ಲೇಖಕರು: ಮೋಹನ ರಾಘವನ್.
(ಪ್ರತಿಕ್ರಿಯಿಸಿರಿ lekhana@ayvm.in)
ಕಿವಿಯ-ಮೂಗಿನ ಆಭರಣಗಳು
ಕಿವಿ ಚುಚ್ಚಿಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲಿ ಒಂದು ಪ್ರಧಾನ ಸಂಸ್ಕಾರ. ಸಂಸ್ಕಾರವೆಂದರೆ, ಶುದ್ಧಿಮಾಡಿ ನಮ್ಮನ್ನು ಪೂರ್ವ ಸ್ಥಿತಿಗೆ ತರುವುದು. ಕಿವಿ ಮತ್ತು ಮೂಗನ್ನು ಚುಚ್ಚಿಕೊಳ್ಳುವುದು, ಯೋಗಸಾಧಕನರಿಗೆ ವಿಶೇಷ ಲಾಭವನ್ನು ಉಂಟು ಮಾಡುತ್ತದೆ. ಆಯುರ್ವೇದ ಶಾಸ್ತ್ರವೂ ಇದರಿಂದ ರೋಗಗಳಿಂದ ರಕ್ಷಣೆ ಸಿಗುವುದೆಂದು ಸಾರುತ್ತದೆ. ಕುಂಡಲ ಎಂಬ ಹೆಸರಿನಿಂದ ಕಂಡುಬರುವ ಆಭರಣ ಬಹಳ ಪ್ರಸಿದ್ಧ. ಕರ್ಣನು ಕವಚ ಕುಂಡಲಗಳನ್ನು ಹುಟ್ಟಿನಿಂದ ಧರಿಸಿ, ದಾನ ಮಾಡಿದ್ದು ತಿಳಿದೇ ಇದೆ. ವಿಷ್ಣುವನ್ನು ವರ್ಣಿಸುವಾಗ, ಕುಂಡಲವನ್ನು ಧರಿಸಿರುವುದಾಗಿ ವರ್ಣಿಸುತ್ತಾರೆ. ಕಿವಿಯನ್ನು ಸ್ತ್ರೀ-ಪುರುಷರಿಬ್ಬರೂ ಚುಚ್ಚಿಕೊಂಡರೂ ಮೂಗನ್ನು ಚುಚ್ಚಿಕೊಳ್ಳುವುದು ಸ್ತ್ರೀಯರಿಗೆ ವಿಶೇಷ.
ಕೈಗಳ ಆಭರಣ
ಕೈಯಲ್ಲಿ ಧರಿಸುವ ಬಳೆಗಳು ಚಿರಪರಿಚಿತ. ಪುಷ್ಕಳವಾಗಿ ಬಳೆಗಳನ್ನು ಕೈಗಳಲ್ಲಿ ಧರಿಸುವ ಪದ್ಧತಿ ಅನಾದಿಕಾಲದಿಂದಲೂ ನಮ್ಮ ದೇಶದಲ್ಲಿ ಕಂಡುಬರುತ್ತದೆ. ಸಿಂಧೂಕಣಿವೆಯ ಶಿಲಾಬಾಲಿಕೆಯರಲ್ಲೂ ಬಳೆಗಳ ಬಾಹುಳ್ಯ ಕಂಡುಬಂದು, ಇದು ಭಾರತೀಯ ಉಡುಗೆ ತೊಡುಗೆಯ ಒಂದು ಲಕ್ಷಣವೆಂದು ತಜ್ನ್ಯರು ಗುರುತಿಸುತ್ತಾರೆ. ಇದು ವಲಯ ಎಂಬುದರ ತದ್ಭವ. ಸುತ್ತುವರೆಯುವುದು ಎಂಬುದಿದರ ಅರ್ಥ. ಮಣಿಕಟ್ಟಿನಲ್ಲಿ ಕಟ್ಟುವ ಕಂಕಣವು ಮುಖ್ಯವಾದ ಆಭರಣ. ಶ್ರೀಕೃಷ್ಣನು ಜನ್ಮತಃ ಇದನ್ನು ಧರಿಸಿದ್ದನು ಎಂದು ಶ್ರೀಮದ್ಭಾಗವತವು ಹೇಳುತ್ತದೆ. ಬಳೆಗಳು ತೋಳಿನಲ್ಲೂ ತೋಳು ಬಳೆಯ ರೂಪದಲ್ಲಿ ಧರಿಸುವುದುಂಟು; ಅಂಗದ ಎಂಬುದು ಇದರ ಪ್ರಾಚೀನ ಹೆಸರು. ಕೇಯೂರವೆಂಬ ಮತ್ತೊಂದು ಪ್ರಕಾರ - ಇದನ್ನು ಸೀತಾದೇವಿ ಧರಿಸಿದ್ದುದನ್ನು ರಾಮಾಯಣವು ನಮೂದಿಸುತ್ತದೆ. ಕೈಯಲ್ಲಿ ಸದ್ದು ಮಾಡುವ ಕಡಗ, ಕಟಕ ಎಂಬುದರ ತದ್ಭವರೂಪ. ಪ್ರಸಿದ್ಧವಾದ ಕಣ್ಣಗಿಯ ಕಥೆಯು ಈ ಕಡಗವನ್ನೇ ಕೇಂದ್ರಬಿಂದುವಾಗಿ ಇಟ್ಟುಕೊಂಡಿದೆ. ಬೆರಳುಗಳಲ್ಲಿ ಧರಿಸುವ ಉಂಗುರವನ್ನು ಅಂಗುಲೀಯ-ಮುದ್ರಾ ಎಂದು ಕರೆಯುತ್ತಿದ್ದರು. ಈ ಹೆಸರಿನಲ್ಲಿನ ಎರಡು ಪದಗಳು ಇವತ್ತು ಬಳಕೆಯಲ್ಲಿರುವ ಪದಗಳಿಗೇ ಮೂಲವೆಂದನಿಸುತ್ತದೆ. ಅಂಗುಲೀಯ ಎಂಬುದು ಕನ್ನಡ-ತೆಲುಗುನಲ್ಲಿ ಉಂಗುರ(ಮು) ಎಂದೂ, ಮುದ್ರಾ ಎಂಬಪದವು ತಮಿಳು-ಮಲಯಾಳಂ ಭಾಷೆಯ ಮೋದಿರ ಎಂದೂ ನಾವಿಂದು ಕಾಣುತ್ತೇವೆ. ಈ ಉಂಗುರವು ಕಾಳಿದಾಸನ ಶಾಕುಂತಲ ನಾಟಕದಲ್ಲಿ ಪ್ರಧಾನಪತ್ರವನ್ನು ವಹಿಸುತ್ತದೆ. ಉಂಗುರವನ್ನು ಧರಿಸುವ ಬೆರಳಿಗೆ ಅದೇ ಹೆಸರನ್ನು ಕೊಟ್ಟಿದೆ. ಸಾಮಾನ್ಯವಾಗಿ ಯಜ್ಞ - ಹೋಮ -ಪೂಜೆ ಮುಂತಾದ ಕರ್ಮಗಳನ್ನು ಮಾಡುವಾಗ ಇದೆ ಬೆರಳಲ್ಲಿ ದರ್ಭೆಯಿಂದ ಮಾಡಿದ ಒಂದು ಪವಿತ್ರವನ್ನು ಧರಿಸುವುದು ಉಂಟು. ಇದರ ಹೆಸರೇ ಹೇಳುವಂತೆ ನಮ್ಮಲ್ಲಿದು ಪಾವಿತ್ರ್ಯವನ್ನು ಉಂಟುಮಾಡುತ್ತದೆ. ಪಾವಿತ್ರ್ಯವನ್ನು ಉಂಟುಮಾಡಲು ಈ ಉಂಗುರದ ಬೆರಳೇ ಅತ್ಯಂತ ಪರಿಣಾಮಕಾರೀ ಎಂಬುದು ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳ ತತ್ವಾರ್ಥಸಹಿತವಾದ ವಿಶ್ಲೇಷಣೆ. ಆದ್ದರಿಂದಲೇ ಸುವರ್ಣದಿಂದ ಮಾಡಲ್ಪಟ್ಟ ಉಂಗುರವನ್ನು ಈ ಬೆರಳಲ್ಲಿ ಧರಿಸುತ್ತಾರೆ.
ಕಂಠಾಭರಣ
ಕಂಠಕ್ಕೆ ಒಪ್ಪುವ ಹಾರಗಳು, ಸರಗಳಂತೂ ಅತ್ಯಂತ ಪ್ರಚಲಿತ ಹಾಗೂ ಜನಪ್ರಿಯ. ಇದರ ಪ್ರಕಾರಗಳು ಪುಷ್ಕಳವಾಗಿವೆ ಎಂದು ಶಾಸ್ತ್ರಗಳಲ್ಲೂ ಗಮನಿಸಿದ್ದಾರೆ. ಇವುಗಳಲ್ಲಿ ಹುಟ್ಟುವ ಪ್ರಕಾರಗಳಿಗೆ ಅನೇಕ ಕಾರಣಗಳು - ಸರದಲ್ಲಿರುವ ಎಳೆಗಳ ಸಂಖ್ಯೆ, ಮಣಿ-ಮುತ್ತುಗಳ ವೈವಿಧ್ಯ, ಅವುಗಳ ಉದ್ದ-ಗಾತ್ರಗಳು, ಮತ್ತು ಸರಗಳ ತುದಿಯಲ್ಲಿ ಶೋಭಿಸುವ ಪ್ರಧಾನ ಮಣಿ ಅಥವಾ ಶಿಲ್ಪಾಕೃತಿಗಳು. ಈ ಹಾರಗಳ ಸೊಬಗು ಹೊಯ್ಸಳ ಶೈಲಿಯ ಶಿಲ್ಪಗಳಲ್ಲಿ ಎದ್ದುಕಂಡು ಕಂಗೊಳಿಸುತ್ತದೆ. ಕಂಠದ ಸರದ ಪ್ರಕಾರಗಳನ್ನು ವರ್ಣಿಸುತ್ತ, ರತ್ನಾವಳೀ, ರತ್ನಮಾಲಿಕಾ, ಮುಕ್ತಾವಳೀ, ವ್ಯಾಳಪಂಕ್ತಿ, ಸೂತ್ರ ಎಂಬ ನಾನಾ ಹೆಸರುಗಳನ್ನೂ ಹೇಳುತ್ತವೇ ಶಾಸ್ತ್ರಗಳು. ನಾಟ್ಯಶಾಸ್ತ್ರದಲ್ಲಿ ಸರ(ಸ್) ಎಂಬ ಪದ ಎಳೆ ಎಂಬುದರ ಪರ್ಯಾಯವಾಗಿ ಬಳಸುತ್ತಾರೆ. ಪ್ರಸಿದ್ಧವಾದ ತಾಳೀ ಅಥವಾ ಮಂಗಳಸೂತ್ರವೂ ಒಂದು ರೀತಿಯ ಹಾರವೇ.
ಸೂಚನೆ : 12/03/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.