ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
ಇಂದಿನ ಚಿಂತನೆ
ಧರ್ಮ-ಈ ಪದದಷ್ಟು ನಮ್ಮ ದೇಶದಲ್ಲಿ, ಇತ್ತೀಚಿಗೆ ವಿದೇಶಗಳಲ್ಲೂ ಚರ್ಚೆ ಆದಷ್ಟು ಪ್ರಾಯಃ ಇನ್ನು ಯಾವ ಪದವೂ ಇಲ್ಲವೇನೋ. ಮತ ಪ್ರಚಾರಕರು,ಸಮಾಜ ಸುಧಾರಕರು,ಪತ್ರಕರ್ತರು, ದೂರದರ್ಶನದ ವಕ್ತಾರರು, ಆಯಾ ಕೋಮಿನ ಪ್ರಮುಖರು, ತಥಾಕಥಿತ ಬುದ್ಧಿಜೀವಿಗಳು, ರಾಜಕೀಯ ಧುರೀಣರು ಇತ್ಯಾದಿಯಾಗಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರೂ ಧರ್ಮದ ಬಗೆಗೆ ಮಾತನಾಡುವವರೇ. ಜಗತ್ತಿನ ಮತಗಳನ್ನೆಲ್ಲಾ 'ಧರ್ಮ' ಎಂಬ ಪದದಿಂದಲೇ ವ್ಯವಹರಿಸುವುದೂ ರೂಡಿಯಾಗಿಬಿಟ್ಟಿದೆ. ಈ ಮಧ್ಯೆ ಧರ್ಮನಿರಪೇಕ್ಷತೆ ಎಂಬ ಕೂಗು ಬೇರೆ. ಧರ್ಮ ಎಂಬ ಒಂದು ವಿಷಯ ಇರುವುದರಿಂದಲೇ ಜಗತ್ತಿನಲ್ಲಿ ಇಷ್ಟೆಲ್ಲಾ ಯುದ್ಧ,ಹೋರಾಟಗಳು ನಡೆಯುತ್ತಿವೆ. ಆದ್ದರಿಂದ ಧರ್ಮ ಎಂಬುದೇ ಇರಬಾರದು ಎಂದು ತಮ್ಮ ವಿದ್ವತ್ತನ್ನು ಮೆರೆಯುವವರೂ ಹಲವರು.
ಇದಲ್ಲದೇ ಭಿಕ್ಷೆ ಬೇಡುವವರು "ಧರ್ಮ ಮಾಡಿ" ಎನ್ನುತ್ತಾರೆ. ಏನಾದರೂ ಹಣವಿಲ್ಲದೇ ಮಾಡುವ ಸೇವೆಗೂ "ಧರ್ಮಕ್ಕೆ ಮಾಡಿದುದು" ಎನ್ನುವುದುಂಟು. ಅವರವರು ಮಾಡುವ ತಮ್ಮ ತಮ್ಮ ಮತಗಳ ರೀತಿ,ರಿವಾಜು, ಆಚರಣೆಗಳನ್ನೆಲ್ಲ ಧರ್ಮಕಾರ್ಯ ಎನ್ನುತ್ತಾರೆ. ಹೀಗೆ ಧರ್ಮ ಎನ್ನುವ ಪದ ಅವ್ಯಾಹತವಾಗಿ, ಸೀಮಾತೀತವಾಗಿ ಓಡಾಡುತ್ತಿದೆ.
ಧರ್ಮದ ನಿಜವಾದ ದೃಷ್ಟಿ
ಈ ಪದವನ್ನು ತಂದವರು ಸನಾತನ ಆರ್ಯ ಮಹರ್ಷಿಗಳು. ಈ ಪದವನ್ನು ಅವರ ದೃಷ್ಟಿಯಲ್ಲೇ ಅರ್ಥಮಾಡಿಕೊಳ್ಳಬೇಕು. ನಾವು ಇಲ್ಲಿ ಮಾಡುವ ಸಕ್ಕರೆ ಪೊಂಗಲ್ ಹೆಸರು, ಅರ್ಥಗಳು ಪರಕೀಯರಿಗೆ ಗೊತ್ತಿರಬೇಕು ಎಂದೇನೂ ಇಲ್ಲ. ಅಲ್ಲಿ ಅದರ ತಯಾರಿಕೆ ಬೆಳೆದುಬಂದಿಲ್ಲ. ಅವರಿಗೆ ಗೊತ್ತಿಲ್ಲ ಎಂದ ಮಾತ್ರಕ್ಕೆ ಹಾಗೊಂದು ತಿಂಡಿಯನ್ನೇ ಅಲ್ಲಗಳೆಯಬೇಕಾಗಿಲ್ಲ; ಅಥವಾ ಅದು ಅವರ ಬ್ರೆಡ್ಡಿನಂತೆ, ಬರ್ಗರ್ನಂತೆ ಎಂದು ಏನೇನೋ ಅಂದುಕೊಳ್ಳಬೇಕಾಗಿಲ್ಲ. ನೈಜವಾಗಿ ಪದವು ಯಾವ ಪದಾರ್ಥವನ್ನು ಹೇಳುತ್ತಿದೆ ಎಂಬ ಅರಿವಿನಿಂದಲೇ ವ್ಯವಹರಿಸುವುದು ವಿವೇಕಿಗಳ ಲಕ್ಷಣ.
ಧರ್ಮವೆಂದರೆ ಎಲ್ಲದರ ಸ್ಥಿತಿ ವಿಶೇಷ:
ಧರ್ಮ-ಅರ್ಥ-ಕಾಮ-ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಧರ್ಮಕ್ಕೇ ಅಗ್ರಸ್ಥಾನ. "ಧರ್ಮ ಒಂದಿದ್ದರೆ ಮುಂದಿನ ಎಲ್ಲಾ ವ್ಯವಹಾರ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. "ಸೃಷ್ಟವಾದದ್ದೆಲ್ಲದರ condition- ಸ್ಥಿತಿ ವಿಶೇಷವೇ ಧರ್ಮ" ಎಂದು ಅವರು ಹೇಳುತ್ತಿದ್ದರು. ಬಾಳೇ ಹಣ್ಣು ಎಂದು ಅದನ್ನು ಕರೆಯಬೇಕಾದರೆ ಅದರಲ್ಲೊಂದು ನಿಶ್ಚಿತವಾದ ಸ್ಥಿತಿ ಇರಬೇಕಾಗುತ್ತದೆ. ಅದರ ರೂಪ,ಗುಣ,ರುಚಿ,ಪರಿಣಾಮ ಇವೆಲ್ಲವೂ ಎಂದೆಂದಿಗೂ ಹಾಗೇ ಇದ್ದರೆ ಮಾತ್ರ ಅದನ್ನು ಬಾಳೇ ಹಣ್ಣು ಎನ್ನಬಹುದು. ಇಲ್ಲವೇ ಇವತ್ತು ಬಾಳೇಹಣ್ಣಾಗಿದ್ದು ನಾಳೆ ತಿಂದರೆ ಅಡಿಕೆಯಂತೆಯೋ,ಹಲಸಿನ ಹಣ್ಣಿನಂತೆಯೋ ಆಗಿಬಿಟ್ಟರೆ ಅಸಹಜ. ಒಂದು ಪದಾರ್ಥದ ಅದರದೇ ಆದ ಸ್ಥಿತಿ ವಿಶೇಷವನ್ನೇ ಆ ಪದಾರ್ಥದ ಧರ್ಮ ಎನ್ನುವುದು. ಹಾಗಾದರೆ ಧರ್ಮ ನಿರಪೇಕ್ಷತೆಯ ಮಾತನಾಡುವವರು ಬಾಳೇ ಹಣ್ಣಿನಲ್ಲಿ ಅದರ ತನ-ಧರ್ಮ ಇರಬಾರದು ಎನ್ನುವರೇ? ಧರ್ಮವೆನ್ನುವುದು ವಸ್ತು,ವ್ಯಕ್ತಿ,ಇಂದ್ರಿಯಗಳು,ಇತ್ಯಾದಿ ಎಲ್ಲದಕ್ಕೂ ಅನ್ವಯಿಸುವ ವಿಷಯ. ಕಣ್ಣಿನ ಧರ್ಮ ನೋಡುವಿಕೆ. ಕಣ್ಣು ರೂಪವನ್ನು ಗ್ರಹಿಸುವಂತಿದ್ದರೆ, ಕಣ್ಣು ಅದರ ಧರ್ಮದಲ್ಲಿದೆ ಎನ್ನಬಹುದು. ಕಣ್ಣಿಗೆ ಧೂಳು ಬಿದ್ದಾಗ ತಾತ್ಕಾಲಿಕವಾಗಿ ಅದರ ಧರ್ಮ ಕೆಡುತ್ತದೆ. ಅದು ನೋಡಲಾಗದು. ಆ ಸ್ಥಿತಿಯು ಅಧರ್ಮ. ಯಾವುದರ ಸಹಜಸ್ಥಿತಿಯು ಕೆಡುವಂತಾಗುತ್ತದೆಯೋ ಅಂತಹ ಕ್ರಿಯೆ,ನಡೆ ಎಲ್ಲವೂ ಅಧರ್ಮವೇ ಆಗುತ್ತದೆ. ಸಹಜಸ್ಥಿತಿಯನ್ನು ಉಳಿಸಲು ಮಾಡುವ ಕೆಲಸವೆಲ್ಲವನ್ನೂ ಧರ್ಮ ಎಂದೇ ಋಷಿಗಳು ಕರೆದರು.
'ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ' –ಧರ್ಮವು ಜಗತ್ತನ್ನು ಧರಿಸಿದೆ ಎಂದು ಶ್ರುತಿಯು ಹೇಳುತ್ತಿದೆ. ಹಾಗೆಂದರೇನು? ಯಾವುದು ತನ್ನತನದಿಂದ ಜಗತ್ತನ್ನು ಉಳಿಸಿದೆಯೋ ಅದೇ ಧರ್ಮ. ವಿಶ್ವ ಚೈತನ್ಯಶಕ್ತಿಯಾದ ಭಗವಂತನೇ ತನ್ನ ಸೃಷ್ಟಿ-ಸ್ಥಿತಿ-ಲಯಗಳಿಂದ ಜಗತ್ತನ್ನು ಧರಿಸಿದ್ದಾನೆ. ಭಗವಂತನೇ ಮೊದಲ ಧರ್ಮ. ಅವನು ತಾನು ಸೃಷ್ಟಿಸಿದ ಎಲ್ಲದರಲ್ಲೂ ಅದರದರ ಧರ್ಮವನ್ನಿಟ್ಟೇ ಸೃಷ್ಟಿಸಿದ್ದಾನೆ. ಶಬ್ದಗ್ರಹಣ ಕಿವಿಯ ಧರ್ಮ. ಅದು ಚೆನ್ನಾಗಿದ್ದರೆ ಕಿವಿ ಎಂಬ ಇಂದ್ರಿಯ ತನ್ನ ಧರ್ಮದಲ್ಲಿದೆ ಎನ್ನಬಹುದು. ಅದನ್ನು ರಕ್ಷಣೆ ಮಾಡಿಕೊಳ್ಳುವ ಕ್ರಿಯೆಗಳೆಲ್ಲವೂ ಕಿವಿಯ ಧರ್ಮಕ್ಕೇ ಸೇರುತ್ತವೆ. ನಮ್ಮ ಇಂದ್ರಿಯಗಳನ್ನು ಚೆನ್ನಾಗಿ ಇಟ್ಟುಕೊಂಡರೆ ಅವು ನಮ್ಮ ಜೀವನವನ್ನು ಚೆನ್ನಾಗಿಡುತ್ತವೆ. ರೂಪಗ್ರಹಣ ಚೆನ್ನಾಗಿರುವಂತೆ ಕಣ್ಣನ್ನು ರಕ್ಷಣೆ ಮಾಡಿಕೊಂಡರೆ ಕಣ್ಣು ನಾವು ಬೀಳದಂತೆ ನಮ್ಮನ್ನು ರಕ್ಷಿಸುತ್ತದೆ. ಇದನ್ನೇ ಧರ್ಮೋ ರಕ್ಷತಿ ರಕ್ಷಿತಃ ಎಂದಿರುವುದು.
ಹೀಗೆ ನಮ್ಮ ಜೀವನವೆಲ್ಲವೂ ಧರ್ಮಮಯ. ಧರ್ಮವನ್ನು ಬಿಟ್ಟು ಲೋಕವು ಒಂದು ಕ್ಷಣವೂ ಅಸ್ತಿತ್ವದಲ್ಲಿರಲಾರದು. ಧರ್ಮಕ್ಕೆ ಹಿಂದೆ ವಿಶೇಷಣಗಳು ಸೇರಿದಂತೆಲ್ಲಾ ವಿಸ್ತಾರವಾಗುತ್ತದೆ. ಹಿಂದೆ ತಿಳಿಸಿದಂತೆ ಇಂದ್ರಿಯಧರ್ಮ,ಮನೋ ಧರ್ಮ,ಪದಾರ್ಥ ಧರ್ಮ, ವ್ಯಕ್ತಿಧರ್ಮ, ವರ್ಣಧರ್ಮ, ಆಶ್ರಮ ಧರ್ಮ ಹೀಗೆ ಧರ್ಮದ ವ್ಯಾಪ್ತಿ ಅಸಂಖ್ಯವಾಗಿ ಬೆಳೆಯುತ್ತದೆ.
ಈವರೆಗೆ ಧರ್ಮದ ಬಗ್ಗೆ ಭೌತಿಕವಾದ ಉದಾಹರಣೆಗಳ ದ್ವಾರಾ ಪರಿಚಯ ಮಾಡಿಕೊಂಡದ್ದಾಯಿತು. ಆದರೆ ಭಾರತೀಯ ಮಹರ್ಷಿಗಳ ಧರ್ಮದ ನೋಟ ಸ್ಥೂಲ-ಸೂಕ್ಷ್ಮ-ಪರಾ ಎಂಬ ಜೀವನದ ಮೂರು ಕ್ಷೇತ್ರಗಳನ್ನು ವ್ಯಾಪಿಸಿದೆ. ಉದಾಹರಣೆಗೆ ಕಣ್ಣು ಕೇವಲ ಹೊರ ರೂಪವನ್ನಷ್ಟೇ ಅಲ್ಲದೇ ಒಳ ಬೆಳಗುವ ದೇವತಾ ಶಕ್ತಿಗಳನ್ನೂ ಅದಕ್ಕೂ ಹಿಂದೆ ಪ್ರೇರಕ ಶಕ್ತಿಯಾಗಿ ಬೆಳಗುವ ಪರಮಾತ್ಮನನ್ನೂ ನೋಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಭಾರತೀಯ ಮಹರ್ಷಿಗಳ ಅನುಭವವೇದ್ಯವಾದ ಸತ್ಯ. ನಾವು ಮೂರೂ ಕ್ಷೇತ್ರದ ದರ್ಶನ ಮಾಡುವಂತಿದ್ದರೆ ಆಗ ಕಣ್ಣು ಅದರ ಸಹಜವಾದ ಧರ್ಮದಲ್ಲಿದೆ ಎಂಬ ನಿಶ್ಚಯಕ್ಕೆ ಅವರು ಬಂದರು. ಅಂದರೆ- ಹೊರ ನೋಟ-ಸ್ಥೂಲ- ಇದನ್ನು ನೋಡಲು ನಮ್ಮ ಹೊರಗಣ್ಣು ಸಮರ್ಥವಾದರೆ, ಈ ಹೊರನೋಟಕ್ಕೂ ಶಕ್ತಿಯನ್ನು ಒದಗಿಸುತ್ತಿರುವ ದೇವತಾ ರೂಪ-ಸೂಕ್ಷ್ಮ; ಮತ್ತು ಇವೆಲ್ಲದರ ಮೂಲ ಚೈತನ್ಯನಾದ ಪರಂಜ್ಯೋತಿ-ಪರಾ ಇವಿಷ್ಟೂ ಅನುಭವಗಳನ್ನು ಗ್ರಹಿಸುವ ಶಕ್ತಿ ಒಳಗಣ್ಣಿಗಿದೆ. ದೇವಕಿಯು ಕೃಷ್ಣನ ಜನನಕ್ಕೆ ಮೊದಲು ಅವನ ನಾರಾಯಣ ಸ್ವರೂಪದ, ಜ್ಯೋತೀ ರೂಪದ ದರ್ಶನವನ್ನೇ ಮಾಡುತ್ತಾಳೆ. ಅದನ್ನು ಅತ್ಯಾನಂದದಿಂದ ಅವಳು ವರ್ಣಿಸುವುದನ್ನು ಶ್ರೀಮದ್ಭಾಗವತವು ಕೊಂಡಾಡುತ್ತದೆ. ಹೊರಕಿವಿಯು ಹೊರಶಬ್ದವನ್ನು ಕೇಳುವಂತೆ ಒಳ ನಾದವನ್ನೂ ಕೇಳುವ ಯೋಗ್ಯತೆ ಒಳಗಿವಿಗಿದೆ. ಹೀಗೆ ಎಲ್ಲಾ ಇಂದ್ರಿಯಗಳಿಗೂ ಹೊರಗೆ ಕಾಣುವ ಧರ್ಮವಷ್ಟೇ ಅಲ್ಲದೇ ಒಳ ಅನುಭವವನ್ನು ಸವಿಯುವ ಧರ್ಮವೂ ಇದೆ. ಅದನ್ನು ಕಾಪಾಡಿಕೊಂಡು ಜೀವನದಲ್ಲಿ ಸುಖವಾಗಿರಿ ಎಂಬುದೇ ಋಷಿಗಳ ಆಶಯ.
ಸಾಧ್ಯಧರ್ಮ-ಸಾಧನ ಧರ್ಮ
ಇಂತಹ ಧರ್ಮವನ್ನು ಗುರುತಿಸಿ ಅದು ಮಾನವನಲ್ಲಿ ಮತ್ತು ನಿಸರ್ಗದಲ್ಲಿ ಕೆಡದಂತೆ ಇಡಲು ಬೇಕಾದ ವಿಧಿ-ನಿಯಮಗಳನ್ನೆಲ್ಲಾ ಈ ದೇಶದಲ್ಲಿ ಋಷಿಗಳು ತಂದರು ಎಂಬುದನ್ನು ಮರೆಯಲಾಗದು. ಭಾರತೀಯವಾದ ಆಚಾರ,ಜೀವನ ವಿಧಾನಗಳೆಲ್ಲ ಕೇವಲ ಶುಷ್ಕವಾದ ಹೊರ ಆಚರಣೆಗಳಾಗಿ ಬಂದಿಲ್ಲ. ಆನಂದ, ನೆಮ್ಮದಿ ನಮ್ಮೆಲ್ಲರ ಸಹಜಾವಸ್ಥೆ. ಹಾಗಿದ್ದರೆ ಅದು ಸಾಧ್ಯ ಧರ್ಮ. ಅದು ಹಳಿ ತಪ್ಪಿದಾಗ, ಮತ್ತೆ ನಮ್ಮನ್ನು ಅದೇ ಆನಂದದ ನೆಮ್ಮದಿಯ ಸಹಜಾವಸ್ಥೆಗೆ ತರುವ ಕೃಷಿ,ಸಾಧನೆ ಎಲ್ಲವೂ ಸಾಧನ ಧರ್ಮವಾಗುತ್ತದೆ. ನಮ್ಮ ಹೊರ ಆಚಾರಗಳ ಉದ್ದೇಶವು ನಮ್ಮನ್ನು ಒಳಗೆ ಬೆಳಗುವ ನಮ್ಮ ಸಹಜ ಸ್ಥಿತಿಗೆ ಕೊಂಡೊಯ್ಯುವುದಾಗಬೇಕು. ನಮ್ಮ ಸಂಧ್ಯಾವಂದನೆ,ದೇವರ ಪೂಜೆ,ವ್ರತ-ನಿಯಮಗಳು,ಹೋಮ-ಹವನಗಳು ಎಲ್ಲವೂ ನಮ್ಮನ್ನು ಸಹಜ ಧರ್ಮವಾದ ಒಳ-ಹೊರ ಆನಂದದೆಡೆಗೆ ಒಯ್ಯುವ ಉದ್ದೇಶದಿಂದಲೇ ಬಂದಿದೆ ಎಂಬುದನ್ನು ಮರೆತಾಗ ಅವೆಲ್ಲವೂ ಬರಿಯ ಚೇಷ್ಟೆಯಾಗುತ್ತದೆ. ಮಹರ್ಷಿ ಪ್ರಣೀತವಾದ ಕ್ರಮದಿಂದ, ಅವರು ವಿಧಿಸಿದ ಮಾನಸಿಕತೆಯಿಂದ ಈ ಕರ್ಮಗಳನ್ನು ಆಚರಿಸಿದಾಗ ಅವೆಲ್ಲವೂ ಸಾಧನ ಧರ್ಮವಾಗಿ, ಸಾಧ್ಯ ಧರ್ಮವಾದ ನಮ್ಮ ಆನಂದದ ಸ್ಥಿತಿಗೆ ನಮ್ಮನ್ನು ಏರಿಸುವುದರಲ್ಲಿ ಸಂದೇಹವಿಲ್ಲ. "ಕರ್ಮವನ್ನು ಮರ್ಮವರಿತು ಆಚರಿಸಬೇಕು" ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು.
ಹೊರ ಆಚರಣೆಗಳಷ್ಟೇ ಧರ್ಮವಲ್ಲ
ನಮಗೆ ಹೊರ ಆಚರಣೆಗಳನ್ನಷ್ಟೇ ಧರ್ಮ ಎಂದುಕೊಂಡು ಅಭ್ಯಾಸವಾಗಿದೆ. ನಮ್ಮನ್ನು ಸಹಜಾವಸ್ಥೆಗೆ ತರುವ ಕ್ರಿಯೆಗಳಾದಾಗ ಮಾತ್ರ ಅವೆಲ್ಲವೂ ಧರ್ಮವಾಗುತ್ತವೆ. ಮೈಸೂರಿಗೆ ಹೋಗುವ ಬಸ್ಸನ್ನು ನಿರ್ದೇಶಿಸಿ 'ಬನ್ನಿ ಮೈಸೂರು' ಎಂದು ವ್ಯವಹರಿಸುವಂತೆ, ಧರ್ಮಕ್ಕೆ ನಮ್ಮನ್ನು ಒಯ್ಯುವ ಆಚಾರಗಳನ್ನು ಧರ್ಮವೆಂದೇ ಮಹರ್ಷಿಗಳು ಕರೆದಿದ್ದಾರೆ.
ಧರ್ಮ-ನಿತ್ಯ,ಶಾಶ್ವತ.
ಭಾರತೀಯ ಮಹರ್ಷಿಗಳ ಧರ್ಮ ಎಂದೆಂದಿಗೂ ಇರುವುದಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮನಿರಪೇಕ್ಷತೆ ಎಂಬ ಪದಕ್ಕೆ ಏನೂ ಅರ್ಥವಿರದು. ಅದು ಕೇವಲ ಹೊರ ಆಚರಣೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಧರ್ಮ ಸ್ವರೂಪವನ್ನು ಅರಿಯದೇ ಬಂದ ಪದಪ್ರಯೋಗ. ಧರ್ಮ ಎಂಬ ಉದಾತ್ತವಾದ ವಿಷಯವನ್ನು ನಮ್ಮ ಅಲ್ಪಬುದ್ಧಿಯ ಮಾನದಂಡದಿಂದ ಅಳೆಯದಿರೋಣ. ಸೃಷ್ಟಿಸಹಜವಾದ ಧರ್ಮವನ್ನು ಅರ್ಥ ಮಾಡಿಕೊಂಡು ಅದನ್ನು ನಮ್ಮಲ್ಲಿ ಉಳಿಸಿ-ಬೆಳೆಸಲು ತಂದ ಮಹರ್ಷಿ ಸಂಸ್ಕೃತಿಯ ನೋಟದಿಂದ ಎಲ್ಲರೂ ಧಾರ್ಮಿಕರಾಗೋಣ.
ಸೂಚನೆ: 17/03/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.