Tuesday, March 1, 2022

ವಸ್ತ್ರಾಭರಣ - 11 ಅಲಂಕಾರ - ಆಭರಣ (Vastra Bharana - 11 Alankara - Abharana)

 ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


ವಸ್ತ್ರ, ಪುಂಡ್ರ, ಕೇಶಗಳ ವಿನ್ಯಾಸ-ಇವುಗಳಿಗೂ ಯೋಗಕ್ಕೂ ಇರುವ ಸಂಬಂಧವನ್ನು ಗಮನಿಸಿಯಾಗಿದೆ.  ನಿತ್ಯವೂ ಮಾಡಿಕೊಳ್ಳುವ ವಸ್ತ್ರ ಅಲಂಕಾರ ಸಾಮಾನ್ಯದ್ದಾದರೆ,ಹಬ್ಬ, ಮದುವೆ, ಸಮಾರಂಭಗಳಿಗೆ ಮಾಡಿಕೊಳ್ಳುವ ವಿಶೇಷವಾದ ಅಲಂಕಾರಗಳದ್ದೇ ಒಂದು ಸೊಬಗು. ನಾನಾ ತರಹದ ಒಡವೆ-ಆಭರಣಗಳು, ವಸ್ತ್ರಗಳಜೊತೆಗೂಡಿ ಸೌಂದರ್ಯವನ್ನು ವರ್ಧಿಸುವಂತೆ ಮಾಡಿ ನಮ್ಮನ್ನು ಜನರ ಮುಂದೆ ಪ್ರಸ್ತುತಪಡಿಸಿಕೊಳ್ಳುವ ಬಯಕೆಯೂ ಸಹಜವೇ. ಇಂತಹ ಅಲಂಕಾರಗಳ ಬಗ್ಗೆ ಋಷಿಗಳ ದೃಷ್ಟಿಯೇನು? ಶ್ರೀರಂಗಮಹಾಗುರುಗಳ ಚರಣವ್ಯೂಹದಿಂದ ಈ ವಿಷಯದಲ್ಲಿ ಬಂದ ವಿಚಾರಧಾರೆಯನ್ನು ನೋಡೋಣ.  


`ಅಲಂಕಾರ' ಶಬ್ದಾರ್ಥ 

ಅಪೂರ್ಣವಾಗಿರುವುದನ್ನು ಪೂರ್ಣಮಾಡಿದರೆ ಅದು ಅಲಂಕಾರ. ಪೂರ್ಣವಾದಮೇಲೆ ಇನ್ನೇನೂ ಬೇಡ, ಸಾಕು ಎಂಬ ತೃಪ್ತಿಯ ಭಾವ ಮೂಡುತ್ತದೆ. ಹೀಗೆ 'ಅಲಂ'-ಸಾಕು ಎಂಬುದೇ 'ಅಲಂಕಾರ' ಎಂಬ ಪದಕ್ಕೆ ಮೂಲ. ಕಾವ್ಯದ ಶೋಭೆಯನ್ನು ಯಾವುದು ವರ್ಧಿಸಿ ಪೂರ್ಣತೆಯನ್ನು ತರುತ್ತದೆಯೋ ಅದನ್ನೂ ಅಲಂಕಾರ ಎನ್ನುತ್ತಾರೆ. ನಾಟ್ಯಶಾಸ್ತ್ರದಲ್ಲಿ ಅಲಂಕಾರವೆಂಬ ಪದದಿಂದ ವಸ್ತ್ರ, ಆಭರಣ ಹೂವಿನ ಹಾರ ಮುಂತಾದವುಗಳೆಲ್ಲವನ್ನೂ ಸೂಚಿಸುತ್ತಾರೆ.       


ಒಳಸೌಂದರ್ಯದತ್ತ ಸೆಳೆಯುವ ಹೊರಅಲಂಕಾರ 

ಈ ಶರೀರವು ಮಹತ್ತರವಾದ ಆನಂದದ ಗಣಿ. ಸಮಾಧಿಯಲ್ಲಿ ಅನುಭವಿಸಿದ ಆನಂದದ ಗುಂಗು ಜಾಗ್ರದವಸ್ಥೆಯಲ್ಲೂ ಮುಂದುವರೆಯುತ್ತದೆ. ಜ್ಞಾನಿಯ ನಡೆ-ನುಡಿ, ವೇಷ-ಭೂಷಣ, ಅಲಂಕಾರ ಎಲ್ಲದರಲ್ಲಿಯೂ ಒಳಸಂಸ್ಕಾರದ ಅಚ್ಚೊತ್ತಲ್ಪಟ್ಟಿರುತ್ತದೆ.  ಅವರು ಒಳಗೆ ಕಂಡ ದೇವತಾಮೂರ್ತಿಗಳ ಸೌಂದರ್ಯ, ಸೊಬಗುಗಳನ್ನು ಹೊರಗಡೆಯೂ ತಮ್ಮ ಮತ್ತಿತರ ವೇಷ-ಭೂಷಣಗಳಲ್ಲಿ  ನೋಡಿ ಆನಂದಿಸಲು ಇಷ್ಟಪಡುತ್ತಾರೆ. ಜೊತೆಗೆ ಚಾಣಾಕ್ಷತೆಯಿಂದ, ಒಳ ಸ್ಥಿತಿಗಳನ್ನು ತಂದುಕೊಡುವ ಉಪಾಯಗಳನ್ನೂ ವಸ್ತ್ರ, ಆಭರಣಗಳಲ್ಲಿ ಹೆಣೆದಿಡುತ್ತಾರೆ. ಶರೀರದ ಮರ್ಮಸ್ಥಾನಗಳನ್ನು ಅರಿತು, ಆ ಸ್ಥಾನಗಳಲ್ಲಿ ಯಾವ ರೀತಿ ಒತ್ತಿ, ಎತ್ತಿ, ಕಟ್ಟಿ, ಬಿಗಿದರೆ ಒಳ ಯೋಗಮಾರ್ಗಗಳು ತೆರೆಯುತ್ತವೆ ಎಂಬುದನ್ನು ಸ್ವಾನುಭವದಿಂದ ಕಂಡು ಯೋಜಿಸಿರುತ್ತಾರೆ. ಸ್ಪರ್ಶದಿಂದಲೂ, ನೋಟದಿಂದಲೂ ಯೋಗಸಾಧಕವಾಗಿರುವಂತೆ ಯೋಜಿಸಿರುತ್ತಾರೆ. ಇಂತಹ ಕೆಲಸವನ್ನು ವಸ್ತ್ರಗಳ, ಆಭರಣಗಳ ಯೋಜನೆಯಿಂದ ಸಾಧಿಸಿ, ಪೂರ್ಣಗೊಳಿಸಿದ್ದಾರೆ 


ಯೋಗಮಾರ್ಗದ ಮರ್ಮಸ್ಥಾನಗಳು 

ಈ ಮರ್ಮಸ್ಥಾನಗಳನ್ನು ಗಮನಿಸೋಣ. ಯೋಗೋಪನಿಷತ್ತುಗಳು ೧೮ ಮರ್ಮಸ್ಥಾನಗಳನ್ನು ವರ್ಣಿಸುತ್ತವೆ. ಈ ಮರ್ಮಸ್ಥಾನಗಳಲ್ಲಿ ಒಂದೊಂದಾಗಿ ದೃಷ್ಠಿ-ಮನಸ್ಸು-ಪ್ರಾಣಗಳನ್ನು ಕೇಂದ್ರೀಕರಿಸಿ, ಪುನಃ ಹಿಂದಕ್ಕೆ ಸೆಳೆದು, ಪಾದಾಂಗುಷ್ಟದಿಂದ ಶಿರಸ್ಸಿನ ಶಿಖರಸ್ಥಾನದವರೆಗೂ ಆರೋಹಣ ಕ್ರಮದಲ್ಲಿ ಹೋಗುವಂತಹ ಪ್ರತ್ಯಾಹಾರವನ್ನು ಕಲ್ಪಿಸಿದೆ. ಪಾದಾಂಗುಷ್ಟ, ಪಾದ, ಕಣುಕಾಲು, ಮೀನಖಂಡ, ಮಂಡಿ, ತೊಡೆ, ಗುದದ್ವಾರ, ಜನನಾಂಗ, ನಾಭಿ, ಹೃದಯ, ಕತ್ತು, ಕಂಠಕೂಪ, ತಾಲು, ಮೂಗಿನ ಹೊಳ್ಳೆ, ಕಣ್ಣುಗಳು, ಭ್ರೂಮಧ್ಯ , ಹಣೆ ಮತ್ತು ಶಿರಸ್ಸಿನ ಅಗ್ರ. ಕಾಲಿನ ಅಂಗುಷ್ಠ, ಕಣುಕಾಲು, ಮಂಡಿ, ತೊಡೆ ಮುಂತಾದವುಗಳಿಗೆ ಹೊಂದುವಂತಹ ಕೈಗಳಲ್ಲಿನ ಬೆರಳುಗಳು, ಮಣಿಕಟ್ಟು, ಮೊಣಕೈ, ಭುಜ, ತೋಳುಗಳನ್ನೂ ಯೋಗಸಾಧನೆಯಲ್ಲಿ ಮುಖ್ಯ ಅಂಗಗಳೆಂದು ಕೆಲವರು ಭಾವಿಸುತ್ತಾರೆ.    


ಆಭರಣಗಳಲ್ಲಿ ವಿವಿಧ ಪ್ರಕಾರಗಳು 

ಆಭರಣಗಳ ವೈವಿಧ್ಯವನ್ನು ಗಮನಿಸೋಣ. ಆಭರಣಗಳು ೪ ಪ್ರಕಾರವೆಂದು ಶಾಸ್ತ್ರಗಳು ಹೇಳುತ್ತವೆ. ಚುಚ್ಚಿಕೊಳ್ಳುವ ಆಭರಣಗಳನ್ನು ಆವೇಧ್ಯ ಎಂದು ಕರೆಯುತ್ತಾರೆ. ಉದಾಹರಣೆಗೆ ಕಿವಿಯ ಓಲೆ, ಮೂಗುತಿ. ಬಂಧನೀಯ ಆಭರಣಗಳು ಬಿಗಿಯಾಗಿ ಕಟ್ಟಿಕೊಳ್ಳುವಂತಹವು-ತೋಳುಬಳೆ ಮುಂತಾದವು. ಪ್ರಕ್ಷೇಪ್ಯ ಆಭರಣಗಳು ಬಂಧನೀಯಗಳಿಗಿಂತ ಸ್ವಲ್ಪ ಸಡಿಲವಾಗಿ ಧರಿಸುವಂಥವು, ಗೆಜ್ಜೆಗಳಂತೆ. ಕೊನೆಯದು ಆರೋಪ್ಯ - ಅಂದರೆ ಶರೀರದ ಅಂಗಾಂಗಗಳ ಮೇಲೆ ಸುಮ್ಮನೆ ನಿಲ್ಲುವಂತೆ ಮಾಡುವ ಆಭರಣಗಳು - ಸರ, ಹಾರ ಮುಂತಾದವು. ಇವುಗಳ ವಿವರಗಳನ್ನು ಮುಂದಿನ ಅಂಕದಲ್ಲಿ ನೋಡೋಣ.

 (ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 26/2/2022 ರಂದು ಪ್ರಕಟವಾಗಿದೆ.