Monday, March 7, 2022

ವಸ್ತ್ರಾಭರಣ 12 ಕಾಲು ಮತ್ತು ಸೊಂಟದ ಆಭರಣಗಳು (Vastra Bharana - 12 Kalu Mattu Sontada Abharanagalu)

 ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


ಅಂಗಾಂಗಗಳಲ್ಲಿ ಧರಿಸುವ ವಿವಿಧ ಆಭರಣಗಳನ್ನೂ ಅವುಗಳ ಕೆಲವು ವಿವರಗಳನ್ನು ಗಮನಿಸೋಣ. ಈ ಆಭರಣಗಳಲ್ಲಿ ಕೆಲವು ಇಂದೂ ದೈನಂದಿನ ಬಳಕೆಯಲ್ಲಿವೆ. ಕೆಲವನ್ನು ಸಮಾರಂಭಾದಿ ವಿಶೇಷ ಸನ್ನಿವೇಶಗಳಲ್ಲಿ ಮಾತ್ರ ಬಳಸುತ್ತೇವೆ. ಅನೇಕವು, ಬೇಲೂರು, ಹಳೇಬೀಡು ಮುಂತಾದ ಶಿಲ್ಪಗಳಲ್ಲಿ, ಪ್ರಾಚೀನ ಚಿತ್ರಗಳಲ್ಲಿ ಮಾತ್ರ ಕಂಡು ಬರುತ್ತವೆ. ಈ ಆಭರಣಗಳ ಬಗೆಗೆ ತಿಳಿದು ಬಂದಿರುವ ವಿಷಯಗಳನ್ನು ಶ್ರೀರಂಗ ಮಹಾಗುರುಗಳು ಕೊಟ್ಟ ದೃಷ್ಟಿಯಿಂದ ನೋಡೋಣ.


ಕಾಲಿನ ಆಭರಣಗಳು 

ಕಾಲುಗೆಜ್ಜೆ ಎಲ್ಲರಿಗೂ ಪರಿಚಿತವೇ. ಸಣ್ಣ ಘಂಟೆಗಳಿಂದ ಕೂಡಿದ ಈ ಆಭರಣದ ಪ್ರಾಚೀನ ಹೆಸರು ಘಂಟಿಕಾಜಾಲ. ಗೆಜ್ಜೆ ಎಂಬೀ ಪದದ  ತತ್ಸಮರೂಪವೂ ಆಗಿರಬಹುದು. ನೂಪುರ ಮತ್ತು ಕಿಂಕಿಣಿ ಎಂಬುದು ಇದರ ಪ್ರಭೇದಗಳು. ಕಿಂಕಿಣಿ ಎಂಬುದು ಯೋಗಿಗೆ ಕೇಳಿ ಬರುವ ಒಂದು ಅಂತರ್ನಾದವೂ ಹೌದು ಎಂದು ಯೋಗ ಶಾಸ್ತ್ರದಲ್ಲಿ ಕಂಡುಬರುತ್ತದೆ. ಈ ಅಂತರ್ನಾದದ  ಹೆಸರೂ, ಆಭರಣದ ಹೆಸರೂ ಒಂದೇ ಆಗಿರುವುದು ಆಕಸ್ಮಿಕವಲ್ಲ. ರಾಮಕೃಷ್ಣ ಪರಮಹಂಸರಂತಹ ಯೋಗಿಗಳಿಗೆ ಕಾಳಿಯ ಕಾಲುಗೆಜ್ಜೆಯ ಧ್ವನಿ ಕೇಳಿಬರುತ್ತಿದ್ದ ಪುರಾವೆಗಳುಂಟು. ಇಂತಹ ಯೋಗಾನುಭವದ ಸ್ಪೂರ್ತಿಯಿಂದ ಹುಟ್ಟಿದ ಆಭರಣವಿದೆಂದು ಭಾವಿಸಬಹುದು. ಸೀತಾದೇವಿಯ ನೂಪುರವನ್ನು ಲಕ್ಷ್ಮಣ ದಿನನಿತ್ಯ ಪೂಜಿಸುತ್ತಿದ್ದಕಾರಣ ತತ್ಕ್ಷಣದಲ್ಲಿ ಗುರುತಿಸುತ್ತಾನೆ ಎಂಬ ರಾಮಾಯಣದ ಘಟ್ಟವನ್ನೂ ನೆನಪಿಸಿಕೊಳ್ಳ ಬಹುದು. ದಪ್ಪನಾದ ಕಾಲುಬಳೆಯೊಳಗೆ ಸದ್ದು ಮಾಡುವ ಸಣ್ಣ ಕಲ್ಲುಗಳನ್ನು ಹಾಕಿಮಾಡುವ ಒಂದು ಆಭರಣವನ್ನು ಸಂಘೋಷ-ಕಟಕ ಎನ್ನುತ್ತಾರೆ (ಕಾಲು-ಕಡಗ ಅಥವಾ ಕಾಲಂಡಿಗೆ). ಕಾಲುಂಗುರ ಭಾರತೀಯರಲ್ಲಿ ಇರಲಿಲ್ಲ, ಮಧ್ಯಕಾಲದಲ್ಲಿ ಮುಘಲರ ಶಾಸನಕಾಲದಲ್ಲಿ ಪ್ರಾರಂಭವಾಯಿತು ಎಂಬ ಮಾತು ಕೆಲವೊಮ್ಮೆ ಕೇಳಿಬರುತ್ತದೆ. ಆದರೆ ಕಾಲುಂಗುರಗಳೂ ಪ್ರಾಚೀನಕಾಲದಿಂದ ಬಳಕೆಯಲ್ಲಿದ್ದವು ಎಂಬುದಕ್ಕೆ ಭರತನ ನಾಟ್ಯ ಶಾಸ್ತ್ರದ ಆಧಾರವಿದೆ. ಅದರಲ್ಲೂ ಪಾದಾಂಗುಷ್ಟದಲ್ಲಿ ತಿಲಕ ಎಂಬ ಆಭರಣದ ಬಳಕೆಯಿತ್ತು ಎಂಬುದು ತಿಳಿದುಬರುತ್ತದೆ. ಇದೂ ಯೋಗಶಾಸ್ತ್ರಕ್ಕೆ ಸಮ್ಮತವೇ, ಏಕೆಂದರೆ ಶರೀರದಲ್ಲಿ ಅಂಗುಷ್ಠವು ಜ್ಯೋತಿರ್ಮಯ ಪುರುಷನ ಪ್ರತೀಕವೇ ಹೌದು. ಆ ಶಕ್ತಿಯನ್ನು ಯೋಗಿಯು ಮತ್ತೊಬ್ಬರಲ್ಲಿ ಹರಿಸುವುದಕ್ಕೆ ಪಾದಾಂಗುಷ್ಟವೂ ಒಂದು ಉತ್ತಮ ಸಾಧನ. 


ಸೊಂಟದ ಆಭರಣ 

ಸೊಂಟದಲ್ಲಿ ಧರಿಸುವ ಮೆಖಲೆಗೂ ಯೋಗಕ್ಕೂ ಇರುವ ಸಂಬಂಧವನ್ನು ಹಿಂದೆಯೇ ಅಂತರೀಯದ ಸಂದರ್ಭದಲ್ಲಿ ಗಮನಿಸಿದ್ದಾಗಿದೆ. ಪ್ರಾಣಾಪಾನಗಳ ಸಂಯಮ ಮಾಡಿ, ಒಳಯೋಗ ಮಾರ್ಗಗಳ ಬಾಗಿಲನ್ನು ತೆರೆದಿಡುವ ಸಲುವಾಗಿ ಇದರ ಬಳಕೆಯೆಂದೂ, ಸಾಧಕನಿಗೆ ಉತ್ತಮ ಸಾಧನವೆಂದೂ ಗಮನಿಸಿದ್ದೇವೆ. ಮುಂಜಾ ಹುಲ್ಲಿನಿಂದ ಮಾಡಲ್ಪಟ್ಟು ಇದನ್ನು ಬ್ರಹ್ಮಚಾರಿಯೋ, ನವವಧುವಾಗಲಿರುವವಳೂ ಧರಿಸುವರು. ಸೊಂಟದಲ್ಲಿ ಧರಿಸುವ ಡಾಬೂ ಇದರ ಒಂದು ರೂಪ.  ಈ ಮೇಖಲೆಯಲ್ಲಿ ಎಷ್ಟು ಎಳೆಗಳು ಎಂಬುದರ ಮೇಲೆ ಈ ಆಭರಣದ ನಾನಾ ಪ್ರಕಾರಗಳು ಹೊರಡುತ್ತವೆ.   ಒಂದೆಳೆಯಿದ್ದರೆ ಕಾಂಚೀ, ಎಂತಿದ್ದಲ್ಲಿ ಮೇಖಲಾ, ಹದಿನಾರಿದ್ದರೆ ರಶನಾ, ಇಪ್ಪತ್ತೈದಿದ್ದರೆ ಕಲಾಪ. ಅಂತೆಯೇ ಮೂವತ್ತೆರಡು, ಅರವತ್ತುನಾಲ್ಕು, ನೂರಾಎಂಟು ಎಲೆಗಳಿಂದ ಕೂಡಿದ ಆಭರಣಗಳ ಪ್ರಕಾರವೂ ಬಳಕೆಯಲ್ಲಿದ್ದು, ದೇವತಾ ಸ್ತ್ರೀಯರೂ ಮತ್ತು ರಾಜಮಹಿಷಿಯರಿಗೆ ಅದರ ಬಳಕೆ ವಿಶೇಷವಾಗಿ ವಿಧಿಸಿದೆ. ಸ್ತ್ರೀ ಪ್ರಕೃತಿಯು ಸರಸ್ವತಿಯ ರೂಪ, ಲೋಕದಲ್ಲಿ ವಿದ್ಯೆಯನ್ನು ಬೆಳಸುವಳು. ಮೇಲ್ಕಂಡ ಎಲ್ಲಾ ಸಂಖ್ಯೆಗಳೂ ವಿದ್ಯೆಗಳ ವಿಸ್ತಾರದ ಕ್ರಮಗಳನ್ನೂ ವಿದ್ಯೆಯ ನಾನಾ ಭಾಗಗಳನ್ನೂ ಸೂಚಿಸುತ್ತವೆ.


ಶಿರಸ್ಸಿನಲ್ಲಿ ಧರಿಸುವ ಆಭರಣಗಳು

ಕೇಶಾಲಂಕಾರದ ಸಂದರ್ಭದಲ್ಲಿಯೇ ಶಿರಸ್ಸಿನಲ್ಲಿ ಧರಿಸುವ ಬೈತಲೆ ಬೊಟ್ಟು, ಸೂರ್ಯ, ಚಂದ್ರ, ಕಮಲಾ ಆದಿ ಆಭರಣಗಳ ಉಲ್ಲೇಖವು ಬಂದಿದೆ. ಇವುಗಳಿಗೂ ಯೋಗಕ್ಕೂ ಇರುವ ಗಾಢವಾದ ಸಂಬಂಧವನ್ನೂ ಹಿಂದಿನ ಲೇಖನದಲ್ಲಿ  ಗಮನಿಸಿದ್ದೇವೆ.

 (ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 5/3/2022 ರಂದು ಪ್ರಕಟವಾಗಿದೆ.