ಲೇಖಕರು: ಮೋಹನ ರಾಘವನ್.
(ಪ್ರತಿಕ್ರಿಯಿಸಿರಿ lekhana@ayvm.in)
ಇದರ ಬಗ್ಗೆ ಅನೇಕ ಟೀಕಾಟೊಕೆಗಳುಂಟು. ಸ್ತ್ರೀಯರನ್ನು ಕಟ್ಟಿಹಾಕುವ ಮೂಗುದಾರದಂತೆ, ಸ್ತ್ರೀ-ಶೋಷಣೆಯ ಪ್ರತೀಕವೆಂದೆಲ್ಲಾ ಹೇಳುವುದುಂಟು. ಆದರೆ ಋಷಿಗಳ ದೃಷ್ಟಿಯಲ್ಲಿ ನಿಸರ್ಗ ಸಹಜವಾದ, ಸ್ತ್ರೀಧರ್ಮದ ಸಹಜಾಭಿವ್ಯಕ್ತಿಯಾಗಿರುವ ಆಭರಣವಿದು. ಹಿಂದೆಯೇ ಹೇಳಿದ ಹಾಗೆ, ಪ್ರಕೃತಿಮಾತೆಯ ಪಾತ್ರವನ್ನು ವಹಿಸುವ ಸ್ತ್ರೀ, ಪರಮಪುರುಷನ ಪಾತ್ರವನ್ನು ವಹಿಸುವ ಪುರುಷನೊಡನೆ ಸೇರಿ, ಲಕ್ಷ್ಮೀ-ನಾರಾಯಣರಂತೆ, ಪಾರ್ವತೀ-ಪರಮೇಶ್ವರಂತೆ ಭಗವತ್ಸಂಕಲ್ಪವನ್ನು ಈಡೇರಿಸಲು ಹೆಜ್ಜೆ ಹಾಕುವ ಮಧುರ ರಸನಿಮಿಷವೇ ವಿವಾಹ. ಏನು ಆ ಭಗವತ್ಸಂಕಲ್ಪ ?
ನೆಮ್ಮದಿ, ಸಂತೋಷ ಆನಂದದಗಳನ್ನು ಲೋಕದಲ್ಲಿ ಎಲ್ಲ ಜೀವಿಗಳಿಗೆ ಹಂಚುವುದೇ ಅವರ ಸಂಕಲ್ಪ. ಆನಂದವೇ ಆ ಪರಮಪುರುಷನ ಸ್ವರೂಪ. ಯೋಗಿಯು ಸಮಾಧಿಯಲ್ಲಿ ಅನುಭವಿಸುವ ಆನಂದ ಆ ಬ್ರಹ್ಮಸ್ವರೂಪದ ನೈಜ ಪೂರ್ಣರೂಪ. ಲೋಕದಲ್ಲಿ, ಉಂಡು-ಕೊಂಡು, ಆಡಿ-ಓಡಿ ಅನುಭವಿಸುವ ಆನಂದಗಳೆಲ್ಲಾ ಆ ಪರಮಾನಂದದ ತುಣುಕುಗಳು. ಪರಮಪುರುಷನ ಆನಂದದ ರಸವನ್ನು ಲೋಕದಲ್ಲಿ ಹರಿಸಿ, ಬೆಳೆಸುವಳು ಪ್ರಕೃತಿಮಾತೆ - ಲಕ್ಷ್ಮೀ, ಗೌರೀ. ಅವಳು ಆನಂದವನ್ನು ನಾನಾ ರೂಪದಲ್ಲಿ ಹಂಚುತ್ತಾಳೆ - ಧನ-ಧಾನ್ಯ, ಹಸು-ಕರು, ಮನೆ-ಮಕ್ಕಳು ಇತ್ಯಾದಿ. ಕೇವಲ ಆತ್ಮಸುಖವನ್ನೇ ಬಯಸುವ ವಿರಕ್ತನಿಗೆ ಆತ್ಮಶ್ರೀಯಾಗಿ ಒಲಿದು ಪರಮಾನಂದದ ತೆಕ್ಕೆಯಲ್ಲಿ ಸೇರಿಸುವಳೂ ಇವಳೇ.
ಈ ತತ್ತ್ವಸ್ಮರಣೆಯಲ್ಲೇ ವಿವಾಹಪದ್ಧತಿಯನ್ನು ಋಷಿಗಳು ರೂಪಿಸಿದ್ದಾರೆ. ಪರಮಾನಂದರೂಪಿಯಾದ ಪುರುಷನು, ವಿಸ್ತಾರಕ್ಕೆ ಅಣಿಮಾಡಿಸುತ್ತಾ, ತನ್ನ ಮಡದಿಯ ಕೊರಳಿಗೆ ಮಾಂಗಲ್ಯವನ್ನು ಕಟ್ಟುತ್ತ್ತಾನೆ. ಏಕೆ ? "ಮಮ ಜೀವನ ಹೇತುನಾ" ನನ್ನ ಜೀವನದ ಧ್ಯೇಯಸಾಧನೆಗಾಗಿ. ಆನಂದವನ್ನು ವಿತರಿಸುವ ಕೆಲಸವನ್ನು ನಿನಗೆ ವಹಿಸಿದ್ದೇನೆ ಎಂಬುದು ಭಾವ. ಕಂಠದಿಂದ ಕೆಳಗೆ ಹರಿದುಬರುವ ಮಾಂಗಲ್ಯವು ಧ್ಯೇಯದ ನೇರ ಪ್ರತೀಕ. "ರಿಲೇ ರೇಸ್" ನಲ್ಲಿ ತಮ್ಮದೇ ತಂಡದ ಮತ್ತೊಬ್ಬರಿಗೆ 'ಬ್ಯಾಟನ್' ವಹಿಸಿಕೊಟ್ಟ ಹಾಗೆ. 'ಬ್ಯಾಟನ್' ರೂಪದಲ್ಲಿ ಕಟ್ಟಿರುವ ತಾಲಿಯಲ್ಲಿ ಧ್ಯೇಯದ ಗುರುತುಗಳು ಅಡಗಿದೆ. ಹೇಗೆ ? ಅದು ಸುವರ್ಣಮಯವಾಗಿದೆ. ಸೌಖ್ಯ, ಮಾಂಗಲ್ಯ, ಸಮೃದ್ಧಿಯ ಜೊತೆಯಲ್ಲಿ ಸುವರ್ಣಮಯವಾದ ಹಿರಣ್ಯಗರ್ಭನನ್ನು ನೆನಪಿಸುತ್ತದೆ. ಯೋಗಿಯ ಒಳ ಅನುಭವದಲ್ಲಿ ಪುರುಷ ಸ್ಥಾನದಿಂದ ಪ್ರಕೃತಿಯ ಸ್ಥಾನಕ್ಕೆ ಇಳಿದು ಬರುವಾಗ ಆಗುವ ಒಳ ದರ್ಶನಗಳನ್ನು ತಂತ್ರಶಾಸ್ತ್ರಗಳು ವಿವರಿಸುತ್ತವೆ. ಬಿಂದು-ನಾದವಾಗಿ ಬೆಳೆದು ಒಂದು ಮಹಾಬಿಂದುವಾಗಿ ಪರಿಣಮಿಸುತ್ತದೆ. ಮಹಾಬಿಂದು ಪ್ರಣವ ನಾದವನ್ನು ಮಾಡುತ್ತಾ, ಸ್ಫೋಟವಾಗಿ ಮೂರಾಗಿ ( ಬಿಂದು + ವಿಸರ್ಗವಾಗಿ) ವಿಭಜಿಸಿ ಈ ಸೃಷ್ಟಿಯನ್ನು ಮುಂದುವರಿಸಿತು. ಈ ಮೂರು ತ್ರಿಗುಣಗಳೆಂದೂ, ತ್ರಿಮೂರ್ತಿಯರೆಂದೂ ಹೇಳಬಹುದು. ಆ ಒಳ ಅನುಭವವೇ ತಾಳಿಯ ರಚನೆಗೆ ಆಧಾರ. ತಾಳಿಯಲ್ಲಿ ಇರುವ ಸಾಮಾನ್ಯ ಲಾಂಚನವೆಂದರೆ ಬೊಟ್ಟು, ಇದು ಬಿಂದುವಿನ ಪ್ರತಿರೂಪ. ಇದರ ನಾನಾ ಪ್ರಕಾರಗಳುಂಟು - ಮಹಾಬಿಂದುವನ್ನು ಸೂಚಿಸುವ ಒಂದು ಬೊಟ್ಟು, ಆಗ ತಾನೇ ಸೃಷ್ಟವಾದ ಸ್ಥಿತಿಯಲ್ಲಿ ಮೂರು ಬೊಟ್ಟುಗಳು, ಒಂದು ಬೊಟ್ಟು ಮತ್ತು ಎರಡು ಕರೀಮಣಿಗಳು, ವಿಸರ್ಗಾತ್ಮಕವಾಗಿ ಎರಡು ಬೊಟ್ಟುಗಳು ಇತ್ಯಾದಿ. ತಾಳಿಯನ್ನು ಕಟ್ಟುವ ಸಮಯದಲ್ಲಿ, ಪುರೋಹಿತರು 'ಸುಲಗ್ನಾ: ಸಾವಧಾನಾ:' ಎಂದು ಎಚ್ಚರಿಸುತ್ತಾರೆ. ಘಟ್ಟಿಮೇಳ, ಘಂಟಾನಾದ, ನಾದಸ್ವರಗಳ ಒಂದು ರವ ಕೂಡಿರುತ್ತದೆ. ಇಂತಹ ಸನ್ನಿವೇಶದಲ್ಲಿ ನಡೆಯುವ ಮಾಂಗಲ್ಯ ಧಾರಣ. ಮಾಂಗಲ್ಯದ ಮತ್ತೊಂದು ರೂಪದವೆಂದರೆ ಆಂಗ್ಲ ಭಾಷೆಯ "M"ನ ಆಕಾರ. ಇದು ಹೇಗೆ ಸಮಂಜಸ ಎಂಬ ಪ್ರಶ್ನೆಗೆ, ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇದರ ಮೂಲ ತತ್ತ್ವವನ್ನು ಗುರುತಿಸಿ, ಇದು ಸೃಷ್ಟಿಗೆ ಸಹಕಾರಿಯಾದ ಪ್ರಾಣಸ್ವರೂಪ-ಗರುಡನ ರೂಪವೆಂದು ನುಡಿದಿದ್ದಾರೆ. ಅದರಂತೆ ಕಿಂಚಿತ್ ಮಾರ್ಪಾಡು ಮಾಡಿ ಗರುಡನ ಆಕಾರವು ಸ್ಪಷ್ಟವಾಗಿ ಕಾಣಿಸುವಂತೆ ಸಂಯೋಜಿಸಿದ್ದರು. ಅವರ ಡಿಸೈನ್ ಇಂದು ಬೆಂಗಳೂರು ನಗರದ ಅನೇಕ ಜ್ಯುವೆಲ್ಲರಿ ಅಂಗಡಿಗಳಲ್ಲಿ 'ದೇಶಿಕಾಚಾರ್' ಮಾಂಗಲ್ಯ ಎಂಬ ಹೆಸರಿನಿಂದ ಪ್ರಚಲಿತವಾಗಿದೆ.