Sunday, March 13, 2022

ಶ್ರೀ ರಾಮನ ಗುಣಗಳು - 47 ಶುದ್ಧ - ಶ್ರೀರಾಮ (Sriramana Gunagalu - 47 Suddha - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)


ಶುದ್ಧನಾದ ಶ್ರೀರಾಮ. ಶುದ್ಧವೆಂದರೆ ತನ್ನ ಮೂಲರೂಪದಲ್ಲಿ ಇರುವವಂತಹದ್ದು. ಅಶುದ್ಧ ಇದಕ್ಕೆ ವಿರುದ್ಧವಾದುದು. ವಸ್ತುವು ತನ್ನ ಸ್ವರೂಪವನ್ನು ಕಳೆದುಕೊಂಡಾಗ ಅದು ಅಶುದ್ಧವಾಗುತ್ತದೆ.  ಹಾಗಾದರೆ ಯಾವ ದೃಷ್ಟಿಯಿಂದ ಇಲ್ಲಿ ಶ್ರೀರಾಮನು ಶುದ್ಧ?

ಶುದ್ಧಿ ಎಂಬುದು ಬಾಹ್ಯ ಮತ್ತು ಅಂತರಂಗ ಎಂದು ಎರಡು ಬಗೆ, "ಪಂಚೇಂದ್ರಿಯಸ್ಯ ದೇಹಸ್ಯ ಬುದ್ಧೇಶ್ಚ ಮನಸಸ್ತಥಾ| ದ್ರವ್ಯ-ದೇಶ-ಕ್ರಿಯಾಣಾಂ ಚ ಶುದ್ಧಿಃ ಆಚಾರ ಇಷ್ಯತೇ" ಎಂಬಂತೆ ಕಣ್ಣು, ಕಿವಿ ಮೂಗು ನಾಲಿಗೆ ಚರ್ಮಗಳೆಂಬ ಐದು ಇಂದ್ರಿಯಗಳನ್ನು ಶುದ್ಧವಾಗಿರಿಸಿಕೊಳ್ಳುವುದು. ಅವುಗಳನ್ನು ಹಾಳು ಮಾಡಿಕೊಳ್ಳದೇ ಇರುವುದು, ದೇಹವನ್ನು ಧರ್ಮಸಾಧನೆಗೆ ಉಪಯೋಗವಾಗುವಂತೆ ಇಟ್ಟುಕೊಂಡಾಗ ಅದು ಶುದ್ಧ. ಬುದ್ಧಿ ಮತ್ತು ಮನಸ್ಸುಗಳಲ್ಲಿ ರಜಸ್ಸು ಮತ್ತು ತಮಸ್ಸೆಂಬ ದುರ್ಗುಣಗಳ ಹಾವಳಿ ಇಲ್ಲದಿದ್ದಾಗ ಇವು ಶುದ್ಧವಾಗುತ್ತವೆ. ಅಷ್ಟೆ ಅಲ್ಲ, ವಾಸಿಸುವ ಪ್ರದೇಶ, ಬಳಸುವ ಪದಾರ್ಥಗಳು, ಮಾಡುವ ಕ್ರಿಯೆಗಳು, ಎಲ್ಲವೂ ಶುದ್ಧವಾಗಿದ್ದಾಗ ಅವನನ್ನು ಶುದ್ಧ ಎನ್ನುತ್ತಾರೆ. ಶ್ರೀರಂಗ ಮಹಾಗುರುಗಳು ಶುದ್ಧಿಯ ಬಗ್ಗೆ ಹೀಗೆ  ಹೇಳುತ್ತಿದ್ದರು- "ಯಾವ ಪದಾರ್ಥವಾದರೂ ತನ್ನ ಸಹಜತೆಯನ್ನು ಕಳೆದುಕೊಂಡರೆ ಅಪದಾರ್ಥವಾಗುತ್ತದೆ. ಬಾಳೇಹಣ್ಣು ಅದರ ರೂಪದಲ್ಲಿದ್ದರೆ ಅದನ್ನು ತಟ್ಟೆಯಲ್ಲಿಟ್ಟು ಭಗವದಾರಾಧನೆಗೆ ಉಪಯೋಗಿಸುತ್ತೇವೆ. ಆದರೆ ಅದೇ ಕೊಳೆತರೆ ಗೊಬ್ಬರದ ಗುಂಡಿಗೆ ಎಸೆಯುತ್ತೇವೆ" ಎಂದು.

ಕಾಲಕಾಲಕ್ಕೆ ಸ್ನಾನಾದಿಗಳನ್ನು ಮಾಡುವುದು ಶರೀರಶೌಚ. ಪೂಜೆ ಧ್ಯಾನ ಮೊದಲಾದವುಗಳಿಂದ ಮಾನಸಶೌಚವು ಉಂಟಾಗುತ್ತದೆ. ಎಲ್ಲಕ್ಕಿಂತಲೂ ಮುಖ್ಯವಾದ ಶೌಚವೆಂದರೆ 'ಸರ್ವೇಷಾಮೇವ ಶೌಚಾನಾಮ್ ಅರ್ಥಶೌಚಂ ವಿಶಿಷ್ಯತೇ' ಎಂದು. ಹಣಸಂಪಾದನೆಯ ಮಾರ್ಗ ಶುದ್ಧವಾಗಿದ್ದರೆ ಆತ ಶುದ್ಧ ಎಂಬುದಾಗಿ ಹೇಳಲಾಗಿದೆ. ದ್ರವ್ಯಸಂಪಾದನೆಯು ಹೊರಗಿನ ಅಶುದ್ಧಿಯ ವಾಹಕವಾಗಿರುತ್ತದೆ. ಪದಾರ್ಥವು ಒಂದು ಕಡೆಯಿಂದ ಇನ್ನೊಂದು ಕಡೆ ಅಶುದ್ಧಿಯನ್ನು ಹರಿಸುತ್ತದೆ. ಅದೇ ದ್ರವ್ಯವು ಸನ್ಮಾರ್ಗದಲ್ಲಿ ಧರ್ಮದಿಂದ ಸಂಪಾದಿತವಾಗಿದ್ದರೆ ಅಲ್ಲಿ ಪಾಪಕ್ಕೆ ಅವಕಾಶವಿರುವುದಿಲ್ಲ. ಪಾಪವೆಂದರೆ ಅಶುದ್ಧಿಯೇ. ಅದು ವ್ಯಕ್ತಿಯ ಮೋಕ್ಷಗತಿಯನ್ನು ತಡೆಯುತ್ತದೆ ಎಂಬುದಾಗಿ ಬಲ್ಲವರು ಹೇಳುತ್ತಾರೆ. ಈ ಎಲ್ಲ ದೃಷಿಯಿಂದ ಶುದ್ಧಿಯನ್ನು ಇಟ್ಟುಕೊಳ್ಳಬೇಕು.

ರಾಮಾಯಣದಲ್ಲಿ ಅನೇಕ ಕಡೆ ಶ್ರೀರಾಮನು 'ಶುಚಿರ್ವಶ್ಯಃ' ಎಂಬ ಪ್ರಯೋಗವನ್ನು ಕಾಣಬಹುದು. ತ್ಯಾಗದಿಂದ ಶುದ್ಧಿ ಉಂಟಾಗುತ್ತದೆ. ಶ್ರೀರಾಮನಿಗೆ ವನಗಮನದ ಅಪ್ಪಣೆಯಾಗುತ್ತದೆ. ಅದಕ್ಕೆ ಶ್ರೀರಾಮನ ಸಿದ್ಧತೆ ಬಹಳ ವಿಚಿತ್ರವಾಗಿದೆ. ಅವನು ತನ್ನಲ್ಲಿರುವ ಎಲ್ಲ ಪದಾರ್ಥಗಳನ್ನು ದಾನ ಮಾಡುತ್ತಾನೆ. ವೇದವೇದಾಂಗ ಪಾರಂಗತನಾದ ಸುಯಜ್ಞನನ್ನು ಕರೆಸುತ್ತಾನೆ. ಅವನನ್ನು ಆಸನದಲ್ಲಿ ಕುಳ್ಳಿರಿಸಿ ಸುವರ್ಣಮಯವಾದ ಭುಜಕೀರ್ತಿಯನ್ನು, ಕುಂಡಲಗಳನ್ನು, ಮಣಿ, ಕೇಯೂರ, ಕಡಗ ಹೀಗೆ ಎಲ್ಲವನ್ನು ಅವನಿಗೆ ದಾನ ಮಾಡುತ್ತಾನೆ. ಅಲ್ಲದೆ ಸೀತೆಯನ್ನು ಕರೆದು ಅವಳಿಂದಲೂ ಸುಯಜ್ಞನ ಪತ್ನಿಗೆ ಸೀತೆಯ ರತ್ನಾಹಾರವನ್ನೂ, ಹೇಮಸೂತ್ರವನ್ನೂ, ಒಡ್ಯಾಣವನ್ನೂ ಕೊಡಿಸುತ್ತಾನೆ. ದೀನದರಿದ್ರರಿಗೆ, ವಿಪ್ರರಿಗೆ ಹೀಗೆ ಎಲ್ಲರಿಗೂ ಆಭರಣ, ವಸ್ತ್ರ, ಧನ, ಧವಸ, ಧಾನ್ಯ, ಧೇನು, ಆಡು ಕುರಿ ಮೊದಲಾದ ಪದಾರ್ಥಗಳನ್ನು ಅವರು ತೃಪ್ತಿಯಾಗುವಷ್ಟು ದಾನವನ್ನು ಮಾಡುತ್ತಾನೆ. ಆತ್ಮಾರಾಮನಾಗಿ ವಲ್ಕಲಧಾರಿಯಾಗಿ, ಶ್ರೀರಾಮನು ತಪಸ್ಸಿಗೆ ಹೋಗುವಂತೆ ಕಾಡಿಗೆ ಸಂತೋಷದಿಂದ ತೆರಳಿದ. ಸರ್ವಾತ್ಮನಾ ಶುದ್ಧನಾದ ಶ್ರೀರಾಮನಿಂದ ಇಂತಹ ನಡೆಯನ್ನು ಕಾಣಲು ಸಾಧ್ಯವಲ್ಲವೇ!  

ಸೂಚನೆ :13/3/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.