ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಎಷ್ಟೋ ಮನುಷ್ಯರಿಗೆ ಹೋಲಿಸಿದರೆ ಇರುವೆಗಳೇ ವಾಸಿಯೋ ಎನಿಸಬಹುದು. ಆದರೆ ಅರಿವಿನ ನೋಟಕ್ಕೆ ಗೋಚರವಾಗುವ ಸೂಕ್ಷ್ಮಗಳುಂಟು.
ಇನ್ನೇನು ಗ್ರೀಷ್ಮ ಬಂತು. ಬಿಸಿಲುಗಾಲವು ಏರುತ್ತಲೇ ಇರುವೆಗಳ ಚಟುವಟಿಕೆಗಳು ಹೆಚ್ಚು ಹೆಚ್ಚು ಕಾಣಲಾರಂಭಿಸುತ್ತವೆ. ಬರೀ ಇರುವೆಗಳೇನು? ಬಿಲದೊಳಗೆ ವಾಸಿಸುವ ಎಲ್ಲ ಪ್ರಾಣಿಗಳೂ ಕಾದ ನೆಲದೊಳಗಣ ಬೇಗೆ ತಾಳಲಾರದೆ ಹೊರಗೆ ಹೆಜ್ಜೆಯಿಡುತ್ತವೆ. ಬಂದವು ಸುಮ್ಮನಿರುವುವೇ? ಪ್ರಾಣಿಗಳ ಬಹುತೇಕ ಚಟುವಟಿಕೆಗಳು ಆಹಾರ-ಸಂಪಾದನ/ಸಂಗ್ರಹಣಾರ್ಥವಾಗಿಯೇ. ಮುಂದೆ ಮಳೆಗಾಲ ಬರುವುದನ್ನು ಎದುರು ನೋಡಿ, ಆಗ ತೊಯ್ದುಹೋಗುವ ಕೊಚ್ಚಿಹೋಗುವ ಸಾಧ್ಯತೆಗಳಿರುವ ಎಲ್ಲ ಕೃಮಿಕೀಟಗಳೂ ಖಾದ್ಯಸಂಪಾದನದ ಕ್ರಿಯೆಯಲ್ಲಿ ತೊಡಗುತ್ತವೆ.
ಇರುವೆಗಳ ಅನವರತ ಚಲನವಲನಗಳು ಒಂದರ್ಥದಲ್ಲಿ ಆಶ್ಚರ್ಯವನ್ನೇ ಉಂಟುಮಾಡತಕ್ಕವು. ಸ್ವಲ್ಪವೂ ಆಲಸ್ಯಪಟ್ಟುಕೊಳ್ಳದೇ ಶ್ರಮಿಸುವ ಜೀವಿಗಳವು. ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರಲ್ಲೇ ಆಲಸ್ಯವೆಂಬುದು ಹೆಚ್ಚು. ಕಾರ್ಯಸಾಮರ್ಥ್ಯವಿದ್ದರೂ ಉತ್ಸಾಹವಿಲ್ಲದಿರುವಿಕೆಯೇ ಆಲಸ್ಯ - ಎಂದು ಆಲಸ್ಯಲಕ್ಷಣವನ್ನು ಸುಶ್ರುತಸಂಹಿತೆಯು ಹೇಳುತ್ತದೆ.
ಆದರೆ ಬರೀ ಚಟುವಟಿಕೆಯಿಂದ ಸದಾ ಕೂಡಿರುವುದೆಂಬುದೇ ಸಾಲದು. "ಏನೂ ಕೆಲಸವಿಲ್ಲದೇ ಕುಳಿತಿರಬಾರದು" ಎಂಬುದಷ್ಟೇ ಇಲ್ಲಿಯ ಬಯಕೆಯಾಗಿರಬಾರದು. ಮಾಡಲು ಕೆಲಸವಿಲ್ಲದಿದ್ದಲ್ಲಿ ಅದಾವುದೋ 'ಭೂತ'ವು ತನ್ನ ಚೇಷ್ಟೆಯನ್ನಾರಂಭಿಸುತ್ತದೆ - ಎಂಬುದಾಗಿ ಹೇಳುವ ಇಂಗ್ಲೀಷಿನ ಗಾದೆಮಾತೊಂದಿದೆಯಲ್ಲವೆ? ಏನನ್ನೂ ಮಾಡದೆ ನಿಶ್ಚೇಷ್ಟನಾಗಿ ಸೋಮಾರಿಯಾಗಿ ಬಿದ್ದುಕೊಂಡಿರುವುದಕ್ಕಿಂತ ಅದು ವಾಸಿಯೇ ಎನ್ನುವುದಾದರೂ, ಬರೀ ಅಷ್ಟೇ ಆದರೆ ಪ್ರಯೋಜನವಿಲ್ಲ.
ಪ್ರತಿಯೊಂದು ಕ್ರಿಯೆಯ ಹಿಂದೆಯೂ ಇಚ್ಛೆಯೆಂಬುದೊಂದು ಇದ್ದೇ ಇರುತ್ತದಲ್ಲವೇ? ಏನನ್ನು ಮಾಡಿದರೂ ಯಾವ ಆಸೆಗಾಗಿ ಅದನ್ನು ಮಾಡುತ್ತೇವೆಂಬುದು ಮುಖ್ಯವಾಗುತ್ತದೆ. ಒಳ್ಳೆಯ ಕೆಲಸವನ್ನೇ ಕೆಟ್ಟ ಉದ್ದೇಶಗಳಿಗಾಗಿ ಮಾಡುವವರುಂಟಲ್ಲವೇ? ಬಡಬಗ್ಗರಿಗೆ ದಾನಮಾಡುವುದು ಒಳ್ಳೆಯ ಕೆಲಸವೇ; ಅದನ್ನೇ ತೋರಿಕೆಗಷ್ಟೆ, ಮಾಧ್ಯಮಗಳಲ್ಲಿಯ ಪ್ರಚಾರಕ್ಕಾಗಿ ಮಾತ್ರ, ಕೇವಲ ಕೀರ್ತಿಗಾಗಿ ಮಾತ್ರ ಮಾಡಿ, ಅವನ್ನೂ ಮುಂದೆ ಮತ್ತಿನ್ನೇನೋ ಅನುಚಿತ ಲಾಭಕ್ಕಾಗಿ ಮಾಡುವಂತಾದಲ್ಲಿ, ಅದು ಪ್ರಶಸ್ತವಾಗುವುದೇ?
ತಪಸ್ಸು ಕೆಟ್ಟದೆಂದು ಯಾರಾದರೂ ಹೇಳಬಹುದೇ? ಆದರೂ ತಪಸ್ಸು ಮಾಡಿಯೇ ನಾನಾಫಲಗಳನ್ನು ಪಡೆದು, ಸದುಪಯೋಗ-ದುರುಪಯೋಗಗಳಿಗೆ ಅವನ್ನು ಬಳಸಿರುವವರುಂಟು. ಮೂವರೂ ತಪಸ್ಸನ್ನೇ ಮಾಡಿದರೂ, ರಾವಣ-ಕುಂಭಕರ್ಣರದೊಂದು ಲೆಕ್ಕವಾದರೆ ವಿಭೀಷಣನದು ಮತ್ತೊಂದು. ರಾವಣ-ಕುಂಭಕರ್ಣರಿಂದ ಲೋಕಕ್ಕೆ ಹಾನಿಯೇ ಆಯಿತಲ್ಲವೆ? ಇನ್ನೂ ಅನೇಕ ಅಸುರರು ಲೋಕಕಂಟಕರಾದುದು ತಪೋಲಬ್ಧವಾದ ವರಗಳಿಂದಲೇ ಅಲ್ಲವೆ?
ಹೇಗೆ ಪ್ರತಿಯೊಂದು ಕ್ರಿಯೆಯ ಹಿಂದೆಯೂ ಇಚ್ಛೆಯೆಂಬುದೊಂದಿರುತ್ತದೆಯೋ, ಹಾಗೆಯೇ ಪ್ರತಿಯೊಂದು ಇಚ್ಛೆಯ ಹಿಂದೆಯೂ ಜ್ಞಾನವೆಂಬುದೊಂದಿರುತ್ತದೆ. "ನನಗಿದು ಅಪೇಕ್ಷ್ಯ; ಏಕೆಂದರೆ - " ಎಂಬ ಮಾತಿಗೆ ಪೂರಕವಾದದ್ದು ಅದು.
ವಿದ್ಯಾರಣ್ಯರು, ವೇದಾಂತದೇಶಿಕರು ಮುಂತಾದ ಮಹಾಧೀಮಂತರು ತಾವು ಖ್ಯಾತಿ-ಲಾಭ-ಪೂಜೆಗಳಿಗಾಗಿ ಗ್ರಂಥರಚನೆಯನ್ನು ಮಾಡುತ್ತಿಲ್ಲವೆಂದು ಆರಂಭದಲ್ಲೇ ಹೇಳಿಕೊಂಡಿದ್ದಾರೆ. ಖ್ಯಾತಿಯೆಂದರೆ ಕೀರ್ತಿ. ಲಾಭವೆಂದರೆ ಧನಲಾಭ. ಪೂಜೆಯೆಂದರೆ ಆದರ-ಗೌರವ. ಬಹುಮಂದಿಮಾಡುವ ಕಾರ್ಯಗಳೆಲ್ಲ ಇವುಗಳನ್ನು ಸಂಪಾದಿಸಲೆಂದೇ ಆಗಿರುತ್ತದೆಯಾದ್ದರಿಂದ ಇವಾವುವೂ ತಮ್ಮ ಉದ್ದೇಶವಲ್ಲವೆಂದು ಖಚಿತಪಡಿಸುತ್ತಾರೆ.
ಈ ಲಕ್ಷ್ಯಗಳಾವುವೂ ಕೆಟ್ಟದೆಂದಲ್ಲ. ಇವಕ್ಕಿಂತಲೂ ಭಿನ್ನವೂ ಉನ್ನತವೂ ಆದ ಗುರಿಯು ತಮ್ಮದೆಂದು ಜ್ಞಾಪಿಸಲೆಂದು ಆ ಮಾತು. ಅನ್ಯಾಯವಾದ ಮಾರ್ಗದಿಂದ ಇವನ್ನೇ ಸಂಪಾದಿಸಲು ಹೊರಡುವವರೇ ಬಹುಮಂದಿ.
ಮಾಡುವ ಕೆಲಸವನ್ನು ದಂಭದಿಂದ ಮಾಡುವವರುಂಟು. ದಂಭವೆಂದರೆ ಡಂಬಾಚಾರ: ಬೇರೆಯವರಿಗೆ ತಾನು ತುಂಬ ಸಂಪನ್ನನೆಂದೋ ಮಹಾವಿದ್ಯಾವಂತನೆಂದೋ ಅತ್ಯಂತ ಸಂಭಾವಿತನೆಂದೋ ತೋರಿಸಿಕೊಳ್ಳುವುದು. ಅರ್ಥಾತ್ ಅಡಿಗಡಿಗೂ ಉಡಿಗೆ-ತೊಡಿಗೆ-ನಡಿಗೆ-ನುಡಿಗಳಲ್ಲಿ, ಯಾವುದೋ ಭಂಗಿಗಳನ್ನು ಬಳಸಿ, ಇಲ್ಲದ್ದನ್ನು ಪ್ರದರ್ಶಿಸುವುದು. ಇದರಿಂದ ಕೊನೆಗೆ ತನಗೂ ಒಳ್ಳೆಯದಲ್ಲ, ಇತರರಿಗೂ ಅಲ್ಲ. ದಂಭ-ಮಾನ-ಮದಗಳು ಆಸುರೀ ಸಂಪತ್ತಿನ ಲಕ್ಷಣಗಳೆಂದೇ ಶ್ರೀಕೃಷ್ಣನು ಗೀತೆಯಲ್ಲಿ ಬೋಧಿಸುತ್ತಾನೆ (೧೬ನೇ ಅಧ್ಯಾಯ).
ಆದರೆ ಇವೆಲ್ಲಕ್ಕೆ ಪ್ರತಿಯಾಗಿ, ಆತ್ಮಜ್ಞಾನಸಂಪಾದನೆಗೆಂದು ಮಾಡುವ ಕರ್ಮಗಳು ಉದ್ಧಾರಕವಾಗುತ್ತವೆ. ಯೋಗಮಾರ್ಗವನ್ನು ಹಿಡಿದು ಆತ್ಮಜ್ಞಾನವನ್ನು ಸಂಪಾದಿಸುವುದು ("ಯೋಗ-ಸಂಸಿದ್ಧಃ") ಅತ್ಯಂತ ಶ್ರೇಷ್ಠವಾದ ಕಾರ್ಯ. ಆ ಜ್ಞಾನದಿಂದ ಪ್ರೇರಿತವಾದ ಇಚ್ಛೆಗಳೂ ಅವುಗಳಿಂದ ಪ್ರೇರಿತವಾದ ಕ್ರಿಯೆಗಳೂ ತಾರಕವಾಗಿರುತ್ತವೆ.
ಈ ಜನ್ಮದಲ್ಲಿಯೂ ಹಿಂದಿನ ಜನ್ಮಗಳಲ್ಲಿಯೂ ನಾವು ಸಂಚಯಮಾಡಿಕೊಂಡಿರುವ ಪಾಪಗಳು ಸಮುದ್ರದಂತೆ; ಅದನ್ನು ದಾಟಿಹೋಗಲಾಗುವುದು ಆತ್ಮಜ್ಞಾನವೆಂಬ ದೋಣಿಯಿಂದಲೇ . ನಮಗೆ ಬಂಧಕವಾದ ಕರ್ಮಗಳೆಲ್ಲ ಕಟ್ಟಿಗೆಗಳ ರಾಶಿಯಂತೆ; ಅವನ್ನೆಲ್ಲ ಸುಟ್ಟುಹಾಕಿಬಿಡುವುದು ಜ್ಞಾನವೆಂಬ ಅಗ್ನಿಯೇ. ಸಂಶಯಗಳು ತೊಂತಿನ ಹಗ್ಗಗಳಂತೆ; ಅವನ್ನು ಕತ್ತರಿಸುವುದು ಜ್ಞಾನವೆಂಬ ಖಡ್ಗವೇ. ಜ್ಞಾನವನ್ನು ಕುರಿತು ಹೀಗೆ ಬಗೆಬಗೆಯಾಗಿ ಗೀತೆಯು ಬೋಧಿಸುತ್ತದೆ. ಮೋಚಕವಾದ ಇದಕ್ಕಿಂತಲೂ ಪವಿತ್ರವಾದದ್ದು ಇನ್ನೊಂದುಂಟೇ?
ವಾಸ್ತವವಾಗಿ, ಕರ್ಮಗಳೆಲ್ಲವೂ ಜ್ಞಾನದಲ್ಲಿಯೇ ಪರಿಸಮಾಪ್ತಿಗೊಳ್ಳುತ್ತವೆ - ಯೋಗದ ನಡೆಯೆಂಬುದಿದ್ದರೆ.
"ಜ್ಞಾನವೆಂದರೆ 'ಅರಿವು' ಎಂದಷ್ಟೇ ಅಲ್ಲ. ಜೀವನದ ಒಳಗೆ ಬೆಳಗುವ ಜ್ಯೋತೀರೂಪವಾದ ವಸ್ತುವದು" ಎಂಬ ಶ್ರೀರಂಗಮಹಾಗುರುಗಳ ವಾಣಿಯು, ಮೊದಲು ಕರ್ಮಗಳೆಲ್ಲವುಗಳ ಪರಮಲಕ್ಷ್ಯವಾಗಿದ್ದು, ಬಳಿಕ ಸರ್ವ ಸದಿಚ್ಛೆ-ಸತ್ಕರ್ಮಗಳ ಪ್ರೇರಕವೂ ಆಗುವ, ನಿಜವಾದ ಜ್ಞಾನದ ಸ್ವರೂಪವನ್ನೇ ಅರುಹುತ್ತದೆ.
ಅಂತಹ ಜ್ಞಾನಕ್ಕೆ ಸಾಟಿಯುಂಟೇ?