿ ಲೋಕಕ್ಕೆ ಮನವರಿಕೆ ಮಾಡಲು ಜ್ಞಾನಿಗಳು ಕೈಗೊಂಡಿರುವ ಉಪಾಯ. ಆದ್ದರಿಂದಲೇ ಪುರಾಣಗಳನ್ನು ತತ್ತ್ವವರಿತ ಹಿರಿಯರಿಂದಲೇ ಕೇಳಿ ತಿಳಿಯಬೇಕೆನ್ನುವ ಮಾತಿದೆ. ಮಹಾಯೋಗಿಯೂ, ಮಹರ್ಷಿಹೃದಯವೇದಿಗಳೂ ಆದ ಶ್ರೀರಂಗಮಹಾಗುರುಗಳು ಈ ವಿಚಾರದಲ್ಲಿ ನೀಡಿದ ವಿವರಣೆಯನ್ನು ಇಲ್ಲಿ ಸ್ಮರಿಸುವುದು ಉಚಿತವಾಗಿದೆ.  


ಪ್ರಕೃತ ಮೇಲಿನ ಶಿಖರಗಳಲ್ಲಿ ಕಂಗೊಳಿಸುವ ಶಿವಮಹಾದೇವನು ಭೌತಿಕದೃಷ್ಟಿಗೆ ಗೋಚರಿಸುವವನಲ್ಲ. ದಿವ್ಯದೃಷ್ಟಿಗೆ-ಜ್ಞಾನದೃಷ್ಟಿಗೆ ಮಾತ್ರವೇ ಸಿಗುವವನು. ಯೋಗಿಗಳು ತಪಸ್ಯೆಯಿಂದ ತಮ್ಮ ಮನಸ್ಸು-ಪ್ರಾಣಗಳನ್ನು ಒಳಮುಖವಾಗಿಸಿ ಸುಷುಮ್ನೆಯೆಂಬ ನಾಡಿಯಲ್ಲಿ ಪ್ರವೇಶಿಸಿದಾಗ  ಸಮಾಧಿಯ ಉತ್ತುಂಗ ಶಿಖರದಲ್ಲಿ ಮಹಾದೇವನ ದರ್ಶನವನ್ನು ಮಾಡುತ್ತಾರೆ. ಆ ಸ್ಥಾನವೇ ಶಿವನ ಕೈಲಾಸ; ಅಲ್ಲಿ ಉಮಾ-ಮಹೇಶ್ವರನು ತನ್ನ ಗಣಗಳೊಂದಿಗೆ ವಿರಾಜಮಾನನಾಗಿರುವುದನ್ನು ದಿವ್ಯದೃಷ್ಟಿಯಿಂದ ದರ್ಶನಮಾಡಿದರು. ಇಂತಹ ಸಮಾಧಿಸ್ಥಿತಿಯಲ್ಲಿ ಮೈ ಮರಗಟ್ಟಿರುತ್ತದೆ. ತಾಪತ್ರಯಗಳೆಲ್ಲವೂ ಕಳೆದು ಅತ್ಯಂತ ತಂಪಾಗಿಡುವಂತಹ ಸ್ಥಿತಿ ಅದು. ಪರಮಸುಖವನ್ನೀಯುವ ಸ್ಥಿತಿ.

 

     ಇಂತಹ ಅದ್ಭುತ ಸುಖದತ್ತ ಲೋಕದ ಗಮನವನ್ನೂ ಸೆಳೆಯಲೋಸುಗ ಭಾರತೀಯಮಹರ್ಷಿಗಳು ಕೈಗೊಂಡಿರುವ ಪ್ರಾಯತ್ನಗಳನೇಕ. ಅವರು ಪ್ರಕೃತಿಯಲ್ಲಿ ಕೆಲವು ಜಾಗಗಳ ವಿಶೇಷಧರ್ಮಗಳನ್ನು ಗುರುತಿಸಿಕೊಂಡರು. ಮೇಲೆ ತಿಳಿಸಿರುವ ಶಿಖರಗಳು ಸಂಸ್ಕಾರಿಗಳ ಮನಸ್ಸನ್ನು ಹೆಚ್ಚು ಪ್ರಯತ್ನವಿಲ್ಲದೆಯೇ ಒಳಕೈಲಾಸದೆಡೆಗೆ-ಗೌರೀಶಂಕರನೆಡೆಗೆ ಸೆಳೆಯುವ ಧರ್ಮದಿಂದ ಕೂಡಿವೆಯೆಂಬುದು ಮಹರ್ಷಿಗಳ ಅನುಭವಕ್ಕೆ ಅರಿವಾದ ಸತ್ಯ. ಆದ್ದರಿಂದಲೇ ಸಮಾಧಿಯ ಉತ್ತುಂಗ ಶಿಖರವನ್ನು ಹೋಲುವ ಔನ್ನತ್ಯದಿಂದ ಕೂಡಿರುವ ಶಿಖರಗಳನ್ನು ಕೈಲಾಸ-ಗೌರೀಶಂಕರವೆಂದು ಹೆಸರಿಸಿದರು. ತಂಪು ಹಾಗೂ ಮೈ ಮರಗಟ್ಟುವ ಸ್ಥಿತಿಯನ್ನೂ ಸಹ ಈ ಹೊರ ಶಿಖರಗಳು ಮೂಡಿಸುತ್ತವೆಂಬುದು ಸಾಮಾನ್ಯಜ್ಞಾನ. ಸಮಾಧಿಯ ಹೊರ ಲಕ್ಷಣಗಳ ಹೋಲಿಕೆಗಳು ಈ ಹೊರ ಶಿಖರಗಳಲ್ಲೂ ಇರುವುದು ಇವುಗಳಿಗೆ ಒಳದರ್ಶನದ ಹೆಸರುಗಳನ್ನಿಡಲು ಪುಷ್ಟಿಯನ್ನು ನೀಡಿವೆಯೆನ್ನಬಹುದು. ಒಳಜ್ಞಾನವನ್ನು ಸಾಧಿಸಿದುದಲ್ಲದೆ ಅದರ ಗುರುತುಗಳು ಪ್ರಕೃತಿಯಲ್ಲಿ ಯಾವ ಯಾವ ಕಡೆ ಮೂಡಿಬಂದಿವೆಯೆನ್ನುವುದನ್ನು ಗುರುತಿಸುವ ವಿಜ್ಞಾನವನ್ನೂ ಅರಿತ ಮಹರ್ಷಿಗಳ ಮೇಧೆ ಅದೆಷ್ಟು ಅದ್ಭುತವಾದದ್ದು! 


ಹೀಗೆ ಜ್ಞಾನಿಗಳೂ, ಮಹಾಮೇಧಾವಿಗಳೂ, ಸರ್ವಲೋಕ ಹಿತೈಷಿಗಳೂ ಆದ ಮಹರ್ಷಿಗಳಿಗೆ ಮತ್ತೆ ಮತ್ತೆ ನಮ್ಮ ಹೃತ್ಪೂರ್ವಕ ನಮನಗಳು. ಅವರಂತೆ ಅಂತರ್ದೃಷ್ಟಿಯಿಂದ ನಾವು ಕೈಲಾಸ -ಗೌರೀಶಂಕರ ಶಿಖರಗಳನ್ನು ಕಾಣುವಂತಾಗಲಿ ಎಂದು ಪ್ರಾರ್ಥಿಸೋಣ.


ಸೂಚನೆ: 3/3/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಲ್ಲಿ ಪ್ರಕಟವಾಗಿದೆ.