Sunday, March 27, 2022

ಘೋರಸಾಗರದಲ್ಲಿ ಆನಂದ ವಿಹಾರ! (Ghorasaagaradalli Anandavihaara!)

ಲೇಖಕಿ ; ಮೈಥಿಲೀ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)


ಅಪಾರವಾದ ಜಲರಾಶಿ, ಅಪ್ಪಳಿಸಿ ಆರ್ಭಟಿಸುವ ಅಲೆಗಳು, ತಳಕಾಣದಷ್ಟು ಆಳ, ಅಲ್ಲಿ ವಾಸಿಸುವ ಕ್ರೂರ ಜಲಜಂತುಗಳು-ಇಷ್ಟೆಲ್ಲ ಇರುವಾಗ ಸಾಗರವು  ಘೋರವಲ್ಲದೆ ಮತ್ತೇನು? ಜ್ಞಾನಿಗಳನೇಕರು ಸಾರುವುದು - ಈ ಸಂಸಾರವೂ  ಒಂದು ಬಲುಘೋರವಾದ ಸಾಗರವೇ. ತೃಷ್ಣೆ(ಆಸೆ)ಯೆಂಬ ದೊಡ್ಡ ಜಲರಾಶಿ. ಅದರಲ್ಲಿ ಭೋರ್ಗರೆಯುತ್ತಾ ಅಪ್ಪಳಿಸುವ ಮೋಹವೆಂಬ ಅಲೆಗಳು;  ಈ ಅಲೆಗಳನ್ನು ಮತ್ತೂ ಕೆರಳಿಸುವ ಮದನ(ಕಾಮ)ಮಹಾಮಾರುತ;  ನಕ್ರ(ಮೊಸಳೆ)ಗಳಂತೆ ಕರಾಳವಾದ  ಮಡದಿ, ಪುತ್ರ ಮುಂತಾದ  ಬಂಧುತ್ವ. ಈ ಅಭಿಪ್ರಾಯಗಳು ನೂರಕ್ಕೆ ನೂರರಷ್ಟು ಸತ್ಯ. ಮನಸ್ಸಿನಲ್ಲೇಳುವ ಆಸೆಗಳನ್ನು ಪೂರೈಸಿಕೊಳ್ಳಲೋಸುಗ ಅಲೆದಾಟ-ಪರದಾಟಗಳು, ಅಲೆಗಳಂತೆ ಒಂದರ ಹಿಂದೊಂದು ಪರಂಪರೆಯಾಗಿ ಬಂದೊದಗುವ ಕಷ್ಟ ಕಾರ್ಪಣ್ಯಗಳು, ತಾಪತ್ರಯಗಳು, ಭೌತಿಕ-ದೈವಿಕ-ಆಧ್ಯಾತ್ಮಿಕ ಕ್ಷೇತ್ರಗಳಲ್ಲಿನ ದುಃಖಗಳು, ಮಡದಿ-ಮಕ್ಕಳಿಂದೊದಗುವ ಸಂಕಷ್ಟಗಳು, ಗೃಹಸ್ಥನ ಜೀವನವನ್ನು ಮುತ್ತಿಗೆ ಹಾಕುತ್ತವೆ. ನೆಮ್ಮದಿ ಗಳಿಸುವ ಬಗ್ಗೆ ಚಿಂತಿಸಲೂ ಅವಕಾಶವಿರುವುದಿಲ್ಲವಲ್ಲ? ಇಂತಿರುವಾಗ ಗೃಹಸ್ಥನು ಇದರಿಂದ ಪಾರಾಗಿ ಭಗವಂತನನ್ನು ಪಡೆದು ಸುಖಿಸುವುದೆಂದು? ಹೇಗೆ? ಇಷ್ಟಿದ್ದರೂ, ಭಾರತದಲ್ಲಿ ಅನೇಕ ಗೃಹಸ್ಥರು ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಶಾಂತಿಯಿಂದ ಬದುಕಿ ಬಾಳಿದ ಕಥೆಗಳನ್ನು  ಕೇಳುತ್ತೇವೆ. ತಪಸ್ಯೆಯನ್ನಾಚರಿಸಿ ಬ್ರಹ್ಮಜ್ಞಾನಿಗಳಾಗಿಯೂ, ಬ್ರಹ್ಮರ್ಷಿಗಳಾಗಿಯೂ ಇದ್ದ ಅನೇಕರು ಗೃಹಸ್ಥರಾಗಿ ಲೌಕಿಕಸುಖಗಳಷ್ಟನ್ನೂ ಅನುಭವಿಸಿ, ಅನೇಕ ಮಕ್ಕಳನ್ನೂ ಪಡೆದವರಾಗಿದ್ದರು. ಚ್ಯವನ-ಸೌಭರಿ-ವಸಿಷ್ಠರೇ ಮುಂತಾದವರು ಇದಕ್ಕೆ ಉದಾಹರಣೆಗಳು. ನವ ವಧೂ-ವರರನ್ನು 'ವಸಿಷ್ಠ-ಅರುಂಧತಿಯರಂತೆ ಆದರ್ಶ ದಾಂಪತ್ಯವನ್ನೆಸಗಿ ಸುಖಿಸಿ' ಎಂದು ಆಶೀರ್ವದಿಸುವುದು ಸಂಪ್ರದಾಯ. ರಾಜಾಧಿರಾಜರನೇಕರು, ತಮ್ಮ  ಕುಟುಂಬದಷ್ಟೇ ಸಣ್ಣ ಸಂಸಾರವಲ್ಲದೇ, ದೊಡ್ಡ ಸಾಮ್ರಾಜ್ಯವನ್ನೇ ಆಳುತ್ತಾ, ಪ್ರಜೆಗಳೆಲ್ಲರನ್ನೂ ತಮ್ಮ  ಮಕ್ಕಳಂತೆ ಭಾವಿಸಿ ರಕ್ಷಿಸಿ, ಪೋಷಿಸುತ್ತಿದ್ದರು. ಇಷ್ಟೊಂದು ಅಂಟು-ಜವಾಬ್ದಾರಿಗಳೊಂದಿಗೆ ಅಪಾರವಾದ ಹೊಣೆಗಾರಿಕೆಯನ್ನು ಹೊತ್ತಿದ್ದ ಅವರು ವೃದ್ಧಾಪ್ಯದಲ್ಲಿ ಎಲ್ಲವನ್ನೂ ತಮ್ಮ ಪುತ್ರರಿಗೆ ಒಪ್ಪಿಸಿ ತಪೋನಿರತರಾಗುವಷ್ಟು ವೈರಾಗ್ಯಸಂಪನ್ನರೂ ಆಗಿ ಭಗವಂತನನ್ನು ತಲುಪುತ್ತಿದ್ದರು. 


ಇವರೆಲ್ಲರಿಗೂ ಸಂಸಾರವು ಸಾಗರವಾಗಿರಲಿಲ್ಲವೇ? ಅದು ಘೋರವಾಗಿರಲಿಲ್ಲ ಹೇಗೆ?  ಅವರಿಗೆ  ಲೌಕಿಕವಾದ ಸುಖಾನುಭವದೊಂದಿಗೆ ನೆಮ್ಮದಿ ಸಾಧಿಸುವುದು ಹೇಗೆ ಸಾಧ್ಯವಾಯಿತು? ಸಾಗರವು ಎಷ್ಟೇ ಘೋರವಾಗಿದ್ದರೂ ಸುರಕ್ಷಿತ ನೌಕೆಯೊಂದರಲ್ಲಿ ಕುಳಿತು  ವಿಹರಿಸಿದಾಗ  ಅದೆಷ್ಟು ಸೊಗಸು! ಎಷ್ಟು ಆನಂದ!  ಹಾಗೆ ವಿಹರಿಸುತ್ತಲೇ ದಡವನ್ನೂ ಸೇರಿಬಿಡಬಹುದಲ್ಲವೆ? ಅಂತೆಯೇ  ಭಾರತೀಯಮಹರ್ಷಿಗಳು ಈ ಸಂಸಾರಸಾಗರದಲ್ಲಿ ವಿಹರಿಸಿ ಸುಖವನ್ನು ಪಡೆಯುವುದರ ಜೊತೆಗೇ ಇದರ ಪಾರವನ್ನು ತಲುಪಲೂ, ಶಾಶ್ವತಸುಖ-ಶಾಂತಿಧಾಮವನ್ನು  ಹೊಂದಲೂ ಪುರುಷಾರ್ಥ(ಧರ್ಮ-ಅರ್ಥ-ಕಾಮ-ಮೋಕ್ಷ)ಮಯವಾದ ಜೀವನವೆಂಬ ಸುರಕ್ಷಿತ ನೌಕೆಯನ್ನು ತೋರಿದರು. ಈ ಜೀವನಕ್ಕೆ ಬೇಕಾದ ಶಿಕ್ಷಣವನ್ನು  ಬಾಲ್ಯದ ವಿದ್ಯಾಭ್ಯಾಸದಲ್ಲೇ ಪಡೆದು ಪಾರಂಗತರಾದ ನಂತರವೇ ಸಂಸಾರ ಜೀವನಕ್ಕೆ ಅನುಮತಿಯನ್ನು ನೀಡಲಾಗುತ್ತಿತ್ತು.  ಇದು ಮಹರ್ಷಿಗಳ ವಿದ್ಯಾ(ಶಿಕ್ಷಣ)ಪದ್ಧತಿಯ ವೈಶಿಷ್ಟ್ಯ.

ಧರ್ಮಮಯವಾದ ಜೀವನಕ್ಕೆ ಮೋಕ್ಷವೇ ಗುರಿಯಾದರೂ ಅಂತಹ ಜೀವನ ಸಾಗುವಾಗ ಅರ್ಥ-ಕಾಮಗಳು ತಾವಾಗಿಯೇ ಬಂದೊದಗುವ ಫಲಗಳಾಗುತ್ತವೆ.  ಈ ಗುರಿಯಿಲ್ಲದೆ ಅರ್ಥ-ಕಾಮಗಳ ಹಿಂದೆ ಬಿದ್ದರೆ, ಸುಮ್ಮನೆ ಸಮುದ್ರದಲ್ಲಿ ಧುಮುಕಿ, ತೊಳಲಾಡಿ ಮುಳುಗುವಂತಾಗುವುದು ನಮ್ಮ ಜೀವನ.


ಇಲ್ಲಿ ಶ್ರೀರಂಗಮಹಾಗುರುಗಳ ಸೂತ್ರಪ್ರಾಯವಾದ ಮಾತೊಂದು ಸ್ಮರಣೀಯ- "ಅರ್ಥ-ಕಾಮಗಳು ತುಂಟ ಹಸುವಿನಂತೆ. ಅದನ್ನು ಸುಮ್ಮನೆ ಕರೆಯಲು ಹೋದರೆ ಒದೆಯುತ್ತದೆ. ಆದರೆ ಅದರ ಕಾಲುಗಳನ್ನು ಧರ್ಮ-ಮೋಕ್ಷಗಳೆಂಬ ಕಂಬಗಳಿಗೆ ಕಟ್ಟಿ ಕರೆದರೆ ಅಮೃತವನ್ನೇ ಕರೆಯುತ್ತವೆ."   

ಕಾಮವೆಂಬುದನ್ನು ಹೀಗೆ ನಿಯಂತ್ರಿಸದಿದ್ದರೆ ಪುರುಷಾರ್ಥದ ಕಾಮವಾಗದೆ ಅರಿಷಡ್ವರ್ಗದಲ್ಲಿನ  ಕಾಮವಾಗುತ್ತದೆ. ಅದನ್ನೇ ಭಗವದ್ಗೀತೆಯಲ್ಲಿ ಕೃಷ್ಣನು "ಕಾಮ ಏಷ ಕ್ರೋಧ ಏಷ ರಜೋಗುಣ ಸಮುದ್ಭವಃ------ವಿದ್ಯೈನಮಿಹ ವೈರಿಣಮ್" ಎಂಬುದಾಗಿ ಎಚ್ಚರಿಸಿದ್ದಾನೆ. ಇವೇ ನಮ್ಮನ್ನು ಸಾಗರದಲ್ಲಿ ಮುಳುಗಿಸುವುದು. ಮಡದಿ-ಮಕ್ಕಳನ್ನು ಭಗವಂತನು ತಮಗೊಪ್ಪಿಸಿದವರನ್ನಾಗಿ, ಭಗವಂತನ ಆಸ್ತಿಯಾಗಿ ಭಾವಿಸಿ ರಕ್ಷಿಸಿ-ಪೋಷಿಸಿದಾಗ ಅದು ಅವರಲ್ಲಿ ಪ್ರೀತಿಯನ್ನುಂಟುಮಾಡುವುದರ ಜೊತೆಗೆ  ಅಂಟಿಲ್ಲದೆ ವರ್ತಿಸಲೂ ಸಹಾಯವಾಗುವುದು.  ಜ್ಞಾನಿಗಳ ಈ ನಿರ್ದೇಶ ನಮಗೆ ಆದರ್ಶ.


ಸಂಸಾರ ಸಾಗರದಿಂದ ದಾಟಿಸಲು  ಮತ್ತೊಂದು ಸುಲಭೋಪಾಯವನ್ನು  ಭಕ್ತಶ್ರೇಷ್ಠರಾದ  ಕುಲಶೇಖರ ಆಳ್ವಾರರು  ಹೇಳುತ್ತಾರೆ. ಭಗವಂತನಲ್ಲಿ ನಿಶ್ಚಲವಾದ ಭಕ್ತಿಯೆಂಬ ನೌಕೆಯು ನಮ್ಮನ್ನು ಪಾರುಮಾಡುವ ಅದ್ಭುತ ಸಾಧನವಾಗಿದೆ. ಇಂತಹ ಭಕ್ತಿಗೆ ಬಲವನ್ನು ನೀಡುವುದು ಭಕ್ತರ, ಸಜ್ಜನರ ಸಹವಾಸ. 'ಸಜ್ಜನರ ಸಹವಾಸ ಹೆಜ್ಜೇನ ಸವಿದಂತೆ' ಅತ್ಯಂತ ಹಿತಕರ. ಅಂದಮೇಲೆ ಇಂತಹವರಿಗೆ ಜೀವನದಲ್ಲಿ ಕಷ್ಟಗಳೇ ಬರುವುದಿಲ್ಲ ಎನ್ನುವಂತಿಲ್ಲ. ಕಷ್ಟಗಳು ಬಂದಾಗ ಭಗವಂತನ ಸ್ಮರಣೆಯಿಂದ  ಅವನ್ನು ಎದುರಿಸುವ ಧೃತಿಯನ್ನು   ಹೊಂದುತ್ತಾರೆ. 


ಈ ಹಿತವೂ, ಮಧುರವೂ ಆದ ಸಾಧನದಿಂದಲೇ ರಾಜರ್ಷಿ-ಮಹರ್ಷಿಗಳು ಸುಖವನ್ನನುಭವಿಸಿ ಶಾಶ್ವತವಾದ ಶಾಂತಿ-ಸಮಾಧಾನ-ಆನಂದಗಳನ್ನು ಪಡೆದರು. ಅವರು ತಂದ ಪುರುಷಾರ್ಥಮಯ ಬಾಳಾಟ, ಸಜ್ಜನಸಹವಾಸಗಳೇ ನಮಗೆ ಆದರ್ಶ. 


ಸೂಚನೆ: 27/3/2022 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ